7

ರಂಗಭೂಮಿಯ ನವೋದಯ

ಪ್ರಸನ್ನ
Published:
Updated:
ರಂಗಭೂಮಿಯ ನವೋದಯ

ಕೆಲವು ವರ್ಷಗಳಿಂದ ರಂಗಭೂಮಿಯಿಂದ ದೂರ ಉಳಿದಿದ್ದೆ. ಹಾಗೆ ದೂರ ಉಳಿದದ್ದಕ್ಕೆ ನನ್ನ ಮುನಿಸು ಕಾರಣವಾಗಿತ್ತು. ರಂಗಭೂಮಿ, ಅದರಲ್ಲೂ ಮಹಾನಗರಗಳ ರಂಗಭೂಮಿ, ಯಂತ್ರಚಾಲಿತ ಮನರಂಜನೆಯ ಇಮಿಟೇಷನ್ನಿನಂತೆ ಕಾಣತೊಡಗಿತ್ತು. ಈಗ ಬದಲಾವಣೆ ಕಾಣತೊಡಗಿದೆ.

ಸಮಾಜ ಕಟ್ಟುವ ಕೆಲಸದಲ್ಲಿ, ಸಾಂಸ್ಕೃತಿಕ ಪ್ರತಿರೋಧದ ಪ್ರಮುಖ ಉಪಕರಣವಾಗಿ ಮತ್ತೊಮ್ಮೆ ಬಳಕೆಯಾಗತೊಡಗಿದೆ ರಂಗಭೂಮಿ. ಈ ಬದಲಾವಣೆಗೆ ಕಾರಣರು ಯುವಕ ಯುವತಿಯರು ಹಾಗೂ ರಂಗಭೂಮಿಯತ್ತ ಮರಳಿ ಬರತೊಡಗಿರುವ ಹೊಸ ಪ್ರೇಕ್ಷಕರು. ಹಲವು ಯುವನಿರ್ದೇಶಕರು, ಯುವನಾಟಕಕಾರರು, ನಟನಟಿಯರು, ಹಾಡುಗಾರರು ರಂಗಭೂಮಿಯ ನವೋದಯ ನಿರ್ಮಾಣದ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲ ವರ್ಗ, ಎಲ್ಲ ಜಾತಿಗಳಿಂದ ಬಂದ ಯುವಕ ಯುವತಿಯರು ಇವರು.

ಇದು ಕರ್ನಾಟಕಕ್ಕೆ ಸೀಮಿತವಾದ ಬೆಳವಣಿಗೆ ಕೂಡ ಅಲ್ಲ.  ಅಥವಾ ಭಾರತಕ್ಕೆ ಸೀಮಿತವಾದ ಬೆಳವಣಿಗೆಯೂ ಅಲ್ಲ. ಬಡವರು, ಸಂತ್ರಸ್ತರು ಬಹುಸಂಖ್ಯಾತರಾಗಿರುವ ಹಲವು ದೇಶಗಳಲ್ಲಿ ಕಾಣತೊಡಗಿರುವ ಬೆಳವಣಿಗೆಯಿದು. ಬಾಂಗ್ಲಾದೇಶ, ಪ್ಯಾಲೆಸ್ಟೀನ್‌ನಂತಹ ಪುಟ್ಟ ಪುಟ್ಟ ದೇಶಗಳಲ್ಲಿ ಸಹ ಮದ್ದುಗುಂಡು ಹಾಗೂ ಹಿಂಸೆಯ ಕರ್ಕಶ ಸದ್ದಿನ ನಡುವೆಯೂ ಜನಪರ ರಂಗಭೂಮಿ ಮತ್ತೊಮ್ಮೆ ಜನಪ್ರಿಯವಾಗತೊಡಗಿದೆ.  ಆದರೆ ಕನ್ನಡ ರಂಗಭೂಮಿಯಲ್ಲಾಗುತ್ತಿರುವ ಬೆಳವಣಿಗೆ ನಿಜಕ್ಕೂ ವಿಶೇಷವಾದದ್ದು.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಭಾಗ, ದಲಿತ ಭಾಗ, ಸ್ತ್ರೀ ಭಾಗ, ಇಂಗ್ಲಿಷು, ಕಂಗ್ಲಿಷು ಎಂಬ ಯಾವುದೇ ಭೇದಭಾವವೂ ಇರದೆ ಎಲ್ಲೆಡೆ ಕನ್ನಡ ರಂಗಭೂಮಿ ಚಿಗುರೊಡೆಯುತ್ತಿದೆ. ಕುಡುಮಿಗಳಲ್ಲದವರು, ಬಂಡಾಯ ಪ್ರವೃತ್ತಿಯವರು, ಎಣ್ಣೆಗಪ್ಪು ಬಣ್ಣದವರು, ಗುಂಗುರು ಕೂದಲು ಹಾಗೂ ದ್ರಾವಿಡ ಚಹರೆಯ ಯುವಕರು, ಹುಡುಗರಂತೆ ಕಾಣಲು ಹಟ ಹಿಡಿದಿರುವ ಹುಡುಗಿಯರು... ಒಟ್ಟಾರೆಯಾಗಿ ಬಣ್ಣಬಣ್ಣದ ಯುವಕ ಯುವತಿಯರು ರಂಗತಾಲೀಮು ನಡೆಯುತ್ತಿರುವ ಜಾಗಗಳಲ್ಲಿ ಸೇರತೊಡಗಿದ್ದಾರೆ.

ನಾನಾಗಲೇ ಹೇಳಿದ ಹಾಗೆ, ರಂಗಭೂಮಿ ಅಥವಾ ಸಾಹಿತ್ಯ ಅಥವಾ ಸಂಗೀತ ಇವು ಸಾಂಸ್ಕೃತಿಕ ಪ್ರತಿರೋಧದ ಸಂಕೇತಗಳು ಹೌದು. ಆದರೆ ಎಲ್ಲ ಕಾಲಘಟ್ಟಗಳಲ್ಲೂ ಈ ಸಂಕೇತ ಒಂದೇ ತೆರನಾದದ್ದಾಗಿರುವುದಿಲ್ಲ.  ಈ ಬಾರಿಯ ರಂಗಭೂಮಿ ಹಿಂದಲ ಬಾರಿಯ ರಂಗಭೂಮಿಯಂತಿಲ್ಲ. ಹಿಂದಲ ಬಾರಿ ಅದು ಸಿಟ್ಟು ಸೆಡವುಗಳ ಅಭಿವ್ಯಕ್ತಿಯಾಗಿತ್ತು.  ಈ ಬಾರಿ ನಗುನಗುತ್ತ ವ್ಯಕ್ತಪಡಿಸುತ್ತಿರುವ ಪ್ರತಿರೋಧವಾಗಿದೆ ಅದು. ನಗೆನಾಟಕಗಳು ಹಾಗೂ ಇತ್ತ್ಯಾತ್ಮಕ ವಸ್ತುವನ್ನು ಹೊಂದಿದ ನಾಟಕಗಳು ಈ ಬಾರಿ ಹೆಚ್ಚು ಜನಪ್ರಿಯವಾಗತೊಡಗಿವೆ.

ರಂಗಭೂಮಿ ಹಲ್ಲುಕಿರಿಯತೊಡಗಿದೆ. ನೇತಿ ನೇತಿ ಎನ್ನುತ್ತಿದ್ದ ನವ್ಯರಂಗಭೂಮಿ ನೇತಿ ನೇತಿ ಎನ್ನುತ್ತಲೇ ಮುದಿಯಾಯಿತು. ‘ಇಕ್ರಲಾ ವದೀರ್‍ಲಾ...’ ಎನ್ನುತ್ತಿದ್ದ ಬಂಡಾಯ ರಂಗಭೂಮಿ ಸದ್ದಿರದೆ ತನ್ನ ಭಾಷೆ ಬದಲಿಸಿಕೊಂಡಿತು. ಬಂಡಾಯ ನಗುತ್ತಿದೆ. ಅಸಹಿಷ್ಣುತೆ ಪಿಡುಗಾಗಿರುವ ಸಮಾಜದಲ್ಲಿ ಸಾಂಸ್ಕೃತಿಕ ಪ್ರತಿರೋಧದ ಭಾಷೆ ಬದಲಾಗುವುದು ಅನಿವಾರ್ಯವಲ್ಲವೇ? ಈ ಬದಲಾವಣೆಯ ಮಹತ್ವವನ್ನು ಎಷ್ಟು ಹೊಗಳಿದರೂ ಸಾಲದು.

ಆದರೆ ಯುವಕರೆಲ್ಲ ನಗರ ಸೇರುತ್ತಿದ್ದಾರೆ. ಹಾಗಾಗಿ ರಂಗಕರ್ಮವೂ ನಗರ ಸೇರುತ್ತಿದೆ. ನಾಡಿನ ಒಳ ತೆರಳಿ ರಂಗಚಳವಳಿಯನ್ನು ವಿಸ್ತರಿಸುವಂತೆ ಯುವಕರನ್ನು ಪ್ರೇರೇಪಿಸುವ ಅಗತ್ಯವಿದೆ ಇಂದು. ಸಿಜಿಕೆ ಎಂಬ ಪುಂಡ ರಂಗಕರ್ಮಿಯ ನೆನಪಾಗುತ್ತಿದೆ ನನಗೆ. ಆತ ಮಾಡಿದ್ದ ರಂಗಭೂಮಿಯ ವಿಸ್ತರಣೆಯ ಕೆಲಸವನ್ನು. ಕಳೆದ ಶತಮಾನದ ಕಡೆಯ ದಶಕಗಳಲ್ಲಿ ಕರ್ನಾಟಕದಾದ್ಯಂತ ಪರ್ಯಾಯ ರಂಗಭೂಮಿ ಕಟ್ಟುವ ಪ್ರಯತ್ನ ಮಾಡಿದ್ದ ಸಿಜಿಕೆ. ಇಂದು ರಂಗಕ್ರಿಯೆ ಕಟ್ಟುತ್ತಿರುವ ಅನೇಕರು ಆತನ ಶಿಷ್ಯಗಣವೇ ಹೌದು.

ರಂಗಭೂಮಿ ಕಟ್ಟುತ್ತಿರುವವರ ಬಗ್ಗೆ ಇನ್ನೊಂದು ಆರೋಪವಿದೆ. ಟೀವಿ ಹಾಗೂ ಸಿನಿಮಾಗಳ ಮೋಹಕ್ಕೆ ಬಿದ್ದವರು ಇವರು ಎಂಬುದು ಆರೋಪ. ಬೇರೆಯವರನ್ನು ಬಿಡಿ, ನಾನೇ ಹಲವು ಬಾರಿ ಈ ಆತಂಕ ವ್ಯಕ್ತಪಡಿಸಿದ್ದೇನೆ. ಇದು ನಿಜವೂ ಹೌದು. ಆದರಿದು ಇಡೀ ಸಮಾಜವನ್ನೇ ಆವರಿಸಿರುವ ಸಮಸ್ಯೆ ಮಾತ್ರವಲ್ಲ, ಉದ್ಯೋಗ ಸಮಸ್ಯೆಯಾಗಿದೆ.

ರಿಯಾಲಿಟಿ ಷೋಗಳ ಬಣ್ಣ ಬಣ್ಣದ ಸೆಟ್ಟಿಂಗುಗಳೇ ವಾಸ್ತವ ಜಗತ್ತು ಎಂದು ಇಂದಿನ ಯುವಕ ಯುವತಿಯರನ್ನು ನಂಬಿಸಲಾಗಿದೆ. ಸಾರ್ವಜನಿಕವಾಗಿ ನಿರ್ಭಿಡೆಯಿಂದ ಅಳುವುದು ಕರೆಯುವುದು, ಮೂರೂ ಹೊತ್ತು ಉದ್ದೀಪಿತರಾಗಿ ಬದುಕುವುದೇ ಯಶಸ್ಸು. ಅದರಿಂದ ಕಿಕ್ಕೂ ಸಿಗುತ್ತದೆ ರೊಕ್ಕವೂ ಸಿಗುತ್ತದೆ ಎಂದು ಇವರನ್ನು ನಂಬಿಸಲಾಗಿದೆ. ಉದ್ದೀಪಿತ ಬದುಕು ಬದುಕಿ, ಎಲ್ಲರೆದುರಿಗೇ ಲವ್ ಮಾಡಿ, ಸ್ಟಾರುಗಳಾದವರ ಮಾದರಿಗಳನ್ನು ಯುವಕರ ಮುಂದೆ ಕುಣಿಸಲಾಗುತ್ತಿದೆ. ಇದೊಂದು ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಬೆರಳೆಣಿಕೆಯ ಮಂದಿ ಸ್ಟಾರುಗಳಾದರೆ ಲಕ್ಷಲಕ್ಷ ಮಂದಿ ಟಾರುಗಳಾಗಿ ರಸ್ತೆಗಳಿಗೆ ಹಾಸಲ್ಪಡುತ್ತಿದ್ದಾರೆ. ಈ ಸಂಗತಿಯನ್ನು ಯುವಕರಿಂದ ಮರೆ ಮಾಚಲಾಗುತ್ತಿದೆ.

ಮರೆಮಾಚಲಾಗದ ವಾಸ್ತವವಿದು. ರಂಗಭೂಮಿಗೆ ಬರುತ್ತಿರುವವರು ಹೆಚ್ಚಾಗಿ ರಸ್ತೆಗೆ ಟಾರುಗಳಾಗಿರುವ ಅಥವಾ ಆಗಲಿರುವ ಯುವಕ ಯುವತಿಯರು. ಚಿಂತೆಯಿಲ್ಲ.  ಈ ಯುವಕ ಯುವತಿಯರಿಗಂಟಿರುವ ಟಾರಿನ ಗಲೀಜನ್ನು ತೊಳೆದು ಅವರ ನಗುಮುಖವು ಮತ್ತೆ ಬೆಳಗುವಂತೆ ಮಾಡಬಲ್ಲದು ರಂಗಭೂಮಿ. ದುರಂತವೆಂದರೆ ರಂಗಭೂಮಿಯ ಈ ಶಕ್ತಿ ನಮಗಿನ್ನೂ ಪೂರ್ತಿ ಅರಿವಾಗಿಲ್ಲ ಅಷ್ಟೆ.

ಪೋಲಿ ಸಿನಿಮಾ ಅಥವಾ ಇಂಟರ್‌ನೆಟ್ಟಿನ ಪೋರ್ನೊಗ್ರಫಿಯನ್ನು ಮಾನ್ಯ ಮಾಡುವ ನಾವು ರಂಗಭೂಮಿಯನ್ನು ಪ್ರತಿಬಂಧಿಸುತ್ತಿದ್ದೇವೆ.  ನಿಮಗಿದು ಗೊತ್ತೆ? ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ರಂಗಶಿಕ್ಷಕರನ್ನು ನೇಮಕ ಮಾಡದೆ ತಡೆ ಹಿಡಿಯಲಾಗಿದೆ. ಏಕೆ ಗೊತ್ತೆ? ರಂಗಭೂಮಿ ಅನೈತಿಕ ಮಾಧ್ಯಮವಿರಬಹುದು ಎಂಬ ಅನುಮಾನ ನಮಗೆ. ಯುವಕ ಯುವತಿಯರು ಕೈಕೈ ಹಿಡಿದು ನಗುನಗುತ್ತ ರಂಗದ ಮೇಲೆ ನಿಂತರೆ ನಮಗದು ಅನೈತಿಕವಾಗಿ ಕಾಣುತ್ತದೆ. ಹತ್ತೊಂಬತ್ತನೆಯ ಶತಮಾನದ ವಿಕ್ಟೋರಿಯನ್ ಯುಗದ ಇಂಗ್ಲಿಷರಿಗಿಂತ ಕೀಳಾಗಿದೆ ನಮ್ಮ ನೈತಿಕ ದೃಷ್ಟಿಕೋನ. ಇರಲಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಿಂದಿರುಗೋಣ. 

ಹಳೆಯದೊಂದು ಉಪಮೆಯನ್ನು ಬಳಸಿ ವಿವರಿಸುವುದಾದರೆ, ಕೆಸರಿನಿಂದ ಕಮಲವು ಹುಟ್ಟಿ ಬರುವಂತೆ ಯಂತ್ರಚಾಲಿತ ಮನರಂಜನೆಯೆಂಬ ಸಿಂಥೆಟಿಕ್ ಕೆಸರಿನ ನಡುವಿನಿಂದ ಯುವರಂಗಭೂಮಿಯೆಂಬ ನೈಜ ಕಮಲವೊಂದು ಮೇಲೆದ್ದು ಬರತೊಡಗಿದೆ. ಕನ್ನಡದ ನವೋದಯ ಚಳವಳಿಗೆ ಹೋಲಿಸಬಹುದಾದ ಬೆಳವಣಿಗೆ ಇದು.  ಇಂದಿನ ರಂಗ ಚಳವಳಿಗೂ ನವೋದಯ ಚಳವಳಿಗೂ ನಡುವಿನ ಸಾಮ್ಯ ಗಮನಾರ್ಹವಾದದ್ದು. ನವೋದಯವು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಯುಗದ ನಡುವಣ ಸಂಕ್ರಮಣ ಕಾಲದಲ್ಲಿ ಘಟಿಸಿತ್ತು. ಆಗ ಅದು ಸಾಹಿತ್ಯ ಮಾಧ್ಯಮದಲ್ಲಿ ಕಂಡುಬಂದಿತ್ತು. ಕುವೆಂಪು, ಬೇಂದ್ರೆ, ಕಾರಂತ ಇತ್ಯಾದಿ ಲೇಖಕರು ಸಾಹಿತ್ಯ ರಚನೆ ಮಾಡಿ ನವೋದಯವನ್ನು ಪೋಷಿಸಿದ್ದರು. ನವೋದಯ ಅಕ್ಷರಸ್ಥರ ಚಳವಳಿಯಾಗಿತ್ತು.

ಯಂತ್ರನಾಗರಿಕತೆ ಅನಕ್ಷರಸ್ಥರನ್ನು ತಲುಪಿದೆ; ಬಡವರು, ಹಳ್ಳಿಗರು, ಮಹಿಳೆಯರು, ಮಕ್ಕಳು, ಮುದುಕರನ್ನು ತಲುಪಿದೆ. ಪರಂಪರೆಯೊಟ್ಟಿಗೆ ರಾಜಿ ಮಾಡಿಕೊಂಡಿದೆ. ಮಾತ್ರವಲ್ಲ, ಮಠಮಾನ್ಯಗಳು, ಶಿಕ್ಷಣ, ರಾಜಕೀಯ ಇತ್ಯಾದಿ  ಸಭ್ಯತೆಯ ಎಲ್ಲ ಸಂಸ್ಥೆಗಳನ್ನೂ ಮಾರುಕಟ್ಟೆಯ ನಿಯಂತ್ರಣಕ್ಕೆ ತಂದು ಅಸಭ್ಯವಾಗಿಸಿದೆ.  ಹಾಗಾಗಿ ಇಂದಿನ ನವೋದಯ ಚಳವಳಿ ಸಾಹಿತ್ಯೇತರ ಚಳವಳಿಯಾಗುವುದು, ದೃಶ್ಯಶ್ರವ್ಯ ಮಾಧ್ಯಮವೊಂದರಲ್ಲಿ ಮೂಡಿಬರುವುದು ಅನಿವಾರ್ಯವಾಗಿದೆ.

ನವೋದಯವು ಬಿಕ್ಕಟ್ಟನ್ನು ನಿರ್ವಹಿಸಿದ ರೀತಿ ಗಮನಾರ್ಹವಾದದ್ದು. ಪರಂಪರೆಯನ್ನಾಗಲೀ ಆಧುನಿಕತೆ ಯನ್ನಾಗಲೀ ನವೋದಯ ಚಳವಳಿ, ಸಾರಾಸಗಟಾಗಿ ಒಪ್ಪಿಕೊಳ್ಳಲೂ ಇಲ್ಲ, ತಿರಸ್ಕರಿಸಲೂ ಇಲ್ಲ. ಹಂಸಕ್ಷೀರ ನ್ಯಾಯ ಮಾಡಿತು. ಎರಡರಲ್ಲೂ ಇರುವ ಕಸುವನ್ನು ಹೀರಿಕೊಂಡು ಕಸವನ್ನು ತಿರಸ್ಕರಿಸಿತ್ತು ಅದು. ಇಂದಿನ ರಂಗಭೂಮಿ ಇದೇ ಕೆಲಸ ಮಾಡಬೇಕಿದೆ. ಶ್ರಮದ ಸಭ್ಯತೆ ಹಾಗೂ ಯಂತ್ರನಾಗರಿಕತೆಗಳೆರಡನ್ನೂ ಪೂರ್ತಿ ಸ್ವೀಕರಿಸದೆ ಪೂರ್ತಿ ತಿರಸ್ಕರಿಸದೆ ಜಾಣ ಆಯ್ಕೆ ಮಾಡಿಕೊಳ್ಳಬೇಕಿದೆ.

ಏನದು ಜಾಣ ಆಯ್ಕೆ? ಶ್ರಮದ ಸಭ್ಯತೆಯಿಂದ ಶ್ರಮಸಹಿತ ಸರಳ ಬದುಕನ್ನು ಯಂತ್ರ ನಾಗರಿಕತೆಯಿಂದ ವೈಚಾರಿಕತೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ರಂಗಭೂಮಿ. ರಂಗಭೂಮಿಗೆ ಹೇಳಿ ಮಾಡಿಸಿದ ಕೆಲಸವಿದು. ಟೀವಿ, ಸಿನಿಮಾಗಳಂತೆ ರಂಗಭೂಮಿ ದುಡ್ಡಿನ ಮಾಧ್ಯಮವಾಗಲಾರದು, ಆಗಬಾರದು. ರಂಗಭೂಮಿಯನ್ನು ಸರಳವಾಗಿಸುವ ಕೆಲಸ ಈಗಾಗಲೇ ಶುರುವಾಗಿದೆ.

ಯಂತ್ರಚಾಲಿತ ಮನರಂಜನೆ ಮಾರುಕಟ್ಟೆಯ ಪುಂಗಿ. ಈ ಪುಂಗಿಯ ನಾದಕ್ಕೆ ಬಡವರು ನಿದ್ದೆಹೋಗ್ತಿದ್ದಾರೆ, ಚಳವಳಿ, ಕ್ರಾಂತಿ ಇತ್ಯಾದಿ ಎಲ್ಲವೂ ನಿದ್ದೆ ಹೋಗಿವೆ. ಯಂತ್ರಚಾಲಿತ ಮನರಂಜನೆಯ ಉದ್ದೀಪನವನ್ನು ಎದುರಿಸಲಿಕ್ಕೆ ರಂಗಭೂಮಿಗೆ ಮಾತ್ರ ಸಾಧ್ಯ.

ಆದರೆ ರಂಗಭೂಮಿಯು ನವೋದಯದಿಂದ ಸಾಕಷ್ಟು ಪಾಠ ಕಲಿಯಬೇಕಾಗಿದೆ. ಪ್ರಕೃತಿ ಆರಾಧನೆ ಮಾಡಿತು ನವೋದಯ, ಬದುಕಿನ ಆರಾಧನೆ ಮಾಡಿತು. ಪುಂಗಿಯ ಆರಾಧಕನಾಗಿರಲಿಲ್ಲ ನವೋದಯ. ಹಾವು ಹುಳ ಹೂವುಗಳನ್ನು-ಅವು ಮನುಷ್ಯರಿಗೆ ಉಪಯುಕ್ತವೇ ಅಲ್ಲವೇ ಎಂಬ ಸೀಮಿತ ದೃಷ್ಟಿಕೋನದಿಂದ ನೋಡಲಿಲ್ಲ ನವೋದಯ. ಉಪಯುಕ್ತವಾದದ್ದು ಮಾತ್ರವೇ ಒಳ್ಳೆಯದು ಎಂಬ ಸೀಮಿತ ದೃಷ್ಟಿಕೋನವಿರಲಿಲ್ಲ ನವೋದಯಕ್ಕೆ, ಅದು ಬಂದದ್ದು ನವ್ಯಯುಗದಲ್ಲಿ.

ಆದರೆ ನವ್ಯಚಳವಳಿಯಿಂದಲೂ ಕಲಿಯುವುದಿದೆ. ನವ್ಯರು ವಿಗ್ರಹಭಂಜಕರು. ನಾವೂ ವಿಗ್ರಹಭಂಜಕ ರಾಗಬೇಕು.  ನವ್ಯರು ಸಿಟ್ಟಿನಿಂದ ಆ ಕೆಲಸ ಮಾಡಿದರು.  ನಾವು ನಗುನಗುತ್ತ ಆದೇ ಕೆಲಸ ಮಾಡಬೇಕಿದೆ. ವಿಗ್ರಹಗಳನ್ನು ಭಂಜಿಸಿ ಅದರೊಳಗೆ ಬಂಧಿಸಲ್ಪಟ್ಟಿರುವ ಸತ್ಯವನ್ನು ಬಿಡುಗಡೆಗೊಳಿಸಬೇಕಿದೆ ನಾವು. ಗಾಂಧಿ ಇರಲಿ, ಅಂಬೇಡ್ಕರ್ ಇರಲಿ, ಬುದ್ಧ ಬಸವ ರಾಮ ಯಾರೇ ಇರಲಿ, ಅವರನ್ನು ವ್ಯವಸ್ಥೆ ವಿಗ್ರಹಗಳನ್ನಾಗಿಸಿಬಿಡುತ್ತದೆ. ಸಿಟ್ಟಿನಿಂದ ಒಡೆದರೆ ವಿಗ್ರಹವೂ ಒಡೆಯುತ್ತದೆ, ಸತ್ಯವೂ ಒಡೆಯುತ್ತದೆ.

ಉಪಯುಕ್ತತೆಯ ರೋಗ ಬಡಿದಿದೆ ನಮಗೆ. ನೀವೇ ಯೋಚಿಸಿ! ವಿಷಕಾರಿ ತ್ಯಾಜ್ಯ ಒಳಬಂದದ್ದು ಉಪಯುಕ್ತ ಎಂಬ ಕಾರಣಕ್ಕಾಗಿ. ಕ್ರಿಮಿನಾಶಕ ಒಳಬಂದದ್ದು ಉಪಯುಕ್ತ ಕಾರಣಕ್ಕಾಗಿ. ಅಣುಬಾಂಬು, ಪ್ಲಾಸ್ಟಿಕ್ಕು, ಟೀವಿ, ಇಂಟರ್‌ನೆಟ್ಟು, ಯೂಟ್ಯೂಬು, ಅಷ್ಟೇ ಏಕೆ, ಪೋರ್ನೊಗ್ರಫಿ ಸಹಿತ ಒಳಬಂದದ್ದು ಉಪಯುಕ್ತ ಎಂಬ ಕಾರಣಕ್ಕಾಗಿ. ಮಾತ್ರವಲ್ಲ, ಉಪಯುಕ್ತತೆಯ ರೋಗವು ಟೀವಿ, ಇಂಟರ್‌ನೆಟ್ಟು ಹಾಗೂ ಕ್ರಿಮಿನಾಶಕಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ರಂಗಭೂಮಿ, ಸಂಗೀತ, ದೇವರು, ಧರ್ಮ... ಇತ್ಯಾದಿಗಳನ್ನೂ ಉಪಯುಕ್ತವಾಗಿಸಿದ್ದೇವೆ ನಾವು. ಅರ್ಥಾತ್ ಮಾರಾಟವಾಗಬಲ್ಲ ವಸ್ತುಗಳನ್ನಾಗಿಸಿದ್ದೇವೆ. ರಂಗಭೂಮಿ ಮಾರಾಟವಾಗಬಲ್ಲ ಸರಕಲ್ಲ. ಕೊಳ್ಳುಬಾಕತನವನ್ನು ಎದುರಿಸುವ ಅಸ್ತ್ರ ರಂಗಭೂಮಿ.

editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry