ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನಾ ವೆಚ್ಚ ಶೇ 2ರಷ್ಟು ಹಿನ್ನಡೆ

Last Updated 29 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕ ಅವಧಿಯ ಯೋಜನಾ ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 2 ರಷ್ಟು ಕಡಿಮೆಯಾಗಿದೆ.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಂಡಿಸಿದ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯಲ್ಲಿ ಆರ್ಥಿಕ ಇಲಾಖೆ ಈ ಅಂಶವನ್ನು ಉಲ್ಲೇಖಿಸಿದೆ.

2016-17 ನೇ ಸಾಲಿನಲ್ಲಿ ಯೋಜನಾ ವೆಚ್ಚಕ್ಕೆ ₹71,694 ಕೋಟಿ ಮೀಸಲಿಡಲಾಗಿತ್ತು. ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ₹22,270 ಕೋಟಿ ವೆಚ್ಚ ಮಾಡಲಾಗಿದ್ದು, ಬಜೆಟ್ ಮೊತ್ತದ ಶೇ 31ರಷ್ಟನ್ನು ಮಾತ್ರ ಖರ್ಚು ಮಾಡಲಾಗಿದೆ. 2015-16 ರಲ್ಲಿ ಬಜೆಟ್ ಅಂದಾಜು ₹60,906 ಕೋಟಿಯಷ್ಟಿದ್ದು, ಮೊದಲ ಆರು ತಿಂಗಳಲ್ಲಿ ಶೇ 34ರಷ್ಟು ಅಂದರೆ ₹20,830 ಕೋಟಿ ಹಾಗೂ  2014-15ರಲ್ಲಿ ಶೇ 33ರಷ್ಟು ವೆಚ್ಚ ಮಾಡಲಾಗಿತ್ತು. ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಬೇಕು ಎಂದು ಪರಿಶೀಲನಾ ವರದಿಯಲ್ಲಿ ಸಲಹೆ ನೀಡಿದೆ.

ಯೋಜನೇತರ ವೆಚ್ಚದಲ್ಲಿ ಕೂಡ ಇದೇ ಪ್ರವೃತ್ತಿ ಮುಂದುವರಿದಿದೆ. ಹಿಂದಿನ ವರ್ಷಗಳಲ್ಲಿ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಶೇ 46 ರಷ್ಟಿದ್ದ ವೆಚ್ಚದ ಪ್ರಮಾಣ ಈ ವರ್ಷ ಶೇ 45ಕ್ಕೆ ಇಳಿಕೆಯಾಗಿದೆ. ಮಿತವ್ಯಯ ಆದೇಶವನ್ನು ಜಾರಿಗೊಳಿಸಿರುವುದರ ಪರಿಣಾಮ ಇದು ಎಂದು ವರದಿ ಹೇಳಿದೆ.

ಹಳೆ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರಿಂದಾಗಿ ಸಂಪನ್ಮೂಲ ಕ್ರೋಡೀಕರಣದಲ್ಲಿ ಹಿನ್ನಡೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಜಾಗ್ರತೆಯಿಂದ ಸರ್ಕಾರ ಹೆಜ್ಜೆ ಇಡಬೇಕು. ಅನಾವಶ್ಯಕ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ವರದಿ ಶಿಫಾರಸು ಮಾಡಿದೆ. ಸ್ವದೇಶಿ ಮದ್ಯದ ಮಾರಾಟವು ಅಂದಾಜು ಮಾಡಿದ್ದಕ್ಕಿಂತ ಕಡಿಮೆಯಾಗಿದೆ. ಅಬಕಾರಿ ಬಾಕಿಗಳನ್ನು ಸಂಗ್ರಹಿಸಲು, ಕಟ್ಟುನಿಟ್ಟಾಗಿ ಸುಂಕ ವಸೂಲು ಮಾಡಲು ಅಬಕಾರಿ ಇಲಾಖೆ ಕ್ರಮ ವಹಿಸಬೇಕು ಎಂದು ವರದಿ ಸಲಹೆ ನೀಡಿದೆ.

ಸಾಲ ಮಾಡಿ ನೀರಾವರಿ ಯೋಜನೆ ಜಾರಿ
ನೀರಾವರಿ ಯೋಜನೆಗಳಿಗಾಗಿ ಮೊದಲ ಆರು ತಿಂಗಳಿನಲ್ಲಿ ₹3,000 ಕೋಟಿ ಸಾಲ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮಗಳು ಕೈಗೊಳ್ಳುವ ಯೋಜನೆಗಳಿಗೆ ಸಾಲದ ಮೂಲಕ ಹಣಕಾಸು ಒದಗಿಸಿರುವುದನ್ನು ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಉಲ್ಲೇಖಿಸಿದೆ.

ಅಂಕಿ ಅಂಶ: ಕೋಟಿಗಳಲ್ಲಿ
* 2015-16 ₹1,83,320 ರಾಜ್ಯದ ಒಟ್ಟು ಸಾಲ

*2016-17 ₹2,08,557 ರಾಜ್ಯದ ಒಟ್ಟು ಸಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT