ಪನಾಮ ಪೇಪರ್ಸ್‌: ಧನಾಢ್ಯರು ಹಣವನ್ನು ಬಚ್ಚಿಡುವ ಕಥೆ

7
ಓದಿನ ಖುಷಿ

ಪನಾಮ ಪೇಪರ್ಸ್‌: ಧನಾಢ್ಯರು ಹಣವನ್ನು ಬಚ್ಚಿಡುವ ಕಥೆ

Published:
Updated:
ಪನಾಮ ಪೇಪರ್ಸ್‌: ಧನಾಢ್ಯರು ಹಣವನ್ನು ಬಚ್ಚಿಡುವ ಕಥೆ


The Panama Papers: Breaking the Story of How the Rich and Powerful Hide Their Money


ಲೇ: ಬಸ್ತಿಯಾನ್ ಒಬರ್ಮೆರ್ ಮತ್ತು ಫ್ರೆಡರಿಕ್ ಒಬರ್ಮಾಯರ್ದೇ

 

**

ದೇಶದಲ್ಲಿರುವ ಕಾಳಧನ ನಿಗ್ರಹದ ಉದ್ದೆಶದಿಂದ ಕೇಂದ್ರ ಸರ್ಕಾರ 500 ಮತ್ತು 1,000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿತಷ್ಟೆ. ಇದರಿಂದಾಗಿ ದೇಶದ ಜನತೆ ಪಡುತ್ತಿರುವ ಬವಣೆಗಳು ಕರುಣಾಜನಕವಾಗಿರುವುದರಿಂದ, ಸಾರ್ವಜನಿಕ ಚರ್ಚೆಗಳು ಯೋಜನೆಯ ಅನುಷ್ಠಾನದಲ್ಲಿರುವ ಲೋಪಗಳ ಕುರಿತೇ ಕೇಂದ್ರೀಕರಣಗೊಂಡಿವೆ. ಅದು ಸಹಜವೇ. ಆದರೆ ಅವು ಯೋಜನೆಯ ಸಾರದಲ್ಲೇ ಇರಬಹುದಾದ ತಪ್ಪುಗ್ರಹಿಕೆಯ ಕುರಿತಾದ ಚರ್ಚೆಗಳನ್ನು ಅಪಮೌಲ್ಯೀಕರಣ ಮಾಡಬಾರದು. 

 

ಬ್ಯಾಂಕುಗಳ ಎದುರು ಕ್ಯೂನಲ್ಲಿ ನಿಂತು ಬಸವಳಿದಿರುವ ಸಾಮಾನ್ಯ ಜನತೆಯ – ‘ಶ್ರೀಮಂತರು ತಮ್ಮ ಕಾಳಧನವನ್ನು ಇಲ್ಲೆಲ್ಲಿ ಇಟ್ಟಿರ್ತಾರೆ. ಸ್ವಿಸ್ ಬ್ಯಾಂಕಿನಲ್ಲಿ ಬಚ್ಚಿಟ್ಟಿರ್ತಾರೆ’ ಎಂಬ ಉದ್ಗಾರ ದಿನಗಳೆದಂತೆ ಹೆಚ್ಚುತ್ತಿದೆ. ಆ ವಿವೇಕದ ಹಿಂದೆ ವರ್ತಮಾನದ ದೊಡ್ಡ ಆರ್ಥಿಕ–ರಾಜಕೀಯ ಸತ್ಯ ಅಡಗಿದೆ. ಇದನ್ನು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಡೆದಿರುವ ಜಗತ್ತಿನ ಪ್ರಜ್ಞಾವಂತ ತನಿಖಾ ಪತ್ರಿಕೋದ್ಯಮ ಪದೇ ಪದೇ ಸಾಬೀತು ಪಡಿಸಿದೆ. ಈ ಸಾಲಿನಲ್ಲಿ ಪ್ರಮುಖ ಸೇರ್ಪಡೆ 2016ರಲ್ಲಿ ಅನಾವರಣಗೊಂಡ ‘ಪನಾಮ ಪೇಪರ್ಸ್’. ಇದನ್ನು ಜಗತ್ತಿನ ತನಿಖಾ ಪತ್ರಿಕೋದ್ಯಮದ ಇತಿಹಾಸದಲ್ಲೇ ಅತಿ ಮುಖ್ಯವಾದ ‘ತನಿಖಾ ಪತ್ರಿಕೋದ್ಯಮ’ ಎಂದು ಬಣ್ಣಿಸಲಾಗುತ್ತದೆ. 

 

‘ಪನಾಮ ಪೇಪರ್ಸ್‌’ ತನಿಖೆಯಲ್ಲಿ ಬಯಲಾದ  ಪ್ರಮುಖ ಸಂಗತಿಗಳನ್ನು ಜರ್ಮನಿಯ Suddeutshe Zeitung ಪತ್ರಿಕೆಯ ಹಿರಿಯ ವರದಿಗಾರರಾದ ಬಸ್ತಿಯಾನ್ ಒಬರ್ಮೆರ್ ಮತ್ತು ಪ್ರೆಡರಿಕ್ ಒಬರ್ಮಾಯರ್ ಅವರು ‘The Panama Papers – How The Rich And The Powerful Hide Their Money’ (ಪನಾಮ ದಸ್ತಾವೇಜುಗಳು – ಬಲಾಢ್ಯರು ಮತ್ತು ಧನಾಢ್ಯರು ತಮ್ಮ ಹಣವನ್ನು ಹೇಗೆ ಬಚ್ಚಿಡುತ್ತಾರೆ?) ಎಂಬ ಪುಸ್ತಕದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. 

 

ಈ ತನಿಖೆಯ ಸಾರಾಂಶವನ್ನು ಅರ್ಥಮಾಡಿಕೊಳ್ಳುವ ಮುಂಚೆ ಈ ಬೃಹತ್ ಐತಿಹಾಸಿಕ ತನಿಖೆಯ ಗಾತ್ರ ಮತ್ತು ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. 2015ರ ಆದಿಭಾಗದಲ್ಲಿ ಜಾನ್ ಡೋ ಎಂಬುವರು (ಪಶ್ಚಿಮ ದೇಶಗಳಲ್ಲಿ ಇಂಥಾ ತನಿಖೆಗೆ ಬೇಕಾದ ವಿಷಯಗಳನ್ನು ಹೊರಗೆಡಹುವ ಅನಾಮಧೇಯರನ್ನು ‘ಜಾನ್ ಡೋ’ ಎಂದು ಕರೆಯುವುದು ಆಧುನಿಕ ಜಾನಪದ ಆಗಿಬಿಟ್ಟಿದೆ) ಪತ್ರಕರ್ತ ಬಸಿಯಾನ್ ಒಬರ್ಮೇಯರ್ ಎಂಬವರಿಗೆ ಇ–ಮೇಲ್ ಮಾಡಿ, ‘ಇಂಥ ತನಿಖೆಗೆ ಸಿದ್ಧರಿದ್ದಾರೆಯೇ’ ಎಂದು ಖಚಿತಪಡಿಸಿಕೊಂಡು, ತಮ್ಮಲ್ಲಿದ್ದ ದಾಖಲೆಗಳನ್ನು ಇ–ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಅದು 1970–2015ರ ನಡುವೆ ಜಗತ್ತಿನ 200 ದೇಶಗಳ 14000 ಬಲಾಢ್ಯ ಕಕ್ಷಿದಾರರು ಪನಾಮ ದೇಶದ ಮೊಸ್ಸಕ್ ಫೊನೆಸ್ಕ ಎಂಬ ಕಂಪನಿಯೊಡನೆ ನಡೆಸಿದ ಕಳ್ಳ ವಹಿವಾಟುಗಳ ಸಾಕ್ಷಾತ್ ದಾಖಲೆಗಳಾಗಿದ್ದವು. ಮುಂದಿನ ದಿನಗಳಲ್ಲಿ ಸುಮಾರು 1 ಕೋಟಿಗೂ ಹೆಚ್ಚು ದಾಖಲೆ ಪತ್ರಗಳನ್ನು  ಜಾನ್ ಡೋ ಕಳಿಸಿಕೊಡುತ್ತಾರೆ.

 

 ಈ ದಾಖಲೆಗಳ  ಬೃಹತ್ ಗಾತ್ರ ಮತ್ತು ವ್ಯಾಪ್ತಿಯನ್ನು ಗಮನಿಸಿ ಈ ಅಧ್ಯಯನಕ್ಕೆ ‘ಅಂತರರಾಷ್ಟ್ರಿಯ ತನಿಖಾ ಪತ್ರಿಕೋದ್ಯಮಿಗಳ ಸಮಾಗಮ’ ((International Consortium of Investigative Journalists- – CIJ) ಕೈಜೋಡಿಸುತ್ತದೆ. ಆ ಮೂಲಕ 50 ದೇಶಗಳ 400 ಪತ್ರಕರ್ತರು ಒಟ್ಟುಗೂಡಿ, ಅತ್ಯಂತ ನಿಗೂಢವಾಗಿ ಈ ಅಧ್ಯಯನವನ್ನು ಮುಂದುವರೆಸಿದರು. ಇದಕ್ಕೆ ಭಾರತದಿಂದ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಕರ್ತರು ಜೊತೆಗೂಡಿದರು. ಅತ್ಯಂತ ಸುಧಾರಿತ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಬಳಸಿ ಎಂಟು ತಿಂಗಳ ಕಾಲ ರಹಸ್ಯವಾಗಿ ಹಗಲು ರಾತ್ರಿ ನಡೆದ ಈ ಅಧ್ಯಯನ ಮತ್ತು ತನಿಖೆ 2016ರ ಏಪ್ರಿಲ್‌ನಲ್ಲಿ ಮುಗಿದು ಆಯಾ ದೇಶಗಳಲ್ಲಿ ಏಕಕಾಲದಲ್ಲಿ ಏಪ್ರಿಲ್ 4ರ ಸಂಜೆ 8ಕ್ಕೆ ಬಯಲು ಮಾಡಲಾಯಿತು. 

 

ಜಗತ್ತಿನ 12 ದೇಶಗಳ ರಾಜಕೀಯ ಮುಖ್ಯಸ್ಥರೂ ಒಳಗೊಂಡಂತೆ 14000 ಉದ್ಯಮಿಗಳು, ನಟರು, ವಿಟರು, ಡ್ರಗ್ ಮಾಫಿಯಾಗಳು ಹಾಗೂ ಇನ್ನಿತರರು ತಮ್ಮ ದೇಶದಲ್ಲಿ ವಂಚನೆಯಿಂದ ಗಳಿಸಿದ ಕಾಳಧನವನ್ನು ಪನಾಮಾದ ‘ಮೊಸ್ಸಕ್ ಫೊನೆಸ್ಕ’ ಕಂಪೆನಿಯ ಮೂಲಕ ಬಚ್ಚಿಟ್ಟಿದ್ದು ಹೀಗೆ: ಮೊಸ್ಸಾಕ್ ಫೊನೆಸ್ಕಾ ಕಂಪನಿ ಕಾಳಧನವನ್ನು ಕಾನೂನುಬದ್ಧವಾಗಿ ಮುಚ್ಚಿಡಲು ಬೇಕಾದ ಸುಳ್ಳು ಕಂಪೆನಿಗಳನ್ನು ಸೃಷ್ಟಿಸಿಕೊಡುತ್ತದೆ. ಅದಕ್ಕೆ ಅದು ಅತ್ಯಂತ ಕಡಿಮೆ ಶುಲ್ಕವನ್ನು ವಿಧಿಸುತ್ತದೆ. ಆ ಕಂಪನಿಯ ಪೇಪರ್ ವ್ಯವಹಾರಕ್ಕೆ ಬೇಕಾದ ಸುಳ್ಳು ನಿರ್ದೇಶಕರನ್ನು ಮತ್ತು ಷೇರುದಾರರನ್ನು ಒದಗಿಸುತ್ತದೆ. ಆಯಾ ದೇಶಗಳ ಧನಾಢ್ಯರು ತೆರಿಗೆ ವಂಚಿಸಿ ಗಳಿಸಿದ ಕಾಳಧನವನ್ನು ಈ ರೀತಿಯ ಸುಳ್ಳು ಹೆಸರಲ್ಲಿ ಹೂಡುತ್ತಾರೆ. ಅದರ ನಿಜವಾದ ಮಾಲೀಕರು ಇವರೇ ಆಗಿದ್ದರೂ ನಾಮಕಾವಾಸ್ಥೆ ಬೇರೆ ಮಾಲೀಕರನ್ನು ಸೂಚಿಸಲಾಗುತ್ತದೆ. ಮತ್ತು ಅವೆಲ್ಲವನ್ನೂ ಕೇವಲ ಅಂಕಿ–ಸಂಖ್ಯೆಗಳ ಮೂಲಕ ನಿಗೂಢವಾಗಿ ನಡೆಸಲಾಗುತ್ತದೆ. ಹೀಗೆ ಅತ್ಯಂತ ಸಲೀಸಾಗಿ ತನ್ನ ದೇಶದಲ್ಲಿ ತೆರಿಗೆ ವಂಚಿಸಿ ಗಳಿಸಿದ ಕಾಳಧನವನ್ನು ಬೇನಾಮಿ ಹೆಸರಲ್ಲಿ ಯಾವುದೇ ತೆರಿಗೆಭಾರವಿಲ್ಲದೆ ಧನಾಢ್ಯರು ಅನುಭವಿಸುತ್ತಿದ್ದಾರೆ.   

 

ಈ ಅಧ್ಯಯನ ಎಷ್ಟು ಅಧಿಕೃತವಾಗಿತ್ತು ಎಂದರೆ ಈ ವರದಿ ಹೊರಬಿದ್ದ ನಂತರದಲ್ಲಿ ಐಸ್‌ಲ್ಯಾಂಡ್ ಪ್ರಧಾನಮಂತ್ರಿ ರಾಜೀನಾಮೆ ಕೊಡಬೇಕಾಯಿತು. ಬ್ರಿಟನ್ನಿನ ಅಂದಿನ ಪ್ರಧಾನಿ ಪದತ್ಯಾಗ ಮಾಡಲು ಕಾರಣವಾದ ಹಲವು ಸಂಗತಿಗಳಲ್ಲಿ ಇದೂ ಪ್ರಮುಖವಾಯಿತು. ಆಫ್ರಿಕಾದ ಹಲವು ದೇಶಗಳ ಸಚಿವರ ತಲೆದಂಡವಾಯಿತು. ಚೀನಾದಲ್ಲಿ ‘ಪನಾಮ ಪೇಪರ್ಸ್’ ಎಂಬ ಹೆಸರನ್ನೇ ನಿಷೇಧಗೊಳಿಸಲಾಯಿತು. ಭಾರತದಲ್ಲೂ ಅಮಿತಾಭ್ ಬಚ್ಚನ್, ಪ್ರಧಾನಮಂತ್ರಿಯ ಆಪ್ತ ಉದ್ಯಮಿ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ, ಉದ್ಯಮಿಗಳಾದ ಸಮೀರ್ ಗೆಹ್ಲಾಟ್ (ಇಂಡಿಯಾ ಬುಲ್ಸ್) ಮತ್ತು ಡಿಎಲ್ ಸಿಂಗ್ (ಡಿಎಲ್‌ಎಫ್), ಅಪೊಲೋ ಟೈರ್ಸ್‌ನ ಮಾಲೀಕ ಕುಟುಂಬವನ್ನು ಒಳಗೊಂಡಂತೆ 500ಕ್ಕೂ ಹೆಚ್ಚು ಭಾರತದ ಅತಿ ಶ್ರೀಮಂತರ ಮತ್ತು ರಾಜಕೀಯ ಬಲಾಢ್ಯರ ಹೆಸರು ಈ ಅಧ್ಯಯನದಲ್ಲಿ ಪ್ರಸ್ತಾಪವಾಗಿದೆ. ಕೇಂದ್ರ ಸರ್ಕಾರ ಇದನ್ನು ಗಮನಿಸಿದ್ದು, ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಘೋಷಿಸಿದೆ. ಆದರೆ ಆ ಸಮಿತಿಯ ವರದಿ ಇರಲಿ, ಅದು ಒಮ್ಮೆಯಾದರೂ ಸಂಪೂರ್ಣ ಸಭೆ ಸೇರಿದ್ದರ ಬಗ್ಗೆಯೂ ಮಾಹಿತಿ ಇಲ್ಲ. 

 

ಮೊಸ್ಸಾಕ್ ಪೋನೆಸ್ಕಾ ಕಂಪನಿಯೊಂದೇ 2 ಲಕ್ಷ ಸುಳ್ಳು ಕಂಪೆನಿಗಳನ್ನು ಒದಗಿಸಿದೆ. ಇಂಥ ಸಾವಿರಾರು ಕಂಪೆನಿಗಳು ಪನಾಮದಲ್ಲಿವೆ. ಪನಾಮಾದಂಥ ಕನಿಷ್ಠ 90 ಸಾಗರೋತ್ತರ ತೆರಿಗೆ ಮುಕ್ತ ಸ್ವರ್ಗತಾಣಗಳು ಜಗತ್ತಿನಲ್ಲಿವೆ. ಒಂದು ಅಂದಾಜಿನ ಪ್ರಕಾರ ಕನಿಷ್ಠ 7.5 ಟ್ರಿಲಿಯನ್ ಡಾಲರಿನಷ್ಟು ಕಾಳಧನವು ಇಲ್ಲಿ ಶೇಖರಗೊಂಡಿದೆ. ಆದ್ದರಿಂದಲೇ ‘‘ಈ ಅಧ್ಯಯನದಲ್ಲಿ ತೊಡಗುವ ಮುಂಚೆ ಈ ಕಾಳಧನ ಆರ್ಥಿಕತೆಯ ಒಂದು ಸಣ್ಣ ಭಾಗ ಎಂದು ಭಾವಿಸಿದ್ದೆ. ಆದರೆ ಜಗತ್ತಿನ ಆರ್ಥಿಕತೆಯಲ್ಲಿ ಇದೇ ಪ್ರಮುಖವಾದದ್ದು ಎಂದು ಈಗ ಅರ್ಥವಾಯಿತು’’ ಎಂದು ಈ ಪುಸ್ತಕದ ಲೇಖಕ ಬಸ್ತಿಯಾನ್ ಓಬರ್ಮೇಯರ್ ಹೇಳುತ್ತಾರೆ. ಎಲ್ಲಿಯತನಕ ಈ ಕಳ್ಳ ಕಂಪೆನಿಗಳ ಪೂರ್ತಿಪಟ್ಟಿ ಮತ್ತು ಅದರ ನಿಜವಾದ ಮಾಲೀಕರ ಹೆಸರು ಪ್ರಕಟವಾಗುವುದು ಕಡ್ಡಾಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ಕಾಳಧನದ ನಿಯಂತ್ರಣ ಸಾಧ್ಯವಿಲ್ಲವೆಂಬುದು ಅಧ್ಯಯನದಲ್ಲಿ ತೊಡಗಿದ್ದವರ ಖಚಿತ ಅಭಿಪ್ರಾಯ. 

 

ಇದು ಕಾಳಧನದ ವಿರಾಟ್ ಸ್ವರೂಪ. ನೋಟುಗಳ ಅಮಾನ್ಯೀಕರಣ ಈ ನೋಟವನ್ನು ಅಮಾನ್ಯೀಕರಣ ಮಾಡಬಾರದಷ್ಟೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry