ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ಮರುಭೂಮಿ ‘ನುಬ್ರಾ ಕಣಿವೆ’

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೈ ಕೊರೆಯುವ ಮೈನಸ್ ಹತ್ತು ಡಿಗ್ರಿಯ ಚಳಿ. ಕತ್ತೆತ್ತಿ ನೋಡಿದರೆ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಬಿಳಿಬಿಳಿ ಪರ್ವತ ಶ್ರೇಣಿಗಳು. ಮಂಜು ಕರಗಿ ಝುಳು ಹರಿಯುತ್ತಿರುವ ಸಣ್ಣ ತೊರೆಗಳು...  ಕಾಲ ಕೆಳಗೆ ಮಾತ್ರ ಮರಳು. ಎತ್ತ ನೋಡಿದರೂ, ಮರಳ ದಿಣ್ಣೆಗಳು, ಓಡಾಡುತ್ತಿರುವ ಒಂಟೆಗಳು... ಜೋರು ಬೀಸುವ ಗಾಳಿಗೆ ಮರಳೂ ಮೇಲೆದ್ದು ಮುಸುಕುವ ಉಸುಕ ಬಿರುಗಾಳಿ!

ಎತ್ತಣ ಹಿಮಪರ್ವತ, ಎತ್ತಣ ಮರುಳ ದಿಣ್ಣೆ ಎಂದು ಯೋಚಿಸುತ್ತಿದ್ದೀರಾ? ಇಂತಹದೊಂದು ಸೋಜಿಗದ ಜಾಗ ನಮ್ಮ ಭಾರತದಲ್ಲಿಯೇ ಇದೆ ಎಂದರೆ ಅಚ್ಚರಿಯಾದೀತು. ಸ್ವರ್ಗಸದೃಶವಾದ ಈ ತಾಣ, ನುಬ್ರಾ ಕಣಿವೆ. ಮೈನವಿರೇಳಿಸುವ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಒಡಲಲ್ಲಿ ತುಂಬಿಕೊಂಡಿರುವ  ಲಡಾಖ್‌ ಪ್ರಾಂತ್ಯದಲ್ಲಿದೆ ಈ ಕಣಿವೆ.

ಜಮ್ಮು–ಕಾಶ್ಮೀರವನ್ನು ಹಾದುಹೋಗುವ ಹಿಮಾಲಯ ಪರ್ವತ ಶ್ರೇಣಿಯು, ಅಲ್ಲಿನ ಪ್ರಕೃತಿಸಿರಿಗೆ ವರದಾನವನ್ನೇ ನೀಡಿದೆ. ನಿಸ್ಸಂಶಯವಾಗಿಯೂ ನಮ್ಮ ದೇಶದ ಭೇಟಿ ನೀಡಲೇಬೇಕಾದ ಪ್ರವಾಸೀತಾಣಗಳಲ್ಲಿ ಕಾಶ್ಮೀರ ಕಣಿವೆಯೂ ಒಂದು. ಕಾಶ್ಮೀರದ ಲಡಾಖ್‌, ಪ್ರಾಯಶಃ ಬಹುಸಂಖ್ಯೆಯ ಪ್ರವಾಸಿಗಳು ಬಂದು ಹೋಗುವ ಜಿಲ್ಲೆಯೂ ಹೌದು. ಲೇಹ್ ನಗರ, ವಿವಿಧ ಬೌದ್ಧಮಂದಿರಗಳು ಪ್ಯಾಂಗಾಂಗ್ ಸರೋವರ, ಖರ್ದುಂಗ್‌ಲಾ ಪಾಸ್ ಇಲ್ಲಿನ ಜನಮನ ಸೆಳೆಯುವ ತಾಣಗಳು.

ಈ ಎಲ್ಲ ಗೌಜಿಗದ್ದಲಗಳಿಂದ ದೂರವಾಗಿ, ಲೇಹ್ ನಗರದಿಂದ ಉತ್ತರಕ್ಕೆ ಸುಮಾರ ನೂರೈವತ್ತು ಕಿಲೋಮೀಟರ್ ದೂರದಲ್ಲಿ ಇರುವ ವಿಸ್ಮಯಕಾರಿ ಕಣಿವೆಯೇ ನುಬ್ರಾ. ಕೂಗಳತೆಯ ದೂರದಲ್ಲಿ ಪಾಕಿಸ್ತಾನ ಮತ್ತು ಚೀನಾ ಎರಡರ ಗಡಿಗಳನ್ನೂ ಹೊಂದಿರುವ – ಭದ್ರತೆಯ ದೃಷ್ಟಿಯಿಂದ ಭಾರತದ ಆಯಕಟ್ಟಿನ ಜಾಗದಲ್ಲಿರುವ ನುಬ್ರಾ ಕಣಿವೆ, ಈ ಕಾರಣಕ್ಕಾಗಿಯೇ ಪ್ರವಾಸಿಗರ ವಲಯದಲ್ಲಿ ತುಂಬ ಪ್ರಸಿದ್ಧವಾಗಿಲ್ಲ. ಸಿಯಾಚಿನ್ ಗ್ಲೇಸಿಯರ್‌ಗೆ ಈ  ಕಣಿವೆಯಿಂದ ಮೂವತ್ತೇ ಕಿಲೋಮೀಟರ್ ದೂರ!

ಲಡಾಖ್‌ ಮತ್ತು ಕಾರಾಕೊರಂ ಎಂಬ ಪ್ರಸಿದ್ಧ ಹಿಮಾಲಯ ಪರ್ವತಶ್ರೇಣಿಯನ್ನು ಸಿಯಾಚಿನ್ ಮತ್ತು ಶ್ಯೋಕ್ ಎಂಬೆರಡು ನದಿಗಳು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ಕಣಿವೆ ಪ್ರದೇಶ, ನುಬ್ರಾ. ಶ್ಯೋಕ್, ಸಿಂಧೂ ನದಿಯ ಉಪನದಿ. ಟಿಬೆಟಿಯನ್ ಪ್ರಸ್ಥಭೂಮಿಯ ಗುಣಲಕ್ಷಣದಂತೆ, ಕೊರೆವ ಮರುಭೂಮಿಯಾಗಿ ನುಬ್ರಾ ರೂಪುಗೊಂಡಿದೆ. ಅತಿ ಶೀತದ ಕಾರಣದಿಂದಾಗಿ ಇಲ್ಲಿ ಯಾವುದೇ ಗಿಡ–ಮರಗಳು ವಿಪುಲವಾಗಿ ಬೆಳೆಯಲಾರವು.

ಮಳೆಯೂ ವಿರಳ. ಹೀಗಾಗಿಯೇ ಉಸುಕಿನ ದಿಣ್ಣೆಗಳು ಕಿಲೋಮೀಟರುಗಟ್ಟಲೆ ಚಾಚಿಕೊಂಡಿವೆ. ಅಚ್ಚರಿಯೆಂದರೆ, ಮರಳುಗಾಡಿನಲ್ಲಿರುವಂತೆ ಒಂಟೆಗಳೂ ಇಲ್ಲಿವೆ! ಎರಡು ಡುಬ್ಬಗಳ ಒಂಟೆಗಳು ಕುರುಚಲು ಪೊದೆಗಳ ಬಳಿ ಮೇಯುತ್ತ ನಿಂತಿರುವ ದೃಶ್ಯವನ್ನೂ ನೋಡಬಹುದು. ನೆನಪಿಡಿ – ಈ ರೀತಿಯ ಎರಡು ದಿಬ್ಬದ ಒಂಟೆಗಳು ಇಲ್ಲಿ ಬಿಟ್ಟರೆ, ಇರುವುದು ಆಸ್ಟ್ರೇಲಿಯಾದಲ್ಲಿ ಮಾತ್ರ!

ನುಬ್ರಾ ಕಣಿವೆಗೆ ಐತಿಹಾಸಿಕ ಮಹತ್ವ ಕೂಡ ಇದೆ. ಪುರಾತನ ಭಾರತದ ಪ್ರಸಿದ್ಧ ‘ಸಿಲ್ಕ್ ರೂಟ್’ ಅನ್ನುವ ದಾರಿ ನುಬ್ರಾ ಕಣಿವೆಯನ್ನೇ ಹಾದು ಹೋಗುತ್ತಿತ್ತು. ಸಾಂಬಾರ ಪದಾರ್ಥ ಮತ್ತು ರೇಷ್ಮೆ ಬಟ್ಟೆಗಾಗಿ ಭರತಖಂಡಕ್ಕೆ ಬರುವ ಹೊರಗಿನ ವ್ಯಾಪಾರಿಗಳು ದುರ್ಗಮವಾದ ಈ ಕಣಿವೆಯನ್ನೇ ಹಾದು ಭಾರತಕ್ಕೆ ಬರಬೇಕಿತ್ತು. ಸುಮಾರು 1950ನೇ ಇಸವಿಯವರೆಗೂ ಚೀನಾದಿಂದ ಇಲ್ಲಿಗೆ, ಇಲ್ಲಿಂದ ಚೀನಾ ಕಡೆಗೆ ಜನರು ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರಂತೆ. ನಂತರ ರಾಜತಾಂತ್ರಿಕ ಕಾರಣಗಳಿಗೆ ಮತ್ತು ಭದ್ರತೆಯ ದೃಷ್ಟಿಯಿಂದಾಗಿ ಈ ಮಾರ್ಗವನ್ನು ಮುಚ್ಚಲಾಯಿತು.

ನುಬ್ರಾ ಕಣಿವೆ ಭಾರತದ ಅತ್ಯಂತ ಶೀತ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿನ ಜನಸಂಖ್ಯೆಯೂ ವಿರಳ. ಅಲ್ಲೊಂದು ಇಲ್ಲೊಂದು ಹಳ್ಳಿಗಳಿವೆ. ದಿಸ್ಕಿತ್, ಹುಂಡುರ್, ಟುರ್ಟಕ್ ಮೊದಲಾದ ಊರುಗಳು ಅಲ್ಲಲ್ಲಿ ಸೋಮಾರಿಯಾಗಿ ಬಿದ್ದುಕೊಂಡಿವೆ. ಇಲ್ಲಿಗೆ ಬರುವ ಪ್ರವಾಸಿಗರೇ ಆದಾಯದ ಮೂಲ. ಹಿಮ ಕರಗಿ ಹರಿಯುವ ನೀರು ಇರುವುದರಿಂದ, ಅಲ್ಲಲ್ಲಿ ಬಾರ್ಲಿ, ಅಕ್ರೋಟು ಮೊದಲಾದವನ್ನು ಬೆಳೆಯುತ್ತಾರೆ. ಲಡಾಖ್‌ನ ಉಳಿದ ಪ್ರಾಂತ್ಯಗಳಿಗೆ ಹೋಲಿಸಿದರೆ, ಕೃಷಿ ಚಟುವಟಿಕೆ ಇಲ್ಲೇ ಜಾಸ್ತಿ.

ನಾವೊಂದಿಷ್ಟು ಮಂದಿ ನುಬ್ರಾಕ್ಕೆ ಹೋಗಿದ್ದು ಫೆಬ್ರುವರಿ ತಿಂಗಳ ಕೊರೆಯುವ ಚಳಿಯಲ್ಲಿ. ಲಡಾಖ್‌ನ ಬೇರಾವುದೋ ಟ್ರೆಕ್ ಅನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾದ ಕಾರಣಕ್ಕಾಗಿ ಲೇಹ್ ಸುತ್ತಮುತ್ತ ಇರುವ ಒಂದಿಷ್ಟು ಜಾಗಗಳನ್ನ ನೋಡಲು 3–4 ದಿನಗಳ ಸಮಯ ಸಿಕ್ಕಿತ್ತು. ಈ ಹುಡುಕಾಟದಲ್ಲಿಯೇ ನುಬ್ರಾವ್ಯಾಲಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.

ಮಟಮಟ ಮಧ್ಯಾಹ್ನವೇ ಮೈನಸ್ 10–15 ಡಿಗ್ರಿಯ ಮೂಳೆಕೊರೆಯುವ ಚಳಿ. ಇಡೀ ನುಬ್ರಾಕ್ಕೆ ನಾವೊಂದು ಹತ್ತು ಜನ ಬಿಟ್ಟರೆ ಬೇರಾವ ಪ್ರವಾಸಿಗರೂ ಇಲ್ಲ. ಗೆಸ್ಟ್‌ಹೌಸ್‌ಗಳಾಗಲಿ, ಹೋಟೆಲುಗಳಾಗಲಿ ಈ ಸಮಯದಲ್ಲಿ ತೆರೆದಿರುವುದಿಲ್ಲ. ರಾತ್ರಿ –30 ಡಿಗ್ರಿಗಳವರೆಗೂ ತಾಪಮಾನ ಇಳಿಕೆಯಾಗುತ್ತದೆ. ಮನೆಗಳ, ಲಾಡ್ಜುಗಳ ನೆತ್ತಿಯ ಮೇಲಿನ ಟ್ಯಾಂಕಿನಲ್ಲಿರುವ ನೀರು ಕೂಡ ಮಂಜುಗಡ್ಡೆಯಾಗಿ ಬಿಟ್ಟಿರುತ್ತದೆ! ಸಂಜೆ ಐದು ಗಂಟೆಯ ನಂತರ ಹೊರಗಡೆ ಓಡಾಡುವ ಯಾವ ಸಾಧ್ಯತೆಯೂ ಇಲ್ಲ. ನರಪಿಳ್ಳೆ ಕೂಡ ರಸ್ತೆಯಲ್ಲಿ ಇರುವುದಿಲ್ಲ. ಊರಮಂದಿಯೆಲ್ಲ ಮನೆಯೊಳಗೆ ಅಗ್ಗಿಷ್ಟಿಕೆಗಳನ್ನು ಹಾಕಿಕೊಂಡು ಕೂತಿರುತ್ತಾರೆ.

ಆ ಚಳಿಯಲ್ಲೇ ಹುಂಡುರ್‌ನ ಮರಳ ದಿಣ್ಣೆಗಳಲ್ಲಿ ಓಡಾಡಿ ಆಶ್ರಯ ಹುಡುಕಿಕೊಂಡು ಹೋದೆವು. ನಮ್ಮ ಟೆಂಪೋ ಟ್ರಾವೆಲರ್ ಡ್ರೈವರು ಅದೇ ಊರಿನವನಾದ ಕಾರಣಕ್ಕೆ ಗೆಸ್ಟ್ ಹೌಸೊಂದರ ಬಾಗಿಲು ತೆಗೆಸಿ, ಮಲಗುವ ವ್ಯವಸ್ಥೆ ಮಾಡಿಸಿಕೊಟ್ಟ. ನೋಡಿದರೆ, ಅಲ್ಲಿದ್ದುದು ಒಬ್ಬ ಹೆಂಗಸು ಮಾತ್ರ. ಆಕೆ ಸಾಕ್ಷಾತ್ ಅನ್ನಪೂರ್ಣೆಯಂತೆ ನಮಗೆ ಬಿಸಿಬಿಸಿ ಫುಲ್ಕಾಗಳು, ಅನ್ನ–ದಾಲ್‌ ಮಾಡಿ ಬಡಿಸಿದ್ದನ್ನು ನಾವೆಲ್ಲ ಎಂದಿಗೂ ಮರೆಯಲಾರೆವು! ಇಲ್ಲಿನ ಸ್ತ್ರೀಯರು ಬಹಳ ಕಷ್ಟ ಸಹಿಷ್ಣುಗಳು. ಗಂಡಸರಿಗಿಂತ ಹೆಚ್ಚಿನ ಕೆಲಸವನ್ನು ಅವರೇ ಮಾಡುತ್ತಾರೆ. ಹೆಚ್ಚಿನ ಹಳ್ಳಿಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಜಾಸ್ತಿ ಕಾಣಿಸುತ್ತಾರೆ!

ಇಲ್ಲಿನ ಹೆಚ್ಚಿನ ಹಳ್ಳಿಗಳಲ್ಲಿ ಬೌದ್ಧರ ಮಾನೆಸ್ಟ್ರಿಗಳಿವೆ. ದಿಸ್ಕಿತ್‌ನಲ್ಲಿ ಮೈತ್ರೇಯ ಬುದ್ಧನ ಮೂವತ್ತಮೂರು ಮೀಟರ್ ಎತ್ತರ ಸುಂದರ ಪ್ರತಿಮೆ ಇದೆ. ಶಾಂತಿಯ ಪ್ರತೀಕವಾಗಿರುವ ಮೈತ್ರೇಯ ಬುದ್ಧನ ಈ ಮೂರ್ತಿಯು, ಪಾಕಿಸ್ತಾನದ ಕಡೆಗೆ ಮುಖ ಮಾಡಿಕೊಂಡಿದೆ! ಹುಂಡುರ್‌ನಲ್ಲಿ ಚಂಬಾ ಎಂಬ ಬೌದ್ಧ ಮಂದಿರವಿದೆ. ಪುಟಾಣಿ ಮಕ್ಕಳು ಕೆಂಪು ನಿಲುವಂಗಿಯನ್ನು ತೊಟ್ಟು ಓಡಾಡುವುದನ್ನು ನೋಡುವುದೇ ಒಂದು ಸೊಗಸು. ಸುಮುರ್ ಎಂಬಲ್ಲಿ 1850ರಲ್ಲಿ ಕಟ್ಟಲ್ಪಟ್ಟ ಗೊಂಪಾ ಇದೆ. ಬೌದ್ಧ ಧರ್ಮೀಯರ ಗ್ರಂಥಗಳನ್ನು ಅಧ್ಯಯನ ಮಾಡುತ್ತ ಕೂತಿರುವ ಗುರುಗಳೂ ಅವರುಗಳ ಶಿಷ್ಯರೂ ಅಲ್ಲಿ ಕಾಣಸಿಗುತ್ತಾರೆ. ಹಾಗೇ ಇಲ್ಲಿಂದ ನುಬ್ರಾ ಕಣಿವೆಯ ನದಿಗುಂಟದ ಹಾದಿಯನ್ನು ಹಿಡಿದು ಮತ್ತೊಂದು ನೂರೈವತ್ತು ಕಿಲೋಮೀಟರು ಹೋದರೆ ‘ಥ್ರೀ ಈಡಿಯಟ್ಸ್’ ಚಿತ್ರದಿಂದಾಗಿ ಪ್ರಸಿದ್ಧವಾದ ಪ್ಯಾಂಗಾಂಗ್ ಲೇಕ್ ಸಿಗುತ್ತದೆ.

ಹಾಂ, ನೀವು ಇವುಗಳನ್ನ ಯಾವುದನ್ನೂ ನೋಡದೇ ಸುಮ್ಮನೇ ಇಲ್ಲಿನ ರಸ್ತೆಗಳಲ್ಲಿ ಅಲೆಯುತ್ತೀರಿ ಎಂದರೂ ಸರಿಯೇ. ಯಾಕೆಂದರೆ ಲಡಾಖ್‌ನ ಸತ್ವವಿರುವುದೇ ಉದ್ದೇಶವಿಲ್ಲದೇ ಮಾಡುವ ಅಲೆದಾಟದಲ್ಲಿ. ಇಲ್ಲೊಂದು ವಿಚಿತ್ರ ಅನುಭೂತಿಯಿದೆ. ಹೊರ ಜಗತ್ತಿನ ದೈನಿಕ ವ್ಯಾಕರಣಕ್ಕೆ ಹೊರತಾದ ಬದುಕಿದೆ. ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕಾಣುವ ಹಿಮಪರ್ವತ ಮಾಲೆ, ಬೀಸಿ ಬರುವ ಗಾಳಿಗೆ ಮೇಲೆದ್ದ ಮರಳು ಸೃಜಿಸಿದ ದೂಳಿನ ಮಾಯಾಲೋಕ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ದೈತ್ಯ ಪ್ರಕೃತಿಯೆದುರಿಗೆ ನಾವೆಷ್ಟು ಕುಬ್ಜ ಅನ್ನುವುದನ್ನು ಮರುನಿರೂಪಿಸುತ್ತದೆ.
ಎಂದಾದರೊಂದು ದಿನ ಲೇಹ್‌ಗೆ ಖಂಡಿತವಾಗಿಯೂ ಹೋಗಿ, ಅಲ್ಲಿಗೆ ಹೋದವರು ನುಬ್ರಾ ಕಣಿವೆಗೆ ಹೋಗುವುದನ್ನು ಮಾತ್ರ ಮರೆಯಬೇಡಿ!

ಖರ್ದುಂಗ್‌ಲಾ ಪಾಸ್
ನುಬ್ರಾ ಕಣಿವೆಗೆ ತೆರಳಬೇಕಿದ್ದರೆ ಜಗತ್ತಿನ ಅತ್ಯಂತ ಎತ್ತರದ ‘ಮೋಟರೇಬಲ್ ಪಾಸ್’ ಎಂದೇ ಪ್ರಸಿದ್ಧವಾಗಿರುವ ಖರ್ದುಂಗ್‌ಲಾ ಪಾಸ್ ದಾಟಿಕೊಂಡು ಹೋಗಬೇಕು. 18,380 ಅಡಿಗಳೆತ್ತರದಲ್ಲಿರುವ ಖರ್ದುಂಗ್‌ಲಾದಲ್ಲೊಂದೆರಡು ಫೋಟೊ ಕ್ಲಿಕ್ಕಿಸಿಕೊಂಡು, ಮತ್ತೆ 8 ಸಾವಿರ ಅಡಿಗಳಷ್ಟು ಕೆಳಗಿಳಿದರೆ ವಿಸ್ತಾರವಾಗಿ ಚಾಚಿಕೊಂಡಿರುವ ನುಬ್ರಾ ಕಣಿವೆ ಕಾಣಿಸುತ್ತದೆ. ಖರ್ದುಂಗ್‌ಲಾದಲ್ಲಿ ಹಿಮಪಾತವಾಗಿದ್ದರೆ ರಸ್ತೆ ಮುಚ್ಚಿಕೊಂಡು ಮುಂದಿನ ಪ್ರಯಾಣ ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಖರ್ದುಂಗ್‌ಲಾದ ವಾತಾವರಣ ಹೇಗಿದೆ ಅನ್ನುವುದರ ಮೇಲೆ ನುಬ್ರಾ ನೋಟ ಸಾಧ್ಯ!

ಕಣ್ಣಳತೆ ದೂರದಲ್ಲೇ ಸಿಯಾಚಿನ್!
ನುಬ್ರಾ ವ್ಯಾಲಿಯಿಂದ ಸಿಯಾಚಿನ್ ದರ್ಶನ ಭಾಗ್ಯ ಸಿಗುತ್ತದೆ. ಸಿಯಾಚಿನ್‌ನ ಬೇಸ್ ಕ್ಯಾಂಪ್‌ಗೆ ನುಬ್ರಾ ಮೂಲಕವೇ ಸಾಗಿ ಹೋಗಬೇಕು. ಬೇಸ್ ಕ್ಯಾಂಪ್‌ವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ. ಅಲ್ಲಿಂದ ಮುಂದೆ ನಿಷೇಧಿತ ಪ್ರದೇಶ. ಸೇನೆಯ ಒಪ್ಪಿಗೆಯಿಲ್ಲದೇ ಮುಂದೆ ಸಾಗುವಂತಿಲ್ಲ. ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಹೋಗುವ ಸೈನ್ಯದ ಟಕ್‌ಗಳು ದಾರಿಯುದ್ದಕ್ಕೂ ಅಲ್ಲಲ್ಲಿ ಕಾಣಸಿಗುತ್ತವೆ. ಬಿಳಿಯ ಸಮವಸ್ತ್ರ ತೊಟ್ಟ ಸೈನಿಕರು ಹಸನ್ಮುಖರಾಗಿ ಪ್ರವಾಸಿಗರನ್ನು ಮಾತನಾಡಿಸುತ್ತಾರೆ.

ಹೋಗುವುದು ಹೇಗೆ?
ದೆಹಲಿಯಿಂದ ಲೇಹ್‌ಗೆ ವಿಮಾನದಲ್ಲಿ ಅಥವಾ ರಸ್ತೆಮಾರ್ಗವಾಗಿಯೂ ಪ್ರಯಾಣಿಸಬಹುದು. ಚಳಿಗಾಲದಲ್ಲಿ ಮನಾಲಿ–ಜಮ್ಮು ರಸ್ತೆಯಲ್ಲಿ ಸಂಚಾರ ನಿಷಿದ್ಧ. ಡಿಸೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಕೇವಲ ವಿಮಾನದಲ್ಲಷ್ಟೇ ಲೇಹ್‌ಗೆ ತಲುಪಬಹುದು. ಅಲ್ಲಿಂದ ಯಾವುದಾದರೂ ಕಾರ್ – ಟೆಂಪೋ ಟ್ರಾವೆಲರ್‌ನಲ್ಲಿ ನುಬ್ರಾಗೆ ಹೋಗಬಹುದು. ಲೇಹ್ ಪಟ್ಟಣದಿಂದ ನುಬ್ರಾಗೆ 150 ಕಿಲೋಮೀಟರು, ಐದರಿಂದ ಆರುಗಂಟೆಗಳ ಪ್ರಯಾಣ. ವಸತಿ ಸೌಕರ್ಯ ಕಾಯ್ದಿರಿಸಿಕೊಂಡು ಹೋಗುವುದು ಒಳಿತು. ಜುಲೈನಿಂದ ಡಿಸೆಂಬರ್‌ ತಿಂಗಳ ಅವಧಿ ನುಬ್ರಾ ಕಣಿವೆಗೆ ಭೇಟಿ ನೀಡಲು ಪ್ರಶಸ್ತ ಸಮಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT