ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಶಿಕ್ಷಣವೆಂಬ ಭರವಸೆ

Last Updated 11 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಉಪನ್ಯಾಸಕನಾಗಿ ನಾನು ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ನನಗೆ ಇನ್ನು ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಿಲ್ಲ. ಹಾಗಾಗಿ ಕಾಲೇಜು ತೊರೆಯಲು ಅನುಮತಿ ನೀಡುವಂತೆ ವಿಭಾಗದ ಮುಖ್ಯಸ್ಥರನ್ನು ಕೋರಿಕೊಳ್ಳಲು ಮುಂದಾಗಿದ್ದ. ಅವನ ಸಮಸ್ಯೆಯ ಮೂಲವೇನೆಂದು ವಿಚಾರಿಸಲಾಗಿ, ಆರ್ಥಿಕ ಸಂಕಷ್ಟದಿಂದಾಗಿಯೇ ಆತ ಓದಿಗೆ ಪೂರ್ಣವಿರಾಮವಿಟ್ಟು ತನ್ನ ಊರಿಗೆ ಹಿಂತಿರುಗಲು ನಿರ್ಧರಿಸಿದ್ದಾನೆಂಬುದು ತಿಳಿದು ಬಂದಿತ್ತು. ಆನಂತರ ವಿಭಾಗದ ಮುಖ್ಯಸ್ಥರು ಹಾಗೂ ಕೆಲ ಉಪನ್ಯಾಸಕರು ನಿನ್ನ ವಿದ್ಯಾಭ್ಯಾಸದ ಖರ್ಚು ವೆಚ್ಚ ಭರಿಸುವುದಾಗಿ ಭರವಸೆ ನೀಡಿ, ಓದು ಮುಂದುವರೆಸುವಂತೆ ಸೂಚಿಸಿದ್ದರು.

ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್‌ನಲ್ಲಿದ್ದಾಗಲೇ ಕಾಲೇಜು ತೊರೆಯಲು ನಿರ್ಧರಿಸಿ, ಆನಂತರ ನಿಲುವು ಬದಲಿಸಿ ಓದು ಮುಂದುವರೆಸಿದ್ದ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿ, ಏಳನೇ ಸೆಮಿಸ್ಟರ್‌ಗೆ ಪ್ರವೇಶಿಸಿದ ವೇಳೆಯಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಅವನ ಈ ಸಮಸ್ಯೆಯನ್ನು ಸಹೋದ್ಯೋಗಿಯಾಗಿದ್ದ ಹಿರಿಯ ಪ್ರಾಧ್ಯಾಪಕರೊಬ್ಬರು ಗುರುತಿಸಿದ್ದರು. ನಮ್ಮನ್ನು ಉದ್ದೇಶಿಸಿ ಅವರು ಆಡಿದ್ದ ಮಾತು, ಆ ಹುಡುಗನನ್ನೂ ಒಳಗೊಂಡಂತೆ ಎಲ್ಲ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳೂ ಎದುರುಗೊಳ್ಳುವ ಸಮಸ್ಯೆಗೆ ಕನ್ನಡಿ ಹಿಡಿದಿತ್ತು.

’ನೀವೆಲ್ಲ ಒಂದು ವಿಷ್ಯ ನೆನಪಿಟ್ಕೊಳ್ಳಿ. ಯಾವುದೇ ವಿದ್ಯಾರ್ಥಿ ಜೊತೆ ಸ್ಟಾಫ್‌ರೂಮ್‌ನಲ್ಲಿ ಮಾತಾಡೋದಾದ್ರೂ ಇಂಗ್ಲಿಷ್‌ನಲ್ಲೇ ಮಾತಾಡಿ. ಈಗ ಆ ಹುಡುಗನನ್ನೇ ನೋಡಿ, ಬದುಕಿನ ಸವಾಲು ಎದುರಿಸಿ ಗೆದ್ದವನು ಇದೀಗ ಇಂಗ್ಲಿಷ್ ಬರಲ್ಲ ಅನ್ನುವ ಒಂದೇ ಕಾರಣಕ್ಕೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಕೆಲಸ ದಕ್ಕಿಸಿಕೊಳ್ಳಲಾಗದೇ ಸೋತು ಸೊರಗುತ್ತಾನೆ. ತನ್ನೆಲ್ಲ ಸಮಸ್ಯೆಗಳ ನಡುವೆಯೂ ಪರಿಶ್ರಮದಿಂದ ಓದಿ ಎಂಜಿನಿಯರಿಂಗ್ ಮುಗಿಸುವ ಹಂತದಲ್ಲಿರುವ ಅವನು, ಕನಿಷ್ಠ ಪಕ್ಷ ನಮ್ಮೊಂದಿಗಾದರೂ ಇಂಗ್ಲಿಷ್‌ನಲ್ಲಿ ಮಾತನಾಡಲು ಮುಂದಾದ್ರೆ, ಕ್ಯಾಂಪಸ್ ಸೆಲೆಕ್ಷನ್ ವೇಳೆ ತಡಬಡಾಯಿಸುವುದು ತಪ್ಪುತ್ತದೆ. ಇನ್ಮುಂದೆ ಏನ್ಮಾಡ್ಬೇಕು ಗೊತ್ತಾಯ್ತಲ್ಲ ನಿಮ್ಗೆ’ ಎಂದು ತುಂಬು ಕಾಳಜಿಯಿಂದಲೇ ಗದರಿದ್ದರು. ಸ್ವತಃ ತಮ್ಮ ಮಗಳನ್ನೇ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿರುವ ಅವರ ಕನ್ನಡ ಪರ ಕಾಳಜಿ ಮತ್ತು ಪ್ರೇಮವನ್ನು ನಾವ್ಯಾರೂ ಪ್ರಶ್ನಿಸುವಂತಿರಲಿಲ್ಲ. ಆ ನೈತಿಕತೆಯೂ ನಮ್ಮಲ್ಲಿ ಉಳಿದಿದೆ ಎನಿಸಿರಲಿಲ್ಲ.

ಮೇಲೆ ಉದಾಹರಿಸಿದ ವಿದ್ಯಾರ್ಥಿಯಂತಹವರು ನಮ್ಮ ನಡುವೆ ಹಲವರಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಅಳಿವು ಉಳಿವಿನ ಕುರಿತು ಯಾರಾದರೂ ಮಾತನಾಡಲು ಶುರುವಿಟ್ಟುಕೊಂಡ ಕೂಡಲೇ ನನಗೆ ಈ ವಿದ್ಯಾರ್ಥಿ ಮತ್ತು ನಮ್ಮ ಸರ್ ಹೇಳಿದ್ದು ನೆನಪಾಗುತ್ತದೆ. ಸಾಮಾನ್ಯವಾಗಿ ತರಗತಿಯಲ್ಲಿ ಇಂಗ್ಲಿಷ್‌ನಲ್ಲೇ ಬೋಧಿಸುವ ನಾವು, ಕ್ಲಾಸ್‌ರೂಮ್‌ನಾಚೆ ವಿದ್ಯಾರ್ಥಿಗಳು ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸುವ ಮನಸ್ಥಿತಿ ಹೊಂದಿದ್ದೆವು. ಕನ್ನಡದಲ್ಲಿ ಮಾತನಾಡಿದ್ರೆ ನಾವೂ ಕನ್ನಡದಲ್ಲೇ ಸಮಾಲೋಚಿಸುತ್ತಿದ್ದೆವು.

ಮಾತೃಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಗ್ರಹಿಕೆಯ ಮಟ್ಟ ಸುಧಾರಿಸುತ್ತದೆ ಎನ್ನುವ ಅಭಿಪ್ರಾಯವನ್ನು ಶಿಕ್ಷಣ ತಜ್ಞರು ಮಂಡಿಸುತ್ತಾರೆ. ಅದು ನಿಜವೂ ಹೌದು. ಆದರೆ, ನಾನಾ ಕಾರಣಗಳಿಂದಾಗಿ ಇಂಗ್ಲಿಷ್ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ಹೆಚ್ಚಾದಂತೆಲ್ಲ ಅಲ್ಪಸಂಖ್ಯಾತರಾಗುತ್ತ ಹೋಗುವ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಎದುರಿಸಬೇಕಿರುವ ಸವಾಲುಗಳತ್ತಲೂ ಗಮನ ಹರಿಸಬೇಕಿದೆ. ಪ್ರಾಥಮಿಕ ಅಥವಾ ಶಾಲಾ ಹಂತದ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸುವ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ತಮ್ಮನ್ನು ಇಂಗ್ಲಿಷ್ ಮಾಧ್ಯಮದ ಬೋಧನೆಗೆ ಒಡ್ಡಿಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ಅವರು ಅನುಭವಿಸುವ ಸಮಸ್ಯೆಗಳ ಕುರಿತು ಪರಾಮರ್ಶಿಸುವ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಯಾವುದೇ ತರಗತಿಯಲ್ಲಿ ಇರಬಹುದಾದ ಬೆರಳೆಣಿಕೆಯಷ್ಟು ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತಹ ಬೋಧನಾ ವಿಧಾನವನ್ನು ನಮ್ಮ ಉಪನ್ಯಾಸಕರು ಅನುಸರಿಸುತ್ತಾರೆಯೇ? ಅನುಸರಿಸಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ನಾನು ಪಿಯು ಓದಿದ ಸರ್ಕಾರಿ ಕಾಲೇಜಿಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದುದರಿಂದ ನಮ್ಮ ಉಪನ್ಯಾಸಕರೆಲ್ಲರೂ ಇಂಗ್ಲಿಷ್ ಮಾಧ್ಯಮಕ್ಕೆ ಇನ್ನು ಹೊಂದಿಕೊಳ್ಳದ ವಿದ್ಯಾರ್ಥಿಗಳ ಸಮಸ್ಯೆ ಅರಿತವರಂತೆ ನಡೆದುಕೊಳ್ಳುತ್ತಿದ್ದರು. ತಮಿಳುನಾಡಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಸ್ನೇಹಿತ ಆಗಾಗ ಅಲ್ಲಿನ ಪರಿಸ್ಥಿತಿ ಕುರಿತು ಸವಿಸ್ತಾರವಾಗಿ ವಿವರಿಸುತ್ತಿರುತ್ತಾನೆ. ’ಕಾಲೇಜು ಆಡಳಿತ ಮಂಡಳಿಯವರೇನೊ ಇಂಗ್ಲಿಷ್‌ನಲ್ಲೇ ಬೋಧಿಸಿ ಅಂತ ಬಡ್ಕೊಳ್ತಾರೆ. ಆದ್ರೆ ಇಲ್ಲಿನ ಮಕ್ಳಿಗೆ ನಾವು ತಮಿಳಿನಲ್ಲಿ ಹೇಳಿದ್ರೇನೆ ಅರ್ಥ ಆಗೋದು. ಅದ್ಕೆ ನಮ್ಮಲ್ಲಿ ಹಲವರು ಕ್ಲಾಸಲ್ಲಿ ತಮಿಳಿನಲ್ಲೇ ಮಾತಾಡ್ತಾರೆ. ನಂಗೆ ಸರ್ಯಾಗಿ ತಮಿಳು ಬಾರದಿರೋದ್ರಿಂದ ಇಂಗ್ಲಿಷ್‌ನಲ್ಲೇ ಪಾಠ ಮಾಡ್ತೀನಿ. ಮಕ್ಳು ಮುಖ್‌ಮುಖಾನೇ ನೋಡ್ತಿರ್‍ತಾರೆ’ ಅಂತ ಅಳಲು ತೋಡಿಕೊಂಡಿದ್ದ.

ಶಿಕ್ಷಣ ತಜ್ಞರು ಹಾಗು ಕೆಲ ಆಸಕ್ತರು ಎಷ್ಟೇ ಪರಿಶ್ರಮ ಪಟ್ಟರೂ ಇಂಗ್ಲಿಷ್ ಶಾಲೆ ಎಡೆಗಿನ ವಿದ್ಯಾರ್ಥಿಗಳ ಪ್ರವಾಹದ ಹರಿವಿಗೆ ತಡೆಯೊಡ್ಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದಷ್ಟೇ. ಬೋಧನಾ ಮಾಧ್ಯಮದ ಕಾರಣಕ್ಕಾಗಿಯೇ ಸೃಷ್ಟಿಯಾಗುತ್ತಿರುವ ಅಸಮಾನತೆ ಹೋಗಲಾಡಿಸಲು ನಮ್ಮ ಎದುರು ಇರುವ ಏಕೈಕ ಆಯ್ಕೆಯೆಂದರೆ ’ಏಕರೂಪ ಶಿಕ್ಷಣ’. ಕನ್ನಡ ಮಾಧ್ಯಮವಾದರೂ ಆಗಲಿ ಅಥವಾ ಇಂಗ್ಲಿಷ್ ಮಾಧ್ಯಮವಾದರೂ ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕನ್ನಡವನ್ನು ಸಮರ್ಥವಾಗಿ ಕಲಿಸುವುದಾದರೂ ಆಗಲಿ, ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಎಲ್ಲರೂ ಆಗ್ರಹಿಸಬೇಕಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಶಿಕ್ಷಣದ ಮೂಲಕವೂ ಮತ್ತಷ್ಟು ಹೆಚ್ಚುವುದು ಬೇಡ. ಎಲ್ಲರೂ ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಕಲಿಯುವುದಾದರೆ ಸಮಸ್ಯೆಯಿಲ್ಲ. ಶಾಲಾ ಹಂತದ ನಂತರ ಇಂಗ್ಲಿಷ್ ಮಾಧ್ಯಮದತ್ತ ಹೊರಳುವುದಾದರೂ ಎಲ್ಲರ ಕಲಿಕೆಯ ಬೇರೂ ಒಂದೇ ನಮೂನೆಯಲ್ಲಿರುವುದರಿಂದ ಆಗಲೂ ಅಂತರ ಸೃಷ್ಟಿಯಾಗಲಾರದು.

ಕನ್ನಡದ ಮೂಲಕವೇ ಬದುಕು ಕಟ್ಟಿಕೊಳ್ಳುವ ಭರವಸೆ ಮೂಡುವಂತಹ ವಾತಾವರಣ ನಮ್ಮನ್ನು ಆವರಿಸಿಕೊಳ್ಳದೆ ಹೋದಾಗ, ಕೆಲವರ ಮೇಲಷ್ಟೇ ಅದೂ ಅವಕಾಶ ವಂಚಿತರ ಹೆಗಲ ಮೇಲೆ ಮಾತ್ರ ಕನ್ನಡ ಮಾಧ್ಯಮದ ಹೊರೆ ಹೊರಿಸುವುದು ಆತ್ಮವಂಚನೆಯಾಗುತ್ತದೆ. ಬೆರಳೆಣಿಕೆಯ ನಿದರ್ಶನಗಳ ಹೊರತಾಗಿ ಕನ್ನಡ ಮಾಧ್ಯಮ ಶಿಕ್ಷಣಕ್ಕೂ ಆಯಾ ವಿದ್ಯಾರ್ಥಿಗಳ ಸಾಮಾಜಿಕ ಆರ್ಥಿಕ ಹಿನ್ನೆಲೆಗೂ ಸಂಬಂಧವಿರುವುದು ಢಾಳಾಗಿಯೇ ಗೋಚರಿಸುತ್ತಿರುವ ಹೊತ್ತಿನಲ್ಲಿ ಏಕರೂಪ ಶಿಕ್ಷಣವಷ್ಟೇ ಭರವಸೆಯ ಊರುಗೋಲಾಗಿ ತೋರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT