ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಭಾಷಿತ ಬದುಕಿಗೆ ಒದಗುವ ಮಧುರ ಮಾತು

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ. ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು ಎಂದಷ್ಟೇ ಅಲ್ಲ; ಬದುಕನ್ನು ಸುಂದರವಾಗಿಯೂ ಅರ್ಥಪೂರ್ಣವಾಗಿಯೂ ಕಟ್ಟಿಕೊಡುವುದು ಎಂಬ ವಿಶಾಲಾರ್ಥವೂ ಇದೆಯೆನ್ನಿ.

ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ:
ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ /
ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್‌//

‘ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ; ಅದರಿಂದಾಗಿ ಆ ಭಾಷೆಯಲ್ಲಿರುವ ಕಾವ್ಯ ಮಧರವಾಗಿದೆ; ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ.

ನಮ್ಮ ಜೀವನವಷ್ಟು ಮಾತನ್ನು ಆವರಿಸಿಕೊಂಡಿದೆ; ಮಾತಿಲ್ಲದೆ ನಮ್ಮ ಜೀವನವಿಲ್ಲ. ನಮ್ಮ ಜೀವನದ ಸೊಗಸಿಗೂ ಕುರೂಪಕ್ಕೂ ನಾವಾಡುವ ಮಾತು ಕಾರಣವಾಗಿರುತ್ತದೆ.

ನಾವಾಡುವ ಮಾತು ನಮ್ಮ ಬದುಕಿಗೆ ಹೇಗೆ ಪೂರಕವಾಗಿ ಒದಗಬೇಕು; ಬದುಕಿನ ಆಳವನ್ನೂ ವಿಸ್ತಾರವನ್ನೂ ಅದು ತೋರಿಸುವಂತಿರಬೇಕು; ನಮ್ಮ ಹಿತವನ್ನೂ ಅಹಿತವನ್ನೂ ಪ್ರಕಟಿಸುವಂತಿರಬೇಕು; ಇಷ್ಟೆಲ್ಲ ಇದ್ದರೂ ಆ ಮಾತು ಕೇಳಲು ಸಿಹಿಯಾಗಿರಲೂ ಬೇಕು. ಇಷ್ಟು ಗುಣಗಳನ್ನೂ ಒಳಗೊಂಡಿರುವುದೇ ‘ಸುಭಾಷಿತ’. ಇದನ್ನೇ ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೀಗೆ ಹೇಳಿಕೊಂಡಿದೆ:

ದ್ರಾಕ್ಷಾಮ್ಲಾನಾಮುಖೀ ಜಾತಾ ಶರ್ಕಾರಾ ಚಾಶ್ಮತಾಂ ಗತಾ/
ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ//

‘ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯೂ ಬಾಡಿಹೋಯಿತಂತೆ; ಸಕ್ಕರೆ ಕಲ್ಲಾಗಿಹೋಯಿತು. ಅಮೃತವಾದರೋ ಹೆದರಿ ಸ್ವರ್ಗಕ್ಕೆ ಓಡಿಹೋಯಿತಂತೆ!’
ಸುಭಾಷಿತಗಳ ಸಂಗ್ರಹದಿಂದ ನಮ್ಮ ಜೀವನದೃಷ್ಟಿ ವಿಶಾಲವಾಗುವುದು; ಜೀವನದ ಎಷ್ಟೋ ಸಂದರ್ಭಗಳ ಗುಣಾವಗುಣಗಳನ್ನು ಸ್ಪಷ್ಟವಾಗಿ ವಿಮರ್ಶಿಸಲು ನೆರವಾಗುತ್ತವೆ; ಅದನ್ನೇ ಸುಭಾಷಿತವೊಂದು ಹೀಗೆಂದಿದೆ:

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ/
ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ//

‘ಭೂಮಿಯಲ್ಲಿ ಶ್ರೇಷ್ಠವಸ್ತುಗಳೆಂದರೆ ಕೇವಲ ಮೂರು: ನೀರು, ಅನ್ನ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ‘‘ರತ್ನ ’’ಎಂದು ಕರೆಯುತ್ತಿರುವುದು ವಿಷಾದಕರ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT