ತಣಿದ ನೀರನ್ನು ತಣಿಸಿ ಕುಡಿಯುವಷ್ಟು ತಾಳ್ಮೆ

7

ತಣಿದ ನೀರನ್ನು ತಣಿಸಿ ಕುಡಿಯುವಷ್ಟು ತಾಳ್ಮೆ

Published:
Updated:
ತಣಿದ ನೀರನ್ನು ತಣಿಸಿ ಕುಡಿಯುವಷ್ಟು ತಾಳ್ಮೆ

ಇಡೀ ಜಗತ್ತು ದುಡುಕುತ್ತಿದೆ! ದುಡುಕುವುದು ನಮ್ಮ ಪ್ರವೃತ್ತಿಯೇ ಆಗಿಹೋಗಿದೆ. ತಾಳ್ಮೆ, ಸಹನೆ ಮುಂತಾದ ಪದಗಳ ಅರ್ಥವನ್ನು ನಾವು ಇಂದು ನಿಘಂಟಿನಲ್ಲಿ ಮಾತ್ರ ನೋಡಿ ಕಲಿಯಬೇಕಾಗಿದೆ. ತಾಳ್ಮೆಯ ಜೊತೆಜೊತೆಗೇ ಕೇಳುವ ಕೌಶಲ, ಮೌನದ ಮಹತ್ವಗಳೂ ಆಧುನಿಕ ಬದುಕಿನಲ್ಲಿ ಇಲ್ಲವಾಗುತ್ತಿವೆ. ಕೇಳುವುದು, ಮೌನ – ಇವೆರಡೂ ತಾಳ್ಮೆಯ ಜೊತೆಗಾರರು.ಜೀವನ ಇರುವುದು ನಿನ್ನೆ-ನಾಳೆಗಳಲ್ಲಲ್ಲ. ಬದುಕು ಸಾಗುವುದು ಇವತ್ತನ್ನು ಒಪ್ಪಿಕೊಳ್ಳುವುದರಿಂದ. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದೇವೆ ಎನ್ನಿ. ನಮ್ಮ ಗಮನ ಈ ಟ್ರಾಫಿಕ್‌ನಲ್ಲಿ ಎಲ್ಲಿಂದ ವಾಹನ ಬರುತ್ತಿದೆ ಎಂಬುದರ ಬದಲಿಗೆ, ತಡವಾಗಿ ಗುರಿ ಸೇರುವ ಬದಲು ಎಷ್ಟು ಬೇಗ ಸಿಗ್ನಲ್ ತಪ್ಪಿಸಿಯಾದರೂ ಆಫೀಸು/ಮನೆ ಸೇರುವ ಬಗ್ಗೆ.ಮಗು ಅಳುತ್ತಿದೆ ಎಂದುಕೊಳ್ಳಿ, ಹೆಚ್ಚಿನ ಸಮಯ ನಾವು ಮಗುವನ್ನು ಹೇಗಾದರೂ ಸುಮ್ಮನಿರಿಸಲು ಏನಾದರೂ ಮಾಡುತ್ತೇವಷ್ಟೆ. ಅದರ ಅಳುವಿನಿಂದ ನಮಗಾಗುವ ಕಿರಿಕಿರಿ ನಮಗೆ ತಡೆಯಲಾಗುವುದಿಲ್ಲ. ಹಿರಿಯರು ಮನೆಗಳಲ್ಲಿ ಜಗಳಗಳಾದಾಗಲೆಲ್ಲ ಹೇಳುವ ಮಾತು: ‘ತಾಳ್ಮೆ ಬೇಕು, ತಾಳ್ಮೆ ತೊಗೋ.’ ಆದರೆ ನಮಗೆ ತಾಳ್ಮೆಯನ್ನು ಪಡೆಯುವುದು ಸುಲಭವೆನಿಸುವುದಿಲ್ಲ ಏಕೆ?ಚೀನಾದಲ್ಲಿ ತಾಳ್ಮೆಯ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಚೀನೀ ಬಿದಿರಿನ ಗಿಡದ ಉದಾಹರಣೆ ನೀಡುತ್ತಾರೆ. ಬಿದಿರಿನ ಗಿಡ ಬೆಳೆಯಲು ಬೇರೆಲ್ಲಾ ಮರಗಿಡಗಳಂತೆ ನೀರು, ಮಣ್ಣು, ಸೂರ್ಯನ ಬೆಳಕು ಬೇಕೇ ಬೇಕು. ಆದರೆ ಗಿಡ ನೆಟ್ಟ ಮೊದಲ ವರ್ಷ ಏನೂ ಆಗುವುದಿಲ್ಲ. ಎರಡನೇ ವರ್ಷ, ಮೂರನೇ ವರ್ಷ, ನಾಲ್ಕನೇ ವರ್ಷ ಕೂಡ ಯಾವ ಬೆಳವಣಿಗೆಯ ಗುರುತೂ ಕಾಣುವುದಿಲ್ಲ. ಗಿಡ ನೆಟ್ಟವರಿಗೆ ನಿರಾಸೆಯೇ.ನಮಗೆ ನಮ್ಮ ಮೇಲೆಯೇ ಸಂಶಯ, ಸರಿಯಾಗಿ ಗಿಡ ಬೆಳೆಯಲು ಏನು ಮಾಡಬೇಕೋ ಅದನ್ನು ಮಾಡಿದ್ದೇವೆಯೇ ಎಂಬ ಅನುಮಾನ. ಪ್ರಯತ್ನವನ್ನೇ ಸಾಕು ಮಾಡುವ ಯೋಚನೆ ಬರುತ್ತದೆ. ನೀವು ಕಾದಿದ್ದು ಸಾಕೆಂದು ಗಿಡವನ್ನು ಕಿತ್ತೆಸೆಯುವ ಸಂದರ್ಭವೇ ಹೆಚ್ಚು. ಒಂದೊಮ್ಮೆ ನೀವೇನಾದರೂ ಸಹನೆಯಿಂದ ನೋಡಿಯೇ ಬಿಡೋಣ ಎಂದು ಕಾದರೆ ಐದನೇ ವರ್ಷದಲ್ಲಿ, ಕೇವಲ ಆರು ವಾರಗಳಲ್ಲಿ ಈ ಗಿಡ ಬೆಳೆಯುವುದು ಎಷ್ಟು ಗೊತ್ತೆ? ಎಂಬತ್ತು ಅಡಿಗಳಷ್ಟು! ಒಂದು ನಿಮಿಷ ಯೋಚಿಸಿ ನೋಡಿ.

ಗಿಡ ಬೆಳೆಯದೆ ನಾಲ್ಕು ವರ್ಷ ಸುಮ್ಮನಿದ್ದು ಒಮ್ಮೆಲೇ ಬೆಳೆಯಲು ಸಾಧ್ಯವೆ? ನಿಸ್ಸಂಶಯವಾಗಿ ತನಗೆ ಬೇಕಾಗುವ ಗಟ್ಟಿ ಬೇರುಗಳ ವ್ಯವಸ್ಥೆಯನ್ನು ನಾಲ್ಕು ವರ್ಷಗಳಲ್ಲಿ ರೂಪಿಸಿಕೊಂಡು ಐದನೇ ವರ್ಷದಲ್ಲಿ ಗಿಡ ಹೊರಬಂದಿತಷ್ಟೆ. ಮನುಷ್ಯರ ಜೀವನವೂ ಹಾಗೆಯೇ. ತಾಳ್ಮೆ ಎನ್ನುವ ಗುಣವನ್ನು ರೂಢಿಸಿಕೊಳ್ಳಬೇಕಾದ ಹಲವು ಸಂದರ್ಭಗಳು ಜೀವನದಲ್ಲಿ ಬರುತ್ತವೆ.ಪ್ರತಿದಿನವೂ ಮನಸ್ಸಿಗೆ ಇಷ್ಟವಾಗದ ಹಲವು ವಿಷಯಗಳು ನಡೆಯಲು ಸಾಧ್ಯ ತಾನೆ? ಜನರು ತಾವು ಮಾಡಬೇಕಾದ್ದನ್ನು ಮಾಡುತ್ತಿಲ್ಲ ಎನಿಸಬಹುದು. ನಮ್ಮ ಗುರಿ ಸಾಧ್ಯವಾಗುತ್ತಿಲ್ಲ ಎನಿಸಬಹುದು. ಹತಾಶೆ ಕಾಡಬಹುದು. ಇಂಥ ಸನ್ನಿವೇಶಗಳು ಸಹಜವಾಗಿ ಮನಸ್ಸನ್ನು ಪ್ರಭಾವಗೊಳಿಸುತ್ತವೆ. ನಮ್ಮ ವರ್ತನೆಯನ್ನು ಬದಲಿಸುತ್ತವೆ, ಕೋಪಗೊಳ್ಳುವುದು, ಅಳುವುದು ಮೊದಲಾಗುತ್ತವೆ. ಇವು ಮನಸ್ಸನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುತ್ತವೆ.ನಮ್ಮಲ್ಲಿರುವ ಕೆಟ್ಟಬುದ್ಧಿಯನ್ನೆಲ್ಲಾ ಇತರರೆದುರಿಗೆ ಬಿಚ್ಚಿಡುವಂತೆ ಮಾಡುತ್ತವೆ! ಹಿರಿಯರು ‘ತಾಳ್ಮೆ ತಂದುಕೊ, ಸಹಿಸಿಕೋ’  ಎಂದಾಗ ನಮಗೆ ಅನ್ನಿಸುವುದೇನು? ತಾಳ್ಮೆ ಎಂದರೆ ಅದೊಂದು ದೌರ್ಬಲ್ಯದ ಲಕ್ಷಣ! ಬೇರೆಯವರು ಏನಾದರೂ ಅಂದರೆ, ನಮಗಿಷ್ಟವಾಗದಂತೆ ನಡೆದುಕೊಳ್ಳದಿದ್ದರೆ ನಾವು ಏನೂ ಹೇಳಬಾರದೆಂದು, ಜಗಳವಾಗದಿರಲೆಂದು, ನಮಗೆ ಪರಿಹಾರ ನೀಡಲಾಗದೆ, ನಮ್ಮ ಬಾಯಿ ಮುಚ್ಚಿಸಲು ಹೇಳುವ ಮಾತು! ಆದರೆ ಮನೋವೈಜ್ಞಾನಿಕವಾಗಿ ನೋಡಿದರೆ ತಾಳ್ಮೆ ಒಂದು ವ್ಯಕ್ತಿತ್ವದ ಶಕ್ತಿ.ಭಾವನಾತ್ಮಕವಾಗಿ ಕಾಯುವ, ಕಾದು ನೋಡುವ, ಯಾವಾಗ ಮಾತನಾಡಬೇಕೆಂದು ಯೋಚಿಸಿ ನೋಡುವ ಸಾಮರ್ಥ್ಯ. ಜೈವಿಕವಾಗಿ ನಮ್ಮ ಮೆದುಳು ಒತ್ತಡದ ಸನ್ನಿವೇಶಗಳಲ್ಲಿ ದೇಹದಲ್ಲಿ ಕಾರ್ಟಿಸಾಲ್ ಎಂಬ ಹಾರ್ಮೋನನ್ನು ಸ್ರವಿಸುವಂತೆ ಮಾಡುತ್ತದೆ.ಈ ಕಾರ್ಟಿಸಾಲ್‌ನ ಕೆಲಸ ನಮ್ಮನ್ನು ತಕ್ಷಣ ಪ್ರತಿಕ್ರಿಯಿಸುವಂತೆ ಮಾಡುವುದು. ಅಪಾಯದ ಸನ್ನಿವೇಶಗಳಲ್ಲಿ ಇದು ರಕ್ಷಣಾತ್ಮಕ. ಎಂದರೆ ಹಠಾತ್ತನೆ ಹಾವು ಬಂದಿತೆನ್ನಿ, ಓಡುವಂತೆ ನಮ್ಮನ್ನು ಪ್ರೇರೇಪಿಸುವುದು, ಕೋಲು ಹುಡುಕುವಂತೆ ಯೋಚಿಸುವಂತೆ ಮಾಡುವುದು ಕಾರ್ಟಿಸಾಲ್‌. ಬೇರೆಲ್ಲವನ್ನೂ, ಮುಂದಾಗಬಹುದಾದ ಪರಿಣಾಮಗಳನ್ನೂ ಲೆಕ್ಕಿಸದೆ ಆ ಕ್ಷಣದಲ್ಲಿ ಜೀವವನ್ನು ಉಳಿಸಿಕೊಳ್ಳುವುದೊಂದನ್ನು ಮಾತ್ರ ಮೆದುಳು ಯೋಚಿಸುವಂತೆ ಈ ಕಾರ್ಟಿಸಾಲ್ ಮಾಡುತ್ತದೆ.ಆದರೆ ದೈನಂದಿನ ಸನ್ನಿವೇಶಗಳಲ್ಲಿ ಇಂತಹ ಅಪಾಯ ಇರಲಾರದಷ್ಟೆ. ಆದರೂ ಚಿಕ್ಕ ಚಿಕ್ಕ ಒತ್ತಡಗಳು ಎದುರಾದಾಗಲೂ ಕಾರ್ಟಿಸಾಲ್ ಬಿಡುಗಡೆಯಾಗುತ್ತದೆ. ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತದೆ! ‘ತಾಳುವಿಕೆಗಿಂತ ತಪವಿಲ್ಲ’– ಎಂದು ದಾಸರು ಹೇಳಿರುವುದು ಮನೋವೈಜ್ಞಾನಿಕವಾಗಿಯೂ ನಿಜವೇ. ಏಕೆಂದರೆ ಮೆದುಳಿನಲ್ಲಿ ಎದುರಾದ ಒತ್ತಡದಿಂದ ಕಾರ್ಟಿಸಾಲ್ ಬಿಡುಗಡೆಯಾಗಿ ಮತ್ತೆ ಮತ್ತೆ ‘ಈಗ ಕಿರುಚು, ಅಳು, ಕೂಗಾಡು’ ಇತ್ಯಾದಿ ಸಂಕೇತಗಳನ್ನು ಮತ್ತೆ ಮತ್ತೆ ನೀಡುವಾಗ ಹಲ್ಲು ಕಚ್ಚಿ ಸಹನೆಯಿಂದ ಕೈಕಟ್ಟಿ ಕೂರುವುದು ನಿಜವಾಗಿ ತಪಸ್ಸಿನಂತೆಯೇ!ಆದರೂ ಒತ್ತಡದ ಸನ್ನಿವೇಶಗಳಲ್ಲಿ ತಾಳ್ಮೆ ಉಪಯುಕ್ತ ಎನ್ನುವುದು ನಮಗೆಲ್ಲರಿಗೂ ಗೊತ್ತು. ಪ್ರಯೋಗವೊಂದನ್ನು ಮಾಡಿ ನೋಡಲು ಸಿದ್ಧರಿರುವ ಸಾಹಸಿಗಳು ನೀವೆಂದರೆ ಒಮ್ಮೆ ಮಾಡಿ ನೋಡಬಹುದು. ನೀವು ಸಾಮಾನ್ಯವಾಗಿ ತಾಳ್ಮೆ ಕಳೆದುಕೊಳ್ಳುವ ಸಂದರ್ಭಗಳು ಪ್ರತಿದಿನ ಇರುತ್ತವೆಯಷ್ಟೆ. ಅಂತಹ ಸಂದರ್ಭ ಎದುರಾದಾಗ ಈ ಬಾರಿ ತತ್‌ಕ್ಷಣ ಪ್ರತಿಕ್ರಿಯಿಸಬೇಡಿ. ಏನೂ ಮಾಡಬೇಡಿ. ಮುಂದೆ ಏನಾಗುವುದೋ ಎಂಬ ಪರಿಣಾಮಗಳ ಬಗೆಗೂ ಯೋಚಿಸಬೇಡಿ. ಮನಸ್ಸನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸಿ.ಸಮಯದೊಂದಿಗೆ ಸಮಸ್ಯೆ ತನ್ನಿಂದ ತಾನೇ ಪರಿಹಾರಗೊಳ್ಳಬಹುದು ಅಥವಾ ಹಾಗಾಗದಿದ್ದರೆ ನಿಮ್ಮ ಮನಸ್ಸೇ ಸಮಸ್ಯೆಯೆನ್ನೆದುರಿಸಲು ಸಮರ್ಥವಾಗಿ ಸಿದ್ಧವಾಗಬಹುದು. ಇದು ಒಂದು ರೀತಿಯ ವಿಳಂಬನೀತಿ! ಪ್ರಾಯೋಗಿಕವಾಗಿ ಇದನ್ನು ಮನೋವಿಜ್ಞಾನ ಭಾವನಾತ್ಮಕ ಸ್ವಾತಂತ್ರ್ಯ- ‘ಎಮೋಷನಲ್ ಪ್ರೀಡಮ್’ – ಎಂದು ಕರೆಯುತ್ತದೆ. ಇದನ್ನು ಕಲಿಯುವ ಬಗೆಯನ್ನೂ ವಿವರಿಸುತ್ತದೆ.ಕ್ಯೂಗಳಲ್ಲಿ ನಿಂತಿದ್ದೀರಲ್ಲಾ?! ಬ್ಯಾಂಕ್/ಸಿನೆಮಾ/ ಟಿಕೆಟ್‌ನ ಯಾವುದೇ ಕ್ಯೂನಲ್ಲಿ ನಿಲ್ಲುವಾಗ ನಿಮ್ಮ ಸಹನೆಯ ಪರೀಕ್ಷೆ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು. ಆದಷ್ಟು ಉದ್ದದ ಕ್ಯೂ ಆರಿಸಿಕೊಳ್ಳಿ. ಚಡಪಡಿಸದೇ,ಆರಾಮವಾಗಿ ನಿಲ್ಲುವ ಪ್ರಯತ್ನ ಮಾಡಿ. ಮನಸ್ಸು ಚಡಪಡಿಸುತ್ತಿದ್ದರೂ ಪಕ್ಕದಲ್ಲಿ ನಿಂತಿರುವವರೊಡನೆ ಸಣ್ಣಪುಟ್ಟ ಸಂಭಾಷಣೆ ಮಾಡಲು ಪ್ರಯತ್ನಿಸಿ. ಮನಸ್ಸನ್ನು ಆರಾಮವಾಗಿ ಹರಿಬಿಡುವ ಪ್ರಯತ್ನ ಮಾಡಿ.ತಾಳ್ಮೆಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮ ಆರೋಗ್ಯಕ್ಕೆ ತರುವ ಲಾಭ ಅಷ್ಟಿಷ್ಟಲ್ಲ. ತಾಳ್ಮೆಯಿಂದ ಕೋಪ ಕಡಿಮೆಯಾಗುತ್ತದೆ, ಸೃಜನಶೀಲಸಾಮರ್ಥ್ಯ ಹೆಚ್ಚುತ್ತದೆ.ಹೃದಯ-ಜಠರಗಳು ಸರಾಗವಾಗಿ ಕೆಲಸ ಮಾಡುತ್ತವೆ. ತಾಳ್ಮೆಯ ಒಂದು ಕ್ಷಣ ದೊಡ್ಡ ಅಪಾಯವನ್ನು ಇಲ್ಲದಂತೆ ಮಾಡಬಹುದು; ಅದೇ ಒಂದು ಕ್ಷಣ ತಾಳ್ಮೆ ಕಳೆದುಕೊಳ್ಳುವುದರಿಂದ ಇಡೀ ಜೀವನ ಪರಿತಪಿಸುವಂತಾಗುತ್ತದೆ– ಎಂಬ ಚೀನೀಗಾದೆ ನಿಜವೆನಿಸುವಂತೆ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry