ಭವಿಷ್ಯದ ನೀರಿಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು

7

ಭವಿಷ್ಯದ ನೀರಿಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು

Published:
Updated:
ಭವಿಷ್ಯದ ನೀರಿಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು

-ಡಾ. ಮನೋಜ ಗೋಡಬೋಲೆ, ಉಜಿರೆಕರ್ನಾಟಕದ ಮುಂದಿನ ನಲವತ್ತು ವರ್ಷಗಳ ಮುನ್ನೋಟಕ್ಕಾಗಿ ನಾವು ಸಾಕ್ಷಿಯಾಗಬೇಕಾದರೆ ನಮ್ಮ ಮೊದಲ ಆದ್ಯತೆ ಪರಿಸರ ಸಂರಕ್ಷಣೆಯಾಗಲೇಬೇಕು. ಇಲ್ಲದೇ ಹೋದರೆ ಮುಂಬರುವ ನಾಳೆಯು ನಮ್ಮ ಮುಂದಿನ ಪೀಳಿಗೆಗೆ ತಾಳಿಕೊಳ್ಳಲಾಗದಂತಹ ಹೊಡೆತವನ್ನು ಕೊಡಲು ಎಲ್ಲಾ ನಿಟ್ಟಿನಿಂದಲೂ ಸಜ್ಜಾಗಿದೆ. ನಾವು ಕಾಯಿದೆಯನ್ನು ಪಾಸು ಮಾಡಲು, ಅಂಗೀಕರಿಸಲು ಸಿದ್ಧ ಹಸ್ತರು. ಆದರೆ ಕಾಯಿದೆಗಳ ಅನುಷ್ಠಾನದಲ್ಲಿಯೇ ಕೊರತೆಯಿರುವುದು.

ಉತ್ತರ ಕನ್ನಡ ಜಿಲ್ಲೆಯ ಒಂದು ಸಣ್ಣ ತಾಲೂಕಾದ ಸಿದ್ದಾಪುರದ ಒಂದು ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ನರೇಗಾ ಯೋಜನೆಯಲ್ಲಿನದ್ದೋ, ಕೂಲಿಗಾಗಿ ಕಾಳು ಯೋಜನೆಯದ್ದೋ ಅಂತೂ ಒಂದಷ್ಟು ಭಾಗವು ಈ ತಾಲೂಕಿಗೂ ಬಿಡುಗಡೆಯಾಗಿತ್ತು. ಅದರಡಿಯಲ್ಲಿ ಹಲವಾರು ಪ್ರದೇಶಗಳಲ್ಲಿ ಚರಂಡಿ ನಿರ್ಮಾಣ, ರಸ್ತೆ ಮುಂತಾದ ಕೆಲಸಗಳ ಆರಂಭವಾಯಿತು. ಹೊನ್ನೇಗುಂಡಿಯೂ ಅಂತಹ ಯೋಜನೆಗಳ ವ್ಯಾಪ್ತಿಯಲ್ಲಿ ಸೇರ್ಪಡೆಯಾದ ಸಾಲುಮನೆಗಳಿರುವ ಒಂದು ಕೇರಿ.ಮೊದಲ ಕಂತಿನ ಹಣದಲ್ಲಿ ಗುಡ್ಡದ ಮೇಲಿನಿಂದ ಇಳಿಜಾರಿನ ತನಕ ಕಾಂಕ್ರೀಟಿನ ಚರಂಡಿಯ ನಿರ್ಮಾಣವಾಯಿತು. ಆ ಸಮಯಕ್ಕೆ ಮಳೆಗಾಲ ಶುರುವಾಯಿತೋ? ಇಲ್ಲಾ ಯೋಜನೆಯ ಹಣ ಖಾಲಿಯಾಯಿತೋ? ಗೊತ್ತಿಲ್ಲ, ಕಾಮಗಾರಿ ಅಲ್ಲಿಗೇ ನಿಂತಿತು. ಆ ಇಳಿಜಾರಿನಲ್ಲಿ ಒಂದು ದೊಡ್ಡ ಕೆರೆಯಿದೆ. ಕಾಮಗಾರಿಯಿಂದ ಅರ್ಧ ನಿರ್ಮಾಣವಾದ ಚರಂಡಿಗೆ ಹಲವು ಸಣ್ಣಪುಟ್ಟ ಹೋಟೇಲು, ಮನೆಗಳ ಶೌಚದ ನೀರೆಲ್ಲಾ ಸೇರಿಕೊಂಡು ಇಳಿಜಾರಿನಲ್ಲಿ ಸಂಗ್ರಹವಾಗತೊಡಗಿತು.ಅರ್ಧಂಬರ್ಧ ಗಾರೆಯನ್ನು ಕಂಡ ಚರಂಡಿಯ ಮುಂದಿನ ಭಾಗವೆಲ್ಲಾ ಮೊದಲಿನದ್ದೇ ಕಲ್ಲು-ಮಣ್ಣುಗಳ ರಚನೆ. ಹಾಗಾಗಿ ಕೊಳಚೆ ನೀರು ಆ ಮಣ್ಣಿನ ಅಗಳದಲ್ಲಿ ಇಂಗಿ ಸನಿಹದ ಬಾವಿಗಳಲ್ಲಿ ಅಂತರ್ಜಲವಾಗಿ ಜಮೆಯಾಗತೊಡಗಿತು.ಸರಿ, ಯಥಾ ಪ್ರಕಾರ ಗ್ರಾಮಸ್ಥರ ಪ್ರತಿಭಟನೆ ನಡೆಯಿತು. ಪುಂಖಾನುಪುಂಖ ಮನವಿಗಳನ್ನು ಸಲ್ಲಿಸಿದ ಮೇಲೆ ವರ್ಷದ ಬಳಿಕ ಮತ್ತೆ ಸ್ವಲ್ಪ ಕಾಮಗಾರಿ ಶುರುವಾಗಿ ಐವತ್ತಡಿ ಮುಂದಡಿಯಿಟ್ಟು ಮತ್ತೆ ನಿಂತು ವರ್ಷಗಳೆರಡು ಮೀರಿವೆ. ಆದರೂ ಸರ್ಕಾರದ ಹಣದ ಕೊರತೆಯ ನೆಪದಿಂದಾಗಿ ಕಾಮಗಾರಿ ಕೊನೆಗೊಳ್ಳದೇ ಅತೀ ಶುದ್ಧವಾದ, ರುಚಿಕರವಾಗಿದ್ದ ಬಾವಿಗಳಲ್ಲಿನ ಅಂತರ್ಜಲವು ಕೊಳಚೆ ನೀರಿನ ಸಂಗ್ರಹಾಲಯವಾಗಿದೆ. ಇಂತಹ ಅವೈಜ್ಞಾನಿಕ ಯೋಜನೆಗಳು ರಾಜ್ಯದಾದ್ಯಂತ ಪ್ರತೀ ತಾಲೂಕಿನಲ್ಲಿಯೂ ಇದ್ದದ್ದೇ.ಬೆಂಗಳೂರೊಂದರಲ್ಲೇ ಸಾವಿರಾರು ಟನ್‌ಗಳಷ್ಟು ನಿತ್ಯ ಉತ್ಪತ್ತಿಯಾಗುವ ಕದ ವಿಲೇವಾರಿಯೆಂಬುದು ಕೋಟ್ಯಂತರ ಮೌಲ್ಯದ ಉದ್ದಿಮೆಯಾಗಿದೆ. ಟೆಂಡರನ್ನು ಗಿಟ್ಟಿಸಲು ಕತ್ತಿ ಮಸೆಯುವುದೂ ಮಾಮೂಲಾಗಿದೆ. ಲಂಚವಂತೂ ಬಿಡಿ, ಇದ್ದದ್ದೇ. ಇದೇ ವಿಲೇವಾರಿಯನ್ನೇ ಅತ್ಯಂತ ವೈಜ್ಞಾನಿಕವಾಗಿ ನಿರ್ವಹಿಸುವುದರ ಮೂಲಕ ಲಾಭದಾಯಕವಾದ ಹಲವಾರು ಉದ್ಯಮಗಳನ್ನು ಸ್ಥಾಪಿಸಿ ಪರಿಸರಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಬಹುದು.ಇದೇ ಕಸದಿಂದ ವಿದ್ಯುತ್ತನ್ನು ಉತ್ಪಾದಿಸಬಹುದು, ಗುಣಮಟ್ಟದ ರಸ್ತೆಯನ್ನು ನಿರ್ಮಿಸಬಹುದು, ಸಾವಯವ ಗೊಬ್ಬರವನ್ನು ತಯಾರಿಸಿ ಮಾರಬಹುದು, ಎರೆಹುಳಗಳನ್ನು ಸಾಕಬಹುದು. ನಗರದಾದ್ಯಂತ ಇಂತಹ ಗೊಬ್ಬರಗಳನ್ನು ಬಳಸಿಯೇ ವ್ಯವಸ್ಥಿತವಾಗಿ ಉದ್ಯಾನಗಳನ್ನು ಕಡಿಮೆ ವೆಚ್ಚದಲ್ಲಿ ಬೆಳೆಸಬಹುದು. ಮಾತು ಮಾತಿಗೆ ಇಸ್ರೇಲನ್ನು ಉದಾಹರಿಸುವ ನಾವು ಅಲ್ಲಿ ಒಂದೇ ಒಂದು ಮರವನ್ನೂ ಕಡಿಯದೇ ಯೋಜನೆಗಳನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆನ್ನುವುದನ್ನು ಕಲಿಯುವುದು ಬೇಡವೇ?ಮುಂದಿನ ದಿನಗಳಿಗಾಗಿ ನಾವು ಹೊಸದಾಗಿ ಏನನ್ನೂ ಆಲೋಚನೆ ಮಾಡುವುದೇ ಬೇಡ. ಕೇವಲ ಪರಿಸರಕ್ಕೆ ಪೂರಕವಾಗಿ ಜಾರಿಯಲ್ಲಿರುವ ಕಾಯಿದೆಗಳ ದಕ್ಷ ಅನುಷ್ಠಾನಕ್ಕೆ ಕಟಿಬದ್ಧವಾಗಿದ್ದರೆ ಸಾಕು ನಮ್ಮ ಕರ್ನಾಟಕವು ಹೊನ್ನ ನಾಡಾಗುತ್ತದೆ.ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ರಾಜ ಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನೇ ಗಮನಿಸಿದರೆ ಪ್ರಭಾವಿಗಳ ಹಾಗೂ ಜನಪ್ರಿಯ ನಾಯಕರ ಕೂದಲನ್ನೂ ಕೊಂಕಿಸಲು ನಮ್ಮ ಅಧಿಕಾರಿಗಳು ಹೋಗದೇ, ಇತರರ ಜಾಗಗಳನ್ನು ತರಿದು ಹಾಕಿದರಲ್ಲ? ಅದೇ ಕಾನೂನು ಪ್ರಭಾವಿಗಳಿಗೂ ಅನ್ವಯವಾಗಿದ್ದರೆ ಸಾಮಾಜಿಕ ನ್ಯಾಯಕ್ಕೊಂದು ಒಳ್ಳೆಯ ಉದಾಹರಣೆಯಾಗುತ್ತಿತ್ತಲ್ಲವೇ? ನ್ಯಾಯವು ಉಳ್ಳವರಿಗೊಂದು, ಇಲ್ಲದವರಿಗೊಂದಾದರೆ ಕರ್ನಾಟಕವು ಸುಡುಗಾಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಜಗಳೂರೆಂಬ ಬೆಂಗಾಡಿನಲ್ಲಿ ಕಳೆದ ಬಿರು ಬೇಸಿಗೆಯಲ್ಲಿ ಸಿಕ್ಕಿದ ಅಮೂಲ್ಯ ಜಲಸಿರಿಯನ್ನು ನಮ್ಮ ಆಡಳಿತಶಾಹಿ ಹೇಗೆ ಬಳಸಿಕೊಂಡಿತೆಂಬುದನ್ನು ಕಂಡಿದ್ದೇವೆ. ಆ ನೀರು ಉದ್ಭವಿಸಿದ ಕಲ್ಲು ಗಣಿಯೇ ಅಕ್ರಮವೆಂದು ವರದಿಯಾಗಿತ್ತು. ಹೋಗಲಿ, ಆದರೆ ಆ ಅಕ್ರಮದ ನಡುವೆ ಚಿಮ್ಮಿದ ಸಿಹಿ ನೀರಿನ ಜಲಧಾರೆಯು ನಿಜವಾಗಿಯೂ ಓಯಸಿಸ್‌ನಂತಾಗಿತ್ತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳು ಭೀಕರ ಬರದಿಂದಾಗಿ ತತ್ತರಿಸಿ, ಹನಿ ನೀರಿಗಾಗಿ ಹತ್ತಾರು ಕಿಲೋಮೀಟರುಗಳನ್ನು ನಿತ್ಯ ಸವೆಸುತ್ತಿರುವಾಗ ಭೂಮಾತೆಯೇ ಕರುಣೆಯಿಂದ ‘ಬನ್ನಿ ಮಕ್ಕಳೇ, ತೆಗೆದುಕೊಳ್ಳಿ ನನ್ನಲ್ಲಿನ ಜೀವಜಲ’ವೆಂದು ಬೊಬ್ಬಿರಿದರೂ ನಮ್ಮವರಿಗೆ ಆ ಕೂಗು ಕೇಳಲಿಲ್ಲವೆಂಬುದು ದುರಂತವೇ ಸರಿ.ನಾಗರಿಕತೆಗೆ ಈಗಿನ ಮೂಲಭೂತ ಅಗತ್ಯವಾದ ನೀರು ಮತ್ತು ವಿದ್ಯುತ್ತಿನ ಸ್ವಾವಲಂಬನೆಗಾಗಿ ಒಂದು ನೋಟವನ್ನು ಬೀರುವುದಾದರೆ ಸರ್ಕಾರೀ ಆಫೀಸು ಕಛೇರಿಗಳಲ್ಲಿನ ತಾರಸಿ ನೀರನ್ನು ಇಂಗಿಸುವುದರ ಮೂಲಕ ನಾಗರಿಕ ಸಮುದಾಯಕ್ಕೆ ಒಂದು ಉತ್ತಮವಾದ ಮಾದರಿಯನ್ನು ಅಧಿಕಾರಶಾಹಿಯು ಕೊಡಮಾಡಬಲ್ಲದು. ಇದರಿಂದಾಗಿ ಜನಸಾಮಾನ್ಯರೂ ಪ್ರೇರೇಪಣೆಗೊಂಡು ಎಲ್ಲಾ ಗ್ರಾಮ, ಪಟ್ಟಣಗಳ ಜನರೂ ಕೈ ಜೋಡಿಸಿದರೆ ಮುಂದೆ ಯಾವುದೇ ಆಣೆಕಟ್ಟೆಗಳ ಅತಿಯಾದ ಅವಲಂಬನೆಯಿಲ್ಲದೇ ನೀರಿನ ವಿಷಯದಲ್ಲಿ ಸ್ವಾವಲಂಬಿಗಳಾಗಬಹುದು.ಇನ್ನು ನಾಡಿನಾದ್ಯಂತ ಪಸರಿಸಿರುವ ಅಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಮಾಲ್‌ಗಳು, ಸಮೂಹ ಮಂದಿರಗಳೂ ಈ ನಿಟ್ಟಿನಲ್ಲಿ ಅತೀ ಅಮೂಲ್ಯವಾದ ಕೊಡುಗೆಯನ್ನು ನೀಡಬಲ್ಲವು. ಇನ್ನು ಇವೇ ಕಟ್ಟಡಗಳಿಗೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸುವುದರ ಮೂಲಕ ಕ್ರಮೇಣ ವಿದ್ಯುತ್ತನ್ನೂ ಸುಲಭವಾಗಿ ಪಡೆಯಬಹುದು.ಹೊಸದಾಗಿ ಆಣೆಕಟ್ಟನ್ನು ನೀರಿಗಾಗಿ, ವಿದ್ಯುತ್ತಿಗಾಗಿ ಇನ್ನು ಮೇಲೆ ನಿರ್ಮಿಸುವುದು ಒಳ್ಳೆಯದಲ್ಲ. ಮತ್ತದೇ ರಿಯಲ್ ಎಸ್ಟೇಟಿನ ಮಹಿಮೆಯಿಂದ ಅತಿಯಾಗುತ್ತಿರುವ ಮಣ್ಣಿನ ಸವಕಳಿಯಿಂದಾಗಿ ನಿರ್ಮಿಸಿದ ಆಣೆಕಟ್ಟುಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀರನ್ನು ಹಿಡಿದಿಡುತ್ತಿಲ್ಲ.ಶೇಖರಣೆಯಾಗುವ ಹೂಳನ್ನು ಕಾಲಕಾಲಕ್ಕೆ ತೆಗೆದು ವಿಲೇವಾರಿ ಮಾಡಲು ಸೂಕ್ತವಾದ ತಂತ್ರ ನಮ್ಮಲ್ಲಿಲ್ಲ. ಇದ್ದರೂ ಅದರ ಬಜೆಟ್ ನಮ್ಮ ಸರ್ಕಾರದ ಮಿತಿಮೀರಿದ್ದು ಮತ್ತು ಪರಿಣಾಮಕಾರಿಯಲ್ಲ. ಅದರ ಬದಲು ಇರುವ ಕೆರೆ-ಕುಂಟೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿ, ದೃಢವಾದ ಬದುಗಳನ್ನು ನಿರ್ಮಿಸಿ, ಕಾಲಕಾಲಕ್ಕೆ ಹೂಳನ್ನು ತೆಗೆಸುವ ಮೂಲಕ ನಿರ್ವಹಿಸಿದರೆ ನಂದನವನವಾಗುತ್ತದೆ ನಮ್ಮ ನಾಡು. ಹಾಗೆ ತೆಗೆದ ಹೂಳು ಹೊಲ-ಗದ್ದೆಗಳನ್ನು, ತೋಟಗಳನ್ನು ರಾಸಾಯನಿಕ ಗೊಬ್ಬರಗಳ ಹಂಗಿಲ್ಲದೇ ಸುಲಭವಾಗಿ ಪುಷ್ಟಿಗೊಳಿಸುತ್ತದೆ. ಹೀಗೆ ಒಂದೇ ಏಟಿಗೆ ಹಲವಾರು ಹಕ್ಕಿಗಳನ್ನು ನಾವು ಹೊಡೆಯಬಹುದು.ಒಂದು ಕಡೆ ಸಮುದ್ರ ತೀರ, ಬದಿಗೇ ನಿತ್ಯ ಹರಿದ್ವರ್ಣ ಕಾಡು, ನಂತರ ವಿಶಾಲವಾದ ಬಯಲುಗಳನ್ನು ಹೊಂದಿ ಒಂದೊಮ್ಮೆ ಫಲವತ್ತಾಗಿದ್ದ ನಮ್ಮ ಕರುನಾಡು ಈಗ ರಾಜಸ್ಥಾನದ ನಂತರ ಭಾರತದಲ್ಲಿನ ಅತೀ ವಿಸ್ತಾರದ ಬರವನ್ನು ಹೊದ್ದ ಭೂಮಿಯಾಗಿ ಬೆಂಗಾಡಾಗಿದೆ. ಬರಪೀಡಿತ ತಾಲೂಕುಗಳ ಪಟ್ಟಿಯು ದಿನೇ ದಿನೇ ಬೆಳೆಯುತ್ತಲೇ ಇದೆ.ರಾಜಸ್ಥಾನೀಯರಾದರೂ ನೀರಿನ ಅಮೂಲ್ಯ ಬಳಕೆಯನ್ನು ಮಾಡುವುದರಲ್ಲಿ ಪರಿಣಿತರಾಗಿರಬಹುದು. ಆದರೆ ಮೊದಲಿನಿಂದಲೂ ಮಿತವ್ಯಯದ ಪರಿವೆಯೇ ಇಲ್ಲದ ನಾವೆಚ್ಚೆತ್ತುಕೊಳ್ಳುವುದರಲ್ಲಿಯೇ ವಿನಾಶದಂಚನ್ನು ತಲುಪಬಾರದಲ್ಲವೇ? ಕಾವೇರಿಯ ಉಗಮದ ನಾಡಾದ ಕೊಡಗಿನಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿರುವಾಗ ದಕ್ಷತೆಯಿಂದ ನೀರಿನ ಕಾಳಜಿ ಮಾಡದೇ ಹೋದರೆ ನಮಗೆ ಯಾವುದೇ ಭವಿಷ್ಯವಿಲ್ಲ.ಕನ್ನಡದ  ಕೆಲಸ: ಅನುಷ್ಠಾನ ಮುಖ್ಯ

‘ಕನ್ನಡದ ಕೆಲಸ: ಅನುಷ್ಠಾನ ಮುಖ್ಯ (ಪ್ರ.ವಾ. 1–11–2016) ಚರ್ಚೆ, ವಿಮರ್ಶೆಯಲ್ಲಿ ಸಿ.ಎನ್‌. ರಾಮಚಂದ್ರನ್‌ ಅವರು ಕನ್ನಡದ ಆತಂಕ ಆಳುವ ಸರ್ಕಾರದಿಂದಲೇ ಆಗುತ್ತಿರುವುದನ್ನು ತಿಳಿಸಿದ್ದಾರೆ. ‘ಆರ್‌.ಟಿ.ಇ. ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಸರ್ಕಾರವೇ ಮಕ್ಕಳನ್ನು ಸೇರಿಸಿ, ಅವರ ಖರ್ಚನ್ನು ತಾನೇ ಬರಿಸುವ ನೀತಿಯನ್ನು ಕೈಬಿಡುವುದು ಈ ಅಭಿಯಾನದ ಒಂದು ಮುಖ್ಯ ಕಾರ್ಯಸೂಚಿಯಾಗಬೇಕು... ಪ್ರತಿವರ್ಷವೂ ಈ ನೀತಿಗಾಗಿ ಸರ್ಕಾರವೂ ಆ ಖಾಸಗಿ ಶಾಲೆಗಳಿಗೆ ಕೊಡುವ ಹಣ ರೂ.316.67 ಕೋಟಿ. ಇದೇ ಹಣವನ್ನು ಆ ವಿದ್ಯಾರ್ಥಿಗಳು ಇರುವ ಗ್ರಾಮಗಳಲ್ಲಿ ಶಾಲೆಗಳನ್ನು ತೆರೆಯಲು ಅಥವಾ ಇರುವ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉಪಯೋಗಿಸಬಹುದು.’ ಈ ಮಾತು ಸತ್ಯ. ಸರ್ಕಾರದ ತಪ್ಪು ಕಾರ್ಯನೀತಿ. ತುಸು ಅನುಕೂಲವಂತರಾದ ಜನಗಳು ಇಂದು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿಲ್ಲ. ಆರ್‌.ಟಿ.ಇ. ಸುವರ್ಣ ಜಿಂಕೆಯ ಬೇಟೆಯಲ್ಲಿ ತೊಡಗಿದ್ದಾರೆ.

ಸಂವಿಧಾನದ 11ನೇ ಭಾಗದ ಮೊದಲ ಅಧ್ಯಾಯ ಮತ್ತು 7ನೇ ಅನುಸೂಚಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸನೀಯ ಅಧಿಕಾರದ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ ಶಿಕ್ಷಣ ರಾಜ್ಯಪಟ್ಟಿಯಲ್ಲಿದೆ. ಇಲ್ಲಿ ಕನ್ನಡ ಶಾಲೆ ಮತ್ತು ಭಾಷೆ ಪೋಷಿಸಿ ಬೆಳೆಸಲು ಯಾವುದೇ ಸಂವಿಧಾನ ಯಾರ ಕೈಯನ್ನು ಕಟ್ಟಿ ಹಾಕಿಲ್ಲ.ಆರ್‌.ಟಿ.ಇ. ಜಾರಿಯಲ್ಲಿ ಆಳುವ ಕೆಲವರಿಗೆ ಇಂಗ್ಲಿಷ್‌ ಮೋಹ ಮತ್ತು ಕನ್ನಡವನ್ನು ಉಸಿರುಗಟ್ಟಿಸುವ ಹುನ್ನಾರವಿದೆಯೇ ಎಂಬ ಸಂಶಯಬರುತ್ತದೆ. ಸಂವಿಧಾನದತ್ತ ಅಧಿಕಾರದಲ್ಲಿ ಆರ್‌.ಟಿ.ಇ. ರದ್ದು ಮಾಡಿ ಕನ್ನಡ ಶಾಲೆ, ಕನ್ನಡ ಭಾಷೆ ಉಳಿಸಿ ಎಂದು ಪ್ರಾರ್ಥನೆ.ಸರ್ಕಾರಿ ಕನ್ನಡ ಪ್ರೈಮರಿ ಶಾಲೆಯಲ್ಲಿ ‘ನಲಿ–ಕಲಿ’ ಇಂಗ್ಲಿಷ್‌ ಭಾಷಾ ಶಿಕ್ಷಣ ಕಲಿಕಾ ಪದ್ಧತಿಯ ನಕಲು ಆಗಿ ಜಾರಿಗೆ ಬಂದಿದೆ. ‘ನಲಿ–ಕಲಿ’ಯಲ್ಲಿ ಓದಿದ ಮಕ್ಕಳು ಎಸ್‌.ಎಸ್‌.ಎಲ್‌.ಸಿ.ಗೆ ಬಂದರೂ ಕನ್ನಡವನ್ನು ಕುರುಡು ಪಾಠವಾಗಿ ಓದುತ್ತಾರೆ. ಕನ್ನಡ ಬರೆಯಲು ಬರುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ‘ನಲಿ–ಕಲಿ’ ಸೃಷ್ಟಿಸಿದವರು ಮೊಂಡವಾದದಲ್ಲಿ ಅದನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅದರಿಂದ ಮಕ್ಕಳು ಸರಿಯಾಗಿ ಕನ್ನಡ ಕಲಿಯುತ್ತಿಲ್ಲ.ಬ್ರಿಟೀಷರ ಕನ್ನಡ ಶಿಕ್ಷಣ ಪದ್ಧತಿಯ ರೀತಿ ಕಲಿತ ನಾವೆಲ್ಲ ಏಳನೇ ತರಗತಿಗೆಲ್ಲ ಮಹಾ ಕಾವ್ಯಗಳನ್ನು ಓದುತ್ತಿದ್ದೆವು. ಕಾರಣ ಆಗ ಶಾಲೆಯಲ್ಲಿ ಮೊದಲು ಸ್ವರಗಳನ್ನು; ಕಂಠ, ತಾಲವ್ಯ, ಮೂರ್ಧಾನ್ಯ, ದಂತ್ಯ, ಓಷ್ಠದಿಂದ ಹುಟ್ಟುವ ಕ,ಚ,ಟ,ತ,ಪ ವ್ಯಂಜನಗಳನ್ನು; ಸಂಯುಕ್ತಾಕ್ಷರಳನ್ನು ಹೇಳಿಕೊಡುತ್ತಿದ್ದರು. ಅನಂತರ ಕಡ್ಡಾಯವಾಗಿ ಕಾಗುಣಿತ ಕಲಿಸುತ್ತಿದ್ದರು. ಅದು ಕನ್ನಡ ಭಾಷಾ ರಚನೆ ರೂಪುಗೊಂಡಿರುವುದಕ್ಕೆ ಇರುವ ವೈಜ್ಞಾನಿಕ ಕಲಿಕಾ ರೀತಿ.ಈಗ ‘ರಗಸದಅ’, ‘ಜವಮಪನ’ ಗಳನ್ನು ಕಲಿಸಿ, ಕನ್ನಡ ಮಕ್ಕಳ ಪಂಚೇಂದ್ರಿಯಗಳ ಅರಿವಿನ ಭಾಗವಾಗಿ ಅವರ ಮನಸ್ಸನ್ನು ಪ್ರವೇಶಿಸುತ್ತಿಲ್ಲ. ಆ ಮಕ್ಕಳ ಮನಸ್ಸಿನ ಹೊರವಲಯದಲ್ಲಿ ಕನ್ನಡ ಪದಗಳ ಆಟ ಗಿರಕಿ ಹೊಡೆಯುತ್ತಿದೆ ಅಷ್ಟೆ.ಇದನ್ನು ಯಾರಿಗೆ ಹೇಗೆ ಹೇಳಿ ಮನವರಿಕೆ ಮಾಡಿ ಕೊಡಬೇಕೆಂದು ಗೊತ್ತಾಗುತ್ತಿಲ್ಲ. ಶಿಕ್ಷಣ ಪದ್ಧತಿಯ ಪಾಲಿಸಿ–ಕಾರ್ಯ ನೀತಿ ರೂಪಕರೆ ಪ್ರತಿಷ್ಠೆ, ಬಿಡಿ, ಸತ್ಯದ ಕಡೆ ಮುಖ ಮಾಡಿ. ಮೊದಲು ವರ್ಣಮಾಲೆ, ಕಾಗುಣಿತ ಕಲಿಸಿ ಕನ್ನಡ ಉಳಿಸಿ ಎಂದು ಪ್ರಾರ್ಥಿಸಬೇಕಾಗುತ್ತದೆ. ಕನ್ನಡಕ್ಕೆ ಕಂಟಕ ಹೊರಗಿನವರಿಂದ ಸೃಷ್ಟಿ ಆಗಿಲ್ಲ. ಅದು ನಮ್ಮನ್ನು ಆಳುವ ನಮ್ಮವರಿಂದಲೇ ಆಗಿದೆ.

–ಡಾ. ಜಿ. ಕೃಷ್ಣಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry