ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಸಿಂಧು

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ; ಅಜಯ್‌ಗೆ ಗೆಲುವು
Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಫುಜೌ , ಚೀನಾ (ಪಿಟಿಐ):  ಸೊಗಸಾಗಿ ಆಡಿದ ಭಾರತದ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಅಜಯ್‌ ಜಯರಾಮ್‌ ಅವರೂ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಸಿಂಧು 18–21, 22–20, 21–17ರಲ್ಲಿ ಅಮೆರಿಕದ ಬೆಯಿವೆನ್‌ ಜಾಂಗ್‌ ಅವರನ್ನು ಪರಾಭವಗೊಳಿಸಿದರು.

ಹಿಂದಿನ ಪಂದ್ಯದಲ್ಲಿ ಬಲಿಷ್ಠ ಎದುರಾಳಿಯನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಏಳನೇ ಶ್ರೇಯಾಂಕದ ಸಿಂಧು ಮೊದಲ ಗೇಮ್‌ನಲ್ಲಿ ದಿಟ್ಟ ಆಟ ಆಡಲು ವಿಫಲರಾದರು. ಎದುರಾಳಿ ಆಟಗಾರ್ತಿಯ ಮನಮೋಹಕ ಸರ್ವ್‌ಗಳನ್ನು ಹಿಂತಿರುಗಿಸಲು ಪ್ರಯಾಸ ಪಟ್ಟ ಭಾರತದ ಆಟಗಾರ್ತಿ ನಿರಾಸೆ ಕಂಡು ಹಿನ್ನಡೆ ಅನುಭವಿಸಿದರು.

ಇದರಿಂದ ಹೈದರಾಬಾದ್‌ನ ಸಿಂಧು ಎದೆಗುಂದಲಿಲ್ಲ. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿರುವ ಅವರು ಎರಡನೇ ಗೇಮ್‌ನಲ್ಲಿ ಪುಟಿದೆದ್ದರು. ಚುರುಕಿನ ಸರ್ವ್‌ಗಳನ್ನು ಮಾಡಿ ಪಾಯಿಂಟ್ಸ್‌ ಹೆಕ್ಕಿದ ಭಾರತದ ಆಟಗಾರ್ತಿ ಆಕರ್ಷಕ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಇನ್ನೊಂದೆಡೆ ಅಮೆರಿಕದ ಆಟಗಾರ್ತಿ ಕೂಡ ಮನಮೋಹಕ ಆಟ ಆಡಿ ಪ್ರಬಲ ಪೈಪೋಟಿ ಒಡ್ಡಿದರು. ಒಂದು ಹಂತದಲ್ಲಿ ಇಬ್ಬರೂ 20–20ರಲ್ಲಿ ಸಮಬಲ ಹೊಂದಿದ್ದರು. ಈ ಹಂತದಲ್ಲಿ ಸಿಂಧು ದಿಟ್ಟ ಆಟ ಆಡಿ ಗೇಮ್‌ ಗೆದ್ದರು. ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲೂ ಉಭಯ ಆಟಗಾರ್ತಿಯರು ಪಾಯಿಂಟ್ಸ್‌ ಗಳಿಸಲು ಜಿದ್ದಿಗೆ ಬಿದ್ದವರ ಹಾಗೆ ಸೆಣಸಿದರು. ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅಂಗಳದಲ್ಲಿ ಮಿಂಚಿನ ಸಂಚಲನ ಹುಟ್ಟುಹಾಕಿದ ಸಿಂಧು ಗೆಲುವಿನ ತೋರಣ ಕಟ್ಟಿದರು.

ಅಜಯ್‌ಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಅಜಯ್‌ ಜಯರಾಮ್‌ 20–22, 21–19, 21–12ರಲ್ಲಿ ಹಾಂಕಾಂಗ್‌ನ ವೀ ನಾನ್‌ ಅವರನ್ನು ಪರಾಭವಗೊಳಿಸಿದರು. ಸ್ವಿಸ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ  ಎಚ್‌. ಎಸ್‌. ಪ್ರಣಯ್‌ 17–21, 19–21ರಲ್ಲಿ ಚೀನಾದ ಕ್ವಿಯಾ ಬಿನ್‌ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT