7

ಗಂಧ ಪರಿವರ್ತನೆ

ಲಕ್ಷ್ಮೀಶ ತೋಳ್ಪಾಡಿ
Published:
Updated:
ಗಂಧ ಪರಿವರ್ತನೆ

‘ಮಹಾಭಾರತ’ಕ್ಕೇ ವಿಶಿಷ್ಟವಾದ ಒಂದು ತಿಳಿವಳಿಕೆಯುಂಟು. ಅದೆಂದರೆ – ಎಲ್ಲೋ ಏನೋ ಒಂದು ತಪ್ಪಾಗುವುದು;  ಆ ತಪ್ಪು ಮರ್ತ್ಯಲೋಕದಲ್ಲೇ ಆಗಬೇಕೆಂದೇನೂ ಇಲ್ಲ; ಆದರೆ ಆ ತಪ್ಪಿನ ಪರಿಣಾಮವಾಗಿ ಅದನ್ನನುಭವಿಸಲೆಂಬಂತೆ ಈ ಮರ್ತ್ಯಲೋಕದಲ್ಲಿ ಮನುಷ್ಯಜೀವ ಹುಟ್ಟಿಕೊಳ್ಳುವುದು. ಏಕೆಂದರೆ ಇಲ್ಲಿ ಅನುಭವಿಸಿಯೇ ಆ ತಪ್ಪು– ಆ ಮಾಲಿನ್ಯ – ಕಳೆದು ತೊಳೆದು ಹೋಗಬೇಕಲ್ಲದೆ, ಆ ಮೂಲಕ ಬದುಕು ತನ್ನ ಮೂಲ ಶುಭ್ರತೆಯನ್ನು ಮತ್ತೆ ಪಡೆದುಕೊಳ್ಳಬೇಕಲ್ಲದೆ ಬೇರೆ ದಾರಿ ಇಲ್ಲ.

 

‘ಜೀವನ’ ಎನ್ನುವ ಪದಕ್ಕೆ ‘ನೀರು’ ಎನ್ನುವ ಅರ್ಥವಿದೆ ಮತ್ತು ನೀರಿಗೆ ಕೊಳೆ ತೊಳೆಯುವ ಅನುಭವವಿದೆಯಾಗಿ ಮರ್ತ್ಯಜೀವನವೆಂದರೆ ಹೀಗೆ ಕೊಳೆ ತೊಳೆದುಕೊಳ್ಳುವ ಕಾಯಕವೇ ಆಗಿರುವಂತಿದೆ. ಒಂದು ಜೀವ ಇಲ್ಲಿ ಕಣ್ತೆರೆಯುವುದೆಂದರೆ ಅದೊಂದು ಅಪೂರ್ವ ಅಭಿವ್ಯಕ್ತಿ. ಸೃಷ್ಟಿ ಎಂದರೇನೇ ಒಂದು ಅಭಿವ್ಯಕ್ತಿ.

 

ನಿಸರ್ಗದ ಎಲ್ಲ ಶಕ್ತಿಗಳೂ ಈ ಅಭಿವ್ಯಕ್ತಿಗೆ ಅನುಕೂಲಿಸುತ್ತ ದುಡಿಯುವವು. ಒಂದು ಶಿಶು ಈ ಲೋಕಕ್ಕೆ ಬರಬೇಕಾದರೆ ನಿಸರ್ಗ ಅದಕ್ಕೆ ಅನುಕೂಲಿಸಬೇಡವೆ? ‘ಜೀವ’ ಇಲ್ಲಿ ಉಂಟಾಗಬೇಕಾದರೆ ತದನುಕೂಲಿಯಾದ ಪೂರ್ವ ಸನ್ನಿವೇಶವೊಂದು ಇಲ್ಲಿ ರೂಪುಗೊಂಡಿರಲೇ ಬೇಕಲ್ಲವೆ? ಯಾವುದೋ ಒಂದು ತಪ್ಪಿನ, ಒಂದು ಕೇಡಿನ ಹಿನ್ನೆಲೆಯಲ್ಲಿಯೇ ಮನುಷ್ಯಜೀವ ಇಲ್ಲಿ ಕಾಣಿಸಿಕೊಳ್ಳುವುದಾದರೆ, ಆ ತಪ್ಪಿಗೆ ನಿಸರ್ಗವೇ ಅನುಕೂಲಿಸಿದಂತೆ ಆಗಲಿಲ್ಲವೆ? – ಎಂದರೆ, ಹೌದು; ಮನುಷ್ಯಜೀವ ಇಲ್ಲಿ ಬಂದು ತಪ್ಪಿನ ಪರಿಣಾಮಗಳನ್ನು ಅನುಭವಿಸಿ ತಪ್ಪನ್ನು ಮೀರುವುದು – ಕೇಡನ್ನು ಮೀರುವುದು ಸಾಧ್ಯ ಎಂಬ ಕನವರಿಕೆಯೊಂದು ನಿಸರ್ಗದ ಆಳದಲ್ಲಿ ಮಿಡಿಯುತ್ತಿದೆ ಎನ್ನಬೇಕಾಗುತ್ತದೆ.

 

ಮರ್ತ್ಯಲೋಕವಿದು ಅನುಭವದ ಲೋಕ. ‘ಅನು–ಭವ’ ಎನ್ನುವ ಪದವನ್ನೇ ನೋಡಿ. ‘ಭವ’ವನ್ನು ಅನುಸರಿಸಿಕೊಂಡು ನಡೆಯುತ್ತಿರುವ ವಿದ್ಯಮಾನ ಎನ್ನುವುದು ಈ ಪದದ ಅರ್ಥ. ಅಂದರೆ ಅನುಭವವು ಮೂಲವಲ್ಲ. ಭವ ಮೂಲ. ‘ಭವ’ವನ್ನು ಹೊಂದಿಕೊಂಡಂತೆ ಆ ಮೇಲೆ ನಡೆವ ಸರಣಿ ಕ್ರಿಯೆಗಳು ಅಥವಾ ಪ್ರತಿಕ್ರಿಯೆಗಳೇ –  ‘ಅನುಭವ’. ‘ಅನುಭವ’ಕ್ಕೇಕೆ ಮಹತ್ತ್ವವೆಂದರೆ, ಅನುಭವದ ಮೂಲಕ ‘ಭವ’ದ ಅರಿವನ್ನು, ‘ಭವ’ದ ಮೂಲಸ್ಪರ್ಶವನ್ನು ಪಡೆಯುವುದು ಸಾಧ್ಯ ಎಂಬುದರಿಂದ. ತನ್ನ ತಪ್ಪಿನ ಪರಿಣಾಮವನ್ನು ಅನುಭವಿಸುವ ಮೂಲಕವೇ ತನ್ನ ತಪ್ಪಾವುದು ಎಂಬ ಅರಿವು, ತಪ್ಪಿನ ಅರಿವಿನ ಮೂಲಕವೇ ತಪ್ಪಲ್ಲದ ‘ಸರಿ’ ಅಥವಾ ‘ಒಳಿತು’ ಯಾವುದು ಎಂಬುದರ ಗ್ರಹಿಕೆಯನ್ನೂ ಪಡೆಯುವ ಸೌಲಭ್ಯ ಅಥವಾ ಸಾಧ್ಯತೆಯುಂಟಾಗುವುದು ಎಂಬುದರಿಂದ.

 

ಹೌದು. ‘ತಪ್ಪು’ ಮರ್ತ್ಯಲೋಕದಲ್ಲೇ ನಡೆಯಬೇಕೆಂದೇನೂ ಇಲ್ಲ. ಶಂತನು–ಗಂಗೆಯರ ಕಥೆಯಲ್ಲೇ ಈ ಮುನ್ನ ನೋಡಿದಂತೆ ಬ್ರಹ್ಮನ ಲೋಕದಲ್ಲೇ ತಪ್ಪು ನಡೆಯಬಹುದು. ಅಂದರೆ ‘ಭವ’ದ ಸ್ತರದಲ್ಲಿಯೇ ತಪ್ಪು ನಡೆಯಬಹುದು ಎಂದಾಯಿತು. ನಡೆಯಬಹುದೇನೋ. ಏಕೆಂದರೆ ತಪ್ಪಿಗೆ ಕಾರಣವಾದ ಅವಿದ್ಯೆಯು ವಿದ್ಯೆಯ ಒಡನಾಡಿಯಾಗಿಯೇ ಇರುವಂತಿದೆ. ಮೇಲ್ಲೋಕಗಳು ವಿದ್ಯೆಯ ಲೋಕಗಳಲ್ಲವೆ! ಅಲ್ಲೇ ಅವಿದ್ಯೆಯೂ ಇದೆ! ನೆನಪು–ಮರೆವು ಒಟ್ಟಿಗೇ ಇರುವಂತೆ. ನೆನಪು–ಮರೆವು ಸಾಪೇಕ್ಷವಲ್ಲವೆ? ಹಾ! ಮರೆತೆ ಎನ್ನುವಾಗಲೇ ನೆನಪು ಮಿಂಚುವುದಲ್ಲವೆ? ನೆನಪಾದ ಕ್ಷಣದಲ್ಲೇ ಇಷ್ಟು ಹೊತ್ತು ಮರೆತಿದ್ದೆ ಎಂದೂ ಹೊಳೆಯುವುದಲ್ಲವೆ? ಇವು ಸಾಪೇಕ್ಷವಾದುದರಿಂದಲೇ ‘ಭವ’ದ ಸ್ತರದಲ್ಲಿಯೇ ತಪ್ಪು ಕೂಡ ನಡೆದುಬಿಡಬಹುದು.

 

ಏನಿದ್ದರೂ, ಮಗುವೊಂದು ಈ ಲೋಕದಲ್ಲಿ ಮೊದಲಬಾರಿಗೆ ಕಣ್ತೆರೆದಾಗ ಅದು ಯಾವುದೋ ಒಂದು ತಪ್ಪಿನ ಪರಿಣಾಮ ಎಂದು ಬಗೆಯುವುದು ಕಡುಕಷ್ಟ. ಕುಂತಿ ತೇಲಿಬಿಟ್ಟ ಕರ್ಣನ ಕುರಿತು ಇಂದೂ ಎಂದೂ ನಮ್ಮ ಮನ ಮಿಡಿಯುತ್ತಿರುವುದು! ಹಾಗೆ ಬಗೆಯುವುದು ನಮಗೆ ಕಡು ಕಷ್ಟವಾದರೂ,  ಇಲ್ಲಿ ನಾವು ಬೆಳೆದಂತೆ, ಇನ್ನೊಬ್ಬರದೆಲ್ಲವೂ ತಪ್ಪೆಂಬಂತೆ ನಮಗೆ ಕಾಣಿಸುವುದೇಕೆ?

 

ಮಗುವೊಂದು ಹುಟ್ಟಿ ಬೆಳೆಯುವುದು ಲೋಕದ ತಪ್ಪನ್ನು ಕಂಡುಹಿಡಿಯುವುದಕ್ಕೇನು? ಅಥವಾ  ಲೋಕದ ತಪ್ಪನ್ನು ತನಗೆ ಕಂಡಂತೆ ತಿದ್ದುವುದಕ್ಕೇನು? ಹೀಗೆ ಬಗೆಯುವುದು ಕೂಡ ಇನ್ನೊಂದು ರೀತಿಯಲ್ಲಿ ಕಡು ಕಷ್ಟ. ಈ ಕಷ್ಟಗಳನ್ನೆಲ್ಲ ಅನುಭವಿಸುತ್ತಲೇ, ಮಹಾಭಾರತ, ಮರ್ತ್ಯಲೋಕದ ಅನುಭವದ ಬೇರುಗಳು ಮರ್ತ್ಯಲೋಕದಲ್ಲಿ ಮಾತ್ರವಲ್ಲ – ಎಲ್ಲೆಡೆ ಅವು ಹರಡಿವೆ ಎನ್ನುತ್ತದೆ. ಆಲದ ಮರ, ಮೇಲೆ ಹರಡಿರುವ ಗೆಲ್ಲಿನಿಂದ ಕೆಳಮಣ್ಣಿಗೆ ಬಿಳಲು ಬೇರಿಳಿಸಿದಂತೆ; ಮಣ್ಣಿನಲ್ಲಿರುವ ಮರ್ತ್ಯಜೀವನದ ಬೇರುಗಳು ಮೇಲ್ಲೋಕದಲ್ಲೂ ಇರಬಹುದು – ಎನ್ನುತ್ತದೆ.

 

ಶಂತನು–ಗಂಗೆ, ಅನೇಕ ವರ್ಷಕಾಲ ಸಹಬಾಳ್ವೆ ನಡೆಸಿದುದೇನೋ ನಿಜ. ಇವರೀರ್ವರ ವ್ಯಕ್ತಿತ್ತ್ವಗಳ ಹಿನ್ನೆಲೆಯಲ್ಲಿ ಕಡಲು (ಶಂತನು) ಹೊಳೆ (ಗಂಗೆ)ಗಳ ತಾತ್ತ್ವಿಕತೆ ಅಡಗಿದ್ದು ನಿಜ. ಆದರೂ ಇವರ ದಾಂಪತ್ಯವೊಂದು ಎರಕವಿಲ್ಲದ ಇಜ್ಜೋಡು. ತನ್ನೊಡಲಿನಿಂದ ಬಂದ ಏಳು ಮಕ್ಕಳನ್ನು ಮರಳಿ ತನ್ನೊಡಲಿಗೇ ಸೇರಿಸಿಕೊಂಡು ನಿರುಮ್ಮಳವಾಗಿದ್ದಳು – ಗಂಗೆ. ಹಾಗಿರುವುದು ಗಂಗೆಗೆ ಮಾತ್ರ ಸಾಧ್ಯ! ಶಂತನು–ಗಂಗೆಯರಿಗೆ ಮಕ್ಕಳಾಗಿ ಹುಟ್ಟಿದ ಈ ಏಳು ಜೀವಗಳು ನಿಜದಲ್ಲಿ ವಸುಗಳೆಂಬ ದೇವತಾಗಣ. ವಸಿಷ್ಠರಿಗೆ ತಪ್ಪಿನಡೆದು ಶಾಪಗ್ರಸ್ತರಾಗಿ ಆ ಕಾರಣದಿಂದ ಮನುಷ್ಯಲೋಕದಲ್ಲಿ ಇವರು ಹುಟ್ಟು ಕಾಣಬೇಕಿತ್ತು. ಅಷ್ಟೇ.

 

ಮನುಷ್ಯರಂತೆ ಬೆಳೆದು ಬಾಳುವುದು ಇವರಿಗೆ ಬೇಕಿರಲಿಲ್ಲ. ಹುಟ್ಟಿದೊಡನೆ ತಮ್ಮನ್ನು ಸಾಯಿಸಬೇಕೆಂದು ತಾಯಿ ಗಂಗೆಯಲ್ಲಿ ಬೇಡಿಕೊಂಡಿದ್ದರು. ಹಾಗೆ ಹುಟ್ಟಿ–ಸತ್ತ ಮಕ್ಕಳು. ಇದೂ ಒಂದು ರೀತಿಯ ಇಚ್ಛಾಮರಣವೇ ಎನ್ನಬಹುದು. ಗಂಗೆ, ಇಚ್ಛಾಮರಣವನ್ನು ನೆರವೇರಿಸುವುದಕ್ಕೇ ಇರುವ ತಾಯಿಯಂತೆ ಕೂಡ ಇದ್ದಳು! ಈ ವಸುಗಣದಲ್ಲಿ ಕೊನೆಯವನು – ಎಂಟನೆಯವನು ದೇವವ್ರತ. ಶಂತನು–ಗಂಗೆಗೆ ಎದುರಾಡಿ ದೇವವ್ರತನನ್ನು ಉಳಿಸಿಕೊಂಡಿದ್ದ. ಎದುರಾಡಿದ ಕಾರಣದಿಂದಲೇ ಗಂಗೆಯನ್ನು ಕಳೆದುಕೊಂಡಿದ್ದ. ಗಂಗೆ, ಶಂತನುವನ್ನು ಅಗಲಿಹೋಗಿದ್ದರೂ, ಈ ಒಂದು ಮಗುವಾದರೂ ಉಳಿಯಬೇಕು; ಶಂತನುವಿಗೆ ದ್ರೋಹವಾಗಬಾರದು ಎಂಬ ಸಹಜ ಸ್ತ್ರೀಭಾವ ಗಂಗೆಯಲ್ಲಿಯೂ ಇತ್ತು.

 

ದೇವವ್ರತನಲ್ಲಿ ಎಲ್ಲವೂ ಎಂಟು ಮಡಿ! ಉಳಿದೇಳು ಮಂದಿ ಬಯಸದೆ ಬಿಟ್ಟುಕೊಟ್ಟ ಬದುಕಿನ ಆಳ ಅಗಲ – ಆಯುರ್ದಾಯಗಳು ದೇವವ್ರತನ ಬೆನ್ನಿಗೆ ಇದ್ದವು. ಇತ್ತಾದರೂ, ಅಂದರೆ ಎಂಟು ತಲೆಮಾರುಗಳ ಕಾಲದ ದೀರ್ಘಜೀವನವಿತ್ತಾದರೂ, ದೇವವ್ರತನ ಸಂತತಿ ಭೂಮಿಯ ಮೇಲೆ ಮುಂದುವರೆಯಬಾರದೆನ್ನುವ, ದೇವತೆಗಳಿಗೆ ಸಹಜವಾದ ಇಚ್ಛೆಯೊಂದು ಉಳಿದ ವಸುಗಳ ಮನದಲ್ಲಿತ್ತು. ಇಲ್ಲಿ ಬಾಳುವ ಇಚ್ಛೆ ಅವರಿಗೇ ಇರಲಿಲ್ಲವಲ್ಲ! ನಿಜ. ದೇವವ್ರತನ (ಭೀಷ್ಮ) ಬಾಳಿನಲ್ಲಿ ಇದಕ್ಕನುಗುಣವಾದ ಸಂದರ್ಭಗಳು ಬಂದೊದಗಲಿಕ್ಕೆ ಕಾದಿದ್ದವು. ಅವನು ಸಂಸಾರಿಯಾಗಲಿಲ್ಲ. ಸಂತತಿಯನ್ನು ಪಡೆಯಲಿಲ್ಲ. ಆದರೆ ತಲೆಮಾರುಗಳ ಉದ್ದಕ್ಕೆ ಅವನೇ ಬದುಕಿ ಬಂದಿದ್ದನಲ್ಲ! ಅವನೇ ಇದ್ದರೆ ಅವನ ಸಂತತಿಯೇ ಇದ್ದಂತಲ್ಲವೆ! ಯಾಯಾತಿ, ತನ್ನ ಮಗನ ಯೌವನವನ್ನು ಪಡೆದು ಅಷ್ಟಕಾಲ ತಾನು ಯುವಕನಾಗಿ ಬದುಕಿದ ಚಿತ್ರದ ಇನ್ನೊಂದು ಮುಖವೆಂಬಂತೆ ದೇವವ್ರತ ಭೀಷ್ಮ ತನ್ನ ನಿಡುಗಾಲದ ಬಾಳನ್ನು ಕುಟುಂಬದ ಹುಡುಗರಿಗೆ ಮೀಸಲಿಟ್ಟು ಒಂದು ಇತಿಹಾಸವನ್ನೇ ಯೌವನದಿಂದ ತುಂಬಿದ. ಇದು ಪ್ರಾಯಃ ವಸುದೇವತೆಗಳು ಕಲ್ಪಿಸಲಾರದ ಚಿತ್ರ! ಔರಸಸಂತತಿಯ ಮುಂದುವರಿಕೆ ಬೇಡವೆಂದವರವರು. ಆ ಮೂಲಕ ಮಾನವನ ಭೌತಿಕ ಇತಿಹಾಸದಲ್ಲಿ ರುಚಿಯನ್ನು ಕಳೆದುಕೊಂಡವರವರು. ಇಂಥವರಿಗೆ, ಮನುಜರ ಬಾಳಿನಲ್ಲಿಯೇ ಔರಸರಿಗಿಂತ ನಿಗಿಲಾಗಿ ಮಾನಸ ಪುತ್ರರ, ಮಾನಸ ಪಿತೃ, ಪಿತಾಮಹರ ಇತಿಹಾಸವೂ ಇದೆ ಎಂದು ಭೀಷ್ಮನ ಬಾಳಿನಲ್ಲಿ ವ್ಯಾಸರು ತೋರಿಸುತ್ತಾರೆ.

 

ಅಲ್ಲದೆ ಅನುಭವಿಸುವ ಬಗೆಯಲ್ಲಿ ಅನು–ಭವವು ‘ಭವ’ವನ್ನು ಮೀರಬಲ್ಲುದು (Transcend) ಎಂದೂ ತೋರಿಸುತ್ತಾರೆ. ಈ ಅರ್ಥದಲ್ಲಿ ಭೀಷ್ಮನ ಪಾತ್ರವೇ ಐತಿಹಾಸಿಕವಾದುದು.

 

ಯಮುನೆ ಮೊರೆಯುತ್ತ ಹರಿಯುತ್ತಿದ್ದಳು. ನೀರಿನಲ್ಲಿ ಮುಂಜಾನೆಯ ಹಬೆ ಏಳುತ್ತಿತ್ತು. ಆ ಹಬೆಯಲ್ಲಿ ಬೆರೆಯಲೆಂದು ಮೇಲಿನ ಮಂಜು ಕೆಳಗಿಳಿಯುತ್ತಿತ್ತು. ನೀರಿಗೆ ನೀರು ಗುರುತಾಗುತ್ತಿತ್ತು. ಮಂದಿಯನ್ನು ಹೊಳೆದಾಟಿಸಲು ದೊಡ್ಡ ದೋಣಿಯೊಂದಿತ್ತು. ದೋಣಿಕಾರ್ತಿ ಓರ್ವ ಹುಡುಗಿ! ಹುಟ್ಟುಹಾಕುತ್ತಿದ್ದಳು. ದಡದಲ್ಲಿ ಪರಾಶರ ಋಷಿ. ದೋಣಿಗೆ ಕಾಯುತ್ತಿದ್ದ. ಪರಾಶರ, ವಸಿಷ್ಠ ಪರಂಪರೆಯಲ್ಲಿ ಬಂದ ದೊಡ್ಡ ಜ್ಞಾನಿ. ವೇದಗಳಲ್ಲಿ ಉಲ್ಲೇಖಗೊಂಡವನು. ಅವನು ಮತ್ಸ್ಯಗಂಧಿಯನ್ನು ನೋಡಿದ. ಹೌದು. ಹುಡುಗಿಯ ಹೆಸರು ಮತ್ಸ್ಯಗಂಧಿ’ ಗಂಧವತಿ; ಗಂಧಕಾಳಿ – ಹೀಗೆ. ಹುಡುಗಿ ಬೆಸ್ತರವಳು. ಮೀನುಗಳೊಟ್ಟಿಗೇ ಬೆಳೆದವಳು. ನಿಸರ್ಗ ಸಹಜ ಚೆಲುವೆ.

 

ಪರಾಶರನ ಕಣ್ಣು, ತನಗಿಂತ ಬೇರೆಯಲ್ಲದ ಪರಿಸರದಲ್ಲಿ ಒಂದಾಗಿ ಬೆರೆತಿರುವ ಚೆಲುವನ್ನು – ನೀರಿನಲ್ಲಿ ಮೀನಿನಂತಿರುವ ಚೆಲುವನ್ನು ಗುರುತಿಸಿತು. ಪರಿಸರದಿಂದ ಬೇರೆ ಮಾಡಿ ನೋಡುವುದು ಚೆಲುವಿನ ಕೇಡು. ಕಣ್ಣಿನ ಕೇಡು. ಈ ಪರಿಸರದಲ್ಲಿ ಪರಾಶರ ತಾನೂ ಒಂದಾಗಿದ್ದ. ದಡದಲ್ಲಿ ನಿಂತಿದ್ದರೂ ನೀರಿನ ಹೊಯಿಲಿಗೆ ಸಿಕ್ಕಿದ್ದ. ಮತ್ಸ್ಯಗಂಧಿಯನ್ನು ಬಯಸಿದ. ಹುಡುಗಿ ಬೇಡವೆನ್ನಲಿಲ್ಲ. ಅವಳು ಋಷಿಗಳ ಬಗೆಯನ್ನು ಬಲ್ಲಳೇನೋ. ಪಂಪನ ಮಾತಿನಂತೆ ಇವನಂಥವರು ಸಾವಿರದಲ್ಲೊಬ್ಬರು ಎಂದು ಬಲ್ಲಳೇನೋ. ಆದರೆ ತಾನು ಪಿತೃವಶಾನುಗೆ ಎಂದಳು.

 

ತನ್ನ ಕನ್ನೆತನ ಕಳೆದುಹೋದರೆ ಏನು ಉತ್ತರ ಹೇಳಲಿ ಎಂದಳು. ಅಲ್ಲದೆ ತನ್ನ ಮೈಯ ಈ ಮತ್ಸ್ಯಗಂಧ ಅದೇಕೋ ತನಗೇ ಒಗ್ಗುತ್ತಿಲ್ಲ; ಇನ್ನು ನಿಮಗೆ ಒಗ್ಗುತ್ತದೆಯೆ ಎಂದಳು. ಹೊಳೆಯ ಎರಡೂ ದಡದಲ್ಲಿ ಮಂದಿ ಇದ್ದಾರೆ; ಇಲ್ಲಿ ಮರೆ ಎಲ್ಲಿದೆ ಎಂದಳು. ಪರಾಶರ ಸಂತಸಗೊಂಡ. ನಮ್ಮ ಸಂತಸದಲ್ಲಿ ಪ್ರಕೃತಿಯೇ ಪಾಲ್ಗೊಳ್ಳುತ್ತಿದೆ; ಅದು ಸ್ಪಂದಿಸುವ ಪರಿಯನ್ನು ನೋಡು ಎಂದ. ಹಾಗೆ, ಕವಿದ ಕಾವಳವೇ ಕಾಂಡಪಟವಾಗಿ (ಪರದೆ) ಈ ಇಬ್ಬರಿಗೆ ಮರೆಯನ್ನು ಕಲ್ಪಿಸಿತು.

 

ಹುಡುಗಿಯ ಮತ್ಸ್ಯಗಂಧ, ಯಮುನೆಯ ಮೀನುಗಳ ಪಾಲಾಗಿ, ನಂದನದ ಪಾರಿಜಾತ ಅರಳಿದ್ದನ್ನು ಸಾರುವಂತೆ ಹೊಚ್ಚಹೊಸ ನರುಗಂಪು ತೆಳುವಾಗಿ ಆಕೆಯ ಮೈಯ್ಯನ್ನು ತಬ್ಬಿ ಸುತ್ತಲೆಲ್ಲ ಹಬ್ಬಿತು. ಮತ್ಸ್ಯಗಂಧಿ, ಯೋಜನಗಂಧಿಯಾದಳು! ಇದು ಕನ್ನೆತನ ಕೆಡದ ಕೂಟ ಎಂದು ಪರಾಶರ ಆಕೆಯ ಕಿವಿಯಲ್ಲಿ ಪಿಸುನುಡಿದ. ಮೈಯ ಮುಗ್ಧತೆಗೆ – ಮನದ ಮುಗ್ಧತೆಗೆ ಪರಸ್ಪರ ಸಂಬಂಧವಿದೆ; ಒಂದು ಕೆಟ್ಟರೆ ಇನ್ನೊಂದೂ ಕೆಡುತ್ತದೆ; ಮನದ ಮುಗ್ಧತೆ ಕೆಡದಿದ್ದರೆ ಮೈಯೂ ಮುಗ್ಧವಾಗಿರುತ್ತದೆ ಎಂದು ಅಲೌಕಿಕವೆನ್ನಬಹುದಾದ ಗುಟ್ಟನ್ನು ತಿಳಿಸಿದ. ಬದಲಾದ ನಿನ್ನ ಮೈಯ ಗಂಧ, ನಿನ್ನ ಕುರಿತು ನಿನ್ನ ತಂದೆಯ ಮನದಲ್ಲಿ ಇದುವರೆಗಿನದಕ್ಕಿಂತ ಪೂರ್ತಿ ಬೇರೆಯೇ ಆದ ಕಲ್ಪನೆಗಳನ್ನು ಸೃಜಿಸಬಹುದು ಎಂದ.

 

ಹೀಗೆ ಯಮುನೆಯ ತೀರದ ಬಯಲಿನಲ್ಲಿ, ನಿಸರ್ಗದ ನಡುವೆ, ಪರಾಶರ, ಮತ್ಸ್ಯಗಂಧಿಯರನ್ನು ತಂದೆ–ತಾಯಂದಿರಾಗಿ ಪಡೆದು ‘ವ್ಯಾಸ’ ಜನಿಸಿದರು. ಹುಡುಗನ ಕಪ್ಪು ಮೈಬಣ್ಣದ ಮೇಲಿನಿಂದ ಅವನನ್ನು ‘ಕೃಷ್ಣ’ ಎಂದು ಕರೆದರು. ಅದೇ ವ್ಯಾಸರ ಮೂಲ ಹೆಸರು. ಕೃಷ್ಣ, ಹುಟ್ಟುವಾಗಲೇ ಹುಡುಗ. ತಂದೆಯೊಡನೆ ಅಧ್ಯಯನಕ್ಕೆ ನಡೆಯಬೇಕಾದ ವಯಸ್ಸು. ಎಲ್ಲವೂ ಅರ್ಥವಾಗುವ ಸಂವೇದನಾಶೀಲ. ತನ್ನನ್ನು ಪಡೆದೂ ಕನ್ಯೆಯಾಗಿರುವ, ಈ ಅರ್ಥದಲ್ಲಿ ಇನ್ನೂ ತಾಯ್ತನ ಉಂಟಾಗದಿರುವ ತನ್ನ ತಾಯನ್ನು ಕಂಡರೆ ವ್ಯಾಸಕೃಷ್ಣನಿಗೆ; ತಾನೇ ತಾಯಿಯಾದಂತೆ ಅಪಾರವಾದ ಮಮತೆಯುಕ್ಕುವುದು. ತಾನು ಹುಟ್ಟುವಾಗಲೇ ಹುಡುಗನಂತಿರುವುದಕ್ಕೂ ಅಂದರೆ, ಎದೆಹಾಲು ಉಣ್ಣುವ ವಯಸ್ಸನ್ನು ದಾಟಿರುವುದಕ್ಕೂ ತನ್ನ ತಾಯಿ ಕನ್ಯೆಯಾಗಿರುವುದಕ್ಕೂ ಸಂಬಂಧ ಹೊಳೆದು, ಜ್ಞಾನವೇ ತನಗೆ ಎದೆಹಾಲು ಇದ್ದಂತೆ ಎಂದು ತನ್ನಲ್ಲೇ ತಾನು ತೀರ್ಮಾನಕ್ಕೆ ಬರುವನು! ಆದರೂ ತಾಯ ಮೇಲಿನ ಮಮತೆ ಕೃಷ್ಣನನ್ನು ಆಳವಾಗಿ ಸೆಳೆಯುವುದು. ಆ ಮಮತೆಯ ಕುರುಹೆನ್ನುವಂತೆ ವ್ಯಾಸರ ಮೈಯ ಗಂಧ ಅದೇ ಮತ್ಸ್ಯಗಂಧ! ಪರಾಶರನೇನೋ ಹುಡುಗಿಯ ಕೋರಿಕೆಯಂತೆ ಆಕೆಯ ಮೈಯಗಂಧವನ್ನು ಪರಿವರ್ತಿಸಿರಬಹುದು. ಆದರೆ ಪರಾಶರ, ಇದೇ ಮತ್ಸ್ಯಗಂಧದ ಮೈಯವಳಿಗೇ ಮೊದಲು ಮನಸೋತುದಲ್ಲವೆ? ಹಾಗೆಂದೋ ಏನೋ – ವ್ಯಾಸರು ಮತ್ಸ್ಯಗಂಧಕ್ಕೆ ನಾಚಬೇಕಾದುದಿಲ್ಲವೆಂಬಂತೆ ಸಹಜವಾಗಿ ಇದ್ದರು.

 

ತಾಯ ಮೈಯ ಗಂಧ ತಾಯ ನೆನಪನ್ನು ಸದಾ ಉಂಟುಮಾಡುವುದು ತನಗೆ ಇಷ್ಟವೆಂಬಂತೆ ಇದ್ದರು. ತಾಯ ಬಳಿಯಲ್ಲೇ ಇರುವಂತೆ ತಾನು ಬದುಕುವುದು ಎನ್ನುವಂತಿದ್ದರು. ತನ್ನ ಅಪೂರ್ವ ಸೃಷ್ಟಿಶೀಲ ಮನೋಧರ್ಮಕ್ಕೂ ಈ ಪರಿಯ ಮೈಗಂಧಕ್ಕೂ ಒಂದು ಒಳ ಸಂಬಂಧವಿದೆ ಎನ್ನುವಂತೆ ಇದ್ದರು. ಎದೆಹಾಲು ಸಿಗದ ಅರಕೆಯನ್ನು ತಾಯ ಗಂಧ ತುಂಬಿಕೊಡುತ್ತದೆ ಎನ್ನುವಂತೆ ಇದ್ದರು. ತಂದೆಯೊಡನೆ ಯಮುನೆಯ ನಡುಗಡ್ಡೆಯೊಂದಕ್ಕೆ ನಡೆವ ಹೊತ್ತಿನಲ್ಲಿ ತಾಯಿಯೊಡನೆ, ನೀನು ನೆನೆದಾಗಲೆಲ್ಲ ನಿನ್ನ ಬಳಿ ಬರುವೆನೆಂದು ಮಾತನ್ನು ಒಪ್ಪಿಸಿ ನಡೆದರು. ವ್ಯಾಸ ತನ್ನ ತಾಯನ್ನು ನೆನೆಯುತ್ತಲೇ ಇದ್ದರು. ಈ ನಡೆ ಪರಾಶರನ ನಡೆಗಿಂತ ಭಿನ್ನವಾದ ನಡೆಯಾಗಿತ್ತು ಮತ್ತು ಇತಿಹಾಸಕಾರನಿಗೆ ಯೋಗ್ಯವಾದ ನಡೆಯಾಗಿತ್ತು.

 

ಪರಾಶರರಂಥ ಮುನಿ ಮತ್ಸ್ಯಗಂಧಿಯಲ್ಲಿ ವ್ಯಾಸರನ್ನು ಪಡೆದಾಗಲೇ ದ್ವಾಪರದ ದಿಕ್ಕು–ಯುಗದ ದಿಕ್ಕು ಸೂಚಿತವಾಗಿತ್ತು. ಅದು ಶಂತನು–ಮತ್ಸ್ಯಗಂಧಿ– ಭೀಷ್ಮರ ಸಂಬಂಧದಲ್ಲಿ ಇನ್ನಷ್ಟು ಸ್ಪಷ್ಟವಾಗಿ ದಿಟ್ಟವಾಗಿ ಮುನ್ನಡೆಯಿತು. ಮತ್ಸ್ಯಗಂಧಿ, ಯೋಜನಗಂಧಿಯಾಗಿ ಬದಲಾದರೂ ಅವಳ ದೋಣಿ ಕಾರ್ತಿಯ ಕಾಯಕ ಯಮುನೆಯ ಹರಿವಿನಂತೆ ನಡೆದೇ ಇತ್ತು. ಒಮ್ಮೆ ಏನಾಯಿತೆಂದರೆ, ದೊರೆ ಶಂತನು ಬೇಟೆಗೆಂದು ಅಲೆಯುತ್ತ ಯಮುನೆಯ ತೀರಕ್ಕೆ ಬಂದನು. ಅಲ್ಲಿ ನದಿಯ ಕಿರುತೆರೆಗಳನ್ನು ಮುಕುತ್ತ ಬಳಿಸಾರಿದ ಮಂದಶ್ವಸನದಲ್ಲಿ ಅಪೂರ್ವವಾದ ಗಂಧಾನುಭವವೊಂದು ಅವನ ಅರಿವಿಗೆ ಬಂತು. ಈ ಲೋಕದ್ದಲ್ಲ ಎನ್ನಿಸುವ ಗಂಧ! ದಿವ್ಯಗಂಧ! ಉತ್ತೇಜಕ ಗಂಧ! ಯಾವ ಅಪ್ಸರೆ ಇಲ್ಲಿ ಸುಳಿದಳು? ಗಂಧದ ಜಾಡು ಹಿಡಿದು ನೋಡಿದರೆ ಅಲ್ಲಿದ್ದಳು ದೋಣಿಯಲ್ಲಿ ಹುಟ್ಟು ಹಾಕುತ್ತಿರುವ ಹುಡುಗಿ. ಕಡು ಚೆಲುವೆ. ದೊರೆ ಚಕಿತನಾಗಿ ನೋಡಿದ.

 

ಪಂಪನ ಮಾತಿನಲ್ಲಿ ‘ಕಂಡೊಲ್ದು ನಲ್ಮೆಗೆ ದಿಬ್ಸಂಬಿಡಿವಂತೆವೋಲ್‌ ಪಿಡಿದು ನೀನ್‌ ಬಾ ಪೋಪಮೆಂದಂಗೆ ಮೆಲ್ಲನೆ ತತ್ಕನ್ಯಕೆ ನಾಣ್ಚಿ ಬೇಡುವಡೆ ನೀವೆಮ್ಮಯ್ಯನಂ ಬೇಡಿರೇ.’ ಶಂತನು ನೋಡಿದ. ನೋಡಿ ಮನಸೋತ. ಬಳಿ ಸಾರಿ ಅವಳ ಕೈ ಹಿಡಿದ; ‘ದಿಬ್ಬಂ ಪಿಡಿವಂತೆ’. ಅಂದರೆ ತನ್ನೊಳಗಿನ ಸತ್ಯವನ್ನು ಪ್ರಮಾಣೀಕರಿಸಲು ಮಾನುಷವಲ್ಲದ ದಿವ್ಯ ಪ್ರಮಾಣಗಳನ್ನು ಮುಟ್ಟುವಂತೆ – ಅಂಗೈಯಲ್ಲಿ ಕೆಂಡವನ್ನು ಹಿಡಿವಂತೆ – ಉದ್ವೇಗದಿಂದ ಕೈ ಹಿಡಿದು ಬಾ ಹೋಗೋಣ ಎಂದನಂತೆ. ಹುಡುಗಿ ನಾಚಿ ತನ್ನ ತಂದೆಯೊಡನೆ ಮಾತನಾಡಿರಿ ಎಂದಳು. ಅವಳಿಗೆ ಪರಾಶರ, ಶಂತನು ಇವರ ನಡುವಿನ ಅಂತರ ಅರಿವಿಗೆ, ಬಂದಿರಬೇಕು. ಪರಾಶರನಂತಲ್ಲದೆ ಶಂತನು ಅವಳ ಕೈಯನ್ನೇ ಹಿಡಿದಿದ್ದ. ತನ್ನ ಸೊತ್ತು ಎನ್ನುವಂತೆ. ಅವನು ದೊರೆಯಲ್ಲವೇ! ಅಲ್ಲದೆ ಉದ್ವಿಗ್ನನಾಗಿದ್ದ.

 

ಆದರೂ ಶಂತನು, ಹಸ್ತಿನಾವತಿಯ ಚಕ್ರವರ್ತಿ, ಮತ್ಸ್ಯಗಂಧಿಯ ತಂದೆ, ಬೆಸ್ತರ ಪಾಳೆಯಪಟ್ಟಿನ ನಾಯಕ, ದಾಶರಾಜನಲ್ಲಿಗೆ ಬಂದ. ದಾಶರಾಜನದು ಒಂದೇ ಮಾತು. ನೀವು ಹಸ್ತಿನಾವತಿಯ ದೊರೆಗಳು. ನನ್ನ ಮಗಳನ್ನು ಬಯಸುತ್ತಿದ್ದೀರಿ. ಇವಳ ಒಡಲಲ್ಲಿ ಹುಟ್ಟಿದ ಮಗನಿಗೆ ಹಸ್ತಿನೆಯ ಗದ್ದುಗೆಯ ಅಧಿಕಾರವೆನ್ನಿ. ವಚನಬದ್ಧರಾಗಿ. ಅಂದರೆ, ನಾನಿದ್ದಕ್ಕೆ ಸಮ್ಮತಿಸುವೆ. ಮತ್ಸ್ಯಗಂಧಿಗೆ ತಾನು ಯೋಜನ ಗಂಧಿಯಾಗಬೇಕೆಂದು ಆಸೆ ತೋರಿತಲ್ಲ–ಆ ಆಸೆಗೂ, ದಾಶನಿಗೆ ಈ ಮಗಳಲ್ಲಿ ಸಿಂಹಾಸನವೇರುವ ಅರ್ಹತೆಯ ಮಗ ಹುಟ್ಟಬೇಕು ಅಥವಾ ಆ ಮಗನನ್ನು ಅಂಥ ಅರ್ಹತೆಯುಳ್ಳವನನ್ನಾಗಿಸಬೇಕೆಂದು ಅನ್ನಿಸಿತಲ್ಲ– ಇವೆರಡಕ್ಕೂ ಹತ್ತಿರದ ಸಂಬಂಧವಿದೆ. ಮೈಯ ಗಂಧ ಬದಲಾವಣೆ ಎನ್ನುವುದು ಚರಿತ್ರೆಯ ದಿಕ್ಕನ್ನು ಬದಲಿಸಿದಂತೆ ಕೂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry