ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ ತನಕ ಹಳೆ ನೋಟು ಚಲಾವಣೆಗೆ ಯೆಚೂರಿ ಆಗ್ರಹ

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೋಟು ರದ್ದತಿ ನಿರ್ಧಾರದಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದು,   ಹಳೆ ನೋಟುಗಳ ಚಲಾವಣೆಗೆ ಕನಿಷ್ಠ  ಡಿಸೆಂಬರ್‌ ಕೊನೆ ತನಕ  ಅವಕಾಶ ನೀಡಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯ ದರ್ಶಿ ಸೀತಾರಾಂ ಯೆಚೂರಿ ಒತ್ತಾಯಿಸಿದರು.

ನೋಟು ರದ್ದತಿ ನಿರ್ಧಾರ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೈಗಾರಿಕೆ ಮತ್ತು ಕೃಷಿ ವಲಯಕ್ಕೆ   ಪೆಟ್ಟು ಬಿದ್ದಿದೆ. ಬದಲಿ ನೋಟುಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ರಿಸರ್ವ್ ಬ್ಯಾಂಕ್‌ಗೆ ಇನ್ನೂ ಆರು ತಿಂಗಳ ಕಾಲಾವಕಾಶ ಬೇಕು ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಇ ಅವರು ಹೇಳಿದರು.

ಹಣ ರಹಿತ ಆರ್ಥಿಕ ವ್ಯವಸ್ಥೆ ಭಾರತದಲ್ಲಿ ಸದ್ಯಕ್ಕೆ ಕಷ್ಟ. ಶೇ 80 ರಿಂದ 90ರಷ್ಟು ವಹಿವಾಟು ಹಣದಲ್ಲೆ ನಡೆಯುತ್ತಿದೆ. ಸಂಪೂರ್ಣ ವಿದ್ಯಾ ವಂತರು ಮತ್ತು ಆನ್‌ಲೈನ್‌  ವ್ಯವಸ್ಥೆ ಹೊಂದಿರುವ ಸ್ವಿಡನ್‌ ದೇಶ ಇತ್ತೀಚೆಗೆ ಹಣ ರಹಿತ ಆರ್ಥಿಕ ವ್ಯವಸ್ಥೆ ಜಾರಿಗೆ ತಂದಿದೆ. ಅಮೆರಿಕದಂತ ಮುಂದು ವರಿದ ದೇಶದಲ್ಲಿ ಇನ್ನೂ ಸಾಧ್ಯ ಆಗಿಲ್ಲ ಎಂದರು.

ಪೂರ್ವ ತಯಾರಿ ಇಲ್ಲದೆ ನೋಟು ರದ್ದತಿ ನಿರ್ಧಾರ ಕೈಗೊಳ್ಳಲಾಯಿತು.   ನಂತರ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗದೆ 22 ಆದೇಶಗಳನ್ನು ಹೊರಡಿಸಿದೆ. ದಿನಗೂಲಿ ಮತ್ತು ಅಂದಿನ ವ್ಯಾಪಾರದಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಿರುವ ಜನರಿಗೆ ಇದರಿಂದ ತೀವ್ರ ತೊಂದರೆ ಆಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಚರ್ಚಿಸಿ ಕೈಗೊಳ್ಳಬೇಕಾದ ನಿರ್ಧಾರಗಳನ್ನು ಮಾಧ್ಯಮಗಳ ಮುಂದೆ ಪ್ರಕಟಿಸುತ್ತಿದ್ದಾರೆ. ಮನಮೋಹನಸಿಂಗ್ ಅವರು ಪ್ರಧಾನಿ ಆಗಿದ್ದಾಗ ಬಿಜೆಪಿಯ ವರು ‘ಮೌನ’ ಮೋಹನಸಿಂಗ್‌ ಎಂದು ಕರೆದಿದ್ದರು. ಈಗ ಅವರೇ ನರೇಂದ್ರ ‘ಮೌನ’ ಮೋದಿ ಎಂದು ಕರೆಯು ವಂತಾಗಿದೆ ಎಂದು ಲೇವಡಿ ಮಾಡಿದರು.

‘ನೋಟು ರದ್ದತಿ ನಿರ್ಧಾರವನ್ನು ವಾಪಸ್‌ ಪಡೆಯಲು ನಮ್ಮ ಪಕ್ಷ ಕೇಳು ವುದಿಲ್ಲ. ಕಪ್ಪು ಹಣ ಹೊಂದಿದವರು ಅದನ್ನು ಕೇಳುತ್ತಿದ್ದಾರೆ. ಸಾಮಾನ್ಯ ಜನರಿಗೆ ಆಗಿರುವ ತೊಂದರೆ ಸರಿಪಡಿ ಸಲು ಮಾತ್ರ ನಾವು ಒತ್ತಾಯಿಸುತ್ತಿದ್ದೇವೆ. ರಿಯಲ್‌ ಎಸ್ಟೇಟ್‌ನಲ್ಲಿ ಮತ್ತು ಚಿನ್ನದ ರೂಪದಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧವೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಆಗಿದ್ದಾಗ ಬಿರ್ಲಾ, ಸಹಾರ ಗ್ರೂಪ್‌ನಿಂದ ₹ 60 ಕೋಟಿ ಲಂಚ

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಆರೋಪದಿಂದ ಹೊರ ಬಂದ ನಂತರ ಕಪ್ಪುಹಣದ ಬಗ್ಗೆ ಮಾತನಾಡಲಿ ಎಂದು ಸೀತಾರಾಂ ಯೆಚೂರಿ ಆಗ್ರಹಿಸಿದರು.
2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನರೇಂದ್ರ ಮೋದಿ ಅವರು ಬಿರ್ಲಾ ಮತ್ತು ಸಹಾರ ಗ್ರೂಪ್‌ನಿಂದ ₹ 60 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಇದೆ. ಕಪ್ಪುಹಣದ ಬಗ್ಗೆ ಮಾತನಾಡುವ ಮುನ್ನ ಅವರು ಆ ಆರೋಪದಿಂದ ಹೊರ ಬರಲಿ. ಅದಕ್ಕೂ ಮುನ್ನ ಕಪ್ಪುಹಣದ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT