ವಿಶ್ವವಿದ್ಯಾಲಯಗಳೊಳಕ್ಕೆ ಶಿಕ್ಷಣ ಪ್ರವೇಶ ಪಡೆಯಲಿ

7
ಕರ್ನಾಟಕದ ನಾಳೆಗಳು

ವಿಶ್ವವಿದ್ಯಾಲಯಗಳೊಳಕ್ಕೆ ಶಿಕ್ಷಣ ಪ್ರವೇಶ ಪಡೆಯಲಿ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ವಿಶ್ವವಿದ್ಯಾಲಯಗಳೊಳಕ್ಕೆ ಶಿಕ್ಷಣ ಪ್ರವೇಶ ಪಡೆಯಲಿ

ಉನ್ನತ ಶಿಕ್ಷಣ ಕ್ಷೇತ್ರದ ಕುರಿತಾಗಿ ಹಲವಾರು ಪ್ರಚೋದನಕಾರಿ ಹೇಳಿಕೆಗಳನ್ನು, ಗಂಭೀರ ಆರೋಪಗಳನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರೇ ಅಭಿವ್ಯಕ್ತಿಸಿದ್ದಾರೆ. ಹಣಕಾಸು ದುರುಪಯೋಗ, ನಿಯಮಗಳ ಉಲ್ಲಂಘನೆ, ಲಂಚ ತೆಗೆದುಕೊಂಡಿರುವ ಆರೋಪಗಳು ಪತ್ರಿಕೆಗಳ ಮುಖಪುಟಗಳಲ್ಲಿ ನಿಯಮಿತವಾಗಿ ರಾರಾಜಿಸುತ್ತವೆ. ಇಂತಹ ವಿವಾದಗಳಲ್ಲದೆ ಮತ್ತಷ್ಟು ಸಮಸ್ಯೆಗಳು ಸಾಮಾನ್ಯ ತಿಳಿವಳಿಕೆಯಿರುವ ಯಾರಿಗಾದರೂ ಮೇಲ್ನೋಟಕ್ಕೆ ಅರ್ಥವಾಗುತ್ತವೆ.ಸಂಪನ್ಮೂಲಗಳ ಕೊರತೆಗಳ ನಡುವೆಯೂ ನಾವು ಸಮರ್ಥವಾದ ಶಿಕ್ಷಣವನ್ನು ನೀಡುವಲ್ಲಿ ಯಶಸ್ಸನ್ನು ಕಂಡಿದ್ದೇವೆಯೆ? ಉನ್ನತ ಶಿಕ್ಷಣ ಕ್ಷೇತ್ರವು ನಮ್ಮ ಸಮಾಜದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದು ಹೇಳಿದರೆ ಅದು ಯಾವ ವಿವಾದಕ್ಕೂ ಎಡೆ ಮಾಡಿಕೊಡುವುದಿಲ್ಲ.ಇಂದು ನಾವು ನೀಡುತ್ತಿರುವ ಶಿಕ್ಷಣದ ಗುಣಮಟ್ಟವು ಅಷ್ಟೇನು ಉತ್ತಮವಾದುದಲ್ಲ ಹಾಗೂ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಒಳ್ಳೆಯ ಸಂಸ್ಥೆಗಳಲ್ಲ ಎನ್ನುವುದು ಸಹ ಎಲ್ಲರಿಗೂ ಗೊತ್ತಿರುವ ವಿಚಾರಗಳೆ. ಈ ಸಂಸ್ಥೆಗಳಲ್ಲಿ ಬೋಧಿಸುವ ಅಧ್ಯಾಪಕರು ಶೈಕ್ಷಣಿಕವಲ್ಲದ ವಿಚಾರಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿರುವವರು. ಅವರ ಬದ್ಧತೆಯಷ್ಟೆ ಸಮಸ್ಯಾತ್ಮಕವಾಗಿದೆ ಅವರ ಶೈಕ್ಷಣಿಕ ಸಾಮರ್ಥ್ಯ ಮತ್ತು ಜ್ಞಾನಾರ್ಜನೆಯ ಸಂಕಲ್ಪ.ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಸಾಕಷ್ಟು ಸಂಪನ್ಮೂಲಗಳು, ಅದರಲ್ಲೂ ವಿದ್ಯಾರ್ಥಿವೇತನಗಳು, ಸಂಶೋಧಕರಿಗೆ ಲಭ್ಯವಿದೆ. ಆದರೂ ಸಂಶೋಧನೆಯ ಗುಣಮಟ್ಟ ಸಂಪೂರ್ಣ ಕುಸಿದಿದೆ. ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ವಿಶ್ವವಿದ್ಯಾನಿಲಯಗಳು ತಮ್ಮ ಮೂಲ ಕರ್ತವ್ಯವಾದ ಜ್ಞಾನದ ಉತ್ಪಾದನೆ ಮತ್ತು ಪ್ರಸರಣಗಳಲ್ಲಿ ಶೋಚನೀಯವಾಗಿ ಸೋತಿವೆ. ಉನ್ನತ ಶಿಕ್ಷಣ ಕ್ಷೇತ್ರದ ಹಲವು ರಾಚನಿಕ ಸಮಸ್ಯೆಗಳು ಸಹ ಎದ್ದು ಕಾಣುತ್ತವೆ.ಉದಾಹರಣೆಗೆ ಏಕ ವಿಷಯ ವಿಶ್ವವಿದ್ಯಾನಿಲಯ ಗಳನ್ನು ಯಾವುದೆ ಗಂಭೀರ ಚಿಂತನೆಯಿಲ್ಲದೆ, ಮನಸೋ ಇಚ್ಛೆ ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಹೊಸ ವಿಶ್ವವಿದ್ಯಾನಿಲಯಗಳ, ಸ್ನಾತಕೋತ್ತರ ಕೇಂದ್ರಗಳ ಸ್ಥಾಪನೆಯೂ ಯೋಜಿತ ರೂಪದಲ್ಲಿ ಆಗಿಲ್ಲ.ಕಳೆದ ದಶಕದಲ್ಲಿಯೇ ರಾಜ್ಯದಲ್ಲಿ ಹದಿಮೂರು ಹೊಸ ವಿಶ್ವವಿದ್ಯಾನಿಲಯಗಳನ್ನು ರಾಜ್ಯ ಸರ್ಕಾರವೇ ಸ್ಥಾಪಿಸಿದೆ. ಗಮನಿಸಿ. ಇದಕ್ಕೆ ಮೊದಲಿನ 90 ವರ್ಷಗಳಲ್ಲಿ ನಾವು ಸ್ಥಾಪಿಸಿದ್ದ ವಿಶ್ವವಿದ್ಯಾನಿಲಯ ಗಳ ಸಂಖ್ಯೆ ಕೇವಲ 11. ಹೊಸ ಸಂಸ್ಥೆಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿಯನ್ನು ಇನ್ನೂ ಒದಗಿಸಲಾಗಿಲ್ಲ. ಹಾಗೂ ಮುಂದಿನ ಒಂದೆರಡು ದಶಕಗಳಲ್ಲಾದರೂ ಅಗತ್ಯ ಸೌಕರ್ಯಗಳು ಲಭ್ಯವಾಗುತ್ತವೆ ಎನ್ನುವ ಖಾತ್ರಿಯಿಲ್ಲ.ಉನ್ನತಶಿಕ್ಷಣಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ಯಾವ ಬಗೆಯವು ಎನ್ನುವುದನ್ನು ವಿವರಿಸಬಯಸುತ್ತೇನೆ. ಮೂರು ಬಗೆಯ ಬಿಕ್ಕಟ್ಟುಗಳನ್ನು ನಾನು ಇಲ್ಲಿ ಗುರುತಿಸಬಯಸುತ್ತೇನೆ.ಗ್ರಾಮೀಣ ಕರ್ನಾಟಕದಲ್ಲಿ ಹೇರಳವಾಗಿರುವ ಇಂಗ್ಲೀಷ್ ಮಾಧ್ಯಮದ ಸಿ.ಬಿ.ಎಸ್.ಸಿ. ಶಾಲೆಯ ನಿರ್ವಾಹಕ ಇಲ್ಲವೆ ಪ್ರಾಂಶುಪಾಲರನ್ನು ಕೇಳಿದರೆ, ಅವರ ಶಾಲೆಯಲ್ಲಿ ವಿದ್ಯಾರ್ಥಿಗಳು ಏನನ್ನು ಹೇಗೆ ಕಲಿಯುತ್ತಾರೆ ಎಂದು ಸ್ಪಷ್ಟವಾಗಿ ಹೇಳಬಲ್ಲರು. ಇದೇ ರೀತಿಯ ಸ್ಪಷ್ಟತೆಯನ್ನು ಕೆಲವು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿಯು ಇಂದು ನಾವು ಕಾಣಬಹುದು.ಹಾಗಾಗಿಯೆ ಇಂದು ಶೈಕ್ಷಣಿಕ ಮತ್ತು ಬೋಧನೆಯ ವಿಚಾರಗಳಲ್ಲಿ ಹೊಸತನ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಕಾಣಬರುತ್ತಿದೆ. ಅಂತಹ ಶಾಲೆಗಳಲ್ಲಿ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ದೊರಕುವ ಶಿಕ್ಷಣ ಅಪೇಕ್ಷಣೀಯವೆ ಎನ್ನುವುದನ್ನು ನಾವು ಚರ್ಚಿಸಬಹುದು. ನಾವು ಗಮನಹರಿಸ ಬೇಕಿರುವುದು ವಾಸ್ತವದತ್ತ. ನಮ್ಮ ರಾಜ್ಯ ವಿಶ್ವ ವಿದ್ಯಾನಿಲಯಗಳ ತರಗತಿಗಳಲ್ಲಿ ಏನನ್ನು ಏಕೆ ಕಲಿ ಯುತ್ತಿದ್ದೇವೆ ಎನ್ನುವ ಸ್ಪಷ್ಟತೆಯಿಲ್ಲದೆ ವಿದ್ಯಾರ್ಥಿಗಳು ಪದವೀಧರರಾಗುತ್ತಿದ್ದಾರೆ!ಈ ಶೈಕ್ಷಣಿಕ ಬಿಕ್ಕಟ್ಟು ಮತ್ತೊಂದು ರೀತಿಯಲ್ಲಿ ನಮಗೆ ಕಾಣಿಸಿಕೊಳ್ಳುತ್ತದೆ. ನಾವು ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಸುವ  ಜ್ಞಾನಶಿಸ್ತುಗಳಿಗೂ (ಡಿಸಿಪ್ಲಿನ್‌ಗಳು) ಜಾಗತಿಕವಾಗಿ ಅದೇ ಹೆಸರಿನಿಂದ ಇರುವ ಜ್ಞಾನಶಿಸ್ತುಗಳಿಗೂ ಬಹಳಷ್ಟು ಅಂತರವಿದೆ. ಅಂದರೆ ನಾವು ಬೋಧಿಸುವ ಅಥವಾ ಸಂಶೋಧನೆ ಮಾಡುವ ಇತಿಹಾಸ ಅಥವಾ ಸಮಾಜಶಾಸ್ತ್ರಕ್ಕೂ ಹೊರಗಿನ ಪ್ರಪಂಚದಲ್ಲಿ ಇದೇ ಹೆಸರಿನಿಂದ ಕರೆಯಲ್ಪಡುವ ಜ್ಞಾನಶಿಸ್ತಿಗೂ ಹೆಚ್ಚಿನ ಸಂಬಂಧವಿಲ್ಲ.ಈ ಮಾತು ವಿಜ್ಞಾನ ಮತ್ತು ತಂತ್ರಜ್ಞಾನಗಳಿಗಿಂತ ಸಮಾಜ ಮತ್ತು ಮಾನವಿಕ ವಿಜ್ಞಾನಗಳಿಗೆ (ಸಾಹಿತ್ಯವೂ ಸೇರಿದಂತೆ) ಹೆಚ್ಚು ಅನ್ವಯವಾಗುತ್ತದೆ. ಅಂದರೆ ನಮ್ಮ ವಿದ್ಯಾರ್ಥಿಗಳಿಗೆ ಅವರು ಕಲಿಯುವ ವಿಷಯವನ್ನು ಸರಿಯಾಗಿ ಕಲಿಸುತ್ತಿಲ್ಲ. ಆದುದರಿಂದ ಕರ್ನಾಟಕದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ವಿದ್ಯಾರ್ಥಿಯೊಬ್ಬ, ಆತನೆಷ್ಟೇ ಪ್ರತಿಭಾವಂತನಿದ್ದರೂ ತನ್ನ ಜ್ಞಾನಶಿಸ್ತಿನ ಪ್ರಾಥಮಿಕ ವಿಷಯಗಳನ್ನೂ ಕಲಿತಿರುವುದಿಲ್ಲ.ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನಿಷ್ಠ ಮೂಲಭೂತ ತತ್ವಗಳನ್ನು ಹೇಳಿಕೊಡುವಾಗಲಾದರೂ ಎಲ್ಲೆಡೆ ಬೋಧಿಸುತ್ತಿರುವುದನ್ನೆ ಕಲಿಸಲಾಗುತ್ತಿದೆ. ಹಾಗಾಗಿ ಈ ವಿಷಯಗಳಲ್ಲಿ ಬೋಧನೆ ಮತ್ತು ಸಂಶೋಧನೆಗಳು ಜಾಗತಿಕ ಪ್ರವೃತ್ತಿಗಿಂತ ತುಂಬ ಭಿನ್ನವಾಗಿಲ್ಲ. ಆದರೆ ಇಲ್ಲಿ ಸಹ ಗುಣಮಟ್ಟ, ಸಂಶೋಧನೆಯ ಸಂಸ್ಕೃತಿ ಮತ್ತು ಸಂಶೋಧನೆಯ ಪ್ರಸ್ತುತತೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳಿವೆ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ ನಾವು ಏನನ್ನು ಹೇಗೆ ಮತ್ತು ಏಕೆ ಕಲಿಸುತ್ತಿದ್ದೇವೆ ಎಂಬ ಪ್ರಾಥಮಿಕ ಪ್ರಶ್ನೆಯೊಡನೆ ನಮ್ಮ ಮರುಚಿಂತನೆ ಪ್ರಾರಂಭವಾಗಬೇಕು.ಮೂರನೆಯದಾಗಿ, ಹೊಸ ಜ್ಞಾನವನ್ನು ಸೃಷ್ಟಿಸುವ ಕೆಲಸಗಳು ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿಲ್ಲ. ಹಿಂದೆಯೂ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನ ಸೃಷ್ಟಿಸುವ ಶ್ರೇಷ್ಠ ಕೇಂದ್ರಗಳಾಗಿರಲಿಲ್ಲ. ಆದರೂ 1970-80ರ ದಶಕದ  ತನಕ ಒಂದು ಮಟ್ಟದ ಸಂಶೋಧನಾ ಮತ್ತು ಜ್ಞಾನಸೃಷ್ಟಿಯ ಸಾಮರ್ಥ್ಯ ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿದ್ದವು.ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದ, ಜಾಗತಿಕ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಿದ್ದ ಪ್ರಾಧ್ಯಾಪಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಆದರೆ 1980ರ ನಂತರ ಜಾಗತಿಕ ಬೌದ್ಧಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಸಮಾಜ ಮತ್ತು ಮಾನವಿಕ ವಿಜ್ಞಾನಗಳ ಸಂದರ್ಭದಲ್ಲಿ ಈ ಮಾತು ವಿಶೇಷವಾಗಿ ಸತ್ಯ.ನನ್ನ ಮಾತು ಉತ್ಪ್ರೇಕ್ಷೆಯೆನಿಸಿದರೆ, ಈ ಕೆಳಗಿನ ಪ್ರಶ್ನೆಯನ್ನು ಕೇಳಿಕೊಳ್ಳಿ. ಕರ್ನಾಟಕದ ಸಮಾಜ, ರಾಜಕಾರಣ, ಇತಿಹಾಸ ಅಥವಾ ಸಾಂಸ್ಕೃತಿಕ ಪರಂಪರೆಗಳಿಗೆ ಸಂಬಂಧಿಸಿದಂತೆ ನಮ್ಮ ಅರಿವನ್ನೆ ಬದಲಿಸಿದ ಬರಹ, ಸಂಶೋಧನೆ ಕಳೆದ ನಲವತ್ತು ವರ್ಷಗಳಲ್ಲಿ ಪ್ರಕಟವಾಗಿದೆಯೇ? ನಮ್ಮ ಪೂರ್ವಜರು ತಮ್ಮ ಪರಿಸರವನ್ನು, ತಮಗೆ ಲಭ್ಯವಿದ್ದ ಸಂಪನ್ಮೂಲ ಗಳನ್ನು ಬಳಸಿದ ರೀತಿ ಹೇಗೆ?ಸ್ವಾತಂತ್ರ್ಯಾನಂತರದ ಸಾರ್ವಜನಿಕ ನೀತಿಗಳ ಪ್ರಭಾವ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಆಗಿದೆ? ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ಕುರಿತಂತೆ ಕನ್ನಡ ಭಾಷಿಕರ ಅರಿವು - ನಂಬಿಕೆಗಳೇನು? ಇಂದು ಕರ್ನಾಟಕಕ್ಕೆ ಅಗತ್ಯವಿರುವ ತಂತ್ರಜ್ಞಾನಗಳು ಮತ್ತು ಅಭಿವೃದ್ಧಿಯ ಮಾದರಿಗಳು ಯಾವುವು? ಇಂತಹ ಪ್ರಶ್ನೆಗಳಿಗೆ ನಮಗೆ ಹೊಸ ದೃಷ್ಟಿಕೋನಗಳನ್ನು ಕೊಡಬಲ್ಲ ಮೌಲಿಕ ಉತ್ತರಗಳು ಸಿಗುತ್ತಿಲ್ಲ.ಎರಡನೆಯ ಮತ್ತು ಮೂರನೆಯ ಬಿಕ್ಕಟ್ಟುಗಳಿಗೆ ಕಾರಣವೆಂದರೆ ಕರ್ನಾಟಕದಾಚೆಗೆ ನಡೆಯುತ್ತಿದ್ದ ಬೌದ್ಧಿಕ, ತಾತ್ವಿಕ ಮತ್ತು ಶೈಕ್ಷಣಿಕ ಬೆಳವಣಿಗೆಗಳನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು. ಅವುಗಳನ್ನು ಅನುಲಕ್ಷಿಸುವ, ಅನುಸಂಧಾನ ಮಾಡುವ ಸಾಮರ್ಥ್ಯವು ನಿಧಾನವಾಗಿ ಬೆಳೆಯುತ್ತದೆ.ಇದು ದಶಕಗಳ ಕಾಲ ನಡೆಯುವ ಪ್ರಕ್ರಿಯೆ. ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವುದು ಇಲ್ಲವೆ ವಿಶ್ವವಿದ್ಯಾನಿಲಯಗಳ ಆಡಳಿತದ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತಗಾರರ ಹೊಸದೊಂದು ಕೇಡರ್ ಸ್ಥಾಪಿಸುವುದು ಇವೆಲ್ಲವೂ ಸುಲಭದ ಸಾಧ್ಯತೆಗಳು. ಆದರೆ ನಾನು ಮೇಲೆ ಪ್ರಸ್ತಾಪಿಸಿದ ರೀತಿಯ ನೈತಿಕ, ಶೈಕ್ಷಣಿಕ ಮತ್ತು ಬೌದ್ಧಿಕ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸರಳವಲ್ಲ.ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳ ಪುನರುಜ್ಜೀವನ ಪ್ರಾರಂಭವಾಗಬೇಕಿರುವುದು ಎರಡು ಕ್ರಿಯೆಗಳಿಂದ. ಮೊದಲನೆಯದು, ನಮ್ಮ ಉನ್ನತ ಶಿಕ್ಷಣದ ಆದ್ಯತೆಗಳೇನು ಹಾಗೂ ನಮ್ಮ ಸಮಾಜದ ಯುವಜನತೆಗೆ ಯಾವ ಪ್ರಮಾಣದಲ್ಲಿ ಉನ್ನತ ಶಿಕ್ಷಣದ ಅವಕಾಶ ನೀಡಬಯಸುತ್ತೇವೆ ಎನ್ನುವ ಬಗ್ಗೆ ವ್ಯಾವಹಾರಿಕವಾಗಿ ಮತ್ತು ತಾತ್ವಿಕವಾಗಿ ಸ್ಪಷ್ಟವಾದ ನಿಲುವನ್ನು ತಳೆಯಬೇಕಿದೆ.ಕರ್ನಾಟಕ ಜ್ಞಾನ ಆಯೋಗವು ಎಲ್ಲ ಹೆಣ್ಣುಮಕ್ಕಳಿಗೆ ಉನ್ನತಶಿಕ್ಷಣ ನೀಡಬೇಕೆಂದು ತನ್ನ ಶಿಫಾರಸ್ಸುಗಳಲ್ಲಿ ಹೇಳುತ್ತದೆ. ಇದು ಅಪೇಕ್ಷಣೀಯವೊ ಅಥವಾ ಪ್ರಾಯೋಗಿಕವೊ ನನಗೆ ತಿಳಿಯುತ್ತಿಲ್ಲ. ಇಂದಿರುವ ನಮ್ಮ ಬಹುತೇಕ ಪದವಿ ಕಾರ್ಯಕ್ರಮಗಳು ವಸಾಹತುಶಾಹಿ ಶಿಕ್ಷಣ ವ್ಯವಸ್ಥೆಯ ಬಳುವಳಿಯಾದರೆ, ನಮಗೆ ಅನಗತ್ಯವಾಗಿರುವುದನ್ನು ನಿರ್ದ್ಯಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಮೆಕಾಲೆಯನ್ನು ಬೈದುಕೊಳ್ಳುತ್ತಲೆ, ಯಾವುದಕ್ಕೂ ಉಪಯೋಗವಿಲ್ಲದ ಪದವಿ ಶಿಕ್ಷಣ ಕಾರ್ಯಕ್ರಮವನ್ನು ಮುಂದುವರೆಸುವುದು ಅರ್ಥಹೀನ.ಎರಡನೆಯದಾಗಿ, ನಾವು ಮಾಡಲೇಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಅಧ್ಯಾಪಕರ ನೇಮಕಾತಿಯನ್ನು ಸರಿಯಾಗಿ ನಿರ್ವಹಿಸುವುದು. ಕಳೆದ ಕೆಲವು ದಶಕಗಳ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಧ್ಯಾಪಕರ ನೇಮಕಾತಿಯಲ್ಲಿ ಒಂದು ಸರಳ ಸೂತ್ರವನ್ನು ಅನುಸರಿಸುವುದು ಬಹಳ ಮುಖ್ಯವೆಂದು ನನಗನ್ನಿಸುತ್ತದೆ.ಅದೇನೆಂದರೆ ತಮ್ಮ ಅಧ್ಯಯನ ಶಿಸ್ತಿನಲ್ಲಿ ಜಾಗತಿಕ ಮಟ್ಟಿದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥೈಸಿಕೊಂಡು, ಪ್ರತಿಕ್ರಿಯಿಸುವ ಸಾಮರ್ಥ್ಯ ಇರುವವರನ್ನು ಆದ್ಯತೆಯ ಮೇರೆಗೆ ನಮ್ಮ ವಿಶ್ವವಿದ್ಯಾನಿಲಯಗಳೊಳಗೆ ಎಲ್ಲ ಹಂತಗಳಲ್ಲಿಯೂ ತರಬೇಕು. ಅವರಿಗೆ ಬೋಧನೆ ಮತ್ತು ಸಂಶೋಧನೆಗಳೆರಡರ ಬಗ್ಗೆಯೂ ಬದ್ಧತೆಯಿರಬೇಕು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅಂತಹವರ ಸಂಖ್ಯೆ ಹೆಚ್ಚಿದಷ್ಟೂ ಮಿಕ್ಕ ಸಮಸ್ಯೆಗಳನ್ನು ಪರಿಹರಿಸುವುದು ಸುಲಭವಾಗುತ್ತದೆ.ವಿ.ವಿಗಳಲ್ಲಿ ನೈತಿಕ ಅಧಃಪತನ!

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಬಹುಮುಖ್ಯ ಬಿಕ್ಕಟ್ಟಾಗಿ ನನಗೆ ಕಾಣುವುದು ಅವುಗಳ ನೈತಿಕ ಅಧಃಪತನ. ಈ ಅಂಶವನ್ನು ಒಪ್ಪಿಕೊಳ್ಳದೆ, ನೇರವಾಗಿ ಎದುರಿಸದೆ ಬದಲಾವಣೆ ತರಲು ಸಾಧ್ಯವಿಲ್ಲ. ಭ್ರಷ್ಟಾಚಾರ,ನಿಯಮಗಳ ಉಲ್ಲಂಘನೆ ಇತ್ಯಾದಿಗಳು ಈ ನೈತಿಕ ಕುಸಿತದ ಒಂದು ಭಾಗ ಮಾತ್ರ. ಅದಕ್ಕಿಂತ ಮುಖ್ಯವಾಗಿ ಇಂದು ನಮ್ಮ ವಿಶ್ವವಿದ್ಯಾನಿಲಯಗಳು ಪ್ರಜಾಸತ್ತಾತ್ಮಕ ನಡವಳಿಕೆಗಳಿಲ್ಲದ, ಶ್ರೇಣೀಕೃತ ಸಂಸ್ಥೆಗಳಾಗಿವೆ.ಇಲ್ಲಿ ಹೊಸ ವಿಚಾರಗಳ ಚರ್ಚೆ, ಹೊಸ ಆವಿಷ್ಕಾರಗಳ ಶೋಧನೆ, ಹೊಸ ಸಾಧ್ಯತೆಗಳ ಕಲ್ಪನೆಗಿಂತ ಭಟ್ಟಂಗಿತನ ಮತ್ತು ಅಧಿಕಾರದಲ್ಲಿರುವವರ ಓಲೈಸುವಿಕೆಯೇ ಹೆಚ್ಚು.ನಿನ್ನೆಯ ಸಹೋದ್ಯೋಗಿಯು ಇಂದು ಕುಲಪತಿ ಅಥವಾ ಕುಲಸಚಿವನಾಗುತ್ತಿದ್ದಂತೆ ‘ಸಾಹೇಬ’ರಾಗಿಬಿಡುತ್ತಾರೆ. ಜಾತಿ, ಸ್ವಜನಪಕ್ಷಪಾತಗಳು ಹಿಂದೆಂದಿಗಿಂತಲೂ ಹೆಚ್ಚಿದೆ. ವಿಶ್ವವಿದ್ಯಾನಿಲಯಗಳ ಒಳಗೆ ಖಾಸಗಿ ಸ್ನೇಹ ಸಂಬಂಧಗಳು ಅಥವ ಸಹಯೋಗದ ಸಂಶೋಧನೆಯ ಯೋಜನೆಗಳು, ವಿದ್ಯಾರ್ಥಿಗಳನ್ನು ಅಥವಾ ಯುವ ವಿದ್ವಾಂಸರನ್ನು ಬೆಳೆಸುವುದು ಎಲ್ಲವೂ ಜಾತಿಯ ಆಧಾರದ ಮೇರೆಗೆ ಮಾತ್ರ.ಒಂದೆಡೆ ಸೈದ್ಧಾಂತಿಕ ನೆಲೆಗಟ್ಟಿನ ಪ್ರತಿಭಟನೆಯ ಸಂಸ್ಕೃತಿ ಮಾಯವಾಗುತ್ತಿದೆ. ಮತ್ತೊಂದೆಡೆ ಪ್ರತಿಭಟನೆಗಳು ಜಾತಿ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ, ಜಾತಿ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿವೆ. ಇದು ಸರಿಯಲ್ಲ ಎಂದು ಹೇಳುವ ಅಧ್ಯಾಪಕರಾಗಲಿ, ವಿದ್ಯಾರ್ಥಿಗಳಾಗಲಿ ಬೆರೆಳೆಣಿಕೆಗೂ ಇಲ್ಲ.ನಮ್ಮ ವಿಶ್ವವಿದ್ಯಾನಿಲಯಗಳು ಎಂದೂ ಪ್ರಪಂಚದ ಅತ್ಯಂತ ಪ್ರತಿಷ್ಠಿತ ಜ್ಞಾನದ ಕೇಂದ್ರಗಳಾಗಿರಲಿಲ್ಲ. ಆದರೆ ಎಂಬತ್ತರ ದಶಕದವರೆಗೂ ಅಧ್ಯಾಪಕ – ವಿದ್ಯಾರ್ಥಿ ಸಮುದಾಯಗಳಲ್ಲಿ ಇದ್ದ ದಿಟ್ಟತನವನ್ನು, ಸಮಾಜಮುಖಿ ಮನಸ್ಸನ್ನು, ಸಮಕಾಲೀನ ಪ್ರಪಂಚಕ್ಕೆ ಸ್ಪಂದಿಸುವ ಶಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯದ ಮುಖ್ಯಮಂತ್ರಿಯ ಕೊರಳಪಟ್ಟಿಗೆ ಕೈಹಾಕಿ ಪ್ರಶ್ನಿಸುವ ಅಧ್ಯಾಪಕರಿದ್ದರು. ಇಂದು ವಿಧಾನಸೌಧದ ಸುತ್ತ ಗಿರಕಿ ಹೊಡೆಯುವವರೆ ಎಲ್ಲರೂ.ನನ್ನ ಮಾತಿನ ಅರ್ಥ ಸರಳ. ಆಧುನಿಕ ಭಾರತದಲ್ಲಿ ಹೊಸ ಸಮಾಜ-ನಾಗರಿಕತೆಗಳನ್ನು ಕಟ್ಟಲು ನಾವು ಉನ್ನತ ಶಿಕ್ಷಣವನ್ನೇ ರಾಮಬಾಣವೆಂದು ಭಾವಿಸಿದ್ದೆವು. ಅಂದರೆ ಅಸಮಾನತೆ, ಕಂದಾಚಾರಗಳೆಲ್ಲವನ್ನೂ ಮೀರಿ ಹೊಸ ಸಮಾಜವನ್ನು ಕಟ್ಟಬೇಕಾದರೆ ಅದು ಶಿಕ್ಷಣದ ಮೂಲಕ ಸಾಧ್ಯ ಎನ್ನುವುದು ನಮ್ಮ ನಂಬಿಕೆಯಾಗಿತ್ತು. ಇದು ಹೊಸಬಗೆಯ ಪಾಶ್ಚಿಮಾತ್ಯ ಮಾದರಿಯ ಇಲ್ಲವೆ ದೇಶಿ ಮಾದರಿಯ ವಿಶ್ವವಿದ್ಯಾನಿಲಯಗಳಿಂದ ಆಗಬಹುದು ಎನ್ನುವ ಆಶಾವಾದ ನಮಗಿತ್ತು.ಹಾಗಾಗಿಯೇ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಟಾಗೋರ್, ಗಾಂಧಿ, ಮಾಳವೀಯ ಮೊದಲಾದವರು ಶಾಂತಿನಿಕೇತನ, ಗುಜರಾತ್ ವಿದ್ಯಾಪೀಠ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು. ಅಂದರೆ ನಮ್ಮ ವಿಶ್ವವಿದ್ಯಾನಿಲಯಗಳು ನಾವು ಕನಸು ಕಾಣುತ್ತಿದ್ದ ರೀತಿಯ ಸಮಾಜವನ್ನು ತಮ್ಮ ಸಮುದಾಯಗಳೊಳಗೆ ಮೊದಲು ಸಾಕಾರಗೊಳಿಸಿಕೊಳ್ಳುತ್ತವೆ ಎಂದು ನಾವು ಅಂದುಕೊಂಡಿದ್ದೆವು.ಆದರೆ ಅವುಗಳು ನಮ್ಮ ಸಮಾಜಕ್ಕೆ ಆದರ್ಶಗಳಾಗುವ ಬದಲು, ನಮ್ಮ ಸಮಾಜದ ರೋಗಲಕ್ಷಣಗಳನ್ನೇ ರೂಡಿಸಿಕೊಂಡ, ಅವುಗಳನ್ನೇ ಪ್ರತಿಫಲಿಸುವ ಸಂಸ್ಥೆಗಳಾಗಿವೆ. ನಾನು ಹಿಂದೊಮ್ಮೆ ಬರೆದಂತೆ:  ಸುಶಿಕ್ಷಿತರೇ ಇರುವ ಸಮುದಾಯದೊಳಗೆ ಸಮಾನತೆಯ, ಪ್ರಜಾಸತ್ತಾತ್ಮಕ ಸಂಸ್ಕೃತಿಯ, ಪಾರದರ್ಶಕತೆಯ ನಡವಳಿಕೆಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಆಗದಿದ್ದರೆ, ಬೇರೆಲ್ಲಿ ಇದು ಸಾಧ್ಯ?ಉನ್ನತ ಶಿಕ್ಷಣ ಕ್ಷೇತ್ರದ ಪುನಾರಚನೆ ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ಆಧರಿಸಿದ ಹೊಸ ಸಂಸ್ಕೃತಿಯ ಆಧಾರದ ಮೇಲೆ ಮಾತ್ರ ಸಾಧ್ಯ. ನಾನು ಪ್ರಸ್ತಾಪಿಸಬಯಸುವ ಎರಡನೆಯ ಬಿಕ್ಕಟ್ಟು ಶೈಕ್ಷಣಿಕವಾದುದು. ವಿಶ್ವವಿದ್ಯಾನಿಲಯಗಳು ನಡೆಸುವ ಸ್ನಾತಕ ಅಥವಾ ಸ್ನಾತಕೋತ್ತರ ಕಾರ್ಯಕ್ರಮಗಳ ಶೈಕ್ಷಣಿಕ ಗುರಿಗಳೇನು? ಈ ಕಾರ್ಯಕ್ರಮಗಳ ಪ್ರಸ್ತುತತೆ ಇಂದಿನ ಪ್ರಪಂಚಕ್ಕೆ ಯಾವ ಬಗೆಯದು? ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬಲ್ಲ ಕುಲಪತಿಗಳಾಗಲಿ, ಡೀನ್ ಅಥವಾ ಅಧ್ಯಯನ ಮಂಡಳಿಯ ಅಧ್ಯಕ್ಷರುಗಳು ದೊರಕುತ್ತಾರೆ ಎನ್ನುವ ವಿಶ್ವಾಸ ನನಗಿಲ್ಲ.***

*  ಉನ್ನತ ಶಿಕ್ಷಣ ಕ್ಷೇತ್ರದ ನೈತಿಕ ಅಧಃಪತನವನ್ನು ಒಪ್ಪಿಕೊಂಡು ಪರಿಹಾರಗಳನ್ನು ರೂಪಿಸಬೇಕು.

* ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ನೆಲಗಟ್ಟಾಗಿಸಿಕೊಂಡ ಸಾಂಸ್ಥಿಕ ಸಂಸ್ಕೃತಿ ನೆಲೆಯಾಗಬೇಕು.

*  ಶ್ರೇಣೀಕರಣದ ಸಾಂಸ್ಥಿಕ ವ್ಯವಸ್ಥೆ ಬದಲಾಗಬೇಕು.

* ನಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೊಂದು ಶೈಕ್ಷಣಿಕ ಗುರಿಯನ್ನು ಕಂಡುಕೊಳ್ಳಬೇಕು.

* ಜ್ಞಾನಶಿಸ್ತಿನ ಜಾಗತಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಿಕ್ಷಕರ ನೇಮಕವಾಗಬೇಕು.(ಲೇಖಕರು ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಪ್ರಾಧ್ಯಾಪಕರು) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry