7

‘ಅಭಿವೃದ್ಧಿ’ ಯಜ್ಞಕ್ಕೆ ಆದಿವಾಸಿಗಳ ಆಹುತಿ

ಡಿ. ಉಮಾಪತಿ
Published:
Updated:
‘ಅಭಿವೃದ್ಧಿ’ ಯಜ್ಞಕ್ಕೆ ಆದಿವಾಸಿಗಳ ಆಹುತಿ

ಮಧ್ಯ ಭಾರತದ ಆದಿವಾಸಿ ಸೀಮೆಗಳು ಸಿಡಿದೆದ್ದಿವೆ. ದಶದಿಕ್ಕುಗಳಿಂದ ತಮ್ಮ ಮೇಲೆ ನಡೆದಿರುವ ದಾಳಿಗಳ ನಡುವೆ ಉಸಿರು ಹಿಡಿದಿರುವ ಆದಿವಾಸಿಗಳ ಮೇಲೆ ಜಾರ್ಖಂಡ್‌ ಸರ್ಕಾರ ಮತ್ತೊಂದು ಮಾರಕ ಪ್ರಹಾರ ಮಾಡಿದೆ. ಅವರ ಜಮೀನನ್ನು ಆದಿವಾಸಿಗಳಲ್ಲದವರಿಗೆ ಪರಭಾರೆ ಮಾಡುವುದನ್ನು ನಿಷೇಧಿಸಿದ್ದ ಛೋಟಾ ನಾಗಪುರ ಗೇಣಿ ಕಾಯಿದೆಗೆ ತಿದ್ದುಪಡಿ ತಂದಿದೆ. ಬಿರ್ಸಾ ಮುಂಡಾನಂತಹ ಎಣೆಯಿಲ್ಲದ ಬಂಡುಕೋರ ಆದಿವಾಸಿ ನಾಯಕನಿಗೆ ಮಣಿದು ಬ್ರಿಟಿಷ್ ಸರ್ಕಾರ 1908ರಲ್ಲಿ ಆದಿವಾಸಿಗಳಿಗೆ ನೀಡಿದ್ದ ಈ ವರವನ್ನು ಸ್ವತಂತ್ರ ಭಾರತ ಕಿತ್ತುಕೊಂಡಿದೆ. 1949ರ ಸಂತಾಲ್ ಪರಗಣ ಕಾಯಿದೆಗೂ ಇಂತಹುದೇ ತಿದ್ದುಪಡಿ ತರಲಾಗಿದೆ.

ರಘುಬರದಾಸ್ ನೇತೃತ್ವದ ಸರ್ಕಾರ ಖಾಸಗಿ ಬಂಡವಾಳಗಾರರಿಗೆ, ಕಾರ್ಪೊರೇಟುಗಳಿಗೆ ಹಾಸಿರುವ ನಡೆಮುಡಿಯಿದು ಎಂಬ ವ್ಯಾಪಕ ಟೀಕೆಗಳು ಆದಿವಾಸಿ ಸಂಘಟನೆಗಳು ಮತ್ತು ಪ್ರತಿಪಕ್ಷಗಳ ಪ್ರತಿಭಟನೆಗೆ ದಾರಿ ಮಾಡಿವೆ. ಸರ್ಕಾರದ ಮಿತ್ರ ಪಕ್ಷವಾಗಿರುವ ಆಲ್ ಜಾರ್ಖಂಡ್‌ ಸ್ಟೂಡೆಂಟ್ಸ್ ಅಸೋಸಿಯೇಷನ್ ಕೂಡ ವಿರೋಧಕ್ಕೆ ದನಿಗೂಡಿಸಿದೆ.

ಆದಿವಾಸಿಗಳ ಜಮೀನನ್ನು ಕಿತ್ತುಕೊಳ್ಳುವ ಭೂಪ ಇನ್ನೂ ಹುಟ್ಟಿಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ರ‍್ಯಾಲಿಯೊಂದರಲ್ಲಿ ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಈ ಮಿತ್ರಪಕ್ಷ ತೋಳೇರಿಸಿದೆ. ಕೋಟಿ ಕೋಟಿ ಆದಿವಾಸಿಗಳನ್ನು ಶೋಷಣೆಯಿಂದ ಬಿಡುಗಡೆ ಮಾಡುವ ಮನಸ್ಸು ಭಾರತ ಸರ್ಕಾರಕ್ಕೆ ಇಲ್ಲ ಎಂಬುದು ವರ್ಷಗಳ ಹಿಂದೆ ವಿಕಿಲೀಕ್ಸ್ ದಾಖಲೆಗಳಿಂದ ಹೊರಬಿದ್ದಿದ್ದ ಅಂಶ.‘ಅಭಿವೃದ್ಧಿ’ಗೆ ಅಡ್ಡಗಲ್ಲಾಗಿರುವ ಆದಿವಾಸಿಗಳನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಮುಖ್ಯವಾಹಿನಿಗೆ ಸೇರಿಸಬೇಕೆಂಬುದು ಭಾರತದಲ್ಲಿ ವ್ಯಾಪಕವಾಗಿ ಚಾಲ್ತಿಗೆ ಬರುತ್ತಿರುವ ಅಭಿಪ್ರಾಯ. ಈ ಅಮಾನವೀಯ ಆಲೋಚನೆಯು ಆದಿವಾಸಿಗಳನ್ನು ಕಟ್ಟಕಡೆಗೆ ಸಾಮಾಜಿಕ ಏಣಿಶ್ರೇಣಿಯ ತಳಾತಳಕ್ಕೆ ತುಳಿಯಲಿದೆ ಎಂಬ ಮಾತನ್ನೂ ಈ ದಾಖಲೆಗಳಲ್ಲಿ ಬರೆಯಲಾಗಿತ್ತು.ತೀವ್ರ ವೇಗದಿಂದ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹಿಗ್ಗುತ್ತಿರುವ ಅರ್ಥವ್ಯವಸ್ಥೆಯು ಬರಿದಾಗುತ್ತಿರುವ ಅರಣ್ಯಪ್ರದೇಶ ಮತ್ತು ಅವುಗಳ ಸಂಪನ್ಮೂಲಗಳ ಮೇಲೆ ಭಾರೀ ಒತ್ತಡ ಹೇರಿದೆ. ಮೇಲ್ವರ್ಗಗಳ ಜೊತೆಗೆ ಪ್ರಭುತ್ವ ಮತ್ತು ಅದರ ಬಲಿಷ್ಠ ಬಾಹುಗಳಾದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಆದಿವಾಸಿಗಳ ಬೆನ್ನು ಬಿದ್ದಿವೆ. ಆದಿವಾಸಿಗಳು ಹೇಳತೀರದ ಸಂಕಟಕ್ಕೆ ಸಿಲುಕಿದ್ದಾರೆ.

ಅವರನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಅಲ್ಲಿನ ಭೂಗರ್ಭದಡಿ ಅಡಗಿರುವ ಖನಿಜ ಸಂಪನ್ಮೂಲಗಳನ್ನು ಕಾರ್ಪೊರೇಟುಗಳಿಗೆ ಬಿಡಿಸಿಕೊಡುವುದು ಸರ್ಕಾರದ ಗುಪ್ತ ಕಾರ್ಯಸೂಚಿ. ಅದು ಈಗ ಗೋಪ್ಯವಾಗಿ ಉಳಿದಿಲ್ಲ. ದಟ್ಟ ಆದಿವಾಸಿ ಜನಸಾಂದ್ರತೆಯ ಪಟ್ಟಿಗೆ ಸೇರಿದ ಛತ್ತೀಸಗಡ, ಜಾರ್ಖಂಡ್‌, ಒಡಿಶಾದಲ್ಲಿ ಈ ಜನರ ಬದುಕುಗಳು ಮೂರಾಬಟ್ಟೆ ಆಗುತ್ತಿವೆ. ಶೇ 90ರಷ್ಟು ಕಲ್ಲಿದ್ದಿಲು ಮತ್ತು ಶೇ 50ಕ್ಕೂ ಹೆಚ್ಚಿನ ಖನಿಜಗಳು ಮತ್ತು ಜಲಾಶಯಗಳನ್ನು ಕಟ್ಟಿರುವ ಜಾಗಗಳು ಇರುವುದು ಆದಿವಾಸಿಗಳು ಜೀವಿಸಿರುವ ಪ್ರದೇಶಗಳಲ್ಲೇ. ಆದಿವಾಸಿಗಳು ತಮ್ಮದೇ ನೆಲದಲ್ಲಿ ನಿರಾಶ್ರಿತರು. ಕಾಪಾಡಬೇಕಾದವರೇ ಕಾಡಿ ಕೊಲ್ಲುತ್ತಿದ್ದಾರೆ.ಆದಿವಾಸಿಗಳನ್ನು ಆದಿವಾಸಿಗಳಿಂದಲೇ ಬೇಟೆಯಾಡಿಸುವ ಅಮಾನವೀಯ ಕ್ರೌರ್ಯದ ಸರ್ಕಾರಿ ಕೃಪಾಪೋಷಿತ ಮಾವೊವಾದಿ ದಮನಸೇನೆ ಸಾಲ್ವಾ ಜುಡುಂ ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಸಾರಿ ಐದೂವರೆ ವರ್ಷಗಳೇ ಉರುಳಿವೆ. ಆದರೆ ಛತ್ತೀಸಗಡ ಸರ್ಕಾರ ರಂಗೋಲಿಯ ಕೆಳಗೆ ತೂರಿ ಅದೇ ವ್ಯವಸ್ಥೆಗೆ ಹೊಸ ವೇಷ ತೊಡಿಸಿ ಬಂದೂಕುಗಳ ಕೈಗಿತ್ತು ನಿಲ್ಲಿಸಿದೆ. ಛತ್ತೀಸ ಗಡ ಸರ್ಕಾರದೊಂದಿಗೆ ಪೈಪೋಟಿಗೆ ಇಳಿದಂತಿದೆ ಜಾರ್ಖಂಡ್‌ ಸರ್ಕಾರ. ಆದಿವಾಸಿಗಳ ವಿರುದ್ಧ ಅಸುರ, ಬಿರ್ಹೊರ, ಬಿರ್ಜ, ಖಡಿಯಾ, ಕೊರ್ವ, ಪರ್ಹಯ್ಯ, ಸೌರಿಯಾ ಪಹಡಿಯಾ, ಸವರ್ ಮುಂತಾದ ಆದಿಮ ಜಾತಿಗಳ ಕೈಗೆ ತುಪಾಕಿಗಳು ಸಿಡಿಮದ್ದುಗಳನ್ನು ನೀಡುವ ದುಷ್ಟ ಆಲೋಚನೆಯನ್ನು ಹೊರಗೆಡವಿದೆ.ಯೋಜನಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು ತೀವ್ರಗಾಮಿ ಬಾಧಿತ ಪ್ರದೇಶಗಳಲ್ಲಿ ಅಭಿವೖದ್ಧಿಯ ಸವಾಲುಗಳು ಎಂಬ ವಿಷಯ ಕುರಿತು ನೀಡಿರುವ ವರದಿಯ ಮಾತುಗಳು ಈ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ- ‘ಸ್ವಾತಂತ್ರ್ಯಾ ನಂತರ ಅಳವಡಿಸಿಕೊಂಡಿರುವ ಅಭಿವೖದ್ಧಿ ಮಾದರಿಯು, ಆದಿವಾಸಿಗಳು ಮತ್ತು ಬುಡಕಟ್ಟು ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು, ಸಾಂಸ್ಕೃತಿಕ ಅಸ್ಮಿತೆಯನ್ನು ಹಾಗೂ ಸಂಪನ್ಮೂಲ ನೆಲೆಯನ್ನು ನಾಶ ಮಾಡಿದೆ. ಪರಿಣಾಮವಾಗಿ ಈ ಸಮುದಾಯಗಳು ಶೋಷಣೆಗೆ ಹೆಚ್ಚು ಹೆಚ್ಚು ಪಕ್ಕಾಗುವಂತೆ ಆಗಿದೆ... ಜೀವಿಯೊಂದು ಮತ್ತೊಂದು ಜೀವಿಯನ್ನು ಕಬಳಿಸುವ ಲಾಲಸೆಕೋರ ಹಪಾಹಪಿಯ (rapascious) ಕಾಂಟ್ರ್ಯಾಕ್ಟರುಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಸಮಾಜದ ಇತರೆ  ಆಶೆಬುರುಕ ವರ್ಗಗಳು ಆದಿವಾಸಿಗಳ ಸಂಪನ್ಮೂಲಗಳನ್ನು ಕಸಿದುಕೊಂಡು ಅವರ ಬದುಕಿನ ಘನತೆಯನ್ನು ಉಲ್ಲಂಘಿಸಿವೆ’.ತಜ್ಞರ ಸಮಿತಿಯ ಇಂತಹ ವರದಿಯ ಬುದ್ಧಿಮಾತುಗಳಿಗೆ ಭಾರತ ಸರ್ಕಾರ ಕಿವುಡು ಎಂದು ಸುಪ್ರೀಂ ಕೋರ್ಟ್ 2011ರ ಆಗಸ್ಟ್ ಮೂರರಂದು ಸಾಲ್ವಾ ಜುಡುಂ ಕುರಿತ ತೀರ್ಪಿನಲ್ಲಿ ಟೀಕಿಸಿದೆ. ಪ್ರತಿ ಕಿಚ್ಚನ್ನು ಹಚ್ಚಿ ಕಾಳ್ಗಿಚ್ಚನ್ನು ಅಡಗಿಸುವುದು ಅಡವಿಯಲ್ಲಿ ಮಾತ್ರ ಸಾಧ್ಯ. ಆದರೆ ಸಮಾಜವು ಅಡವಿಯಲ್ಲ. ಮನುಷ್ಯ ಪ್ರಾಣಗಳು ಒಣ ಹುಲ್ಲಿನ ಎಸಳುಗಳಲ್ಲ. ಸ್ವತಂತ್ರ ಚೇತನಗಳು ಎಂದಿದೆ.ಪ್ರಗತಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಹೀಗೆ ಅವರ ಬೇರುಗಳನ್ನು ಕಡಿದು ಹಾಕುವ ಅಮಾನವೀಯ ಕೖತ್ಯವನ್ನು ರಾಜಕಾರಣಿಗಳು, ಅಧಿಕಾರಶಾಹಿ ಹಾಗೂ ಪೇಟೆ ಪಟ್ಟಣಿಗರು ಸರಿಯೆಂದು ಸಮಥಿ೯ಸಿಕೊಳ್ಳುತ್ತಾರೆ ಕೂಡ. ಈವರೆಗೆ 17 ಲಕ್ಷ ಜಾರ್ಖಂಡಿಗಳನ್ನು  ಒಕ್ಕಲೆಬ್ಬಿಸಲಾಗಿದೆ. ಇವರ ಪೈಕಿ ಶೇ 85ರಷ್ಟು ಮಂದಿ ಆದಿವಾಸಿಗಳು. ಮರುವಸತಿಯ ಅದೃಷ್ಟ ದಕ್ಕಿದ್ದು ಕೇವಲ ಶೇ 25ರಷ್ಟು ಮಂದಿಗೆ ಮಾತ್ರ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಒಕ್ಕಲೆಬ್ಬಿಸಲಾದವರ ಅಂಕಿ ಅಂಶಗಳಿವು. ಇನ್ನು ಅಂಕಿ ಅಂಶಗಳ ಹೂರಗೆ ಬದುಕಿನ ಬೇರು ಕಡಿದುಕೊಂಡವರ ಲೆಕ್ಕ ಇಟ್ಟವರಾರು?ಸಾವಿರಾರು ಆದಿವಾಸಿಗಳನ್ನು ಹುಸಿ ಗುಂಡಿನ ಕಾಳಗದಲ್ಲಿ ಹೊಡೆದು ಕೆಡವಲಾಗಿದೆ. ‘ಅತ್ಯಾಚಾರದ ಶಿಕ್ಷೆ’ಗೆ ಗುರಿಯಾದ ಆದಿವಾಸಿ ಹೆಣ್ಣುಮಕ್ಕಳ ಸಂಖ್ಯೆ ನೂರಾರು. ಮಾವೊವಾದಿಗಳಿಗೆ ಜೊತೆಯಾದರೆಂಬ ಆರೋಪ ಹೊತ್ತು ನಾನಾ ಜೈಲುಗಳಲ್ಲಿ ನವೆಯುತ್ತಿರುವ ಆದಿವಾಸಿಗಳ ಸಂಖ್ಯೆ ಹತ್ತಿರ ಹತ್ತಿರ 25 ಸಾವಿರ. ಛತ್ತೀಸಗಡವೊಂದರಲ್ಲೇ 644 ಹಳ್ಳಿಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಆದಿವಾಸಿಗಳನ್ನು ಹೊರಹಾಕಲಾಗಿದೆ.ಜಾರ್ಖಂಡದಲ್ಲಿ ಪ್ರಭುತ್ವವೇ ಮುಂದೆ ನಿಂತು ದೀನದರಿದ್ರರ ಪಾಲಿನ ಸಂಪನ್ಮೂಲಗಳನ್ನು ಸಿರಿವಂತರಿಗೆ ಧಾರೆ ಎರೆಯುತ್ತಿದೆ. ಗಣಿಗಾರಿಕೆಯಿಂದ 15 ಸಾವಿರ ಕೋಟಿ ರೂಪಾಯಿಗಳ ವಾರ್ಷಿಕ ಆದಾಯವಿದೆ. ಆದರೆ ಈ ರಾಜ್ಯದ ಶೇ 46ರಷ್ಟು ಜನ ಬಡತನದ ರೇಖೆಯ ಕೆಳಗೆ ಬದುಕು ನೀಸುತ್ತಿದ್ದಾರೆ. ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲೆಂದು 2006ರ ಅರಣ್ಯ ಹಕ್ಕುಗಳ ಕಾಯಿದೆಯನ್ನು ತಂದರು. ಆದರೆ ಈ ಕಾಯಿದೆ ಕಾಗದದಿಂದ ಕ್ಷೇತ್ರಕ್ಕೆ ಇಳಿದಿಲ್ಲ. ಉದಾಹರಣೆಗೆ ಹೇಳುವುದಾದರೆ ಐದು ಲಕ್ಷ ಪಟ್ಟಾಗಳ ನೀಡಬೇಕೆಂಬ ಛತ್ತೀಸ ಗಡದ ಆದಿವಾಸಿಗಳ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.

ಸರ್ಗುಜಾ ಜಿಲ್ಲೆಯಲ್ಲಿ ಕಲ್ಲಿದ್ದಿಲು ಗಣಿಗಳಿಗೆ ಮಣೆ ಹಾಕಲೆಂದು ಆದಿವಾಸಿಗಳಿಗೆ ಅರಣ್ಯ ಹಕ್ಕುಗಳ ಕಾಯಿದೆಯಡಿ ನೀಡಿದ್ದ ಹಕ್ಕುಗಳನ್ನು ವಾಪಸು ಕಿತ್ತುಕೊಳ್ಳಲಾಗಿದೆ. ಜಾರ್ಖಂಡದ ಸಾರಂಡದ ಅಡವಿಗಳಲ್ಲಿ ಖಾಸಗಿ ಕಂಪೆನಿಗಳಿಗೆ 22 ಹೊಸ ಕಬ್ಬಿಣದ ಅದಿರು ಗಣಿ ಗುತ್ತಿಗೆಗಳನ್ನು ನೀಡಲಾಗಿದೆ.

ಭಾರೀ ಅಣೆಕಟ್ಟೆಗಳು ಮತ್ತು ಕೈಗಾರಿಕೆಗಳನ್ನು ಹೊಸ ಭಾರತದ ಗುಡಿ ಗೋಪುರಗಳು ಎಂದು ಕರೆದ ನೆಹರೂ ಒಂದು ರೀತಿಯಿಂದ ಆದಿವಾಸಿಗಳ ಅಳಲಿಗೆ ನಾಂದಿ ಹಾಡಿದ ಖಳನಾಯಕ ಎನ್ನುತ್ತಾರೆ ಆದಿವಾಸಿ ಹೋರಾಟಗಾರ ಗ್ಲ್ಯಾಡ್ಸನ್ ಡುಂಗ್ ಡುಂಗ್.

ಅವರ ವಿಷಾದಗಾಥೆಯನ್ನು ಅವರದೇ ಮಾತುಗಳಲ್ಲಿ ಕೇಳಿರಿ- ‘ಜಾರ್ಖಂಡದ ಸಿಮಡೇಗದ ಬಳಿ ಛಿಂದಾ ನದಿಗೆ ಅಡ್ಡಲಾಗಿ ಕಟ್ಟಲಾದ ಜಲಾಶಯದಲ್ಲಿ ನಮ್ಮ 20 ಎಕರೆ ಫಲವತ್ತಾದ ನೆಲದ ಜೊತೆಗೆ ಮನೆಯೂ ಮುಳುಗಿ ಹೋಯಿತು. 1980ರಲ್ಲಿ 11 ಸಾವಿರ ರೂಪಾಯಿ ಪರಿಹಾರ ಕೊಟ್ಟರು. ಪ್ರತಿಭಟಿಸಿದವರನ್ನು ಹಜಾರಿಬಾಗ್ ಜೈಲಿಗೆ ತಳ್ಳಿದರು. ಆರು ಮಂದಿಯ ಕುಟುಂಬಕ್ಕೆ ಬದುಕಿಡೀ ಅನ್ನ, ಅಕ್ಷರ, ಆರೋಗ್ಯ, ವಸತಿ ಹಾಗೂ ವಸ್ತ್ರವನ್ನು ನೀಡಬಲ್ಲದೇ ಈ 11 ಸಾವಿರ ರೂಪಾಯಿ ಪರಿಹಾರ?’‘ದಿಕ್ಕುಗಾಣದೆ ಅಡವಿಯ ಮಡಿಲಲ್ಲಿ ಬದುಕು ಅರಸಿತು ನಮ್ಮ ಪರಿವಾರ. ತುಂಡು ಭೂಮಿಯನ್ನು ಕೊಂಡೆವು. ಹೂ ಹಣ್ಣುಗಳು ಸೌದೆಯನ್ನು ಆಯ್ದು ದನಕರು ಸಾಕಿ ಹೊಟ್ಟೆ ಹೊರೆದೆವು. ಅಡವಿಯನ್ನು ಅತಿಕ್ರಮಿಸಿದೆವೆಂದು ನನ್ನ ಅಯ್ಯನ ಮೇಲೆ ಅರಣ್ಯ ಇಲಾಖೆ ಕೇಸುಗಳನ್ನು ಜಡಿಯಿತು. ಅನ್ಯಾಯಗಳ ವಿರುದ್ಧ ಸೆಟೆದು ನಿಲ್ಲುತ್ತಿದ್ದ ನನ್ನ ಅಯ್ಯ ಅವ್ವನನ್ನು 1990ರಲ್ಲಿ ಒಂದು ದಿನ ಕೊಲೆ ಮಾಡಲಾಯಿತು. ಸಿಮಡೇಗ ಸಿವಿಲ್ ಕೋರ್ಟಿನಲ್ಲಿ ಕೇಸೊಂದಕ್ಕೆ ಹಾಜರಾಗುವ ಹಾದಿಯಲ್ಲಿ ಈ ಘಟನೆ ನಡೆದಿತ್ತು. ನಾವು ನಾಲ್ವರು ಮಕ್ಕಳು ಅನಾಥರಾದೆವು. ಅಂದಿನಿಂದ ನಿತ್ಯ ನರಕದಲ್ಲಿ ಬದುಕಿ ಉಳಿದೆವು.

ಕೊಲೆಗಾರರನ್ನು ಕಾನೂನು ಹಿಡಿಯಲೇ ಇಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಬದುಕನ್ನು ಕಿತ್ತುಕೊಂಡ ಪ್ರಭುತ್ವ ನಮಗೆ ಯಾಕೆ ನ್ಯಾಯ ಸಲ್ಲಿಸಲಿಲ್ಲವೆಂದು ಯಾರಾದರೂ ಹೇಳಬಲ್ಲಿರಾ? ನನ್ನ ಹಳ್ಳಿಯನ್ನು ವಿದ್ಯುಚ್ಛಕ್ತಿ ಇಂದಿಗೂ ಮುಟ್ಟಿಲ್ಲ. ನೀರಾವರಿ ಯೋಜನೆಗಳಿಗಾಗಿ ತಮ್ಮ ಜಮೀನು ಕಳೆದುಕೊಂಡ ನನ್ನ ಹಳ್ಳಿಗರ ಹೊಲಗಳಿಗೆ ನೀರು ಸಿಗುತ್ತಿಲ್ಲ. ವಿದ್ಯುತ್ ಯೋಜನೆಗಳಿಗೆ ನೆಲ ಬಿಟ್ಟುಕೊಟ್ಟವರ ಮನೆಗಳಲ್ಲಿ ವಿದ್ಯುತ್‌ ದೀಪಗಳು ಉರಿಯುತ್ತಿಲ್ಲ. ಉಕ್ಕಿನ ಸ್ಥಾವರಗಳಿಗೆಂದು ಜಮೀನು ಕಳಕೊಂಡವರು ಈಗಲೂ ಸಣ್ಣ ಮಣ್ಣಿನ ಮನೆಗಳಲ್ಲಿ ಬದುಕುತ್ತಿದ್ದಾರೆ.

ಆದಿವಾಸಿಗಳು ಹುಟ್ಟಿರುವುದೇ ಕಣ್ಣೀರಿನಲ್ಲಿ ಕೈ ತೊಳೆಯಲು. ಇತರರು ಬದುಕಿರುವುದೇ ನಮ್ಮ ಗೋರಿಗಳ ಮೇಲೆ ಸುಖಪಡಲು. ಬಹು ದೀರ್ಘ ಸಂಘರ್ಷದ ನಂತರ ಬದುಕಿನ ದಡ ಸೇರಿದರೂ ಬೇಟೆಗಾರ ನನ್ನ ಬೆನ್ನು ಬಿಟ್ಟಿಲ್ಲ. ಇನ್ನು ಕಳೆದುಕೊಳ್ಳುವುದೇನೂ ನನ್ನ ಬಳಿ ಉಳಿದಿಲ್ಲ. ಅಭಿವೃದ್ಧಿಯ ಹೆಸರಿನ ಬಲೆಯಲ್ಲಿ ಬಿದ್ದಿರುವ ನನ್ನ ಜನರನ್ನು ಪಾರು ಮಾಡಲು ಸಂವಿಧಾನಬದ್ಧ ಜನತಾಂತ್ರಿಕ ಹಾದಿ ತುಳಿದಿದ್ದೇನೆ. ನಾನು ಗಾಂಧೀವಾದಿಯೂ ಅಲ್ಲ, ಮಾವೊವಾದಿಯೂ ಅಲ್ಲ.

ಭಾರತೀಯ ಪ್ರಭುತ್ವ ಒಕ್ಕಲೆಬ್ಬಿಸಿ ಅವನತಿಯ ಅಂಚಿಗೆ ತಳ್ಳಿರುವ ನನ್ನ ಆದಿವಾಸಿ ಬಂಧುಗಳಿಗಾಗಿ ಬಡಿದಾಡುವುದೇ ಸೈ. ನನ್ನ ಪ್ರಕಾರ ಪ್ರಭುತ್ವ, ಮಾವೊವಾದಿಗಳು ಹಾಗೂ ಸಮಾಜ ಮೂವರೂ ಆದಿವಾಸಿಗಳ ಮಾನವ ಹಕ್ಕುಗಳನ್ನು ಕಿತ್ತುಕೊಂಡು ಕಟಕಟೆಯಲ್ಲಿ ನಿಂತವರು’.

ಗ್ಲ್ಯಾಡ್ಸನ್ ಡುಂಗ್ ಡುಂಗ್ ಮತ್ತು ಆತನ ಬಂಧುಜನ ಕೇಳುವ ಈ ಪ್ರಶ್ನೆಗಳಿಗೆ ನಾಗರಿಕ ಸಮಾಜ ಉತ್ತರಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry