ಸೋಮವಾರ, ಮಾರ್ಚ್ 27, 2023
24 °C
ಗುಜರಾತ್: ಶನಿವಾರವೂ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ

ಉಪ್ಪಿನ ಕೊರತೆ ಇಲ್ಲ: ಕೇಂದ್ರ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ಉಪ್ಪಿನ ಕೊರತೆ ಇಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ : ದೇಶದಲ್ಲಿ ಉಪ್ಪಿನ ಕೊರತೆ ಉಂಟಾಗಿದೆ ಎಂಬುದು ಸುಳ್ಳು. ದೇಶದ ಎಲ್ಲೆಡೆ ಉಪ್ಪಿನ ಸಾಕಷ್ಟು ಸಂಗ್ರಹ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.‘ದೇಶದ ಎಲ್ಲೆಡೆ ವಿವಿಧ ಬ್ರ್ಯಾಂಡ್‌ಗಳ ಒಂದು ಕೆ.ಜಿ. ಉಪ್ಪಿಗೆ ₹8ರಿಂದ ₹18ರವರೆಗೆ ಬೆಲೆ ಇದೆ. ಇದೇ ಬೆಲೆಯಲ್ಲಿ ಉಪ್ಪನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸ್ಪಷ್ಟನೆ ನೀಡಿದೆ.ಘಟನೆ ವಿವರ: ದೇಶದಲ್ಲಿ ಉಪ್ಪಿನ ಕೊರತೆಯಾಗಿದೆ ಎಂಬ ವದಂತಿಯನ್ನು ನಂಬಿ ಜನರು ಶುಕ್ರವಾರ ರಾತ್ರಿ ಅಂಗಡಿಗಳಿಗೆ ಮುಗಿಬಿದ್ದ ಘಟನೆ ದೇಶದ ಹಲವೆಡೆ ನಡೆದಿತ್ತು.ದೆಹಲಿ, ಉತ್ತರಪ್ರದೇಶ, ಗುಜರಾತ್, ಪಂಜಾಬ್, ತಮಿಳುನಾಡಿನ ಹಲವೆಡೆ ಮತ್ತು ಹೈದರಾಬಾದ್ ಹಾಗೂ ಮುಂಬೈನ ಕೆಲವೆಡೆಯಿಂದ ಘಟನೆ ವರದಿಯಾಗಿತ್ತು.ವದಂತಿ ನಂಬಿದ ಕೆಲವರು ಉಪ್ಪನ್ನು ಖರೀದಿಸಲು ಅಂಗಡಿಗಳಿಗೆ ಮುಗಿಬಿದ್ದಿದ್ದರು. ಹಲವು ಜನ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಖರೀದಿಸಿದ್ದರಿಂದ ಕೆಲವು ಅಂಗಡಿಗಳಲ್ಲಿ ಉಪ್ಪಿನ ಸಂಗ್ರಹ ಖಾಲಿಯಾಗಿದೆ. ಇದು ವದಂತಿ ಮತ್ತಷ್ಟು ಹರಡಲು ಕಾರಣವಾಗಿದೆ ಎಂದು ಉತ್ತರ ಪ್ರದೇಶದ ಮೊರದಾಬಾದ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.ಮೊರದಾಬಾದ್‌ನಲ್ಲೇ ವದಂತಿ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇದು ದೇಶದ ವಿವಿಧೆಡೆಗೆ ಹಬ್ಬಿದೆ. ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಹೆಚ್ಚಿನ ಬೆಲೆಗೆ ಉಪ್ಪನ್ನು ಮಾರಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ದೆಹಲಿಯಲ್ಲೂ ಉಪ್ಪನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.‘ನಾನು, ಮಯೂರ್ ವಿಹಾರ್‌ನಲ್ಲಿರುವ ಮಾಲ್‌ ಒಂದಕ್ಕೆ ಹೋಗಿದ್ದೆ. ಅಲ್ಲಿನ ಯಾವ ಮಳಿಗೆಗಳಲ್ಲೂ ಉಪ್ಪು ಇರಲಿಲ್ಲ. ಆನಂತರ ತ್ರಿಲೋಕಪುರಿಯ ಅಂಗಡಿಯೊಂದರಲ್ಲಿ ಉಪ್ಪು ಇತ್ತು. ಆದರೆ ಕೆ.ಜಿ. ಉಪ್ಪಿಗೆ ₹ 55 ತೆರಬೇಕಾಯಿತು’  ಅಭಿಷೇಕ್‌ ರಾಯ್‌ ಎಂಬುವವರು ಮಾಹಿತಿ ನೀಡಿದ್ದಾರೆ.‘ಅಹಮದಾಬಾದ್‌ನ ಶಾಪುರ್, ವದಜ್‌, ಅಮರೈವಾಡಿ ಪ್ರದೇಶಗಳಲ್ಲಿ ಶನಿವಾರವೂ ಜನರು ದಿನಸಿ ಅಂಗಡಿಗಳ ಎದುರು ಸಾಲುಗಟ್ಟಿ ನಿಂತಿದ್ದಾರೆ. ಉಪ್ಪಿನ ಕೊರತೆ ಆರಂಭವಾಗಿದೆ ಎಂಬುದು ಕೇವಲ ವದಂತಿ ಎಂದು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದು ಗುಜರಾತ್‌ನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಯೇಶ್ ರಾಧಾದಿಯಾ  ತಿಳಿಸಿದ್ದಾರೆ.ಪೊಲೀಸರ ಮೇಲೆ ಕಲ್ಲು ತೂರಾಟ

ಉಪ್ಪು ಖರೀದಿಸಲು ಮುಗಿಬಿದ್ದಿದ್ದ ಜನರನ್ನು ಮುಂದಾದ ಪೊಲೀಸರ ಮೇಲೆ, ಜನರು ಕಲ್ಲು ತೂರಿದ ಘಟನೆ ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಪೊಲೀಸರ ಎರಡು ಬಸ್‌ಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಉಪ್ಪು ಖರೀದಿ ವೇಳೆ ಗ್ರಾಹಕರು ಅಂಗಡಿಯ ಮಾಲೀಕನಿಗೆ ಹೊಡೆದಿದ್ದಾರೆ ಎಂಬ ಮಾಹಿತಿ ಬಂದ ಕಾರಣ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಆದರೆ ಅವರು ಸಮೀಪಿಸುತ್ತಿದ್ದಂತೆಯೇ ಜನರು ಅವರ ಮೇಲೆ ಕಲ್ಲು ತೂರಿದ್ದಾರೆ. ಮತ್ತಷ್ಟು ಸಿಬ್ಬಂದಿ ಸ್ಥಳಕ್ಕೆ ತೆರಳಿದ ನಂತರ  ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಚಿಲ್ಲರೆ ಕೊರತೆ ತಂದ ಪಜೀತಿ

ಮೊರದಾಬಾದ್‌ನಲ್ಲಿ, ಒಂದು ಕೆ.ಜಿ ಉಪ್ಪು ಖರೀದಿಸಿದ ಗ್ರಾಹಕರೊಬ್ಬರು ಅಂಗಡಿಯವರಿಗೆ  ₹ 500 ಮುಖಬೆಲೆಯ ನೋಟನ್ನು ನೀಡಿದ್ದಾರೆ. ನೋಟಿನ ಬದಲಿಗೆ ಚಿಲ್ಲರೆ ನೀಡುವುದಿಲ್ಲ ಎಂದು ಅಂಗಡಿಯವರು ಹೇಳಿದ್ದಾರೆ. ಇದೇ ಘಟನೆ ಉಪ್ಪಿನ ಕೊರತೆ ವದಂತಿಗೆ ಕಾರಣವಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.ಅಂಗಡಿಯಿಂದ ಹೊರಬರುತ್ತ ಆ ವ್ಯಕ್ತಿ, ‘ಕೆ.ಜಿ. ಉಪ್ಪಿಗೆ ₹ 500 ಕೊಡಬೇಕಂತೆ. ಕಾಳಸಂತೆ ದರದಲ್ಲಿ ಉಪ್ಪನ್ನು ಮಾರುತ್ತಿದ್ದಾನೆ’ ಎಂದು ಕೂಗಿಕೊಂಡು ಹೋಗಿದ್ದಾನೆ.ಇದನ್ನು ಕೇಳಿಸಿಕೊಂಡ ಕೆಲವರು ಉಪ್ಪು ಖರೀದಿಸಲು ಹೋಗಿದ್ದಾರೆ. ಆಗ ಇಡೀ ವೃತ್ತಾಂತ ಪುನರಾವರ್ತನೆಯಾಗಿದೆ. ಇದರಿಂದಲೇ ಉಪ್ಪು ಕೊರತೆಯಾಗಿದೆ, ಹೆಚ್ಚಿನ ಬೆಲೆಗೆ ಉಪ್ಪನ್ನು ಮಾರಲಾಗುತ್ತಿದೆ ಎಂಬ ವದಂತಿ ಹರಡಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.