ಶುಕ್ರವಾರ, ಏಪ್ರಿಲ್ 16, 2021
31 °C

ಕನ್ನಡ ಸಿನಿಮಾದ ನಾಳೆಗಳು; ಚೆಲ್ಲಾಪಿಲ್ಲಿ ಕನಸುಗಳು

ರಘುನಾಥ ಚ ಹ Updated:

ಅಕ್ಷರ ಗಾತ್ರ : | |

ಕನ್ನಡ ಸಿನಿಮಾದ ನಾಳೆಗಳು; ಚೆಲ್ಲಾಪಿಲ್ಲಿ ಕನಸುಗಳು

​ಕನ್ನಡ ಚಿತ್ರರಂಗದ ನಾಳೆಗಳು ಹೇಗಿರಬೇಕು? ಅದಕ್ಕಾಗಿ ಚಿತ್ರರಂಗ ಮಾಡಬೇಕಾದುದು ಏನು? ಈ ಪ್ರಶ್ನೆಗಳಿಗೆ ಚಿತ್ರರಂಗದ ಕೆಲವರದು ‘ಮೌನವೇ ಆಭರಣ’ ಎನ್ನುವಂಥ ಉತ್ತರ. ಬಹುತೇಕರದು ಏನು ಹೇಳಬೇಕೆಂದು ತಿಳಿಯದ ಅಯೋಮಯ ಸ್ಥಿತಿ. ಅದಿರಲಿ, ನಾಳೆಗಳ ವಿಷಯ ಯೋಚಿಸುವ ಮೊದಲು, ಈ ಹೊತ್ತಿನ ಕನ್ನಡ ಚಿತ್ರರಂಗದ ಸ್ಥಿತಿಯನ್ನು ಸ್ಪಷ್ಟಪಡಿಸಿಕೊಳ್ಳುವುದು ಒಳ್ಳೆಯದು.

‘ಮಾಸ್ತಿಗುಡಿ’ ಚಿತ್ರೀಕರಣ ಸಂದರ್ಭದಲ್ಲಿ (ನ. 7ರಂದು) ನಡೆದ ದುರಂತದ ಘಟನೆಯನ್ನು ನೆನಪಿಸಿಕೊಳ್ಳಿ. ಮೂವರು ಕಲಾವಿದರು ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಧುಮುಕಿದ ಘಟನೆಯಲ್ಲಿ ಇಬ್ಬರು ನೀರುಪಾಲಾದರು. ಮತ್ತೊಬ್ಬ ನಟನನ್ನು ದೋಣಿಗಾರರೊಬ್ಬರು ರಕ್ಷಿಸಿದರು. ಈ ಘಟನೆಯ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ವರ್ತಮಾನವನ್ನು ಚಿತ್ರಿಸುವುದಾದರೆ – ಇಲ್ಲಿ ನಿರ್ಮಾಪಕರು ಚಿತ್ರಗಳನ್ನು ನಿರ್ಮಿಸುತ್ತಾರೆ: ಹಲವರು ಹುಂಬತನದಿಂದ, ಕೆಲವರು ದೇವರ ಮೇಲಿನ ನಂಬಿಕೆಯಿಂದ, ಮತ್ತೆ ಕೆಲವರು ಸಿನಿಮಾ ಮಾಧ್ಯಮದ ಸೆಳೆತ ಅಥವಾ ಖಯಾಲಿಯಿಂದ. ಹೀಗೆ ಸಿನಿಮಾ ನಿರ್ಮಿಸಿದ ಬಹುತೇಕರು ಆರ್ಥಿಕವಾಗಿ ಮುಳುಗುತ್ತಾರೆ. ಯಾರೋ ಒಬ್ಬರನ್ನು ಪ್ರೇಕ್ಷಕರು ರಕ್ಷಿಸಿ ದಡಸೇರಿಸುತ್ತಾರೆ. ಹಾಗೆ ಪಾರಾದವರನ್ನೇ ಪ್ರೇರಣೆಯಾಗಿಸಿಕೊಂಡು ಮತ್ತೆ ಸಿನಿಮಾ ನಿರ್ಮಾಣದ ಜೂಜು ಮುಂದುವರಿಯುತ್ತದೆ.

ಚಿತ್ರತಂಡದ ವೃತ್ತಿಪರತೆಯ ಕೊರತೆಗೆ ‘ಮಾಸ್ತಿಗುಡಿ’ ಪ್ರಕರಣ ಇತ್ತೀಚಿನ ಒಂದು ಉದಾಹರಣೆ. ವೃತ್ತಿಪರತೆಯ ಈ ಕೊರತೆ ಕನ್ನಡ ಚಿತ್ರೋದ್ಯಮದ ಈ ಹೊತ್ತಿನ ಪ್ರಮುಖ ಸಮಸ್ಯೆಯೂ ಹೌದು. ಇದು, ನಿರ್ಮಾಣದ ಜೊತೆಗೆ ಪ್ರದರ್ಶನದ ಕುರಿತ ಅವ್ಯವಸ್ಥೆಯೂ ಹೌದು.

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಉಪಾಧ್ಯಕ್ಷ ಉಮೇಶ ಬಣಕಾರ್‌, ‘‘ನಿರ್ಮಾಪಕರು ಹೆಚ್ಚು ವೃತ್ತಿಪರ ಆಗಬೇಕಿದೆ. ವ್ಯವಧಾನ ಮತ್ತು ವಿವೇಚನೆ ಎರಡನ್ನೂ ಅವರು ರೂಢಿಸಿಕೊಳ್ಳಬೇಕಾಗಿದೆ’’ ಎನ್ನುತ್ತಾರೆ. ಈ ಮಾತನ್ನು ನಿರ್ದೇಶಕ ಬಿ.ಎಸ್‌. ಲಿಂಗದೇವರು ಕೂಡ ಒಪ್ಪುತ್ತಾರೆ. ಪ್ರದರ್ಶನ ಕ್ಷೇತ್ರದಲ್ಲಿನ ಅವ್ಯವಸ್ಥೆ ಕುರಿತು ಮಾತನಾಡುತ್ತ – ‘‘ರಾಜ್ಯದಲ್ಲಿನ ಚಿತ್ರಮಂದಿರಗಳು ನಾಲ್ಕೈದು ಜನರ ನಿಯಂತ್ರಣದಲ್ಲಿವೆ. ‘ರಾಮಾ ರಾಮಾ ರೇ’ ರೀತಿಯ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತದೆ. ಆದರೆ ವಿತರಕ ಹಾಗೂ ಪ್ರದರ್ಶಕ ವಲಯಗಳು ನಿರುತ್ಸಾಹ ವ್ಯಕ್ತಪಡಿಸುತ್ತವೆ. ಹೊಸಬರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆ ಚಿತ್ರಗಳನ್ನು ಜನರಿಗೆ ತಲುಪಿಸುವುದು ಹೇಗೆನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಇದಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ವರ್ತಿಸುತ್ತಿದೆ’’ ಎನ್ನುತ್ತಾರೆ. ಹೊಸಬರಿಗೆ ಮಾಹಿತಿ, ಮಾರ್ಗದರ್ಶನ ನೀಡುವ ‘ಮಾಹಿತಿ ಕೇಂದ್ರ’ ಕೂಡ ಎಂಬತ್ತು ವರ್ಷಗಳ ಇತಿಹಾಸ ಬೆನ್ನಿಗಿಟ್ಟುಕೊಂಡಿರುವ ಚಿತ್ರರಂಗದಲ್ಲಿಲ್ಲ ಎನ್ನುವುದನ್ನೂ ಅವರು ಬೆಟ್ಟುಮಾಡಿ ತೋರಿಸುತ್ತಾರೆ.

​ಪ್ರೇಕ್ಷಕರನ್ನು ತಲುಪುವ ಕಷ್ಟ

ಪರಭಾಷಾ ಚಿತ್ರಗಳ ಹಾವಳಿ, ಅಂತರ್ಜಾಲ ಹಾಗೂ ಧಾರಾವಾಹಿಗಳು ಚಿತ್ರೋದ್ಯಮಕ್ಕೆ ಪ್ರಮುಖ ಸವಾಲಾಗಿವೆ ಎನ್ನುವುದು ಉಮೇಶ್‌ ಬಣಕಾರ್‌ ಅನಿಸಿಕೆ. ‘ಇತ್ತೀಚಿನ ದಿನಗಳಲ್ಲಿ ಕಾನೂನಾತ್ಮಕ ಸಂಗತಿಗಳಿಗೆ ಹೆಚ್ಚು ಒತ್ತು ದೊರೆಯುತ್ತಿದ್ದು, ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ’ ಎಂದೂ ಅವರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಅವರು ನೆನಪಿಸಿಕೊಳ್ಳುವುದು– ‘ಡಬ್ಬಿಂಗ್‌’ ವಿವಾದಕ್ಕೆ ಸಂಬಂಧಿಸಿದಂತೆ ‘ಭಾರತೀಯ ಸ್ಪರ್ಧಾತ್ಮಕ ಆಯೋಗ’ (ಸಿಸಿಐ) ತಳೆದ ನಿಲುವಿನ ಬಗ್ಗೆ. ಡಬ್ಬಿಂಗ್‌ ಚಿತ್ರಗಳು ತೆರೆಕಾಣುವುದಕ್ಕೆ ಕನ್ನಡ ಚಿತ್ರರಂಗ ಅನುಸರಿಸಿಕೊಂಡಿದ್ದ ನೈತಿಕ ಬೇಲಿಯನ್ನು ‘ಸಿಸಿಐ’ ಮುರಿದಿದೆ ಎನ್ನುವ ಧ್ವನಿ ಅವರ ಮಾತಿನಲ್ಲಿದೆ.

‘‘ಒಳ್ಳೆಯ ಸಿನಿಮಾವನ್ನು ರೂಪಿಸುವುದಕ್ಕಿಂತಲೂ ಅದನ್ನು ಜನರಿಗೆ ಮುಟ್ಟಿಸುವುದು ಹೆಚ್ಚು ಕಷ್ಟವಾಗಿದೆ. ಇದು ಈ ಹೊತ್ತಿನ ಮುಖ್ಯ ಸಮಸ್ಯೆ’’ ಎನ್ನುವ ನಿರ್ದೇಶಕ ಪಿ. ಶೇಷಾದ್ರಿ– ‘‘ನಾವು ಪ್ರೇಕ್ಷಕರನ್ನು ಬೆಳೆಸಿಲ್ಲ. ಸಿನಿಮಾಗಳನ್ನು ಬೆಳೆಸಿದ್ದೇವೆ’’ ಎನ್ನುವ ಸತ್ಯಜಿತ್‌ ರೇ ಮಾತನ್ನು ನೆನಪಿಸಿಕೊಳ್ಳುತ್ತಾರೆ.

‘‘ಚಿಕ್ಕ ಚಿತ್ರಮಂದಿರಗಳು ಈ ಹೊತ್ತಿನ ಅಗತ್ಯ. ಈ ನಿಟ್ಟಿನಲ್ಲಿ ‘ಜನತಾ ಚಿತ್ರಮಂದಿರ’ಗಳು ನಾಡಿನೆಲ್ಲೆಡೆ ರೂಪುಗೊಳ್ಳಬೇಕು’’ ಎನ್ನುವುದು ಅವರ ಅನಿಸಿಕೆ. ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಆರಂಭಿಸಿದ್ದ ‘ಬೆಳ್ಳಿಮಂಡಲ’ ಯೋಜನೆ ಪ್ರಯೋಗಶೀಲ ಚಿತ್ರಗಳಿಗೆ ಉತ್ತಮ ವೇದಿಕೆ ಆಗಿದ್ದುದನ್ನು ಶೇಷಾದ್ರಿ ನೆನಪಿಸಿಕೊಳ್ಳುತ್ತಾರೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಚಿತ್ರಸಮಾಜಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ‘ಬೆಳ್ಳಿಮಂಡಲ’ ಸಂಘಟನೆಗಳು ಸಿನಿಮಾ ಪ್ರದರ್ಶನ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸಿದ್ದವು. ಟಿ.ಎಸ್‌. ನಾಗಾಭರಣ ಅವರು ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ‘ಬೆಳ್ಳಿಮಂಡಲ’ಗಳು ಆರಂಭವಾಗಿದ್ದವು. ‘‘ಸಿನಿಮಾ ಕೇವಲ ರಂಜನೀಯ ಮಾಧ್ಯಮ ಎನ್ನುವ ಪರಿಕಲ್ಪನೆಯನ್ನು ತೊಡೆದುಹಾಕುವುದು ಹಾಗೂ ಸೂಕ್ಷ್ಮಗ್ರಾಹಿ ಪ್ರೇಕ್ಷಕನನ್ನು ತಯಾರುಮಾಡುವುದು ಬೆಳ್ಳಿಮಂಡಲದ ಉದ್ದೇಶವಾಗಿತ್ತು’’ ಎನ್ನುವುದು ನಾಗಭರಣರ ಅನಿಸಿಕೆ. ಅಕಾಡೆಮಿ ಪೋಷಣೆ–ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಇವು, ಈಗ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿವೆ. ‘‘ನಾನು ಕೂಡ ಬೆಳ್ಳಿಮಂಡಲಗಳಿಂದ ಉಪಯೋಗ ಪಡೆದಿರುವೆ. ಅರ್ಥಪೂರ್ಣ ಯೋಜನೆಯೊಂದು ನಿಂತುಹೋಗಿರುವುದು ದುರದೃಷ್ಟಕರ’’ ಎನ್ನುವುದು ಶೇಷಾದ್ರಿ ಬೇಸರ.

‘‘ಐಷಾರಾಮಿ ಅಲ್ಲದ, ಪ್ರೇಕ್ಷಕರ ಕೈಗೆಟಕುವ ಸ್ವಚ್ಛ ಹಾಗೂ ತಾಂತ್ರಿಕ ಸವಲತ್ತುಗಳನ್ನು ಹೊಂದಿರುವ ಪುಟ್ಟ ಚಿತ್ರಮಂದಿರಗಳು ಇಂದಿನ ಅಗತ್ಯ’’ ಎನ್ನುವುದು ನಿರ್ದೇಶಕ–ನಿರ್ಮಾಪಕ ಪಿ.ಎಚ್‌. ವಿಶ್ವನಾಥ್‌ ಅನುಭವದ ಮಾತು.

​ನೆರವಿನ ಹಸ್ತ – ಹಸ್ತಕ್ಷೇಪ

‘‘ಈ ಹೊತ್ತಿನ ಕನ್ನಡ ಸಿನಿಮಾಗಳ ರಕ್ತಹೀನತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಒಂದು ಪ್ರಮುಖ ಕಾರಣ. ಸಿನಿಮಾಗಳಿಗೆ ನೀಡುವ ಸಬ್ಸಿಡಿ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ನಾನೊಂದು ಸಬ್ಸಿಡಿ ಸಮಿತಿಗೆ ಅಧ್ಯಕ್ಷನಾಗಿದ್ದೆ. ವರದಿ ಕೊಟ್ಟ ಮೂರು ತಿಂಗಳ ನಂತರ ಪಟ್ಟಿ ಪ್ರಕಟವಾಯಿತು. ಆ ಅವಧಿಯಲ್ಲಿ ನಿರ್ಮಾಪಕರ ಜೊತೆ ಅಧಿಕಾರಿಗಳ ಚೌಕಾಸಿ ನಡೆಯಿತು’’ ಎಂದು ಲಿಂಗದೇವರು ಆಪಾದಿಸುತ್ತಾರೆ.

‘‘ತೊಂದರೆರಹಿತ ಚಿತ್ರೀಕರಣಕ್ಕಾಗಿ ಜಾರಿಯಲ್ಲಿರುವ  ‘ಏಕಗವಾಕ್ಷಿ’ ಯೋಜನೆ ಕೂಡ ಪರಿಣಾಮಕಾರಿ ಆಗಿಲ್ಲ. ವಾರ್ತಾ ಇಲಾಖೆಯಿಂದ ಅನುಮತಿ ಪಡೆದರೂ ಸ್ಥಳೀಯವಾಗಿ ಮತ್ತೆ ಪರವಾನಗಿ ಪಡೆಯಬೇಕಾಗಿದೆ. ‘ಸಿಂಗಲ್‌ ವಿಂಡೊ’ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ’’ ಎನ್ನುವ ಅವರ ಮಾತಿನಲ್ಲಿ ಅಧಿಕಾರಿಗಳ ವರ್ತನೆ ಕುರಿತು ಬೇಸರವಿದೆ.

ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ವೈಫಲ್ಯದ ಜೊತೆಗೆ, ಸರ್ಕಾರದ ಚಲನಚಿತ್ರ ನೀತಿಯನ್ನು ಕೂಡ ಅನುಮಾನದಿಂದ ನೋಡಬೇಕಾಗಿದೆ. ಪ್ರತಿ ವರ್ಷ 125 ಸಿನಿಮಾಗಳಿಗೆ ತಲಾ 10 ಲಕ್ಷ ರೂಪಾಯಿ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪ್ರಕಟಿಸಿದ್ದಾರೆ. ಜನರ ತೆರಿಗೆ ಹಣವನ್ನು ಉದ್ಯಮವೆಂದು ಪ್ರಕಟಿಸಿಕೊಂಡಿರುವ ಕ್ಷೇತ್ರಕ್ಕೆ ಸಾರಾಸಗಟಾಗಿ ವಿನಿಯೋಗಿಸುವ ಸರ್ಕಾರದ ನಿರ್ಧಾರ ಪ್ರಶ್ನಾರ್ಹ. ಸರ್ಕಾರ ಬೆಂಬಲಿಸಬೇಕಿರುವುದು ನಾಡು–ನುಡಿಯ ಅಸ್ಮಿತೆಯನ್ನು ಸಾರುವ ವಿಶೇಷ ಪ್ರಯೋಗಗಳನ್ನೇ ಹೊರತು ವ್ಯಾಪಾರಿ ಚಿತ್ರಗಳನ್ನಲ್ಲ. ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಸಿನಿಮಾಗಳಿಗೆ ದೊಡ್ಡ ಮೊತ್ತದ ಪ್ರೋತ್ಸಾಹ ಅಗತ್ಯ. ಆದರೆ, ಸಾರಾಸಗಟಾಗಿ ನೀಡುವ ನೆರವು ಸಿನಿಮಾಗಳ ಸಂಖ್ಯೆಯನ್ನು ಉತ್ತೇಜಿಸುತ್ತದೆಯೇ ಹೊರತು ಗುಣಮಟ್ಟವನ್ನಲ್ಲ. ಮನರಂಜನೆಯ ಹೆಸರಿನಲ್ಲಿ ರೂಪುಗೊಳ್ಳುವ ಅಪಸವ್ಯಗಳಿಗೆ ಸರ್ಕಾರಿ ನೆರವು ದೊರೆಯುವುದು ಪ್ರಜೆಗಳ ಹಣವನ್ನು ಅಪಬಳಕೆಯಲ್ಲದೆ ಬೇರೇನೂ ಅಲ್ಲ.

ಪ್ರದರ್ಶನಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಳ್ಳುವುದರ ಜೊತೆಗೆ ಪ್ರೇಕ್ಷಕರ ಅಭಿರುಚಿ ಮಟ್ಟವನ್ನು ಹೆಚ್ಚಿಸುವ ಅಗತ್ಯವನ್ನೂ ಶೇಷಾದ್ರಿ ಒತ್ತಿಹೇಳುತ್ತಾರೆ. ‘‘ಮಲಯಾಳಂ–ಮರಾಠಿ ಮಾದರಿಯಲ್ಲಿ ನಾವು ಪ್ರೇಕ್ಷಕರ ಅಭಿರುಚಿ ಬೆಳೆಸಬೇಕಿದೆ. ಇದರಿಂದ ಒಳ್ಳೆಯ ಚಿತ್ರಗಳ ನಿರ್ಮಾಣ ಹೆಚ್ಚಾಗುತ್ತದೆ’’ ಎನ್ನುವ ನಿರೀಕ್ಷೆ ಅವರದು.

ಸಿನಿಮಾ ನಿರ್ಮಾಣದ ಉಬ್ಬರ

​ಎಂಟು ದಶಕಗಳ ಅವಧಿಯಲ್ಲಿ ಸುಮಾರು 3500 ಕನ್ನಡ ಸಿನಿಮಾಗಳು ತೆರೆಕಂಡಿವೆ. ಅದರಲ್ಲಿ ಕೊನೆಯ ದಶಕದಲ್ಲಿ ತೆರೆಕಂಡ ಸಿನಿಮಾಗಳ ಸಂಖ್ಯೆ 1 ಸಾವಿರಕ್ಕೂ ಹೆಚ್ಚು. ಅಂದರೆ, ನಾಲ್ಕನೇ ಒಂದು ಭಾಗಕ್ಕೂ ಹೆಚ್ಚು ಚಿತ್ರಗಳು ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ತೆರೆಕಂಡಿವೆ. ಸಿನಿಮಾಗಳ ಈ ಉಬ್ಬರ ಕನ್ನಡ ಚಿತ್ರರಂಗದ ಉಚ್ಛ್ರಾಯ ಸ್ಥಿತಿಯನ್ನೇನೂ ಸೂಚಿಸುವುದಿಲ್ಲ. ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಸಂದರ್ಭದಲ್ಲಿನ ಬಿಕ್ಕಟ್ಟುಗಳು, ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಎದುರಿಸಿದ ಅಸ್ತಿತ್ವದ ತಲ್ಲಣಗಳು ಈಗಲೂ ಬದಲಾಗಿಲ್ಲ. ಪರಭಾಷಾ ಚಿತ್ರಗಳ ಸ್ಪರ್ಧೆ ಹಾಗೂ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಹುಡುಕುವ ಸಮಸ್ಯೆಯಿಂದ ಹಿಡಿದು, ಡಬ್ಬಿಂಗ್ ಇಣುಕಿನವರೆಗೆ ಚಿತ್ರೋದ್ಯಮ ಎದುರಿಸುತ್ತಿರುವ ದಶಕಗಳ ಹಿಂದಿನ ಸಮಸ್ಯೆಗಳು ಈಗಲೂ ಇವೆ.

ಸಿನಿಮಾಗಳ ಉಬ್ಬರಕ್ಕೆ ಕಾರಣವಿದೆ. ತೊಂಬತ್ತರ ದಶಕದ ಉದಾರೀಕರಣದ ಗಾಳಿಯಲ್ಲಿ ಬಹುತೇಕ ಸಾರ್ವಜನಿಕ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿದಂತೆ ಕನ್ನಡ ಚಿತ್ರರಂಗದಲ್ಲೂ ಹೂಡಿಕೆಯ ಪ್ರಮಾಣ ಹೆಚ್ಚಾಯಿತು. ಸಿನಿಮಾದ ಬಗೆಗಿನ ಆಕರ್ಷಣೆಯಿಂದ ವಿವಿಧ ಕ್ಷೇತ್ರಗಳ ಹಣವಂತರು ಸಿನಿಮಾ ನಿರ್ಮಿಸಲು ತೊಡಗಿದ್ದು, ಚಿತ್ರೋದ್ಯಮದ ದಿಢೀರ್ ಬೆಳವಣಿಗೆಗೆ ಕಾರಣವಾಯಿತು. 2006ರಲ್ಲಿ ತೆರೆಕಂಡು ಬಹುದೊಡ್ಡ ಯಶಸ್ಸನ್ನು ಗಳಿಸಿದ ’ಮುಂಗಾರು ಮಳೆ’ ಹಾಗೂ ನಂತರದ ‘ದುನಿಯಾ’ ಚಿತ್ರಗಳು ನಿರ್ಮಾಪಕರ ಸಂಖ್ಯೆ ಹೆಚ್ಚಾಗಲು ಕಾರಣವಾದವು. ಆದರೆ ಸಂಖ್ಯೆಯಲ್ಲಿನ ಈ ಹೆಚ್ಚಳ ಗುಣಮಟ್ಟದ ರೂಪದಲ್ಲಿ ಕಾಣಿಸಿಕೊಳ್ಳಲಿಲ್ಲ.

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ತೆರೆಕಂಡಿದ್ದು 1934ರಲ್ಲಿ. ಈ ಸಿನಿಮಾ ರೂಪುಗೊಂಡಿದ್ದರ ಹಿನ್ನೆಲೆಯಲ್ಲಿ, ಕನ್ನಡಿಗರು ತಮ್ಮ ಭಾಷೆಯಲ್ಲಿಯೇ ಸಿನಿಮಾವನ್ನು ನೋಡುವ ಅವಕಾಶ ದೊರೆಯಬೇಕು ಎನ್ನುವ ಹಂಬಲವಿತ್ತು. ‘ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯಿಲ್ಲ ಎನ್ನುವ ನಂಬಿಕೆಯನ್ನು ಸುಳ್ಳುಮಾಡುವ’ ಉದ್ದೇಶವಿತ್ತು. ಸುಲೋಚನಾ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ನಿಗದಿತ ವೇತನ ದೊರೆಯದ ಕಾರಣ ಕಲಾವಿದರು–ಕಾರ್ಮಿಕರು ಮುಷ್ಕರ ಹೂಡಿದ ಘಟನೆಯೂ ನಡೆಯಿತು. ಎಂಬತ್ತು ವರ್ಷಗಳ ನಂತರವೂ ಈ ಆಶಯ, ಆತಂಕ ಮತ್ತು ಸಮಸ್ಯೆಗಳು ಕನ್ನಡ ಚಿತ್ರರಂಗದಲ್ಲಿ ಹಾಗೆಯೇ ಇವೆ.

ಪರಭಾಷಾ ಸಿನಿಮಾಗಳ ಪೈಪೋಟಿ, ರೀಮೇಕ್ ಸಿನಿಮಾಗಳ ಅಬ್ಬರದಲ್ಲಿ ಅಪ್ಪಟ ಕನ್ನಡ ಕಥನಗಳು ಕ್ಷೀಣಿಸುತ್ತಿರುವ ಸಂದರ್ಭ ಇಂದಿನದು. ಕಾರ್ಮಿಕರು ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಸಂಭಾವನೆಯ ಕುರಿತು ಅಸಮಾಧಾನ ಹೊಂದಿದ್ದಾರೆ. ಎಂಟು ದಶಕಗಳ ನಂತರವೂ ಕನ್ನಡ ಸಿನಿಮಾದ ಸಮಸ್ಯೆ–ಸವಾಲುಗಳ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳು ಆದಂತಿಲ್ಲ. ಸದ್ಯದ ಸ್ಥಿತಿ ನೋಡಿದರೆ, ‘ಸತಿ ಸುಲೋಚನಾ’ದ ನೋವು–ನಲಿವುಗಳ ಚೌಕಟ್ಟಿನಿಂದ ಕನ್ನಡ ಚಿತ್ರರಂಗ ಹೊರಬರುವ ಲಕ್ಷಣವೂ ಕಾಣುತ್ತಿಲ್ಲ. ಆದರೆ, ಗಮನಾರ್ಹ ಸಂಖ್ಯೆಯ ತರುಣ ತರುಣಿಯರು ಚಲನಚಿತ್ರ ಮಾಧ್ಯಮವನ್ನು ತಮ್ಮ ಅಭಿವ್ಯಕ್ತಿಯ ಗಂಭೀರ ಮಾಧ್ಯಮವಾಗಿ ಪರಿಗಣಿಸಿರುವುದು ಹಾಗೂ ಕಮರ್ಷಿಯಲ್ ನೆಲೆಗಟ್ಟಿನಲ್ಲಿಯೇ ಪ್ರಯೋಗಶೀಲ ಸಿನಿಮಾಗಳನ್ನು ರೂಪಿಸುವ ತುಡಿತ ಹೊಸ ಪೀಳಿಗೆಯ ತಂತ್ರಜ್ಞರಲ್ಲಿ ಹೆಚ್ಚಾಗುತ್ತಿರುವುದು ಕುತೂಹಲಕರ.

ಸಾಹಿತ್ಯದ ಚೌಕಟ್ಟಿನಿಂದ ಬಿಡಿಸಿಕೊಂಡು ದೃಶ್ಯ ಮಾಧ್ಯಮದ ಸಾಧ್ಯತೆಗಳ ಶೋಧದಲ್ಲಿ ಆಸಕ್ತಿ ಹೊಂದಿರುವ ತಲೆಮಾರೊಂದು ಕನ್ನಡದಲ್ಲಿ ನಿಧಾನವಾಗಿಯಾದರೂ ರೂಪುಗೊಳ್ಳುತ್ತಿರುವುದು, ದೃಶ್ಯ ಮಾಧ್ಯಮದ ಸಾಧ್ಯತೆಗಳ ಬಗ್ಗೆ ಹೊಸ ತಲೆಮಾರು ಗಂಭೀರವಾಗಿರುವುದನ್ನು ಸೂಚಿಸುವಂತಿದೆ.

ಚಿತ್ರರಂಗದ ನಾಳೆಗಳ ಬಿಡಿನೋಟ

* ಸಂಖ್ಯೆಗೆ ಮಹತ್ವ ನೀಡದೆ, ಗುಣಮಟ್ಟಕ್ಕೆ ಒತ್ತು ನೀಡುವುದು.

* ಪ್ರೇಕ್ಷಕರ ಅಭಿರುಚಿಯ ಮಟ್ಟವನ್ನು ಹೆಚ್ಚಿಸುವುದು. ವ್ಯಾಪಾರಿ ಚಿತ್ರಗಳನ್ನು ರೂಪಿಸುವಾಗಲೂ ನೈತಿಕ ಎಚ್ಚರ ಉಳಿಸಿಕೊಳ್ಳುವುದು.

* ರಾಜ್ಯದಾದ್ಯಂತ 250–300 ಆಸನಗಳ ವ್ಯವಸ್ಥೆಯ ಚಿಕ್ಕ–ಚೊಕ್ಕ ಚಿತ್ರಮಂದಿರಗಳ ನಿರ್ಮಾಣ.

* ಚಿತ್ರಸಮಾಜಗಳನ್ನು ಹೆಚ್ಚಿಸುವುದು. ಶಾಲೆ–ಕಾಲೇಜುಗಳಲ್ಲಿ ಹಾಗೂ ಗ್ರಾಮಮಟ್ಟದಲ್ಲಿ ಫಿಲ್ಮ್‌ ಕ್ಲಬ್‌ಗಳನ್ನು ಸ್ಥಾಪಿಸುವುದು.

* ಸಿನಿಮಾ ವಿಮರ್ಶೆಯನ್ನು ಒಂದು ಕಲೆಯ ರೂಪದಲ್ಲಿ ಬೆಳೆಸುವುದು (ಚಿತ್ರೋದ್ಯಮದ ಒಳಗೆ ಹಾಗೂ ಹೊರಗೆ).

* ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳುವುದು. ಬಿ.ಆರ್‌. ಪಂತುಲು, ಪಾರ್ವತಮ್ಮ ರಾಜಕುಮಾರ್‌, ಎನ್‌. ವೀರಾಸ್ವಾಮಿ, ಡಿ. ಶಂಕರ್‌ಸಿಂಗ್‌ ಅವರಂಥ ವೃತ್ತಿಪರ ನಿರ್ಮಾಪಕರನ್ನು ಬೆಳೆಸುವುದು.

* ಕಥೆ ಹಾಗೂ ಚಿಂತನೆಯಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವುದು.

* ಈಗಿರುವ ಮಾರುಕಟ್ಟೆ ಉಳಿಸಿಕೊಳ್ಳುವುದು ಹಾಗೂ ಇರುವ ಮಾರುಕಟ್ಟೆಯನ್ನು ವಿಸ್ತರಿಸಲು ಪ್ರಯತ್ನಿಸುವುದು. ಕರ್ನಾಟಕದ ಹೊರಗೆ ಇರುವ ಪ್ರೇಕ್ಷಕರನ್ನು ತಲುಪಲು ಪ್ರಯತ್ನಿಸುವುದು.

* ಪರಭಾಷೆಗಳಲ್ಲಿ ತಾರಾ ವರ್ಚಸ್ಸಿನ ನಟರು ತಮ್ಮ ಅಭಿರುಚಿಗೆ ತಕ್ಕ ಪರ್ಯಾಯ ಸಿನಿಮಾಗಳನ್ನು ನಿರ್ಮಿಸುವುದನ್ನು ಪ್ರತಿಷ್ಠೆ–ಕರ್ತವ್ಯ ಎಂದು ಭಾವಿಸಿದ್ದಾರೆ. ನಮ್ಮಲ್ಲಿ ಆ ಸಂಸ್ಕೃತಿ ಬೆಳೆಯಬೇಕು. ಪುನೀತ್, ದರ್ಶನ್, ಸುದೀಪ್ ತರಹದವರು ಪ್ರತಿಭಾವಂತರ ಸಿನಿಮಾಗಳನ್ನು ಮೆಚ್ಚಿಕೊಂಡರೆ ಸಾಲದು; ತಾವೂ ನಿರ್ಮಿಸುವ ಮನಸ್ಸು ಮಾಡಬೇಕು.

ಕಾಸರವಳ್ಳಿ ಸೂತ್ರಗಳು!

“ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಸಾಕಷ್ಟು ಯಶಸ್ವಿಯಾಗಿದ್ದರೂ ಮನಸ್ಸುಗಳನ್ನು ತಲುಪುವ ನಿಟ್ಟಿನಲ್ಲಿ ನಾವು ಹಿಂದೆ ಬಿದ್ದಿದ್ದೇವೆ’’ ಎನ್ನುವುದು ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ ಅನಿಸಿಕೆ. ‘‘ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ಸಾಕಷ್ಟು ಯಶಸ್ವಿಯಾಗಿದ್ದೇವೆ. 50ರ ದಶಕದಲ್ಲಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಇತ್ತು. ಈಗ ಆ ಸ್ಥಿತಿ ಇಲ್ಲ. ಸವಾಲು ಇರುವುದು ಪ್ರೇಕ್ಷಕರ ಮನಸ್ಸನ್ನು ತಲುಪುವುದರಲ್ಲಿ. ಇದು ಎರಡು ಬಗೆಯದು: ಕಂಟೆಂಟ್‌ ಹಾಗೂ ಮೂಲಭೂತ ಸವಲತ್ತುಗಳ ರೂಪದಲ್ಲಿ’’ ಎನ್ನುತ್ತಾರೆ.

ಮೂಲಭೂತ ಸವಲತ್ತುಗಳ ಚಿಕ್ಕಮಂದಿರಗಳ ರೂಪದಲ್ಲಿ ದೊರಕಬೇಕು ಎನ್ನುವುದು ಅವರ ನಿರೀಕ್ಷೆ. ‘ಕಂಟೆಂಟ್‌’ ವಿಷಯದಲ್ಲಿ ಕಾಸರವಳ್ಳಿ ಮಾದರಿಯಾಗಿ ಉದಾಹರಿಸುವುದು 60–70ರ ದಶಕದ ಕನ್ನಡ ಚಿತ್ರರಂಗವನ್ನು. ನಮ್ಮದೇ ಕಥೆಗಳು, ನಮ್ಮದೇ ಬಿಕ್ಕಟ್ಟುಗಳನ್ನು ದೃಶ್ಯರೂಪಕ್ಕೆ ತರುವ ಮೂಲಕ ಕನ್ನಡ ಚಿತ್ರಗಳು ಅಸ್ಮಿತೆಯೊಂದನ್ನು ದಕ್ಕಿಸಿಕೊಂಡಿದ್ದ ದಿನಗಳವು. ಅಂಥ ಅಸ್ಮಿತೆ ಈಗ ಕಾಣೆಯಾಗಿದೆ. ವಿಶೇಷವಾಗಿ ಜನಪ್ರಿಯ ಸಿನಿಮಾಗಳು ಅಸ್ಮಿತೆಯ ಬಿಕ್ಕಟ್ಟನ್ನು (ಐಡೆಂಟಿಟಿ ಕ್ರೈಸಿಸ್‌) ಹೆಚ್ಚು ಎದುರಿಸುತ್ತಿವೆ, ಇದು ತಪ್ಪಬೇಕು ಎನ್ನುವುದು ಅವರ ವಿಶ್ಲೇಷಣೆ.

‘ಸಿನಿಮಾ ಒಂದು ಸಂಸ್ಕೃತಿಯ ರೂಪದಲ್ಲಿ ಬೆಳೆದಿಲ್ಲ’ ಎನ್ನುವುದು ಗಿರೀಶರ ಮತ್ತೊಂದು ಅಭಿಪ್ರಾಯ. ‘‘ಪ್ರೇಕ್ಷಕ ಮನರಂಜನೆಯ ರೂಪದಲ್ಲಿ ಚಿತ್ರವನ್ನು ನೋಡುತ್ತಿದ್ದರೆ, ಚಿತ್ರರಂಗ ಉದ್ಯಮದ ರೂಪದಲ್ಲಿ ಸಿನಿಮಾವನ್ನು ನೋಡುತ್ತಿದೆ. ವ್ಯಾಪಾರ ಕೂಡ ಕಲೆಯ ಭಾಗವಾಗಬೇಕು. ಸಿನಿಮಾ ಎನ್ನುವುದು ಕಲೆಯಾಗಿ, ಜೀವನದರ್ಶನವಾಗಿ ಪರಿಣಮಿಸಬೇಕು. ಇದು ಬಂಗಾಳಿ, ಮರಾಠಿ, ಮಲೆಯಾಳಂ ಸಿನಿಮಾಗಳಲ್ಲಿ ಸಾಧ್ಯವಾಗಿದೆ’’ ಎನ್ನುವ ಅವರು, ‘‘ನಾವು ಉಳಿದವರಿಗಿಂಥ ಭಿನ್ನ’’ ಎಂದು ಸಾಬೀತುಪಡಿಸುವುದು ಈ ಹೊತ್ತಿನ ಅಗತ್ಯ ಎನ್ನುತ್ತಾರೆ.

‘‘ಹೊಸ ಪ್ರಯತ್ನಗಳು ನಮ್ಮಲ್ಲಿ ಕಡಿಮೆ. ಈಗ ಬರುತ್ತಿರುವ ಒಳ್ಳೆಯ ಚಿತ್ರಗಳು ಕೂಡ ನಮ್ಮ ಮಟ್ಟಿಗೆ ಉತ್ತಮ, ಅಷ್ಟೇ. ಹೊರಗಿನ ಚಿತ್ರಗಳೊಂದಿಗೆ ಸ್ಪರ್ಧಿಸಿದಾಗ, ಹೋಲಿಸಿದಾಗ ನಮ್ಮ ಸಿನಿಮಾಗಳ ಮಿತಿ ತಿಳಿಯುತ್ತದೆ’’ ಎಂದು ಸ್ಪಷ್ಟವಾಗಿ ಹೇಳುವ ಗಿರೀಶ ಕಾಸರವಳ್ಳಿ, ಹೊಸ ಹುಡುಗರ ಪ್ರಯೋಗಶೀಲ ಚಿತ್ರಗಳು ‘ಕನ್ನಡತನ’ದ ಕೊರತೆಯಿಂದ ಬಳಲುತ್ತಿರುವುದನ್ನು ಗಮನಿಸಿದ್ದಾರೆ.

‘‘ನಾವು ಸಿನಿಮಾದ ತಾಂತ್ರಿಕ ಅಂಶಗಳ ಕುರಿತು ಮಾತನಾಡುತ್ತಿದ್ದೇವೆ. ಬುದ್ಧಿ ಇರುವವನು ತನ್ನ ಸಿನಿಮಾದಲ್ಲಿ ಏನು ಮಾತಾಡ್ತಿದ್ದಾನೆ ಎನ್ನುವುದು ಮುಖ್ಯ. ಕಲೆಯಾಗಿ, ವ್ಯಾಪಾರವಾಗಿ ನಾವು ಫೇಲ್‌ ಆಗುತ್ತಿದ್ದೇವೇನೊ ಅನ್ನಿಸುತ್ತೆ’’ ಎನ್ನುವ ಕಾಸರವಳ್ಳಿ – ‘‘ಉತ್ತಮ ಚಿತ್ರಗಳನ್ನು ರೂಪಿಸುವ ಆತ್ಮವಿಶ್ವಾಸ ಹಾಗೂ ಮಹತ್ವಾಕಾಂಕ್ಷೆ ನಮಗಿರಬೇಕು’’ ಎನ್ನುತ್ತಾರೆ. ನಮಗಿಂತಲೂ ಕಡಿಮೆ ಬಜೆಟ್‌ನಲ್ಲಿ ಉತ್ತಮ ಚಿತ್ರಗಳನ್ನು ರೂಪಿಸುವ ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆದಿವೆ ಎನ್ನುವ ಅವರ ಮಾತು, ಗುಣಮಟ್ಟಕ್ಕೂ ಬಜೆಟ್‌ನ ಚೌಕಟ್ಟಿಗೂ ಸಂಬಂಧ ಕಲ್ಪಿಸಬೇಕಿಲ್ಲ ಎನ್ನುವುದನ್ನು ಸೂಚಿಸುವಂತಿದೆ.

‘‘ಈಗಿರುವ ಸಿನಿಮಾ ತರಬೇತಿ ಸಂಸ್ಥೆಗಳು ದುಡ್ಡನ್ನಷ್ಟೇ ಗಮನದಲ್ಲಿಟ್ಟುಕೊಂಡಿವೆ. ಸಿನಿಮಾದ ವ್ಯಾಕರಣವನ್ನು ಕಲಿಸುವ ತರಬೇತಿ ಸಂಸ್ಥೆಗಳನ್ನು ಸರ್ಕಾರವೋ ಚಲನಚಿತ್ರ ಅಕಾಡೆಮಿಯೋ ನಡೆಸಬೇಕು. ಮರಾಠಿಯಲ್ಲಿನ ಅರ್ಥಪೂರ್ಣ ಸಿನಿಮಾಗಳ ಹಿನ್ನೆಲೆಯಲ್ಲಿ ‘ಪೂನಾ ಫಿಲ್ಮ್‌ ಇನ್‌ಸ್ಟಿಟ್ಯೂಟ್‌’ ಪಾತ್ರ ಇರುವುದನ್ನು ಗಮನಿಸಬೇಕು’

–ಪಿ.ಎಚ್‌. ವಿಶ್ವನಾಥ್‌, ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.