ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಸವಾಲೊಡ್ಡಿ ಗೆದ್ದ ಕ್ಯಾಸ್ಟ್ರೊ

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಮಾರ್ಕ್ಸ್‌ವಾದಿ ಚಿಂತನೆಯ ನೆಲೆಯಲ್ಲೇ ಅರ್ಧ ಶತಮಾನದ ಕಾಲ ಕ್ಯೂಬಾವನ್ನು ಆಳಿದ ಫಿಡೆಲ್‌ ಕ್ಯಾಸ್ಟ್ರೊ ಜಗತ್ತಿನಾದ್ಯಂತ ಹತ್ತು ಹಲವು ಹೋರಾಟಗಳಿಗೆ ಸ್ಫೂರ್ತಿಯಾದವರು. ಕ್ಯೂಬಾ ಆರು ದಶಕಗಳ ಹಿಂದೆ ಅಮೆರಿಕಾದ ಬಹುರಾಷ್ಟ್ರೀಯ ಕಂಪೆನಿಗಳ ಆಡಂಬೊಲವಾಗಿತ್ತು. ಆ ಕಂಪೆನಿಗಳು ಮತ್ತು ಅಮೆರಿಕಾ ಆಡಳಿತಗಾರರ ಕೈಗೊಂಬೆಯಾಗಿದ್ದ ಸರ್ವಾಧಿಕಾರಿ ಬಟಿಸ್ಟಾನ ಸೇನೆಯ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ ಕ್ಯಾಸ್ಟ್ರೊ ಆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಕ್ಯಾಸ್ಟ್ರೊ ಅವರು ಕಮ್ಯುನಿಸ್ಟ್‌ ಜಗತ್ತು ಕಂಡ ಅಪರೂಪದ ಜನಪರ ಚಿಂತಕ, ಕ್ರಾಂತಿಕಾರಿ ಹೋರಾಟಗಾರ ಮತ್ತು ದಕ್ಷ ಆಡಳಿತಗಾರ.
 
ಕೊಲಂಬಸ್‌ ಅಮೆರಿಕಾ ಭೂಖಂಡಕ್ಕೆ ಕಾಲಿಟ್ಟು ಐದು ಶತಮಾನಗಳು ಉರುಳಿವೆ. ಕೊಲಂಬಸ್‌ ನಂತರ ಯುರೋಪ್‌ನಿಂದ ಲಕ್ಷಾಂತರ ಮಂದಿ ಆ ಎರಡೂ ಖಂಡಗಳಿಗೆ ಹೋಗಿ ನೆಲೆಸಿದರು. ಅಲ್ಲಿನ ಮೂಲ ನಿವಾಸಿಗಳನ್ನು ಕಗ್ಗೊಲೆಗೈದರು. ಊರುಗಳನ್ನು ಕಟ್ಟಿದರು. ಹೊಸ ರಾಜ್ಯಗಳು, ದೇಶಗಳೇ ಹುಟ್ಟು ಪಡೆದವು.
 
ಕೃಷಿ ಚಟುವಟಿಕೆ ಆರಂಭಗೊಂಡಿತು. ಕೈಗಾರಿಕೆಗಳೂ ಶುರುವಾದವು. ಅಲ್ಲಿ ದುಡಿಯಲು ಕೆಲಸಗಾರರು ಬೇಕಿತ್ತಲ್ಲಾ, ಆಫ್ರಿಕಾ ಖಂಡದಿಂದ ಲಕ್ಷಾಂತರ ಮಂದಿಯನ್ನು ಹಿಡಿದು, ಹಡಗುಗಳಲ್ಲಿ ಹೇರಿಕೊಂಡು ಬಂದು ಗುಲಾಮರನ್ನಾಗಿಸಿಕೊಂಡರು. ಕ್ಯೂಬಾ ಕೂಡಾ ಇಂತಹದೇ ದ್ವೀಪ ರಾಷ್ಟ್ರ. ಶತಮಾನದ ಕಾಲ ಸ್ಪೇನ್‌ ದೇಶದ ವಸಾಹತು ಆಗಿದ್ದ ಕ್ಯೂಬಾ 114 ವರ್ಷಗಳ ಹಿಂದೆ ಸ್ವತಂತ್ರಗೊಂಡಿತು. ಆದರೆ ಅಲ್ಲಿ ಸುಭದ್ರ ಸರ್ಕಾರ ರೂಪುಗೊಳ್ಳಲಿಲ್ಲ. 40ರ ದಶಕದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ನೆಲೆಯಲ್ಲಿಯೇ ಚುನಾವಣೆ ನಡೆದಿತ್ತು. ಸೈನಿಕನಾಗಿದ್ದ ಬಟಿಸ್ಟಾ ಎಂಬಾತ ಬಡವರಲ್ಲಿ ಅಭಿವೃದ್ಧಿಯ ಕನಸುಗಳನ್ನು ಬಿತ್ತಿದ. ಜನ ಆತನನ್ನು ಆಯ್ಕೆ ಮಾಡಿದರು. ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆತನ ಸಮ ಸಮಾಜ ಕಟ್ಟುವ ಕನಸು ಕಾರ್ಯರೂಪಕ್ಕೆ ಬರಲೇ ಇಲ್ಲ. ಆತನ ಅಧಿಕಾರ ಹೋಯಿತು. ಆದರೆ ಆತನ ಅಧಿಕಾರದಾಹ ಅತೀವವಾಗಿತ್ತು. 1952ರಲ್ಲಿ ಆಗಿನ ಚುನಾಯಿತ ಆಧ್ಯಕ್ಷ ಕಾರ್ಲೊಸ್‌ ಪ್ರಿಯೊನನ್ನು ಕಿತ್ತೊಗೆದು ಬಟಿಸ್ಟಾ ಅಧ್ಯಕ್ಷ ಗಾದಿಯಲ್ಲಿ ಕುಳಿತ. ಅಷ್ಟರಲ್ಲಾಗಲೇ ಕ್ಯೂಬಾದಲ್ಲಿ ಭ್ರಷ್ಟಾಚಾರ, ಬಡತನ ಅಸಹನೀಯವಾಗಿತ್ತು. ಇಂತಹ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿ ಯುವಜನರ ಚಳವಳಿಗಳೂ ತಾರಕಕ್ಕೆ ಏರಿದ್ದವು. ಆ ಆಂದೋಲನದ ನೇತೃತ್ವ ವಹಿಸಿದ್ದವರು ಕ್ಯಾಸ್ಟ್ರೊ.
 
ಕ್ಯಾಸ್ಟ್ರೊನ ಹುಟ್ಟೂರು ಸ್ಯಾಂಟಿಯಾಗೊ. ಸ್ಪೇನ್‌ನಿಂದ ಈ ಪ್ರದೇಶಕ್ಕೆ ಬಂದು ನೆಲೆಸಿದ್ದವರೊಬ್ಬ ತನ್ನ ಗದ್ದೆ ತೋಟಗಳಲ್ಲಿ ಕೂಲಿಯಾಗಿ ದುಡಿಯುತ್ತಿದ್ದಾಕೆಯೊಬ್ಬಳ ಜತೆಗೆ ಸಂಬಂಧ ಇರಿಸಿಕೊಳ್ಳುತ್ತಾನೆ. ಆ ಸಂಬಂಧದಲ್ಲಿ ಹುಟ್ಟಿದವರು ಕ್ಯಾಸ್ಟ್ರೊ. ನಂತರ ಆ ಭೂಮಾಲೀಕ ಆ ಕೆಲಸದಾಕೆಯನ್ನು ಮದುವೆಯಾಗುತ್ತಾನೆ.  ಆ ದಿನಗಳಲ್ಲಿ ಜಗತ್ತಿನ ಬಹುತೇಕ ಎಲ್ಲಾ ಯುರೋಪ್‌ ವಸಾಹತುಗಳಲ್ಲಿ ಬ್ರಿಟಿಷರ, ಪೋರ್ಚುಗೀಸರ, ಫ್ರೆಂಚರ, ಸ್ಪೇನ್‌ ಮಂದಿಯ ಇಂತಹ ಅಕ್ರಮ ಸಂತಾನ ಸಾಮಾನ್ಯವಾಗಿತ್ತು. 1926ರ ಆಗಸ್ಟ್‌ 13ರಂದು ಹುಟ್ಟಿದ ಫಿಡೆಲ್‌ ಅಲೆ ಜಾದ್ರೊ ಕ್ಯಾಸ್ಟ್ರೊ ತನ್ನ ಶಿಕ್ಷಣವನ್ನು ಸ್ಯಾಂಟಿಯಾಗೊ ಮತ್ತು ಹವಾನಾ ನಗರಗಳಲ್ಲಿದ್ದ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದರು. 40ರ ದಶಕದ ಆರಂಭದಲ್ಲಿ ಹವಾನಾ ವಿಶ್ವವಿದ್ಯಾಲಯದಲ್ಲಿ ಕಾನೂನು ಶಿಕ್ಷಣ ಪಡೆದರು. ವಿದ್ಯಾರ್ಥಿಯಾಗಿದ್ದಾಗಲೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಅವರು ಜನಮನ್ನಣೆ ಗಳಿಸಿದ್ದರು. 
 
ಬಂಡವಾಳಷಾಹಿ ವ್ಯವಸ್ಥೆಯಿಂದಾಗಿಯೇ ದೇಶ ಇಂತಹ ದುಃಸ್ಥಿತಿಗೆ ಸಿಲುಕಿದೆ ಎಂಬುದನ್ನು ಅವರು ಕಂಡುಕೊಂಡರು. ಅಂತಹ ವ್ಯವಸ್ಥೆಯನ್ನೇ ಬುಡಸಹಿತ ಕಿತ್ತೊಗೆಯಲು ಹೋರಾಟಗಾರರ ತಂಡವನ್ನೇ ಕಟ್ಟಿ, ಧ್ವನಿ ಎತ್ತಿದರು. 1952ರಲ್ಲಿ ಅಧಿಕಾರಕ್ಕೇರಿದ ಬಟಿಸ್ಟಾ ತನ್ನ ಉಳಿವಿಗಾಗಿ ಅಮೆರಿಕಾ ಹೇಳಿದಂತೆ ನಡೆದುಕೊಳ್ಳುತ್ತಿದ್ದ. ಪರೋಕ್ಷವಾಗಿ ಅಮೆರಿಕಾದ ಉದ್ಯಮ ಪ್ರಭುಗಳೇ ಆಡಳಿತ ನಡೆಸುತ್ತಿದ್ದರು.
 
ಈ ನಡುವೆ ಶ್ರೀಮಂತ ರಾಜಕಾರಣಿಯೊಬ್ಬರ ಮಗಳನ್ನು ಮದುವೆಯಾಗಿದ್ದ ಕ್ಯಾಸ್ಟ್ರೊ ಕೆಲವೇ ವರ್ಷ ಸಂಸಾರಿಯಾಗಿದ್ದು. ಪತ್ನಿಯ ಕುಟುಂಬದವರಂತೆ ಐಷಾರಾಮಿ ಬದುಕಿನತ್ತ ಇವರು ಆಕರ್ಷಿತರಾಗಲಿಲ್ಲ. ಕೊನೆಗೆ ಪತ್ನಿಗೆ ವಿಚ್ಛೇದನ ನೀಡಿ, ಸಂಪೂರ್ಣವಾಗಿ ಮಾರ್ಕ್ಸ್‌ವಾದವನ್ನೇ ಅಪ್ಪಿಕೊಂಡರು. 
 
ಸಮಸಮಾಜ ಕಟ್ಟುವ ಕನಸನ್ನು ಒಡಲಲ್ಲಿರಿಸಿಕೊಂಡು ಹೋರಾಟ ನಡೆಸುತ್ತಿದ್ದವರ ವಿರುದ್ಧ ಬಟಿಸ್ಟಾ ಸರ್ಕಾರ ಮುಗಿ ಬಿದ್ದಿತು. ಹೋರಾಟಗಾರರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಹಾಕಿದರು. ಆಗ ಭ್ರಷ್ಟಾಚಾರದ ವಿರುದ್ಧ ಕಾನೂನು ಹೋರಾಟ ನಡೆಸಿ ವಿಫಲಗೊಂಡಿದ್ದ ಕ್ಯಾಸ್ಟ್ರೊ ‘ರಕ್ತಕ್ರಾಂತಿ’ಯ ಹಾದಿ ಹಿಡಿದರು. 1953ರಲ್ಲಿ ಕ್ಯಾಸ್ಟ್ರೊ ನೇತೃತ್ವದ ಹೋರಾಟಗಾರರು ಮೊಂಕಾಡೊ ಸೇನಾ ಕೇಂದ್ರದ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಯತ್ನಿಸಿದರು. ಆಗ ಹಲವು ಬಂಡುಕೋರರು ಸತ್ತರು. ಸೆರೆ ಸಿಕ್ಕಿದ ಕ್ಯಾಸ್ಟ್ರೊಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ 1955ರಲ್ಲಿ ನೀಡಲಾದ ಸಾಮೂಹಿಕ ಕ್ಷಮಾದಾನದ ವೇಳೆ ಕ್ಯಾಸ್ಟ್ರೊ ಬಿಡುಗಡೆಯಾದರು.
 
ನಂತರ ಬಟಿಸ್ಟಾ ಸೈನಿಕರ ಕಣ್ತಪ್ಪಿಸಿ ಕ್ಯಾಸ್ಟ್ರೊ ಮೆಕ್ಸಿಕೊಗೆ ಪಲಾಯನಗೈದರು. ಅಲ್ಲಿ ಕ್ರಾಂತಿಕಾರಿ ಚೆಗವರಾ ಅವರ ಜತೆಗೂಡಿದರು. ಕ್ಯೂಬಾ ವಿಮೋಚನೆಗೆ ಯೋಜನೆಗಳನ್ನು ರೂಪಿಸಿದರು. 1956ರಲ್ಲಿ ಅವರು 81 ಹೋರಾಟಗಾರರ ಜತೆ ದೋಣಿಯೊಂದರಲ್ಲಿ ಕ್ಯೂಬಾಕ್ಕೆ ಬಂದು ತಲುಪಿದರು. ಎಲ್ಲರ ಬಳಿಯೂ ಶಸ್ತ್ರಾಸ್ತ್ರಗಳಿದ್ದವು. ಚಿಕ್ಕ ದೋಣಿಯೊಂದರಲ್ಲಿ ಸಾಗಿದ ಆ ಪಯಣದ ಕಥೆಯೇ ಇವತ್ತಿಗೂ ಜಗತ್ತಿನಾದ್ಯಂತ ಕ್ರಾಂತಿಕಾರಿಗಳಿಗೆ ಸ್ಪೂರ್ತಿ ನೀಡುವ ಅಧ್ಯಾಯವಾಗಿದೆ. ಆ ಹೋರಾಟಗಾರರೆಲ್ಲರೂ ಸಿಯೆರಾ ಮಾಸ್ಟ್ರಾ ಬೆಟ್ಟಸಾಲುಗಳಲ್ಲಿ ಅವಿತುಕೊಂಡರು. ನಂತರ ನಿರಂತರವಾಗಿ ಅಮೆರಿಕಾದವರ ಉದ್ಯಮ ಕೇಂದ್ರಗಳ ಮೇಲೆ, ಬಟಿಸ್ಟಾನ ಸೇನಾ ಕೇಂದ್ರಗಳ ಮೇಲೆ ಗೆರಿಲ್ಲಾ ಮಾದರಿಯ ದಾಳಿ ನಡೆಸಿದರು. ಈ ದಾಳಿಗಳಿಂದ ಸೇನೆ ತತ್ತರಿಸಿದ್ದರೆ, ಆಡಳಿತಗಾರರು ಆತ್ಮಸ್ಥೈರ್ಯ ಕಳೆದುಕೊಂಡರು. ಇದೇ ಸಂದರ್ಭದಲ್ಲಿ ಆ ದ್ವೀಪದಾದ್ಯಂತ ಮಿಂಚಿನಂತೆ ಸಂಚರಿಸಿದ ಕ್ಯಾಸ್ಟ್ರೊ ಕಾರ್ಮಿಕರು ಮತ್ತು ರೈತರಲ್ಲಿ ಅಮೆರಿಕಾ ಸಾಮ್ರಾಜ್ಯಷಾಹಿಗಳ ವಂಚನೆಯ ಬಗ್ಗೆ ಮಾಹಿತಿ ನೀಡಿದರು. ಸಮಸಮಾಜ ವ್ಯವಸ್ಥೆಯ ಸುಖದ ಕಲ್ಪನೆ ನೀಡಿದರು. ಜನ ಕ್ಯಾಸ್ಟ್ರೊ ಜತೆಗೆ ನಿಂತರು. 1959ರ ಜನವರಿಯ ಅದೊಂದು ದಿನ ಸಾವಿರಾರು ಹೋರಾಟಗಾರರ ಜತೆಯಲ್ಲಿ ರಾಜಧಾನಿಗೆ ಮುತ್ತಿಗೆ ಹಾಕಿದರು. ಸರ್ವಾಧಿಕಾರಿ ಬಟಿಸ್ಟಾ ದೇಶವನ್ನು ತೊರೆದು ಓಡಿದ. ಅವನ ನೂರಾರು ಬೆಂಬಲಿಗರು ಎದುರಿಗೆ ಸಿಕ್ಕಿದ ದೋಣಿಗಳನ್ನು ಏರಿ ಅಮೆರಿಕಾದತ್ತ ಪಲಾಯನ ಮಾಡಿದರು. ನೂರಾರು ಸೈನಿಕರನ್ನು ವಿಮೋಚನಾ ಪಡೆ ಕೊಂದು ಹಾಕಿತು. ಕ್ಯೂಬಾದಲ್ಲಿ ಕಮ್ಯುನಿಸ್ಟ್‌ ಆಡಳಿತ ಬಂದಿತು. ಏಕಪಕ್ಷದ ಆಡಳಿತ ವ್ಯವಸ್ಥೆ ಬಂದಿತು. ಕೆಲವರಲ್ಲೇ ಇದ್ದ ಅಪಾರ ಭೂಮಿಯನ್ನು ಬಡವರಿಗೆ ಹಂಚಲಾಯಿತು. 
 
ಪೆಪ್ಸಿ, ಕೋಕೊಕೋಲಗಳಂತಹ ನೂರಾರು ಉತ್ಪನ್ನಗಳಿಗೆ ಸಮೃದ್ಧ ಮಾರುಕಟ್ಟೆಯಾಗಿದ್ದ ಕ್ಯೂಬಾ ತಮ್ಮ ಕೈತಪ್ಪಿದ್ದರಿಂದ ಅಮೆರಿಕ ಕೋಪೋದ್ರಿಕ್ತಗೊಂಡಿತು. ಕ್ಯಾಸ್ಟ್ರೊ ತಾವು ಅಧಿಕಾರಕ್ಕೇರಿದ ಮರುವರ್ಷವೇ ಕ್ಯೂಬಾದಲ್ಲಿದ್ದ ಅಮೆರಿಕಾದ ಎಲ್ಲಾ ಉದ್ದಿಮೆ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಿದರು. ಆ ದೇಶದ ವಿರುದ್ಧ ಅಮೆರಿಕ ಜಗತ್ತಿನಾದ್ಯಂತ ಜನಾಭಿಪ್ರಾಯ ಮೂಡಿಸಲು ಯತ್ನಿಸಿತು. ಅಂತಹ ಸಂದಿಗ್ಧದಲ್ಲಿ ಸೋವಿಯತ್‌ ಒಕ್ಕೂಟದ ಆಡಳಿತಗಾರರು ಕ್ಯೂಬಾ ಪರ ನಿಂತರು. ಇದರಿಂದಾಗಿ ಆ ಕಾಲಘಟ್ಟದ  ಸೋವಿಯತ್‌ ಒಕ್ಕೂಟ ಮತ್ತು ಅಮೆರಿಕ ನಡುವಣ ಶೀತಲ ಸಮರ ತಾರಕಕ್ಕೆ ಏರಿತು. ಕ್ಯೂಬಾ ಶೀತಲ ಸಮರದ ‘ಯುದ್ಧಭೂಮಿ’ಯಂತೇ ಭಾಸವಾಗತೊಡಗಿತು. ಕ್ಯೂಬಾ ಮೇಲೆ ಅಮೆರಿಕ ಮತ್ತು ಅದರ ಮಿತ್ರದೇಶಗಳು ಆರ್ಥಿಕ ದಿಗ್ಬಂಧನ ಹೇರಿದವು. ತನಗೇ ಸವಾಲಾಗಿ ನಿಂತ ಕ್ಯಾಸ್ಟ್ರೊ ನನ್ನು ಮುಗಿಸಲು ಅಮೆರಿಕ ಅನೇಕ ಸಲ ವಿಫಲ ಯತ್ನ ನಡೆಸಿತು. ಪ್ರತಿಕೂಲ ಸ್ಥಿತಿಯಲ್ಲಿಯೂ ಕ್ಯಾಸ್ಟ್ರೊ ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿದರು. ಜನ ಅವರ ಜತೆಗೆ ನಿಂತರು. ದೇಶ ಕೆಲವೇ ದಶಕಗಳಲ್ಲಿ ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬಂದಿತು. ಒಲಿಂಪಿಕ್ಸ್‌ನಲ್ಲಿಯೂ ಹಲವು ಪದಕಗಳನ್ನು ಗೆದ್ದ ಕ್ಯೂಬಾ ಗಮನ ಸೆಳೆಯಿತು. ಕ್ಯಾಸ್ಟ್ರೊ ಆ ನಾಡಿನ ಜನರ ಕಣ್ಮಣಿಯಾದರು. ಇಡೀ ಜಗತ್ತು ‘ಕ್ಯಾಸ್ಟ್ರೊ ಆಡಳಿತ ಮಾದರಿ’ಯತ್ತ ಮೆಚ್ಚುಗೆಯಿಂದ ನೋಡತೊಡಗಿತು. 
 
ಕ್ಯಾಸ್ಟ್ರೊ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಆಫ್ರಿಕಾ ಖಂಡದ ಅಂಗೋಲ, ಮೊಜಾಂಬಿಕ್‌ಗಳಲ್ಲಿ ಮಾಕ್ಸಿಸ್ಟ್‌ ಆಂದೋಲನಕ್ಕೆ ಬೆನ್ನೆಲುಬಾಗಿ ನಿಂತರು. ಅಲಿಪ್ತ ರಾಷ್ಟ್ರಗಳ ಒಕ್ಕೂಟವನ್ನು ಮುನ್ನಡೆಸಿದರು. ಎಂಬತ್ತರ ದಶಕದ ಆರಂಭದಲ್ಲಿ ಸೋವಿಯತ್‌ ಒಕ್ಕೂಟದ ಆಡಳಿತ ವ್ಯವಸ್ಥೆ ಬದಲಾದ ಮೇಲೆ ಏಕಾಂಗಿಯಾದ ಕ್ಯೂಬಾವನ್ನು ಮತ್ತೆ ಪ್ರಬಲವಾಗಿ ಎದ್ದು ನಿಲ್ಲುವಂತೆ ಮಾಡಿದ ಹೆಗ್ಗಳಿಕೆ ಕೂಡಾ ಕ್ಯಾಸ್ಟ್ರೊ ಅವರದಾಗಿದೆ.
 
ಕಳೆದ ಶತಮಾನದ ಐವತ್ತರ ದಶಕದಿಂದ ಅಮೆರಿಕಾದ ಹತ್ತು ಮಂದಿ ಅಧ್ಯಕ್ಷರೊಡನೆ ಸಂಘರ್ಷ ನಡೆಸಿದ ಕ್ಯಾಸ್ಟ್ರೊ ಛಲ ಮತ್ತು ರಾಜತಾಂತ್ರಿಕ ಗಟ್ಟಿತನ ಅನನ್ಯ. ಇವರು 2006ರಲ್ಲಿ ತೀವ್ರ ಅಸ್ವಸ್ಥರಾಗಿದ್ದರು. ಹೀಗಾಗಿ ಇವರ ತಮ್ಮ ರಾಲ್‌ ಕ್ಯಾಸ್ಟ್ರೊ ಆಡಳಿತದ ಚುಕ್ಕಾಣಿ ಹಿಡಿದರು. ರಾಲ್‌ ಕೂಡಾ 1950ರಿಂದಲೇ ಆ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 
 
ಒಂದು ದಶಕದಿಂದ ತಮ್ಮ ಪಾಡಿಗೆ ತಾವಿದ್ದ ಫಿಡೆಲ್‌ ಕ್ಯಾಸ್ಟ್ರೊ ಅವರು ಕೆಲವು ಸಮಯದ ಹಿಂದಷ್ಟೇ ಮೌನ ಮುರಿದಿದ್ದರು. ‘ಇರಾನ್‌ ಮತ್ತು ಉತ್ತರ ಕೊರಿಯಾದ ವಿರುದ್ಧ ಅಮೆರಿಕಾ ತನ್ನ ಆಕ್ರಮಣಕಾರಿ ಧೋರಣೆಯನ್ನು ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಮುಂದೊಂದು ದಿನ ಬಲು ದೊಡ್ಡ ಅಣುಯುದ್ಧದ ಅನಾಹುತವನ್ನು ನೋಡಬೇಕಾಗುತ್ತದೆ’ ಎಂಬುದಾಗಿ ಅವರು ಅಮೆರಿಕಾಕ್ಕೆ ಎಚ್ಚರಿಕೆ ನೀಡಿದ್ದರು.
 
ಈಗ ಕ್ಯೂಬಾ ಜಗತ್ತಿನ ಕೆಲವು ಶಕ್ತಿಶಾಲಿ ದೇಶಗಳಲ್ಲಿ ಒಂದಾಗಿದೆ. ಪೋಪ್‌ ಜಾನ್‌ ಪಾಲ್‌ ಅವರೂ ಅಲ್ಲಿಗೆ ಭೇಟಿ ಕೊಟ್ಟಿದ್ದರೆ, ವರ್ಷದ ಹಿಂದೆ ಅಮೆರಿಕಾ ಅಧ್ಯಕ್ಷ ಬರಾಕ್‌ ಒಬಾಮ ಅವರೂ ಹವಾನಾ ನಗರಕ್ಕೆ ಭೇಟಿ ನೀಡಿದ್ದರು. ಒಬಾಮಾ ಅವರು ಕ್ಯಾಸ್ಟ್ರೊ ಅವರ ಎದುರು ಕುಳಿತು ಹಲವು ನಿಮಿಷಗಳ ಕಾಲ ಹರಟಿದ್ದರು. ಇಂತಹ ರಾಜತಾಂತ್ರಿಕ ‘ಪವಾಡ’ಗಳು ನಡೆಯುತ್ತವೆ ಎಂದು ಕೇವಲ ದಶಕದ ಹಿಂದೆ ಯಾರೂ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.
 
**
ಭಾರತದಲ್ಲಿ ಕ್ಯಾಸ್ಟ್ರೊ
1983ರ ಮಾರ್ಚ್‌:  ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಒಕ್ಕೂಟದ ಶೃಂಗಸಭೆಯಲ್ಲಿ ಫಿಡೆಲ್ ಕ್ಯಾಸ್ಟ್ರೊ ಭಾಗವಹಿಸಿದ್ದರು. 1979ರ ಶೃಂಗಸಭೆ ಕ್ಯೂಬಾದ ಹವಾನಾದಲ್ಲಿ ನಡೆದಿತ್ತು. ಅದರ ಅಧ್ಯಕ್ಷತೆಯನ್ನು ಕ್ಯಾಸ್ಟ್ರೊ ವಹಿಸಿಕೊಂಡಿದ್ದರು. 1983ರ ಶೃಂಗಸಭೆಯ ಅಧ್ಯಕ್ಷತೆಯನ್ನು ಅವರು ಇಂದಿರಾ ಗಾಂಧಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ, ‘ಅಧ್ಯಕ್ಷತೆಯನ್ನು ನನ್ನ ಸೋದರಿಗೆ ಹಸ್ತಾಂತರಿಸಲು ನನಗೆ ಹೆಮ್ಮೆಯಾಗುತ್ತಿದೆ’ ಎಂದು ಅವರು ಹೇಳಿದ್ದರು. ಈ ವೇಳೆ ಇಂದಿರಾ ಅವರನ್ನು ಕ್ಯಾಸ್ಟ್ರೊ ಅಪ್ಪಿಕೊಂಡದ್ದು ಹೆಚ್ಚು ಸುದ್ದಿ ಮಾಡಿತ್ತು.
 
ಕ್ಯಾಸ್ಟ್ರೊ ಮತ್ತು ಇಂದಿರಾ ಗಾಂಧಿ ನಡುವಿನ ಸಂಬಂಧ ಉತ್ತಮವಾಗಿತ್ತು. ರಾಜಕಾರಣದ ವಿಚಾರದಲ್ಲಿ ರಾಜೀವ್ ಗಾಂಧಿ ಅವರಿಗೆ ಕಿವಿಮಾತು ಹೇಳುವಂತೆ  ಅವರು ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ಅವರಿಗೆ ತಿಳಿಸಿದ್ದರು. ಈ ಬಗ್ಗೆ ಆಳ್ವ ಅವರು ತಮ್ಮ ಪುಸ್ತಕವೊಂದರಲ್ಲಿ, ‘ನಾನು, ರಾಜೀವ್ ಗಾಂಧಿ ತಾಯಿಯ  (ಇಂದಿರಾ ಗಾಂಧಿ) ಸ್ನೇಹಿತನಾಗಿದ್ದೆ.  ಅವರು ಮಹಾನ್ ನಾಯಕಿ, ಮಹಾನ್ ಮಹಿಳೆ. ರಾಜೀವ್ ಆಕೆಯ ಮಾರ್ಗದಲ್ಲೇ ನಡೆಯಲಿ. ಆದರೆ ರಾಜೀವ್, ಅವರ ಹಣಕಾಸು ಸಚಿವನನ್ನು (ವಿ.ಪಿ.ಸಿಂಗ್) ಮಾತ್ರ ನಂಬಬಾರದು, ಅವನು ಅಪಾಯಕಾರಿ ಮನುಷ್ಯ. ಅವರ ವಿರುದ್ಧ ಅವನು ಸಂಚು ನಡೆಸುತ್ತಿದ್ದಾನೆ. ಒಂದು ದಿನ ಬೆನ್ನಿಗೆ ಚೂರಿ ಹಾಕುತ್ತಾನೆ. ಎಚ್ಚರದಿಂದ ಇರುವಂತೆ ರಾಜೀವ್‌ಗೆ ತಿಳಿಸು’ ಎಂದು ಬರೆದಿದ್ದಾರೆ.
 
**
ಚೆ  ಗುವೆರಾ ಜೊತೆ...
ಅರ್ಜೆಂಟಿನಾದ ಮಾರ್ಕ್ಸ್‌ವಾದಿ ಕ್ರಾಂತಿಕಾರಿ ಅರ್ನೆಸ್ಟೊ ಚೆ ಗುವೆರಾ ಮತ್ತು ಕ್ಯಾಸ್ಟ್ರೊ ನಡುವೆ ಉತ್ತಮ ಸ್ನೇಹವಿತ್ತು. ಕ್ಯಾಸ್ಟ್ರೊ ನಡೆಸಿದ್ದ ಹಲವು ದಾಳಿಗಳಲ್ಲಿ ಚೆ ಗುವೆರಾ ಭಾಗಿಯಾಗಿದ್ದರು. ಇಬ್ಬರೂ ಸಮಾಲೋಚನೆ ನಡೆಸುವಾಗ ಕ್ಯಾಸ್ಟ್ರೊ ಸಿಗಾರ್‌ ಸೇದುತ್ತಿರುವ ಚಿತ್ರ.
 
**
ಕೋಲ್ಕತ್ತಾದಲ್ಲಿ ಶನಿವಾರ ನಡೆದ ಮೆರವಣಿಗೆಯಲ್ಲಿ ಫಿಡೆಲ್ ಕ್ಯಾಸ್ಟ್ರೊ ಅವರ ಚಿತ್ರ ಹಿಡಿದಿದ್ದ ಯುವತಿ
 
**
ನುಗ್ಗೆಕಾಯಿ ಮೆಚ್ಚಿಕೊಂಡಿದ್ದ ಕ್ಯಾಸ್ಟ್ರೊ

ನವದೆಹಲಿ: ಕ್ಯೂಬಾ ರಾಜಧಾನಿ ಹವಾನಾದ ಹೊರವಲಯದಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಫಿಡೆಲ್ ಕ್ಯಾಸ್ಟ್ರೊ ಅವರು ಹಲವು ನುಗ್ಗೆ ಮರಗಳನ್ನು ಬೆಳೆಸಿದ್ದರು. ಅವೆಲ್ಲವೂ ಕೇರಳ ಮತ್ತು ತಮಿಳುನಾಡಿನಿಂದ ಕೊಂಡೊಯ್ಯಲಾಗಿದ್ದ ಬೀಜಗಳಿಂದ ಬೆಳೆಸಿದ ಮರಗಳು.

ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಕ್ಯಾಸ್ಟ್ರೊ ಅವರಿಗೆ ‘ನಿಯಮಿತವಾಗಿ ನುಗ್ಗೆ ಕಾಯಿ ಮತ್ತು ನುಗ್ಗೆ ಸೊಪ್ಪು  ತಿನ್ನಿ’ ಎಂದು ಅವರ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯನ್ನು ಪಾಲಿಸಿದ ನಂತರ ಕ್ಯಾಸ್ಟ್ರೊ ಬಹುಬೇಗನೆ ಚೇತರಿಸಿಕೊಂಡಿದ್ದರು. ಆನಂತರ ಅವರು ನುಗ್ಗೆ ಮರಗಳನ್ನು ಬೆಳೆಸುವಂತೆ ಕ್ಯೂಬಾದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ನುಗ್ಗೆಕಾಯಿ ವಿಚಾರ  ಕ್ಯೂಬಾದ ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿತ್ತು.

ನುಗ್ಗೆಕಾಯಿ ಕುರಿತು ಕ್ಯಾಸ್ಟ್ರೊ ಅವರು, ‘ಇದು ಮೂಲತಃ ಭಾರತದ ಸಸಿ. ಸರಿಯಾಗಿ ಆರೈಕೆ ಮಾಡಿದರೆ ಒಂದು ಹೆಕ್ಟೇರ್‌ನಲ್ಲಿ ವಾರ್ಷಿಕ 300 ಟನ್‌ನಷ್ಟು ಸೊಪ್ಪು ಬೆಳೆಯಬಹುದು. ಇದರ ಸೊಪ್ಪು, ಕಾಯಿ ಎಲ್ಲದರಲ್ಲೂ ಔಷಧೀಯ ಗುಣಗಳಿವೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ  ಇದು ಸಹಕಾರಿ. ಆದರೆ ಪ್ರತಿದಿನ 30 ಗ್ರಾಂಗಳಿಗಿಂತ ಹೆಚ್ಚು ಸೇವಿಸಬಾರದು. ಕೆಲವರು ಇನ್ನೂ ಹೆಚ್ಚು ಸೇವಿಸಿ ಜೀರ್ಣಿಸಿಕೊಳ್ಳುವಲ್ಲಿ ಶಕ್ತರಾಗಿರುತ್ತಾರೆ’ ಎಂದು ಲೇಖನದಲ್ಲಿ ವಿವರಿಸಿದ್ದಾರೆ.

ಒಮ್ಮೆ ಅವರು ಕ್ಯೂಬಾದ ಕೃಷಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಿಗೆ ಕರೆ ಮಾಡಿ, ‘ನೀವೆಲ್ಲಾ ಭಾರತಕ್ಕೆ ತೆರಳಿ, ಅಲ್ಲಿ ನುಗ್ಗೆಯನ್ನು ಹೇಗೆ ಬೆಳೆಯುತ್ತಾರೆ ಎಂಬುದನ್ನು ಅಧ್ಯಯನ ಮಾಡಿ. ನಂತರ ಅಲ್ಲಿಂದ ನುಗ್ಗೆ ಬೀಜಗಳನ್ನು ತನ್ನಿ’ ಎಂದು ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕ್ಯಾಸ್ಟ್ರೊ ಅವರ ಕ್ರಾಂತಿಕಾರಿ ಸ್ನೇಹಿತ ಚೆ ಗುವೆರಾ ಅವರು 1960ರಲ್ಲೇ ಬ್ರೆಜಿಲ್‌ನಿಂದ ಕ್ಯೂಬಾಗೆ ನುಗ್ಗೆ ಬೀಜಗಳನ್ನು ತಂದಿದ್ದರು. ಹವಾನಾ ಬಳಿಯ ಸಣ್ಣ ಜಮೀನಿನಲ್ಲಿ ಆ ಬೀಜಗಳ ಮೂಲಕ ಮರಗಳನ್ನು ಬೆಳೆಸಲಾಗಿತ್ತಾದರೂ, ಅವು ಅಷ್ಟಕ್ಕೇ ಸೀಮಿತವಾಗಿತ್ತು ಎಂದು ಮೂಲಗಳು ತಿಳಿಸಿವೆ.

 
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT