ಅಲಿ, ಬೆನ್ ಸ್ಟೋಕ್ಸ್ ಶತಕದ ಸೊಬಗು

ರಾಜ್‌ಕೋಟ್: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ಮೊಹಿನ್ ಅಲಿ (117; 213ಎ, 13ಬೌಂ) ಮತ್ತು ಬೆನ್ ಸ್ಟೋಕ್ಸ್ (128; 235ಎ, 13ಬೌಂ, 2ಸಿ) ಅವರ ಬ್ಯಾಟಿಂಗ್ ಸೊಬಗು ಅನಾವರಣ ಗೊಂಡಿತು.
ಭಾರತದ ಸ್ಪಿನ್ ಮತ್ತು ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಯಿತು.
4 ವಿಕೆಟ್‌ಗೆ 311ರನ್‌ಗಳಿಂದ ಗುರುವಾರ ಆಟ ಮುಂದುವರಿಸಿದ ಆಂಗ್ಲರ ನಾಡಿನ ಬಳಗ 159.3 ಓವರ್‌ಗಳಲ್ಲಿ 537 ರನ್ ಕಲೆ ಹಾಕಿತು. ಇದು ಭಾರತದ ನೆಲದಲ್ಲಿ ಇಂಗ್ಲೆಂಡ್ ಗಳಿಸಿದ ಮೂರನೇ ಗರಿಷ್ಠ ಮೊತ್ತ ಎನಿಸಿತು.
1984–85ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಪಂದ್ಯದಲ್ಲಿ 7 ವಿಕೆಟ್‌ಗೆ 652ರನ್ ಗಳಿಸಿದ್ದ ಇಂಗ್ಲೆಂಡ್ ತಂಡ 1963–64ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ 8 ವಿಕೆಟ್‌ಗೆ 559ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಪ್ರಥಮ ಇನಿಂಗ್ಸ್ ಆರಂಭಿಸಿರುವ ವಿರಾಟ್ ಕೊಹ್ಲಿ ಪಡೆ ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63ರನ್ ಪೇರಿಸಿದೆ. ಆತಿಥೇಯ ತಂಡ ಇನ್ನೂ 474ರನ್‌ಗಳ ಹಿನ್ನಡೆ ಅನುಭವಿಸಿದೆ. ಫಾಲೋ ಆನ್ ಭೀತಿಯಿಂದ ಪಾರಾಗಲು ಆತಿಥೇಯ ರಿಗೆ 275ರನ್‌ಗಳ ಅಗತ್ಯವಿದೆ.
ಇನಿಂಗ್ಸ್ ಆರಂಭಿಸಿರುವ ಅನುಭವಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (ಬ್ಯಾಟಿಂಗ್ 28; 68ಎ, 4ಬೌಂ) ಮತ್ತು ಮುರಳಿ ವಿಜಯ್ (ಬ್ಯಾಟಿಂಗ್ 25; 70ಎ, 4ಬೌಂ) ತಂಡಕ್ಕೆ ಆಸರೆಯಾಗಿದ್ದಾರೆ.
ಅಲಿ ಶತಕದ ಮಿಂಚು: ಬುಧವಾರದ ಅಂತ್ಯಕ್ಕೆ 99ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಮೊಹಿನ್ ಅಲಿ ದಿನದ ಮೊದಲ ಓವರ್‌ನಲ್ಲಿ ಶತಕದ ಸಂಭ್ರಮ ಆಚರಿಸಿದರು.
ಮೊಹಮ್ಮದ್ ಶಮಿ ಬೌಲ್ ಮಾಡಿದ ಓವರ್‌ನ ಮೂರನೇ ಎಸೆತವನ್ನು ಪಾಯಿಂಟ್‌ನತ್ತ ತಳ್ಳಿ ಒಂದು ರನ್ ಕಲೆಹಾಕಿದ ಅವರು ವೃತ್ತಿ ಬದುಕಿನ ನಾಲ್ಕನೇ ಶತಕ ಪೂರೈಸಿದರು. ಈ ಮೂಲಕ ಪಂದ್ಯದಲ್ಲಿ ಶತಕ ಗಳಿಸಿದ ಎರಡನೇ ಆಟಗಾರ ಎನಿಸಿದರು. ಬುಧವಾರ ಜೋ ರೂಟ್ ಶತಕದ ಸಾಧನೆ ಮಾಡಿದ್ದರು.
ಮೂರಂಕಿಯ ಗಡಿ ದಾಟಿದ ಬಳಿಕ ಅಲಿ ಅಬ್ಬರಿಸುವ ಸೂಚನೆ ನೀಡಿದರು. ವೇಗಿ ಉಮೇಶ್ ಯಾದವ್ ಬೌಲ್ ಮಾಡಿದ 95ನೇ ಓವರ್‌ನ ಮೂರು, ನಾಲ್ಕು ಮತ್ತು ಕೊನೆಯ ಎಸೆತಗಳನ್ನು ಸ್ಕ್ವೇರ್ ಲೆಗ್, ಬ್ಯಾಕ್‌ವರ್ಡ್ ಪಾಯಿಂಟ್ ಮತ್ತು ಸ್ಕ್ವೇರ್ ಕವರ್‌ನತ್ತ ಬೌಂಡರಿ ಗೆರೆ ದಾಟಿಸಿದ ಅವರು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.
ಇನ್ನೊಂದೆಡೆ ಸ್ಟೋಕ್ಸ್ ಕೂಡಾ ತಂಡದ ರನ್ ಗಳಿಕೆಗೆ ವೇಗ ತುಂಬುವ ಕೆಲಸ ಮಾಡಿದರು. ಇದರ ಫಲವಾಗಿ ಪ್ರವಾಸಿ ಬಳಗ ದಿನದ ಮೊದಲ 10 ಓವರ್‌ಗಳಲ್ಲಿ 45ರನ್ ಪೇರಿಸಿತು. ಇದರಲ್ಲಿ 8 ಬೌಂಡರಿಗಳು ಸೇರಿದ್ದವು.
ಈ ಜೋಡಿಯನ್ನು ಮುರಿಯಲು ಆತಿಥೇಯ ತಂಡದ ನಾಯಕ ಕೊಹ್ಲಿ ಬೌಲಿಂಗ್‌ನಲ್ಲಿ ಹಲವು ಬದಲಾವಣೆ ಗಳನ್ನು ಮಾಡಿದರು. ಸ್ಪಿನ್ನರ್ ಅಶ್ವಿನ್ ಕೈಗೆ ಹೊಸ ಚೆಂಡು ನೀಡಿದರು. ಹೀಗಿದ್ದರೂ ಪ್ರಯೋಜನವಾಗಲಿಲ್ಲ.
100ನೇ ಓವರ್ ಬೌಲ್ ಮಾಡಿದ ವೇಗಿ ಶಮಿ, ನಾಯಕನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. ನಾಲ್ಕನೇ ಎಸೆತದಲ್ಲಿ ಅವರು ಅಲಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರೊಂದಿಗೆ ಅಲಿ ಮತ್ತು ಸ್ಟೋಕ್ಸ್ ನಡುವಣ 62ರನ್‌ಗಳ ಐದನೇ ವಿಕೆಟ್ ಜೊತೆಯಾಟಕ್ಕೂ ತೆರೆ ಬಿತ್ತು.
ಜುಗಲ್‌ಬಂದಿ: ಈ ಹಂತದಲ್ಲಿ ಜೊತೆಯಾದ ಎಡಗೈ ಬ್ಯಾಟ್ಸ್‌ಮನ್ ಸ್ಟೋಕ್ಸ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೇಸ್ಟೋವ್ (46; 57ಎ, 5ಬೌಂ, 2ಸಿ) ಬಿರುಸಿನ ಬ್ಯಾಟಿಂಗ್ ನಡೆಸಿ ಭಾರತದ ಬೌಲರ್‌ಗಳನ್ನು ಹೈರಾಣಾಗಿಸಿದರು.
ಆರನೇ ವಿಕೆಟ್‌ಗೆ ಇವರು 21.1 ಓವರ್‌ಗಳಲ್ಲಿ 4.67ರ ಸರಾಸರಿಯಲ್ಲಿ 99ರನ್ ಪೇರಿಸಿದರು. ಹೀಗಾಗಿ ತಂಡದ ಮೊತ್ತ 400ರ ಗಡಿ ದಾಟಿತು.
ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ ಮತ್ತು ಆರ್. ಅಶ್ವಿನ್ ಅವರನ್ನು ಗುರಿಯಾಗಿಟ್ಟುಕೊಂಡಂತೆ ಕಂಡ ಇವರು ಅಂಗಳದ ಮೂಲೆ ಮೂಲೆಗೂ ಚೆಂಡು ಅಟ್ಟಿದರು.
ಮಿಶ್ರಾ ಬೌಲ್ ಮಾಡಿದ 108 ಮತ್ತು 112ನೇ ಓವರ್‌ಗಳಲ್ಲಿ ತಲಾ ಒಂದು ಸಿಕ್ಸರ್ ಸಿಡಿಸಿ ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದ್ದ ಬೇಸ್ಟೋವ್ ಅರ್ಧಶತಕದ ಅಂಚಿನಲ್ಲಿ ಎಡವಿದರು.
ಮೊಹಮ್ಮದ್ ಶಮಿ ಎಸೆದ 121ನೇ ಓವರ್‌ನ ಐದನೇ ಎಸೆತವನ್ನು ಜಾನಿ ಪಾಯಿಂಟ್‌ನತ್ತ ಬಾರಿಸಲು ಮುಂದಾದರು. ಅವರ ಬ್ಯಾಟಿನ ಕೆಳ ಅಂಚನ್ನು ಸವರಿಕೊಂಡು ತಮ್ಮತ್ತ ಬಂದ ಚೆಂಡನ್ನು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹಿಡಿತಕ್ಕೆ ಪಡೆಯಲು ಯಾವುದೇ ತಪ್ಪು ಮಾಡಲಿಲ್ಲ.
ಜಾನಿ ವಿಕೆಟ್ ಪತನದ ಬೆನ್ನಲ್ಲೇ ಕ್ರಿಸ್ ವೋಕ್ಸ್ (4) ಮತ್ತು ಆದಿಲ್ ರಶೀದ್ (5) ಕೂಡಾ ಪೆವಿಲಿಯನ್ ಪರೇಡ್ ನಡೆಸಿದರು. ಇವರು ವಿಕೆಟ್ ಕಬಳಿಸಿದ ರವೀಂದ್ರ ಜಡೇಜ ತವರಿನ ಅಭಿಮಾನಿಗಳ ಮನ ಗೆದ್ದರು.
ಇನ್ನೊಂದೆಡೆ ಸ್ಟೋಕ್ಸ್ ಅಬ್ಬರ ಮಾತ್ರ ಮುಂದುವರಿದಿತ್ತು. ಅಶ್ವಿನ್ ಹಾಕಿದ 109ನೇ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕಿ ಅರ್ಧಶತಕ ಪೂರೈಸಿದ ಅವರು ಆ ಬಳಿಕವೂ ಮಿಂಚಿನ ಆಟದ ಮೂಲಕ ರನ್ ಮಳೆ ಸುರಿಸಿದರು.
60 ಮತ್ತು 61ರನ್ ಗಳಿಸಿದ್ದ ವೇಳೆ ಸ್ಟೋಕ್ಸ್‌ಗೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಜೀವದಾನ ನೀಡಿದ್ದರು. ಈ ತಪ್ಪಿಗೆ ಭಾರತ ತಂಡ ಸರಿಯಾದ ದಂಡ ತೆತ್ತಿತು. ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ 25 ವರ್ಷದ ಸ್ಟೋಕ್ಸ್, ರವೀಂದ್ರ ಜಡೇಜ ಬೌಲ್ ಮಾಡಿದ 136ನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಗಳಿಸಿ ನಾಲ್ಕನೇ ಟೆಸ್ಟ್ ಶತಕದ ಸಂಭ್ರಮ ಆಚರಿಸಿದರು.
ಸ್ಟೋಕ್ಸ್‌ಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಜಾಫರ್ ಅನ್ಸಾರಿ (32; 83ಎ, 3ಬೌಂ) ಸೂಕ್ತ ಬೆಂಬಲ ನೀಡಿದರು. ಇವರು 9ನೇ ವಿಕೆಟ್‌ಗೆ 52ರನ್ ಗಳಿಸಿ ತಂಡ 500ರ ಗಡಿ ದಾಟುವಂತೆ ನೋಡಿಕೊಂಡರು.
153ನೇ ಓವರ್ ಬೌಲ್ ಮಾಡಿದ ಉಮೇಶ್ ಯಾದವ್, ಸ್ಟೋಕ್ಸ್ ವಿಕೆಟ್ ಉರುಳಿಸಿದರು. ಅಮಿತ್ ಮಿಶ್ರಾ ತಾವೆಸೆದ 160ನೇ ಓವರ್‌ನ ಮೂರನೇ ಎಸೆತದಲ್ಲಿ ಅನ್ಸಾರಿ ವಿಕೆಟ್ ಪಡೆದು ಆಂಗ್ಲರ ನಾಡಿನ ಇನಿಂಗ್ಸ್‌ಗೆ ತೆರೆ ಎಳೆದರು.
ಮೂರು ಮಂದಿ ಶತಕ
ಇಂಗ್ಲೆಂಡ್ ತಂಡದ ಜೋ ರೂಟ್, ಮೊಹಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಅವರು ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ ಸಾಧನೆ ಮಾಡಿದರು.
ಭಾರತದ ವಿರುದ್ಧದ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಇಂಗ್ಲೆಂಡ್‌ನ ಮೂರು ಮಂದಿ ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದ್ದು ಇದು ಎರಡನೇ ಬಾರಿ.
1961ರ ಡಿಸೆಂಬರ್ 1 ರಂದು ಕಾನ್ಪುರದಲ್ಲಿ ನಡೆದಿದ್ದ ಪಂದ್ಯದ ಮೂರನೇ ಇನಿಂಗ್ಸ್‌ನಲ್ಲಿ ಆಂಗ್ಲರ ನಾಡಿನ ತಂಡದ ಜಿಯೊಫ್ ಪುಲ್ಲರ್ (119), ಕೆನ್ ಬ್ಯಾರಿಂಗ್ಟನ್ (172) ಮತ್ತು ಟೆಡ್ ಡೆಕ್ಸ್‌ಟರ್ (ಔಟಾಗದೆ 126) ಈ ಸಾಧನೆ ಮಾಡಿದ್ದರು.
ನಡೆಯದ ಅಶ್ವಿನ್–ಮಿಶ್ರಾ ಮೋಡಿ
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ಅಮಿತ್ ಮಿಶ್ರಾ ಅವರ ಸ್ಪಿನ್ ಮೋಡಿ ಆಂಗ್ಲರ ನಾಡಿನ ಬ್ಯಾಟ್ಸ್‌ಮನ್‌ಗಳ ಎದುರು ನಡೆಯಲಿಲ್ಲ. 46 ಓವರ್ ಬೌಲ್ ಮಾಡಿದ ಅಶ್ವಿನ್ 167ರನ್ ಬಿಟ್ಟುಕೊಟ್ಟು 2 ವಿಕೆಟ್ ಮಾತ್ರ ಪಡೆದರು. 23.3 ಓವರ್ ಬೌಲ್ ಮಾಡಿ 98ರನ್ ನೀಡಿದ ಮಿಶ್ರಾಗೆ ಸಿಕ್ಕಿದ್ದು ಒಂದು ವಿಕೆಟ್ ಮಾತ್ರ.
*
ರಾಜ್‌ಕೋಟ್ ಪಿಚ್ ಮೊದಲ ಎರಡು ದಿನ ಬ್ಯಾಟ್ಸ್‌ಮನ್ ಸ್ನೇಹಿಯಾಗಿರಲಿದೆ ಎಂಬುದು ಗೊತ್ತಿತ್ತು. ಆದರೆ ಟಾಸ್ ಸೋತಿದ್ದು ನಮಗೆ ಹಿನ್ನಡೆಯಾಯಿತು. ಶುಕ್ರವಾರ ನಾವು ಹೇಗೆ ಆಡುತ್ತೇವೆ ಎಂಬುದರ ಮೇಲೆ ಫಲಿತಾಂಶ ನಿರ್ಧರಿತವಾಗಲಿದೆ.
–ರವೀಂದ್ರ ಜಡೇಜ,
ಭಾರತದ ಆಟಗಾರ
*
ಭಾರತದ ಆಟಗಾರರು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ನಮಗೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು.
–ಮೊಹಿನ್ ಅಲಿ, ಇಂಗ್ಲೆಂಡ್ ತಂಡದ ಆಟಗಾರ
ಸ್ಕೋರ್‌ಕಾರ್ಡ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 537 (159.3 ಓವರ್‌ಗಳಲ್ಲಿ)
(ಬುಧವಾರದ ಅಂತ್ಯಕ್ಕೆ 93 ಓವರ್‌ಗಳಲ್ಲಿ 4ಕ್ಕೆ 311)
ಮೊಹಿನ್ ಅಲಿ ಬಿ ಮೊಹಮ್ಮದ್ ಶಮಿ 117
ಬೆನ್ ಸ್ಟೋಕ್ಸ್ ಸಿ ವೃದ್ಧಿಮಾನ್ ಸಹಾ ಬಿ ಉಮೇಶ್ ಯಾದವ್ 128
ಜಾನಿ ಬೇಸ್ಟೋವ್ ಸಿ ವೃದ್ಧಿಮಾನ್ ಸಹಾ ಬಿ ಮೊಹಮ್ಮದ್ ಶಮಿ 46
ಕ್ರಿಸ್ ವೋಕ್ಸ್ ಸಿ ವೃದ್ಧಿಮಾನ್ ಸಹಾ ಬಿ ರವೀಂದ್ರ ಜಡೇಜ 04
ಆದಿಲ್ ರಶೀದ್ ಸಿ ಉಮೇಶ್ ಯಾದವ್ ಬಿ ರವೀಂದ್ರ ಜಡೇಜ 05
ಜಾಫರ್ ಅನ್ಸಾರಿ ಎಲ್‌ಬಿಡಬ್ಲ್ಯು ಬಿ ಅಮಿತ್ ಮಿಶ್ರಾ 32
ಸ್ಟುವರ್ಟ್ ಬ್ರಾಡ್ ಔಟಾಗದೆ 06
ಇತರೆ: (ಬೈ 5, ಲೆಗ್ ಬೈ 4, ನೋಬಾಲ್ 1) 10
ವಿಕೆಟ್ ಪತನ: 5–343 (ಅಲಿ; 99.4), 6–442 (ಬೇಸ್ಟೋವ್; 120.5), 7–451 (ವೋಕ್ಸ್; 123.4), 8–465 (ರಶೀದ್; 129.6), 9–517 (ಸ್ಟೋಕ್ಸ್; 152. 5), 10–537 (ಅನ್ಸಾರಿ; 159.3).
ಬೌಲಿಂಗ್: ಮೊಹಮ್ಮದ್ ಶಮಿ 28.1–5–65–2, ಉಮೇಶ್ ಯಾದವ್ 31.5–3–112–2, ರವಿಚಂದ್ರನ್ ಅಶ್ವಿನ್ 46–3–167–2, ರವೀಂದ್ರ ಜಡೇಜ 30–4–86–3, ಅಮಿತ್ ಮಿಶ್ರಾ 23.3–3–98–1.
ಭಾರತ ಪ್ರಥಮ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 63
(23 ಓವರ್‌ಗಳಲ್ಲಿ)
ಮುರಳಿ ವಿಜಯ್ ಬ್ಯಾಟಿಂಗ್ 25
ಗೌತಮ್ ಗಂಭೀರ್ ಬ್ಯಾಟಿಂಗ್ 28
ಇತರೆ: (ಬೈ 8, ಲೆಗ್ ಬೈ 1, ವೈಡ್ 1) 10
ಬೌಲಿಂಗ್: ಸ್ಟುವರ್ಟ್ ಬ್ರಾಡ್ 5–1–20–0, ಕ್ರಿಸ್ ವೋಕ್ಸ್ 7–2–17–0, ಮೋಯಿನ್ ಅಲಿ 6–2–6–0, ಜಾಫರ್ ಅನ್ಸಾರಿ 3–0–3–0, ಆದಿಲ್ ರಶೀದ್ 2–0–8–0.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.