ಮಕ್ಕಳ ರಕ್ಷಣೆಗೆ ಬೇಕು ಸಮನ್ವಯತೆ

7

ಮಕ್ಕಳ ರಕ್ಷಣೆಗೆ ಬೇಕು ಸಮನ್ವಯತೆ

Published:
Updated:
ಮಕ್ಕಳ ರಕ್ಷಣೆಗೆ ಬೇಕು ಸಮನ್ವಯತೆ

ಸ್ಥಳೀಯ ಆದ್ಯತೆಗಳಿಗೆ ತಕ್ಕಂತೆ ಶಿಕ್ಷಣ ರೂಪಿಸಬೇಕು. ಉತ್ತರ ಕರ್ನಾಟಕಕ್ಕೂ ದಕ್ಷಿಣ ಕರ್ನಾಟಕಕ್ಕೂ ಸಮಾನವಾದ ಶಿಕ್ಷಣ ಮಾದರಿಗಳು ಸರಿಹೋಗುವುದಿಲ್ಲ. ಪಟ್ಟಣದ ಮಕ್ಕಳಿಗೂ ಆದಿವಾಸಿ ಮಕ್ಕಳಿಗೂ ಒಂದೇ ಮಾದರಿಗಳು ಸಮಂಜಸವಲ್ಲ. ಪ್ರತಿಯೊಬ್ಬರ ಸಂಸ್ಕೃತಿಗೆ ತಕ್ಕಂತೆ ಬದುಕು ರೂಪಿಸಲು ನೆರವಾಗುವಂತಹ ಶಿಕ್ಷಣ ಪದ್ಧತಿ ಸ್ಥಳೀಯವಾಗಿ ರೂಪುಗೊಳ್ಳಬೇಕು.ಸ್ಥಳೀಯ ಜೀವನಶೈಲಿ, ಭಾಷೆ, ಸಂಪನ್ಮೂಲಗಳು, ಸಂಸ್ಕೃತಿಯನ್ನು ಪೋಷಿಸುವಂತಹ ಪಠ್ಯಚೌಕಟ್ಟು ರೂಪಿಸಲು ಅವಕಾಶ ಕಲ್ಪಿಸಬೇಕು. ಕೇಂದ್ರೀಕೃತ ಮಾದರಿಗಿಂತ ವಿಕೇಂದ್ರೀಕೃತ ಶಿಕ್ಷಣ ಮಾದರಿಗಳೇ ಮುಂದಿನ ಹಾದಿ. ನಾಲ್ಕು ಗೋಡೆಗಳ ನಡುವಣ ಕಡ್ಡಾಯ ತರಗತಿ ಮಾದರಿಗಳಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ.ಪಠ್ಯಗಳನ್ನು ಮಕ್ಕಳ ಸಹಭಾಗಿತ್ವದಲ್ಲೇ ತಯಾರಿಸುವ ಟೋಟೋಚಾನ್ ಮಾದರಿಯನ್ನು ಅಳವಡಿಸಬೇಕು. ಆಹಾರ ತಯಾರಿಕೆ ಪಠ್ಯದ ಭಾಗವಾಗಬೇಕು.ಜನಸಂಖ್ಯೆಯ ಶೇ 42 ರಷ್ಟು ಮಕ್ಕಳಿದ್ದಾರೆ. ಅವರ ಕಲ್ಯಾಣದ ಜವಾಬ್ದಾರಿ ಹಿರಿಯರದ್ದು. ಆದರೆ, ಹಿರಿಯರ ಜಾಗರೂಕತೆಯ ಕೊರತೆಯಿಂದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಅನೇಕ.ಅಪೌಷ್ಟಿಕತೆ, ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಭಿಕ್ಷಾಟನೆ, ಮಾರಾಟ ಮತ್ತು ಸಾಗಾಣಿಕೆ, ವೇಶ್ಯಾವಾಟಿಕೆ, ಲೈಂಗಿಕ ಜೀತ, ಬಾಲ್ಯವಿವಾಹ, ಹೆಣ್ಣುಭ್ರೂಣಹತ್ಯೆ, ತಾರತಮ್ಯ, ನಿರ್ಲಕ್ಷ್ಯ, ಅವಮಾನ, ಕಿರುಕುಳ, ಭಯ, ಅವಕಾಶಗಳ ನಿರಾಕರಣೆ, ಹೇರಿಕೆ ಮತ್ತು ಒತ್ತಡ ನಮ್ಮ ಮಕ್ಕಳನ್ನು ಮೌಲ್ಯಯುತ ನಾಗರಿಕರನ್ನಾಗಿಸುವ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಅಡ್ಡಿಯಾಗುತ್ತಿವೆ.ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೆ ಲಿಂಗಾನುಪಾತವು ಕುಸಿಯುತ್ತಾ ಬಂದಿದ್ದು ಮಾನವಾಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಮುಂದಿನ ಎರಡು ದಶಕಗಳಲ್ಲಿ ಇದರ ಗಂಭೀರ ಪರಿಣಾಮಗಳು ನಾವು ಅನುಭವಿಸಲಿದ್ದೇವೆ. ಈ ಋಣಾತ್ಮಕ ಬೆಳವಣಿಗೆಯನ್ನು ಸರಿಪಡಿಸಲು ಆದ್ಯತೆಯ ಕ್ರಮ ಅತ್ಯಗತ್ಯ.ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆ ಕಲ್ಪಿಸಲು ಪ್ರತಿಯೊಂದು ಜಿಲ್ಲೆಯಲ್ಲಿ ಬಾಲನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ರಕ್ಷಣಾ ಘಟಕ, ಕಾಣೆಯಾದ ಮಕ್ಕಳ ಬ್ಯೂರೋ, ಬಾಲಮಂದಿರಗಳು, ಶಿಶುಮಂದಿರಗಳು, ಬಾಲಕಾರ್ಮಿಕ ಪುನರ್ವಸತಿ ಕೇಂದ್ರಗಳು, ವಸತಿ ನಿಲಯಗಳು, ಅಂಗೀಕೃತ ಅರ್ಹ ಸಂಸ್ಥೆಗಳು ಮತ್ತು ಮಕ್ಕಳ ಸಹಾಯವಾಣಿ (ಚೈಲ್ಡ್‌ಲೈನ್) ಕಾರ್ಯನಿರ್ವಸಹಿಸುತ್ತಿವೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಇದಲ್ಲದೆ ರಾಜ್ಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಇದೆ. ಈ ವ್ಯವಸ್ಥೆಯ ಮೇಲುಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಲಾಗಿದೆ. ಆದರೆ ಈ ವ್ಯವಸ್ಥೆಯನ್ನು ಪೋಣಿಸಿ ಸಂಯೋಜಿಸಿ ಮುಂದೆ ಸಾಗುವುದರಲ್ಲಿ ಇಲಾಖೆಯು ದಯನೀಯವಾಗಿ ಸೋತಿದೆ. ಕಾರಣ, ಇಲಾಖೆ ನಡೆಸಲು ಸಿಬ್ಬಂದಿಯೇ ಇಲ್ಲ. ಇರುವವರಿಗೆ ನಾಲ್ಕೈದು ಹುದ್ದೆಗಳ ಜವಾಬ್ದಾರಿ ನೀಡಲಾಗಿದೆ. ಮಕ್ಕಳ ರಕ್ಷಣೆಯ ಹೊಣೆಹೊತ್ತವರಲ್ಲಿ ಚುನಾಯಿತ ಪ್ರತಿನಿಧಿಗಳೇ ಇಲ್ಲ ಎನ್ನುವುದೇ ಇನ್ನೊಂದು ವಿಪರ್ಯಾಸ.ಮಕ್ಕಳ ಜೊತೆ ಕೆಲಸ ಮಾಡುವ ಅಧಿಕಾರಿಗಳು ತಮ್ಮ ದರ್ಪವನ್ನು ಪ್ರದರ್ಶಿಸಿ ಮಕ್ಕಳಲ್ಲಿ ಜೀವನೋತ್ಸಾಹ ಕಳೆದುಕೊಳ್ಳುವಂತೆ ಮಾಡಿರುವ ಅನೇಕ ಘಟನೆಗಳಿವೆ. ಜನರ ಸಹಭಾಗಿತ್ವಕ್ಕೆ ಅವಕಾಶ ಇಲ್ಲದಿರುವುದೇ ಬಾಲನ್ಯಾಯ ವ್ಯವಸ್ಥೆ ಪರಿಣಾಮಕಾರಿಯಾಗದಿರಲು ಮುಖ್ಯ ಕಾರಣ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಭಾಗಿತ್ವ ಬಹಳ ಪರಿಣಾಮಕಾರಿ. ಜಾಗೃತರಾದ ನಾಗರಿಕರ ಸಮಿತಿಗಳು ಅಧಿಕಾರಿಗಳ ಜೊತೆಗೆ ಸಮಾನವಾಗಿ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು. ನಿರಂತರ ಮೇಲುಸ್ತುವಾರಿ ಮತ್ತು ಮರುಪರಿಶೀಲನೆ ಜಂಟಿಯಾಗಿ ನಡೆಯಬೇಕು. ಈ ಪ್ರಕ್ರಿಯೆಯಲ್ಲಿ ಮಕ್ಕಳೂ ಭಾಗಿಯಾಗಬೇಕು.ಮಕ್ಕಳಿಗಾಗಿ ಹಲವು ಇಲಾಖೆಗಳು ಏಕೆ?: ಶಿಕ್ಷಣಕ್ಕೆ ಒಂದು ಇಲಾಖೆ, ಪುನರ್ವಸತಿಗೆ ಇನ್ನೊಂದು ಇಲಾಖೆ, ರಕ್ಷಣೆಗೆ ಇಲಾಖೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ, ಹಿಂದುಳಿದ ಮಕ್ಕಳಿಗೆ, ಅಲ್ಪಸಂಖ್ಯಾತ ಮಕ್ಕಳಿಗೆ, ಪರಿಶಿಷ್ಟ ಜಾತಿ ಮಕ್ಕಳಿಗೆ... ಹೀಗೆ ಅದೆಷ್ಟೋ ಇಲಾಖೆಗಳು ಈಗ ಚಾಲ್ತಿಯಲ್ಲಿವೆ. ಕೇಂದ್ರ ಸರ್ಕಾರದ 13 ಸಚಿವಾಲಯಗಳಲ್ಲಿ ಸುಮಾರು 130 ಯೋಜನೆಗಳು ಮತ್ತು ಕಾರ್ಯಕ್ರಮಗಳು ಮಕ್ಕಳಿಗೆ ಸಂಬಂಧಿಸಿಯೇ ಇವೆ. ಆದರೆ, ಇವುಗಳ ನಡುವೆ ಸಮನ್ವಯತೆಯೇ ಇಲ್ಲ.ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿಗೆ ಇದರ ಕುರಿತು ದೃಷ್ಟಿಕೋನ ಇಲ್ಲದಿರುವುದು ಇದಕ್ಕೆ ಕಾರಣ. ಮಕ್ಕಳಿಗಾಗಿ ಒಂದೇ ಇಲಾಖೆ ರಚನೆಯಾಗಲಿ. ಸಿಂಗಲ್ ವಿಂಡೋ (ಏಕಗವಾಕ್ಷಿ) ವ್ಯವಸ್ಥೆ ಜಾರಿಗೆ ಬರಲಿ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಈ ವ್ಯವಸ್ಥೆಯ ಗುರಿಯಾಗಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಅಧಿಕಾರಿ/ ಸಿಬ್ಬಂದಿಯನ್ನು ಕೂಡಲೇ ವಿಚಾರಣೆ ನಡೆಸಿ ಹೊರದಬ್ಬುವಂತೆ ನಾಗರಿಕರು ಮತ್ತು ಮಕ್ಕಳ ಸಹಭಾಗಿತ್ವದ ಲೋಕಪಾಲ್ ವ್ಯವಸ್ಥೆಯೂ ಜಾರಿಗೆ ಬರಲಿ. ಶಿಕ್ಷಣ, ಮಕ್ಕಳಿಗೂ ಪೋಷಕರಿಗೂ ಹೊರೆಯಾಗಿದೆ. ಎಲ್ಲರಿಗೂ ಸಮಾನ ಶಿಕ್ಷಣ, ಹೊರೆಯಿಲ್ಲದ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ ಎನ್ನುವುದು ಕೇವಲ 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲೇ (ಎನ್‌ಸಿಎಫ್) ಉಳಿದುಬಿಟ್ಟಿದೆ. ಇದಲ್ಲದೆ, ಪುಸ್ತಕ ಚೀಲದ ತೂಕವು ಮಕ್ಕಳ ಬೆನ್ನು ಮತ್ತು ಮನಸ್ಸನ್ನು ಮುರಿಯುತ್ತಿರುವುದು ಶಾಲಾ ಆಡಳಿತದಿಂದ ಹಿಡಿದು ಮಂತ್ರಿಗಳವರೆಗಿನ ಯಾರ ಕಾಳಜಿಯೂ ಇಲ್ಲದಾಗಿದೆ.ನಾವು ಮೈಸೂರು ನಗರದಲ್ಲಿ ನಡೆಸಿದ ಅಧ್ಯಯನ ಪ್ರಕಾರ, ಪ್ರಸ್ತುತ ಮಕ್ಕಳು ತಮ್ಮ ದೇಹದ ತೂಕದ ಶೇ 20ರಿಂದ 40ರಷ್ಟು ಭಾರವನ್ನು ಪ್ರತಿದಿನ ಹೊರುತ್ತಿದ್ದಾರೆ.ಇದರಿಂದ ಮಕ್ಕಳಲ್ಲಿ ಉಂಟಾಗುವ ಅಡ್ಡ ಪರಿಣಾಮಗಳು ಅವರ ಬದುಕಿನುದ್ದಕ್ಕೂ ಪ್ರತಿಬಿಂಬಿಸಲಿದೆ. ಇದನ್ನು ಮನಗಾಣುವ ಪ್ರಜ್ಞೆ ನಮ್ಮ ನೀತಿ ನಿಯಮ ತಜ್ಞರಿಗೆ ಇರಬೇಕು. ಮಕ್ಕಳ ತಲೆಯೊಳಗೆ ಆದಷ್ಟು ಮಾಹಿತಿಗಳನ್ನು ತುಂಬಿಸುವ ಇಂದಿನ ಪದ್ಧತಿಯು ಪ್ರಜಾಪ್ರಭುತ್ವದ ತಳಹದಿಯನ್ನೇ ಬುಡಮೇಲು ಮಾಡಿದೆ.ಉತ್ತಮ ನಾಗರಿಕರು ಎನ್ನುವುದಕ್ಕಿಂತ ಮಕ್ಕಳು ಕಾರ್ಪೊರೇಟ್ ಸಂಸ್ಥೆಗಳ ಉತ್ತಮ ಉದ್ಯೋಗಿಗಳಾಗಿ ಮಾರ್ಪಡುವ ಸಂಕಷ್ಟ ಸ್ಥಿತಿ ಎದುರಾಗುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳಿಗಿಂತ ಕಾರ್ಪೊರೇಟ್ ಸೌಲಭ್ಯಗಳಿಗೆ ಇಂದಿನ ಪೀಳಿಗೆ ಆದ್ಯತೆ ನೀಡುತ್ತಿರುವುದೇ ಇದಕ್ಕೆ ನಿದರ್ಶನ. ಹಾಗಿದ್ದರೆ, ಈ ದೇಶವನ್ನು ಮುನ್ನಡೆಸುವವರು ಯಾರು?

ಹದಿಹರೆಯದವರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಇಂದಿಗೂ ನಮ್ಮ ಸಮಾಜ ಸೋತಿದೆ.ಓಡಿಹೋಗುವುದು, ಆತ್ಮಹತ್ಯೆ, ಬಾಲಾಪರಾಧ, ಪೋಷಕರನ್ನು ಧಿಕ್ಕರಿಸುವುದು ಮುಂತಾದ ಪ್ರತಿಭಟನಾತ್ಮಕ ಬೆಳವಣಿಗೆಗಳನ್ನು ನಮ್ಮ ನೀತಿ ತಜ್ಞರು ಮನಗಾಣಬೇಕು.ಅವರ ನಡೆ, ನುಡಿ, ಉಡುಗೆ ಎಲ್ಲದರಲ್ಲೂ ಬದಲಾವಣೆ ಸಹಜ. ಹದಿಹರೆಯ ಜೀವನೋತ್ಸವದ ಕಾಲ. ಅದನ್ನು ತಮ್ಮ ಮೇಲುಸ್ತುವಾರಿಯಲ್ಲಿ ಪೋಷಕರು ಸ್ವತಂತ್ರವಾಗಿ ಹರಿಯಬಿಡಬೇಕು. ಹದಿಹರೆಯದ ನಂತರ ಅವರು ಗಂಭೀರ ಯೌವನಕ್ಕೆ ವಾಪಸ್ಸಾಗುತ್ತಾರೆ ಎನ್ನುವುದನ್ನು ಪೋಷಕರು ಮನಗಾಣಬೇಕು. ಬಹುತೇಕ ಹದಿಹರೆಯದವರಿಗೆ, ಪೋಷಕರೇ ತಮ್ಮ ಪ್ರಮುಖ ವೈರಿ ಎಂಬ ಭಾವನೆ ಇದೆ ಎನ್ನುವ ಕಟುಸತ್ಯವನ್ನು ನಾವು ಅರಗಿಸಿಕೊಳ್ಳಲೇಬೇಕು.ಪೋಷಕರು ಮತ್ತು ಮಕ್ಕಳ ನಡುವಣ ಅಂತರ ಹೆಚ್ಚುತ್ತಿದ್ದು, 24 ಗಂಟೆಗಳಲ್ಲಿ ಕೇವಲ ಅರ್ಧ ಗಂಟೆಗೆ ಅವರ ಸಂಬಂಧ ಸೀಮಿತವಾಗಿದೆ ಎಂಬ ಭಯಾನಕ ಮಾಹಿತಿಯನ್ನು ವಾಣಿಜ್ಯೋದ್ಯಮ ಸಂಸ್ಥೆಗಳ ಒಕ್ಕೂಟವಾದ ಅಸೋಚಾಮ್ ನಡೆಸಿದ ಅಧ್ಯಯನ ವರದಿ ಹೊರಬಿಟ್ಟಿದೆ. ಮಕ್ಕಳನ್ನು ಸ್ವತಂತ್ರ ವ್ಯಕ್ತಿಗಳಾಗಿ, ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಪ್ರಜ್ಞೆಯುಳ್ಳ ನಾಗರಿಕರಾಗಿ ಬೆಳೆಯಲು ಅವಕಾಶ ಕಲ್ಪಿಸುವ ವಾತಾವರಣ ಪ್ರತಿಯೊಂದು ಮನೆಯಲ್ಲೂ ನಿರ್ಮಾಣವಾಗಬೇಕು.ಮಕ್ಕಳ ಗರ್ಭಧಾರಣೆ, ಬೆಳವಣಿಗೆ, ಮನೋವಿಜ್ಞಾನ, ಸೂಕ್ತ ಪೌಷ್ಟಿಕ ಆಹಾರ, ಶಿಕ್ಷಣ, ಹದಿಹರೆಯದ ಬೆಳವಣಿಗೆ ಇತ್ಯಾದಿ ವಿಚಾರಗಳ ಕುರಿತು ಪ್ರತಿಯೊಬ್ಬ ಪೋಷಕನಲ್ಲೂ ಪ್ರಜ್ಞೆ ಮೂಡಿಸಲು ಸರ್ಕಾರವು ನಾಗರಿಕ-ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ತರಬೇತಿಗಳನ್ನು ಆಯೋಜಿಸಬೇಕು. ಉತ್ತಮ ಪೋಷಕರಿದ್ದರೆ ಉತ್ತಮ ಮಕ್ಕಳು, ಆ ಮೂಲಕ ಉತ್ತಮ ನಾಗರಿಕರು ಸೃಷ್ಟಿಯಾಗುತ್ತಾರೆ.ತನ್ನ ದುಗುಡಗಳು, ತಲ್ಲಣಗಳು, ಆತಂಕಗಳು, ಭೀತಿಗಳನ್ನು ಹಂಚಿಕೊಂಡು ಮನಸ್ಸನ್ನು ಹಗುರಮಾಡಿಕೊಳ್ಳಲು ಪ್ರತಿ ಮಗುವಿಗೆ ಅವಕಾಶ ಕಲ್ಪಿಸಬೇಕು. ಈಗ ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಪ್ಪಿಸಿಕೊಳ್ಳಲು ಇದು ಅನಿವಾರ್ಯ. ಎಲ್ಲದಕ್ಕಿಂತ ಮಾನಸಿಕ ಆರೋಗ್ಯ ಬಹಳ ಮುಖ್ಯ. ಪ್ರತಿಯೊಂದು ಶಾಲೆಯಲ್ಲಿ ದೂರುಪೆಟ್ಟಿಗೆ ಇಡಬೇಕೆಂದು ಶಿಕ್ಷಣ ಹಕ್ಕು ಕಾಯ್ದೆ ಮತ್ತು ಪಂಚಾಯತ್‌ರಾಜ್ ಕಾಯ್ದೆಯಲ್ಲಿ ಪ್ರಸ್ತಾಪವಿದ್ದರೂ ಶಾಲಾ ಆಡಳಿತವಾಗಲೀ, ಇಲಾಖೆಯಾಗಲೀ ಅದಕ್ಕೆ ಮಹತ್ವ ನೀಡಿಲ್ಲ.ತಲ್ಲಣದಲ್ಲಿರುವ ಮಗುವಿಗೆ ದೂರುಪೆಟ್ಟಿಗೆ ಆಪ್ತಸಮಾಲೋಚಕನಂತೆ ಕಾಣುತ್ತದೆ. ದೂರುಪೆಟ್ಟಿಗೆಯು ಮಕ್ಕಳನ್ನು ಆತ್ಮಹತ್ಯೆಯಿಂದ ರಕ್ಷಿಸಿದ ಉದಾಹರಣೆಗಳಿವೆ.ಪ್ರತಿಯೊಂದು ಶಾಲೆಯಲ್ಲೂ ಆಪ್ತಸಮಾಲೋಚಕರನ್ನು ಕಡ್ಡಾಯವಾಗಿ ನೇಮಿಸಬೇಕು. ಮಕ್ಕಳ ಮೇಲೆ ಪೋಷಕರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ಇತರರಿಂದ ನಡೆಯುವ ಲೈಂಗಿಕ ಶೋಷಣೆಯನ್ನು ಪತ್ತೆಹಚ್ಚಲು ಇದು ಸಹಕಾರಿಯಾಗಲಿದೆ.ಅಂಗನವಾಡಿಗಳ ನಿರ್ಲಕ್ಷ್ಯ: ಮಕ್ಕಳ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಅಂಗನವಾಡಿಗಳನ್ನು ಕಡೆಗಣಿಸಲಾಗಿದೆ. ನಮ್ಮ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಸಾಮೂಹಿಕ ಸಾವು ಸಂಭವಿಸಿರುವುದು ಎಂದಿಗೂ ಕಪ್ಪುಚುಕ್ಕಿಯೇ. ಅಂಗನವಾಡಿ ಮಕ್ಕಳ ಊಟದ ಪಾಲನ್ನು ಇಲಾಖೆಯ ಬಹುತೇಕ ಅಧಿಕಾರಿಗಳು ಭಕ್ಷಿಸುತ್ತಾ ಐಷಾರಾಮಿ ಜೀವನ ಸಾಗಿಸುತ್ತಿರುವುದು ಎಲ್ಲರಿಗೂ ತಿಳಿದ ಬಯಲು ರಹಸ್ಯ.ಅಂಗನವಾಡಿಯು ಮಕ್ಕಳ ಶಿಕ್ಷಣದ ತಳಹದಿ. ಆದರೆ, ನಮ್ಮ ಪ್ರಭುತ್ವವು ಅಂಗನವಾಡಿಗಳಿಗೆ ಯಾವುದೇ ಆದ್ಯತೆ ನೀಡಿಲ್ಲ; ಅಂಗನವಾಡಿ ಕಾರ್ಯಕರ್ತರಿಗೆ ಮಹತ್ವ ನೀಡಿಲ್ಲ.ಗರ್ಭಿಣಿಯರಿಗೆ, ಬಾಣಂತಿಯರಿಗೆ ಶುಶ್ರೂಷೆ ನೀಡುವ ಮೂಲಕ ಮುಂದಿನ ಪೀಳಿಗೆಯನ್ನು ರೂಪಿಸುವ ಇವರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಂಗನವಾಡಿಗಳಿಗೆ ಹೆಚ್ಚಿನ ಮಹತ್ವವಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಯ ತಳಹದಿ ಇದಾಗಿದ್ದು ನೀತಿ ತಜ್ಞರು ಇದನ್ನು ಮನಗಾಣಬೇಕು. ಅಂಗನವಾಡಿಗೆ ಬರುವ ಮಕ್ಕಳ ತಾಯಂದಿರ ಸಮಿತಿ (ಬಿವಿಎಸ್) ಕಡ್ಡಾಯವಾದುದ್ದರಿಂದ ಎಲ್ಲೆಡೆ ದಾಖಲೆಗಳಲ್ಲಿ ಇವು ರಚನೆಯಾಗಿರುವುದು ನಿಜ. ಆದರೆ, ತಾಯಂದಿರ ಸಹಭಾಗಿತ್ವ ಎಲ್ಲಿಯೂ ಇಲ್ಲ.ಶಾಲೆಗಳ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ  (ಎಸ್‌ಡಿಎಂಸಿ) ಸ್ಥಿತಿಯೂ ಇದರ ಹೊರತಲ್ಲ. ಲೆಕ್ಕಪತ್ರಕ್ಕೆ ಅಧ್ಯಕ್ಷರ ಸಹಿ ಕಡ್ಡಾಯವಾಗಿರುವುದರಿಂದ ದಾಖಲೆಗಳಲ್ಲಿ ಸಮಿತಿ ರಚನೆಯಾಗಿರುತ್ತದೆ. ಆದರೆ, ಸದಸ್ಯರಿಗೆ ತಮ್ಮ ಸದಸ್ಯತ್ವದ ಬಗ್ಗೆಯೇ ಅರಿವಿರುವುದಿಲ್ಲ. ಬಿವಿಎಸ್ ಮತ್ತು ಎಸ್‌ಡಿಎಂಸಿ ಗಟ್ಟಿಯಾದರೆ ಅಂಗನವಾಡಿ ಮತ್ತು ಶಾಲೆಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕೆಲವು ಸಂಘಸಂಸ್ಥೆಗಳು ರಾಜ್ಯದ ಕೆಲವೆಡೆ ತೋರಿಸಿಕೊಟ್ಟಿವೆ. ಈ ಮಾದರಿಗಳನ್ನು ಎಲ್ಲೆಡೆ ಕೊಂಡೊಯ್ಯಲು ನೀತಿ ತಜ್ಞರು ಮುಂದಾಗಬೇಕು.2012ರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೋ) ಕಾಯ್ದೆ ಜಾರಿಗೆ ಬಂದ ಮೇಲೆ ಅಮಾಯಕ ಯುವಕರು ಜೈಲುಪಾಲಾಗುತ್ತಿರುವ ದುರದೃಷ್ಟಕರ ಬೆಳವಣಿಗೆ ಜರುಗಿದೆ. 18 ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರನ್ನು ಶಿಕ್ಷಿಸಲು ರಚನೆಯಾದ ಈ ಕಾಯ್ದೆಯು ವಾಸ್ತವದಲ್ಲಿ ಎರಗಿಬಿದ್ದಿರುವುದು ನೈಜ ಪ್ರೇಮಿಗಳ ಮೇಲೆ ಎನ್ನುವುದು ವಿಪರ್ಯಾಸ. ಸಣ್ಣ ಮಕ್ಕಳ ಮೇಲೆ ವಿವಾಹಿತರು ಮತ್ತು ಮಧ್ಯವಯಸ್ಕರು ನಡೆಸುವ ಲೈಂಗಿಕ ದೌರ್ಜನ್ಯ ತಡೆಯುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿತ್ತು. ಆದರೆ, ಇದರ ಬಲಿಪಶುಗಳು ಹದಿಹರೆಯದ ಹೆಣ್ಣುಮಕ್ಕಳು ಮತ್ತು 18–21 ವರ್ಷದ ನವಯುವಕರು!ಬಾಲಕಾರ್ಮಿಕ ಪದ್ಧತಿ, ಜೀತ, ಕಳ್ಳ ಸಾಗಣೆ, ಬಾಲ್ಯವಿವಾಹ, ಭಿಕ್ಷಾಟನೆ, ವೇಶ್ಯಾವಾಟಿಕೆ, ಅಪೌಷ್ಟಿಕತೆ ಮುಂತಾದ ಮಾನವಹಕ್ಕು ಉಲ್ಲಂಘನೆಗಳನ್ನು ತಡೆಗಟ್ಟುವ ಹೊಣೆಯನ್ನು ಜಿಲ್ಲೆಯ 22 ಇಲಾಖೆಗಳ ಮೇಲುಸ್ತುವಾರಿ ವಹಿಸಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗೆ ವಹಿಸಬೇಕು.ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಜೋಡಣೆ ಮತ್ತು ಸಮನ್ವಯತೆ ಸಿಇಒರಿಂದ ನಡೆಯಬೇಕು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ತಡೆ ಸಮಿತಿ ರಚನೆಯಾಗಬೇಕು ಎನ್ನುವುದು ದಶಕದ ಹಿಂದಿನ ಮಾತು. ಆದರೆ, ಈ ಸಮಿತಿಗಳು ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿವೆ. ಮಕ್ಕಳ ವಿಚಾರದಲ್ಲಿ ಪಂಚಾಯ್ತಿ ಇಲಾಖೆ ಚುರುಕಾದರೆ, ಮುಂದಿನ ಒಂದು ದಶಕದಲ್ಲಿ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಸಕಾರಾತ್ಮಕ ಬೆಳವಣಿಗೆಗಳಿಗೆ ನಾವು ಸಾಕ್ಷಿಯಾಗುತ್ತೇವೆ.ಮುಂದಿನ 10 ವರ್ಷಗಳಿಗೆ ನೀಲ ನಕ್ಷೆ ಹೀಗಿರಲಿ...

* ಮಕ್ಕಳ ಸರ್ವತೋಮುಖ ಬೆಳವಣಿಗೆಯ ಜವಾಬ್ದಾರಿ ಗ್ರಾಮ ಪಂಚಾಯ್ತಿಯ ಹೆಗಲಿಗೆ. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಕ್ಕಳ ಕಾವಲು ಸಮಿತಿಗಳ ಅನುಷ್ಠಾನ. ಪ್ರತಿ ತಿಂಗಳೂ ಮಕ್ಕಳ ಗ್ರಾಮಸಭೆ. ಮೇಲುಸ್ತುವಾರಿ ಹೊಣೆ ಜಿಲ್ಲಾ ಪಂಚಾಯ್ತಿಯ ಸಿಇಒಗೆ.* ಎಲ್ಲ ಪ್ರಕ್ರಿಯೆಗಳಲ್ಲೂ ಮಕ್ಕಳ ಸಹಭಾಗಿತ್ವ ಮತ್ತು ಭಾಗವಹಿಸುವಿಕೆಗೆ ಆದ್ಯತೆ.* ವಿಶಾಲವಾದ ಆವರಣದಲ್ಲಿ ಅಂಗನವಾಡಿ ಕೇಂದ್ರಗಳು ಮತ್ತು ಪೋಷಕರ ಸಮಿತಿ (ಬಿವಿಎಸ್)ಗಳ ಬಲವರ್ಧನೆ.* ಪ್ರತಿ ಹೋಬಳಿ ಮಟ್ಟದಲ್ಲಿ ಮಕ್ಕಳೂ ಸೇರಿದಂತೆ ಪೋಷಕರಿಗಾಗಿ ಆಪ್ತಸಮಾಲೋಚನಾ-ಸಲಹಾ ಕೇಂದ್ರಗಳು. ಪೋಷಕರಿಗೆ ಉಚಿತ ತರಬೇತಿ ಕಾರ್ಯಕ್ರಮಗಳು.* ಪ್ರತಿಯೊಂದು ಶಾಲೆ/ವಸತಿನಿಲಯ/ಮಕ್ಕಳ ಸಂಸ್ಥೆಯಲ್ಲಿ ಆಪ್ತಸಮಾಲೋಚಕರ ನೇಮಕ ಮತ್ತು ಸಲಹಾ-ದೂರು ಪೆಟ್ಟಿಗೆಯ ಸಮರ್ಪಕ ಅಳವಡಿಕೆ. ಪ್ರತಿ ಶಾಲೆಯಲ್ಲಿ ಕೈತೋಟ/ಹೊಲಗದ್ದೆ ನಿರ್ಮಾಣ, ನೈಸರ್ಗಿಕ ಆಹಾರದ ಮಹತ್ವದ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕ ಅರಿವು. ಶಾಲೆಯ ಮಕ್ಕಳ ರಕ್ಷಣೆಯ ಕಣ್ಗಾವಲು ಎಸ್‌ಡಿಎಂಸಿಗೆ. * ಮಕ್ಕಳು ಶಾಲೆಗೆ ಭಾರವಾದ ಪುಸ್ತಕಚೀಲ ಹೊರುವುದನ್ನು ನಿರ್ಬಂಧಿಸುವ ಕಾನೂನು ರಚನೆ ಮತ್ತು ಅನುಷ್ಠಾನ.* ಪ್ರತಿಯೊಂದು ಶಾಲೆಯೂ ಹೊಲಗದ್ದೆಯಂತೆ ಇರಲಿ. ಆಹಾರ ತಯಾರಿಕೆ ಮತ್ತು ಬಳಕೆ ಬಗ್ಗೆ ಮಕ್ಕಳಿಗೆ ಅರಿವು. ಮಾರುಕಟ್ಟೆಯಲ್ಲಿರುವ ವಿಷ-ತ್ಯಾಜ್ಯಗಳ ಕುರಿತು ಮಕ್ಕಳಲ್ಲಿ ಪ್ರಜ್ಞೆ ಬರಲಿ.* ಹೆಚ್ಚು ಜನಸ್ನೇಹಿಯಾಗುತ್ತಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಬಾಲನ್ಯಾಯ ಮಂಡಳಿಗಳಿಗೆ ಉತ್ತಮ ಮಟ್ಟದ ತರಬೇತಿ ಮತ್ತು ಬಲವರ್ಧನೆ.* ಪ್ರತಿ ಜಿಲ್ಲೆಯಲ್ಲಿ ವಿಸ್ತೃತವಾದ ಆವರಣದಲ್ಲಿ ಬಾಲಮಂದಿರಗಳು ಮತ್ತು ವೀಕ್ಷಣಾಲಯಗಳು. ಮಕ್ಕಳೂ ಸೇರಿದಂತೆ ಅಧಿಕಾರಿಗಳು ಮತ್ತು ಅನುಭವಿ ನಾಗರಿಕರ ಪರಿಶೀಲನಾ ಸಮಿತಿ ರಚನೆ. ಮಕ್ಕಳಿಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿ ವ್ಯವಸ್ಥೆಗಳನ್ನೂ ಸಮನ್ವಯಿಸುವ ಜಿಲ್ಲಾ ಮಟ್ಟದ ವೇದಿಕೆ ರಚನೆ.* ಸಂಘಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಇಲಾಖೆಗಳಿಂದ ಮಕ್ಕಳ ರಕ್ಷಣೆಯ ಕುರಿತ ನಿರಂತರ ಜಾಗೃತಿ ಕಾರ್ಯಕ್ರಮಗಳು.* ಮಕ್ಕಳಿಗೆ ಸಂಬಂಧಿಸಿದ ಎಲ್ಲ ಕಾಯ್ದೆಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಜಾರಿಗಾಗಿ ವಿಶೇಷ ಇಲಾಖೆಯ ರಚನೆ. * ಎಲ್ಲ ಶಾಲೆಗಳೂ ಸರ್ಕಾರಿ ಸ್ವಾಮ್ಯದಲ್ಲಿ ಬರಬೇಕು. ಖಾಸಗಿ ಶಾಲೆಗಳಿಗೆ ಅವಕಾಶವಿರುವುದಿಲ್ಲ. ಎಲ್ಲ ಶಾಲೆಗಳೂ ಹೈಟೆಕ್. ಶಿಕ್ಷಕರು ಭೋಧಕರಲ್ಲ, ಸುಗಮಕಾರರಾಗಿ ಮಾರ್ಪಡುತ್ತಾರೆ.* ವಿಧಾನಸಭೆಯಲ್ಲಿ ಕನಿಷ್ಠ ಇಬ್ಬರು ಮಕ್ಕಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುವಂತೆ ನಿಯಮಗಳಿಗೆ ತಿದ್ದುಪಡಿ ತರಬೇಕು.(ಲೇಖಕ ವಕೀಲ ಮತ್ತು ಬಾಲನ್ಯಾಯ ಮಂಡಳಿಯ ಮಾಜಿ ಸದಸ್ಯ) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry