ಸಾಹಸಿ ಚಿಣ್ಣರಿಗೆ ದೇಶಸೇವೆ ಕನಸು

7
ಬೆಂಗಳೂರಿನಲ್ಲಿ ಮಕ್ಕಳ ಕಲ್ಯಾಣ ಪ್ರಶಸ್ತಿ ಪ್ರದಾನ

ಸಾಹಸಿ ಚಿಣ್ಣರಿಗೆ ದೇಶಸೇವೆ ಕನಸು

Published:
Updated:
ಸಾಹಸಿ ಚಿಣ್ಣರಿಗೆ ದೇಶಸೇವೆ ಕನಸು

ಬೆಂಗಳೂರು: ‘ದೊಡ್ಡವನಾದ ಮೇಲೆ ಸೈನ್ಯ ಸೇರಿ  ದೇಶಸೇವೆ ಮಾಡುತ್ತೇನೆ’ ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯನನ್ನು ರಕ್ಷಿಸಿದ್ದಕ್ಕಾಗಿ ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದ ಕೊಡಗು ಜಿಲ್ಲೆಯ ಅರಮೇರಿ ಗ್ರಾಮದ ಎಚ್‌.ಎ.ನಿತಿನ್‌ (14 ವರ್ಷ) ಕನಸು ಇದು.ಕ್ರೀಡಾಕೂಟದಿಂದ ಮರಳುವಾಗ ಕಾಲು ಜಾರಿ ಕೆರೆಗೆ ಬಿದ್ದು ಮುಳುಗುತ್ತಿದ್ದ ಗೆಳೆಯ ಸೂಫಿಯಾನ್‌ನನ್ನು (2016ರ  ಜುಲೈ 17ರಂದು)  ನಿತಿನ್‌ ರಕ್ಷಿಸಿದ್ದ.  ಅಚ್ಚರಿ ಎಂದರೆ ನಿತಿನ್‌ಗೂ ಈಜು ಬಾರದು. ಕೈಯಲ್ಲಿದ್ದ ಕೊಡೆಯನ್ನು ಗೆಳೆಯನತ್ತ ಚಾಚಿ ದಡಕ್ಕೆ ತಲುಪಲು ನೆರವಾಗಿದ್ದ.ನೀರಿನಲ್ಲಿ ಮುಳುಗುತ್ತಿದ್ದ ಇನ್ನೊಬ್ಬ ಗೆಳೆಯನನ್ನು ರಕ್ಷಿಸಲಾಗಲಿಲ್ಲ ಎಂಬ ಕೊರಗು ನಿತಿನ್‌ಗೆ ಇದೆ.‘ಗೆಳೆಯ ಸಲಾವುದ್ದೀನ್‌ಗೂ ಕೊಡೆ ಚಾಚಿದೆ. ಅಷ್ಟರಲ್ಲೇ ಕೊಡೆ ಕಿತ್ತು ಹೋಯಿತು’ ಎಂದು ಆತ ಬೇಸರ ತೋಡಿಕೊಂಡ.‘ಸೈನಿಕರು ದೇಶದ ನಾನಾ ಭಾಗಗಳಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗುವುದನ್ನು ನೋಡಿದ್ದೇನೆ. ಅವರಂತೆಯೇ ಆಗಲು ನಾನು ಬಯಸುತ್ತೇನೆ’ ಎಂದು ನಿತಿನ್‌ ಹೆಮ್ಮೆಯಿಂದ ಹೇಳಿದ. ಅವನ ತಂದೆ ಎಚ್‌.ಕೆ.ಅಣ್ಣಯ್ಯ ಕೂಲಿ ಕಾರ್ಮಿಕ. ತಾಯಿ ಅನಿತಾ ಗೃಹಿಣಿ.‘ಮಗನ ಸಾಹಸ ಕಾರ್ಯದಿಂದ ನಮಗೂ ಗೌರವ ಬಂದಿದೆ’ ಎಂದು ಅಣ್ಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.ವೈದ್ಯನಾಗುತ್ತೇನೆ: ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದ  ಬಾಲಕ ಡಿ.ಆರ್‌.ಚಿರಂತ್‌ಗೆ (14 ವರ್ಷ) ವೈದ್ಯನಾಗಿ ಜನರ ಸೇವೆ ಮಾಡುವ ಆಸೆ.

ಈತನದು ಶಿವಮೊಗ್ಗ ಜಿಲ್ಲೆಯ ಅಮಟೆಕೊಪ್ಪ ಗ್ರಾಮ.  ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನ ಕೆರೆಯ ಪಕ್ಕದಲ್ಲಿ ಉರುಳಿ ಬಿದ್ದಾಗ (2015ರ ನವೆಂಬರ್‌ 25ರಂದು) ಅದರ ಒಳಗಿದ್ದ ಇತರ ಮಕ್ಕಳನ್ನು ರಕ್ಷಿಸಿದ್ದ.‘ವಾಹನದ ಹಿಂಭಾಗ  ನೀರಿನಲ್ಲಿ ಮುಳುಗಿತ್ತು. ಹಾಗಾಗಿ ನಾನು ಮುಂದಿನ ಗಾಜನ್ನು ಒಡೆದು ನಾಲ್ಕು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದೆ. ಇದಕ್ಕೆ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ನನ್ನ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಗುರುತಿಸಿದ್ದು ಖುಷಿಕೊಟ್ಟಿದೆ’ ಎಂದು ಚಿರಂತ್‌ ತಿಳಿಸಿದರು. ಅವನ ತಂದೆ ರಂಗಸ್ವಾಮಿ ಮಾಜಿ ಸೈನಿಕ. ತಾಯಿ ಸುಧಾ ಗೃಹಿಣಿ.ಪ್ರಶಸ್ತಿ ಪ್ರದಾನ: ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಪಾತ್ರಳಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಕೊತ್ತೂರುಪಲ್ಲಿಯ ಕೆ.ಎಸ್‌ ಸುಕನ್ಯ. ಆದರೆ ಪ್ರಶಸ್ತಿ ಸ್ವೀಕರಿಸಲು ಆಕೆಯೇ ಇಲ್ಲ. ಕೆರೆಯಲ್ಲಿ ಮುಳುಗುತ್ತಿದ್ದ (2015ರ ನವೆಂಬರ್‌ 28ರಂದು) ಬಾಲಕಿಯನ್ನು ರಕ್ಷಿಸಿದ ಸುಕನ್ಯ, ಅದೇ ಕೆರೆಯ ಹೂಳಿನಲ್ಲಿ ಸಿಕ್ಕಿ ಜಲಸಮಾಧಿಯಾದಳು. ಈ ಸಾಹಸಿ ಮಗಳ ಪರವಾಗಿ ತಾಯಿ ಪ್ರಶಸ್ತಿ ಸ್ವೀಕರಿಸಿದರು.ವಿದ್ಯಾರ್ಥಿಗಳಿದ್ದ ವಾಹನದಲ್ಲಿ  ಬೆಂಕಿ ಕಾಣಿಸಿಕೊಂಡಾಗ (2016 ಜೂನ್ 6ರಂದು) ತುರ್ತು ಬಾಗಿಲು  ತೆರೆದು ತಾವೂ ಜಿಗಿದು, ಇತರ ಮಕ್ಕಳ ಪ್ರಾಣ ಉಳಿಸಿದ ಮೈಸೂರು ಜಿಲ್ಲೆಯ ಶ್ರೇಯಸ್‌ ಎನ್‌.ರಾವ್‌ (14 ವರ್ಷ) ಮತ್ತು ಜಿ.ಎಂ.ಶಶಿಕುಮಾರ್‌ (14 ವರ್ಷ) ಕೂಡ ಹೊಯ್ಸಳ ಪ್ರಶಸ್ತಿಗೆ ಪಾತ್ರರಾದರು.

ಇವರಿಗೆಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರೀ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಧೈರ್ಯ ಮತ್ತು ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ನೀಡುವ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ₹ 10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿದೆ.ಮಕ್ಕಳ ಅಭಿವೃದ್ಧಿಗೆ ಶ್ರಮಿಸಿದ ನಾಲ್ಕು  ಸಂಸ್ಥೆಗಳಿಗೆ (₹ 1 ಲಕ್ಷ ಮೊತ್ತ) ಹಾಗೂ ನಾಲ್ವರು ವ್ಯಕ್ತಿಗಳಿಗೆ (₹ 25 ಸಾವಿರ) ಮಕ್ಕಳ ಕಲ್ಯಾಣ ಪ್ರಶಸ್ತಿ ಪ್ರದಾನ ಮಾಡಲಾಯಿತು. 17 ಮಕ್ಕಳಿಗೆ ಅಸಾಧಾರಣ ಪ್ರತಿಭೆ ಪುರಸ್ಕಾರ ನೀಡಿ ಗೌರವಿಸಲಾಯಿತು.

*

ಅಸಾಧಾರಣ ಪ್ರತಿಭಾ ಪುರಸ್ಕಾರ ಪಡೆದವರು

ಸಾಕ್ಷಿ ಎಸ್‌.ಕೊಳೇಕರ್‌, ಬೆಳಗಾವಿ- ಕಲೆ

ಶ್ರೀರಕ್ಷಾ, ಮಂಗಳೂರು - ಕಲೆ

ಎಚ್‌.ವಿ.ಸಾಕೃತ್‌, ದೊಡ್ಡಬಳ್ಳಾಪುರ -ಕ್ರೀಡೆ

ವಿ.ವರ್ಷಾ, ಮಂಗಳೂರು- ಕ್ರೀಡೆ

ಅಜಿಂಕ್ಯ ಘನಶ್ಯಾಮ್ ಜೋಶಿ, ಬೆಳಗಾವಿ - ಕ್ರೀಡೆ

ಎಂ.ಕರಿಷ್ಮಾ ನಾಯಕ, ದಾವಣಗೆರೆ - ಕ್ರೀಡೆ

ಎ.ಸುನಾದ ಕೃಷ್ಣ, ಮಂಗಳೂರು - ಸಂಗೀತ

ಸೌಮ್ಯಶ್ರೀ ಹಿರೇಮಠ, ಬಳ್ಳಾರಿ - ಸಾಂಸ್ಕೃತಿಕ

ತುಳಸಿ ಹೆಗಡೆ, ಶಿರಸಿ - ಸಾಂಸ್ಕೃತಿಕ

ಎಚ್‌.ಎಂ.ಸಾಯಿ ಸಿಂಚನ, ಶಿವಮೊಗ್ಗ - ಸಾಂಸ್ಕೃತಿಕ

ಅದ್ವಿತಾ ಮಹಾದೇವ ಬಡಿಗೇರ, ವಿಜಯಪುರ - ಭಾಷಣ

ಸೀಮಾ ನಿಂಗಪ್ಪ ಶೆಟ್ಟರ್‌, ಕಾರಟಗಿ - ನಾವಿನ್ಯತೆ

ಪಿ.ಶ್ರಾವ್ಯಾ, ಸಿರಾ, ತುಮಕೂರು - ನಾವಿನ್ಯತೆ

ಮೈತ್ರಿ ಎಂ.ಬೈರಿ, ಮಣಿಪಾಲ, ಉಡುಪಿ - ಶಿಕ್ಷಣ

ಅಮೆಯ ಅತುಲ ಯಾಳಗಿ, ಅನಗೋಳ, ಬೆಳಗಾವಿ - ಶಿಕ್ಷಣ

ರಿತಿನ್‌ ಪಿ.ಬಿ. ಚಿತ್ರದುರ್ಗ - ಶಿಕ್ಷಣ

ಓಂ ಸ್ವರೂಪ್‌ ಗೌಡ, ಬಸವೇಶ್ವರನಗರ, ಬೆಂಗಳೂರು - ರೋಲರ್‌ ಸ್ಕೇಟಿಂಗ್‌

*

ಮಕ್ಕಳ ಕಲ್ಯಾಣ ಪ್ರಶಸ್ತಿ ಪಡೆದವರು

ಶ್ರೀರಾಮರೆಡ್ಡಿ, ಬೈರಪಲ್ಲಿ, ಕೋಲಾರ ಜಿಲ್ಲೆ:
 ಶ್ರೀ ಬೈರವೇಶ್ವರ ವಿದ್ಯಾನಿಕೇತನ ಸಂಸ್ಥೆಯ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ಸೌಕರ್ಯಗಳನ್ನು ಪೂರೈಸುತ್ತಿದ್ದಾರೆ. 3 ಸಾವಿರ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.ಶ್ರೀಧರ ಹಂದೆ, ಸಾಲಿಗ್ರಾಮ, ಉಡುಪಿ ಜಿಲ್ಲೆ: ಯಕ್ಷಗಾನ ಕಲೆಯ ಬಗ್ಗೆ  ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. 2500ಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದಿದ್ದಾರೆ.ನಾಗರತ್ನಾ ಸುನೀಲ ರಾಮಗೌಡ, ಬೆಳಗಾವಿ: ಎಚ್‌ಐವಿ ಸೋಂಕು ತಗಲಿದ ವ್ಯಕ್ತಿಗಳಿಗೆ ನೆರವಾಗಲು ‘ಸ್ಪಂದನಾ ನೆಟ್‌ವರ್ಕ್‌ ಆಫ್‌ ಪಾಸಿಟಿವ್‌ ಪೀಪಲ್‌’ ಸಂಸ್ಥೆ ಸ್ಥಾಪಿಸಿದ್ದಾರೆ. ಎಚ್‌ಐವಿ ಸೊಂಕು ಹೊಂದಿರುವ ಮಕ್ಕಳಿಗೆ ಆಪ್ತ ಸಮಾಲೋಚನೆ, ಮನರಂಜನೆ, ಆಹಾರ ಮತ್ತು ಕಲಿಕಾ ಸಾಮಗ್ರಿ ವಿತರಣೆ ಮಾಡುತ್ತಿದ್ದಾರೆ.ಫಾ.ಸಂತೋಷ್‌ ಬಾಪು, ಬಸವಕಲ್ಯಾಣ, ಬೀದರ್‌ ಜಿಲ್ಲೆ: ಸ್ಪರ್ಶ ಕೇರ್‌ ಹೋಂ ಸಂಸ್ಥೆ ಸ್ಥಾಪಿಸಿ, ಎಚ್‌ಐವಿ  ಸೋಂಕು ಹೊಂದಿರುವ ಮಕ್ಕಳ ಆರೈಕೆಗೆ ನೆರವಾಗುತ್ತಿದ್ದಾರೆ. ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇಂತಹ 120 ಮಕ್ಕಳಿಗೆ ಕೌಶಲ ಆಧಾರಿತ ತರಬೇತಿ ಒದಗಿಸಿದ್ದಾರೆ.

*

ಮಕ್ಕಳ ಕಲ್ಯಾಣ ಪ್ರಶಸ್ತಿ ಪಡೆದ ಸಂಸ್ಥೆಗಳು

ಅಕ್ಷರ ಫೌಂಡೇಷನ್‌, ಬಾಣಸವಾಡಿ, ಬೆಂಗಳೂರು: ಮಕ್ಕಳ ಭಾಷೆ ಹಾಗೂ ಗಣಿತ ಕೌಶಲ ಅಭಿವೃದ್ಧಿಗೆ ಶ್ರಮಿಸುತ್ತಿದೆ. 9 ಲಕ್ಷ ವಿದ್ಯಾರ್ಥಿಗಳು ಸಂಸ್ಥೆಯ ಪ್ರಯೋಜನ ಪಡೆದಿದ್ದಾರೆ

ಪೇರೆಂಟ್ಸ್‌ ಅಸೋಸಿಯೇಷನ್‌, ಮೈಸೂರು: ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳ ಪೋಷಕರಿಗೆ ಮಾರ್ಗದರ್ಶನ, ಕಿವುಡ ಮಕ್ಕಳಿಗೆ ತರಬೇತಿ ನೀಡುತ್ತಿದೆ. 1 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದಿದ್ದಾರೆಅಂತ್ಯೋದಯ ಸಮಾಜ ಸೇವಾ ಸಂಸ್ಥೆ, ಮುಧೋಳ, ಬಾಗಲಕೋಟೆ ಜಿಲ್ಲೆ: ಮುಧೋಳ ತಾಲ್ಲೂಕಿನ ಆಯ್ದ 35 ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಹಕ್ಕು ಕ್ಲಬ್‌ಗಳನ್ನು ಕ್ರಿಯಾಶೀಲಗೊಳಿಸಿದೆ. 10 ಹಳ್ಳಿಗಳಲ್ಲಿ ಮಕ್ಕಳ ಸಂಸತ್ತು ಹಾಗೂ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮದ ಮೂಲಕ ದಲಿತ ವಿದ್ಯಾರ್ಥಿಗಳ ಸಬಲೀಕರಣ. 20 ಬಾಲ್ಯವಿವಾಹಗಳನ್ನು ತಡೆದಿದೆ.ಮಾರ್ಗದರ್ಶಿ ಸೊಸೈಟಿ, ಕಲಬುರ್ಗಿ: ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರಿಗೆ ಜಾಗೃತಿ  ಮೂಡಿಸುತ್ತಿದೆ. ಆಪರೇಷನ್‌ ಸ್ಮೈಲ್‌ ಕಾರ್ಯಕ್ರಮದಡಿ 81 ಮಕ್ಕಳ ರಕ್ಷಣೆ ಮಾಡಿದೆ.

*

ಮಕ್ಕಳೇ ರಚಿಸಿದ ಕಥಾ ಸಂಕಲನ ‘ಸಂಕಲ್ಪ’ ಬಿಡುಗಡೆ

ಬಾಲ ಮಂದಿರದಲ್ಲಿ ಆಶ್ರಯ ಪಡೆದ ಮಕ್ಕಳು ರಚಿಸಿದ ಸಣ್ಣಕತೆಗಳನ್ನು ಒಳಗೊಂಡ ಕಥಾಸಂಕಲನ ‘ಸಂಕಲ್ಪ’ವನ್ನು ಸಚಿವೆ ಉಮಾಶ್ರೀ ಬಿಡುಗಡೆ ಮಾಡಿದರು. ‘ಬಾಲಮಂದಿರದಲ್ಲಿರುವ ಮಕ್ಕಳಲ್ಲಿ ದುಃಖ ಮಡುಗಟ್ಟಿರುತ್ತದೆ. ನೋವಿನಿಂದ ಹೊರಬರಲು ಸೃಜನಶೀಲ ಚಟುವಟಿಕೆ ನೆರವಾಗುತ್ತದೆ. ಬಾಲಮಂದಿರದಲ್ಲಿ ಇಂತಹ ಚಟುವಟಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಹಾಗಾಗಿ ಅನೇಕ ಬಾಲ ಕಲಾವಿದರು, ಕವಿಗಳು, ಕತೆಗಾರರು ರೂಪುಗೊಂಡಿದ್ದಾರೆ’ ಎಂದು ಉಮಾಶ್ರೀ ತಿಳಿಸಿದರು.

*

ಬಾಲವಿಜ್ಞಾನಿಗೆ ವೈದ್ಯಕೀಯ ಸಂಶೋಧನೆ ಕೈಗೊಳ್ಳುವಾಸೆ

ವೈದ್ಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಬೇಕು ಎಂಬುದು ಕೊಪ್ಪಳ ಜಿಲ್ಲೆ  ಕಾರಟಗಿಯ ಸೀಮಾ ನಿಂಗಪ್ಪ ಶೆಟ್ಟರ್‌ (14) ಆಸೆ. ವಿಜ್ಞಾನ ಶಿಕ್ಷಕ ದೇವೇಂದ್ರ ವಡ್ಡೋಡಗಿ ಅವರ ಮಾರ್ಗದರ್ಶನದಲ್ಲಿ ಈಕೆ ಅಭಿವೃದ್ಧಿಪಡಿಸಿದ ಡಿಜಿಟಲ್‌ ಸೂಕ್ಷ್ಮದರ್ಶಕಕ್ಕೆ 2015–16ನೇ ಸಾಲಿನ ‘ಇನ್‌ಸ್ಪೈರ್‌’ ರಾಷ್ಟ್ರ ಪ್ರಶಸ್ತಿ  ಸಿಕ್ಕಿತ್ತು.‘ಈ ಸೂಕ್ಷದರ್ಶಕದ ಮೂಲಕ  ಏಕಕಾಲದಲ್ಲಿ ಅನೇಕ ಮಂದಿ ವಸ್ತುವನ್ನು ವೀಕ್ಷಿಸಬಹುದು. ಜೀವವಿಜ್ಞಾನ ಅಧ್ಯಾಪಕರು  ರಕ್ತದ ಕಣಗಳು, ಜೀವಕೋಶಗಳು, ಸೂಕ್ಷ್ಮಾಣುಜೀವಿಗಳಿಗೆ ಸಂಬಂಧಿಸಿದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಬಹುದು’ಎನ್ನುತ್ತಾಳೆ ಸೀಮಾ.  

ಶರಣಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ಸೀಮಾ, ಜಪಾನ್‌ನಲ್ಲಿ ನೊಬೆಲ್‌ ವಿಜ್ಞಾನಿಗಳ ಜೊತೆ ನಡೆಯುವ ಸಂವಾದ ಕಾರ್ಯಕ್ರಮಕ್ಕೆ  ಆಯ್ಕೆ ಆಗಿದ್ದಾಳೆ. ಅವಳ ತಂದೆ ನಿಂಗಪ್ಪ ಶೆಟ್ಟಿ ವ್ಯಾಪಾರಿ. ತಾಯಿ ಚೇತನಾ ಗೃಹಿಣಿ.‘ಬಿಡುವಿನ ವೇಳೆ ಮಗಳೂ ವ್ಯಾಪಾರಕ್ಕೆ ನೆರವಾಗುತ್ತಿದ್ದಳು. ಆಕೆಯ ಸಾಧನೆ ಬಗ್ಗೆ ಹಮ್ಮೆ ಮೂಡಿದೆ. ಇನ್ನಷ್ಟು ಚೆನ್ನಾಗಿ ಓದಲಿ ಎಂಬ ಕಾರಣಕ್ಕೆ ಈಗ ವಿದ್ಯಾರ್ಥಿನಿಲಯಕ್ಕೆ ಸೇರಿಸಿದ್ದೇವೆ. ಹೆಣ್ಣು ಮಕ್ಕಳೂ ಪೋಷಕರಿಗೆ ಗೌರವ ತರಬಲ್ಲರು ಎಂಬುದನ್ನು ನನ್ನ ಮಗಳು ತೋರಿಸಿಕೊಟ್ಟಿದ್ದಾಳೆ. ಇಂತಹ ಮಗಳನ್ನು ಪಡೆದ ನಾನು ಧನ್ಯ’ ಎನ್ನುತ್ತಾರೆ ನಿಂಗಪ್ಪ ಶೆಟ್ಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry