ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲೊಂದು ತೂಗುವ ರೈಲು

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಸಾರಿಗೆ ಸೌಕರ್ಯದ ಬಗ್ಗೆ ವಿಶ್ವದ ಎಲ್ಲ ದೇಶಗಳಲ್ಲೂ ಸಂಶೋಧನೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಲೋಕಲ್‌ ರೈಲು, ಹೈಸ್ಪೀಡ್‌ ರೈಲು, ಮೆಟ್ರೊ ರೈಲು, ಮೇಗ್ಲೇವ್‌, ಬುಲೆಟ್‌ ರೈಲು, ಮೆಟ್ರಿನೊ ಹೀಗೆ ಹಲವಾರು ವಿಧಗಳು ಪರಿಚಯ ವಾಗುತ್ತಲೇ ಇರುತ್ತವೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.ಅದುವೇ ತೂಗುವ ರೈಲು. ಇದನ್ನು ಸಸ್ಪೆನ್ಸನ್‌ ರೈಲು ಎಂದೂ ಕರೆಯಲಾಗುತ್ತದೆ.

ಚೀನಾದಲ್ಲಿ ಇದನ್ನು ಪರೀಕ್ಷೆ ಮಾಡಲಾಗಿದೆ. ಸಿಚುವಾನ್‌ ಪ್ರಾಂತ್ಯದ ಚೆಂಗ್ಡು ನಗರದಲ್ಲಿ ಇದನ್ನು ಪ್ರಯೋಗ ಮಾಡಲಾಗಿದ್ದು ಯಶಸ್ವಿಯಾಗಿದೆ. ಎತ್ತರಿಸಿದ ಮಾರ್ಗದಲ್ಲಿ ಸಾಗುವ ಇದು ಬ್ಯಾಟರಿ ಶಕ್ತಿ ಬಳಸಿಕೊಳ್ಳುತ್ತದೆ.

ಚೀನಾದ ವಾಯವ್ಯ ಭಾಗದ ಆರ್ಥಿಕ ಅಭಿವೃದ್ಧಿ ಪ್ರದೇಶದಿಂದ ಸಂಚರಿಸಿದ ಈ ಆಗಸದ ರೈಲು ವಿಶ್ವದ ಮೊದಲ ಲಿಥಿಯಂ ಬ್ಯಾಟರಿ ಚಾಲಿತ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಜರ್ಮನಿಯಲ್ಲಿ ಈಗಾಗಲೇ ಈ ರೀತಿಯ ರೈಲು ಸಂಚಾರ ನಡೆಸುತ್ತಿದ್ದರೂ ಅಲ್ಲಿ ವಿದ್ಯುತ್‌ ಮಾರ್ಗವನ್ನು ಬಳಸಲಾಗುತ್ತಿದೆ. ಜರ್ಮನಿಯ ವುಪ್ಪೆರ್ಟಲ್‌ ಎಂಬಲ್ಲಿ ಎತ್ತರಿಸಿದ ಮಾರ್ಗದಲ್ಲಿ ರೈಲು ಸಂಚಾರ 1901ರಲ್ಲಿ ಆರಂಭವಾಗಿದ್ದು, ಈಗಲೂ ಅದು ಸಂಚಾರ ನಡೆಸುತ್ತಿದೆ.

‘ತೂಗುವ ರೈಲಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ನಗರಗಳಲ್ಲಿ ಈಗಾಗಲೇ ಇರುವ ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡದೆ ಇದನ್ನು ಪರಿಚಯಿಸಬಹುದು.ರೈಲು ಮಾರ್ಗ ನಿರ್ಮಾಣಕ್ಕೂ ಹೆಚ್ಚಿನ ಹಣ ಬೇಕಾಗಿಲ್ಲ. ಸುರಂಗ ಮಾರ್ಗ ನಿರ್ಮಿಸಿ ರೈಲು ಸಂಚಾರ ಮಾಡುವುದಕ್ಕಿಂತ ಕಡಿಮೆ ವೆಚ್ಚ ಸಾಕಾಗುತ್ತದೆ’ ಎನ್ನುತ್ತಾರೆ ತೂಗುವ ರೈಲಿನ ಮುಖ್ಯ ವಿನ್ಯಾಸಕ ಝಾಯಿ ವಾನ್ಮಿಂಗ್.

ಚೆಂಗ್ಡು ನಗರದಲ್ಲಿ ಈಗಾಗಲೇ ಈ ತೂಗುವ ರೈಲು ಸಂಚಾರ ಯಶಸ್ವಿಯಾಗಿರುವುದರಿಂದ ಇನ್ನೂ ಎರಡು ಕಡೆ ಇದೇ ವ್ಯವಸ್ಥೆಯನ್ನು ಆರಂಭಿಸಲು ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದೆ. ಇದರಲ್ಲಿ ಮೊದಲ ಮಾರ್ಗದ ನಿರ್ಮಾಣ ಮುಂದಿನ ವರ್ಷ ಆರಂಭವಾಗಲಿದೆ.

ಈ ತೂಗುವ ರೈಲು ಪೂರ್ಣ ಪ್ರಮಾಣದಲ್ಲಿ ಸಂಚಾರ ನಡೆಸುವ ಮೊದಲು ಹಲವಾರು ವಿಧದಲ್ಲಿ ಪರೀಕ್ಷೆ ನಡೆಸಲಾಗಿದೆ. ಯಾವುದೇ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಸೆಪ್ಟೆಂಬರ್‌ನಿಂದ ಇದಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಲಾಗಿತ್ತು.

ಪಾಂಡಾಗಳಂತೆ ವಿನ್ಯಾಸ
ತೂಗುವ ರೈಲನ್ನು ಪಾಂಡಾಗಳಂತೆ ಕಪ್ಪು ಬಿಳುಪು ಬಣ್ಣದಲ್ಲಿ ವಿನ್ಯಾಸ ಮಾಡಲಾಗಿದೆ. ಭಾರಿ ಗಾತ್ರದ ಪಾಂಡಾಗಳ ತವರು ಈ ಚೆಂಗ್ಡು ಆಗಿರುವುದೇ ಇದಕ್ಕೆ ಕಾರಣವಂತೆ.

ಕಡಿಮೆ ಹಣ ಸಾಕು: ಇತರೆ ಎಲ್ಲ ರೀತಿಯ ರೈಲು ಮಾರ್ಗಗಳಿಗೆ ಹೋಲಿಸಿದರೆ ತೂಗುವ ರೈಲಿಗೆ ಕಡಿಮೆ ಹಣ ಸಾಕು. ಅಲ್ಲದೆ ಮಾರ್ಗವನ್ನು ವೇಗವಾಗಿ ನಿರ್ಮಿಸಬಹುದು.ಬೀಜಿಂಗ್‌ನ ಜಿಯೊಟಾಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಪ್ರಕಾರ 3 ರಿಂದ 5 ತಿಂಗಳಲ್ಲಿ 12 ಕಿ.ಮೀ ದೂರದ ರೈಲು ಮಾರ್ಗ ನಿರ್ಮಿಸಬಹುದು. ಈ ರೀತಿಯ ರೈಲು ಸಣ್ಣ ನಗರಗಳು ಮತ್ತು ಪ್ರವಾಸಿ ತಾಣಗಳು ಹೆಚ್ಚು ಇರುವ ಕಡೆ ಸೂಕ್ತವಾದುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT