ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ?

7

ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ?

Published:
Updated:
ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ?

ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮುಖಬೆಲೆಯ  (₹500 ಮತ್ತು ₹1,000) ನೋಟುಗಳ ಚಲಾವಣೆಯನ್ನು ಹಠಾತ್ತಾಗಿ ರದ್ದುಗೊಳಿಸಿದ ದಿಢೀರ್‌ ನಿರ್ಧಾರದ ಕಂಪನಗಳು ಇನ್ನೂ ನಿಂತಿಲ್ಲ. ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ಈ ನಿರ್ಧಾರವು ಅನೇಕರ ಪಾಲಿಗೆ ಆಘಾತಕಾರಿಯಾಗಿದೆ. ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂತಾಗಿದೆ ಅವರ ಪರಿಸ್ಥಿತಿ. ಅನೇಕರು ಗೊಂದಲದಲ್ಲಿ ಇದ್ದಾರೆ. ಜನಸಾಮಾನ್ಯರ ಬಳಿ ನಗದು ಇಲ್ಲದೇ ದಿನನಿತ್ಯದ ವ್ಯವಹಾರಕ್ಕೆ ತುಂಬ ಅಡಚಣೆಯಾಗಿ ಪರಿತಪಿಸಿದ್ದಾರೆ.

 

ಬ್ಯಾಂಕ್‌ ಶಾಖೆಯಲ್ಲಿ ದುಡ್ಡಿದ್ದರೂ, ಕೈಯಲ್ಲಿ ಕಾಸಿಲ್ಲದೆ ಅನೇಕರು  ಒದ್ದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾದವರೂ ಮಾತ್ರೆ – ಔಷಧಿ ಖರೀದಿಗೆ ಪಡಿಪಾಟಲು ಪಟ್ಟಿದ್ದಾರೆ. ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರೂ  ಹಳೆಯ ನೋಟುಗಳನ್ನು ಸ್ವೀಕರಿಸಲು ಹಿಂದೇಟು ಹಾಕಿದ ಆಸ್ಪತ್ರೆಗಳವರು ಆನಂತರ ನಿಲುವು ಬದಲಾಯಿಸಿದ ಅನೇಕ ಘಟನೆಗಳೂ ವರದಿಯಾಗಿವೆ.

 

ಚುನಾವಣೆ, ಸ್ಥಿರಾಸ್ತಿ, ಚಿನ್ನ ಖರೀದಿ ಮತ್ತಿತರ ಉದ್ದೇಶಕ್ಕೆ ಮನೆಯಲ್ಲಿ ಸಂಗ್ರಹಿಸಿ ಇರಿಸಿದ ಭಾರಿ ಮೊತ್ತದ ಹಣವನ್ನು ಚಲಾವಣೆಗೆ ತರುವುದು ಹೇಗೆ, ತೆರಿಗೆ ಹೊರೆ ಎಷ್ಟಾಗಬಹುದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಬಿದ್ದರೆ ಹಣದ ಮೂಲದ ಬಗ್ಗೆ ಏನೆಂದು ಹೇಳುವುದು, ದಾಖಲೆಗಳನ್ನು ಎಲ್ಲಿಂದ ಒದಗಿಸುವುದು – ಹೀಗೆ ಒಬ್ಬೊಬ್ಬರದ್ದು ಒಂದೊಂದು ಬಗೆಯ ಸಂಕಟವಾಗಿದೆ.

 

ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ 85ರಷ್ಟು ಕರೆನ್ಸಿಗಳು ಏಕಾಏಕಿ ಬರೀ ಕಾಗದದ ಹಾಳೆಗಳಾಗಿ ಬಿಟ್ಟಿದ್ದರಿಂದ ಸಹಜವಾಗಿಯೇ ಎಲ್ಲೆಡೆ ಆತಂಕ ಮೂಡಿತ್ತು.  ಅಂತಹ ಕಳವಳ ಈಗ ಕ್ರಮೇಣ ಕರಗುತ್ತಿದೆ. ಬ್ಯಾಂಕ್‌, ಅಂಚೆ ಕಚೇರಿ, ಎಟಿಎಂಗಳ ಮುಂದೆ ಜನರು ಹೊಸ ನೋಟುಗಳಿಗಾಗಿ ಮುಗಿ ಬೀಳುತ್ತಿದ್ದಾರೆ.  

 

ತೆರಿಗೆಗೆ ಒಳಪಡದ ಕಪ್ಪು ಹಣ ಹೊರ  ತಂದು ನಿಯಂತ್ರಿಸುವ,   ನಕಲಿ ನೋಟು ಚಲಾವಣೆಗೆ ನಿರ್ಬಂಧ ವಿಧಿಸುವ, ಭಯೋತ್ಪಾದಕರಿಗೆ ಹಣಕಾಸಿನ ನೆರವಿಗೆ ಕತ್ತರಿ ಹಾಕುವ ಮತ್ತು ಭ್ರಷ್ಟಾಚಾರ ನಿಯಂತ್ರಣ ಮತ್ತಿತರ ಉದ್ದೇಶಗಳಿಗಾಗಿ ಈ ಗರಿಷ್ಠ ಮುಖ ಬೆಲೆಯ ನೋಟುಗಳ ಚಲಾವಣೆ ರದ್ದು ನಿರ್ಧಾರ ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಅಪರೂಪದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದೆ.  

 

ಎಲ್ಲೆಡೆ ವ್ಯಾಪಾರ ವಹಿವಾಟಿಗೆ ಧಕ್ಕೆಯಾಗಿದೆ, ಸಿನಿಮಾ ಚಿತ್ರ ಮಂದಿರಗಳು ಖಾಲಿ ಹೊಡೆಯುತ್ತಿವೆ, ಸರಕುಗಳ ಸಾಗಾಣಿಕೆ ಕಡಿಮೆಯಾಗಿದೆ.. ಒಟ್ಟಾರೆ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಇವೆಲ್ಲ ಅಲ್ಪಾವಧಿಯಲ್ಲಿನ ಅನಿವಾರ್ಯತೆಗಳು. ಹೊಸ ₹ 500, ₹ 2,000 ನೋಟುಗಳ ಚಲಾವಣೆ ಹೆಚ್ಚುತ್ತಿದ್ದಂತೆ, ಎಟಿಎಂಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿದ್ದಂತೆ  ಕ್ರಮೇಣ ಪರಿಸ್ಥಿತಿ ಸುಧಾರಿಸಿ ಆರ್ಥಿಕ ಚಟುವಟಿಕೆಗಳೆಲ್ಲ ಮತ್ತೆ ಗರಿಗೆದರಲಿವೆ.

 

ಜನಸಾಮಾನ್ಯರು, ಮಧ್ಯಮ ವರ್ಗದವರಲ್ಲಿ ಆತಂಕವೇನೂ ಕಂಡು ಬಂದಿಲ್ಲ. ಆದರೆ, ಬಡವರು, ದಿನಗೂಲಿಗಳು, ದಿನದ ದುಡಿಮೆಯನ್ನೇ ನೆಚ್ಚಿಕೊಂಡವರು ಕಷ್ಟಪಡುತ್ತಿದ್ದಾರೆ. ಚೆಕ್, ಡಿಡಿ ಮತ್ತು ವಿದ್ಯುನ್ಮಾನ ಹಣ ವರ್ಗಾವಣೆ ಮೇಲೆ ಯಾವುದೇ ಮಿತಿಯಾಗಲಿ, ನಿರ್ಬಂಧವಾಗಲಿ ಇಲ್ಲದಿರುವುದರಿಂದ ಹಣಕಾಸಿನ ಇತರ ಚಟುವಟಿಕೆಗಳು ಅನಿರ್ಬಂಧಿತವಾಗಿ ಮುನ್ನಡೆಯುತ್ತಿವೆ.

 

ಭಯೋತ್ಪಾದನೆಗೆ ತಡೆ

ಉಗ್ರಗಾಮಿಗಳು ಭಾರತದ ಗಡಿಯೊಳಗೆ ನುಸುಳಿ ಬಂದು ದುಷ್ಕೃತ್ಯ ಎಸಗಲು ವೈರಿ ದೇಶಗಳು ನಕಲಿ ನೋಟುಗಳನ್ನು ಮುದ್ರಿಸಿ  ಹಂಚಿ ಭಯೋತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಾಯೋಜಿಸುತ್ತಿರುವುದು ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. 

 

ಭ್ರಷ್ಟಾಚಾರ ಮತ್ತು ಕಪ್ಪು ಹಣವು ದೇಶಿ ಅರ್ಥ ವ್ಯವಸ್ಥೆಯ ಪ್ರಗತಿಗೆ ಪ್ರಮುಖವಾಗಿ ಅಡ್ಡಿಯಾಗಿ ಪರಿಣಮಿಸಿವೆ. ಬಡತನ ನಿರ್ಮೂಲನೆ ಮಾಡುವ ಪ್ರಯತ್ನಗಳನ್ನೂ ಇವು ದುರ್ಬಲಗೊಳಿಸುತ್ತಿವೆ.   

 

ಅಕ್ರಮ ಮಾರ್ಗದಲ್ಲಿ ಹಣ ಗಳಿಸಿದವರು ತಮ್ಮ ಬಳಿಯಲ್ಲಿ ಇರುವ ಹಣದ ವಿವರ ಬಹಿರಂಗಪಡಿಸಲು ಹಿಂದೇಟು ಹಾಕಲಿದ್ದಾರೆ.  ಒಂದು ವೇಳೆ ಬಹಿರಂಗಪಡಿಸಿದ ಮೊತ್ತವು ದೊಡ್ಡ ಮೊತ್ತದಲ್ಲಿ ಇದ್ದರೆ, ಆದಾಯ ತೆರಿಗೆ ಇಲಾಖೆಯು ಈ ಮೊತ್ತವನ್ನು ನ್ಯಾಯಸಮ್ಮತಗೊಳಿಸಲು ವಿಚಾರಣೆಗೆ ಗುರಿಪಡಿಸಬಹುದು ಇಲ್ಲವೇ  ದುಬಾರಿ ದಂಡ ವಿಧಿಸಬಹುದು.

 

ಈ ಭಯದ ಕಾರಣಕ್ಕೇನೆ ಜನರು ತಮ್ಮ ಬಳಿ ಇರುವ ಹಣವನ್ನು ಹೊರ ತೆಗೆಯಲು  (ಚಲಾವಣೆಗೆ ತರಲು)  ಮನಸ್ಸು ಮಾಡುವುದಿಲ್ಲ.  ಇದರಿಂದ ಹಣದ ಚಲಾವಣೆ ಪ್ರಮಾಣ ಗಮನಾರ್ಹವಾಗಿ ತಗ್ಗಲಿದೆ. ಇದರಿಂದ ಹಣದ ಮೌಲ್ಯ ಹೆಚ್ಚಳಗೊಳ್ಳಲಿದೆ. ಒಂದೆಡೆ, ಒಟ್ಟಾರೆ ಹಣದ ಚಲಾವಣೆಯು ಕಡಿಮೆಯಾದರೆ, ಇನ್ನೊಂದೆಡೆ ಸರಕು  ಮತ್ತು ಸೇವೆಗಳ ಲಭ್ಯತೆಯಲ್ಲಿ ಯಾವುದೇ ಬದಲಾವಣೆ ಕಂಡುಬರದಿರುವುದರಿಂದ ಬೆಲೆಗಳು ನಿಧಾನವಾಗಿ ಹೆಚ್ಚಳಗೊಳ್ಳುತ್ತವೆ. ಕಾನೂನುಬದ್ಧ ರೀತಿಯಲ್ಲಿ ಗಳಿಸಿದ ಹಣವನ್ನು ಜನರು ಇನ್ನು ಮುಂದೆ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಹೆಚ್ಚು ಒಲವು ತೋರಲಿದ್ದಾರೆ.  ಠೇವಣಿ ಸಂಗ್ರಹ ಹೆಚ್ಚಳಗೊಳ್ಳುವುದರಿಂದ ಬ್ಯಾಂಕ್‌ಗಳು  ಸಾಲ ನೀಡುವ ಪ್ರಮಾಣವನ್ನು ಹೆಚ್ಚಿಸಲಿವೆ.

 

ಸುಲಭ ಸಾಲ

ಬ್ಯಾಂಕ್‌ ಸಾಲಗಳು ಸುಲಭವಾಗಿ ದೊರೆಯಲಿದ್ದು, ಬಡ್ಡಿ ದರಗಳು ಅಗ್ಗವಾಗುವ ಸಾಧ್ಯತೆ ಇದೆ.  ಠೇವಣಿ ರೂಪದಲ್ಲಿ ಸಂಗ್ರಹಗೊಳ್ಳುವ ಹೆಚ್ಚುವರಿ ಹಣವನ್ನು ಬ್ಯಾಂಕ್‌ಗಳು ಸಾಲ ನೀಡಿಕೆಗೆ ಬಳಸುವುದರಿಂದ  ಹಣದ ಪೂರೈಕೆ ಪ್ರಮಾಣ ಹೆಚ್ಚಳಗೊಳ್ಳಲಿದೆ.  ಇದು ಇನ್ನೊಂದು ರೀತಿಯಲ್ಲಿ ಹಣದುಬ್ಬರಕ್ಕೆ ಕಾರಣವಾಗಲಿದೆ.

 

ಅನಾನುಕೂಲತೆಗಳು

ಜನಸಾಮಾನ್ಯರಿಗೆ  ತೀವ್ರ ಸಂಕಷ್ಟ ತಂದೊಡ್ಡಿದೆ. ಕೈಯಲ್ಲಿ ಕಾಸಿಲ್ಲದೇ ಅಥವಾ ಗರಿಷ್ಠ ಮುಖಬೆಲೆಯ ನೋಟುಗಳು ಇದ್ದರೂ ಅವುಗಳನ್ನು ಬಳಸಲಿಕ್ಕಾಗದೆ  ಜನರು ಬವಣೆ ಪಟ್ಟಿದ್ದಾರೆ.  ಹೊಸ ನೋಟುಗಳನ್ನು ಪಡೆದುಕೊಳ್ಳಲು ಎಟಿಎಂ, ಬ್ಯಾಂಕ್‌ಗಳಿಗೆ ಅಲೆದು ಸುಸ್ತಾಗಿದ್ದಾರೆ.

 

ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಡೆಬಿಟ್‌, ಕ್ರೆಡಿಟ್‌  ಕಾರ್ಡ್‌ಗಳ  ಬಳಕೆ ಬಗ್ಗೆಯೂ  ಅರಿವು ಇಲ್ಲ.  ಅನಕ್ಷರಸ್ಥರು ಬಿಡಿ, ಅನೇಕ  ಸುಶಿಕ್ಷಿತರಿಗೂ  ಡೆಬಿಟ್‌ ಕಾರ್ಡ್‌  / ಕ್ರೆಡಿಟ್‌ ಕಾರ್ಡ್‌ ಬಳಕೆ  ಜ್ಞಾನ ಇಲ್ಲ. 

 

ಮೊಬೈಲ್  ವ್ಯಾಲೆಟ್‌ನಲ್ಲಿನ ಹತ್ತಾರು ಆ್ಯಪ್‌ಗಳ ಮೂಲಕವೂ ಅತ್ಯಂತ ಸುಲಭವಾಗಿ ಹಣ ಪಾವತಿಸುವ ಸೌಲಭ್ಯವೂ ಜಾರಿಯಲ್ಲಿದ್ದರೂ, ಬಳಕೆದಾರರ ಸಂಖ್ಯೆ ತುಂಬ ಕಡಿಮೆ ಇದೆ. ಇನ್ನು ಮುಂದೆ ಈ ಚಿತ್ರಣ ಖಂಡಿತವಾಗಿಯೂ ಬದಲಾಗಲಿದೆ. ಮೊಬೈಲ್‌ ವ್ಯಾಲೆಟ್‌ ಸೇವೆ ಒದಗಿಸುವ ಸಂಸ್ಥೆಗಳಿಗೆ ಶುಕ್ರದೆಸೆ ಒದಗಲಿದೆ.

 

ವಿದೇಶಿ ಕರೆನ್ಸಿ, ಚಿನ್ನ, ಸ್ಥಿರಾಸ್ತಿ ಮತ್ತು  ವಿದೇಶಿ ತೆರಿಗೆ ಸ್ವರ್ಗಗಳ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುವ ದೊಡ್ಡ ಮಿಕಗಳು ಪಾರಾಗುತ್ತವೆ. ಆದರೆ, ಸಣ್ಣ ಪುಟ್ಟ ಮೀನುಗಳು ಬಲೆಗೆ ಬೀಳಲಿವೆ. ಅಲ್ಪಾವಧಿಯಲ್ಲಿ ಹತ್ತಾರು ಸಂಕಷ್ಟಗಳಿಗೆ ಗುರಿಯಾದರೂ, ದೀರ್ಘಾವಧಿಯಲ್ಲಿ ಇದರಿಂದ ದೇಶಿ ಆರ್ಥಿಕತೆಗೆ ಒಳಿತಾಗಲಿದೆ. 

 

ಕರೆನ್ಸಿಗಳ ವಿನಿಮಯ ಸುಸೂತ್ರವಾಗಿ ನಡೆಯಲು ಸರ್ಕಾರ ಹೆಚ್ಚು ಗಮನ ಕೇಂದ್ರೀಕರಿಸಬೇಕಾಗಿದೆ.  ಹೊಸ ಕರೆನ್ಸಿಗಳ ಚಲಾವಣೆಯನ್ನು ಸುಸೂತ್ರಗೊಳಿಸಲು ಸರ್ಕಾರ ಎಡವಿದರೆ ಅದರಿಂದ ಒಟ್ಟಾರೆ ಆರ್ಥಿಕತೆಯಲ್ಲಿ ಅರಾಜಕತೆಗೆ ಎಡೆಮಾಡಿಕೊಟ್ಟಂತೆ ಆಗಲಿದೆ. 


 


ಗರಿಷ್ಠ ₹ 2,000 ಮುಖಬೆಲೆಯ ನೋಟುಗಳ ಚಲಾವಣೆಯು ಮತ್ತೆ ಕಪ್ಪು ಹಣ ಸಂಗ್ರಹಕ್ಕೆ ಎಡೆಮಾಡಿಕೊಡುವ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಸರ್ಕಾರ ಯಾವುದೇ ದಿನ ಇಂತಹ ನೋಟುಗಳನ್ನು ಮತ್ತೆ ರದ್ದುಪಡಿಸುವ ಆದೇಶ ಹೊರಡಿಸುವ ಭೀತಿ ಇರುವುದರಿಂದ ಕಪ್ಪು ಹಣ ಸಂಗ್ರಹ ಪ್ರಮಾಣಕ್ಕೆ ಕಡಿವಾಣ ಬೀಳಲೂಬಹುದು.  ಹಣದ ಚಲಾವಣೆ ಕಡಿಮೆಯಾಗಿ ವಹಿವಾಟಿನಲ್ಲಿ ಪ್ಲಾಸ್ಟಿಕ್‌ ಕಾರ್ಡ್‌, ಮೊಬೈಲ್‌ ಆ್ಯಪ್‌ಗಳ ಬಳಕೆ ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ.


 


ನೋಟುಗಳ ಮುದ್ರಣ, ಚಲಾವಣೆಯಲ್ಲಿ ಆರ್‌ಬಿಐ ಪಾತ್ರ


ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ಬಿಐ) ದೇಶದಲ್ಲಿ ನೋಟುಗಳ ವಿನ್ಯಾಸ, ಮುದ್ರಣ ಮತ್ತು ಚಲಾವಣೆಯ ಹೊಣೆಗಾರಿಕೆಯನ್ನು ನಿರ್ವಹಿಸುತ್ತದೆ. ಕೇಂದ್ರ ಸರ್ಕಾರದ ಜತೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಚಲಾವಣೆಗೆ ಅಗತ್ಯವಾದ ನೋಟುಗಳ ಪ್ರಮಾಣವನ್ನು ನಿರ್ಧರಿಸಿ ಮುದ್ರಿಸುತ್ತದೆ.


 


ನೋಟುಗಳನ್ನು ಮುದ್ರಣ ಮಾಡುವಾಗ ಆರ್‌ಬಿಐ,  ತನ್ನ ಬಳಿ ಇರುವ ಚಿನ್ನದ ಸಂಗ್ರಹ, ವಿದೇಶಿ ವಿನಿಮಯ ಸಂಗ್ರಹ ಮತ್ತು  ವಿದೇಶಿ ಸಾಲ ಪಾವತಿ ಪ್ರಮಾಣವನ್ನೂ ಲೆಕ್ಕಕ್ಕೆ ತೆಗೆದುಕೊಂಡಿರುತ್ತದೆ.  ಹಣಕಾಸಿನ ಅಗತ್ಯಗಳನ್ನೆಲ್ಲ ಪೂರೈಸುವ  ಸಂಪತ್ತಿನ ಸಂಗ್ರಹ ಆಧರಿಸಿ ನೋಟುಗಳನ್ನು ಮುದ್ರಿಸಲಾಗುವುದು. ಅದೇ ಕಾರಣಕ್ಕೆ ನೋಟುಗಳು ಬರೀ ಕಾಗದದ ತುಣುಕಾಗಿರದೆ ನಿರ್ದಿಷ್ಟ ಮೌಲ್ಯವನ್ನು ಹೊಂದಿರುತ್ತವೆ.


 


ನೋಟುಗಳ ಮೇಲೆ ಇರುವ, ‘ಇದನ್ನು ಹೊಂದಿರುವ ವ್ಯಕ್ತಿಗೆ ಈ ಮೊತ್ತದ ರೂಪಾಯಿಗಳನ್ನು ಪಾವತಿಸುವ ಭರವಸೆ ನೀಡುತ್ತೇನೆ’ ಎನ್ನುವ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಅವರ ಸಹಿಯುಳ್ಳ ವಾಗ್ದಾನ, ಈ ಕಾಗದದ ತುಣುಕಿಗೆ ನಿರ್ದಿಷ್ಟ ಮೌಲ್ಯ ತಂದುಕೊಟ್ಟಿರುತ್ತದೆ. ಅದೊಂದು ಬರೀ ಹೇಳಿಕೆಯಾಗಿರದೆ ಅದಕ್ಕೊಂದು ನಿರ್ದಿಷ್ಟ ಅರ್ಥವನ್ನೂ ಒಳಗೊಂಡಿರುತ್ತದೆ. ‘ಈ ರೂಪಾಯಿಯು ಇಷ್ಟು ಮೊತ್ತದ ಸರಕು ಮತ್ತು ಸೇವೆ ಖರೀದಿಸುವ ಸಾಮರ್ಥ್ಯ ಹೊಂದಿದೆ’ ಎನ್ನುವ ಸಂದೇಶವೂ ಅದರಲ್ಲಿ ಅಡಕವಾಗಿರುತ್ತದೆ. 


 


ಈ ಕಾರಣಕ್ಕಾಗಿಯೇ ನಕಲಿ ನೋಟುಗಳು ದೇಶಿ ಅರ್ಥವ್ಯವಸ್ಥೆಗೆ ಯಾವ ರೀತಿಯಲ್ಲಿ ಹಾನಿಕಾರಕವಾಗಿರುತ್ತವೆ ಎನ್ನುವುದನ್ನೂ ಅಂದಾಜಿಸಬಹುದು.


ಬ್ಯಾಂಕ್ ನೋಟುಗಳ ಮೌಲ್ಯ ಮತ್ತು ಪ್ರಮಾಣವನ್ನೂ ಆರ್‌ಬಿಐ ನಿರ್ಧರಿಸುತ್ತದೆ. ಕಳಪೆ ನೋಟುಗಳ ಬದಲಾವಣೆ, ಮೀಸಲು ಅಗತ್ಯ ಮತ್ತು ಚಲಾವಣೆ ಉದ್ದೇಶಕ್ಕೆ ಬೇಕಾದ ನೋಟುಗಳ ವಾರ್ಷಿಕ ಏರಿಕೆ ಆಧರಿಸಿ ಮುದ್ರಿಸಬೇಕಾದ ನೋಟುಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಅರ್ಥ ವ್ಯವಸ್ಥೆಯ ಬೆಳವಣಿಗೆ ಗತಿ ಆಧರಿಸಿ ನೋಟುಗಳ ಬೇಡಿಕೆಯನ್ನು ಅಂದಾಜಿಸಲಾಗುತ್ತಿದೆ. 


 


ಒಂದು ವೇಳೆ ದೇಶದಲ್ಲಿ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇದ್ದರೆ, ಸರ್ಕಾರ ವ್ಯವಸ್ಥೆಯಲ್ಲಿ ಹಣದ ಪೂರೈಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಹೊರಟರೆ, ಕಡಿಮೆ ಸಂಖ್ಯೆಯಲ್ಲಿ ನೋಟುಗಳನ್ನು ಮುದ್ರಿಸಲಾಗುವುದು. ಕೇಂದ್ರ ಸರ್ಕಾರದ ಬಜೆಟ್‌ ಕೊರತೆ ತುಂಬಿಕೊಳ್ಳಲು ಅಗತ್ಯ ಬಿದ್ದರೆ ಆರ್‌ಬಿಐ ಹೆಚ್ಚುವರಿ ಹಣ ಮುದ್ರಿಸಲೂಬಹುದು. 


 


ಬ್ಯಾಂಕ್‌ಗಳಲ್ಲಿ ಇರಿಸಿದ ಠೇವಣಿಯನ್ನು ಯಾವುದೇ ಬ್ಯಾಂಕ್  ತನ್ನ ಗ್ರಾಹಕರಿಗೆ ಮರಳಿಸಲು ಸಾಧ್ಯವಾಗದೆ ದಿವಾಳಿ ಎದ್ದರೆ, ಗ್ರಾಹಕರಿಗೆ ಹಣ ವಿತರಿಸುವ ಜವಾಬ್ದಾರಿಯನ್ನು  ಆರ್‌ಬಿಐ ಹೊತ್ತುಕೊಂಡಿರುತ್ತದೆ. ಅಂತಹ ಪರಿಸ್ಥಿತಿ ಎದುರಿಸಲು ಆರ್‌ಬಿಐ ಬಳಿ ನೋಟುಗಳ ಸಂಗ್ರಹ ಇರಬೇಕಾಗುತ್ತದೆ. ಈ ಎಲ್ಲ ಉದ್ದೇಶಗಳ ಈಡೇರಿಕೆಗೆ ಅಗತ್ಯವಾದ ನೋಟುಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಮುದ್ರಣ ಪ್ರಮಾಣ ನಿರ್ಧರಿಸಲಾಗುವುದು.


 


ತನ್ನ ಪ್ರಾದೇಶಿಕ ಕಚೇರಿಗಳು ಮತ್ತು ದೇಶದಾದ್ಯಂತ ಇರುವ 4,422 ನೋಟುಗಳ ಖಜಾನೆ ಮೂಲಕ (currency chest) ನೋಟು ಮತ್ತು ನಾಣ್ಯಗಳನ್ನು ಆರ್‌ಬಿಐ ವಿತರಿಸುತ್ತಿದೆ. ಈ ಮೊದಲು, ಮುದ್ರಿಸಬೇಕಾದ ನೋಟುಗಳ  ಮೊತ್ತಕ್ಕೆ ಸರಿಸಮನಾದ ಚಿನ್ನದ ಸಂಗ್ರಹವನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಈಗ ಈ ನಿಬಂಧನೆಯನ್ನು ಸಡಿಲಿಸಲಾಗಿದೆ. 

**

ಪ್ರಯೋಜನಗಳು


ದೇಶಿ ಆರ್ಥಿಕತೆಯಲ್ಲಿ ಹಾಸು ಹೊಕ್ಕಾಗಿರುವ ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ಕೆಲಮಟ್ಟಿಗೆ ನಿಯಂತ್ರಿಸಲು ನೆರವಾಗಲಿದೆ.


 


ಹಣದ ನೆರವು ಸುಲಭವಾಗಿ ದೊರೆಯದೇ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಭಯೋತ್ಪಾದನಾ ಕೃತ್ಯಗಳನ್ನೂ ನಿಗ್ರಹಿಸಲು ಸಾಧ್ಯವಾಗಲಿದೆ. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಹೆಚ್ಚಳಗೊಂಡು ನಗದು ವಹಿವಾಟಿನ ಪ್ರಮಾಣವು ಗಮನಾರ್ಹವಾಗಿ ಇಳಿಕೆ ಕಾಣಲಿದೆ.


 


ಜನರು ತಮ್ಮ ಬಳಿಯಲ್ಲಿ ಇರುವ ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಹೊಸ ಕರೆನ್ಸಿಗಳಿಗೆ ಬದಲಾಯಿಸಿಕೊಳ್ಳುವಾಗ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌), ಆಧಾರ್‌, ಮತದಾರರ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಇದರಿಂದ ಹಣದ ಚಲಾವಣೆಯ ಜಾಡು ಗುರುತಿಸುವುದು ಆದಾಯ ತೆರಿಗೆ ಇಲಾಖೆಗೆ ಹೆಚ್ಚು ಸುಲಭವಾಗಲಿದೆ.  


 


ಬ್ಯಾಂಕ್‌ಗಳ ಮೂಲಕ ನಡೆಯುವ ಎಲ್ಲ ಬಗೆಯ ವಹಿವಾಟುಗಳ ಮೇಲೆ ಹಣಕಾಸು ಬೇಹುಗಾರಿಕೆ ಘಟಕಗಳು ನಿಗಾ ಇರಿಸುವುದರಿಂದ ಈ ಹಿಂದಿನಂತೆ ಲೆಕ್ಕಕ್ಕೆ ಸಿಗದಷ್ಟು ಕಪ್ಪು ಹಣವನ್ನು ಬಳಿಯಲ್ಲಿ ಇಟ್ಟುಕೊಳ್ಳುವುದು ಅಷ್ಟು ಸುಲಭವಾಗುವುದಿಲ್ಲ.


 


ಗೃಹ ನಿರ್ಮಾಣ ಉದ್ದಿಮೆಯು ಇನ್ನು ಮುಂದೆ ಹೆಚ್ಚು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಲಿದೆ. 

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry