7

ಅರಿಮಾ ಎಂಬ ‘ಸಮೂಹ ಸ್ನಾನ’ದ ಮನೆ

Published:
Updated:
ಅರಿಮಾ ಎಂಬ ‘ಸಮೂಹ ಸ್ನಾನ’ದ ಮನೆ

‘ಜಪಾನ್’ಗೆ ಹೊರಡುವುದೆಂದಾಗ ಮೊದಲು ನೆನಪಾದದ್ದು ಅಲ್ಲಿನ ಸಂಸ್ಕೃತಿಯ ಬಗೆಗಿನ ‘Memoirs of a Geisha’ ಎಂಬ ಸುಪ್ರಸಿದ್ಧ ಕಾದಂಬರಿ. ಅದರಲ್ಲಿ ಬರುವ ‘ಗೆಯಿಷ್ಯಾ’ಗಳ ಅಲಂಕಾರ, ಸ್ನಾನ, ಕೇಶಾಲಂಕಾರದ ವಿವರಗಳು. ಜಪಾನ್‌ನಲ್ಲಿ ಗೆಳತಿ ಹಶಿನಾವೋರನ್ನು ಕೇಳಿದ್ದೆ – ‘ಈಗಲೂ ಇಲ್ಲಿ ‘ಸ್ನಾನ’ ಪದ್ಧತಿ ಮೊದಲಿನಂತೆಯೇ ಇದೆಯೇ?’ ಎಂದು. ಅದಕ್ಕೆ ಅವರು ಹೇಳಿದ್ದು – ‘ಓ, ಸ್ನಾನದ ಮನೆ ನೋಡಬೇಕೆಂದರೆ ನೀನು ಹೋಗಬೇಕಾದ್ದು ಅರಿಮಾ ಒನ್‌ಸೆನ್‌ಗೆ!’. ಏನಿದು ಅರಿಮಾ ಒನ್‌ಸೆನ್?

ಅರಿಮಾ ಒನ್‌ಸೆನ್ ಜಪಾನಿನ ಅತಿ ಪುರಾತನ ಮತ್ತು ಮುಖ್ಯ ‘ಸ್ಪಾ’ ಪಟ್ಟಣಗಳಲ್ಲಿ ಒಂದು. ಐತಿಹಾಸಿಕ ಪುಸ್ತಕಗಳಲ್ಲಿ ದಾಖಲಾಗಿರುವ ಇದು 1300 ವರ್ಷಗಳಷ್ಟು ಹಳೆಯದು. ಜೊಮೆಯ್ ಎಂಬ ಚಕ್ರವರ್ತಿ ಇಲ್ಲಿನ ಬಿಸಿನೀರ ಬುಗ್ಗೆಗಳಲ್ಲಿ ಸ್ನಾನ ಮಾಡಿದನಂತೆ. ಅದಕ್ಕೇ ಇದು ‘ಚಕ್ರವರ್ತಿಯ ರಾಜ ಪರಿವಾರದ ಬಿಸಿನೀರ ಬುಗ್ಗೆ’ ಎಂದು ಹೆಸರಾಯಿತು.ಬಿಸಿನೀರ ಬುಗ್ಗೆಗಳನ್ನು ಭಾರತದಲ್ಲಿಯೂ ಹಲವೆಡೆ ನೋಡಿದ್ದೆ. ‘ತಾತಾಪಾನಿ’, ಮಸ್ಸೂರಿಯ ಹತ್ತಿರದ ‘ಸಹಸ್ರಧಾರಾ’ಗಳಲ್ಲಿ – ಹಿಮದ ನಡುವೆ ಬಿಸಿನೀರ ಬುಗ್ಗೆಗಳಲ್ಲಿ ಸ್ನಾನ ಮಾಡಿ ಆನಂದಿಸಿದ್ದೆ. ಆದರೆ ‘ಅರಿಮಾ’ ದ ಬಿಸಿನೀರ ಬುಗ್ಗೆಗಳು ಪ್ರಾಕೃತಿಕವಾಗಿ ಹೇಗೆ ಒಂದು ಅದ್ಭುತವೋ, ಹಾಗೆಯೇ ಜಪಾನೀಯರ ಕಲೆಗಾರಿಕೆ ಮತ್ತು ಶಿಸ್ತಿನಿಂದ ಸ್ನಾನದ ಮನೆಗಳಾಗಿ ಕಲಾತ್ಮಕವಾಗಿ ರೂಪುಗೊಂಡಿರುವುದೂ ನಮಗೆ (ಭಾರತೀಯರಿಗೆ) ಅದ್ಭುತವೇ ಎನಿಸಿದ್ದು ಸುಳ್ಳಲ್ಲ.ಜಪಾನೀಯರು ಶಿಸ್ತಿನ ಜನರಾದರೂ ಒಂದು ತರಹದ ‘ಮಗು’ ಮನಸ್ಸಿನವರು. ಅಥವಾ ಮುಖ ಚಹರೆ, ಸಣ್ಣ ಕಣ್ಣುಗಳು, ಪುಟ್ಟ ಆಕೃತಿಗಳಿಂದ ಹಾಗನಿಸುತ್ತಾರೆಯೋ ಗೊತ್ತಿಲ್ಲ! ನಮಗೆ ‘ಸಾದಾ’ ಎನಿಸುವ ಬದುಕಿನ ಪ್ರತಿಯೊಂದು ಕೆಲಸವನ್ನೂ ಇವರು ಒಂದು ಕಲೆಯ ಕಸುಬೇ ಆಗಿ ಪರಿವರ್ತಿಸುವಲ್ಲಿ ನಿಪುಣರು.

ಉದಾಹರಣೆಗೆ ‘ಹೂ’ ಕಂಡರೆ ಮುಡಿಯುತ್ತೇವೆ, ದೇವರಿಗೇರಿಸುತ್ತೇವೆ, ಇನ್ನೂ ಸ್ವಲ್ಪ ಯೋಚಿಸಿ ಮಾಡುವುದಾದರೆ ಗಿಡದಲ್ಲಿ ಹಾಗೇ ಬಿಡುತ್ತೇವೆ, ಇಲ್ಲವೇ ಕಲಾತ್ಮಕವಾಗಿ ಜೋಡಿಸಿ ಬೇರೆಯವರಿಗೆ ಚಂದ ಕಾಣಲಿ ಎನ್ನುತ್ತೇವೆ. ಆದರೆ ಈ ಜಪಾನೀಯರು ಅದನ್ನೇ ‘ಇಕೆಬಾನ’ ಎಂಬ ಕಲೆ ಮಾಡಿ, ಅದರ ತರಗತಿ ನಡೆಸುತ್ತಾರೆ. ‘ಟೀ ಸೆರೆಮನಿ’ಯಲ್ಲಿ ಚಹಾ ಮಾಡುವುದನ್ನೆ ಗಂಟೆಗಟ್ಟಲೆ ಮಾಡಿ, ಅದರಲ್ಲಿಯೂ ಹಂತಗಳನ್ನು ಮಾಡಿ ಸಂತೋಷ ಪಡುತ್ತಾರೆ. ಹೀಗೆಯೇ ಜಪಾನೀಯರ ‘ಸ್ನಾನ’ ದ ಪರಿಕಲ್ಪನೆ ಕೂಡ.ಸ್ನಾನವನ್ನು ನಿಧಾನವಾಗಿ, ಸಮೂಹವಾಗಿ ಸವಿಯುವ ಪದ್ಧತಿ ಜಪಾನೀಯರಲ್ಲಿ ಮೊದಲಿನಿಂದಲೂ ಇದೆ. ಅದಕ್ಕೆ ಸರಿಯಾಗಿ ಜ್ವಾಲಾಮುಖಿಗಳ ಈ ನಾಡಿನಲ್ಲಿ ಬಿಸಿನೀರ ಬುಗ್ಗೆಗಳಿಗೆ ಬರವೂ ಇಲ್ಲ.‘ಅರಿಮಾ’ ಪಟ್ಟಣದಲ್ಲಿ (ಇದನ್ನು ನಿಜವಾಗಿ ಒಂದು ಮುಂದುವರಿದ ಹಳ್ಳಿ ಎನ್ನಬಹುದೇನೋ!) ಕಾಲಿಟ್ಟ ತಕ್ಷಣ ಎಲ್ಲೆಡೆ ನಡೆದಾಡೇ ತಿರುಗಬೇಕು. ವಾಹನಗಳಿಗೆ ಪ್ರವೇಶವೇ ಇಲ್ಲ. ಅರಿಮಾ ಹೊಕ್ಕ ತಕ್ಷಣ ದೊಡ್ಡದೊಂದು ಸೇತುವೆ, ಅದರ ಪಕ್ಕದಲ್ಲಿ ಪ್ರಾಕೃತಿಕವಾಗಿ ಉಂಟಾದ ಬಂಡೆಗಲ್ಲುಗಳಲ್ಲಿ ಕಲಾತ್ಮಕ ಆಕೃತಿಗಳು ಗಮನಸೆಳೆಯುತ್ತವೆ.ಅರಿಮಾದಲ್ಲಿ ಎರಡು ಸ್ನಾನದ ಮನೆಗಳಿವೆ. ‘ಕಿನ್ ನೋ ಯು’ ಮತ್ತು ‘ಜಿನ್ ನೋ ಯು’. ಕಿನ್ ನೋ ಯು ನ ಹೊರಗೆ ಕುಡಿಯುವ  ನೀರಿನ ನಲ್ಲಿ ಇತ್ತು. ಇದರಲ್ಲಿ ಬರುವ ನೀರು ಬುಗ್ಗೆಗಳಿಂದ ಬರುವ ನೈಸರ್ಗಿಕವಾಗಿ ಅತಿ ಶುದ್ಧವಾದ ಖನಿಜಯುಕ್ತ ನೀರು. ‘ಇದನ್ನು ಕುಡಿಯಬಹುದೇ’ ಎಂದು ಕೇಳಿದ್ದಕ್ಕೆ ಬಂದ ಉತ್ತರ – ‘ನಿಮ್ಮ ಕೈಲಿರುವ ಮಿನರಲ್ ವಾಟರ್ ಬಾಟಲಿಗಿಂತ ಒಳ್ಳೆಯದು ಇದು!’.

ನೀರು ‘ಉಚಿತ’ವಾಗಿ ಸಿಕ್ಕುವ ಅಪರೂಪದ ಅವಕಾಶ ಎಂದುಕೊಂಡು ನಾವೂ ನೀರಿನ ‘ಸವಿ’ ನೋಡಿದೆವು. ಇದಾದ ನಂತರ, ಪಕ್ಕದಲ್ಲೇ ಬಂಡೆಕಲ್ಲುಗಳಿಂದ ಅಚ್ಚುಕಟ್ಟಾಗಿ ಕಟ್ಟೆ ನಿರ್ಮಿಸಿ, ಕುಳಿತುಕೊಂಡು ‘ಪಾದಸ್ನಾನ’ (foot bath) ಮಾಡುವ ವ್ಯವಸ್ಥೆ, ಅದೂ ಉಚಿತವಾಗಿ! ಜಪಾನೀಯರಿಗೆ ‘ಸಮೂಹ ಸ್ನಾನ’ ಮಾಡುವ ಅಭ್ಯಾಸ ಮೊದಲಿನಿಂದ ಉಂಟಷ್ಟೆ.

ಆದರೆ ಪ್ರವಾಸಿಗರಿಗೆ ಹಾಗೆ ಮಾಡಲು ಮುಜುಗರ ಉಂಟಾದರೆ, ‘ಫೂಟ್‌ಬಾತ್’ ಮಾಡಿ ಆನಂದಿಸಲಿ ಎಂಬ ಭಾವದಿಂದ ಈ ‘ಪಾದಸ್ನಾನ’ದ ಸವಲತ್ತು. ಇಲ್ಲಿ ಕುಳಿತು ಪಾದವನ್ನು ಕೆಳಗೆ ಇಳಿಬಿಟ್ಟರೆ – ಒರಟು ಒರಟಾದ ಬೆಣಚುಕಲ್ಲುಗಳು, ಹರಿಯುವ ಬಿಸಿನೀರು, ಒಟ್ಟಿಗೇ ಹಲವರು ಕಾಲಿಟ್ಟು ಕುಳಿತರೂ ಸ್ವಚ್ಛವಾಗಿಯೇ ಇರುವ ನೀರು. ನನ್ನೊಡನೆ ಇದ್ದ ಇತರ ಭಾರತೀಯರಿಗೆ ‘ಸ್ನಾನ’ಕ್ಕಾಗಿ ‘ಬಾತ್ ಹೌಸ್’ ಒಳಗೆ ಹೋಗಲು ಮುಜುಗರವೋ ಮುಜುಗರ. ಸಂಸ್ಕೃತಿಯಲ್ಲಿ ಎಷ್ಟು ವ್ಯತ್ಯಾಸ! ನಮಗೋ ಸ್ನಾನ ಒಂದು ‘ಖಾಸಗಿ’ ಕ್ರಿಯೆ. ಜಪಾನೀಯರಿಗೆ ಅದೊಂದು ‘ಸಾಮಾಜಿಕ ಸಂಭ್ರಮ’! ನೋಡಿಯೇ ಬರೋಣ, ‘ಹೇಗಿರುತ್ತದೆ?’ ಎಂದು ‘ಸ್ನಾನದ ಮನೆ’ಯ ರಿಸೆಪ್ಷನ್ ಹೊಕ್ಕೆವು. ಅಲ್ಲಿ ‘ಒನ್‌ಸೆನ್’ ಬಗ್ಗೆ ಮಾಹಿತಿಯ ಮಹಾಪೂರ.ಅರಿಮಾದಲ್ಲಿ ‘ಕಿನ್‌ಸೆನ್’ ಮತ್ತು ‘ಜಿನ್‌ಸೆನ್’ ಎನ್ನುವ ಬುಗ್ಗೆಗಳಿವೆ. ಕಿನ್‌ಸೆನ್‌ನಲ್ಲಿ ಕಬ್ಬಿಣ ಮತ್ತು ಉಪ್ಪಿನ ಅಂಶಗಳು ಇರುತ್ತವೆ. ಹೊರಗಿನ ಗಾಳಿ ಮತ್ತು ಕಬ್ಬಿಣದ ನಡುವಿನ ರಾಸಾಯನಿಕ ಪ್ರತಿಕ್ರಿಯೆ ಈ ಬಿಸಿನೀರ ಬುಗ್ಗೆಗೆ ‘ಬಂಗಾರ’ದಂತಹ ಕೆಂಪುಮಿಶ್ರಿತ ಕಂದು ಬಣ್ಣ ನೀಡುತ್ತದೆ. (ಕಿನ್ ಎಂದರೆ ಜಪಾನ್‌ನ ಭಾಷೆಯಲ್ಲಿ ‘ಬಂಗಾರ’ ಎಂದರ್ಥ). ಈ ನೀರು ‘ಅರ್ಥ್ರೈಟಿಸ್’ ಮತ್ತು ನರರೋಗಗಳು ಪರಿಹರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳೂ ಇವೆ. ಚರ್ಮವನ್ನು ಕಾಂತಿಯುಕ್ತವಾಗಿಡಲೂ ಇಲ್ಲಿನ ಸ್ನಾನ ಸಹಾಯಕ ಎನ್ನಲಾಗುತ್ತದೆ. ‘ಜಿನ್‌ಸೆನ್’ ಬಣ್ಣವಿಲ್ಲದ ‘ಕಾರ್ಬಾನಿಕ್’ ಬುಗ್ಗೆಗಳು.

ಈ ನೀರು ರಕ್ತಚಲನೆಗೆ, ಜೀರ್ಣಕ್ರಿಯೆಗೆ, ಊತ ಇಳಿಯಲು ಸಹಾಯಕ. ಇದರಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಇರುವ ‘ರೇಡಿಯಂ’ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ. ಇದೆಲ್ಲಾ ಮಾಹಿತಿ ತಿಳಿದಾಗ ಜಪಾನೀಯರು ‘ಆರೋಗ್ಯ’ದ ಒಂದು ಆಚರಣೆಯಾಗಿಯೂ ಈ ‘ಸ್ನಾನ’ದ ಪದ್ಧತಿ ಮಾಡಿದ್ದಾರೆ ಎನಿಸಿತು.

ಪುರುಷರ–ಮಹಿಳೆಯರ ವಿಭಾಗಗಳು ಬೇರೆ ಬೇರೆ ಇವೆ. ಸ್ನಾನದ ಮನೆಯ ‘ಫೀಸ್’ ಕೊಡಬೇಕು. ಒಂದು ದೊಡ್ಡ ಟವೆಲ್ ಉಚಿತ. ನಾವು ಭಾರತೀಯರೆಲ್ಲ ದೊಡ್ಡ ಟವೆಲನ್ನೇ ನೀಟಾಗಿ ‘ಎಲ್ಲವೂ’ ಕವರ್ ಆಗುವಂತೆ ಸುತ್ತಿಕೊಂಡುಬಿಟ್ಟೆವು! ಒಳಗೆ ಹೋದರೆ ನಮ್ಮನ್ನು ಬಿಟ್ಟರೆ ಉಳಿದವರಲ್ಲಿ ಅರ್ಧ ಜಪಾನೀಯರು, ಇನ್ನು ಮಿಕ್ಕವರು ಪಾಶ್ಚಾತ್ಯ ಜಗತ್ತಿನ ವಿವಿಧ ಜನ. ಯಾರಿಗೂ ಮತ್ತೊಬ್ಬರ ಬಗ್ಗೆ ಕುತೂಹಲವಾಗಲೀ ಅಚ್ಚರಿಯಾಗಲೀ ಇಲ್ಲ!  ಬುಗ್ಗೆಗಳ ಸುತ್ತ ಸಣ್ಣ ಸಣ್ಣ ಕ್ಯೂಬಿಕಲ್‌ಗಳು. ಅಲ್ಲಲ್ಲೇ ಮಾಡಿಟ್ಟಿರುವ ಹ್ಯಾಂಡ್ ಶವರ್‌ಗಳು.

ಸೋಪ್–ಶ್ಯಾಂಪೂ, ಸ್ನಾನದ ಕೊಳೆ ಹರಿದು ಹೋಗಲು ಅಚ್ಚುಕಟ್ಟಾದ ಶಿಸ್ತು. ಬಿ.ಜಿ.ಎಲ್. ಸ್ವಾಮಿಯವರ ‘ಅಮೇರಿಕದಲ್ಲಿ ನಾನು’ ಪುಸ್ತಕದಲ್ಲಿ ಬರುವ ಹಡಗಿನ ‘ಓಪನ್ ಕಮೋಡ್‌ಗಳ’ ವ್ಯವಸ್ಥೆಯಲ್ಲಿ ಭಾರತೀಯರ ಪರದಾಟ, ಇತರರು ‘ಆರಾಮ’ ನೆನಪಾಯ್ತು. ‘ಜಿನ್‌ಸೆನ್’, ‘ಕಿನ್‌ಸೆನ್’ ಎರಡರಲ್ಲೂ ಸಂಕೋಚದಿಂದ ಮೈಮುಚ್ಚಿಕೊಳ್ಳುತ್ತಲೇ ಸ್ನಾನ ಮಾಡಿದೆವು. ದೇವಸ್ಥಾನದ ಕೊಳ–ನದಿಗಳಲ್ಲಿ ನಮ್ಮ ಮಹಿಳೆಯರು ಸೀರೆ ಉಟ್ಟುಕೊಂಡೇ ಮುಳುಗು ಹಾಕುವುದು ನೆನಪಾಯಿತು.‘ಒನ್‌ಸೆನ್’ಗಳ ನೀರಿರುವ ಸ್ಮರಣಿಕೆಗಳೂ ಹಾಗೂ ‘ಬಾತ್ ಸಾಲ್ಟ್’ಗಳು ಇಲ್ಲಿ ಕೊಳ್ಳಲು ಲಭ್ಯ. ಈ ‘ಬಾತ್ ಸಾಲ್ಟ್’ ಹಾಕಿ ಉಜ್ಜಿದರೆ ಕಾಲು ಮೃದುವಾಗುತ್ತದೆ.ಮತ್ತೆ ರೈಲು ಏರಿದಾಗ ಹಶಿನಾವೋ ಕೇಳಿದ್ದರು – ‘ಹೇಗಿತ್ತು ಜಪಾನೀ ಸ್ನಾನ?’. ಅದ್ಭುತ, ಮುಜುಗರ, ಆರೋಗ್ಯಕರ – ಏನು ಹೇಳಬೇಕೆಂದು ತಿಳಿಯದೆ ನಕ್ಕು ‘ಅದಿಗಾ ತೋ ಮಸೈಮಾಸ್’  (ಧನ್ಯವಾದಗಳು)ಎಂದಷ್ಟೇ ಹೇಳಿದ್ದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry