ಶುಕ್ರವಾರ, ಜುಲೈ 1, 2022
28 °C

ಜಾನುವಾರಿಗೆ ವಿಷವುಣಿಸುವ ಸಸ್ಯಗಳು

ಬಿ.ಎನ್‌.ಶ್ರೀಧರ Updated:

ಅಕ್ಷರ ಗಾತ್ರ : | |

ಜಾನುವಾರಿಗೆ ವಿಷವುಣಿಸುವ ಸಸ್ಯಗಳು

ಕೆಲವು ಸಸ್ಯಗಳು ತಮ್ಮನ್ನು ತಿನ್ನುವ ಜಾನುವಾರುಗಳಿಂದ ರಕ್ಷಣೆ ಪಡೆಯಲು ವಂಶಾಭಿವೃದ್ಧಿ ಹಂತದಲ್ಲಿ ಕೆಲವು ವಿಷ ವಸ್ತುಗಳನ್ನು ಶೇಖರಿಸುತ್ತವೆ. ಅಂಥ ವಿಷ ವಸ್ತುಗಳ ಪೈಕಿ ಸೈನೈಡ್‌ ಅಂಶ  ಹೊಂದಿರುವ ಹೈಡ್ರೋಸೈನಿಕ್ ಆಮ್ಲವೂ ಒಂದು. ಇದು ಸೈನೋಜೆನಿಕ್ ಗ್ಲೈಕೋಸೈಡ್ ಅಂಶದಲ್ಲಿ ಇರುತ್ತದೆ. 

 

ಇಂಥ ಗಿಡಗಳನ್ನು ಜಾನುವಾರುಗಳು ತಿಂದಾಗ ವಿಷಬಾಧೆಗೆ ಒಳಗಾಗುತ್ತವೆ. ಮೆಲುಕಾಡಿಸುವ ಜಾನುವಾರುಗಳಲ್ಲಿ ಈ ವಿಷಬಾಧೆಯು ಅತ್ಯಂತ ತೀವ್ರ ಪ್ರಮಾಣದಲ್ಲಿ ಬರುತ್ತದೆ. ಏಕೆಂದರೆ ಹೈಡ್ರೋಸೈನಿಕ್‌ ಆಮ್ಲವನ್ನು ಬಿಡುಗಡೆ ಮಾಡುವ ಸೂಕ್ಷ್ಮಾಣುಗಳು ಈ ಜಾನುವಾರುಗಳ ಹೊಟ್ಟೆಯನ್ನು ಸೇರುತ್ತವೆ. ಆಡು ಮತ್ತು ಕುರಿಗಳ ಜಠರದ ಕಿಣ್ವಗಳ ರಚನಾಕ್ರಮದಿಂದ ಈ ವಿಷಬಾಧೆಗೆ ತುತ್ತಾಗುವುದು ಹಸುಗಳಿಗೆ ಹೋಲಿಸಿದರೆ ಕಮ್ಮಿ. ಏಕ ಉದರ ಪ್ರಾಣಿಗಳಾದ ಹಂದಿ ಮತ್ತು ಕುದುರೆಗಳ ಹೊಟ್ಟೆಯಲ್ಲಿ ಸೈನೈಡ್‌ ಅಂಶವನ್ನು ನಾಶ ಮಾಡುವ ಆಮ್ಲತೆ ಇದ್ದು, ಹೆಚ್ಚು ವಿಷನಿರೋಧಕ ಗುಣವನ್ನು ಹೊಂದಿವೆ.  

 

ಭಾರತದಲ್ಲಿ ಸುಮಾರು 120 ಸೈನೈಡ್‌ ಅಂಶವನ್ನು ಹೊಂದಿದೆ ಎನ್ನಲಾದ ಸಸ್ಯಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಅಕೇಶಿಯಾ ಲ್ಯೂಕೋಫ್ಲಿಯಾ, ತಾವರೆ, ಬಿದಿರಿನ ಕಳಲೆ, ಕರವೇರ, ಕಬ್ಬಿನ ಎಲೆ ಚಿಗುರು, ಚಪ್ಪರ ಅವರೆ ಮತ್ತು ಚಿಗುರುತ್ತಿರುವ ಹಲವು ಸಸ್ಯಗಳು ಸೇರುತ್ತವೆ. ಹೆಚ್ಚಿನ ಎಲ್ಲಾ ಸಸ್ಯಗಳು ಚಿಗುರು ಹಂತದಲ್ಲಿ ಅತ್ಯಂತ ಜಾಸ್ತಿ ಪ್ರಮಾಣದಲ್ಲಿ ಸೈನೈಡ್ ಅಂಶವನ್ನು ಮೈಗೂಡಿಸಿಕೊಂಡಿರುತ್ತವೆ. ಭಾರತ ದೇಶದಲ್ಲಿ ಸೈನೈಡ್ ವಿಷಬಾಧೆಯು ಹೂವಾಡುವ ಮೊದಲಿನ ಹಸಿರು ಜೋಳವನ್ನು ತಿನ್ನುವುದರಿಂದ ಬರುತ್ತದೆ. ಕುರಿಗಳಲ್ಲಿ ಟಪಾಲು ಕಾಯಿ ಅಥವಾ ಅಕೇಶಿಯಾ ಲ್ಯೂಕೋಫ್ಲಿಯಾ ಗಿಡದ  ಕಾಯಿಯನ್ನು ತಿನ್ನುವುದರಿಂದ ಬರುತ್ತದೆ.  

 

ವಿವಿಧ ರೀತಿಯಲ್ಲಿ ಸೈನೈಡ್‌ ವಿಷಬಾಧೆ ಜಾನುವಾರುಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಎಳೆಯ ಚಿಗುರು ಗಿಡಗಳು ಬರಗಾಲದ ಸಮಯದಲ್ಲಿ ಹೆಚ್ಚಿನ ಸೈನೈಡ್ ಅಂಶವನ್ನು ಹೊಂದಿರುತ್ತವೆ. ಮಣ್ಣಿನಲ್ಲಿ ಹೆಚ್ಚಿನ ಸಾರಜನಕ ಮತ್ತು ಕಡಿಮೆ ರಂಜಕವಿದ್ದರೆ ಗಿಡಗಳಲ್ಲಿ ಜಾಸ್ತಿ ಪ್ರಮಾಣದಲ್ಲಿ ಸೈನೈಡ್ ಅಂಶ ಇರುತ್ತದೆ. ಕಳೆನಾಶಕ ಮತ್ತು ರಾಸಾಯನಿಕ ಗೊಬ್ಬರಗಳನ್ನು ಜಾಸ್ತಿ ಪ್ರಮಾಣದಲ್ಲಿ ಬಳಸಿದರೂ ಸೈನೈಡ್ ಅಂಶವನ್ನು ಸಸ್ಯಗಳು ಹೊಂದುತ್ತವೆ. ಉದಾಹರಣೆಗೆ ಜೋಳದ ಸೊಪ್ಪಿನಲ್ಲಿ ಸೈನೈಡ್ ಅಂಶ ಜಾಸ್ತಿ ಇದ್ದರೆ, ಅಕೇಶಿಯಾ ಲ್ಯೂಕೋಫ್ಲಿಯಾ ಗಿಡದ ಕಾಯಿಯಲ್ಲಿ ಇದು ಜಾಸ್ತಿ ಇರುತ್ತದೆ. ಯಾವ ಗಿಡದ ಭಾಗದಲ್ಲಿ 20 ಮಿಲಿಗ್ರಾಂ (100 ಗ್ರಾಮ್) ಹೈಡ್ರೋಕ್ಲೋರಿಕ್ ಆಮ್ಲ ಇದ್ದರೆ ಆ ಗಿಡ ಅತ್ಯಂತ ವಿಷಕಾರಿ. ಜೋಳದಲ್ಲಿ ಧುರಿನ್, ತಾವರೆಯಲ್ಲಿ ಲೋಟುಸ್ಟ್ರಾಲಿನ್ ಮತ್ತು  ಬಾದಾಮಿಯಲ್ಲಿ ಅಮಿಗ್ಡಾಲಿನ್ ವಿಷದಂಶವಿರುತ್ತದೆ.

 

ಸಾಮಾನ್ಯವಾಗಿ ಹೈಡ್ರೋಸೈನಿಕ್‌ ಆಮ್ಲವು ಕರುಳಿನ ಮೂಲಕ ಹೀರಿ ರಕ್ತಸೇರುತ್ತದೆ ಅಥವಾ ಶ್ವಾಸಕೋಶದ ಮೂಲಕವೂ ರಕ್ತ ಸೇರಬಹುದು. ಯಕೃತ್‌ನಲ್ಲಿ ಇದು ಥಯೋಸಯನೇಟ್ ಅಂಶಕ್ಕೆ ಪರಿವರ್ತನೆಯಾಗಿ  ನಿರ್ವಿಷಗೊಂಡು  ಮೂತ್ರದ ಮೂಲಕ ವಿಸರ್ಜಿಸಲಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಇದು ಶ್ವಾಸಕೋಶದ ಮೂಲಕವೂ ವಿಸರ್ಜಿಸಲಾಗುತ್ತದೆ.

 

ಸೈನೈಡ್ ವಿಷಬಾಧೆಯಲ್ಲಿ ದೇಹದ ವಿವಿಧ ಅಂಗಗಳ ಜೀವಕೋಶದಲ್ಲಿ ಆಮ್ಲಜನಕದ ಬಳಕೆಗೆ ಅವಶ್ಯವಿರುವ ಸೈಟೋಕ್ರೊಮ್ ಆಕ್ಸಿಡೇಸ್ ಎಂಬ ಕಿಣ್ವವನ್ನು ಸೈನೈಡ್ ಅಂಶವು ಪ್ರತಿಬಂಧಿಸಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಅಮ್ಲಜನಕದ ವರ್ಗಾವಣೆ ಪ್ರಕ್ರಿಯೆ ನಿಲ್ಲುತ್ತದೆ. ಕಾರಣ ಸೈನೈಡ್ ವಿಷಬಾಧೆಯಲ್ಲಿ ಜೀವಕೋಶಗಳಿಗೆ ಆಮ್ಲಜನಕದ ಕೊರತೆಯಾಗಿ ಸಾವು ಉಂಟಾಗುತ್ತದೆ. ಅದರಲ್ಲಿಯೂ ಮೆದುಳಿನ ಜೀವಕೋಶಗಳಿಗೆ ಕೆಲವೇ ನಿಮಿಷ ಆಮ್ಲಜನಕದ ಕೊರತೆಯಾದರೂ ಅವು ಮರಣವನ್ನಪ್ಪುತ್ತವೆ.  ಕಾರಣ, ಕೆಂಪುರಕ್ತ ಕಣದಲ್ಲಿ ಸಾಕಷ್ಟು ಆಮ್ಲಜನಕದ ದಾಸ್ತಾನು ಇದ್ದರೂ ಇದನ್ನು ಜೀವಕೋಶಗಳಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಕೆಂಪು ರಕ್ತಕಣಗಳಲ್ಲಿ ಅಮ್ಲಜನಕದ ಪೂರಣವಾಗಿ ಅವು ಇನ್ನೂ ಕೆಂಪು ವರ್ಣವನ್ನು ಹೊಂದುತ್ತವೆ.

 

ವಿಷಬಾಧೆಯ ಲಕ್ಷಣಗಳು ಜಾನುವಾರು ಸೈನೈಡ್ ಸಸ್ಯವನ್ನು ಸೇವಿಸಿದ ಕೆಲವೇ ನಿಮಿಷಗಳಲ್ಲಿ (10–15 ನಿಮಿಷ) ಕಂಡು ಬರುತ್ತದೆ. ಜಾಸ್ತಿ ಪ್ರಮಾಣದಲ್ಲಿ ಸಸ್ಯಗಳನ್ನು ತಿಂದ ಪಕ್ಷದಲ್ಲಿ ಬಹಳಷ್ಟು ಜಾನುವಾರುಗಳು ಚಿಕಿತ್ಸೆಯ ಮೊದಲೇ ಮರಣವನ್ನಪ್ಪುತ್ತವೆ. ವಿಷಬಾಧೆಯ ತೀವ್ರತೆಯು ಜಾನುವಾರು ಎಷ್ಟು ಪ್ರಮಾಣದಲ್ಲಿ ಸಸ್ಯವನ್ನು ಸೇವಿಸಿದೆ ಎಂಬುದರ ಮೇಲೆ ಅವಲಂಬಿಸಿದೆ. ಜಾಸ್ತಿ ತಿಂದರೆ ಕೂಡಲೇ ಸಾವು ಬರುತ್ತದೆ. 

 

ಲಕ್ಷಣಗಳು: ವಿಷಬಾಧೆಯ ಪ್ರಥಮ ಲಕ್ಷಣವೆಂದರೆ ಉಸಿರಾಟದ ತೊಂದರೆ. ನಂತರದಲ್ಲಿ ಉದ್ರೇಕ, ಉದ್ವೇಗ, ತಡವರಿಸುತ್ತ ನಡೆಯುವುದು, ನಡುಕ, ತೀವ್ರ ಹೊಟ್ಟೆಯುಬ್ಬರ ಮತ್ತು ಒದ್ದಾಡುವಿಕೆ ಇತ್ಯಾದಿಗಳು ಕಂಡು ಬರಬಹುದು. ಒದ್ದಾಡುವಿಕೆ ತೀವ್ರವಾದಂತೆ ಮಾಂಸಖಂಡಗಳ ಸಂಕುಚನ ವಿಕಸನ ಪ್ರಾರಂಭವಾಗುತ್ತದೆ. ಕಣ್ಣು, ಮೂಗು ಮತ್ತು ಬಾಯಲ್ಲಿ ನೀರು ಸೋರುತ್ತದೆ. ಕಣ್ಣಿನ ಪಾಪೆಗಳು ಅಗಲವಾಗಿ ತೆರೆದುಕೊಳ್ಳುತ್ತವೆ. ಕಣ್ಣಿನ ಲೋಳ್ಪದರಗಳು ಇಟ್ಟಿಗೆಯ ಬಣ್ಣದ ಕೆಂಪು ರಂಗು ಪಡೆದುಕೊಳ್ಳುತ್ತವೆ.

 

ಒಂದೇ ಮನೆಯಲ್ಲಿ ಉಸಿರಾಟದ ತೊಂದರೆಯಿಂದ ಮತ್ತು ತೀವ್ರವಾದ ಹೊಟ್ಟೆಯುಬ್ಬರದಿಂದ ಹೆಚ್ಚಿನ ಜಾನುವಾರುಗಳು ಮರಣ ಹೊಂದಿವೆ. ಮರಣೋತ್ತರ ಪರೀಕ್ಷೆಯಲ್ಲಿ ದೊಡ್ಡಹೊಟ್ಟೆಯ ಮೇಲೆ, ಶ್ವಾಸಕೋಶಗಳ ಮೇಲೆ, ಕರುಳಿನೊಳಗೆ, ಹೃದಯದ ಮೇಲೆ ಮತ್ತು ಶ್ವಾಸನಾಳದ ಮೇಲೆ ರಕ್ತಸ್ರಾವವನ್ನು ಕಾಣಬಹುದು. ರಕ್ತ ಹೆಪ್ಪುಗಟ್ಟದೇ ಇರುವುದು ಒಂದು ಮುಖ್ಯ ಚಿಹ್ನೆ. ಪ್ರಯೋಗಾಲಯದಲ್ಲಿ ಪ್ರಾಣಿಯ ಜಠರದ ಅಹಾರವನ್ನು ಪರೀಕ್ಷಿಸಿ ಹೈಡ್ರೋಸೈನಿಕ್ ಆಮ್ಲವನ್ನು ಪತ್ತೆ ಹಚ್ಚಬಹುದು. 

 

ವಿಷಬಾಧೆಯನ್ನು ಪತ್ತೆ ಹಚ್ಚುವುದು ಅಷ್ಟೇನೂ ಕಷ್ಟಕರವಾದ ವಿಚಾರವಲ್ಲ. ತೀವ್ರವಾದ ಉಸಿರಾಟದ ತೊಂದರೆ, ಹೊಟ್ಟೆಯುಬ್ಬರ ಮತ್ತು ಚಿಕಿತ್ಸೆಯ ಮೊದಲೇ ಸಾವು ಇವು ಈ ವಿಷಬಾಧೆಯನ್ನು ಪತ್ತೆ ಹಚ್ಚುವಿಕೆಯಲ್ಲಿ ಸಹಕಾರಿ. 

 

ಆದರೆ ಈ ವಿಷಬಾಧೆಯನ್ನು ಇದೇ ರೀತಿಯ ಲಕ್ಷಣವನ್ನು ಉಂಟು ಮಾಡುವ ಇತರ ಕಾಯಿಲೆಗಳಾದ ನೆರಡಿ, ಗಂಟಲು ಬೇನೆ, ಚಪ್ಪೆ ಬೇನೆ ಮತ್ತು ಇತರ ರೋಗಗಳಿಂದ ಬೇರ್ಪಡಿಸಿ ಪತ್ತೆ ಹಚ್ಚಲು ಜಾಣ್ಮೆ ಮತ್ತು ಅನುಭವ ಬೇಕು. 

 

ವಿಷಬಾಧೆಯನ್ನು ಪತ್ತೆ ಹಚ್ಚಿದರೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಈ ಚಿಕಿತ್ಸೆಯನ್ನು ತಜ್ಞ ಪಶುವೈದ್ಯರು ಸೋಡಿಯಂ ಥಯೋಸಲ್ಫೇಟ್ ಮತ್ತು ಸೋಡಿಯಂ ನೈಟ್ರೈಟ್ ರಾಸಾಯನಿಕಗಳನ್ನು ಸೂಕ್ತ ಪ್ರಮಾಣದಲ್ಲಿ ನೀಡುವುದರ ಮೂಲಕ ಪರಿಣಾಮಕಾರಿ ನೀಡಬಲ್ಲರು. ತಜ್ಞ ಪಶುವೈದ್ಯರು ಸಾಮಾನ್ಯವಾಗಿ ಈ ಔಷಧಿಯನ್ನು ಅವರ ಬಳಿ ತುರ್ತು ಚಿಕಿತ್ಸೆಗೆಂದು ಇರಿಸಿಕೊಂಡಿರುತ್ತಾರೆ. 

 

ರೈತರು ಆದಷ್ಟು ಅವರ ಜಾನುವಾರುಗಳಿಗೆ ಸೈನೈಡ್ ಅಂಶ ಹೊಂದಿದ ಜೋಳದ ವಿವಿಧ ತಳಿಗಳು, ಅಕೇಶಿಯಾ ಲ್ಯೂಕೋಫ್ಲಿಯಾ, ತಾವರೆ, ಬಿದಿರಿನ ಕಳಲೆ, ಕರವೇರ, ಕಬ್ಬಿನ ಎಲೆ ಚಿಗುರು ಮತ್ತು  ಚಪ್ಪರ ಅವರೆ ಇತ್ಯಾದಿಗಳು ಲಭ್ಯವಾಗದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇತರ ವಿಷಬಾಧೆಗಳಲ್ಲಿ ಬಳಸುವಂತೆ ಹುಳಿ ಮಜ್ಜಿಗೆ ಅಥವಾ ಹುಣಸೆ ಹಣ್ಣಿನ ರಸವನ್ನು ಕುಡಿಸಬಾರದು. ಏಕೆಂದರೆ ಇದು ಜಠರದ ಅಮ್ಲತೆಯನ್ನು ಜಾಸ್ತಿ ಮಾಡಿ ಇನ್ನೂ ಹೆಚ್ಚಿನ ಹೈಡ್ರೋಸೈನಿಕ್ ಆಮ್ಲ ಬಿಡುಗಡೆಯಾಗುವಂತೆ ಮಾಡಿ ವಿಷಬಾಧೆಯ ತೀವ್ರತೆಯನ್ನು ಜಾಸ್ತಿ ಮಾಡುತ್ತದೆ. ತಂಪಾದ ನೀರನ್ನು ನಿಧಾನವಾಗಿ ಜಾನುವಾರುಗಳಿಗೆ ಕುಡಿಸಬಹುದು. ಹೊಟ್ಟೆ ಉಬ್ಬರ ಕಡಿಮೆ ಮಾಡಲು ಶುಂಠಿ, ಜೀರಿಗೆ ಬೆಳ್ಳುಳ್ಳಿ, ಇಂಗು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಿಸಬಹುದು. ತಕ್ಷಣ ತಜ್ಞ ಪಶುವೈದ್ಯರನ್ನು ಕರೆದು ಎಲ್ಲಾ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವುದು ಜಾಣತನದ ಕೆಲಸ.

 

*

ಲೇಖಕರ ಸಂಪರ್ಕ ಸಂಖ್ಯೆ 08182– 651001

ಲೇಖಕರು ಶಿವಮೊಗ್ಗದ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು

 

**


ಬಿದಿರಿನ ಕಳಲೆ

 

**


ಚಪ್ಪರದ ಅವರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.