ರೈಲು ದುರಂತದ ಮನ ಕಲಕುವ ಚಿತ್ರಗಳು

7

ರೈಲು ದುರಂತದ ಮನ ಕಲಕುವ ಚಿತ್ರಗಳು

Published:
Updated:
ರೈಲು ದುರಂತದ ಮನ ಕಲಕುವ ಚಿತ್ರಗಳು

ಪುಖರಾಯಾಂ: ಕಾನ್ಪುರ ದೆಹಾತ್‌ ಜಿಲ್ಲೆಯ ಕೇಂದ್ರ ಸ್ಥಾನ ಅಕ್ಬರ್‌ಪುರದ ಜಿಲ್ಲಾ ಆಸ್ಪತ್ರೆಯ ಬೆಡ್‌ನಲ್ಲಿ ಕುಳಿತು ಎರಡೂವರೆ ವರ್ಷದ ಸೃಷ್ಟಿ ತನ್ನ ಚಿಕ್ಕಪ್ಪನ ಮೊಬೈಲ್‌ನಲ್ಲಿ ಆಡುವುದರಲ್ಲಿ ತಲ್ಲೀನಳಾಗಿದ್ದಾಳೆ. ರೈಲು ಅಪಘಾತದಲ್ಲಿ ಮೃತಪಟ್ಟಿರುವ ತನ್ನ ತಂದೆ ತಾಯಿ ಇನ್ನೆಂದೂ ಬರುವುದೇ ಇಲ್ಲ ಎಂಬುದು ಆಕೆಗೆ ತಿಳಿದೇ ಇಲ್ಲ.

ಸೃಷ್ಟಿ ಉಳಿದಿರುವುದು ಪವಾಡ. ಆಕೆ ಇದ್ದ ಎಸ್‌1 ಬೋಗಿ ದುರಂತದಲ್ಲಿ ಅತಿ ಹೆಚ್ಚು ಹಾನಿಗೊಂಡಿದೆ. ತನ್ನ ಹೆತ್ತವರು ಮತ್ತು ಚಿಕ್ಕಪ್ಪ ಮೋನು ವಿಶ್ವರ್ಮ ಜತೆಗೆ ಆಕೆ ಪ್ರಯಾಣಿಸುತ್ತಿದ್ದಳು. ಮೋನು ಕಾಲು ಮುರಿದಿದೆ. ಎದೆಗೆ ಗಾಯವಾಗಿದೆ. ‘ಈಗಷ್ಟೇ ಮಗು ಅಳು ನಿಲ್ಲಿಸಿದೆ. ಕಿರುಚಾಡಬೇಡಿ’ ಎಂದು ಆಸ್ಪತ್ರೆಗೆ ಬಂದು ಹೋಗಿ ಗದ್ದಲ ಮಾಡುತ್ತಿರುವ ಜನರಲ್ಲಿ ಮೋನು ಕೇಳಿಕೊಳ್ಳುತ್ತಿದ್ದಾರೆ.

‘ಅವರ (ಅಣ್ಣ ಮತ್ತು ಆತನ ಹೆಂಡತಿ) ದೇಹಗಳು ಇನ್ನೂ ಬೋಗಿಯ ಒಳಗೇ ಇವೆ. ಸೃಷ್ಟಿ ಹೇಗೆ ಬದುಕುಳಿದಳು ಎಂಬುದೇ ನನಗೆ ಗೊತ್ತಿಲ್ಲ. ಬಹುಶಃ ಆಕೆ ನನ್ನೊಂದಿಗೆ ಮಲಗಿದ್ದರಿಂದ ಬದುಕುಳಿದಿರಬೇಕು’ ಎಂದು ನೋವಿನಿಂದ ನರಳುತ್ತಾ ಮೋನು ಹೇಳುತ್ತಾರೆ.

ಗಾಯಗೊಂಡವರ ಅಳು, ನರಳಾಟ ಜಿಲ್ಲಾ ಆಸ್ಪತ್ರೆಯ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿದೆ. ಗಾಯಗೊಂಡವರಲ್ಲಿ ಹೆಚ್ಚಿನವರನ್ನು ಇಲ್ಲಿಯೇ ದಾಖಲಿಸಲಾಗಿದೆ. ‘ನಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ ಇಲ್ಲಿ ಇರುವ ಸೌಲಭ್ಯಗಳು ಬಹಳ ಮಿತ’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಲ್ಲಿ ಒಬ್ಬರಾದ ಡಾ. ಅಮರ್‌ ಚಂದ್ರ ಹೇಳಿದರು.

ಗಂಭೀರವಾಗಿ ಗಾಯಗೊಂಡವರನ್ನು ಕಾನ್ಪುರ ನಗರದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಅದು ಇಲ್ಲಿಂದ 70 ಕಿಲೋಮೀಟರ್‌ ದೂರದಲ್ಲಿದೆ.

ಗದ್ದಲ, ಗೊಂದಲಗಳಿಂದಾಗಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ತಮ್ಮ ಕುಟುಂಬ ಸದಸ್ಯರು ಅಥವಾ ಸಂಬಂಧಿಕರನ್ನು ಹುಡುಕಿಕೊಂಡು ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಆಸ್ಪತ್ರೆಗೆ ಬರುತ್ತಿದ್ದಾರೆ.

ಎಪ್ಪತ್ತು ದಾಟಿರುವ ತಮ್ಮ ತಾಯಿ ಜೀವಂತ ಇದ್ದಾರೆಯೇ ಎಂಬುದು ವಾರಾಣಸಿ ನಿವಾಸಿ ಸುಧಾ ದ್ವಿವೇದಿ ಅವರಿಗೆ ಗೊತ್ತಿಲ್ಲ. ‘ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಅವರು ಸಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ. ಅವರೂ ಭಾರಿ ಹಾನಿಗೆ ಒಳಗಾದ ಎಸ್‌1 ಬೋಗಿಯಲ್ಲೇ ಇದ್ದರು.

ಗಂಭೀರವಾಗಿ ಗಾಯಗೊಂಡಿರುವ ಪ್ಯಾರೇಲಾಲ್‌ ಅವರ ಮಗಳು ಮೃತಪಟ್ಟಿದ್ದಾರೆ. ಭೋಪಾಲ್‌ನಲ್ಲಿ ರೈಲು ಹತ್ತಿದ ಆರ್‌.ಎನ್‌. ಯಾದವ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಹೆಂಡತಿ ಪ್ರಿಯಾಂಕಾ ಕಾಣಿಸುತ್ತಿಲ್ಲ.

ಧವಳ್‌ ಚತುರ್ವೇದಿ ಅವರು ತಮ್ಮೊಂದಿಗೆ ಬಂದಿದ್ದ ಇಬ್ಬರು ಸಂಬಂಧಿಕರಿಗಾಗಿ ಹುಡುಕಾಡುತ್ತಿದ್ದಾರೆ.

ಮತಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ನಾಪತ್ತೆಯಾಗಿರುವವರ ಬಗ್ಗೆ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ. ‘ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೆಲವು ಜನ ಇನ್ನೂ ಬೋಗಿಗಳೊಳಗೆ ಸಿಲುಕಿದ್ದಾರೆ. ಹಾಗಾಗಿ ಕಾರ್ಯಾಚರಣೆ ಪೂರ್ಣಗೊಂಡ ಬಳಿಕವಷ್ಟೇ ಸರಿಯಾದ ಚಿತ್ರಣ ದೊರೆಯಲಿದೆ’ ಎಂದು ಈ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ಹಳಿಯ ವಿಡಿಯೊ ಚಿತ್ರೀಕರಣ

ರೈಲು ಹಳಿ ತಪ್ಪಲು ಕಾರಣವೇನು ಎಂಬುದರ ಪತ್ತೆಗೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಕಾನ್ಪುರ–ಝಾನ್ಸಿ ವಿಭಾಗದ ರೈಲು ಹಳಿಯ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ.

ಸುರಕ್ಷತಾ ಆಯುಕ್ತರಿಂದ ತನಿಖೆ

ರೈಲು ಸುರಕ್ಷತಾ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದು ಉತ್ತರ–ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರುಣ್‌ ಸಕ್ಸೇನಾ ತಿಳಿಸಿದ್ದಾರೆ. ಹಳಿಯನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವಲಾಗಿದೆಯೇ ಎಂಬ ಪ್ರಶ್ನೆಗೆ, ಸುರಕ್ಷತಾ ಆಯುಕ್ತರು ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಹಳಿ ದುರಸ್ತಿಗೆ 300 ತಂತ್ರಜ್ಞರು

ಕಾನ್ಪುರ–ಝಾನ್ಸಿ ಹಳಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲು 36 ತಾಸು ಬೇಕು. 300ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಎಲ್‌ಎಚ್‌ಬಿ ಬೋಗಿಗಳ ವೈಶಿಷ್ಟ್ಯ

ಜರ್ಮನಿಯ ಎಲ್‌ಎಚ್‌ಬಿ ಕಂಪೆನಿಯಿಂದ ತರಿಸಲಾದ ಆಧುನಿಕ ಬೋಗಿಗಳು ಇಂದೋರ್–ಪಟ್ನಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇದ್ದಿದ್ದರೆ ಇಷ್ಟು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

* ಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಚಲಿಸುವಂತೆ ಎಲ್‌ಎಚ್‌ಬಿ ಬೋಗಿಗಳನ್ನು ವಿನ್ಯಾಸ ಮಾಡಲಾಗಿದೆ.

* ಮಾಮೂಲಿ ಬೋಗಿಗಳು ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸಬಲ್ಲವು.

* ಎಲ್‌ಎಚ್‌ಬಿ ಬೋಗಿಗಳು ಮಾಮೂಲಿ ಬೋಗಿಗಳಿಗಿಂತ ಹೆಚ್ಚು ಸುರಕ್ಷಿತ.

* ರೈಲು ಹಳಿ ತಪ್ಪಿದ ಸಂದರ್ಭದಲ್ಲಿ ಎಲ್‌ಎಚ್‌ಬಿ ಬೋಗಿಗಳು ಪಲ್ಟಿಯಾಗುವ ಸಾಧ್ಯತೆ ಕಡಿಮೆ.

* ಈ ಬೋಗಿಗಳನ್ನು ಸ್ಟೈನ್‌ಲೆಸ್‌ ಸ್ಟೀಲ್‌ನಿಂದ ಮಾಡಲಾಗಿರುತ್ತದೆ. ಹಾಗಾಗಿ ಅಪಘಾತದ ಸಂದರ್ಭದಲ್ಲಿ, ಅಪಾಯದ ಪ್ರಮಾಣ ಕಡಿಮೆ.

* ಎಲ್‌ಎಚ್‌ಬಿ ಬೋಗಿಗಳಲ್ಲಿ ಡಿಸ್ಕ್‌ ಬ್ರೇಕ್‌ ಇರುತ್ತದೆ. ಮಾಮೂಲಿ ಬೋಗಿಗಳಲ್ಲಿ ಇದು ಇಲ್ಲ.

* ಅಪಘಾತದ ಸಂದರ್ಭದಲ್ಲಿ ಎಲ್‌ಎಚ್‌ಬಿ ಬೋಗಿಗಳು ಒಂದರ ಮೇಲೆ ಇನ್ನೊಂದು ಬೀಳುವ ಸಾಧ್ಯತೆ ಕಡಿಮೆ.

* ಇವು ವೇಗವಾಗಿ ಚಲಿಸುತ್ತಿದ್ದಾಗಲೂ ತಿರುವುಗಳನ್ನು ಸಲೀಸಾಗಿ ದಾಟಬಲ್ಲವು.

ಭಾರತದಲ್ಲಿ ನಡೆದ ಕೆಲವು ಭೀಕರ ರೈಲು ದುರಂತಗಳು

* ಡಿಸೆಂಬರ್14, 2004: ಜಮ್ಮು ತಾವಿ ಎಕ್ಸ್‌ಪ್ರೆಸ್‌–ಅಮೃತಸರ ಪ್ಯಾಸೆಂಜರ್ ನಡುವೆ ಪಂಜಾಬ್‌ನ ಮನ್ಸಾರ್ ಬಳಿ ಸಂಭವಿಸಿದ ಡಿಕ್ಕಿಯಲ್ಲಿ 36 ಮಂದಿ ಸಾವು

* ಅಕ್ಟೋಬರ್ 25, 2005: ಆಂದ್ರಪ್ರದೇಶದ ವಲಿಗೊಂಡ ಬಳಿ ಡೆಲ್ಟಾ ರೈಲು ಹಳಿ ತಪ್ಪಿ 100 ಮಂದಿ ಸಾವು

* ನವೆಂಬರ್ 26, 2005: ಮಹಾರಾಷ್ಟ್ರದ   ರತ್ನಗಿರಿ ಬಳಿ ರೈಲಿನ ಮೇಲೆ ಬಂಡೆ ಕುಸಿದು ಕನಿಷ್ಠ 100 ಸಾವು

* ಅಕ್ಟೋಬರ್ 21, 2009: ಉತ್ತರ ಪ್ರದೇಶದ ಮಥುರಾದಲ್ಲಿ ಗೋವಾ ಎಕ್ಸ್‌ಪ್ರೆಸ್‌ ಮತ್ತು ಮೇವಾಡ್‌ ಎಕ್ಸ್‌ಪ್ರೆಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ 21 ಮಂದಿ ಸಾವು

*  ಮೇ 28, 2010: ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಗೂಡ್ಸ್‌ ರೈಲಿಗೆ ಅಪ್ಪಳಿಸಿದ ಪರಿಣಾಮ 170 ಮಂದಿ ಮರಣ ಹೊಂದಿದ್ದರು.

* ಜುಲೈ 19, 2010: ಪಶ್ಚಿಮ ಬಂಗಾಳದ ಸೈಂತಿಯಾದಲ್ಲಿ ಉತ್ತರ ಬಂಗಾ ಎಕ್ಸ್‌ಪ್ರೆಸ್‌ ರೈಲು ಮತ್ತು ವನಾಚಾಲ್ ಎಕ್ಸ್‌ಪ್ರೆಸ್‌ ನಡುವೆ ನಡೆದ ಡಿಕ್ಕಿಯಲ್ಲಿ 80 ಮಂದಿ ಸಾವು.

*  ಜುಲೈ 7. 2011: ಮಥುರಾ–ಛಾಪ್ರಾ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಕಾನ್ಶೀರಾಂ ನಗರದಲ್ಲಿ ಹಳಿ ದಾಟುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು 38 ಜನರ ಸಾವು.

*  ಜುಲೈ 10, 2011: ಉತ್ತರ ಪ್ರದೇಶದ ಫತೇಪುರದಲ್ಲಿ ಕಲ್ಕಾ ಮೇಲ್‌ ರೈಲು ಹಳಿತಪ್ಪಿ 70 ಸಾವು.

* ಮೇ 22, 2012: ಹುಬ್ಬಳ್ಳಿ – ಬೆಂಗಳೂರು – ಹಂಪಿ ಎಕ್ಸ್‌ಪ್ರೆಸ್‌ ರೈಲು ಆಂಧ್ರಪ್ರದೇಶದ ಪೆನುಕೊಂಡದಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿಯಾಗಿ 14 ಸಾವು.

* ಆಗಸ್ಟ್‌ 19, 2013: ಸಹರ್ಸಾ – ಪಟ್ನಾ ರಾಜ್ಯರಾಣಿ ಎಸ್‌ಎಫ್‌ ಎಕ್ಸ್‌ಪ್ರೆಸ್‌ ರೈಲು ಬಿಹಾರದಲ್ಲಿ ಅಪಘಾತಕ್ಕೆ ಈಡಾಗಿ 35 ಸಾವು.

* ಮೇ 4, 2014: ದಿವ ಜಂಕ್ಷನ್‌ – ಸಾವಂತವಾಡಿ ಪ್ಯಾಸೆಂಜರ್‌ ರೈಲು ಮಹಾರಾಷ್ಟ್ರದಲ್ಲಿ ಅಪಘಾತಕ್ಕೆ ಈಡಾಗಿ 20 ಜನರ ಮರಣ.

* ಮೇ 26, 2014: ಗೋರಖಧಾಮ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಖಲೀಲಾಬಾದ್‌ ರೈಲು ನಿಲ್ದಾಣದಲ್ಲಿ ನಿಂತಿದ್ದ ಇನ್ನೊಂದು ರೈಲಿಗೆ ಡಕ್ಕಿ ಹೊಡೆದು 25 ಜನರ ಸಾವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry