ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನಲ್ಲಿ ಓಡುವ ಹೆಬ್ಬಯಕೆ

Last Updated 13 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಮಿಂಚಿನ ವೇಗದ ಮೂಲಕ ಎದುರಾಳಿಗಳನ್ನು ಹಿಮ್ಮೆಟ್ಟಿಸಬಲ್ಲ ಸಾಮರ್ಥ್ಯ ಹೊಂದಿರುವ ಎಚ್‌.ಎಂ. ಜ್ಯೋತಿ ಭಾರತದ ಅಥ್ಲೆಟಿಕ್ಸ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
 
100, 200, 400 ಮೀಟರ್ಸ್‌ ಓಟ ಮತ್ತು 4X100 ಮೀಟರ್ಸ್‌ ರಿಲೇ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜ್ಯೋತಿ ಅವರ ಸಾಧನೆ ಅನನ್ಯ. 
ಕಾಮನ್‌ವೆಲ್ತ್‌ ಕ್ರೀಡಾಕೂಟ, ಏಷ್ಯನ್‌ ಚಾಂಪಿಯನ್‌ಷಿಪ್‌, ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಜ್ಯೋತಿ ಏಷ್ಯನ್‌ ಕ್ರೀಡಾಕೂಟದಲ್ಲಿ ಫೈನಲ್‌ ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಪದಕಗಳ ಬೇಟೆಯಾಡಿರುವ ಅವರು 100 ಮತ್ತು 200 ಮೀಟರ್ಸ್‌ ಓಟಗಳಲ್ಲಿ ಕ್ರಮವಾಗಿ 11.30  ಹಾಗೂ 23.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 
 
4X100 ಮೀಟರ್ಸ್‌ ರಿಲೇಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಕೀರ್ತಿಗೂ ಭಾಜನರಾಗಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
 
 * ಅಥ್ಲೆಟಿಕ್ಸ್‌ಗೆ ಅಡಿ ಇಟ್ಟ ಬಗ್ಗೆ ಹೇಳಿ?
ಚಿಕ್ಕವಳಾಗಿದ್ದಾಗ ಅಕ್ಕ ಸರಿತಾ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಅವರಿಗೆ ಸಾಕಷ್ಟು ಬಹುಮಾನಗಳು ಸಿಗುತ್ತಿದ್ದವು. ಅದನ್ನು ಕಂಡು ನನ್ನಲ್ಲೂ ಅವಳಂತೆ ಬಹುಮಾನ ಗೆಲ್ಲಬೇಕೆಂಬ ಆಸೆ ಚಿಗುರೊಡೆದಿತ್ತು. ಹಬ್ಬ, ಜಾತ್ರೆ ಹೀಗೆ ವಿಶೇಷ ಸಂದರ್ಭ ಗಳಲ್ಲಿ ನಮ್ಮೂರಿನಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಒಮ್ಮೆ ನಾನು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅಕ್ಕನನ್ನೇ ಸೋಲಿಸಿ ಪ್ರಶಸ್ತಿ ಗೆದ್ದಿದ್ದೆ. ಅಲ್ಲಿ ನನ್ನ ಸಾಮರ್ಥ್ಯ  ಕಂಡವರು ಪ್ರಶಂಸೆಯ ಮಾತುಗಳನ್ನಾಡಿದ್ದರು. ಅವರ  ಮೆಚ್ಚುಗೆಯೇ   ಸ್ಫೂರ್ತಿಯಾಯಿತು. 8ನೇ ತರಗತಿಗೆ ಮನೆಯವರು  ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್‌ಗೆ ಸೇರಿಸಿದರು. ಅಲ್ಲಿಂದ ಕ್ರೀಡಾ ಬದುಕಿನ ಪಯಣ ಆರಂಭವಾಯಿತು.
 
* ಆರಂಭದ ದಿನಗಳ ಬಗ್ಗೆ ಹೇಳಿ?
ಕ್ರೀಡಾ ನಿಲಯದಲ್ಲಿ ಮಂಜುನಾಥ್‌  ಎಂಬ ಕೋಚ್‌ ಇದ್ದರು. ಅವರು ನನ್ನ ಪ್ರತಿಭೆಗೆ ಸಾಣೆ ಹಿಡಿದರು. ಬಳಿಕ ರವಿ ಅವರೂ ಕೂಡಾ  ಹಲವು ಕೌಶಲಗಳನ್ನು ಹೇಳಿಕೊಟ್ಟರು. ಅವರ ಮಾರ್ಗದರ್ಶನ ದಲ್ಲಿ ನೈಪುಣ್ಯ ಸಾಧಿಸಿ ಜೂನಿಯರ್‌ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿದ್ದೆ. ಒಮ್ಮೆ ಭಾರತ ತಂಡದ ಕೋಚ್‌ ಆರ್‌. ಎಸ್‌. ಸಿಧು ಅವರು ನನ್ನನ್ನು ನೋಡಿ ನೀನು ತುಂಬಾ ಎತ್ತರವಾಗಿದ್ದೀಯಾ. 400 ಮೀಟರ್ಸ್‌ ಓಟದೆಡೆ ಹೆಚ್ಚು ಗಮನ ನೀಡಿ ಅದರಲ್ಲಿಯೇ ಮುಂದುವರಿ ಎಂದು ಸಲಹೆ ನೀಡಿದ್ದರು. ಕ್ರಮೇಣ ನಾನು ಸೀನಿಯರ್‌ ತಂಡದ ತರಬೇತಿ ಶಿಬಿರಕ್ಕೂ ಆಯ್ಕೆಯಾದೆ. 2004ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 4X400 ಮೀಟರ್ಸ್‌ ರಿಲೇಯಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದೆ. ನನ್ನ ಕ್ರೀಡಾ ಬದುಕಿಗೆ ಹೊಸ ತಿರುವು ಸಿಕ್ಕಿದ್ದು ಆಗಲೇ .
 
* ಅಥ್ಲೀಟ್‌ ಆಗಬೇಕು ಅಂದುಕೊಂಡಿದ್ದೇಕೆ?
ಅಥ್ಲೀಟ್‌ ಆಗಲೇಬೇಕು ಎಂದು ಅಂದುಕೊಂಡಿರಲಿಲ್ಲ. ಶಾಲಾ ದಿನಗಳಲ್ಲಿ ಟ್ರಿಪಲ್‌ ಜಂಪ್‌ ಸೇರಿದಂತೆ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ತುಂಬಾ ಚೆನ್ನಾಗಿ ಓಡುತ್ತಿದ್ದುದರಿಂದ ಇದರಲ್ಲಿಯೇ ಮುಂದುವರಿಯುವಂತೆ ಕೋಚ್‌ಗಳು ಸಲಹೆ ನೀಡಿದ್ದರು. ಹೀಗಾಗಿ ಇದರತ್ತಲೇ ಗಮನ ಕೇಂದ್ರೀಕರಿಸಿದ್ದೇನೆ.
 
* 100, 200, 400 ಮತ್ತು 4X100 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತೀರಿ. ನಾಲ್ಕೂ ಸ್ಪರ್ಧೆಗಳಲ್ಲೂ ಕಣಕ್ಕಿಳಿಯುವುದು ಕಷ್ಟ ಅನಿಸುವುದಿಲ್ಲವೇ?
ಆರಂಭದಲ್ಲಿ ತುಂಬಾ ಕಷ್ಟ ಅನಿಸುತ್ತಿತ್ತು. ಹಾಗಂತ ಕೈಕೊಟ್ಟಿ ಕುಳಿತುಕೊಳ್ಳಲು ಮನಸ್ಸು ಒಪ್ಪುತ್ತಿರಲಿಲ್ಲ. ಸಾಧನೆಯ ಹಸಿವು  ಬಡಿದೆಬ್ಬಿಸುತ್ತಿತ್ತು. ಕ್ರಮೇಣ ಕಠಿಣ ತಾಲೀಮು ನಡೆಸುವುದಕ್ಕೆ ಒತ್ತು ನೀಡಿದೆ.  ಈಗ ಯಾವುದೂ ಸವಾಲು ಅನಿಸುವುದೇ ಇಲ್ಲ.
 
* ಈ ನಾಲ್ಕರ ಪೈಕಿ ನೀವು ತುಂಬಾ ಇಷ್ಟಪಡುವ ವಿಭಾಗ?
100 ಮೀಟರ್ಸ್‌ ಓಟ ನನ್ನ ಅಚ್ಚುಮೆಚ್ಚಿನ ವಿಭಾಗ. ಜೊತೆಗೆ ಅಷ್ಟೇ ಭಯ ಕೂಡ. ಬೇರೆ ವಿಭಾಗಗಳಲ್ಲಾದರೆ ಸ್ವಲ್ಪ ಯೋಚಿಸುವುದಕ್ಕಾದರೂ ಸಮಯ ಇರುತ್ತೆ. ಆದರೆ 100 ಮೀಟರ್ಸ್‌ನಲ್ಲಿ ಹಾಗಲ್ಲ. ಈ ವಿಭಾಗದಲ್ಲಿ ಓಡಲು ಗಂಡೆದೆ ಬೇಕು. ಆ ಕ್ಷಣದಲ್ಲಿ ಕ್ಷಿಪ್ರಗತಿಯಲ್ಲಿ ಓಡಿದರಷ್ಟೇ ಪದಕ ಗೆಲ್ಲಲಾಗುತ್ತದೆ.
 
* ಭಾರತದಲ್ಲಿ ಅಥ್ಲೆಟಿಕ್ಸ್‌ಗೆ ಪೂರಕ ವಾತಾವರಣ ಇದೆಯೇ?
ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನಮ್ಮಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾನ್ವಿತರ ದಂಡೇ ಇದೆ. ಅವರಿಗೆ  ಸೂಕ್ತ ವೇದಿಕೆ ಸಿಗುತ್ತಿಲ್ಲ. ಎಲ್ಲಾ ಕ್ಷೇತ್ರಗಳಂತೆ ಕ್ರೀಡೆಯಲ್ಲೂ ರಾಜಕೀಯ ಬೆರೆತು ಹೋಗಿದೆ.  ಹೀಗಾಗಿ ಅಭಿವೃದ್ಧಿಯ ವೇಗ ಕುಂಠಿತವಾಗಿದೆ.
 
* ನೀವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲು ಸಾಕಷ್ಟು ದೇಶಗಳಿಗೆ ಹೋಗಿದ್ದೀರಿ.  ಕ್ರೀಡಾ ಬೆಳವಣಿಗೆಯ ವಿಚಾರದಲ್ಲಿ ಅಲ್ಲಿಗೂ ನಮ್ಮ ದೇಶಕ್ಕೂ ಏನು ವ್ಯತ್ಯಾಸ ಇದೆ ಅಂತ ಅನಿಸುತ್ತೆ?
ಒಂದೆರಡಲ್ಲ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಆಹಾರ, ಅಭ್ಯಾಸ ಕ್ರಮ , ತರಬೇತಿ, ಮಾರ್ಗದರ್ಶನ, ತಂತ್ರಗಾರಿಕೆ, ಹೀಗೆ ಎಲ್ಲಾ ವಿಷಯದಲ್ಲೂ ವ್ಯತ್ಯಾಸ ಗುರುತಿಸಬಹುದು. ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ವಿದೇಶಗಳಿಗೆ ಹೋಲಿಸಿದರೆ ನಾವು ತುಂಬಾ ಹಿಂದೆ ಬಿದ್ದಿದ್ದೇವೆ ಎಂದೆನಿಸುತ್ತದೆ.
 
* ಒಲಿಂಪಿಕ್ಸ್‌ನಂತಹ ಮಹಾಕೂಟ ದಲ್ಲಿ ಜಮೈಕಾ, ಅಮೆರಿಕದವರಂತೆ  ಭಾರತದ ಸ್ಪರ್ಧಿಗಳಿಗೇಕೆ ಪದಕ ಗೆಲ್ಲಲು ಸಾಧ್ಯವಾಗುತ್ತಿಲ್ಲ?
 ನಾನು ಮೊದಲೇ ಹೇಳಿದಂತೆ ಕ್ರೀಡೆ ರಾಜಕೀಯ ಮುಕ್ತವಾಗಬೇಕು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಅರ್ಹತೆ ಇರುವವರಿಗೆ ಮನ್ನಣೆ ಸಿಗುತ್ತಿಲ್ಲ. ಬೇರೆ ದೇಶಗಳಲ್ಲಿ ಅಥ್ಲೀಟ್‌ಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತದೆ. ಆದರೆ ನಮ್ಮಲ್ಲಿ ಕೂಟ ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇದ್ದಾಗ ಸಿದ್ಧತೆಗೆ  ಹಣ ನೀಡುತ್ತಾರೆ. ಈ ಧೋರಣೆ ಬದಲಾಗದ ಹೊರತು ಪರಿಸ್ಥಿತಿ ಸುಧಾರಿಸುವುದಿಲ್ಲ.
 
* ಹಾಗಾದರೆ ನಾವು ಇನ್ನೆಷ್ಟು ವರ್ಷ ಕಾಯಬೇಕಾಗುತ್ತದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಾದರೂ ಪದಕದ ಬರ ನೀಗಬಹುದೆ?
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸಾಮಾನ್ಯದ ಮಾತಲ್ಲ. ಅದಕ್ಕೆ ಸಾಕಷ್ಟು ವರ್ಷಗಳ ಮುಂಚಿನಿಂದಲೇ ಸಿದ್ಧತೆ ಮಾಡಿಕೊಂಡು ಸಾಗಬೇಕು. ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನೂ ನಾಲ್ಕು ವರ್ಷ ಸಮಯ ಇದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಂಡು ಹೋದರೆ  ಪದಕದ ಬರ ನೀಗಬಹುದೇನೊ.
 
* ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದ ಅನೇಕರು ದಸರಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಿಂದ ಹಿಂದೆ ಸರಿದುಬಿಡುತ್ತಾರೆ. ಆದರೆ ನೀವು ಮಾತ್ರ ಇದಕ್ಕೆ ತದ್ವಿರುದ್ದ.  ಈ ನಿಲುವಿನ ಹಿಂದಿನ ಉದ್ದೇಶ ?
ನಾನು ಕೂಡಾ ಮೊದಲು ಇದೇ ಧೋರಣೆ ಹೊಂದಿದ್ದೆ. ಈ ಕೂಟಗಳಲ್ಲಿ ಭಾಗವಹಿಸಿದರೆ ಸುಮ್ಮನೆ ಶ್ರಮ ಮತ್ತು ಹಣ ವ್ಯರ್ಥ ಎಂದು ಭಾವಿಸಿದ್ದೆ.  ಒಮ್ಮೆ ಪರಿಚಿತರೊಬ್ಬರು ಬಂದು ಕೇವಲ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದರೆ ಹೇಗೆ. ತವರಿನ ಅಭಿಮಾನಿಗಳಿಗೂ ನಿಮ್ಮ ಓಟವನ್ನು ಕಣ್ತುಂಬಿಕೊಳ್ಳುವ ಆಸೆ ಇರುತ್ತದೆ. ನಿಮ್ಮ ನಿಲುವಿನಿಂದ ಅವರಿಗೆ ನಿರಾಸೆ ಮಾಡಿದಂತಾಗುತ್ತದೆ.  ಹೀಗಾಗಿ ದಸರಾ ಮತ್ತು ರಾಜ್ಯ ಮಟ್ಟದ ಕೂಟಗಳಲ್ಲೂ ಭಾಗವಹಿಸಬೇಕು ಎಂದಿದ್ದರು. ಅವರ ಮಾತು ನಿಜ ಅನಿಸಿತು. ಹೀಗಾಗಿಯೇ ನಿಲುವು ಬದಲಿಸಿಕೊಂಡು ಹಿಂದಿನ ಎರಡು ವರ್ಷಗಳಿಂದ ಈ ಕೂಟಗಳಲ್ಲಿ ಭಾಗವಹಿಸುತ್ತಿದ್ದೇನೆ.
 
* ಮುಂದಿನ ಟೂರ್ನಿ ಯಾವುದು. ಅದಕ್ಕೆ ಸಿದ್ಧತೆ ಹೇಗೆ ನಡೆಯುತ್ತಿದೆ?
2017ರ ಜುಲೈ ತಿಂಗಳಿನಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಏಷ್ಯನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದೆ. ಆ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವುದು ಸದ್ಯದ ಗುರಿ. ಆ ಚಾಂಪಿಯನ್‌ಷಿಪ್‌ನಲ್ಲಿ 100, 200 ಮೀಟರ್ಸ್‌ ಓಟ ಮತ್ತು 4X100 ಮೀಟರ್ಸ್‌ ರಿಲೇಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಫೆಡರೇಷನ್‌ ಕಪ್‌, ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಏಷ್ಯನ್‌ ಮತ್ತು ಇಂಡಿಯನ್‌ ಗ್ರ್ಯಾನ್‌ ಪ್ರಿ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರುವ ಸವಾಲು ಇದೆ. ಇದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದೇನೆ.
 
* ಸಂಸಾರ ಹಾಗೂ ಕ್ರೀಡಾ ಬದುಕು ಇವೆರಡಕ್ಕೂ ಹೇಗೆ ಸಮಯ ಹೊಂದಿಸುತ್ತೀರಿ?
ಆರಂಭದಲ್ಲಿ ಇದು ದೊಡ್ಡ ಸಮಸ್ಯೆ ಅನಿಸಿರಲಿಲ್ಲ. ಮಗು ಜನಿಸಿದ ಬಳಿಕ ಅಭ್ಯಾಸ ಸೇರಿದಂತೆ ಕೆಲ ವಿಚಾರಗಳಲ್ಲಿ  ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಮೊದಲೆಲ್ಲಾ ಬೆಳಿಗ್ಗೆ 6ರಿಂದ ಅಭ್ಯಾಸ ಮಾಡುತ್ತಿದ್ದೆ. ಈಗ ಮಗಳನ್ನು ಶಾಲೆಗೆ ಕಳುಹಿಸಿ  ಬೆಳಿಗ್ಗೆ 9 ಗಂಟೆಯ ನಂತರ ಅಭ್ಯಾಸಕ್ಕೆ ಹೋಗುತ್ತೇನೆ. ಅಭ್ಯಾಸದಿಂದ ಮರಳಿದ ಬಳಿಕ ಒಮ್ಮೊಮ್ಮೆ ನಾನೇ ಮಗಳನ್ನು ಶಾಲೆಯಿಂದ ಕರೆದುಕೊಂಡು ಬಂದು ಕೆಲ ಸಮಯ ವಿಶ್ರಾಂತಿ ಪಡೆದು  ಸಂಜೆ ಮತ್ತೆ ಅಭ್ಯಾಸಕ್ಕೆ ಹೋಗುತ್ತೇನೆ. 
 
* ಮದುವೆಯ ಬಳಿಕ ಅತ್ತೆ ಮನೆಯವರು ಕ್ರೀಡಾ ಚಟುವಟಿಕೆಗಳಿಂದ ದೂರ ಇರುವಂತೆ ಒತ್ತಡ ಹೇರಲಿಲ್ಲವೇ?
 ಅತ್ತೆ, ಮಾವ  ಯಾವತ್ತೂ ನನಗೆ ಆ ರೀತಿ ಹೇಳಿಲ್ಲ. ಬದಲಾಗಿ ಇನ್ನಷ್ಟು ಸಾಧನೆ ಮಾಡು ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಪತಿ ಶ್ರೀನಿವಾಸ್‌ ಅವರಂತೂ ಹೆಜ್ಜೆ ಹೆಜ್ಜೆಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಪತಿ ಹಾಗೂ ವೈಯಕ್ತಿಕ ಕೋಚ್‌ ಆಗಿ ಅವರು  ನೀಡುತ್ತಿರುವ ಬೆಂಬಲ ಮತ್ತು ಸಹಕಾರ  ಇನ್ನಷ್ಟು ಸಾಧನೆಯ ಛಲ ಹುಟ್ಟುವಂತೆ ಮಾಡಿದೆ.
 
* ಅಥ್ಲೀಟ್‌ಗಳಿಗೆ ಫಿಟ್ನೆಸ್‌ ತುಂಬಾ ಅಗತ್ಯ. ಇದನ್ನು ಕಾಪಾಡಿಕೊಳ್ಳಲು ನೀವು  ಏನು ಮಾಡುತ್ತೀರಿ?
ಅಥ್ಲೆಟಿಕ್ಸ್‌ ಹೆಚ್ಚು ದೈಹಿಕ ಶ್ರಮ ಬೇಡುವ ಕ್ರೀಡೆ. ಹೀಗಾಗಿ ಪ್ರತಿಯೊಬ್ಬರಿಗೂ ಫಿಟ್‌ನೆಸ್‌ ಅತ್ಯಗತ್ಯ. ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ನಿತ್ಯವೂ ವಿವಿಧ ಬಗೆಯ ಕಸರತ್ತು ಮಾಡುತ್ತೇನೆ.ಬ್ರಿಡ್ಜ್‌, ಮರಳು ಮತ್ತು ರಸ್ತೆಯಲ್ಲಿ ಓಡುವುದು ಅಭ್ಯಾಸದ ಭಾಗವಾಗಿವೆ. ಜೊತೆಗೆ ಜಿಮ್‌ನಲ್ಲೂ ಹೆಚ್ಚು ಕಾಲ ಬೆವರು ಹರಿಸುತ್ತೇನೆ. ಸಮಯ ಸಿಕ್ಕಾಗಲೆಲ್ಲಾ ಈಜುವುದನ್ನು ಮರೆಯುವುದಿಲ್ಲ. ಆಹಾರದ ವಿಚಾರದಲ್ಲೂ ನಾನು ತುಂಬಾ ಕಟ್ಟುನಿಟ್ಟು. ಒಣ ಹಣ್ಣು, ಮಾಂಸ , ಚಪಾತಿ ಹಾಗೂ ಹಣ್ಣಿನ ರಸಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೇನೆ.
 
* ಕಾಮನ್‌ವೆಲ್ತ್‌, ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದಿದ್ದೀರಿ. ಇಷ್ಟು ಸಾಕು. ಕ್ರೀಡಾ ಬದುಕಿಗೆ ವಿದಾಯ ಹೇಳಿಬಿಡೋಣ ಅಂತಾ ಎಂದಾದರೂ ಅನಿಸಿದೆಯಾ?
ಸೋತಾಗ, ಕೂದಲೆಳೆಯ ಅಂತರದಲ್ಲಿ ಚಿನ್ನ ಗೆಲ್ಲುವ ಅವಕಾಶ ಕೈ ತಪ್ಪಿದಾಗಲೆಲ್ಲಾ ಕ್ರೀಡಾ ಬದುಕಿಗೆ ವಿದಾಯ ಹೇಳಿಬಿಡೋಣ ಅಂತ ಅನಿಸಿದ್ದಿದೆ. ಈ ವಿಷಯವನ್ನು ಸಾಕಷ್ಟು ಬಾರಿ ಪತಿಯ ಬಳಿಯೂ ಹೇಳಿದ್ದೇನೆ. ಆ ಸಮಯದಲ್ಲಿ ಅವರು ನನಗೆ ಬುದ್ದಿ ಹೇಳಿ ಸುಮ್ಮನಿರಿಸಿದ್ದಾರೆ.
 
* ನೀವು ಅಥ್ಲೀಟ್‌ ಆಗಬೇಕೆಂದುಕೊಂಡಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು. ಅವರು ವಿರೋಧಿಸಲಿಲ್ಲವೇ?
ಖಂಡಿತಾವಾಗಿಯೂ ಇಲ್ಲ. ಅಪ್ಪ ಮಂಜುನಾಥ್‌ ಮತ್ತು ಅಮ್ಮ ತಿಪ್ಪಮ್ಮ ಅ ವರ ಬೆಂಬಲದಿಂದಲೇ  ಇವತ್ತು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ಅವರಿಗೆ ಮಗಳು ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಇತ್ತು.
 
ಹೀಗಾಗಿಯೇ ನನ್ನನ್ನು 8ನೇ ತರಗತಿಗೆ ಬೆಂಗಳೂರಿಗೆ  ಕರೆ ತಂದು ಕ್ರೀಡಾ ನಿಲಯಕ್ಕೆ ಸೇರಿಸಿದರು. ಆಗ  ತಂದೆಯ ನಿರ್ಧಾರವನ್ನು ವಿರೋಧಿಸಿದವರೇ ಹೆಚ್ಚು.  ಚಿಕ್ಕಪ್ಪಂದಿರು, ಸಂಬಂಧಿಕರೆಲ್ಲಾ  ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದನ್ನು ಬಿಟ್ಟು ಕ್ರೀಡಾಪಟು ಮಾಡಲು ಹೊರಟಿದ್ದೀಯಲ್ಲ ನಿನಗೆ ಬುದ್ದಿ ಇಲ್ಲವೆ ಎಂದು ಮೂದಲಿಸಿದ್ದರು. ಹೀಗಿದ್ದರೂ ಅಪ್ಪ  ನಿರ್ಧಾರ ಬದಲಿಸಲಿಲ್ಲ. ಇವತ್ತು ನನ್ನ ಸಾಧನೆ ಕಂಡು ಅವರು ಹೆಮ್ಮೆ ಪಡುತ್ತಾರೆ.
 
* ಬದುಕಿನ ಹೆಗ್ಗುರಿ?
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು  ಬದುಕಿನ ಮಹಾದಾಸೆ. ಈ ಬಾರಿ ರಿಯೊ ಕೂಟಕ್ಕೆ ಅರ್ಹತೆ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದು ಕೊಂಡಿದ್ದೆ. ಈ ನಿರಾಸೆ  ಕಾಡುತ್ತಲೇ ಇದೆ. ಎಲ್ಲವೂ ಅಂದು ಕೊಂಡಂತೆ ಆದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವುದು ನಿಶ್ಚಿತ. ಅದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದ್ದೇನೆ.
 
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT