ಸೋಮವಾರ, ಜೂನ್ 21, 2021
28 °C
‘ಸಿಎಫ್‌ಟಿಆರ್‌ಐ’ನಲ್ಲಿ ತಂತ್ರಜ್ಞಾನ ಅಭಿವೃದ್ಧಿ, ಬಾಳೆ ಸಿಪ್ಪೆಯ ಕಾಗದವೂ ಸಿದ್ಧ

ಬಾಳೆ ಸಿಪ್ಪೆಯಿಂದಲೂ ಜ್ಯೂಸ್‌ ತಯಾರಿ!

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಬಾಳೆ ಸಿಪ್ಪೆಯಿಂದಲೂ ಜ್ಯೂಸ್‌ ತಯಾರಿ!

ಮೈಸೂರು: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಬಾಳೆಗೆ ಒಳ್ಳೆಯ ಕಾಲ ಬಂದಿದೆ. ತ್ಯಾಜ್ಯ ಎಂದು ಎಸೆಯುವ ಬಾಳೆ ಸಿಪ್ಪೆಯನ್ನು ಬಳಸಿಕೊಂಡು ಜ್ಯೂಸ್‌ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿ ಯಾಗಿದೆ. ರೈತರು ಇನ್ನುಮುಂದೆ ಬಾಳೆ ಸಿಪ್ಪೆಗೂ ಲಾಭ ಪಡೆಯುವ ಅವಕಾಶ ಪಡೆಯಬಹುದಾಗಿದೆ

ಇಡೀ ದೇಶದ ಬಾಳೆ ಉತ್ಪಾದನೆ ಯಲ್ಲಿ 3ನೇ ಸ್ಥಾನದಲ್ಲಿರುವ ರಾಜ್ಯದಲ್ಲಿ ವರ್ಷಕ್ಕೆ 1,277 ದಶಲಕ್ಷ ಟನ್‌ ಬಾಳೆ ಉತ್ಪಾದನೆಯಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುವ ಬಾಳೆಯನ್ನು ರಾಜ್ಯವೂ ಸೇರಿದಂತೆ ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾ ಗುತ್ತಿದೆ. ಬಾಳೆಯನ್ನು ತೂಕದ ಲೆಕ್ಕದಲ್ಲಿ ಮಾರುವುದು ಹೌದಾದರೂ, ಅದರ ಸಿಪ್ಪೆಗೆ ಬೆಲೆಯೇನೂ ಇಲ್ಲ. ಸುಲಿದು ಬಿಸಾಡುವ ವಸ್ತು. ಗೊಬ್ಬರಕ್ಕೆ ಬಳಸ ಬಹುದಾದ ಸಾಧ್ಯತೆ ಇದೆಯಾದರೂ, ಒಟ್ಟಿಗೆ ಒಂದೆಡೆ ಸಿಪ್ಪೆ ಸೇರಿಸುವ ಸಾಧ್ಯತೆ ಕಡಿಮೆ.

ಆದರೆ, ಬಾಳೆಯನ್ನು ಬಳಸಿಕೊಂಡು ಜ್ಯೂಸ್‌, ತಿಂಡಿಯನ್ನು ತಯಾರಿಸುವ ಕಾರ್ಖಾನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಪ್ಪೆ ಸಂಗ್ರಹವಾಗುತ್ತದೆ. ಈ ಸಿಪ್ಪೆಯನ್ನು ಸಾಮಾನ್ಯವಾಗಿ ಬಿಸಾಡಲಾ ಗುತ್ತದೆ. ಆದರೆ, ಅದೇ ಕಾರ್ಖಾನೆಯಲ್ಲಿ ಅದೇ ಸಿಪ್ಪೆಯನ್ನು ಬಳಸಿಕೊಂಡು ಜ್ಯೂಸ್‌ ತಯಾರಿಸುವ ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು ತಯಾರಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ರುಚಿಕರವಾದ, ನಾರುಯುಕ್ತ ವಾದ ಆರೋಗ್ಯಕರ ಆಹಾರ ಸೇವನೆಯೂ ಆದಂತೆ ಆಗುತ್ತದೆ.

ಏನಿದು ತಂತ್ರಜ್ಞಾನ?: ಸಂಸ್ಥೆಯ ‘ತ್ಯಾಜ್ಯ ಪುನರ್‌ ಬಳಕೆ ತಂತ್ರಜ್ಞಾನ ಯೋಜನೆ’ ಯ ಅಡಿಯಲ್ಲಿ ಈ ಹೊಸ ತಂತ್ರಜ್ಞಾನ ವನ್ನು  ಅಭಿವೃದ್ಧಿಪಡಿಸಲಾಗಿದೆ. ಬಾಳೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ನಾರಿನ ಅಂಶ ಇರುತ್ತದೆ. ಈ ನಾರಿನ ಅಂಶ ದೇಹಕ್ಕೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಪಚನ ಕ್ರಿಯೆಗೆ ಅತ್ಯಗತ್ಯವಾದ ಅಂಶ. ಈ ನಾರಿನ ಅಂಶವುಳ್ಳ ಪಾನೀಯವನ್ನು ಸೇವಿಸಿದರೆ ಜೀರ್ಣಾಂಗದ ಸಮಸ್ಯೆಗಳು ಕಡಿಮೆಯಾ ಗುತ್ತವೆ. ಈ ಉದ್ದೇಶವನ್ನೇ ಮುಖ್ಯವಾಗಿ ಗಮನದಲ್ಲಿ ಇರಿಸಿಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.

ಬಾಳೆಯ ಸಿಪ್ಪೆಯನ್ನು ಸಂಸ್ಕರಿಸಿ ಮೃದು ಭಾಗವನ್ನು ಬೇರ್ಪಡಿಸಲಾ ಗುತ್ತದೆ. ನಂತರ ಅದಕ್ಕೆ ಕೆಲವು ಆಹಾರ ರಾಸಾಯನಿಕಗಳನ್ನು ಸೇರಿಸಿ ಪಾನೀಯ ಸಿದ್ಧಪಡಿಸಲಾಗುತ್ತದೆ. ಅತಿ ಹೆಚ್ಚು ಕಾಲ ಕೆಡದಂತೆ ಸಾಮಾನ್ಯ ವಾತಾವರಣ ಪರಿಸ್ಥಿತಿಯಲ್ಲೂ ಇರುವಂತೆ ಈ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಕಿಡ್ನಿಯಲ್ಲಿ ಕಲ್ಲು ಕರಗಿಸುವುದು ಹಾಗೂ ತೂಕ ಇಳಿಸಿಕೊಳ್ಳಲು ಈ ಬಾಳೆ ಸಿಪ್ಪೆಯ ಜ್ಯೂಸ್‌ ಸಹಕಾರಿ. ಈ ಜ್ಯೂಸ್‌ ಅನ್ನು ನಿತ್ಯ ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟು ಕೊಳ್ಳಲು ಸಾಧ್ಯವಿದೆ ಎಂದು ಸಂಸ್ಥೆಯ ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ.

ರೈತರಿಗೆ ಸಹಕಾರಿ: ಈ ಬಾಳೆ ಸಿಪ್ಪೆಯನ್ನು ರೈತರು ಬಂಡವಾಳವಾಗಿ ಬಳಸಿಕೊಳ್ಳ ಬಹುದು. ಸಿಪ್ಪೆಗೂ ಸೇರಿದಂತೆ ಹಣ ಪಡೆ ಯುವ ಸಾಧ್ಯತೆ ಇನ್ನುಮುಂದೆ ಬರ ಬಹುದು. ಹಾಗಾಗಿ, ರೈತರ ಸಬಲೀ ಕರಣಕ್ಕೂ ಈ ತಂತ್ರಜ್ಞಾನ ಅನುಕೂಲ ಕಾರಿಯಾಗಲಿದೆ ಎಂದು ಸಂಸ್ಥೆಯ ನಿರ್ದೇಶಕ ರಾಮ್‌ ರಾಜಶೇಖರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎರೆಹುಳು ಗೊಬ್ಬರಕ್ಕೂ ಬಳಕೆ: ಕೊನೆ ಯಲ್ಲಿ ಉಳಿಯುವ ತ್ಯಾಜ್ಯವನ್ನು ಎರೆ ಹುಳು ಕಾಂಪೋಸ್ಟ್‌ ಗೊಬ್ಬರವಾಗಿ ಬಳಸಿಕೊಳ್ಳಬಹುದು. ಎರೆಹುಳುಗಳು ಈ ಗೊಬ್ಬರವನ್ನು ಬಳಸಿಕೊಂಡು ಚನ್ನಾಗಿ ಬೆಳೆಯುತ್ತವೆ. ಅಷ್ಟೇ ಅಲ್ಲದೇ, ಸಿಪ್ಪೆ ತ್ಯಾಜ್ಯದಿಂದ ಕಾಗದ ಉತ್ಪಾದನೆ, ಬಟ್ಟೆ ಉತ್ಪಾದನೆಯನ್ನು ಮಾಡಬಹು ದಾಗಿದೆ. ಬಾಳೆಯ ಸಿಪ್ಪೆಯನ್ನು ಸಂಸ್ಕರಿಸಿ ಬಹೂಪಯೋಗಿ ಉತ್ಪನ್ನವಾಗಿ ಬಳಸಿ ಕೊಳ್ಳಬಹುದಾದ ಸಾಧ್ಯತೆ ಈ ತಂತ್ರಜ್ಞಾನದಲ್ಲಿ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.