ಹಿಮಗಡ್ಡೆ ಕೊಳಗಳ ರಚನೆಯ ಹಿಂದಿನ ರೋಚಕ ಕಥೆ

7
ವಿಜ್ಞಾನ ಲೋಕದಿಂದ

ಹಿಮಗಡ್ಡೆ ಕೊಳಗಳ ರಚನೆಯ ಹಿಂದಿನ ರೋಚಕ ಕಥೆ

Published:
Updated:
ಹಿಮಗಡ್ಡೆ ಕೊಳಗಳ ರಚನೆಯ ಹಿಂದಿನ ರೋಚಕ ಕಥೆ

2013ರಲ್ಲಿ ‘ಚೋರಬರಿ’ ಹಿಮನದಿಯ ಕರಗುವಿಕೆಯು, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಸಾಕಷ್ಟು ಜೀವಗಳ ಹಾಗೂ ಆಸ್ತಿಯ ನಾಶವಾಯಿತು. ಇಂತಹ ಹಿಮನದಿ ಕೊಳದ ಆಸ್ಫೋಟ ಪ್ರವಾಹಗಳು (ಗ್ಲೇಸಿಯರ್ ಲೇಕ್ ಔಟ್‌ಬರ್ಸ್ಟ್‌ ಫ್ಲಡ್ಸ್) ಹಿಮಾಲಯ ಹಾಗೂ ವಿಶ್ವದಾದ್ಯಂತ ಇತರ ಪರ್ವತ ಪ್ರದೇಶಗಳಲ್ಲಿ ಒಂದು ಪ್ರಮುಖ ಸುರಕ್ಷತಾ ಕಳವಳವಾಗಿ ಮಾರ್ಪಟ್ಟಿವೆ.ಇಂತಹ ಘಟನೆಗಳನ್ನು ತಡೆಗಟ್ಟಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ತಂಡವೊಂದು, ಒಂದು ಅನನ್ಯ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ‘ದಿವೇಚ ವಾತಾವರಣ ಬದಲಾವಣೆ ಕೇಂದ್ರ’ದಲ್ಲಿ ಪ್ರೊಫೆಸರ್ ಅನಿಲ್ ಕುಲಕರ್ಣಿ ಅವರ  ನೇತೃತ್ವದಲ್ಲಿ ಅಭಿವೃದ್ಧಿಗೊಂಡ ಈ ಮಾದರಿಯು, ಸುರಕ್ಷಿತ ಯೋಜನೆಗೆ ಹಾಗೂ ಹಿಮನದಿಗಳ ಸಕಾಲಿಕ ಮೇಲ್ವಿಚಾರಣೆಗೆ ಸಹಕಾರಿಯಾಗಿದೆ.ಹಿಮಗಡ್ಡೆ ಕೊಳಗಳ ಉಗಮದ ಹಿಂದಿನ ಕಾರಣವಾಗಿ ಒಂದು ಕರಗಿದ ಹಿಮನದಿಯಿರುತ್ತದೆ; ಹಿಮನದಿಯು ಭೂಪ್ರದೇಶವನ್ನು ಸವೆಸುತ್ತಾ, ಕರಗುತ್ತಾ, ತಾನು ಹಿಂದೆ ಸವೆಸಿದ ಜಾಗದಲ್ಲಿ ಉಂಟು ಮಾಡಿದ ಹಳ್ಳದಲ್ಲಿ ನೀರಾಗಿ ತುಂಬುತ್ತಾ ಸಾಗುತ್ತದೆ.ಇದರ ಪರಿಣಾಮವಾಗಿ ಹಿಮಗಡ್ಡೆಯ ಕೊಳವೊಂದು ಹುಟ್ಟುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಹಿಮನದಿಗಳ ಹಿಮ್ಮೆಟ್ಟುವಿಕೆಯು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಹಿಮಗಡ್ಡೆ ಕೊಳಗಳ  ರಚನೆ ಅಥವಾ ವಿಸ್ತರಣೆ ಹೆಚ್ಚಾಗಿದೆ.ಇವುಗಳು ಸಡಿಲ ಮಣ್ಣು ಮತ್ತು ಕಲ್ಲುಗಳಿಂದ ಕೂಡಿದ ಒಂದು ನೈಸರ್ಗಿಕ ಅಣೆಕಟ್ಟಿನಿಂದ ಸುತ್ತುವರೆದಿದ್ದು, ಅಣೆಕಟ್ಟನ್ನು ಮೀರಿದರೆ ನೆರೆಹೊರೆಯ ಪ್ರದೇಶಗಳಿಗೆ ಪ್ರವಾಹದ ಅಪಾಯ ತಪ್ಪಿದ್ದಲ್ಲ. ಆದ್ದರಿಂದ, ಹಿಮಗಡ್ಡೆ ಕೊಳಗಳ  ವಿಸ್ತರಣೆಯ ಊಹಿಸುವಿಕೆ ಮತ್ತು ಮೇಲ್ವಿಚಾರಣೆ ಅತ್ಯಗತ್ಯ. ‘ಕೇವಲ ದೂರ ಸಂವೇದಿಯನ್ನು ಬಳಸಿಕೊಂಡು  ಒಂದು ಕೊಳದ ಪರಿಮಾಣ ಊಹಿಸಲು ಕಷ್ಟವೇ ಸರಿ. ಇದು ನಮಗೆ ವೈಮಾನಿಕ ಅಂತರದಿಂದ ಮಾಹಿತಿಯನ್ನು ನೀಡಬಲ್ಲದು ಅಷ್ಟೇ’ ಎಂದು ವಿವರಿಸುತ್ತಾರೆ ಪ್ರೊಫೆಸರ್ ಕುಲಕರ್ಣಿ.ಹಿಮಗಡ್ಡೆ ಕೊಳಗಳ  ವಿಸ್ತರಣೆಯನ್ನು ಊಹಿಸಲು, ಈ ಅಧ್ಯಯನನಿರತ ಸಂಶೋಧಕರು ಹೊಸ ಮಾದರಿಯೊಂದನ್ನು ಸೂಚಿಸಿದರು. ಇದರ ಪ್ರಕಾರ, ವಿವಿಧ ಕಡೆಗಳಿಂದ ಮೇಲ್ಮೈ ಎತ್ತರವನ್ನು ಅಳೆದು, ಇದರಿಂದ ಮಂಜುಗಡ್ಡೆಯ ದಪ್ಪವನ್ನು ಕಳೆದರೆ, ಹಿಮಗಡ್ಡೆ ಕೊಳಗಳ ತಳ ಹಾಸಿನ ಮೇಲ್ಮೈ ಸ್ವರೂಪಗಳನ್ನು ತಿಳಿಯುವುದು ಸಾಧ್ಯ.ಇದರ ಮೂಲಕ ಹಿಮಗಡ್ಡೆ ಕೊಳಗಳ  ವಿಸ್ತರಣೆಯನ್ನು ಊಹಿಸಬಹುದಾಗಿದೆ. ಉಪಗ್ರಹ ಚಿತ್ರಗಳು, ಎತ್ತರದ ಪ್ರದೇಶಗಳ ಅಂಕೀಯ ಮಾದರಿಗಳು ಮುಂತಾದ ದೂರ ಸಂವೇದಿ ದತ್ತಾಂಶವನ್ನು ಬಳಸಿಕೊಂಡು ಮತ್ತು ಒಂದು ಸವಾಲಿನ ದಂಡಯಾತ್ರೆಯ ಮೂಲಕ ಸ್ಥಳದಲ್ಲೇ ಭೌತಿಕವಾಗಿ ಸಂಗ್ರಹಿಸಿದ ಮಾಹಿತಿಯನ್ನು ಬಳಸಿಕೊಂಡು ಇದನ್ನು ಸಾಧ್ಯವಾಗಿಸಲಾಯಿತು. ಈ ಮಾಹಿತಿಯೊಂದಿಗೆ, ಕೊಳಗಳು ಎಲ್ಲಿ ರೂಪುಗೊಳ್ಳಬಹುದು ಅಥವಾ ವಿಸ್ತರಿಸಬಹುದು ಎಂಬುದನ್ನು ಗುರುತಿಸಲಾಯಿತು.‘ಇದು ಕೇವಲ ಕೊಳವು ಎಷ್ಟು ವಿಸ್ತರಿಸಬಹುದು ಎಂಬ ಮುನ್ಸೂಚನೆ ನೀಡುವುದಷ್ಟೇ ಅಲ್ಲದೆ, ಯಾವ ತಾಣದಲ್ಲಿ ಹೊಸ ಕೊಳವು ರೂಪುಗೊಳ್ಳಬಹುದು ಎಂಬುದನ್ನು ಕೂಡ ಅಂದಾಜಿಸುತ್ತದೆ. ಸುರಕ್ಷಿತ ಯೋಜನೆ ತಯಾರಿಕೆಗೆ ಇದು ಅತ್ಯಂತ ಪ್ರಮುಖ ಅಂಶವಾಗಿದೆ’ ಎನ್ನುತ್ತಾರೆ ಪ್ರೊಫೆಸರ್ ಕುಲಕರ್ಣಿ.ಈ  ತಂಡದ ವಿಜ್ಞಾನಿಗಳು, ತಮ್ಮ ಮಾದರಿಯನ್ನು ಮೌಲ್ಯೀಕರಿಸಲು ‘ಡ್ರಾಂಗ್ ಡ್ರುಂಗ್’ ಮತ್ತು ‘ಸಮುದ್ರ ತಾಪು’ ಎಂಬ ಎರಡು ಹಿಮನದಿಗಳ ದತ್ತಾಂಶವನ್ನು ಬಳಸಿದರು. ಅವರು ಈ ಮಾದರಿಯನ್ನು 2000ನೇ ಇಸವಿಯಲ್ಲಿ ಸಂಗ್ರಹಿಸಿದ ದತ್ತಾಂಶಕ್ಕೆ ಅನ್ವಯಿಸಿ, ಕೊಳಗಳು ರೂಪುಗೊಳ್ಳುವ ಅಥವಾ ವಿಸ್ತರಿಸುವ ಸಂಭವನೀಯ 12 ತಾಣಗಳನ್ನು ಗುರುತಿಸಿದರು. ನಂತರ, ಅವರು 2015ರ ದತ್ತಾಂಶವನ್ನು ಪರಿಶೀಲಿಸಿ ಈ ತಾಣಗಳು ಹೇಗೆ ವಿಕಾಸ ಹೊಂದಿವೆ ಎಂಬುದನ್ನು ಅರಿತರು.ಇದರ ಫಲವಾಗಿ, ವಾಸ್ತವದಲ್ಲಿ ‘ಡ್ರಾಂಗ್ ಡ್ರುಂಗ್’ನ ಬಳಿ ಅಂದಾಜಿಸಲಾಗಿದ್ದ ತಾಣದ ಪಕ್ಕದಲ್ಲಿಯೇ ಹೊಸದೊಂದು ಕೊಳ ನಿರ್ಮಾಣವಾಗಿದ್ದನ್ನು ಹಾಗೂ ‘ಸಮುದ್ರ ತಾಪು’ವಿನ ಬಳಿಯಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದ ಕೊಳವೊಂದು ಅಂದಾಜಿಸಲಾಗಿದ್ದ ತಾಣಕ್ಕೇ ವಿಸ್ತರಿಸಿರುವುದನ್ನು ಕಂಡುಕೊಂಡರು.ಹೀಗೆ, ಮಾದರಿಯ ಊರ್ಜಿತಗೊಳಿಸುವಿಕೆಯು ಈ ತಂಡದ ತನಿಖಾ ಅಧ್ಯಯನದ  ಪ್ರಮುಖ ಭಾಗವಾಗಿತ್ತು. ಈ ಮಾದರಿಯು ಆವಶ್ಯಕ ಗುಣವಿಶೇಷಗಳನ್ನು ಹೊಂದಿದ್ದು, ದೊಡ್ಡ ಗುರಿ ತಲುಪುವುದಕ್ಕೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ.ಆದಾಗ್ಯೂ, ಕೈಯಲ್ಲಿರುವ ಈ ಕಾರ್ಯನಿರ್ವಹಿಸುವ ಮಾದರಿಯ ಜೊತೆಜೊತೆಗೇ ಒಂದು ಪ್ರಮುಖ ಯೋಜನೆಯೂ ಬಿಡುಗಡೆಯಾಗಲು ತಯಾರಿದೆ.ಭಾರತ ಸರ್ಕಾರದ ‘ಇಂಪ್ರಿಂಟ್’ ಎಂಬ ಉಪಕ್ರಮದ ಅಡಿಯಲ್ಲಿ, ಹಿಮಾಲಯದಾದ್ಯಂತ ಒಂದು ದೊಡ್ಡ ಸಂಖ್ಯೆಯ ಹಿಮನದಿಗಳಿಗೆ ಈ ಮಾದರಿಯನ್ನು ಅನ್ವಯಿಸಿ, ಕೊಳಗಳು ಯಾವ ತಾಣಗಳಲ್ಲಿ ರೂಪುಗೊಳ್ಳಬಹುದೆಂದು ಅಂದಾಜಿಸಲು ತಯಾರಿ ನಡೆದಿದೆ.ಪ್ರೊಫೆಸರ್ ಕುಲಕರ್ಣಿಯವರ ಮಾತಿನಲ್ಲೇ ಹೇಳುವುದಾದರೆ, ‘ತಾತ್ವಿಕವಾಗಿ, ಪ್ರವಾಹವನ್ನು ಪ್ರವೇಶಿಸುವ ನೀರಿನ ಪರಿಮಾಣವನ್ನು ನಾವು ತಿಳಿಯ ಬಯಸುತ್ತೇವೆ.ಇದಕ್ಕಾಗಿ ನಾವು ಅಣೆಕಟ್ಟಿನ ಶಕ್ತಿ ಅಥವಾ ಅಣೆಕಟ್ಟು ಯಾವಾಗ ಮುರಿಯಬಲ್ಲದು ಎಂಬಂತಹ ಇತರ ಅಂಶಗಳನ್ನು ತಿಳಿಯಬೇಕಿದೆ.’ ಹವಾಮಾನ ಬದಲಾವಣೆಯನ್ನು ತೀವ್ರತರವಾಗಿ ಎದುರಿಸುತ್ತಿರುವ ಜಗತ್ತಿನಲ್ಲಿ, ಈ ಮಾದರಿಯು ವಿಶೇಷ ಪ್ರಾಮುಖ್ಯ  ಹೊಂದಿದೆ. ಹಿಮನದಿಗಳ ಹಿಂಜರಿಕೆಯ ದರವು ಮುಂಬರುವ ವರ್ಷಗಳಲ್ಲಿ ಹೆಚ್ಚುವ ಸಾಧ್ಯತೆಯಿದ್ದು, ಈ ಮಾದರಿಯನ್ನು ಕಾರ್ಯತಂತ್ರ ನೀತಿಗೆ ತಕ್ಕಂತೆ ಅನ್ವಯಿಸಿದರೆ, ಜೀವ ಮತ್ತು ಆಸ್ತಿಪಾಸ್ತಿಯ ದೊಡ್ಡ ಮಟ್ಟದ ಹಾನಿಯನ್ನು ಸಮರ್ಥವಾಗಿ ತಡೆಯಬಹುದು.

          –  ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry