7
ವಿಮರ್ಶೆ

ಪ್ರಳಯ ಸ್ವರೂಪಿ ಕಾಲದ ಚಿತ್ರಣ

Published:
Updated:
ಪ್ರಳಯ ಸ್ವರೂಪಿ ಕಾಲದ ಚಿತ್ರಣ

ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕತೆಗಳು)

ಇಂಗ್ಲಿಷ್‌ ಮೂಲ: ಅಲೋಕ್‌ ಭಲ್ಲಾ

ಕನ್ನಡಕ್ಕೆ: ರಾಹು

ಸಂಪುಟ 1. ಪು: 392; ಬೆ: ರೂ. 400

ಸಂಪುಟ–2. ಪು: 414 ; ಬೆ: ರೂ. 425

ಸಂಪುಟ– 3. ಪು: 416 ; ಬೆ: ರೂ. 425

ಮೇಲಿನ ಮೂರು ಸಂಪುಟಗಳ ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್‌, ನಂ. 121, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು- 40

 

**

ಭಾರತದ ವಿಭಜನೆಯ ಸಾವು–ನೋವುಗಳು, ಕ್ರೌರ್ಯ, ಅಳಿಯದ ಗಾಯಗಳು ಅಪಾರ ಪ್ರಮಾಣದ ಸಾಹಿತ್ಯ ಸೃಷ್ಟಿಗೆ ಕಾರಣವಾಗಿವೆ. ಆ ಕಾಲದ ಮನುಷ್ಯ ದುರಂತಗಳನ್ನು ಅನೇಕ ಲೇಖಕರು ದಾಖಲಿಸಿದ್ದಾರೆ. ದೇಶ ವಿಭಜನೆ ಸಾವು–ನೋವುಗಳಿಗೆ ಮಾತ್ರ ಕಾರಣವಾಗಿರಲಿಲ್ಲ. ಆಗ ನಡೆದ ದರೋಡೆ, ಅತ್ಯಾಚಾರದಂತಹ ಮನುಷ್ಯತ್ವದ ಮೇಲೆ ನಡೆದ ಹಲ್ಲೆಗಳು ಎಲ್ಲ ಕಾಲಕ್ಕೂ ಉಲ್ಲೇಖಿಸಬಹುದಾದ ಹಿಂಸೆಯ ಬಗೆಗಿನ ಉದಾಹರಣೆಗಳಾಗಿ ಉಳಿದುಕೊಂಡಿವೆ.

 

ತಮ್ಮ ಆತ್ಮೀಯರು, ಒಡಹುಟ್ಟಿದವರು, ಬಂಧುಗಳನ್ನು, ಕೊನೆಗೆ ಊರು–ಮನೆಗಳನ್ನು ಕಳೆದುಕೊಂಡವರ ಸಂಕಟವನ್ನು ಒಣ ಅಂಕಿಗಳಲ್ಲಿ ಹಿಡಿದಿಡಲಾಗುವುದಿಲ್ಲ. ಇದು ಕೇವಲ ಎರಡು ಧರ್ಮಗಳ ವಿಭಜನೆಯಾಗಿ ಉಳಿದುಕೊಂಡಿಲ್ಲ; ಅಮಾನವೀಯತೆಯ ದಾಖಲೆಯೂ ಆಗಿದೆ. ಮನುಷ್ಯ ಎಷ್ಟು ಕ್ರೂರಿಯಾಗಬಹುದು ಎಂಬುದಕ್ಕೆ ಬೆರಳು ತೋರಬಹುದಾದ ಘಟನೆ ಈ ದೇಶ ವಿಭಜನೆ.

 

ದೇಶದಲ್ಲಿ ಇತ್ತೀಚೆಗೆ ಮತ್ತು ಈಗ ನಡೆಯುತ್ತಿರುವ ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯಾಕಾಂಡಗಳನ್ನು, ಕೋಮು ಗಲಭೆಗಳನ್ನು ಈ ದೇಶವಿಭಜನೆ ಎಂಬ ಭೂಕಂಪದ ಬಳಿಕ ಸಂಭವಿಸುವ ಮರುಕಂಪನಗಳಿಗೆ ಹೋಲಿಸಬಹುದು. ಅವೆಲ್ಲದಕ್ಕೆ ಮೂಲ ಈ ದೇಶ ವಿಭಜನೆಯೇ ಆಗಿದೆ. ಭಾರತ ವಿಭಜನೆಯ ದುರಂತ ಕತೆಗಳಿರುವ ‘ಧರೆಹೊತ್ತಿ ಉರಿದಾಗ’ ಎಂಬ ಈ ಮೂರು ಸಂಪುಟಗಳ ಕತೆಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಗೊಂಡು ಬಂದಿವೆ. ಅಲೋಕ್‌ ಭಲ್ಲಾ ಸಂಪಾದಿಸಿದ ಈ ಸಂಪುಟಗಳನ್ನು ರಾಹು ಕನ್ನಡಕ್ಕೆ ತಂದಿದ್ದಾರೆ. ಈ ಎಲ್ಲ ಸಂಪುಟಗಳಲ್ಲಿರುವ 69 ಕತೆಗಳು ದೇಶವಿಭಜನೆಯ ಸಂದರ್ಭದ ಮಾನವೀಯ ಹಾಗೂ ಅಮಾನವೀಯತೆಯ ಬಹು ಆಯಾಮಗಳನ್ನು ತೆರೆದಿಡುತ್ತವೆ.

 

ಈ ಕತೆಗಳನ್ನು ಒಟ್ಟಿಗೇ ನೋಡಿದಾಗ ಹಿಂಸೆಯ ಭೀಕರತೆ ಮತ್ತು ನೋವು, ಅಮಾನವೀಯತೆಯ ವಿರಾಟ್‌ ಸ್ವರೂಪ ಓದುಗರನ್ನು ಖಂಡಿತಕ್ಕೂ ದಿಗ್ಭ್ರಮೆಗೆ ಈಡುಮಾಡದೇ, ನಿಟ್ಟುಸಿರಿಗೆ ದೂಡದೇ ಇರುವುದಿಲ್ಲ. ಅದರಲ್ಲೂ ಕನ್ನಡ ಓದುಗರಿಗೆ ಈಗಲೇ ಪರಿಚಿತನಾಗಿರುವ ಉರ್ದು ಕತೆಗಾರ ಸಾದತ್‌ ಹಸನ್‌ ಮಂಟೋ ಕತೆಗಳು ದೇಶ ವಿಭಜನೆಯ ಭೀಕರತೆಯ ಕಲ್ಪನೆ ಮೂಡಿಸಿವೆ.


 


ಈ ಉರ್ದು ಕತೆಗಾರನೂ ಸೇರಿದಂತೆ ಹಿಂದೀ, ಪಂಜಾಬಿ, ಪಸ್ತೋ, ಬಂಗಾಳಿ, ಇಂಗ್ಲಿಷ್‌ ಭಾಷೆಯ ಕತೆಗಾರರ ಕತೆಗಳನ್ನು ಆಯ್ದು ಅಲೋಕ್‌ ಭಲ್ಲಾ ಒಂದೆಡೆ ತಂದಿದ್ದಾರೆ. ಇಸ್ಮತ್‌ ಚುಗ್ತಾಯಿ, ಮೋಹನ್‌ ರಾಕೇಶ್‌, ಭೀಷ್ಮ ಸಾಹನಿ, ಕೃಷ್ಣ ಚಂದರ್‌, ಕುರ್ರಾತುಲೇನ್‌ ಹೈದರ್, ಅಜ್ಞೇಯ, ಕಮಲೇಶ್ವರ್‌ರಂತಹ ಭಾರತದ ಪ್ರಸಿದ್ಧ ಲೇಖಕರು ಇಲ್ಲಿದ್ದಾರೆ. ಸಂಪಾದಕ ಅಲೋಕ್‌ ಭಲ್ಲಾ ಕತೆಗಳನ್ನು ಅಭ್ಯಾಸದ ಅನುಕೂಲಕ್ಕಾಗಿ ನಾಲ್ಕು ಭಾಗಗಳಲ್ಲಿ ವಿಂಗಡಿಸಿ ಉತ್ತಮವಾದ ಪ್ರಸ್ತಾವನೆಯನ್ನು ಬರೆದಿದ್ದಾರೆ. ಮತ್ತು ಆ ಎಲ್ಲ ಬಗೆಯ ಕತೆಗಳಿಗೂ ಈ ಸಂಪುಟಗಳಲ್ಲಿ ಜಾಗ ಕೊಟ್ಟಿದ್ದಾರೆ. ಅವರ ವಿಂಗಡಣೆ ಹೀಗಿದೆ: 


1. ಕೋಮುಭಾವನೆಯಿಂದ ತುಳುಕುವ ಕತೆಗಳು, 


2. ಸಿಟ್ಟಿನಿಂದ ನೇತ್ಯಾತ್ಮಕ ನಿಲುವನ್ನು ತಳೆಯುವ ಕತೆಗಳು,


3. ಪರಿತಪಿಸುತ್ತ ಸಂತೈಸುವ ಕತೆಗಳು, 


4. ಸ್ಮೃತಿಗಳನ್ನು ಮರುಕಳಿಸುವ ಕತೆಗಳು. 


 


ಕೋಮುಭಾವನೆಯಿಂದ ಪ್ರೇರಿತವಾದ ಅಹ್ಮದ್ ನದೀಮ್‌ ಖಾಸ್ಮಿ, ಗುಲಾಮ್‌ ಅಬ್ಬಾಸ್‌, ಕೃಷ್ಣಾ ಸೋಬ್ತಿ ಅವರ ಕತೆಗಳು ಈ ಸಂಕಲನಗಳಲ್ಲಿವೆ. ಧರ್ಮದ ಆಧಾರದ ಮೇಲೆ ಆದ ಭಾರತ–ಪಾಕಿಸ್ತಾನದ ವಿಭಜನೆಯಿಂದ ಆದ ಏಕಮುಖಿಯಾದ, ತಮ್ಮ ಧರ್ಮದ ಪರವಾದ ಚಿಂತನೆಯನ್ನು ಮೇಲಿನ ಕತೆಗಾರರು ತಮ್ಮ ಕತೆಗಳಲ್ಲಿ ಧ್ವನಿಸಿದ್ದಾರೆ. ಈ ಕತೆಗಳ ಮಿತಿಯನ್ನು ಭಲ್ಲಾ ತಮ್ಮ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಆ ಬಗೆಯ ಕತೆಗಳು ಇಲ್ಲಿ ಕಡಿಮೆ. ಇಲ್ಲಿರುವ ಬಹುಪಾಲು ಕತೆಗಳು ಎರಡನೆಯ ಗುಂಪಿಗೆ ಸೇರಿದವು. ಮಾಂಟೋ ಕೂಡ ಇದರಲ್ಲಿ ಸೇರುತ್ತಾನೆ. ಅವನ ‘ತೋಬಾ ತೇಕ್‌ ಸಿಂಗ್‌’, ‘ತಣ್ಣನೆಯ ಮಾಂಸ’, ‘ಕಿಟಕಿ ತೆರೆ’, ‘ಸಹಾನುಭೂತಿ’ ಮತ್ತು ಇನ್ನಿತರ ಕತೆಗಳು ಇಲ್ಲಿ ಸೇರಿವೆ.


 


ವಾಸ್ತವವನ್ನು ತಣ್ಣಗೆ ಚಿತ್ರಿಸುವ ಅವನ ಕತೆಗಳೊಂದಿಗೆ ಇಬ್ನ್‌–ಎ–ಇನ್‌ಶಾ, ಕುಲವಂತ್‌ ಸಿಂಗ್‌ ವಿರ್ಕ್‌, ಉಮ್‌–ಎ–ಉಮರಾ ಮತ್ತಿತರ ಕತೆಗಾರರ ಕತೆಗಳು ಇಲ್ಲಿ ಬರುತ್ತವೆ. ಮೂರನೆಯ ಗುಂಪಿನ ಕತೆಗಳು ಈ ಮಾರಣಹೋಮದ ಬಳಿಕ ಉಳಿದವರ ಅಳಲನ್ನು ದಾಖಲಿಸುವ ಕತೆಗಳಾಗಿವೆ. ಅದರಲ್ಲಿ ರಾಜೇಂದ್ರ ಸಿಂಗ್‌ ಬೇಡಿ ಅವರ ಪ್ರಸಿದ್ಧ ಕತೆ ‘ಲಾಜವಂತಿ’ ಸಹ ಸೇರುತ್ತದೆ. ಈ ಭಾಗದ ಕತೆಗಳು ಜನರ ಅಸಹಾಯಕತೆ, ನಿಟ್ಟುಸಿರು, ಸಂತೈಕೆಗಳನ್ನು ದಾಖಲಿಸುತ್ತವೆ. ಇನ್ನು, ನಾಲ್ಕನೇ ಭಾಗದ ಕತೆಗಳು ದೇಶವಿಭಜನೆಯ ಬಳಿಕದ ನೆನಪುಗಳನ್ನು, ಇತಿಹಾಸದ ರಕ್ತಸಿಕ್ತ ಹೆಜ್ಜೆ ಗುರುತುಗಳನ್ನು ಮಂಡಿಸುತ್ತವೆ. ಇಲ್ಲಿ ಯಾವುದೇ ಹಳಹಳಿಕೆ ಇಲ್ಲ; ಬದಲಾಗಿ ಅವುಗಳ ಲಕ್ಷ್ಯ ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ಸಹನೀಯಗೊಳಿಸುವುದರ ಕಡೆಗಿದೆ.


 


ಅಳಿಯದ ಆ ನೆನಪುಗಳು ಮುಂದಿನ ಜನಾಂಗವನ್ನು ಮಾನವೀಯಗೊಳಿಸಲಿ ಎಂದು ಆ ಕತೆಗಳ ಹಿಂದಿರುವ ಲೇಖಕರ ಆಶಯವಾಗಿದೆ. ಇಂತ್‌ಚಾರ್‌ ಹುಸೇನಿ, ಕುರ್ರಾತುಲೇನ್‌ ಹೈದರ್‌, ಅಶ್ಫಾಕ್‌ ಅಹಮ್ಮದ್‌– ಹೀಗೆ ಸ್ಮೃತಿಗಳನ್ನು ದಾಖಲಿಸುವ ಲೇಖಕರಾಗಿದ್ದಾರೆ. ಇವೆಲ್ಲವೂ ಸಂಪಾದಕರು ಮಾಡಿಕೊಂಡಿರುವ ಚಾರಿತ್ರಿಕ ಹಿನ್ನೆಲೆಯ ಸ್ಥೂಲ ವರ್ಗೀಕರಣವಷ್ಟೆ. ಮಾಂಟೋ ತರಹದ, ಮೂಳೆಗಳಲ್ಲೂ ನಡುಕ ಹುಟ್ಟಿಸುವ ಲೇಖಕರು ಈ ವಿಂಗಡಣೆಯ ಹೊರತಾಗಿಯೂ ಉಳಿಯುತ್ತಾರೆ. ಕಲೆ ಎನ್ನುವುದು ಎಲ್ಲ ಕಾಲ–ದೇಶಗಳನ್ನು ಮೀರಿ ಹೋಗುವಂತಹದ್ದು. ಅದಕ್ಕೆ ಮಾಂಟೋ ಕತೆಗಳು ಉತ್ತಮ ಉದಾಹರಣೆಗಳಾಗಿವೆ.


 


ಇಲ್ಲಿನ ಕತೆಗಳು ಭಾರತ–ಪಾಕಿಸ್ತಾನದ ವಿಭಜನೆ ಸಂದರ್ಭದ ಚಾರಿತ್ರಿಕ, ರಾಜಕೀಯದ ದಾಖಲೆ ಅಲ್ಲ. ರಾಜಕೀಯ ನಿರ್ಧಾರಗಳು ಎಂತಹ ದುರಂತಗಳನ್ನು ತರಬಹುದು ಎಂಬುದೂ ಇಲ್ಲಿ ಬಿಂಬಿತವಾಗಿಲ್ಲ. ಹಾಗೆ ಯೋಚಿಸುವುದು ತೀರ ಸೀಮಿತ ಆಲೋಚನೆಯಾಗಬಹುದು. ಅದು ಎಷ್ಟು ಸಂಕೀರ್ಣ ಎಂದರೆ, ಇಲ್ಲಿನ ಕತೆಗಳು ಆ ಕಾಲದ ಪ್ರಖರ, ನಿಖರ ಚಿತ್ರಣವನ್ನಷ್ಟೆ ಕೊಟ್ಟು ಸುಮ್ಮನಾಗುತ್ತವೆ. ಅವು ರಾಜಕೀಯವಾಗಿ, ಐತಿಹಾಸಿಕವಾಗಿ ಏಳುವ ಮಾನವೀಯ ಪ್ರಶ್ನೆಗಳಿಗೆ ಯಾವ ಉತ್ತರಗಳನ್ನೂ ಕೊಡುವುದಿಲ್ಲ, ಪರಿಹಾರವನ್ನೂ ಸೂಚಿಸುವುದಿಲ್ಲ. ಅದು ಅವುಗಳ ಕೆಲಸವೂ ಉದ್ದೇಶವೂ ಆಗಿಲ್ಲ. ಏಕೆಂದರೆ, ಅವು ಮೂಡಿ ಬಂದ ಸಂದರ್ಭ ಅತ್ಯಂತ ತಲ್ಲಣಗಳ, ಪ್ರಳಯ ಸ್ವರೂಪಿಯಾದ ಕಾಲದ್ದಾಗಿದೆ. ಅದು ಈ ತನಕವೂ ಅನೇಕ ಪ್ರಶ್ನೆಗಳನ್ನು ಎತ್ತುತ್ತಲೇ ಇದೆ.


 


ಈ ಕತೆಗಳನ್ನು ಈಗಿನ ಕಾಲದ ಓದುಗರು ಇದನ್ನು ಭಾರತದ ಚರಿತ್ರೆಯ ಭಾಗವಾಗಿ, ಅದರ ಭಾರವನ್ನು ಹೊತ್ತುಕೊಂಡೇ ಓದಬೇಕೆ ಎಂಬ ಪ್ರಶ್ನೆಯೂ ಏಳುತ್ತದೆ. ಇವು 1947–1948ರಲ್ಲಿ ನಡೆದ ಹಿಂದೂ–ಮುಸ್ಲಿಂ–ಸಿಖ್ಖರ ನಡುವಿನ ದ್ವೇಷದ ಕಥನಗಳು ಮಾತ್ರವಾಗಿಲ್ಲ, ಮನುಷ್ಯನ ಅಮಾನವೀಯತೆ, ನೈತಿಕತೆ, ಅಸಹನೆ, ಹೇಡಿತನ, ಹಿಂಸೆ – ಈ ಎಲ್ಲ ಸಂಗತಿಗಳ ಆಳ, ಅಗಲ, ಪರಿಣಾಮ ಹಾಗೂ ಬದುಕಿನ ಮೌಲ್ಯಗಳು ಏನು ಎಂಬುದರ ಕಡೆಗೂ ಅವು ಗಮನ ಸೆಳೆಯುತ್ತವೆ.


 


ಕನ್ನಡಕ್ಕೆ ಬಂದ ಈ ಕತೆಗಳ ಓದು ಈಗಿನ ಕಾಲದ ಅಗತ್ಯವಾಗಿದೆ. ಈ ಸಂಪುಟಗಳು ರೂಪುಗೊಳ್ಳುವುದರ ಹಿಂದೆ ಜೀವಪರವಾಗಿರುವ ಒಂದು ಐತಿಹಾಸಿಕ ತುರ್ತು ಇರುವುದನ್ನು ನಾವು ಮನಗಾಣಬಹುದು. ಇದಲ್ಲದೇ ಚರಿತ್ರೆ ದಾಖಲಿಸಲು ಹಿಂಜರಿದ, ಕೈ ಬಿಟ್ಟ ಅಂಶಗಳನ್ನು ಈ ಕತೆಗಳು ಒಳಗೊಂಡಿವೆ. ಆದ್ದರಿಂದಲೇ ಇವು ಒಳಗೊಳ್ಳುವ ಅನುಭವ, ಸೃಷ್ಟಿಸುವ ಮನುಷ್ಯಚರಿತ್ರೆ ಅತ್ಯಂತ ಪ್ರಾಮಾಣಿಕವಾಗಿದೆ, ಸಾಹಿತ್ಯ ಮಾಡಲೇಬೇಕಿರುವ ಅದರ ಅಸಲಿ ಕಸುಬಿಗೆ ಬದ್ಧವಾಗಿದೆ.


 


ಸಾವಿರಕ್ಕೂ ಹೆಚ್ಚು ಪುಟಗಳನ್ನು ಅನುವಾದಿಸಿರುವ ಲೇಖಕ ರಾಹು(ಆರ್‌.ಕೆ. ಹುಡುಗಿ) ಅವರು ಬಹುಮುಖ್ಯವಾದ ಮಾನವೀಯ ದುರಂತದ ಪುಟಗಳನ್ನು ಕನ್ನಡಿಗರಿಗೆ ಕೊಟ್ಟಂತಾಗಿದೆ. ಮರೆಯಲಾಗದ ಮತ್ತು ಮರೆಯಬಾರದ ಈ ಪುಟಗಳು ಓದುಗರಿಗೆ ಜಗತ್ತನ್ನು ಅಂತಃಕರಣ ಮತ್ತು ಅನುಕಂಪದಿಂದ ಕಾಣುವ ಆರ್ದ್ರ ಕಣ್ಣುಗಳನ್ನು ಕೊಡುವಂತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry