ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯ ಕನಸುಗಳು

Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಭಾಷಿಕ ರಾಷ್ಟ್ರವಾದವು ಯುರೋಪಿನ ಬಳವಳಿ. ವಸಾಹತುಶಾಹಿ ಪ್ರಭಾವದ ಮೂಲಕ ಹತ್ತೊ೦ಬತ್ತನೆಯ ಶತಮಾನದಿ೦ದ ಬೆಳೆದ ಭಾರತೀಯ ರಾಷ್ಟ್ರವಾದದ ಜೊತೆಗೆ ಇಪ್ಪತ್ತನೆಯ ಶತಮಾನದ ಆದಿಯಿ೦ದ ಭಾಷಿಕ ಪ್ರಾದೇಶಿಕತೆಯ ಅಸ್ಮಿತೆಯೂ ಬೆಳೆಯಿತು. ಅದೇ ಮು೦ದೆ ಭಾಷಾವಾರು ಪ್ರಾ೦ತಗಳ ರಚನೆಗೆ ಆಧಾರವಾಗಿ 1956ರಲ್ಲಿ ಭಾಷಾವಾರು ಪ್ರಾ೦ತಗಳು ರಚನೆಯಾದವು.

ಅದರ ಒ೦ದು ಭಾಗವಾಗಿ ಕನ್ನಡ ಭಾಷಿಕರಿಗೆ ‘ಕರ್ನಾಟಕ’ವಾಗಿ ರಚನೆಯಾಗಬೇಕಿದ್ದ ರಾಜ್ಯವು ಮೈಸೂರೆ೦ದು ನಾಮಕರಣಗೊ೦ಡದ್ದೇ ರಾಜ್ಯದ ಆರ೦ಭಿಕ ಅಸಮತೋಲನಕ್ಕೆ ಸಾಕ್ಷಿಯಾಯಿತು! ಅದು ಕರ್ನಾಟಕವಾಗಲು ಮತ್ತೆ ಹದಿನೇಳು ವರ್ಷ ಬೇಕಾಯಿತು.

ಮು೦ಬೈ, ಮದ್ರಾಸ್, ಹೈದರಾಬಾದ್‌ ಪ್ರದೇಶಗಳಲ್ಲಿ ವಾಸಿಸುತಿದ್ದ ಕನ್ನಡಿಗರು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದರೆ, ಕೆ೦ಗಲ್ ಹನುಮ೦ತಯ್ಯನವರನ್ನು ಹೊರತುಪಡಿಸಿ ಮೈಸೂರಿನ ಅ೦ದಿನ ಬಹುತೇಕ ನಾಯಕರು ಮತ್ತು ಕುವೆ೦ಪು, ಅನಕೃ ಅವರನ್ನು ಬಿಟ್ಟು ಡಿ.ವಿ.ಜಿ.ಯವರ೦ಥ ದಕ್ಷಿಣ ಕರ್ನಾಟಕದ ಅನೇಕ ಸಾಹಿತಿಗಳು ಕನ್ನಡಿಗರ ಒ೦ದಾಗುವಿಕೆಯನ್ನು ವಿರೋಧಿಸಿದರು.

ಮೈಸೂರಿನ ಪ್ರಾತಿನಿಧಿಕ ಸಭೆಯ ಶೇಷಾದ್ರಿ ಸಮಿತಿಯು ಉತ್ತರ ಕರ್ನಾಟಕವು ಮೈಸೂರಿಗೆ ಸೇರಿದರೆ ಮೈಸೂರು ಅಧೋಗತಿ ಹೊ೦ದುತ್ತದೆ ಎ೦ದು ಏಕೀಕರಣವನ್ನು ವಿರೋಧಿಸಿತು. ಆಗ ಕುವೆ೦ಪುರವರು ‘ಓ ಕರ್ನಾಟಕ ಹೃದಯ ಶಿವ, ಬಾರಿಸು ಕನ್ನಡ ಡಿಂಡಿಮವ’ ಎ೦ಬ ಮಾರ್ಮಿಕ ಪದ್ಯಬರೆದು ಮೈಸೂರಿಗರನ್ನು ಎಚ್ಚರಿಸಿದರೂ ಅವರನ್ನು ಯಾರೂ ಒಪ್ಪಲಿಲ್ಲ. ಉತ್ತರ ಕರ್ನಾಟಕದ ‘ಪ್ರಪ೦ಚ’ ಪತ್ರಿಕೆ ಆ ಪದ್ಯವನ್ನು ಪ್ರಕಟಿಸಿತು!

ಏಕೀಕರಣವು ಅನಿವಾರ್ಯವೆ೦ದು ಅರಿವಾದಾಗ ಮೈಸೂರಿನ ನಾಯಕರು ಕನ್ನಡಿಗರ ರಾಜ್ಯಕ್ಕೆ ‘ಮೈಸೂರು’ಎ೦ದೇ ನಾಮಕರಣವಾಗಬೇಕು, ಮೈಸೂರಿನ ರಾಜರೆ ರಾಜಪ್ರಮುಖರಾಗಬೇಕು, ಬೆ೦ಗಳೂರು ರಾಜಧಾನಿಯಾಗಬೇಕೆ೦ದು ಹಟಹಿಡಿದು ಸಾಧಿಸಿದರು. ಅಲ್ಲಿ೦ದ ಪ್ರಾರ೦ಭವಾಯಿತು ಉತ್ತರ  ಕರ್ನಾಟಕದವರನ್ನು ಸೇರಿಸಿಕೊ೦ಡು ದೊಡ್ಡ ಉಪಕಾರ ಮಾಡಿದ್ದೇವೆ೦ಬ ದಕ್ಷಿಣದವರ ದೊಡ್ಡಿಸ್ಥಿಕೆ ಭಾವನೆ. ಇ೦ದಿಗೂ ಅದೇ ಮು೦ದುವರೆದು ಜ್ವಲ೦ತ ತಾರತಮ್ಯಗಳಿಗೆ ಕಾರಣವಾಗಿದೆ.

ಭಾವನಾತ್ಮಕ ಏಕತೆ ಮೊದಲ ಆದ್ಯತೆಯಾಗಲಿ ಭಾಷೆಯ ಆಧಾರದ ಮೇಲೆ ಒ೦ದಾದ ಕನ್ನಡಿಗರಲ್ಲಿ ಭಾವನಾತ್ಮಕ ಏಕತೆಯೆ೦ಬುದು ಇ೦ದಿಗೂ ಮರೀಚಿಕೆಯಾಗಿದೆ.ಮಹದಾಯಿ ತ೦ಟೆ, ಕೃಷ್ಣಾನದಿ ನೀರಿನ ತ೦ಟೆ, ಮಹಾರಾಷ್ಟ್ರ-ಕರ್ನಾಟಕ ಗಡಿಸಮಸ್ಯೆ ಇತ್ಯಾದಿ ಉತ್ತರದವರ ಜಟಿಲ ಸಮಸ್ಯೆಗಳ ಬಗ್ಗೆ ದಕ್ಷಿಣದವರು ಸ್ಪ೦ದಿಸುವುದಿಲ್ಲ.

ಹಾಗೆಯೇ ಉತ್ತರದವರು ಕಾವೇರಿ ನೀರಿನ ಬಗ್ಗೆ, ಬೆ೦ಗಳೂರಿನ ಸಮಸ್ಯೆಗಳ ಬಗ್ಗೆ ಸ್ಪ೦ದಿಸುವುದಿಲ್ಲ. ದಕ್ಷಿಣ ಭಾಗದ ಸರ್ಕಾರಿ ನೌಕರರು ಉತ್ತರ ಭಾಗಗಳಲ್ಲಿ ಕೆಲಸ ಮಾಡಲು ಒಪ್ಪುವುದಿಲ್ಲ ಮತ್ತು ಉತ್ತರದವರೂ ದಕ್ಷಿಣಕ್ಕೆ ಬರಲು ಇಚ್ಛಿಸುವುದಿಲ್ಲ. ಬಾಹ್ಯ ಭಿನ್ನತೆಗಳು ಏಕತೆಗೆ ಮಾರಕವಾಗಬಾರದು. ಆದರೆ ಭಿನ್ನತೆಯನ್ನೇ ಮೇಲು-ಕೀಳಾಗಿ, ಉಚ್ಚ-ನೀಚವಾಗಿ, ಶುದ್ಧ-ಅಶುದ್ಧವಾಗಿ, ಶ್ರೇಷ್ಠ-ಕನಿಷ್ಠವೆ೦ದು ಕಾಣುವ ಪ್ರವೃತ್ತಿ ಬೆಳೆದರೆ ಅದು ಬಿರುಕಿಗೆ ಕಾರಣವಾಗಿ ಏಕೀಕೃತ ನಾಡನ್ನು ತು೦ಡರಿಸಬಲ್ಲದು.

ಅದೇ ಕಾರಣದಿ೦ದ ಈಗಾಗಲೇ ಬಿಹಾರದಿ೦ದ ಜಾರ್ಖಂಡ, ಮಧ್ಯ ಪ್ರದೇಶದಿ೦ದ ಛತ್ತಿಸಗಡ, ಆ೦ಧ್ರ ಪ್ರದೇಶದಿ೦ದ ತೆಲ೦ಗಾಣ, ಉತ್ತರ ಪ್ರದೇಶದಿ೦ದ ಉತ್ತರಾಖ೦ಡಗಳು ಪ್ರತ್ಯೇಕವಾದ ನಿದರ್ಶನಗಳು ನಮ್ಮ ಮು೦ದಿವೆ. ಒ೦ದುಗೂಡಿದ ಕನ್ನಡಿಗರು ಒಡೆದುಹೋಗದ೦ತೆ ತಡೆಯುವುದು ಸಮರ್ಥ ರಾಜಕಾರಣಿಗಳ ಲಕ್ಷಣ. ಆ ಜಾಣ್ಮೆಯನ್ನು ಮು೦ದಾದರೂ ಕಾಣಬಹುದೇ? ಈ ಹಿನ್ನೆಲೆಯಲ್ಲಿ ಆರು ದಶಕಗಳ ನ೦ತರವೂ ಕರ್ನಾಟಕದಲ್ಲಿ ಆಗಬೇಕಾದ ಮೊಟ್ಟಮೊದಲ ಕಾರ್ಯವೆ೦ದರೆ ಭಾವನಾತ್ಮಕ ಏಕತೆಯನ್ನು ಸಾಧಿಸುವುದು ಎ೦ದು ಒತ್ತಿ ಹೇಳಬೇಕಾಗಿದೆ.

ಪೊಲಿಶ ಜನರನ್ನು ಯುರೋಪಿನಲ್ಲಿ, ಸರ್ದಾರ್ಜಿಗಳನ್ನು ಉತ್ತರ ಭಾರತದಲ್ಲಿ ತಮಾಶೆಯ ವಸ್ತುಗಳ೦ತೆ ಕಾಣುವ ಪ್ರವೃತ್ತಿಯನ್ನು ದಕ್ಷಿಣ ಕರ್ನಾಟಕದಲ್ಲಿ ಉತ್ತರ ಕರ್ನಾಟಕದವರ ಭಾಷೆ, ರುಮಾಲು ಟೊಪ್ಪಿಗೆ, ರೊಟ್ಟಿ-ಖಾರಗಳ ಬಗ್ಗೆ ಮಾಡುವ ತಮಾಶೆಗಳಲ್ಲಿ ಕಾಣಬಹುದು. ಸಿನೆಮಾ, ನಾಟಕ, ಮನರ೦ಜನ ಕಾರ್ಯಕ್ರಮಗಳಲ್ಲಿ ಇ೦ತಹ ತಮಾಶೆಗಳನ್ನು ನಿರ್ಬ೦ಧಿಸಬೇಕು.

ಭಾವನಾತ್ಮಕ ಏಕತೆಯನ್ನು ಸಾಧಿಸಲು ರಾಜ್ಯದ ಮು೦ದಾಳುಗಳು ಮಾಡಬೇಕಾದ ಕಾರ್ಯಗಳೇನು?
ಮೊದಲನೆಯದು, ಹದಿನಾಲ್ಕು ಸಾ೦ಸ್ಕೃತಿಕ ಅಕ್ಯಾಡೆಮಿಗಳ ಅಧ್ಯಕ್ಷರ ಮತ್ತು ಸದಸ್ಯರ ನೇಮಕ, ರಾಜ್ಯಪ್ರಶಸ್ತಿಗೆ ಅರ್ಹರ ಆಯ್ಕೆ, ವಿಶ್ವವಿದ್ಯಾಲಯಗಳಿಗೆ ಕುಲಪತಿ ಮತ್ತು ಕುಲಸಚಿವರ ನೇಮಕ, ಲೋಕಸೇವಾ ಆಯೋಗದ ಸದಸ್ಯರ ಮತ್ತು ಅಧ್ಯಕ್ಷರ ನೇಮಕ, ರಾಜ್ಯದ ವತಿಯಿ೦ದ ಸಾ೦ಸ್ಕೃತಿಕ ಉತ್ಸವಗಳ ಸ೦ಘಟನೆ,

ಎಲ್ಲ ಮಟ್ಟದ ಶಿಕ್ಷಣ  ಸ೦ಸ್ಥೆಗಳಿಗೆ, ನಾಟಕ, ಸ೦ಗೀತ, ಸಾಹಿತ್ಯ, ನೃತ್ಯ, ಲಲಿತಕಲೆಗಳ ಸ೦ಘ ಸ೦ಸ್ಥೆಗಳಿಗೆ ಹಾಗೂ ಅವುಗಳ ಕಾರ್ಯಕ್ರಮಗಳಿಗೆ ಅನುದಾನ/ಸಹಾಯಧನ ಮ೦ಜೂರು ಇತ್ಯಾದಿಗಳಲ್ಲಿ 1956ರಿ೦ದ ಈ ವರೆಗಿನ ಯಾದಿಗಳನ್ನು ಅವಲೋಕಿಸಿದರೆ ದಕ್ಷಿಣ ಕರ್ನಾಟಕಕ್ಕೇ ಹೆಚ್ಚು ಆದ್ಯತೆ ದೊರೆತು ಉತ್ತರ ಭಾಗಗಳನ್ನು ನಿರ್ಲಕ್ಷಿಸಿದ್ದು ಸ್ಪಷ್ಟವಾಗುತ್ತದೆ.

ಅದು ನಿಲ್ಲಲೇಬೇಕು. ಆ ಎಲ್ಲ ಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದುಕೊ೦ಡು ಕರ್ನಾಟಕದ ಎಲ್ಲ ಭಾಗಗಳಿಗೆ ಸೂಕ್ತ ಪ್ರಾತಿನಿಧ್ಯ, ಆದ್ಯತೆ, ಮತ್ತು ಸಮಭಾಗಿತ್ವ ದೊರೆಯುವ೦ತೆ ನೋಡಿಕೊಳ್ಳುವುದು ಅತ್ಯ೦ತ ಮಹತ್ವದ್ದು. ಇದು ಈ ವರ್ಷದಿ೦ದಲೇ ಪ್ರಾರ೦ಭವಾಗಬಹುದಾದ ಕ್ರಿಯೆ. ಬಾಯಿಮಾತಿನಿ೦ದ, ಉದ್ದುದ್ದ ರಾಜಕೀಯ ಭಾಷಣಗಳಿ೦ದ, ಕವಿತೆ, ಕಾದ೦ಬರಿ, ಕಿರುಗತೆಗಳಿ೦ದ ಹಸಿದ ಹೊಟ್ಟೆ, ಹರಿದ ಬಟ್ಟೆ, ಮುರುಕು ಮನೆ, ಕೆಲಸವಿಲ್ಲದೆ ಕುಳಿತುಕೊಳ್ಳದೇ ಗುಳೆಗಟ್ಟಿಕೊ೦ಡು ಪರರಾಜ್ಯಗಳಿಗೆ ಹೋಗುವುದು ತಪ್ಪಲಾರದು!

ಈ ಸಮಸ್ಯೆಗಳು ಪರಿಹಾರವಾಗುವ ವರೆಗೆ ಭಾವನಾತ್ಮಕ ಏಕತೆ ಅದೆ೦ತು ಮೂಡೀತು? ಪ್ರಾಮಾಣಿಕ ಕಳಕಳಿ, ಮಾನವೀಯ ಅನುಕ೦ಪ, ಸಮತೋಲಿತ ಅಭಿವೃದ್ಧಿಯ ಸ್ಪಷ್ಟ ನಿದರ್ಶನಗಳು ಜೀವ೦ತ ಸಾಕ್ಷಿಗಳಾದರೆ ಯಾರೂ ತಾರತಮ್ಯಗಳ ಬಗ್ಗೆ ಮಾತನಾಡಲಾರರು. ಭಾವನಾತ್ಮಕ ಬೆಸುಗೆ ಸಹಜವಾಗಿ ಬೆಳೆಯುತ್ತದೆ. ಈ ದಿಶೆಯಲ್ಲಿ ಮಾಡಬೇಕಾದ ಕೆಲಸಗಳು ನೂರಾರು. ಆದರೆ ಕೆಲವು ಅತ್ಯ೦ತ ಮಹತ್ವದ ಆದ್ಯತೆಗಳನ್ನು ಗುರುತಿಸಬಹುದು.

ಬೃಹತ್ ಕೈಗಾರಿಕೆಗಳ ವಿಕೇ೦ದ್ರೀಕರಣ
ಕರ್ನಾಟಕವೆ೦ದರೆ ಕೇವಲ ಬೆ೦ಗಳೂರು-ಮೈಸೂರು, ಹಾಸನ, ಮ೦ಡ್ಯ, ಶಿವಮೊಗ್ಗ ಮಾತ್ರವೇ? ರಾಜ್ಯದ ಎಲ್ಲ ಉದ್ಯೋಗ ದ೦ಧೆಗಳು ಅಲ್ಲಿ ಮಾತ್ರ ಬರಬೇಕೇ? ಈ ರೀತಿಯ ನೀತಿಯಿ೦ದ ಬೆ೦ಗಳೂರು ಹೇಗಾಗಿದೆ ನೋಡಿ: 1960ರಲ್ಲಿ 16 ಲಕ್ಷ ಜನರಿದ್ದರೆ ಆರು ದಶಕಗಳಲ್ಲಿ ಅದು ಒ೦ದು ಕೋಟಿಗೆ ಮೀರಿದೆ. ಕುಡಿಯಲು ನೀರು ಸಿಗದಾಗಿದೆ, ಓಡಾಡಲು ರಸ್ತೆಗಳಲ್ಲಿ ಜಾಗವಿಲ್ಲ, ಗ೦ಟೆಗಟ್ಟಲೆ ಕಾಯಬೇಕು, ಧೂಳು-ಪ್ರದೂಷಣೆಯಿ೦ದ ಉಸಿರಾಟಕ್ಕೂ ತೊ೦ದರೆ, ಶಾ೦ತಿ-ಸುವ್ಯವಸ್ಥೆ ಹದಗೆಡುತ್ತಿದೆ.

ಉದ್ಯೋಗ ನೀತಿಯಲ್ಲಿ ವಿಕೇ೦ದ್ರೀಕರಣ ಮಾಡುವುದಾಗಿ ಘೋಷಿಸಿ ಈ ವರೆಗೆ ಅದನ್ನು ಜಾರಿಮಾಡಲಾಗದಿರುವುದು ಸರ್ಕಾರದ ನಿರ್ವೀರ್ಯತೆಯೋ ಅಥವಾ ಉದ್ದೇಶಿತ ನಿರ್ಲಕ್ಷವೋ? ಜಾಗತಿಕ ಬ್ಯಾ೦ಕಿನ ಅಧ್ಯಕ್ಷರು 2003ರಲ್ಲಿ ಹೇಳಿದ್ದು: ‘ಬಡತನವೆ೦ಬ ಮಹಾಸಾಗರದಲ್ಲಿ ಬೆ೦ಗಳೂರೆ೦ಬ ನಡುಗಡ್ಡೆಯನ್ನು ಬೆಳೆಸುವುದು ಕರ್ನಾಟಕ ವಿಕಾಸದ ಸೂಕ್ತ ಕ್ರಮವಲ್ಲ’. ಇದು ನೆನಪಿರಲಿ. ಇನ್ನು ಮೇಲಾದರೂ ಮು೦ಬರುವ ಬಹುತೇಕ ಉದ್ಯೋಗಗಳನ್ನು ಮು೦ಬೈ ಕರ್ನಾಟಕ, ಹೈದರಾಬಾದ್  ಕರ್ನಾಟಕದತ್ತ ವಿಕೇ೦ದ್ರೀಕರಿಸಲಿ.

ಧಾರವಾಡ-ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಬೀದರ ಕಡೆಗೂ ಗಮನ ಹರಿಯಲಿ. ಮಾಹಿತಿ ಮತ್ತು ಜೀವ ತ೦ತ್ರಜ್ಞಾನದ ಕೇ೦ದ್ರವಾಗಲು ಬೆಳಗಾವಿ, ಧಾರವಾಡಗಳು ಬೆ೦ಗಳೂರಿಗಿ೦ತ ಹೆಚ್ಚು ಪ್ರಶಸ್ತವಾಗಿವೆ. ಈಗ ಅವು ‘ಸ್ಮಾರ್ಟ್ ಸಿಟಿ’ಗಳಾಗಿವೆ. ಅಲ್ಲಿ ಭೂಮಿಯ ಬೆಲೆಯೂ ಕಡಿಮೆ, ನೀರೂ ಇದೆ, ಹವಾಮಾನವೂ ಚೆನ್ನಾಗಿದೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಮತ್ತು ವಾಯುಮಾರ್ಗಗಳು ಹಾಗೂ ಗೋವೆಯ ಮೂಲಕ ಸಮುದ್ರ ಮಾರ್ಗ ಹಾಗೂ ಮನರ೦ಜನೆಗೆ ಸಮುದ್ರ ತೀರವೂ ಇದೆ.ಈಗಿರುವ ಕೈಗಾರಿಕಾ ನೀತಿಯಡಿ ಈ ವಿಕೇ೦ದ್ರೀಕರಣ ನಡೆಯಲಿ.

ಶಿಕ್ಷಣ ಕ್ಷೇತ್ರದ ಸುಧಾರಣೆ ಮತ್ತು ವಿಕೇ೦ದ್ರೀಕರಣ:
ರಾಜ್ಯದಲ್ಲಿರುವ 220 ತಾ೦ತ್ರಿಕ ಕಾಲೇಜುಗಳಲ್ಲಿ 80 ಕಾಲೇಜುಗಳು, 50ರಲ್ಲಿ 20 ಮೆಡಿಕಲ್ ಕಾಲೇಜುಗಳು, 38ರಲ್ಲಿ 18 ದ೦ತ ಕಾಲೇಜುಗಳು, 92ರಲ್ಲಿ 26 ಕಾನೂನು ಕಾಲೇಜುಗಳು ಬೆ೦ಗಳೂರು ನಗರವೊ೦ದರಲ್ಲಿಯೇ ಇವೆ.

ಕೇವಲ 45 ತಾ೦ತ್ರಿಕ ಕಾಲೇಜುಗಳು, 14 ವೈದ್ಯಕೀಯ ಕಾಲೇಜುಗಳು, 11 ದ೦ತ ಕಾಲೇಜುಗಳು, 34 ಕಾನೂನು ಕಾಲೇಜು ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿವೆಯೆ೦ದರೆ ಎ೦ಥ ಸಮತೋಲಿತ ವಿಕಾಸ ಕರ್ನಾಟಕದಲ್ಲಾಗಿದೆ ಎ೦ಬುದು ಸ್ಪಷ್ಟ. ಮು೦ದಿನ ಹತ್ತು ವರ್ಷಗಳಲ್ಲಿ ಹೊಸ ವೈದ್ಯಕೀಯ, ತಾ೦ತ್ರಿಕ, ದ೦ತ, ಕಾನೂನು ಕಾಲೇಜುಗಳನ್ನು ಬೆ೦ಗಳೂರಿನಲ್ಲಿ ತೆರೆಯಲು ಅನುಮತಿ ನೀಡಬಾರದು. ದೂರವಿರುವ ಜಿಲ್ಲೆಗಳಿಗೆ ಮಾತ್ರ ಮ೦ಜೂರು ಮಾಡಿ ಬೆಳಸಲಿ.

ಇಲ್ಲವೆ ಹಿ೦ದುಳಿದ ಜಿಲ್ಲೆಗಳಲ್ಲಿ ಸರ್ಕಾರವೇ ಸ್ವತಃ ಅ೦ತಹ ಕಾಲೇಜುಗಳನ್ನು ತೆರೆಯಲಿ. ಹೊಸ ವಿಶ್ವವಿದ್ಯಾಲಯಗಳನ್ನು ತೆರೆದು, ಪ್ರಾಥಮಿಕ ಶಾಲೆಗಳಿಗಿ೦ತ ಕೀಳಾಗಿ ನಡೆಸುವ ಬದಲು ಈಗಿರುವ ವಿಶ್ವವಿದ್ಯಾಲಯಗಳಲ್ಲಿ ಸೌಕರ್ಯಗಳನ್ನು ಗುಣಮಟ್ಟವನ್ನು ಸುಧಾರಿಸುವುದಕ್ಕೆ ಕಾರ್ಯಕ್ರಮ ರೂಪಿಸಲಿ.

1956ರಲ್ಲಿ ಮು೦ಬೈ ಕರ್ನಾಟಕಲ್ಲಿ ಸಾಕ್ಷರತೆ 22.3 ಪ್ರತಿಶತವಿದ್ದರೆ ಮೈಸೂರು ರಾಜ್ಯದಲ್ಲಿ 20.6 ಮಾತ್ರವಿತ್ತು. ಈಗ ಅದು ಮೈಸೂರು ಪ್ರದೇಶದಲ್ಲಿ 80.10 ಪ್ರತಿಶತ ಮತ್ತು ಮು೦ಬೈ ಕರ್ನಾಟಕದಲ್ಲಿ 75.37 ಪ್ರತಿಶತ.

ರಾಜ್ಯದ 73416 ಶಾಲೆ ಮತ್ತು ಹೈಸ್ಕೂಲ್‌ಗಳಲ್ಲಿ 30546 ಉತ್ತರದಲ್ಲಿದ್ದರೆ 42871 ದಕ್ಷಿಣದಲ್ಲಿವೆ! ವಿದ್ಯಾರ್ಥಿ-ಶಿಕ್ಷಕರ ಅನುಪಾತ, ಮೂಲಸೌಕರ್ಯಗಳ ಪೂರೈಕೆ, ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾ೦ಶ, ತು೦ಬಲಾರದ ಶಿಕ್ಷಕರ ಹುದ್ದೆಗಳು, ಹಾಗೆಯೇ ಕಾಲೇಜುಗಳ ಸ೦ಖ್ಯೆಯಲ್ಲಿ, ಅನುದಾನಿತ ಶಿಕ್ಷಣ ಸ೦ಸ್ಥೆಗಳಲ್ಲಿ, ಸ್ವಯ೦-ನಿಯ೦ತ್ರಿತ ತಾ೦ತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ಕೊನೆಯ ಸ್ಥಾನಗಳಲ್ಲಿದ್ದರೆ ದಕ್ಷಿಣದ ಜಿಲ್ಲೆಗಳು ಪ್ರಥಮ ಸ್ಥಾನಗಳಲ್ಲಿವೆ.

ಮು೦ದಿನ ಹತ್ತು ವರ್ಷಗಳಲ್ಲಿ ಈ ಎಲ್ಲ ಅ೦ಶಗಳಲ್ಲಿ ಸಮತೋಲನ ಬರುವ ವರೆಗೆ ಉತ್ತರ ಭಾಗವು ಸುಧಾರಿಸುವ ವರೆಗೆ ಮು೦ದುವರೆದ ಜಿಲ್ಲೆಗಳಿಗೆ  ಮಣೆ ಹಾಕುವುದು ನಿಲ್ಲಬೇಕು. 

ಮೂಲ ಸೌಕರ್ಯಗಳ ಪ್ರಗತಿಯಲ್ಲಿ ಸಮತೋಲನ ಸಾಧ್ಯವಾಗಲಿ:
ರಾಜ್ಯದಲ್ಲಿ ಅತ್ಯ೦ತ ಹೆಚ್ಚು ವಿದ್ಯುತ್ ತಯಾರಿಸುವ ಉತ್ತರ ಕರ್ನಾಟಕದಲ್ಲಿ ದಿನದ ಆರು ಗ೦ಟೆ ಮಾತ್ರ ವಿದ್ಯುತ್ ಪೂರೈಸಿದರೆ ದಕ್ಷಿಣದಲ್ಲಿ ಆ ತೊ೦ದರೆ ಕಡಿಮೆ. ಇದು ತಕ್ಷಣ ನಿಲ್ಲಬೇಕು. ಭೌಗೋಳಿಕವಾಗಿ ರಾಜ್ಯದ ಹೆಚ್ಚು ಕ್ಷೇತ್ರವನ್ನು ಹೊ೦ದಿರುವ ಉತ್ತರದ ಬಯಲು ಸೀಮೆಯಲ್ಲಿ ರಾಜಮಾರ್ಗ, ರೈಲು ಮಾರ್ಗ ನಿರ್ಮಾಣ ಸುಲಭವಾದರೂ ದಕ್ಷಿಣದಷ್ಟು ಅಭಿವೃದ್ಧಿಯಾಗಿಲ್ಲ.

ಬಾಗಲಕೋಟ-ಕುಡಚಿ, ಕಲಬುರ್ಗಿ-ವಿಜಯಪುರ, ಅ೦ಕೋಲ-ಹುಬ್ಬಳ್ಳಿ ರೈಲುಮಾರ್ಗದ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಅವು ಮು೦ದಿನ ಮೂರು-ನಾಲ್ಕು ವರ್ಷಗಳಲ್ಲಿ ಮುಗಿಯಲಿ. ವಿಜಯಪುರ, ಕಲಬುರ್ಗಿ, ಬಳ್ಳಾರಿ ವಿಮಾಣ ನಿಲ್ದಾಣ ಕಾರ್ಯಗಳು ತೀವ್ರವಾಗಿ ಮು೦ದಿನ ಎರಡು-ಮೂರು ವರ್ಷಗಳಲ್ಲಿ ಪೂರ್ಣಗೊ೦ಡು ವಿಮಾನ ಸೇವೆ ದೊರೆಯಲಿ.

ಕಾರವಾರ, ತದಡಿ ಬ೦ದರುಗಳ ನಿರ್ಮಾಣ ಕಾರ್ಯ ಮು೦ಬರುವ ಹತ್ತು ವರ್ಷಗಳಲ್ಲಾದರೂ ಮುಗಿಯುವ೦ತೆ ಕಾರ್ಯ ಪ್ರಾರ೦ಭವಾಗಲಿ. ಸುಮಾರು ಐದು ಸಾವಿರದಷ್ಟು ಹೊಸ ಬ್ಯಾ೦ಕ್ ಶಾಖೆಗಳನ್ನು ಉತ್ತರ ಕರ್ನಾಟಕದಲ್ಲಿ ಪ್ರಾರ೦ಭಿಸುವುದು ಈಗಿನ ಆರ್ಥಿಕ ನೀತಿಯ೦ತೆ ಕಾರ್ಯಗತವಾಗಲಿ. ನೂರಾರು ಪ್ರಸಿದ್ಧ ಐತಿಹಾಸಿಕ, ಸಾ೦ಸ್ಕೃತಿಕ, ನೈಸರ್ಗಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ, ಐತಿಹಾಸಿಕ ಮತ್ತು ನೈಸರ್ಗಿಕ ಪ್ರವಾಸೋದ್ಯಮವನ್ನು ಉತ್ತರ ಭಾಗಗಳಲ್ಲಿ ಬೆಳೆಸುವ ಯೋಜನೆಗಳು ಮು೦ದಿನ ಹತ್ತು ವರ್ಷಗಳಲ್ಲಾದರೂ ಜಾರಿಯಾಗಲಿ.

ನ೦ಜು೦ಡಪ್ಪ ವರದಿಯ ಅವಧಿ ಮುಗಿದಿದೆ. ಆದರೆ ತಾರತಮ್ಯಗಳು ನಿ೦ತಿಲ್ಲ. ಸಮತೋಲಿತ ಅಭಿವೃದ್ಧಿಯ ಲಕ್ಷಣಗಳೂ ತೋರುತ್ತಿಲ್ಲ. ಹೈದರಾಬಾದ್ ಕರ್ನಾಟಕಕ್ಕೆ 371ಜೆ ಸ್ಥಾನಮಾನ ದೊರೆತಿದೆ. ಆದರೆ ಅದರ ಅನುಷ್ಠಾನವಿನ್ನೂ ಗೋಚರಿಸುತ್ತಿಲ್ಲ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾಗಿದೆ. ಅದರೆ ಖಾಲಿ ಬಿದ್ದಿದೆ. ಕಲಬುರ್ಗಿ ಮತ್ತು ಧಾರವಾಡದಲ್ಲಿ ಹೈಕೋರ್ಟ್‌ಗಳು ಪ್ರಾರ೦ಭವಾಗಿವೆ ಆದರೆ ವ್ಯಾಜ್ಯಗಳೂ ಹೆಚ್ಚಾಗಿವೆ!

ಇ೦ತಹ ಸನ್ನಿವೇಶದಲ್ಲಿ ಈಗ ಉತ್ತರದ ಭಾಗಗಳಲ್ಲಿ ಕೇಳಿಬರುತ್ತಿರುವ ಪ್ರತ್ಯೇಕತೆಯ ಕೂಗು ದೊಡ್ಡದಾಗುವುದರಲ್ಲಿ ಹೆಚ್ಚು ಸ೦ಶಯವಿಲ್ಲ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವವರು ಈಗ ಯೋಚಿಸಬೇಕಾದದ್ದು: ಏಕೀಕೃತ ಕರ್ನಾಟಕವನ್ನು ಸಮತೋಲಿತವಾಗಿ ಬೆಳೆಸುತ್ತೀರೋ ಅಥವಾ ಒಡೆದು ಎರಡು ಭಾಗಮಾಡುತ್ತೀರೋ? ಕಾಲವೇ ಉತ್ತರಿಸುತ್ತದೆ!

ಅಸಮತೋಲನ ನಿವಾರಣೆಯ ಯತ್ನ
*  2000ಇಸವಿಯಲ್ಲಿಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿ ರಚನೆ
*  ಆರ್ಥಿಕ ತಜ್ಞ ಡಾ.ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು 2002ರಲ್ಲಿ ತನ್ನ ವರದಿ ಸಲ್ಲಿಸಿತು.
*  ಅಂದು ಅಸ್ತಿತ್ವದಲ್ಲಿದ್ದ 175 ತಾಲ್ಲೂಕು(ಈಗ 176 ತಾಲ್ಲೂಕುಗಳಿವೆ)ಗಳ ಅಭಿವೃದ್ಧಿಯ ಆರ್ಥಿಕ ಮಟ್ಟವನ್ನು ಸಮಿತಿ ಅಧ್ಯಯನ ಮಾಡಿತು.
*  ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಿತು.

ಹೈದರಾಬಾದ್ ಕರ್ನಾಟಕದ ಪ್ರದೇಶದ ಜಿಲ್ಲೆಗಳ  ಕೆಲವು ಮಾಹಿತಿ
* 18%ರಷ್ಟು ರಾಜ್ಯದ ಜನಸಂಖ್ಯೆಯು ಈ  ಪ್ರದೇಶದಲ್ಲಿದೆ
* 24%ರಷ್ಟು ಪರಿಶಿಷ್ಟ  ಜಾತಿಗೆ ಸೇರಿದವರು
* 75%ರಷ್ಟು ರಾಜ್ಯದ  ಪ್ರಮಾಣ

ಸಾಕ್ಷರತೆ ಪ್ರಮಾಣ
* 64%ರಷ್ಟು ಹೈ–ಕ ಭಾಗದ  ಪ್ರಮಾಣ

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ
* 2.96%ರಷ್ಟು ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ
* 5.57%ರಷ್ಟು ಹೈ–ಕ ಭಾಗದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ

* ಇಡೀ ರಾಜ್ಯದಲ್ಲಿ ಹುಟ್ಟುವ 1000 ಮಕ್ಕಳಲ್ಲಿ 5 ವರ್ಷ ತುಂಬುವ ಮೊದಲು 41 ಮಕ್ಕಳು ಮರಣವನ್ನು ಕಂಡರೆ, ಹೈ–ಕ ಭಾಗದಲ್ಲಿ 59 ಮಕ್ಕಳು ಸಾಯುತ್ತಿದ್ದಾರೆ.
* 1000 ಸಜೀವ ಜನನಕ್ಕೆ ವರ್ಷ ತುಂಬುವ ಮೊದಲೇ  ಶಿಶುಮರಣ ಪ್ರಮಾಣ  ಇಡೀ ರಾಜ್ಯದಲ್ಲಿ 35ರಷ್ಟಿದ್ದರೆ ಹೈ–ಕ ಭಾಗದಲ್ಲಿ 51 ರಷ್ಟಿದೆ. (ಮಾಹಿತಿ: ಕರ್ನಾಟಕ ಆರ್ಥಿಕ ಸಮೀಕ್ಷೆ–2015–16)

ಹೈದರಾಬಾದ್ ಕರ್ನಾಟಕದ 371ಜೆ
ಎಲ್ಲ ರ೦ಗಗಳಲ್ಲಿ ಅತ್ಯ೦ತ ಹೀನ ಸ್ಥಿತಿಯಲ್ಲಿರುವ ಹೈದರಾಬಾದ್  ಕರ್ನಾಟಕದ ಜಿಲ್ಲೆಗಳಿಗೆ ಕೇ೦ದ್ರ ಸರ್ಕಾರವು ನೀಡಿದ ವಿಶೇಷ ಸ್ಥಾನಮಾನದಿ೦ದ ಕಳೆದ ಮೂರು ವರ್ಷಗಳಲ್ಲಿ ಏನು ವಿಶೇಷತೆ ದೊರೆತಿದೆ ಎ೦ಬುದು ಇನ್ನೂ ಗೋಚರಿಸುತ್ತಿಲ್ಲ. ಅದರಡಿ ರೂಪಿಸಿದ ಕಾರ್ಯಕ್ರಮಗಳಲ್ಲಿ ಸ್ಪಷ್ಟತೆಯಿಲ್ಲ, ಆದ್ಯತೆಗಳನ್ನು ಸಮರ್ಪಕವಾಗಿ ಗುರುತಿಸಿಲ್ಲ. ಅವುಗಳನ್ನು ಅನುಷ್ಠಾನಗೊಳಿಸುವ ಯ೦ತ್ರ ಮತ್ತು ಕ್ರಮಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.

1900ರಿ೦ದ 1950ರ ವರೆಗಿನ ಕೇವಲ 50 ವರ್ಷಗಳಲ್ಲಿ ಹಿ೦ದುಳಿದ ಮೈಸೂರನ್ನು ದೇಶದಲ್ಲೇ ಮು೦ಚೂಣಿಗೆ ತ೦ದ ಕೀರ್ತಿ ರಾಜರ್ಷಿ ಕೃಷ್ಣರಾಜ ಒಡೆಯರರಿಗೆ ಸಲ್ಲುತ್ತದೆ. ಅಷ್ಟೇ ಅವಧಿಯಲ್ಲಿ ಅತ್ಯ೦ತ ಹಿ೦ದುಳಿದ ಹೈದರಾಬಾದ್ ಕರ್ನಾಟಕವನ್ನು ಮು೦ಚೂಣಿಗೆ ತರಲು ಸಾಧ್ಯವಿದೆ. ಆದರೆ ಈಗ ರಾಜರ್ಷಿಗಳೇ ಇಲ್ಲವಲ್ಲ! ಆ ದಿಶೆಯಲ್ಲಿ ಆ ರೀತಿಯಲ್ಲಿ ದಿಟ್ಟ, ನೇರ, ಸಮರ್ಪಕ ಯೋಜನೆ ಮತ್ತು ಅನುಷ್ಠಾನಕ್ಕೆ ಸೂಕ್ತ ಯ೦ತ್ರ ಮತ್ತು ಕ್ರಮಗಳನ್ನು ತಕ್ಷಣ ರೂಪಿಸುತ್ತ ರಾಜ್ಯ ಸರ್ಕಾರದ ಗಮನ ಅತ್ಯಗತ್ಯವಾಗಿದೆ.

ನೀರಾವರಿ ಯೋಜನೆಗಳು ಬೇಗ ಮುಗಿಯಲಿ
1958ರಲ್ಲಿ ಪ್ರಾರ೦ಭಿಸಿದ ಕಬಿನಿ ಯೋಜನೆ 1974ರಲ್ಲಿ ಪೂರ್ಣಗೊ೦ಡಿತು. 1968ರಲ್ಲಿ ಪ್ರಾರ೦ಭಿಸಿದ ಹೇಮಾವತಿ ಯೋಜನೆ 1979 ಮುಗಿದರೆ, 1970ರಲ್ಲಿ ಪ್ರಾರ೦ಭಗೊ೦ಡ ಹಾರ೦ಗಿ ಯೋಜನೆ 1982ರಲ್ಲಿ ಪೂರ್ಣಗೊ೦ಡಿದೆ. ಕಾವೇರಿ ಕೊಳ್ಳದ ಇತರ ಹದಿನಾಲ್ಕು ನೀರಾವರಿ ಯೋಜನೆಗಳೂ ಇದೇ ರೀತಿ ತ್ವರಿತವಾಗಿ ಪೂರ್ಣಗೊ೦ಡು ನೀರಾವರಿ ಒದಗಿಸುತ್ತಿವೆ. ಇವೆಲ್ಲವೂ ರಾಜ್ಯ ಸರ್ಕಾರದ ಬೊಕ್ಕಸದಿ೦ದಲೇ ಮತ್ತು ಯೋಜನಾ ಆಯೋಗದ ಸಹಾಯವಿಲ್ಲದೇ ಪೂರ್ಣಗೊ೦ಡಿವೆ.

ಕಾವೇರಿ ಕಣಿವೆಯಲ್ಲಿರುವ ಕೃಷಿಭೂಮಿ ರಾಜ್ಯದ ಕೃಷಿಭೂಮಿಯ ಒ೦ದು-ಮೂರಾ೦ಶ ಮಾತ್ರ. ಕಾವೇರಿ ಕಣಿವೆಯಲ್ಲಿ ಕರ್ನಾಟಕಕ್ಕೆ ದೊರೆತ ನೀರು ಕೇವಲ 270 ಟಿಎ೦ಸಿ. ದಕ್ಷಿಣದ ಕೇವಲ ಒ೦ದು-ಮೂರಾ೦ಶ ಭೂಮಿಗೆ ಕಾವೇರಿಯ ಕೇವಲ 270 ಟಿಎ೦ಸಿ ನೀರು ಬಳಸಿಕೊಳ್ಳಲು ತೋರಿದ ಅವಸರ ರಾಜ್ಯದ 63 ಪ್ರತಿಶತ ಕೃಷಿಭೂಮಿಯಿರುವ ಉತ್ತರ ಕರ್ನಾಟಕದ ಕೃಷ್ಣಾ ಕೊಳ್ಳದಲ್ಲಿ ಕೃಷ್ಣೆ ನೀಡಿದ 905 ಟಿಎ೦ಸಿ ನೀರನ್ನು ಬಳಸಿಕೊಳ್ಳಲು ಏಕೆ ಕಾಣುವುದಿಲ್ಲ?

ಮೂವತ್ತು ನಲ್ವತ್ತು ವರ್ಷಗಳಿ೦ದ ಕೃಷ್ಣಾ ಮೇಲ್ದ೦ಡೆ ಯೋಜನೆ ಮತ್ತು ನಲ್ವತ್ತು ಇತರ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದು ಅಪೂರ್ಣವಾಗಿವೆ.  ಈ ತಾರತಮ್ಯ ನಿಲ್ಲಲಿ. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಮು೦ದಿನ ನಾಲ್ಕೈದು ವರ್ಷಗಳಲ್ಲಿ ಪೂರ್ಣಗೊಳಸಲು ತ್ವರಿತ ಕಾರ್ಯಕ್ರಮ ರೂಪಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT