ಮಂಗಳವಾರ, ಸೆಪ್ಟೆಂಬರ್ 28, 2021
20 °C

ಶಿಕ್ಷಣ ಸುಧಾರಣೆಗೆ ಬೇಕು ಬಹು ಆಯಾಮದ ಕ್ರಮ

ಅನುರಾಗ್ ಬೆಹರ್ Updated:

ಅಕ್ಷರ ಗಾತ್ರ : | |

ಶಿಕ್ಷಣ ಸುಧಾರಣೆಗೆ ಬೇಕು ಬಹು ಆಯಾಮದ ಕ್ರಮ

ಕರ್ನಾಟಕದ ಮುಂದಿನ ನಲವತ್ತು ವರ್ಷಗಳನ್ನು ಹಸನಾಗಿ ರೂಪಿಸುವುದಕ್ಕೆ ಬಹುಮುಖ್ಯ ಪಾತ್ರವಹಿಸಬೇಕಿರುವುದು ಶಿಕ್ಷಣ ಕ್ಷೇತ್ರ. ಇದನ್ನು ಇನ್ನೊಂದು ಬಗೆಯಲ್ಲೂ ಹೇಳಬಹುದು. ಶಿಕ್ಷಣ ಬಹುಮುಖ್ಯ ಪಾತ್ರವಹಿಸಿದರಷ್ಟೇ ನಮಗೊಂದು ಉತ್ತಮ ಭವಿಷ್ಯ ಸಾಧ್ಯ. ಏಕೆಂದರೆ ಎಲ್ಲಾ ಸಮಾಜಗಳಲ್ಲೂ ವ್ಯಕ್ತಿ ಮತ್ತು ಆ ಮೂಲಕ ಸಮಾಜದ ಅಭಿವೃದ್ಧಿಯನ್ನು ಸಾಧ್ಯ ಮಾಡುವ ಏಕೈಕ ಸಂಘಟಿತ ಪ್ರಕ್ರಿಯೆಯೊಂದಿದ್ದರೆ ಅದು ಶಿಕ್ಷಣ ಮಾತ್ರ.ಈ ಲೇಖನ ಕರ್ನಾಟಕದ ಶಿಕ್ಷಣ ಕ್ಷೇತ್ರದ ಕುರಿತಂತಿದೆ. ಭಾರತದ ಒಟ್ಟು ಶೈಕ್ಷಣಿಕ ವ್ಯವಸ್ಥೆಯಿಂದ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಹಾಗೆ ನೋಡುವ ಅಗತ್ಯವೂ ಇಲ್ಲ ಎಂಬ ಪೂರ್ವಗ್ರಹಿಕೆಯೊಂದಿಗೇ ನನ್ನ ಆಲೋಚನೆಗಳನ್ನು ಮಂಡಿಸಿದ್ದೇನೆ.

ಶಿಕ್ಷಣದ ಗುರಿಗಳು

ಉತ್ತಮ ಕರ್ನಾಟಕಕ್ಕೆ ಹಸನಾದ ಶಿಕ್ಷಣ ಹೇತುವಾಗಬೇಕೆಂದರೆ ನಾವು ಪರಿಭಾವಿಸುವ ಶಿಕ್ಷಣ ಗುರಿಗಳು ನಾವು ಉತ್ತಮ ಅಥವಾ ಒಳಿತು ಎಂದು ಭಾವಿಸುವ ಸಂಗತಿಗಳನ್ನು ಅನುರಣಿಸಬೇಕು. ಇದನ್ನು ನಮ್ಮ ಸಂವಿಧಾನದ ಆಶಯವೇ ಹೇಳುತ್ತಿದೆ.ಎಲ್ಲರನ್ನೂ ಒಳಗೊಳ್ಳುವ ಮಾನವೀಯವೂ ಸುಸ್ಥಿರವೂ ಆದ ಸಮಾಜವೊಂದನ್ನು ಸ್ಥಾಪಿಸುವ ಉದ್ದೇಶವುಳ್ಳ ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲಾಗಬೇಕಿರುವುದು ಶಿಕ್ಷಣ. ಅರ್ಥಾತ್ ಸಮಾಜದ ಮೂಲ ನೆಲೆಗಟ್ಟಾಗಿರುವ ವ್ಯಕ್ತಿ ತನ್ನ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಪೌರನಾಗಿ ಬೆಳೆಯಬೇಕು.ಇದು ಸಾಧ್ಯವಾಗಬೇಕೆಂದರೆ ವ್ಯಕ್ತಿಯನ್ನು ಸ್ವತಂತ್ರನಾದ, ಸೃಜನಶೀಲ ಚಿಂತನೆಯುಳ್ಳ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಮನುಷ್ಯನನ್ನಾಗಿಸುವ ಶಿಕ್ಷಣ ಬೇಕು. ಶೈಕ್ಷಣಿಕ ಸಂಸ್ಕೃತಿ ಮತ್ತು ಪ್ರಯೋಗಗಳೆರಡೂ ಮೇಲಿನ ಗುರಿಗಳನ್ನು ಇಟ್ಟುಕೊಂಡಿರುವಂತೆ ವ್ಯಾಖ್ಯಾನಿಸಿಕೊಳ್ಳುವುದು ಅಗತ್ಯ.ಶಿಕ್ಷಣದ ಉದ್ದೇಶವನ್ನು ನಿರ್ವಚಿಸುವಾಗ ಅದನ್ನು ಸಂಕುಚಿತವಾದ ಆರ್ಥಿಕ ಗುರಿಯಂತೆ ಗ್ರಹಿಸಿ ಮಂಡಿಸುವ ಅಪಾಯಕ್ಕೆ ಸಿಲುಕಬಾರದು. ಆರ್ಥಿಕತೆಯ ಬೇಡಿಕೆಗಳು ಬಹಳ ವೇಗವಾಗಿ ಬದಲಾಗುತ್ತಿರುತ್ತವೆ ಅದರೊಂದಿಗೆ ಮೇಲಾಟ ನಡೆಸುವಂತೆ ನಾವು ಶಿಕ್ಷಣದ ಉದ್ದೇಶವನ್ನು ನಿರ್ವಚಿಸಲು ಹೊರಡುವುದು ನಮ್ಮನ್ನು ನಾವೇ ಸೋಲಿಸಿಕೊಳ್ಳುವ ಹಾದಿಯಲ್ಲಿ ಸಾಗಿದಂತಾಗುತ್ತದೆ.

ಬದಲಾವಣೆಗೇನು ಮಾಡಬೇಕು?

ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದ ಶಿಕ್ಷಣ ಕ್ಷೇತ್ರ ಹಲವು ಮುಖ್ಯ ಸಾಧನೆಗಳನ್ನು ಮಾಡಿದೆ. ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು, ಲಿಂಗ ಸಮಾನತೆ ಮತ್ತು ಪಠ್ಯ ಕ್ರಮದ ಸುಧಾರಣೆಗಳೆಲ್ಲಾ ಈ ಸಾಧನೆಗಳಲ್ಲಿ ಸೇರುತ್ತವೆ. ಆದರೆ ಇನ್ನಷ್ಟು ಕೆಲಸಗಳು ಈ ಕ್ಷೇತ್ರದಲ್ಲಿ ಆಗಬೇಕಾಗಿದೆ. ಇವುಗಳನ್ನು ಒಂದೊಂದಾಗಿ ಎತ್ತಿಕೊಂಡು ಚರ್ಚಿಸುವ ಬದಲಿಗೆ ನಮ್ಮ ಶಿಕ್ಷಣದ ಗುರಿಗಳನ್ನು ಸಾಧಿಸುವುದಕ್ಕೆ ಅತ್ಯಂತ ಅಗತ್ಯವಿರುವ ವಿಚಾರಗಳನ್ನಿಲ್ಲಿ ಮಂಡಿಸುತ್ತೇನೆ. ಶಿಕ್ಷಣ ಕ್ಷೇತ್ರವನ್ನು ಹೇಗೆ ಪರಿಭಾವಿಸಿ ಕಾರ್ಯಪ್ರವತ್ತ ವಾಗಬೇಕು ಎಂಬುದರಿಂದಲೇ ಆರಂಭಿಸೋಣ.ಮೊದಲನೆಯದಾಗಿ ನಮ್ಮ ಶೈಕ್ಷಣಿಕ ಯೋಜನೆ ಗಳನ್ನು ಕನಿಷ್ಠ ಹತ್ತು ವರ್ಷದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು. ಇದಕ್ಕೆ ಅಗತ್ಯವಿರುವ ಹಣಕಾಸು ಅಗತ್ಯದ ಬಗ್ಗೆಯೂ ಸ್ಪಷ್ಟ ಕಲ್ಪನೆ ಇರಬೇಕು. ಈ ಬಗೆಯಲ್ಲಿ ಯೋಜನೆ ರೂಪಿಸದೇ ಇದ್ದರೆ ಬದಲಾವಣೆಯ ಗತಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅಸಾಧ್ಯವಾಗುತ್ತದೆ.ಎರಡನೆಯದಾಗಿ, ಒಳ್ಳೆಯ ಉದ್ದೇಶಗಳು ಮತ್ತು ಅತ್ಯುತ್ತಮ ಆಡಳಿತ ನೀತಿಗಳು ನಿಜಕ್ಕೂ ಫಲ ನೀಡುವುದು ಅವುಗಳ ಅನುಷ್ಠಾನದಲ್ಲಿ ಎಂಬುದನ್ನು ನಾವು ಅರಿಯಬೇಕು. ಇದಕ್ಕೆ ನಮ್ಮ ವ್ಯವಸ್ಥೆಯೊಳಗೊಂದು ಬದಲಾವಣೆಯ ಅಗತ್ಯವಿದೆ. ಕೇಂದ್ರೀಕೃತ ನಿಯಂತ್ರಣದ ಮಾದರಿಯ ಅನುಷ್ಠಾನ ತಂತ್ರವನ್ನು ಬದಿಗಿರಿಸಿ ಋಜುತ್ವ, ಸಬಲೀಕರಣ ಮತ್ತು ಸಾಮರ್ಥ್ಯ ವೃದ್ಧಿಯ ಮಾದರಿಯನ್ನು ಅನುಸರಿಸಬೇಕು.ಮೂರನೆಯದಾಗಿ ಸಾರ್ವಜನಿಕ ಶಿಕ್ಷಣ ಅಥವಾ ಸರ್ಕಾರಿ ಶಾಲೆಗಳ ಮೂಲಕ ನೀಡುವ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಇದು ಸ್ಪಷ್ಟವಾಗಿ ಗೋಚರಿಸುವ ಮಟ್ಟದಲ್ಲಿರಬೇಕಷ್ಟೇ ಅಲ್ಲದೆ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯವಿರುವ ಸಶಕ್ತ ಯೋಜನೆಯೊಂದಿಗೆ ಸಾಕಾರಗೊಳ್ಳಬೇಕು.ಮೂಲಭೂತವಾಗಿ ಇದು ಶಿಕ್ಷಣ ಸಾಧಿಸಬೇಕಾದ ಗುರಿಯನ್ನು ಒತ್ತಿ ಹೇಳುವ ಕ್ರಿಯೆ ಮಾತ್ರ. ಏಕೆಂದರೆ ಒಳ್ಳೆಯ ಸಾರ್ವಜನಿಕ ಶಿಕ್ಷಣ ಪ್ರಜಾಪ್ರಭುತ್ವದ ಮೂಲ ನೆಲೆಗಟ್ಟಾಗಿರುತ್ತದೆ. ಹಾಗೆಂದು ಖಾಸಗಿ ಶಾಲೆಗಳನ್ನಾಗಲೀ ಅಥವಾ ಖಾಸಗಿ ಪ್ರಯತ್ನಗಳನ್ನಾಗಲೀ ನಿರುತ್ತೇಜಿಸುವ ಅಗತ್ಯವಿಲ್ಲ ಅಥವಾ ಇಂಥದ್ದನ್ನು ಕಡೆಗಣಿಸಬೇಕಾಗಿಯೂ ಇಲ್ಲ. ಆದರೆ ನಮ್ಮ ಶಿಕ್ಷಣದ ಪರಿಕಲ್ಪನೆಯ ಕೇಂದ್ರದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಮತ್ತೆ ಅನುಸ್ಥಾಪಿಸಬೇಕು.

ಅನುಷ್ಠಾನದ ಹತ್ತು ಆಯಾಮಗಳು

ಮೇಲೆ ಹೇಳಿದ ಗುರಿಗಳನ್ನು ಸಾಧಿಸುವುದಕ್ಕೆ ಕೈಗೊಳ್ಳಬೇಕಿರುವ ನಿರ್ದಿಷ್ಟ ಕ್ರಮಗಳೇನಾಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸೋಣ. ಇಲ್ಲಿರುವುದು ಒಂದು ಸಮಗ್ರವಾದ ಪಟ್ಟಿಯಲ್ಲ. ಇದು ಅತಿ ಮುಖ್ಯವಾದ ಕೆಲಸಗಳ ಪಟ್ಟಿಯಷ್ಟೆ.ಮೊದಲನೆಯದಾಗಿ ಬೋಧಕರ ಶಿಕ್ಷಣ ವ್ಯವಸ್ಥೆಯನ್ನು ತಳ ಮಟ್ಟದಿಂದ ಕಟ್ಟುವ ಅಗತ್ಯವಿದೆ. ನಮ್ಮಲ್ಲಿ ಬಿಎಡ್ ಮತ್ತು ಡಿಎಡ್ ಕೋರ್ಸ್‌ಗಳ ಮೂಲಕ ಶಿಕ್ಷಕರಾಗಬಯಸುವವರಿಗೆ ತರಬೇತಿ ನೀಡಲಾಗುತ್ತದೆ.ದುರದೃಷ್ಟವಶಾತ್ ನಮ್ಮದು (ಕರ್ನಾಟಕದ್ದಷ್ಟೇ ಅಲ್ಲ, ಇಡೀ ಭಾರತದ್ದು) ವಿಶ್ವದಲ್ಲೇ ಅತ್ಯಂತ ದುರ್ಬಲವಾದ ಬೋಧಕರನ್ನು ಸಿದ್ಧಪಡಿಸುವ ವ್ಯವಸ್ಥೆ. ಅವರಿಗೆ ನಿಗದಿಪಡಿಸಲಾಗಿರುವ ಪಠ್ಯಕ್ರಮ, ಅದರ ಅನುಷ್ಠಾನ, ಇವೆಲ್ಲವನ್ನೂ ನೋಡಿಕೊಳ್ಳುವ ಸಾಂಸ್ಥಿಕ ವ್ಯವಸ್ಥೆ ಮತ್ತು ನಿಯಂತ್ರಣ ಪ್ರಾಧಿಕಾರಗಳೆಲ್ಲವೂ ಒಂದು ದೊಡ್ಡ ಗೊಂದಲದ ಗೂಡು. ಅಷ್ಟೇನೂ ಉತ್ತಮವಲ್ಲದ ಶೈಕ್ಷಣಿಕ ವ್ಯವಸ್ಥೆ ಇರುವ ದೇಶಗಳಲ್ಲಿಯೂ ಐದು ವರ್ಷದ  ಶಿಕ್ಷಕರ ತರಬೇತಿ ಕೋರ್ಸ್‌ಗಳಿವೆ.ನಮ್ಮಲ್ಲಿ ಮಾತ್ರ ಇದರ ಅವಧಿ ಎರಡೇ ವರ್ಷ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ನಮ್ಮಲ್ಲಿರುವುದು ತರಬೇತಿ ಸಂಸ್ಥೆಗಳ ಹೆಸರಿನಲ್ಲಿ ಅಂಗಡಿಗಳನ್ನು ತೆರೆದು ಕುಳಿತಿರುವ ಬಿಎಡ್ ಕಾಲೇಜುಗಳು. ಈ ಸಂಸ್ಥೆಗಳಿಗೆ ಬೋಧನೆ ಮತ್ತು ಶಿಕ್ಷಣದಲ್ಲಿ ಯಾವ ಆಸಕ್ತಿಯೂ ಇಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿದೆ ಎಂಬುದು ನಿಜವಾದರೂ ಈ ಕ್ಷೇತ್ರದ ಸುಧಾರಣೆಯ ಹಾದಿಯಲ್ಲಿ ನಾವಿನ್ನೂ ಬಹುದೂರ ಸಾಗಬೇಕಾಗಿದೆ. ಪಠ್ಯಕ್ರಮ, ಸಾಂಸ್ಥಿಕ ವ್ಯವಸ್ಥೆ ಮತ್ತು ನಿಯಂತ್ರಣ ಪ್ರಾಧಿಕಾರ ಹೀಗೆ ಎಲ್ಲೆಡೆಯೂ ಬದಲಾವಣೆಯ ಅಗತ್ಯವಿದೆ.ಎರಡನೆಯ ಹಂತದ ಕ್ರಮಗಳ ಅಗತ್ಯವಿರುವುದು ಈಗಾಗಲೇ ಬೋಧನಾ ಕ್ರಿಯೆಯಲ್ಲಿ ತೊಡಗಿಕೊಂಡಿ ರುವ ಶಿಕ್ಷಕರ ಸಾಮರ್ಥ್ಯ ವರ್ಧನೆಯ ಕ್ಷೇತ್ರದಲ್ಲಿ. ನಮ್ಮಲ್ಲಿ ನಾಲ್ಕು ಲಕ್ಷ ಮಂದಿ ಶಿಕ್ಷಕರಿದ್ದಾರೆ ಅವರೆಲ್ಲರೂ ಅತ್ಯಂತ ದುರ್ಬಲವಾದ ಬೋಧಕ ತರಬೇತಿ ವ್ಯವಸ್ಥೆಯ ಉತ್ಪನ್ನಗಳು. ಇವರನ್ನು ಗುರಿಯಾಗಿಟ್ಟು ಕೊಂಡು ತೀವ್ರ ಸ್ವರೂಪದ ಸಾಮರ್ಥ್ಯ ವೃದ್ಧಿಯ ತರಬೇತಿಗಳನ್ನು ರೂಪಿಸಿ ಸುಸ್ಥಿರ ಮಾದರಿಯಲ್ಲಿ ಕಾರ್ಯರೂಪಕ್ಕೆ ತರಬೇಕು.ಇಲ್ಲದೇ ಇದ್ದರೆ ಈ ಇವರೆಲ್ಲರೂ ತಮ್ಮ ದುರ್ಬಲ ಶೈಕ್ಷಣಿಕ ಹಿನ್ನೆಲೆ ಯಿಂದಾಗಿ ದುರ್ಬಲರಾಗಿಯೇ ಉಳಿದುಬಿಡುತ್ತಾರೆ. ಇದರ ನೇರ ಪರಿಣಾಮ ಅವರು ಬೋಧನೆಯಲ್ಲಿ ತೊಡಗಿಸಿಕೊಳ್ಳುವ ಪ್ರಕ್ರಿಯೆಯ ಮೇಲೂ ಇರುತ್ತದೆ. ಶಾಲೆಗಳಲ್ಲಿರುವ ಬೋಧಕರು ತಮ್ಮ ವೃತ್ತಿಗೆ ಬದ್ಧರು. ಅಷ್ಟೇ ಅಲ್ಲ ತಮ್ಮ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ತೊಡಗಿಸಿಕೊಂಡವರು.ಭಾರೀ ಸಂಖ್ಯೆಯ ಉದ್ಯೋಗಿಗಳಿರುವ ಯಾವುದೇ ಕ್ಷೇತ್ರದಂತೆ ಇಲ್ಲಿಯೂ ಬದ್ಧತೆಯ ಪ್ರಮಾಣದಲ್ಲಿ ಏರುಪೇರನ್ನು ಕಾಣಬಹುದು. ಆದರೆ ಸಾಮಾನ್ಯ ಮಟ್ಟದ ಬೋಧಕ ಅಥವಾ ಬೋಧಕಿಗೆ ಸರಿಯಾದ ಬೌದ್ಧಿಕ ಬೆಂಬಲ ದೊರೆತರೆ ಆತ ಅಥವಾ ಆಕೆ ತನ್ನ ವೃತ್ತಿಗೆ ನ್ಯಾಯ ದೊರಕಿಸುವುದರಲ್ಲಿ ಸಂಶಯವಿಲ್ಲ. ಈ ಬೋಧಕರನ್ನು ನಾವು ಬದಲಾವಣೆಯ ಬೆಂಬಲಿಗರನ್ನಾಗಿಸುವ ಜೊತೆಗೆ ಅವರನ್ನೇ ಅದರ ಚಾಲಕ ಶಕ್ತಿಯಾಗಿ ಮಾರ್ಪಡಿಸಬೇಕಾಗಿದೆ.ಮೂರನೆಯದಾಗಿ ನಾವು ಮಾಡಬೇಕಾದ ಕೆಲಸವೆಂದರೆ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ತಜ್ಞರನ್ನು ಸೃಷ್ಟಿಸುವುದು. ಅಂದರೆ ಬೋಧಕರ ಶಿಕ್ಷಣ, ಪಠ್ಯಕ್ರಮಗಳನ್ನು ರೂಪಿಸುವುದು, ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು ಮುಂತಾದ ಕೆಲಸಗಳನ್ನು ಮಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ತಜ್ಞರ ಸಂಖ್ಯೆ ಭಾರತದಲ್ಲಿ ಅತ್ಯಂತ ಕಡಿಮೆ ಇದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಇವರ ಸಂಖ್ಯೆ ಕನಿಷ್ಠ ನೂರು ಪಟ್ಟು ಹೆಚ್ಚಾಗಬೇಕಿದೆ. ಇದಕ್ಕಾಗಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ವಿಷಯದಲ್ಲೇ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶವಿರುವ ‘ಶಿಕ್ಷಣ ವಿಭಾಗ’ಗಳನ್ನು ಆರಂಭಿಸಬೇಕು.ನಾಲ್ಕನೆಯದಾಗಿ ನಾವೀಗ ಅನುಸರಿಸುತ್ತಿರುವ ಮೌಲ್ಯಮಾಪನ ಪದ್ಧತಿ ಅಥವಾ ಪರೀಕ್ಷಾ ಪದ್ಧತಿಯನ್ನು ಬದಲಾಯಿಸಬೇಕು. ನಾವು ಈಗಾಗಲೇ ಎಂಟನೆಯ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಿರಂತರ ಮತ್ತು ಸಮಗ್ರ ಮೌಲ್ಯ ಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇದೊಂದು ಒಳ್ಳೆಯ ಬೆಳವಣಿಗೆ. ಶಾಲಾ ಮಟ್ಟದ ಅಂತಿಮ ಹಂತದ ಪರೀಕ್ಷೆಗಳನ್ನು ಸುಧಾರಿಸುವ ಕೆಲಸಕ್ಕೆ ಮುಂದಾಗಬೇಕಿದೆ.ಉರುಹಚ್ಚಿ ನೆನಪಿಟ್ಟುಕೊಂಡ ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಮಾದರಿಯಿಂದ ವಿದ್ಯಾರ್ಥಿಗಳು ವಿಷಯಗಳನ್ನು ಎಷ್ಟರ ಮಟ್ಟಿಗೆ ಪರಿಕಲ್ಪನಾತ್ಮಕವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಅರಿಯುವ, ಅವರ ಚಿಂತನೆಯ ಮಟ್ಟವನ್ನು ಅಳೆಯುವ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಐದನೆಯದಾಗಿ ನಾವು ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆ ಮಾಡುವ ಅಗತ್ಯವಿದೆ. ಮೂರರಿಂದ ಐದು ವರ್ಷಗಳ ಮಕ್ಕಳನ್ನು ನೋಡಿಕೊಳ್ಳುವ ಅಂಗನವಾಡಿ ವ್ಯವಸ್ಥೆಯೊಂದನ್ನು ಕಟ್ಟಿದ್ದೇವೆ. ಆದರೆ ಅದರ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಇಲ್ಲಿ ಮೂಲಸೌಕರ್ಯದಿಂದ ಆರಂಭಿಸಿ ಅನೇಕ ಸುಧಾರಣೆಗಳಿಗಾಗಿ ಹೂಡಿಕೆಯ ಅಗತ್ಯವಿದೆ.ಶಾಲೆಗಳ ಅಭಿವೃದ್ಧಿಗಾಗಿ 1985ರಿಂದ 2005ರ ಅವಧಿಯಲ್ಲಿ ಮಾಡಿದ ಪ್ರಯತ್ನಗಳನ್ನೇ ಇಲ್ಲಿ ಪುನರಾವರ್ತಿಸಬೇಕಾಗಿದೆ. ಆರೆನೆಯದಾಗಿ ನಾವು ಶೈಕ್ಷಣಿಕ ನಾಯಕತ್ವದ ಅಭಿವೃದ್ಧಿಯತ್ತ ತೀವ್ರವಾಗಿ ಗಮನಹರಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಆರಂಭಿಸಿ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವವರು ಹಾಗೆಯೇ ರಾಜ್ಯ ಮಟ್ಟದಲ್ಲಿರುವ ಅಧಿಕಾರಿಗಳ ಸಾಮರ್ಥ್ಯ ವರ್ಧನೆವರೆಗಿನ ಕೆಲಸಗಳಿವೆ. ಈ ಎಲ್ಲಾ ಹಂತದ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳು ವುದರಿಂದ ಆರಂಭಿಸಿ ಅವರನ್ನು ನಿರ್ವಹಿಸುವ ವಿಧಾನದಲ್ಲೂ ಬದಲಾವಣೆಯಾಗಬೇಕು.ಏಳನೆಯದಾಗಿ ಎಲ್ಲೆಲ್ಲಿ ಶಾಲೆಗಳಿವೆ ಎಂಬುದನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿ ಅವುಗಳು ಎಲ್ಲಿದ್ದರೆ ಹೆಚ್ಚು ಅನುಕೂಲ ಎಂಬ ತೀರ್ಮಾನಕ್ಕೆ ಬರಬೇಕು. ಜನ ವಸತಿ ಮತ್ತು ಸರ್ಕಾರಿ ಶಾಲೆಗಳಿಗಿರುವ ಅಂತರದ ಅನುಪಾತದ ಮಾದರಿ ಶಾಲೆಗಳನ್ನು ವಿದ್ಯಾರ್ಥಿಗಳ ಬಳಿಗೆ ಕೊಂಡೊಯ್ದಿದೆ. ಆದರೆ ಇದು ಕೆಲವು ಹೊಸ ಸಮಸ್ಯೆಗಳನ್ನೂ ಹುಟ್ಟು ಹಾಕಿದೆ.ಎಲ್ಲಾ ಪ್ರದೇಶಗಳಿಗೂ ಒಂದೇ ನೀತಿಯನ್ನು ಅನುಸರಿಸುವ ಬದಲಿಗೆ ಭೌಗೋಳಿಕ ಹಿನ್ನೆಲೆ, ಸಂಪರ್ಕ, ಜನಸಂಖ್ಯೆ ಮತ್ತು ವಲಸೆಯ ಪ್ರಮಾಣ ಇತ್ಯಾದಿಗಳನ್ನು ಪರಿಗಣಿಸಿ ಶಾಲೆ ಎಲ್ಲಿದ್ದರೆ ಹೆಚ್ಚು ಅನುಕೂಲ ಎಂಬುದನ್ನು ನಿರ್ಧರಿಸಬೇಕು. ಹೀಗೆ ಮಾಡುವುದರಿಂದ ಒಂದಷ್ಟು ಹೊಸ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಹೊಸತಾಗಿ ಆರಂಭಿಸ ಬೇಕಾಗಬಹುದು.ಇದರಿಂದ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ನಿವಾರಿಸಿಕೊಳ್ಳಲು ಪೂರ್ವ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು (ಅಂಗನವಾಡಿಯಿಂದ ಮೂರನೆಯ ತರಗತಿಯ ತನಕ) ಒಟ್ಟಾಗಿ ಇರುವಂತೆ ನೋಡಿಕೊಳ್ಳುವುದು ಹಾಗೆಯೇ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾಧ್ಯಮಿಕ ಹಂತದ ಶಾಲೆಗಳು ಒಟ್ಟಾಗಿ ಇರುವಂತೆ ಹೊಂದಿಸಿಕೊಳ್ಳುವುದು ಇತ್ಯಾದಿಗಳ ಮೂಲಕ ಇದನ್ನು ಸಾಧಿಸಬಹುದು. ಇದರ ಹೊರತಾದ ಉಪಾಯಗಳನ್ನೂ ಅವಲಂಬಿಸಬಹುದು. ಏನೇ ಮಾಡಿದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಸ್ಥಳದಲ್ಲಿ ಶಾಲೆ ಇರುವಂತೆ ನೋಡಿಕೊಳ್ಳಬೇಕು.ಎಂಟನೆಯದ್ದು ಭಾಷೆಯ ವಿಚಾರ. ಬೋಧನಾ ಮಾಧ್ಯಮವನ್ನು ನಿರ್ಧರಿಸುವುದಕ್ಕೆ ಸರಳ ಸೂತ್ರವಿದೆ. ಕಲಿಕೆಗೆ ಅನುಕೂಲವಾಗುವ ಭಾಷೆ ಯಾವುದೋ ಅದು ಬೋಧನೆಯ ಮಾಧ್ಯಮವಾಗಿರಬೇಕು. ಪುಟ್ಟ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಚೆನ್ನಾಗಿ ಕಲಿಯುತ್ತಾರೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಅಂದರೆ ಐದನೇ ತರಗತಿಯ ತನಕವೂ ಮಾತೃಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕು.ಈ ವಿಷಯದಲ್ಲಿ ಪ್ರಾಯೋಗಿಕ ನಿಲುವನ್ನು ತಳೆಯಬೇಕೇ ಹೊರತು ಆದರ್ಶ ನಿಲುವನ್ನಲ್ಲ. ಏಕೆಂದರೆ ಒಂದು ರಾಜ್ಯದಲ್ಲಿ ಅನೇಕ ಮಾತೃಭಾಷೆಗಳಿರಬಹುದು ಈ ಎಲ್ಲಾ ಭಾಷೆಗಳಲ್ಲಿಯೂ ಶಿಕ್ಷಣ ಒದಗಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಹಾಗೆಯೇ ಪಠ್ಯಕ್ರಮ ಮತ್ತು ಶಾಲೆಯೊಳಗಿನ ಚಟುವಟಿಕೆಗಳಲ್ಲಿ ಮಗುವಿನ ಭಾಷೆಯನ್ನು ಬಳಸುವುದಕ್ಕೆ ಶಿಕ್ಷಕರಿಗೆ ಪ್ರೋತ್ಸಾಹ ನೀಡಬೇಕು. ಇದು ಬೋಧನಾ ಮಾಧ್ಯಮವಾಗಿರುವ ಭಾಷೆಯೇ ಆಗಿರಬೇಕೆಂದೇನೂ ಇಲ್ಲ.ನಾವು ಮಗುವಿನ ಭಾಷಾ ಕಲಿಕಾ ಸಾಮರ್ಥ್ಯವನ್ನು ತಪ್ಪಾಗಿ ಅಂದಾಜಿಸುತ್ತಿದ್ದೇವೆ ಅನ್ನಿಸುತ್ತಿದೆ. ವಾಸ್ತವ ಹೀಗಿಲ್ಲ. ನಾವು ಒಂದು ಮತ್ತು ಎರಡನೇ ತರಗತಿಗಳಲ್ಲಿ ಬಹು ಭಾಷೆಗಳನ್ನು ಪರಿಚಯಿಸುವ ಅಗತ್ಯವಿದೆ. ಕನ್ನಡ ನಮ್ಮ ರಾಜ್ಯದ ಭಾಷೆ, ಅದು ಪಠ್ಯಕ್ರಮದ ಭಾಗವಾಗಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಇಂಗ್ಲಿಷ್ ಕೂಡಾ ಇರಬೇಕು (ಸೈದ್ಧಾಂತಿಕ ನಿಲುವುಗಳೇನೇ ಇದ್ದರೂ). ಏಕೆಂದರೆ ಅದು ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಯ ಭಾಷೆಯಾಗಿ ಬೆಳೆಯುತ್ತಲೇ ಇದೆ. ಹಾಗೆಯೇ ಹಿಂದಿಯನ್ನೂ ಸೇರಿಸಿಕೊಳ್ಳಬೇಕು ಇದು ದೇಶದೊಳಗೆ ಅನುಕೂಲಕ್ಕೆ ಬರುವ ಭಾಷೆ.ಐದನೇ ತರಗತಿಯ ನಂತರ ಬೋಧನಾ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರಬೇಕು. ಕರ್ನಾಟಕದ ಸಂದರ್ಭದಲ್ಲಿ ಇದು ಕನ್ನಡ ಅಥವಾ ಇಂಗ್ಲಿಷ್‌ಗಳಲ್ಲಿ ಒಂದಾಗಿರಬಹುದು. ಆದರೆ ಯಾವುದೇ ಕಾರಣಕ್ಕೂ ಬೋಧನಾ ಮಾಧ್ಯಮದ ಹೇರಿಕೆ ಸಲ್ಲದು. ಈ ಆಯ್ಕೆಯನ್ನು ವಿದ್ಯಾರ್ಥಿ ಮತ್ತು ಆತ ಅಥವಾ ಆಕೆಯ ಕುಟುಂಬದ ನಿರ್ಧಾರಕ್ಕೆ ಬಿಟ್ಟು ಬಿಡಬೇಕು.ಒಂಬತ್ತನೆಯ ವಿಚಾರ ಒಟ್ಟು ಪಠ್ಯಕ್ರಮಕ್ಕೆ ಸಂಬಂಧಿಸಿದ್ದು. ಇದು ಶಿಕ್ಷಣದ ಒಟ್ಟಾರೆ ಗುರಿಯನ್ನು ಸಾಧಿಸುವುದಕ್ಕೆ ಅನುವು ಮಾಡಿಕೊಡುವಂತಿರಬೇಕು. ಪಠ್ಯಕ್ರಮದಿಂದ ಪುಸ್ತಕಗಳ ತನಕ, ಬೋಧನಾ ತಂತ್ರದಿಂದ ಶಾಲಾ ಸಂಸ್ಕೃತಿವರೆಗಿನ ಎಲ್ಲೆಡೆಯೂ ಇದು ಪ್ರತಿಬಿಂಬಿಸಬೇಕು. ಪಠ್ಯಕ್ರಮ ಶೈಕ್ಷಣಿಕವಾಗಿ ಪ್ರಬಲವಾಗಿರಬೇಕಷ್ಟೇ ಅಲ್ಲದೆ ಅದನ್ನು ನಿಯತವಾಗಿ ಮರುಪರಿಶೀಲನೆ ಮಾಡುವ ವ್ಯವಸ್ಥೆಯೊಂದಿರಬೇಕು.ಶಿಕ್ಷಣೇತರ ವಿಚಾರಗಳು ಅಂದರೆ ವಾಣಿಜ್ಯಿಕ, ರಾಜಕೀಯ ವಿಚಾರಗಳು ಪಠ್ಯಕ್ರಮವನ್ನು ಯಾವುದೇ ಕಾರಣಕ್ಕೂ ಪ್ರಭಾವಿಸಬಾರದು. ಅಗತ್ಯ ಪರಿಣತಿ ಇರುವ ತಜ್ಞರನ್ನು ಒಳಗೊಂಡಿರುವ ಸ್ವತಂತ್ರ, ಸ್ವಾಯತ್ತ ಮತ್ತು ಸಶಕ್ತವಾಗಿರುವ ‘ರಾಜ್ಯ ಪಠ್ಯಕ್ರಮ ಪರಿಷತ್ತಿ’ನಂಥ ವ್ಯವಸ್ಥೆ ಇದ್ದರೆ ಈ ಗುರಿಯನ್ನು ಸಾಧಿಸಬಹುದು.ಹತ್ತನೆಯದು ದುರ್ಬಲ ವರ್ಗಗಳ ಸಮಸ್ಯೆ. ಎಲ್ಲರಿಗೂ ಎಲ್ಲೆಡೆಯೂ ಸಮಾನವಾದ ಶಿಕ್ಷಣವನ್ನು ನೀಡುವ ಗುರಿಯನ್ನು ಇಟ್ಟುಕೊಂಡೇ ಶೈಕ್ಷಣಿಕ ಯೋಜನೆಗಳನ್ನು ರೂಪಿಸಬೇಕು. ಆದರೆ ದುರ್ಬಲ ವರ್ಗಗಳ ವಿಚಾರ ಬಂದಾಗ ಇದನ್ನು ಸಾಧಿಸುವುದಕ್ಕೆ ಹೆಚ್ಚು ಒತ್ತು ಮತ್ತು ಹೂಡಿಕೆ ಅಗತ್ಯ ಎಂಬುದನ್ನು ಮರೆಯಬಾರದು. ದೌರ್ಬಲ್ಯ ಎಂಬುದು ಬಹು ಆಯಾಮದ ಸಂಗತಿ.ಇವುಗಳೆಲ್ಲವನ್ನೂ ಪರಿಗಣಿಸಿ ಮುಂದುವರಿಯಬೇಕು. ಇದರಲ್ಲಿ ಲಿಂಗ, ಜಾತಿ, ಬಡತನ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳ ಸಮಸ್ಯೆಗಳಿರುವಂತೆಯೇ ನಿರ್ದಿಷ್ಟ ಭೂ ಪ್ರದೇಶಗಳೂ ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗಿರಬಹುದು ಎಂಬುದನ್ನು ಮರೆಯಬಾರದು. ಕರ್ನಾಟಕದ ಈಶಾನ್ಯ ಭಾಗ ಅಥವಾ ಹೈದರಾಬಾದ್ ಕರ್ನಾಟಕ ಇಂಥದ್ದೊಂದು ಪ್ರದೇಶ. ಇಲ್ಲಿನ ಅಗತ್ಯಗಳನ್ನು ಮನಗಂಡು ಆ ಸಮಸ್ಯೆಗಳನ್ನು ನಿವಾರಿಸುವುದಕ್ಕೂ ಒತ್ತು ನೀಡಬೇಕು.ಶಿಕ್ಷಣದ ಸುಧಾರಣೆಗೆ ಅಗತ್ಯವಿರುವ ಕ್ರಮಗಳ ಎಲ್ಲಾ ಆಯಾಮಗಳನ್ನು ಪಟ್ಟಿ ಮಾಡುವುದು ಅಸಾಧ್ಯ. ಮೇಲಿನ ಪಟ್ಟಿಗೆ ಸೇರಿಸಬಹುದಾದ ಇನ್ನೂ ಕೆಲವು ವಿಚಾರಗಳಿವೆ.ಉದಾಹರಣೆಗೆ ಶಾಲಾ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರುವ ಪದವಿ ಪೂರ್ವ ಶಿಕ್ಷಣವನ್ನು ಸುಧಾರಿಸಿ ವಿಸ್ತರಿಸುವುದು, ಶಾಲೆ ಮತ್ತು ಅದರ ನಿರ್ವಹಣೆಯಲ್ಲಿ ಸಮುದಾಯಗಳು ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು, ಡಯಟ್‌ನಂಥ ಸಂಸ್ಥೆಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರಗಳನ್ನು ಸುಧಾರಿಸುವುದು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ನೇಮಕಾತಿ ಹಾಗೆಯೇ ಆಡಳಿತಾತ್ಮಕ ಹೊರೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಕಡಿಮೆ ಮಾಡಿ ಶೈಕ್ಷಣಿಕ ಆಡಳಿತವನ್ನು ಪರಿಣಾಮಕಾರಿಯಾಗಿಸುವುದು ಮುಂತಾದುವುಗಳೂ ಈ ಪಟ್ಟಿಗೆ ಸೇರಲು ಅರ್ಹ ವಿಚಾರಗಳು.ಶಿಕ್ಷಣ ಕ್ಷೇತ್ರವನ್ನು ಮಾತ್ರ ಪರಿಗಣಿಸಿ ಅದರ ಸುಧಾರಣೆಯ ಕುರಿತು ಚಿಂತಿಸಲು ಸಾಧ್ಯವಿಲ್ಲ. ಈ ಕ್ಷೇತ್ರದ ಸಂಕೀರ್ಣ ಸಮಸ್ಯೆಗಳ ಜೊತೆಗೇ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆಯೂ ಆಲೋಚಿಸಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಶೈಕ್ಷಣಿಕ ಸುಧಾರಣೆಯ ಕಾರ್ಯಸೂಚಿಯೊಂದು ಅನುಷ್ಠಾನಕ್ಕೆ ಬರುವುದಕ್ಕೆ ಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಕರ್ನಾಟಕದ ಏಕೀಕರಣಕ್ಕೆ ನೂರು ವರ್ಷ ತುಂಬುವ ಹೊತ್ತನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಅದು ಸಾಧ್ಯವಾಗುತ್ತದೆ ಎಂಬ ನಂಬಿಕೆಯಲ್ಲಿ ಮುಂದುವರಿಯಬೇಕಾಗುತ್ತದೆ.

(ಲೇಖಕರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕುಲಪತಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.