ಪರ್ಯಾಯ ಆರ್ಥಿಕತೆಗೆ ಕಡಿವಾಣ

7

ಪರ್ಯಾಯ ಆರ್ಥಿಕತೆಗೆ ಕಡಿವಾಣ

Published:
Updated:
ಪರ್ಯಾಯ ಆರ್ಥಿಕತೆಗೆ ಕಡಿವಾಣ

ಪ್ರಧಾನಿ  ನರೇಂದ್ರ ಮೋದಿ ಅವರು ಕಳೆದ ವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಚಲಾವಣೆಯಲ್ಲಿರುವ ₹ 500 ಹಾಗೂ 1000 ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಪಡೆಯಲಾಗಿದೆ ಎಂದು ಘೋಷಿಸಿದಾಗ, ಇಡೀ ದೇಶ ತಲ್ಲಣಗೊಂಡಿತು. ನೋಟಿನ ಮುದ್ರಣ ರಾಷ್ಟ್ರೀಯ ಒಟ್ಟು ಉತ್ಪನ್ನವನ್ನು (ಜಿಡಿಪಿ)   ಅವಲಂಬಿಸಿದರೂ, ಕಪ್ಪು ಹಣದ ವಹಿವಾಟು ಹಾಗೂ ಖೋಟಾ ನೋಟುಗಳಂತಹ ಸಮಾನಾಂತರ ಆರ್ಥಿಕ ವ್ಯವಸ್ಥೆಯ ಕಾರಣಕ್ಕೆ  ಹಣದುಬ್ಬರದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಜೊತೆಗೆ, ಇಂತಹ ಸಮಾನಾಂತರ ಆರ್ಥಿಕ ವ್ಯವಸ್ಥೆಯಿಂದಾಗಿ ದೇಶದ ಭದ್ರತೆಗೆ  ಧಕ್ಕೆ  ಉಂಟಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಆರ್ಥಿಕ ವ್ಯವಸ್ಥೆ ಸುಗಮಗೊಳಿಸಲು ಪ್ರಧಾನಿ ಒಂದು ದಿಟ್ಟ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು.

 

ಕಪ್ಪುಹಣ ಮತ್ತೆ ಚಲಾವಣೆಗೆ ಬರಬಾರದು  ಎನ್ನುವ ಮೂಲ ಉದ್ದೇಶದಿಂದ, ದೊಡ್ಡ ಮುಖ ಬೆಲೆಯ ನೋಟುಗಳನ್ನು, ಬ್ಯಾಂಕುಗಳಲ್ಲಿ ಸಣ್ಣ ಮುಖ ಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವ ಪ್ರಮಾಣ ತಗ್ಗಿಸಿರುವುದರಿಂದ ಜನ ಸಾಮಾನ್ಯರು ದಿನದ ವಹಿವಾಟಿಗೆ ಹಣವಿಲ್ಲದೆ ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಆದರೆ, ಇದು ತಾತ್ಕಾಲಿಕ ವ್ಯವಸ್ಥೆ.  10ರಿಂದ15 ದಿವಸಗಳಲ್ಲಿ ಹಣದ ಚಲಾವಣೆ ಸಹಜ ಸ್ಥಿತಿಗೆ ಮರುಕಳಿಸಲಿದೆ.

 

ನೆರೆ ರಾಷ್ಟ್ರಗಳಲ್ಲಿ ಹಾಗೂ ರಾಷ್ಟ್ರದ ಕೆಲವೆಡೆ ಖೋಟಾನೋಟುಗಳ ಮುದ್ರಣವಾಗುತ್ತಿದ್ದು, ಇಂತಹ ನೋಟುಗಳು ಚಲಾವಣೆಯಲ್ಲಿದ್ದಾಗ ವಸ್ತುಗಳನ್ನು ಖರೀದಿಸುವ ಕೆಲವೇ ಜನರ ಸಾಮರ್ಥ್ಯ ಹೆಚ್ಚಾಗಿ ವಸ್ತುಗಳ ಬೆಲೆ ಗಗನಕ್ಕೇರುವುದು ಸಹಜ. ಇದರಿಂದಾಗಿ ಅಧಿಕ ಸಂಖ್ಯೆಯಲ್ಲಿರುವ ಜನ ಸಾಮಾನ್ಯರು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇದನ್ನೇ ಹಣದುಬ್ಬರ   ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಏರುಪೇರಾಗುತ್ತದೆ. 

 

ಇನ್ನೊಂದೆಡೆ ಇಂತಹ ಕಪ್ಪುಹಣ   ದೇಶದ ವಿರುದ್ಧ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ ದುಷ್ಕರ್ಮಿಗಳ ವಶವಾದಾಗ ಇಡೀ ರಾಷ್ಟ್ರದ ಅರ್ಥ ವ್ಯವಸ್ಥೆಯು ಅಪಾಯಕ್ಕೆ ಸಿಲುಕುತ್ತದೆ.  ತೆರಿಗೆಗೆ ಒಳಪಡದ ಕಪ್ಪುಹಣ ಕೆಲವೇ ಜನರಲ್ಲಿ ಸಂಗ್ರಹವಾಗುವುದರಿಂದ ಜನ ಸಾಮಾನ್ಯರು  ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಾರೆ.

 

ಜನರು ಸಂಪಾದಿಸಿದ ಹಣ, ಆದಾಯ ತೆರಿಗೆ ಇಲಾಖೆಯು ವಾರ್ಷಿಕವಾಗಿ ಘೋಷಿಸುವ ವ್ಯಕ್ತಿಯ ಆದಾಯ ತೆರಿಗೆ ಮಿತಿ ದಾಟಿದ ಸಂದರ್ಭದಲ್ಲಿ ಅಂತಹ ಆದಾಯಕ್ಕೆ   ತೆರಿಗೆ ಸಲ್ಲಿಸದೆ, ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುವ ಅಥವಾ ಹಣದ ಮೂಲ ತಿಳಿಸದೇ ಯಾವುದೇ ಹೂಡಿಕೆಯಲ್ಲಿ ತೊಡಗಿಸಿದರೆ ಅಂತಹ ಹಣ ಕಪ್ಪುಹಣವೆಂದು ಕರೆಯಲಾಗುತ್ತದೆ. 

 

 ಆರ್‌ಬಿಐನಲ್ಲಿ ಮುದ್ರಿತವಾಗದ ಖೋಟಾನೋಟುಗಳು ಕೂಡಾ ಕಪ್ಪುಹಣವೆಂದು ಪರಿಗಣಿಸಲಾಗುತ್ತಿದೆ. ವ್ಯಕ್ತಿಯ ಆದಾಯದ ಮೂಲಕ್ಕೆ ಸರಿಯಾದ ಪುರಾವೆ ಅಥವಾ ಆಧಾರ ಇರದಿದ್ದರೂ   ಒಂದಿಷ್ಟು ಆದಾಯ   ಕಪ್ಪುಹಣದ ಸಾಲಿಗೇ ಸೇರುತ್ತದೆ.  

 

ನಿಜವಾಗಿ ದುಡಿದು ಸಂಪಾದಿಸಿದ ಹಣ ಎಷ್ಟೇ ಇರಲಿ ಅಂತಹ ಹಣ ಬ್ಯಾಂಕಿನಲ್ಲಿ ಅಥವಾ ಇನ್ನಿತರ ಹೂಡಿಕೆಗಳಲ್ಲಿ ತೊಡಗಿಸಲು ಯಾರೂ ಭಯಪಡುವ ಅವಶ್ಯವಿಲ್ಲ. ₹ 1,000 ಹಾಗೂ ₹ 500 ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆಯಿಂದ ಹಿಂದೆಪಡೆದ ಸದ್ಯದ ಸಂದರ್ಭದಲ್ಲಿ, ಸಣ್ಣ ವ್ಯಾಪಾರಿಗಳು, ಗೃಹಿಣಿಯರು, ಕಲಾವಿದರು, ಕೃಷಿಕರು ಕಾರ್ಮಿಕ ಮುಂತಾದವರು ₹ 2.50 ಲಕ್ಷಗಳ ತನಕ ಬ್ಯಾಂಕಿನಲ್ಲಿ ಜಮೆ ಮಾಡುವುದನ್ನು  ಆದಾಯತೆರಿಗೆ ಇಲಾಖೆಯ ಗಮನಕ್ಕೆ ತರಲಾಗುವುದಿಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಿಜವಾಗಿ ದುಡಿದು ಉಳಿಸಿ, ಮನೆಯಲ್ಲಿ ಶೇಖರಿಸಿಟ್ಟ ಹಣ ಬಳಿಯಲ್ಲಿ ಇದ್ದರೆ ಯಾರೊಬ್ಬರೂ ಭಯಪಡುವ ಅವಶ್ಯವಿಲ್ಲ. ಒಟ್ಟಿನಲ್ಲಿ ನೀವು ಜಮಾ ಮಾಡುವ ಹಣದ ಆದಾಯದ ಮೂಲಕ್ಕೆ ಏನಾದರೂ ಆಧಾರವಿರಲಿ ಎನ್ನುವುದನ್ನು ಎಂದಿಗೂ ಮರೆಯದಿರಿ.

 

ಜನರು ತಮ್ಮ ಬಳಿ ಇರುವ ₹ 1,000 ಹಾಗೂ ₹ 500 ನೋಟುಗಳನ್ನು ಯಾವುದೇ ಮಿತಿ ಇಲ್ಲದೆ   ಬ್ಯಾಂಕ್‌ ಖಾತೆಗೆ ಜಮೆ ಮಾಡಬಹುದಾಗಿದೆ. ಹೀಗೆ ತುಂಬುವ ಹಣ ತೆರಿಗೆ ಕೊಡದೇ ಇರುವ ಹಣವೆಂದು ಸಾಬೀತಾದಲ್ಲಿ ತೆರಿಗೆಯ ಹಣದ ಶೇ  200 ರಷ್ಟು ದಂಡ ವಿಧಿಸಲಾಗುವುದು. ಈ ವಿಚಾರದಲ್ಲಿ ಕೂಡಾ ಜನರಲ್ಲಿ ಗೊಂದಲವಿದೆ. ತೆರಿಗೆ ಪ್ರಮಾಣ ಶೇ  30 ಆದಲ್ಲಿ, ದಂಡ ತೆರುವ ತೆರಿಗೆ ದರ ಶೇ 60 ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದು ಸತ್ಯಕ್ಕೆ ದೂರವಾದ ವಿಚಾರ. ಉದಾಹರಣೆಗಾಗಿ ತೆರಿಗೆ ದರ ಶೇ  30 ಆದಲ್ಲಿ ಶೇ 30+60=90 ತೆರಿಗೆ ವಿಧಿಸಲಾಗುತ್ತಿದೆ, ಜೊತೆಗೆ ತೆರಿಗೆ ಮೊತ್ತದ ಶೇ 3 ರಷ್ಟು ಶಿಕ್ಷಣ ಸೆಸ್‌  ಕೂಡಾ ತೆರಬೇಕಾಗುತ್ತದೆ. ಒಟ್ಟಿನಲ್ಲಿ ಸಂಪೂರ್ಣ ಹಣ ತೆರಿಗೆ ಪಾಲಾಗುವುದರಲ್ಲಿ ಸಂಶಯವಿಲ್ಲ.

 

ಕಪ್ಪುಹಣ ಕೆಲವೇ ವ್ಯಕ್ತಿಗಳ ಕೈವಶವಾಗಿ ಚಲಾವಣೆಗೆ ಬರದಿದ್ದರೆ ಅದೊಂದು ಜೀವರಹಿತ (Dead) ಹೂಡಿಕೆಯಾಗಿ ದೇಶದ ಪ್ರಗತಿ ಕುಂಠಿತವಾಗುತ್ತದೆ. ದೇಹದಲ್ಲಿ ಸದಾ ರಕ್ತಸಂಚರಿಸುವಂತೆ, ದೇಶದಲ್ಲಿ ಹಣ ಚಲಾವಣೆಯಾಗುತ್ತಿರಬೇಕು. ಹಣದ ಚಲಾವಣೆಯಿಂದ ಕೃಷಿ, ಕೈಗಾರಿಕೆ, ವಾಣಿಜ್ಯ, ಸೇವಾ ಕ್ಷೇತ್ರ, ಬ್ಯಾಂಕ್‌ಗಳು ಹಾಗೂ ಮೂಲಭೂತ ಸೌಕರ್ಯಗಳ ಬೆಳವಣಿಗೆಯಾಗುತ್ತದೆ. ಇದರಿಂದಾಗಿ ದೇಶದ  ಆರ್ಥಿಕ ವೃದ್ಧಿ ದರ (ಜಿಡಿಪಿ) ಹೆಚ್ಚಾಗುತ್ತದೆ. ಜತೆಗೆ ಯುವ ಜನಾಂಗಕ್ಕೆ ವಿಪುಲ ಉದ್ಯೋಗಾವಕಾಶಗಳು ದೊರೆಯುತ್ತವೆ.

 

 ದೇಶದ ಜನರು ಆರ್ಥಿಕವಾಗಿ ಸದೃಢವಾಗಿ ಬಾಳಿ ಬದುಕಲು ಹಾಗೂ ಭಯೋತ್ಪಾದನೆಯಿಂದ ಹೊರಗುಳಿಯಲು ಕಪ್ಪುಹಣ ಹತ್ತಿಕ್ಕುವ ಅವಶ್ಯವಿದೆ. ಇದಕ್ಕೆ ಪ್ರಧಾನಿ ಕೈಗೊಂಡಿರುವ ನಿರ್ಧಾರವನ್ನು ಎಲ್ಲರೂ ಬೆಂಬಲಿಸಿ ಅಗತ್ಯ ಸಹಕಾರ ನೀಡಬೇಕಾಗಿದೆ.

 

ಸೂಚನೆ: ಈ ಪಟ್ಟಿಯಲ್ಲಿ  ಈ ತಿಂಗಳ 9ರ ನಂತರ  ನಗದಾಗಿ ₹500, 1000 ನೋಟುಗಳನ್ನು ಬ್ಯಾಂಕಿನಲ್ಲಿ ತುಂಬುವಾಗ ಆ ಮೊತ್ತ ಕಪ್ಪುಹಣವೆಂದು ಸಾಬೀತಾದಲ್ಲಿ ಮಾತ್ರ ಅನ್ವಯವಾಗಲಿದೆ.

 

ವ್ಯಕ್ತಿಗಳ ಆದಾಯ ತೆರಿಗೆ ಮಿತಿ ಉದಾ: ₹2.50 ಲಕ್ಷ, ₹30 ಲಕ್ಷ, ₹50 ಲಕ್ಷ ಇದ್ದರೆ  ಅನ್ವಯಿಸುವುದಿಲ್ಲ. ಇದೇ ವೇಳೆ ₹500, ₹ 1,000 ನೋಟುಗಳನ್ನು ಇದೇ ಅವಧಿಯಲ್ಲಿ ನಗದಾಗಿ ಬ್ಯಾಂಕ್‌ಗೆ ಕಟ್ಟಿ, ಇದು ನಿಜವಾದ ಆದಾಯ ಕಪ್ಪುಹಣವಲ್ಲ ಎಂದು ರುಜುವಾತುಪಡಿಸಿದಲ್ಲಿ, ತೆರಿಗೆ ಮಿತಿ ಕಳೆದು ಹಿಂದಿನಂತೆ ತೆರಿಗೆ ಸಲ್ಲಿಸಬಹುದು. ಒಟ್ಟಿನಲ್ಲಿ ಶೇ 30 + 60 (200%) + ಶಿಕ್ಷಣ ಸೆಸ್‌ ಕಪ್ಪುಹಣ ಜಮಾ ಆದಲ್ಲಿ, ತೆರಿಗೆ ಸಲ್ಲಿಸಬೇಕು. ಇಲ್ಲಿ ಆದಾಯದ ಮಿತಿ ಅನ್ವಯಿಸುವುದಿಲ್ಲ.

 

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry