ಸ್ವಾಯತ್ತವಾಗಲಿ ನಗರಾಡಳಿತ

7

ಸ್ವಾಯತ್ತವಾಗಲಿ ನಗರಾಡಳಿತ

Published:
Updated:
ಸ್ವಾಯತ್ತವಾಗಲಿ ನಗರಾಡಳಿತ

ಬೆಂಗಳೂರು ನಗರವು ನಗರೀಕರಣಕ್ಕೆ ತುತ್ತಾಗಿ ಇಂದು ಜನರಿಗಾಗಲಿ ಆಡಳಿತ ವರ್ಗಕ್ಕಾಗಲಿ ಕಲ್ಪನೆಗೂ ಕೈಗೆಟಕುವ ಸ್ಥಿತಿಯಲ್ಲಿ ಇಲ್ಲ. ಇದು  ಹಲವಾರು ಆಯಾಮದಲ್ಲಿ ಹೆಮ್ಮರವಾಗಿ ಕ್ಲಿಷ್ಟಕರ ಸ್ಥಿತಿಯಲ್ಲಿ ಬೆಳೆದು ನಿಂತಿದೆ. ಕರ್ನಾಟಕ ರಾಜ್ಯದಲ್ಲಿ ಆಗುತ್ತಿರುವ  ನಗರೀಕರಣದ ಒಂದು ಪ್ರಮುಖ  ಅಂಶವೆಂದರೆ ಕೆಲವೇ ನಗರಗಳು, ಅದರಲ್ಲೂ ಬೆಂಗಳೂರು ಮಾತ್ರ ಅತಿಯಾದ ವೇಗದಲ್ಲಿ ಬೆಳೆಯುತ್ತಿದ್ದು ಬೇರೆ ನಗರಗಳು ತಮ್ಮದೇ ಆದ ವೇಗದಲ್ಲಿ ಬೆಳೆಯುತ್ತಿದೆ. ಉದಾಹರಣೆಗೆ ನಗರಗಳ ಜನಸಂಖ್ಯೆಯನ್ನು ಆಧರಿಸಿ ವಿಂಗಡಿಸಿದರೆ, ಬೆಂಗಳೂರಿಗೆ ಮೊದಲ ಸ್ಥಾನ. ಮೈಸೂರು ಎರಡನೇ ಸ್ಥಾನದಲ್ಲಿಯೂ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಮೂರನೇ ಸ್ಥಾನದಲ್ಲಿವೆ. ಇವುಗಳನ್ನು ಹೊರತು ಪಡಿಸಿದ ನಗರಗಳು ಅದೇ ವೇಗದಲ್ಲಿ ಬೆಳೆಯುತ್ತಿಲ್ಲವೆಂಬುದು ಅದರ ಅಂತರ ಗಮನಿಸಿದರೆ ಸಾಕು. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿರುವಾಗಲೇ ಎರಡನೇ ಹಂತದ ನಗರಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಅಪಾಯಕಾರಿ. ಹೀಗಾಗುವುದರ ಹಿಂದೆ ನಮ್ಮ ನೀತಿ ನಿರೂಪಣೆಯಲ್ಲಿ ಏನೋ ದೋಷವಿದೆ.

ನಗರಾಭಿವೃದ್ಧಿಗೆ ಹಲವು ಆಯಾಮಗಳಿವೆ. ವಸತಿ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಕುಡಿಯುವ ನೀರಿನ ಸರಬರಾಜು, ಒಳ ಚರಂಡಿ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ವಿದ್ಯುತ್ ವಿತರಣೆ ಹೀಗೆ ನಗರಾಭಿವೃದ್ಧಿಯಲ್ಲಿ ಒಳಗೊಳ್ಳಬೇಕಾದ ಕ್ಷೇತ್ರಗಳ ಪಟ್ಟಿ ದೊಡ್ಡದು. ರಾಜ್ಯ ಸರ್ಕಾರ ಇವುಗಳ ನಿರ್ವಹಣೆಯ ಹೊಣೆಯನ್ನು ನಗರಾಡಳಿತ ಸಂಸ್ಥೆಗಳಿಂದ ಕಿತ್ತುಕೊಂಡು ಪ್ರತಿಯೊಂದಕ್ಕು ಒಂದೊಂದು ನಿಗಮವನ್ನು ಸೃಷ್ಟಿಸಿದೆ.

ಹೀಗೆ ಮಾಡುವುದರಿಂದ ಈ ಕ್ಷೇತ್ರಗಳ ನಿರ್ವಹಣೆ ಸುಲಭ ಎಂಬುದು ಸರ್ಕಾರದ ನಿಲುವಾಗಿತ್ತು. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಗೆಂದೇ ಬಿ.ಎಂ.ಟಿ.ಸಿ., ನೀರು ಸರಬರಾಜಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಗರದ ಭೂ ಬಳಕೆಯನ್ನು ನಿರೂಪಿಸಲು ಮತ್ತು ಅದರ ಮಾಸ್ಟರ್ ಪ್ಲಾನ್ ತಯಾರಿಸಲು ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರಗಳಿವೆ. ಈ ಬಗೆಯ ವಿಕೇಂದ್ರೀಕರಣ ವ್ಯಾಪಾರ ಸಂಸ್ಥೆಗಳಿಗಷ್ಟೇ ಸೂಕ್ತ. ಇದನ್ನು ಜನತಾಂತ್ರಿಕ ಆಡಳಿತ ವ್ಯವಸ್ಥೆಯಲ್ಲಿ ಬಳಕೆಗೆ ತಂದರೆ ಏನಾಗಬಹುದೋ ಅದು ಈಗ ಸಂಭವಿಸಿದೆ. ಈ ಎಲ್ಲ ನಿಗಮ ಮತ್ತು ಮಂಡಳಿಗಳು ನೇರವಾಗಿ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳಿಗೆ ಉತ್ತರಿಸಬೇಕಿಲ್ಲ. ಇನ್ನು ಈ ನಿಗಮಗಳಿಂದ ಅಥವಾ ಮಂಡಳಿಯಿಂದ ಏನಾದರು ಕೆಲಸವಾಗಬೇಕೆಂದರೆ ವಿಧಾನ ಸಭೆಗೆ ಚುನಾಯಿತರಾದ ಸದಸ್ಯರ ಅಥವಾ ಸಂಬಂಧಪಟ್ಟ ಇಲಾಖೆಯ ಸಚಿವರ ಮೊರೆ ಹೋಗಬೇಕು. ನಗರದ ಸ್ಥಳೀಯ ವಿಷಯಕ್ಕೆ ವಿಧಾನ ಸಭೆ ಸದಸ್ಯರ ಬಳಿ  ಜನರೇಕೆ ಹೋಗಬೇಕು? ಮತ್ತು ಇಂತಹ ನಿಗಮ ಮತ್ತು ಮಂಡಳಿಗೆ ಆ ನಗರದವರಲ್ಲದವರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಎಷ್ಟು ಸಮಂಜಸ?

ಇದಕ್ಕೆ ಮೂಲ ಕಾರಣ ನಗರದ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವುದು. ರಾಜಕೀಯ ಶಾಸ್ತ್ರದ ಪರಿಭಾಷೆಯಲ್ಲಿ ಇದನ್ನು ‘ಸ್ಟೇಟ್ ಕ್ಯಾಪ್ಚರ್’ ಅನ್ನುತ್ತಾರೆ. ಇದೇನು ಈಗಿನ ರಾಜ್ಯ ಸರ್ಕಾರ ಮಾಡಿರುವುದೇನೂ ಅಲ್ಲ. ಈ ಹಿಂದೆ ಇದ್ದ ಎಲ್ಲ ರಾಜಕೀಯ ಪಕ್ಷದವರೂ ಇದನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಒಮ್ಮೆ ನಗರಗಳು ‘ಸ್ಟೇಟ್ ಕ್ಯಾಪ್ಚರ್’ಗೆ ಒಳಪಟ್ಟರೆ ಅದರ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಅಧಿಕಾರಶಾಹಿಯ ಕೈಯೊಳಗೆ ಬಂಧಿಯಾಗುತ್ತವೆ. ಕರ್ನಾಟಕದ ನಗರಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರವನ್ನು ಕೈಗೊಳ್ಳುವುದು ಸ್ಥಳೀಯಾಡಳಿತ ಸಂಸ್ಥೆಗಳಿಗಿಂತಲೂ ಹೆಚ್ಚಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ. ಇನ್ನು ವಿವಿಧ ನಿಗಮ ಮತ್ತು ಮಂಡಳಿಯ ಮುಖ್ಯಸ್ಥರು ಭಾರತೀಯ ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳೇ. ಈ ಅಧಿಕಾರಿಗಳೂ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರು ಎಂಬುದೇನೋ ನಿಜ. ಅವರ ಕೆಲವು ನಿರ್ಧಾರಗಳು ಜನಹಿತವನ್ನೇ ಗಮನದಲ್ಲಿ ಇಟ್ಟುಕೊಂಡಿರಬಹುದು. ಆದರೆ ಸ್ಥಳೀಯಾಡಳಿತಕ್ಕಾಗಿಯೇ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಇರುವಾಗ ಈ ನಿರ್ಧಾರಗಳು ಆಗಬೇಕಾಗಿರುವುದು ಆ ಸಂಸ್ಥೆಗಳಲ್ಲಿ ತಾನೇ...?

ಇದು ಕೇವಲ ಬೆಂಗಳೂರಿನಂಥ ಮಹಾನಗರಗಳಿಗೆ ಸೀಮಿತವಾಗಿರುವ ವಿಚಾರವಲ್ಲ. ಎಲ್ಲ ನಗರಗಳದ್ದೂ ಇದೆ ಸ್ಥಿತಿ. ಬೆಂಗಳೂರಿನಲ್ಲಾದರು ಹಲವಾರು ಇಲಾಖೆಯ ಮೇಲೆ ಮುಖ್ಯಮಂತ್ರಿ ಇದ್ದಾರೆ. ಬೇರೆ ಜಿಲ್ಲಾ ಕೇಂದ್ರದ ನಗರಗಳಲ್ಲಿ ಆಯಾ ಜಿಲ್ಲಾ ಸಚಿವರು, ಲೋಕಸಭೆ ಸದಸ್ಯರು, ವಿಧಾನ ಸಭೆ ಸದಸ್ಯರು ಮತ್ತು ಜಿಲ್ಲಾಧಿಕಾರಿಗಳ ನಡುವೆ ಅಧಿಕಾರದ ಪೈಪೋಟಿ ನಡೆಯುತ್ತದೆ. ಹೀಗಿರುವಾಗ, ಆಯಾ ಸ್ಥಳೀಯ ನಗರ ಸಂಸ್ಥೆಯ ಅಧ್ಯಕ್ಷರಾಗಲಿ ಮಹಾಪೌರರಾಗಲಿ ಇವರ ಮುಂದೆ ಕೈ ಕಟ್ಟಿ ತಪ್ಪಿದರೆ ಕೈ ಚಾಚಿ ಕುಳಿತುಕೊಳ್ಳುವ ಸ್ಥಿತಿಯಿದೆ. ಇನ್ನು ಸಣ್ಣ ಪಟ್ಟಣಕ್ಕೆ ಬಂದರೆ, ಅಲ್ಲಿನ ಮುಖ್ಯಾಧಿಕಾರಿ ಅಥವಾ ಆಯುಕ್ತರ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಗಳು ಸಾಗುತ್ತವೆಯೇ ಹೊರತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಮಾತಿನಂತೆ ಅಲ್ಲ.

ಮುಂಬರುವ ವರ್ಷಗಳಲ್ಲಿ ಮುಖ್ಯವಾಗಿ ಆಗಬೇಕಿರುವ ಕೆಲಸ ಈ ಸ್ಥಿತಿಯನ್ನು ಬದಲಾಯಿಸುವುದು. ಈಗಾಗಲೇ ಸಂಭವಿಸಿರುವುದಕ್ಕೆ ಯಾರನ್ನಾದರೂ ದೂಷಿಸುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ನಗರಾಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಿರುವ ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ (ಲಾಭಕ್ಕೆ ಎಂದರೆ ತಪ್ಪಾಗದು) ನಡೆದುಕೊಂಡಿರುವ ಪರಿಣಾಮವೇ ಇಂದಿನ ಪರಿಸ್ಥಿತಿ.

ಉತ್ತಮ ಭವಿಷ್ಯವನ್ನು ರೂಪಿಸುವುದಕ್ಕೆ ಮೊದಲು ಸಾರ್ವಜನಿಕರು ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳನ್ನು ಸರಿಯಾಗಿ ಅರಿತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಸಾಕು. ಎರಡನೆಯದ್ದು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಜೊತೆದೆ ಸಾಕಷ್ಟು ಸಂಪನ್ಮೂಲ ಒದಗಿಸಬೇಕು. ಈ ನಿರ್ಧಾರಕ್ಕೆ ಮುನ್ನ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಜವಾಬ್ದಾರಿಯ ಅರಿವು ಮೂಡಿಸುವ ಕಾರ್ಯಕ್ರಮವೊಂದನ್ನು ರೂಪಿಸಬೇಕು. ಸರಳವಾಗಿ ಹೇಳುವುದಾದರೆ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ಬೇಕು.

ಇನ್ನೊಂದು ಅಂಶ ಮುಖ್ಯವಾದುದು ನಗರಗದಲ್ಲಿ ಜೀವನೋಪಾಯಕ್ಕೆ ಒದಗುವ ‘ಉದ್ಯೋಗ’. ಇದನ್ನು ಅರಸಿ ಬಂದವರಿಂದಾಗಿಯೇ ಬೆಂಗಳೂರು ಬೃಹತ್ ಬೆಂಗಳೂರಾಗಿದೆ. ವಿವಿಧ ಸೇವಾ ಕ್ಷೇತ್ರದಲ್ಲಿ ಇಂದು ಬೆಂಗಳೂರು ದೊಡ್ಡ ಹೆಸರು ಮಾಡಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಬಗೆಯ ಸೇವಾ ಕ್ಷೇತ್ರದ ಉದ್ಯಮಗಳು ರಾಜ್ಯದ ಬೇರೆ ಬೇರೆ ನಗರಗಳಲ್ಲಿಯೂ ಬೆಳೆಯಲು ಅವಕಾಶ ಕಲ್ಪಿಸಬಹುದಲ್ಲವೇ? ಉದಾಹರಣೆಗೆ, ಹಾಸನ ಮತ್ತು ದಾವಣಗೆರೆ ನಗರಗಳು ಹಲವಾರು ನೈಸರ್ಗಿಕ ಅನುಕೂಲತೆಗಳನ್ನು ಹೊಂದಿವೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಆಯಾ ಪ್ರದೇಶವನ್ನು ಅಭಿವೃದ್ಧಿ ಪಡಿಸಬಹುದು. ಇದು ಸೇವಾ ಕ್ಷೇತ್ರ ಒಂದಲ್ಲದೆ, ಆಯಾ ಪ್ರದೇಶದ ಕೃಷಿ ಉತ್ಪನ್ನಗಳನ್ನು ಗಮನದಲ್ಲಿಟ್ಟುಕೊಂಡು ಕೈಗಾರಿಕೆಗಳ ಅಭಿವೃದ್ಧಿಯನ್ನೂ ಮಾಡಬಹುದು. ನಗರಗಳ ಕುರಿತ ನಮ್ಮ ಅರಿವೇ ಬಹಳ ಕಡಿಮೆ ಇದೆ. ಇತ್ತೀಚೆಗಷ್ಟೇ ನಗರಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇವುಗಳನ್ನು ಇನ್ನೂ ಅರ್ಥ ಮಾಡಿಕೊಳ್ಳುವುದಕ್ಕಿದೆ. ಪ್ರೊ. ಮೈಖೇಲ್ ಬ್ಯಾಟ್ಟಿ ಹೇಳುವಂತೆ, ‘ಅತಿ ಹೆಚ್ಚು ತಿಳಿದಂತೆ, ಅತಿ ಕಡಿಮೆ ಕ್ಷೇತ್ರಗಳಲ್ಲಿ ಮಧ್ಯಪ್ರವೇಶ ಮಾಡಬಹುದು – ಆದರೆ ಅರ್ಥಪೂರ್ಣವಾಗಿ ಮಾಡಬಹುದು’ .

* ಕರ್ನಾಟಕ ನಾಳೆಗಳ ಕುರಿತ ಚಿಂತನೆಗಳಿಗೆ ‘ಪ್ರಜಾವಾಣಿ’ ನೀಡಿದ ಆಹ್ವಾನಕ್ಕೆ ಸ್ಪಂದಿಸಿದ ಓದುಗರ ಅಭಿಪ್ರಾಯಗಳಿವು. ನಿರ್ದಿಷ್ಟ ಕ್ಷೇತ್ರವೊಂದನ್ನು ಆರಿಸಿಕೊಂಡು ಮುಂದಿನ ನಲವತ್ತು ವರ್ಷಗಳಲ್ಲಿ ಏನಾಗಬೇಕು ಎಂಬ ಕಾರ್ಯಸೂಚಿಯನ್ನು ನೀವೂ ನೀಡಬಹುದು. ನಿಮ್ಮ ಬರಹಗಳನ್ನು ಕಳುಹಿಸಬೇಕಾದ ವಿಳಾಸ karnataka100@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry