ಶುಕ್ರವಾರ, ಮೇ 27, 2022
26 °C

ಅಪ್ರಚೋದಿತ ದಾಳಿ ಖಂಡನೀಯ ಯೋಧನ ಶಿರಚ್ಛೇದ ಅಮಾನುಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ರಚೋದಿತ ದಾಳಿ ಖಂಡನೀಯ ಯೋಧನ ಶಿರಚ್ಛೇದ ಅಮಾನುಷ

ಕಾಶ್ಮೀರದ ಉರಿ ಬಳಿ ನಮ್ಮ ಸೇನಾ ನೆಲೆ ಮೇಲೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ದಾಳಿಯ ನಂತರ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭುಗಿಲೆದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿಲ್ಲ.  ಆ ದಾಳಿಗೆ ಉತ್ತರವಾಗಿ ನಮ್ಮ ಸೇನೆ  ‘ನಿರ್ದಿಷ್ಟ ದಾಳಿ’ ನಡೆಸಿ ಪಾಕಿಸ್ತಾನದ ನಾಲ್ಕು ಸೇನಾ ನೆಲೆಗಳನ್ನು ನಾಶಪಡಿಸಿತ್ತು.  ಅಲ್ಲದೆ ಕೆಲ ಉಗ್ರರನ್ನೂ ಹತ್ಯೆ ಮಾಡಿತ್ತು. ಇಷ್ಟಾದ ನಂತರವೂ ಪಾಕಿಸ್ತಾನ ಬುದ್ಧಿ ಕಲಿತುಕೊಂಡಂತೆ ಕಾಣುತ್ತಿಲ್ಲ. ಪದೇಪದೇ ಕಾಲು ಕೆದರಿ ದಾಳಿ ಮಾಡುತ್ತಿದೆ, ವಿನಾಕಾರಣ ಕೆಣಕುತ್ತಿದೆ.   ಮಂಗಳವಾರ ಬೆಳಗಿನ ಜಾವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಾಚಿಲ್‌ ವಲಯದ ಬಳಿ ಗಡಿ ನಿಯಂತ್ರಣ ರೇಖೆ ದಾಟಿ ಒಳಗೆ ಬಂದ ಪಾಕ್‌ ಸೇನೆಯ ಗಡಿ ಕ್ರಿಯಾ ತಂಡ (ಬಿಎಟಿ) ನಮ್ಮ ಸೇನೆಯ ಗಸ್ತು ತುಕಡಿಯ ಮೂವರು ಯೋಧರನ್ನು ಕೊಂದು ಹಾಕಿದೆ. ಅಷ್ಟೇ ಅಲ್ಲದೆ, ಇವರ ಪೈಕಿ ಒಬ್ಬ ಯೋಧನ ತಲೆ ಕತ್ತರಿಸಿದೆ.ಇಷ್ಟೊಂದು ಪೈಶಾಚಿಕವಾಗಿ ಅದು ವರ್ತಿಸುತ್ತಿರುವುದು ಮೂರು ವಾರಗಳ ಅವಧಿಯಲ್ಲಿ ಇದು ಎರಡನೇ ಸಲ.  ಕಳೆದ ತಿಂಗಳು 28ರಂದು ಕೂಡ ಪಾಕ್‌ ಯೋಧರು ನಮ್ಮ ಒಬ್ಬ ಯೋಧನ ಶಿರಚ್ಛೇದ ಮಾಡಿದ್ದರು. ಅದಕ್ಕಿಂತಲೂ ಹಿಂದೆ ಅಂದರೆ 1999ರ ಕಾರ್ಗಿಲ್‌ ಯುದ್ಧದ ವೇಳೆ ಜಾಟ್‌ ರೆಜಿಮೆಂಟ್‌ನ ಕ್ಯಾಪ್ಟನ್‌ ಮತ್ತು ಐವರು ಯೋಧರನ್ನು ಪಾಕ್‌ ಸೈನಿಕರು ಕ್ರೂರವಾಗಿ ಹಿಂಸಿಸಿ ಕೊಂದಿದ್ದರು. ಅಂಗಾಂಗಗಳನ್ನು ಕತ್ತರಿಸಿ ಹಾಕಿದ್ದರು. ಇಂತಹ ನಡವಳಿಕೆ ಅತ್ಯಂತ ಖಂಡನೀಯ. ತೀರಾ ಅಮಾನವೀಯ. ಪಾಕ್‌ ಗಡಿ ಕ್ರಿಯಾ ತಂಡದಲ್ಲಿ ಅಲ್ಲಿನ ಸೈನಿಕರ ಜತೆಗೆ ಲಷ್ಕರ್‌, ಹಿಜಬುಲ್‌ ಮುಜಾಹಿದೀನ್‌, ಜೈಷ್‌ ಎ ಮೊಹಮ್ಮದ್‌  ಮುಂತಾದ ಕುಖ್ಯಾತ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದ ಉಗ್ರಗಾಮಿಗಳೂ ಇದ್ದಾರೆ. ಭಾರತದ ಗಡಿಯೊಳಗೆ ನುಗ್ಗಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ತರಬೇತಿ ಪಡೆದ ಈ ಉಗ್ರರಿಗೆ ಮಾನವೀಯತೆ ಇಲ್ಲವೇ ಇಲ್ಲ.ಇನ್ನು ಪಾಕ್‌ ಸೇನೆಗಂತೂ ಅಂತರರಾಷ್ಟ್ರೀಯ ಒಪ್ಪಂದಗಳ ಬಗ್ಗೆ ಕಿಂಚಿತ್‌ ಗೌರವವೂ ಇಲ್ಲ. ಏಕೆಂದರೆ ಎದುರಾಳಿ ದೇಶದ ಗಾಯಾಳು ಸೈನಿಕರನ್ನು ಮತ್ತು ಜೀವಂತವಾಗಿ ಸೆರೆ ಸಿಕ್ಕ ಸೈನಿಕರನ್ನು ನಡೆಸಿಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ, ಗುಂಡಿಗೆ ಬಲಿಯಾಗುವ ಎದುರಾಳಿ ಸೈನಿಕರ ಶವಗಳನ್ನು ಗೌರವಯುತವಾಗಿ ಮರಳಿಸುವ  ಬಗ್ಗೆ  ಜಿನೀವಾ ಒಪ್ಪಂದದಲ್ಲಿ ವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ಎಲ್ಲ ದೇಶಗಳು ಅದನ್ನು ಒಪ್ಪಿಕೊಂಡಿವೆ. ಅದರ ಪ್ರಕಾರ ದೇಹವನ್ನು ತುಂಡು ತುಂಡು ಮಾಡುವುದು, ತಲೆ ಕತ್ತರಿಸುವುದು ಮುಂತಾದವು ಅನಾಗರಿಕ ನಡವಳಿಕೆಗಳು. ಯಾವುದೇ ದೇಶ ಅಂತಹ ಹೀನ ಕೃತ್ಯಕ್ಕೆ ಇಳಿಯುವಂತಿಲ್ಲ.ಆದರೂ ಪಾಕ್‌ ಸೇನೆಯಿಂದ ಭಾರತೀಯ ಸೈನಿಕರ ಶಿರಚ್ಛೇದ ಆಗಾಗ ನಡೆಯುತ್ತಲೇ ಇದೆ. ಹಿಂದೆ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ 90 ಸಾವಿರ ಪಾಕ್‌ ಸೈನಿಕರು ನಮ್ಮ ಸೇನೆಗೆ ಶರಣಾಗಿದ್ದರು. ಅವರೆಲ್ಲರನ್ನೂ ಗೌರವಯುತವಾಗಿಯೇ ಆ ದೇಶಕ್ಕೆ ಹಸ್ತಾಂತರಿಸಲಾಗಿತ್ತು. ಅದು ಪಾಕಿಸ್ತಾನಕ್ಕೆ ಮರೆತೇ ಹೋಗಿದೆ.  ಈಗ ಅದು ನಡೆಸುತ್ತಿರುವ ಅಮಾನುಷ ಕೃತ್ಯಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಶ್ವದ ಗಮನಕ್ಕೆ ತರಬೇಕು.ಮಂಗಳವಾರದ ಹೇಯ ಕೃತ್ಯಕ್ಕೆ  ಪ್ರತಿಯಾಗಿ ನಮ್ಮ ಸೇನೆ ಕೂಡ ಮದ್ದು– ಗುಂಡುಗಳ ಮೂಲಕ ಉತ್ತರ ನೀಡುತ್ತಿದೆ. ನಮ್ಮ ಸಹನೆಗೂ ಮಿತಿ ಇದೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ಪಠಾಣಕೋಟ್‌ ವಾಯುನೆಲೆ ಮೇಲೆ ಪಾಕ್‌ ಬೆಂಬಲಿತ ಉಗ್ರರು ದಾಳಿ ನಡೆಸಿದಾಗ ಭಾರತ ತುಂಬ ಸಂಯಮದಿಂದಲೇ ವರ್ತಿಸಿತ್ತು. ಆದರೆ ಉರಿ ಸೇನೆ ನೆಲೆ ಮೇಲೆ ಅಂತಹುದೇ ಮಾದರಿಯ ದಾಳಿ ನಡೆದಾಗ ಸಂಯಮದ ಕಟ್ಟೆ ಒಡೆದಿತ್ತು. ಅದಕ್ಕೆ ನೇರವಾಗಿ ಪಾಕ್‌ ಸೇನೆಯೇ ಹೊಣೆ. ‘ನಿರ್ದಿಷ್ಟ ದಾಳಿ’ಯ ನಂತರವಾದರೂ ಅದು ಕುಚೇಷ್ಟೆ ನಿಲ್ಲಿಸುತ್ತದೆ ಎಂಬುದು ಹುಸಿಯಾಗಿದೆ. ಗಡಿಯಲ್ಲಿ ಅಶಾಂತಿ ಹುಟ್ಟಿಸುವ ಕೆಲಸವನ್ನು ಅದು ಇನ್ನಾದರೂ ಬಿಟ್ಟು ಮಾತುಕತೆಗೆ ಮುಂದಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.