ಡಿ.11ರಂದು ‘ಕಲ್ಯಾಣ ಕರ್ನಾಟಕ’ ವಿಕಾಸ ಜಾತ್ರೆ

7
ಸಮಗ್ರ ವಿಕಾಸ ಚಿಂತನ ಸಭೆಯಲ್ಲಿ ಬಸವರಾಜ ಪಾಟೀಲ್‌ ಸೇಡಂ ಹೇಳಿಕೆ

ಡಿ.11ರಂದು ‘ಕಲ್ಯಾಣ ಕರ್ನಾಟಕ’ ವಿಕಾಸ ಜಾತ್ರೆ

Published:
Updated:

ಬೀದರ್: ಬರುವ ಡಿಸೆಂಬರ್ 11 ರಂದು ಕಲಬುರ್ಗಿಯಲ್ಲಿ ‘ಕಲ್ಯಾಣ ಕರ್ನಾಟಕ’ ವಿಕಾಸ ಜಾತ್ರೆ ಆಯೋಜಿಸಲಾಗಿದೆ ಎಂದು ವಿಕಾಸ ಅಕಾಡೆಮಿ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್‌ ಸೇಡಂ ತಿಳಿಸಿದರು. 

 

ನಗರದ ಕರ್ನಾಟಕ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸ ಕುರಿತ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗವನ್ನು ಹೈದರಾಬಾದ್‌ ಕರ್ನಾಟಕ ಬದಲು ‘ಕಲ್ಯಾಣ ಕರ್ನಾಟಕ’ ಎಂದು ಕರೆಯಬೇಕು ಎನ್ನುವ ಸಲಹೆಗಳು ಕೇಳಿ ಬರುತ್ತಿರುವ ಪ್ರಯುಕ್ತ ಜನರ ಮಾನಸಿಕತೆಯನ್ನು ಬದಲಿಸಲು ಜಾತ್ರೆ ಸಂಘಟಿಸಲಾಗಿದೆ ಎಂದು ಹೇಳಿದರು. 

 

ಹೈದರಾಬಾದ್ ಕರ್ನಾಟಕ ಎನ್ನುತ್ತಲೇ ಹಿಂದುಳಿದ ಭಾವನೆ ಮೂಡುತ್ತಿದೆ. ಇದನ್ನು ನಿವಾರಿಸಲು ಕಲ್ಯಾಣ ಕರ್ನಾಟಕ ಎಂದು ಕರೆಯುವ ಅಗತ್ಯ ಇದೆ. ಹೈದರಾಬಾದ್‌ ನಿಜಾಮರ ಆಡಳಿತ ಅಂತ್ಯಗೊಂಡ ನಂತರವೂ ಹೈದರಾಬಾದ್ ಕರ್ನಾಟಕ ಹೆಸರಿನಿಂದಲೇ ಕರೆಯುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

 

ಕಳೆದ ಒಂದು ದಶಕದ ಅವಧಿಯಲ್ಲಿ ಈ ಭಾಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜನರ ಆಲೋಚನಾ ವಿಧಾನದಲ್ಲಿ ಹೊಸತನ ಕಂಡು ಬರುತ್ತಿದೆ. ಆದರೂ, ಹೈದರಾಬಾದ್ ಕರ್ನಾಟಕ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಹಿಂದುಳಿದ ಭಾವನೆ ನಿವಾರಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 

ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆಯಲ್ಲಿ ನಾಲ್ಕು ಮುಖ್ಯ ವಿಷಯಗಳನ್ನು ಆಧರಿಸಿ ಉಪನ್ಯಾಸ ಏರ್ಪಡಿಸಲಾಗಿದೆ. ಮಾನವ ಜನ್ಮದ ಶ್ರೇಷ್ಠತೆ ಕುರಿತು ಗವಿ ಸಿದ್ಧೇಶ್ವರ ಸಂಸ್ಥಾನದ ಸ್ವಾಮೀಜಿ, ಕೃಷಿ ಶ್ರೇಷ್ಠತೆ ಕುರಿತು ಮಹಾರಾಷ್ಟ್ರದ ಕನ್ಹೇರಿಯ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಶ್ರದ್ಧೆಯ ದುಡಿಮೆ ಕುರಿತು  ಡಾ. ಗುರುರಾಜ ಕರಜಗಿ, ಧರ್ಮಾಧಾರಿತ ಜೀವನ ಸ್ಥಾಯಿ ವಿಕಾಸ ಕುರಿತು ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವರು. ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶಿರ್ವಚನ ನೀಡುವರು. ಕಾರ್ಯಕ್ರಮಕ್ಕೆ ಕೇಂದ್ರ ವಾರ್ತಾ ಸಚಿವರನ್ನೂ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

 

ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಚೆನ್ನಣ್ಣ ಮಾತನಾಡಿ, ಆಸ್ಪತ್ರೆ ಹಾಗು ಕಾಲೇಜು ಅಭಿವೃದ್ಧಿಗೆ ಯತ್ನಿಸಲಾಗುತ್ತಿದೆ. ಬರುವ ವರ್ಷ ಕಾಲೇಜಿನ ಸೀಟುಗಳ ಸಂಖ್ಯೆ 150 ಕ್ಕೆ ಹೆಚ್ಚಲಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು.

 

ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಬಸವರಾಜ ಜಾಬಶೆಟ್ಟಿ, ಡಾ. ಜಗನ್ನಾಥ ಹೆಬ್ಬಾಳೆ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಬಿ.ಎಸ್. ಕುದರೆ, ಬಸವಕುಮಾರ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಅಕಾಡೆಮಿ ತಾಲ್ಲೂಕು ಸಂಚಾಲಕ ಸಂಗಮೇಶ ನಾಸಿಗಾರ್, ಪ್ರೊ. ದೇವೆಂದ್ರ ಕಮಲ್ ಮತ್ತಿತರರು ಇದ್ದರು.

 

**

ಈ ಭಾಗವನ್ನು ‘ಕಲ್ಯಾಣ’ ಕರ್ನಾಟಕ ಎಂದು ಕರೆಯಲು ಸರ್ಕಾರವನ್ನು ಒತ್ತಾಯಿಸಬೇಕು. ಕಲ್ಯಾಣ ಕರ್ನಾಟಕ ಹೆಸರಿನ ಬಳಕೆಯು ಮುಂದೆ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ.

-ಬಸವರಾಜ ಪಾಟೀಲ್ ಸೇಡಂ, 

ರಾಜ್ಯಸಭಾ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry