ಭರವಸೆಯ ಅಥ್ಲೀಟ್‌ ಮೇಘನಾ

7

ಭರವಸೆಯ ಅಥ್ಲೀಟ್‌ ಮೇಘನಾ

Published:
Updated:
ಭರವಸೆಯ ಅಥ್ಲೀಟ್‌ ಮೇಘನಾ

ಮೈಸೂರಿನಲ್ಲಿ ನೆಲೆಸಿರುವ ಮುಂಬೈನ ಮೇಘನಾ ದೇವಾಂಗ ಭರವಸೆಯ ಅಥ್ಲೀಟ್‌. ಈಗಾಗಲೇ ಜೂನಿಯರ್ ವಿಭಾಗದಲ್ಲಿ ತಮ್ಮ ಸಾಮರ್ಥ್ಯ ಮೆರೆದಿರುವ ಅವರು ದೊಡ್ಡಮಟ್ಟದ ಕೂಟಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.ಕಳೆದ ವಾರವಷ್ಟೇ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಮೇಘನಾ ಕೂಟ ದಾಖಲೆ ನಿರ್ಮಿಸಿದರು. 13.93 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದ ಅವರು 9 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದರು. 2007ರಲ್ಲಿ ಪಂಜಾಬ್‌ನ ಮನ್‌ಪ್ರೀತ್‌ ಕೌರ್‌ ಅವರು 13.83 ಮೀಟರ್‌ ದೂರ ಗುಂಡು ಎಸೆದು ದಾಖಲೆ ಬರೆದಿದ್ದರು.‘ರಿಯೊ ಒಲಿಂಪಿಕ್ಸ್‌ನಲ್ಲಿ ಮನ್‌ಪ್ರೀತ್‌ ಸ್ಪರ್ಧಿಸಿದ್ದರು. ಅಂಥ ಅಥ್ಲೀಟ್‌ನ ದಾಖಲೆ ಮುರಿದ ಹೆಮ್ಮೆ ನನಗಿದೆ. ನಾನು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಹಾಗೂ ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮೈಸೂರಿಗೆ ಬಂದಿದ್ದೇನೆ. ಅಂದುಕೊಂಡ ಗುರಿ ಮುಟ್ಟುವ ವಿಶ್ವಾಸ ನನ್ನಲ್ಲಿದೆ’ ಎಂದು ಹೇಳುತ್ತಾರೆ ಮೇಘನಾ.ಮೇಘನಾ ಅವರದ್ದು ಮೂಲತಃ ಮಂಗಳೂರು. ತಂದೆ ಬಾಲಕೃಷ್ಣ ದೇವಾಂಗ ಮುಂಬೈನಲ್ಲಿ ಉದ್ಯೋಗದಲ್ಲಿರುವ ಕಾರಣ ಕ್ರೀಡಾ ಜೀವನದ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆದಿದ್ದಾರೆ.ಆರಂಭದಲ್ಲಿ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಇವರು ನಂತರ ಶಾಟ್‌ಪಟ್‌ ಸ್ಪರ್ಧೆಯತ್ತ ಆಸಕ್ತಿ ಬೆಳೆಸಿಕೊಂಡರು. ಇವರ ಆರಂಭಿಕ ಕೋಚ್‌ ಕೇರಳದ ಥಾಮಸ್‌. ಸದ್ಯ ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿ ನೆಲೆಸಿರುವ ಇವರು ಕೋಚ್‌ ವಸಂತಕುಮಾರ್‌ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.‘ಮೈಸೂರಿನಲ್ಲೇ ನಾಲ್ಕೈದು ವರ್ಷ ಇದ್ದು ತರಬೇತಿ ಪಡೆಯಬೇಕು ಎಂದುಕೊಂಡಿದ್ದೇನೆ. ನನ್ನ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುತ್ತಾ ಹೋಗಬೇಕು. ಸೀನಿಯರ್‌ ಮಟ್ಟದಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಕೂಟಗಳಿಗೆ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಅವರು ನುಡಿಯುತ್ತಾರೆ.ರಾಷ್ಟ್ರಮಟ್ಟದಲ್ಲಿ ಐದು ದಾಖಲೆಗಳು ಮೇಘನಾ ಅವರ ಹೆಸರಿನಲ್ಲಿವೆ. ಶಾಲಾ ಕ್ರೀಡಾಕೂಟದಲ್ಲಿ ಎರಡು ದಾಖಲೆ ಹಾಗೂ ರಾಷ್ಟ್ರೀಯ ಜೂನಿಯರ್‌ ಮಟ್ಟದಲ್ಲಿ ಮೂರು ದಾಖಲೆ ನಿರ್ಮಿಸಿದ್ದಾರೆ. 16 ವರ್ಷದೊಳಗಿನವರ ವಿಭಾಗದಲ್ಲಿ 13.28 ಮೀಟರ್‌ ದೂರ ಗುಂಡು ಎಸೆದು ದಾಖಲೆ ಬರೆದಿದ್ದಾರೆ. 18 ವರ್ಷದೊಳಗಿನವರ ವಿಭಾಗದಲ್ಲಿ (3 ಕೆ.ಜಿ) 15.35 ಮೀಟರ್‌ ದೂರ ಎಸೆದ ದಾಖಲೆ ಹೊಂದಿದ್ದಾರೆ.ಐಎಎಎಫ್‌ ವಿಶ್ವ ಯೂತ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಹಾಗೂ ಏಷ್ಯನ್ ಯೂತ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. ಶಾಲಾ ಏಷ್ಯನ್ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. ರಾಂಚಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.ಮಹಾರಾಣಿ ಕಲಾ ಕಾಲೇಜಿನಲ್ಲಿ ಮೊದಲ ಬಿ.ಎ.ನಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಮಂಡ್ಯದಲ್ಲಿ ಈಚೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಅಲ್ಲೂ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 20 ವರ್ಷ ವಯಸ್ಸಿನ ಮೇಘನಾ ಮುಂದಿನ ವರ್ಷದಿಂದ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry