ಕೇಂದ್ರದ ವಿರುದ್ಧ ಮಮತಾ ಶಕ್ತಿ ಪ್ರದರ್ಶನ

7

ಕೇಂದ್ರದ ವಿರುದ್ಧ ಮಮತಾ ಶಕ್ತಿ ಪ್ರದರ್ಶನ

Published:
Updated:
ಕೇಂದ್ರದ ವಿರುದ್ಧ ಮಮತಾ ಶಕ್ತಿ ಪ್ರದರ್ಶನ

ನವದೆಹಲಿ : ಗರಿಷ್ಠ ಮುಖಬೆಲೆಯ ನೋಟು ರದ್ದತಿ ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಶಕ್ತಿ ಪ್ರದರ್ಶನ ನಡೆಸಿದರು. ನಾಲ್ಕು ಪಕ್ಷಗಳು ಅವರ ಬೆಂಬಲಕ್ಕೆ ನಿಂತಿದ್ದವು.

‘ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿಲ್ಲ. ಹಾಗಾಗಿ, ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದು ಮಮತಾ ಹೇಳಿದರು.

ಎಸ್‌ಪಿ, ಜೆಡಿ(ಯು), ಎನ್‌ಸಿಪಿ ಮತ್ತು ಎಎಪಿ ಪಕ್ಷಗಳ ಮುಖಂಡರ ಜೊತೆ ಜಂತರ್ ಮಂತರ್‌ನಲ್ಲಿ ಮಾತನಾಡಿದ ಮಮತಾ, ‘ಬ್ಯಾಂಕ್‌ನಿಂದ ನಗದು ಪಡೆಯಲು ಮಿತಿ ಹೇರುವ ಮೂಲಕ ಬಿಜೆಪಿ ಸರ್ಕಾರವು ಜನರ ವಿಶ್ವಾಸ ಕಳೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೋದಿಯವರೇ, ದೇಶ ನಿಮ್ಮ ಕೈಯಲ್ಲಿ ಸುರಕ್ಷಿತವಾಗಿಲ್ಲ. ನೀವು ನಿಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದೀರಿ’ ಎಂದು ಮಮತಾ ವಾಗ್ದಾಳಿ ನಡೆಸಿದರು.

ನೋಟು ರದ್ದತಿ ತೀರ್ಮಾನವು ಜನರಿಗೆ ಸಮಸ್ಯೆ ತಂದೊಡ್ಡಿದೆ. ಈ ತೀರ್ಮಾನವು ಎಲ್ಲ ವರ್ಗಗಳ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡಿದೆ, ದೇಶದ ಆರ್ಥಿಕ ಬೆಳವಣಿಗೆಗೆ ತಡೆಯಾಗಿದೆ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಸರ್ಕಾರವು ಸಾಮಾನ್ಯ ಪ್ರಜೆಗಳ ಲೂಟಿಯಲ್ಲಿ ತೊಡಗಿದೆ. ಆದರೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರನ್ನು ಮುಟ್ಟಲೂ ಹೋಗುತ್ತಿಲ್ಲ. ಇದು ಆಶ್ಚರ್ಯದ ಸಂಗತಿ ಎಂದರು.

‘ನಾನು ಪ್ರಧಾನಿ ಸ್ಥಾನದಲ್ಲಿ ಇದ್ದಿದ್ದರೆ ಜನರ ಕ್ಷಮೆ ಯಾಚಿಸುತ್ತಿದ್ದೆ. ಮೋದಿ ಅವರೇ, ನಿಮಗೆ ಇಷ್ಟೊಂದು ಪ್ರತಿಷ್ಠೆ ಏಕೆ? ದೇಶದ ಪ್ರತಿಯೊಬ್ಬನಿಗೂ ಕಾಳ ಧನಿಕ ಎಂಬ ಹಣೆಪಟ್ಟಿ ಅಂಟಿಸಿ ನೀವು ನಿಮ್ಮನ್ನು ಸಂತನಂತೆ ಬಿಂಬಿಸಿಕೊಳ್ಳುತ್ತಿದ್ದೀರಿ’ ಎಂದು ಮೋದಿ ಅವರನ್ನು ಟೀಕಿಸಿದರು.

‘ವಿವರಣೆ ನೀಡಿ’: ನೋಟು ರದ್ದತಿ ತೀರ್ಮಾನದ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ ಜೆಡಿ(ಯು) ನಾಯಕ ಶರದ್ ಯಾದವ್, ಈ ತೀರ್ಮಾನದಿಂದ ದೇಶಕ್ಕೆ ಆಗುವ ಲಾಭ ಏನು ಎಂಬುದನ್ನು ವಿವರಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸಿದರು.

‘ಯಾವ ಕಾಯ್ದೆಯ ಅಡಿ ಈ ತೀರ್ಮಾನ ಕೈಗೊಳ್ಳಲಾಯಿತು? ಜನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್‌ನಿಂದ ಪಡೆಯಲು ನೀವು ನಿರ್ಬಂಧ ವಿಧಿಸಿರುವುದು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ. ನೋಟು ರದ್ದತಿಯಿಂದ ಸಣ್ಣ ಉದ್ಯಮಿಗಳ ವಹಿವಾಟು ನಾಶವಾಗಿದೆ. ಈ ಕ್ರಮದಿಂದ ಕಪ್ಪುಹಣ ಹೇಗೆ ನಾಶವಾಗುತ್ತದೆ ಎಂಬುದನ್ನು ಸಂಸತ್ತಿಗೆ ಬಂದು ವಿವರಿಸಿ’ ಎಂದು ಶರದ್ ಯಾದವ್ ಆಗ್ರಹಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರದ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದರೂ, ಅವರದೇ ಪಕ್ಷದ ನಾಯಕ ಶರದ್ ಯಾದವ್ ಈ ಪ್ರತಿಭಟನೆಯುಲ್ಲಿ ಭಾಗಿಯಾಗಿದ್ದರು.

ಪ್ರತಿಭಟನಾ ಸ್ಥಳದಲ್ಲಿ ಮೋದಿ ಅವರ ಪರವಾಗಿ ಘೋಷಣೆ ಕೂಗುತ್ತಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಮತಾ, ‘ನಮ್ಮ ಕಾರ್ಯಕ್ರಮ ಹಾಳು ಮಾಡಲು ಇವರನ್ನು ಕಳುಹಿಸಲಾಗಿದೆ’ ಎಂದರು.

ಕಪ್ಪು ಹಣದ ವಿರುದ್ಧ ಸಮರ ಮುಂದುವರಿಯಲಿದೆ ಎಂದು ಮೋದಿ ಅವರು ಹೇಳಿರುವುದನ್ನು ಉಲ್ಲೇಖಿಸಿದ ಮಮತಾ, ‘ಜನರ ಚಿನ್ನ, ಜಮೀನಿನ ಮೇಲೆ ಕೂಡ ಸರ್ಕಾರ ಕಣ್ಣು ಹಾಕಬಹುದು’ ಎಂಬ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry