ಮಕ್ಕಳ ಥಿಯೇಟರ್ ಮನೇಲಲ್ವೇ...

–ಪವನ್ ಕುಮಾರ್, ಸಿನಿಮಾ ನಿರ್ದೇಶಕ
*
ಸಿನಿಮಾ ಅತ್ಯಂತ ಪ್ರಬಲ ಮಾಧ್ಯಮ. ನಮ್ಮ ಕಣ್ಣು ಮತ್ತು ಕಿವಿ ಎರಡನ್ನೂ ಒಟ್ಟಿಗೆ ಹಿಡಿದಿಡುವ ಈ ಮಾಧ್ಯಮ, ಮೆದುಳಿನ ಮೇಲೂ ತನ್ನ ಪ್ರಭಾವ ಬೀರುತ್ತದೆ. ಮನುಷ್ಯನ ಮೇಲೆ ಅದರ ಪರಿಣಾಮ ಹೆಚ್ಚೆನ್ನಬಹುದು. ಮಕ್ಕಳನ್ನು ಇನ್ನೂ ಹೆಚ್ಚು ಪ್ರಭಾವಿಸುತ್ತದೆ. ಹಾಗಾಗಿಯೇ ಚಿಕ್ಕಂದಿನಲ್ಲಿ ನೋಡಿದ ‘ಶಕ್ತಿಮಾನ್’, ‘ಸ್ಟೋನ್ ಬಾಯ್’ ಸೇರಿದಂತೆ ‘ಡಿಡಿ–1’ರಲ್ಲಿ ಅಂದು ನೋಡಿದ ಕೆಲವು ಸಾಹಸಪ್ರಧಾನ ಧಾರಾವಾಹಿಗಳು, ಸಿನಿಮಾಗಳು ನಮ್ಮನ್ನು ಎಲ್ಲೊ ಒಂದು ರೀತಿ ಪ್ರಭಾವಿಸಿದ್ದರಿಂದ ಇನ್ನೂ ನೆನಪಿನಲ್ಲಿ ಉಳಿದಿವೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಟಿ.ಎಸ್. ನಾಗಾಭರಣ ನಿರ್ದೇಶನದ ‘ಚಿನ್ನಾರಿ ಮುತ್ತ’ ಚಿತ್ರವನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಮಕ್ಕಳ ಚಿತ್ರಗಳು ಬಂದಿಲ್ಲ. ‘ಚಿನ್ನಾರಿ ಮುತ್ತ’ ಬಿಡುಗಡೆಯಾದ ಕಾಲಕ್ಕೆ ತುಂಬಾ ಹಿಟ್ ಆಗಿತ್ತು. ನಾನಾಗ ಆರನೇ ತರಗತಿ ಓದುತ್ತಿದ್ದೆ. ಒಂದು ದಿನ ಸಂಜೆ ಅಪ್ಪ–ಅಮ್ಮ ಇಬ್ಬರೂ ನನ್ನನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗಿ ಆ ಸಿನಿಮಾ ತೋರಿಸಿದ್ದರು. ಕಷ್ಟಪಟ್ಟರೆ ಏನೆಲ್ಲಾ ಆಗಬಹುದು ಎಂಬ ಕಥೆ ಚಿತ್ರದಲ್ಲಿದೆ. ವಾಸ್ತವಕ್ಕೆ ಹತ್ತಿರವಾಗಿದ್ದ ಆ ಚಿತ್ರ, ಇಂದಿನ ಮಕ್ಕಳಿಗೂ ಸ್ಫೂರ್ತಿಯಾಗುವಂತಿದೆ.
ಇತ್ತೀಚೆಗೆ ಸ್ನೇಹಿತರೊಬ್ಬರು ಕರೆ ಮಾಡಿ, ‘ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ಸಿನಿಮಾ ತೋರಿಸಬೇಕಿದೆ. ನಿಮಗೆ ಗೊತ್ತಿರುವ ಕೆಲವು ಮಕ್ಕಳ ಚಿತ್ರಗಳ ಹೆಸರು ಹೇಳಿ’ ಎಂದರು. ಆಗ ನೆನಪಿಗೆ ಬಂದದ್ದು ‘ಚಿನ್ನಾರಿ ಮುತ್ತ’ ಒಂದೇ. ಎಷ್ಟೇ ತಡಕಾಡಿದರೂ ಹೆಸರಿಸಬಹುದಾದ ಬೇರೊಂದು ಚಿತ್ರ ಸಿಗಲಿಲ್ಲ. ಆಗ ಮಕ್ಕಳ ಚಿತ್ರಗಳ ಕುರಿತು ನನಗೆ ಯೋಚನೆ ಬಂತು. ಇತ್ತೀಚಿನ ‘ಜಂಗಲ್ ಬುಕ್’ನಂತಹ ಫ್ಯಾಂಟಸಿ ಚಿತ್ರ ಸೇರಿದಂತೆ, ಮಕ್ಕಳಿಗಾಗಿಯೇ ನಿರ್ಮಿಸಿದ ಅನೇಕ ಚಿತ್ರಗಳು ಇಂಗ್ಲಿಷ್‌ನಲ್ಲಿ ಬಂದಿವೆ. ನಮ್ಮ ದೇಸಿ ಭಾಷೆಗಳಲ್ಲಿ ಅಂತಹ ಚಿತ್ರಗಳ ಕೊರತೆ ಇದೆ. ಕನ್ನಡದಲ್ಲಿ ವರ್ಷಕ್ಕೆ ಒಂದಾದರೂ ಮಕ್ಕಳ ಒಳ್ಳೆಯ ಚಿತ್ರ ಬರಬೇಕಾದ ಅಗತ್ಯವಿದೆ.
ನನಗೂಬ್ಬಳು ಮಗಳಿದ್ದಾಳೆ. ಸಿನಿಮಾ ತೋರಿಸುವಷ್ಟು ದೊಡ್ಡವಳೇನಲ್ಲ. ಆದರೂ ಲ್ಯಾಪ್‌ಟಾಪ್ ಮುಂದೆ ಕುಳಿತು, ಯೂಟ್ಯೂಬ್‌ನಲ್ಲಿ ಕಾರ್ಟೂನ್ ಸೇರಿದಂತೆ ತನಗೆ ಇಷ್ಟವಾದ ವಿಡಿಯೊ ತುಣುಕುಗಳನ್ನು ನೋಡಿ ಆನಂದಿಸುತ್ತಿರುತ್ತಾಳೆ. ಅವಳು ಹೆಚ್ಚಾಗಿ ನೋಡುವ ‘ಹೆಪ್ ಹಾಪ್’ ಎಂಬ ಕಾರ್ಟೂನ್ ವಿಡಿಯೊದಲ್ಲಿನ ಪಾತ್ರವೊಂದು ಕ್ಯೂಟ್ ಆಗಿ ‘ಪ್ಲೀಸ್...’ ಎಂಬ ಪದವನ್ನು ಬಳಸುತ್ತದೆ. ಆ ಪದದ ಉಚ್ಚಾರದ ಶೈಲಿ ಮಗಳನ್ನು ಎಷ್ಟು ಪ್ರಭಾವಿಸಿದೆ ಎಂದರೆ, ಕೆಲವೊಮ್ಮೆ ಹಟ ಹಿಡಿದು ನಮ್ಮನ್ನು ಏನಾದರೂ ಕೇಳುವಾಗ ಅದೇ ರೀತಿಯಲ್ಲಿ ‘ಪ್ಲೀಸ್...’ ಎನ್ನುತ್ತಾಳೆ.
ಮನರಂಜನೆ ಜತೆಗೆ, ಪಾತ್ರಗಳ ಮೂಲಕ ಮಕ್ಕಳ ಮೇಲೆ ಪ್ರಭಾವ ಬೀರುವ ಚಿತ್ರಗಳು ಬೇಕಾಗಿವೆ. ಈಗ ಮುಂಚೆಯಂತೆ ಟೀವಿಯಲ್ಲಿ ಬಂದಿದ್ದನ್ನೇ ಮಕ್ಕಳು ನೋಡಬೇಕೆಂದೇನಿಲ್ಲ. ಇಂಟರ್‌ನೆಟ್‌ನಲ್ಲಿ ಮಕ್ಕಳಿಗೆ ತೋರಿಸಬೇಕಾದ ಹಲವು ಸಿನಿಮಾಗಳು, ವಿಡಿಯೊ ತುಣುಕುಗಳು ಸಿಗುತ್ತವೆ. ಯಾವುದನ್ನು ತೋರಿಸಬೇಕು, ತೋರಿಸಬಾರದು ಎಂಬುದು ತಂದೆ–ತಾಯಿಯ ವಿವೇಚನೆಗೆ ಬಿಟ್ಟಿದ್ದು.
ಮಕ್ಕಳಿಗೆ ತೋರಿಸುವ ಚಿತ್ರಗಳಲ್ಲಿ ಕೇವಲ ಸಂದೇಶವೇ ಕೇಂದ್ರಿಕೃತವಾಗಿರಬಾರದು. ಆಗ ನಾವೆಷ್ಟೇ ಪೂಸಿ ಹೊಡೆದರೂ ಮತ್ತೆ ಮಕ್ಕಳು ಥಿಯೇಟರ್‌ಗೆ ಬರುವುದಿಲ್ಲ. ತೋರಿಸುವ ಚಿತ್ರದಲ್ಲಿ ಮನರಂಜನೆಯೇ ಮುಖ್ಯವಾಗಿದ್ದು, ಸಂದೇಶಕ್ಕೆ ಕೊನೆಯ ಆದ್ಯತೆ ಇರಬೇಕು. ಆಗ ಮಕ್ಕಳು ಅಲ್ಲಿನ ಪಾತ್ರಗಳಿಂದ ಪ್ರಭಾವಿತರಾಗಿ, ತಮ್ಮದೇ ನೆಲೆಯಲ್ಲಿ ಅನುಕರಿಸುತ್ತಾರೆ.
ನನ್ನ ‘ಯೂಟರ್ನ್’ ಚಿತ್ರ ಫ್ಯಾಂಟಸಿ ಎನಿಸಿದರೂ, ನೋಡಿದವರ ಮನಸ್ಸಿನಲ್ಲಿ ಕುಳಿತಿದೆ. ನಾವು ಚಿತ್ರದಲ್ಲಿ ಹಾಗೆ ಹೇಳಿದ್ದನ್ನು ರಸ್ತೆ ಬದಿಯಲ್ಲಿ ಬರೆದರೆ ಅಥವಾ ಹೇಳಿದರೆ ಅದು ಜನರ ಮನಸ್ಸನ್ನು ಅಷ್ಟಾಗಿ ತಟ್ಟುವುದಿಲ್ಲ. ಆದರೆ, ಸಿನಿಮಾ ಮೂಲಕ ಒಂದಿಷ್ಟು ಪ್ರಭಾವ ಬೀರಿದ್ದಂತೂ ಸುಳ್ಳಲ್ಲ. ಮಕ್ಕಳ ಸಿನಿಮಾಗಳಲ್ಲೂ ಇಂತಹದ್ದೊಂದು ನಾಡಿಮಿಡಿತ ಇರಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.