ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಮುಖ ನಡಿಗೆಯ ಸರ್ಕಸ್‌

ನಟರಾಜ ಸರ್ವಿಸ್
Last Updated 17 ನವೆಂಬರ್ 2016, 11:33 IST
ಅಕ್ಷರ ಗಾತ್ರ

ಚಿತ್ರ: ನಟರಾಜ ಸರ್ವಿಸ್  
ನಿರ್ಮಾಣ: ಎನ್.ಎಸ್ . ರಾಜ್ ಕುಮಾರ್  
ನಿರ್ದೇಶನ: ಪವನ್ ಒಡೆಯರ್  
ತಾರಾಗಣ: ಶರಣ್, ಮಯೂರಿ, ರವಿಶಂಕರ್, ರಾಕ್‌ಲೈನ್ ವೆಂಕಟೇಶ್

ಸರಳರೇಖೆ ಎಳೆಯುವುದು ಸುಲಭ; ಸರಳವಾದರೂ ಸುಂದರ ಎಂಬಂಥ ಸಿನಿಮಾ ಮಾಡುವುದು ಕಷ್ಟ. ನಿರ್ದೇಶಕ ಪವನ್ ಒಡೆಯರ್ ಚಿತ್ರ ಹೆಣೆಯುವುದರಲ್ಲಿ ಸರಳ ಸೂತ್ರ ನೆಚ್ಚಿಕೊಂಡವರು. ‘ಗೋವಿಂದಾಯ ನಮಃ’, ‘ಗೂಗ್ಲಿ’ ಯಶಸ್ಸಿನ ನಂತರ ಅವರ ಆತ್ಮವಿಶ್ವಾಸ ಈ ನಿಟ್ಟಿನಲ್ಲಿ ಹೆಚ್ಚಾಗಿರಲಿಕ್ಕೂ ಸಾಕು. ‘ರಣವಿಕ್ರಮ’ ಸಿನಿಮಾ ಮಾಡುವಾಗ ಅವರು ಎಂದಿಗಿಂತ ಹೆಚ್ಚು ಬುದ್ಧಿ ಖರ್ಚು ಮಾಡಿದ್ದರು. ‘ನಟರಾಜ ಸರ್ವೀಸ್’ ಚಿತ್ರದಲ್ಲಿ ಅವರು ಮತ್ತೆ ಕಡಿಮೆ ಬುದ್ಧಿ ಖರ್ಚು ಮಾಡುವ ಹಾದಿಗೆ ಹೊರಳಿದ್ದಾರೆ.

ಸಣ್ಣ ಪುಟ್ಟ ಕಳ್ಳತನ ಮಾಡಿ ಒಂದು ವಾರ ಜೈಲು ಸವೆಸಿ ಬರುವ ನಾಯಕ ನಟರಾಜನಿಗೆ ದೊಡ್ಡ ದರೋಡೆ ಮಾಡಿ, ಸುದೀರ್ಘ ಕಾಲ ಜೈಲೂಟ ಮಾಡುವ ಬಯಕೆ. ಜೈಲಿನಲ್ಲಿ ಮಾಡುವ ಸಾಂಬಾರು ಅವನಿಗೆ ತುಂಬ ಇಷ್ಟ. ಅಂಥವನು ಲತ್ತೆ ಅದೃಷ್ಟದ ನಾಯಕಿಯನ್ನು ಸಂಧಿಸುತ್ತಾನೆ. ಆ ನಾಯಕಿಯನ್ನು ಯಾರು ಪ್ರೀತಿಸಿದರೂ ಅವರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ನಾಯಕಿಯ ಜೀವಕ್ಕೆ ಸಂಚಕಾರ ಇರುವುದನ್ನು ಅರಿತ ಅವನು ಅವಳಿಗೆ ಸಾಥ್ ನೀಡುತ್ತಾನೆ. ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಆಮೇಲಿನದ್ದೆಲ್ಲ ಮೆಲೋಡ್ರಾಮಾ.

ತರ್ಕದ ಹಂಗು ಪವನ್ ಒಡೆಯರ್ ಅವರಿಗೆ ಎಂದಿಗೂ ಇಲ್ಲ. ತಿಳಿಹಾಸ್ಯ, ತೆಳುಹಾಸ್ಯ ಆಗೀಗ ಅವರ ಕೈಹಿಡಿದಿರುವುದಿದೆ. ಈ ಸಿನಿಮಾದಲ್ಲೂ ಕೆಲವೇ ಸಂದರ್ಭಗಳಲ್ಲಿ ನಗು ಬರುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಏನೂ ಅನಿಸುವುದಿಲ್ಲ. ಮನರಂಜನೆ ಎಂದುಕೊಂಡು ಭಾವಿಸಿಕೊಂಡ ಸನ್ನಿವೇಶಗಳು ತೆರೆಯಮೇಲೆ ಬಂದಾಗ ಪೇಲವ ಎನಿಸುವ ಉದಾಹರಣೆಗಳು ಹೊಸತೇನಲ್ಲ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ದೊಡ್ಡ ಮನಸ್ಸು ಮಾಡಬೇಕಷ್ಟೆ.

ಚಿತ್ರದಲ್ಲಿ ಕಥಾನಕಗಳು ಕಡಿಮೆ. ಕಥೆಯನ್ನು ಕುರಿತು ಹೇಳದೇ ಇರುವುದೇ ವಾಸಿ. ಪ್ರವಾಸದ ರೋಚಕತೆ ತರಬಹುದಾದ ಹಾಗೂ ಅರಣ್ಯವಾಸದ ಕುತೂಹಲ ಕೆರಳಿಸಬಹುದಾದ ಸಾಧ್ಯತೆಗಳಿಗೆ ಅವರು ಬೆನ್ನು ಮಾಡಿರುವುದಕ್ಕೂ ಸಿನಿಮಾದ ಬಜೆಟ್‌ಗೂ ಸಂಬಂಧ ಇರಬಹುದು. ಮೌಢ್ಯವನ್ನು ನೆಚ್ಚಿಕೊಂಡರೂ ಅದನ್ನು ಒಂದು ವ್ಯಂಗ್ಯದ ನೋಟದಲ್ಲಿಯಾದರೂ ನೋಡಬೇಕು. ಅದನ್ನೂ ನಿರ್ದೇಶಕರು ಮಾಡಿಲ್ಲ.

ನಾಯಕ ಶರಣ್ ಸಂಭಾಷಣೆ ಹೇಳುವ ಟೈಮಿಂಗ್‌ನಲ್ಲಿ ಹಳೆಯ ಲಯವಿದೆ. ಅವರ ಅಭಿನಯ ಪ್ರತಿಭೆಯ ಕುರಿತೂ ಅನುಮಾನಗಳಿಲ್ಲ. ಆದರೆ, ಈ ಚಿತ್ರದಲ್ಲಿ ಅವರು ತುಳುಕಿಸುವ ಭಾವಗಳಿಗೆ ಕಥಾಚೌಕಟ್ಟಿನ ತೂಕ ಸಿಕ್ಕಿಲ್ಲ. ನಾಯಕಿ ಮಯೂರಿ ಮಂಕು ಕವಿದಂತೆ ಇದ್ದಾರೆ. ಸಣ್ಣ ಪಾತ್ರಗಳಲ್ಲಿ ರವಿಶಂಕರ್ ಹಾಗೂ ರಾಕ್‌ಲೈನ್ ವೆಂಕಟೇಶ್ ಗಮನ ಸೆಳೆಯುತ್ತಾರೆ. ಅನೂಪ್ ಸೀಳಿನ್ ಸಂಗೀತ ಚಿತ್ರದಲ್ಲಿ ಮೆಚ್ಚಬಹುದಾದ ಅಂಶ.

ಬ್ರೇನ್ ಲೆಸ್ ಹಾಸ್ಯ ಅಥವಾ ತರ್ಕದ ಹಂಗಿಲ್ಲದ ಹಾಸ್ಯ ನೆಚ್ಚಿಕೊಂಡು ಕೆಲವು ಸಿನಿಮಾಗಳು ಗೆದ್ದಿರಬಹುದು. ಆದರೆ, ಸರಳವಾಗಿರುವುದು ಸುಲಭ ಅಲ್ಲ ಎನ್ನುವುದರಲ್ಲಿಯೇ ಇನ್ನೊಂದು ಸತ್ಯ ಅಡಗಿದೆ. ಅದು ಪವನ್ ಒಡೆಯರ್ ಅವರಿಗೆ ಈ ಚಿತ್ರದ ಮಟ್ಟಿಗಂತೂ ದಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT