ಧೀಮಂತ ನಾಯಕಿ

7

ಧೀಮಂತ ನಾಯಕಿ

Published:
Updated:

ಇಂದಿರಾ ಗಾಂಧಿಯವರ ಶತಮಾನೋತ್ಸವ ಆಚರಿಸುವುದು ಹುತಾತ್ಮರಿಗೆ ಮಾಡಿದ ಅವಮಾನ ಎಂಬರ್ಥದಲ್ಲಿ ಪ್ರೊ. ಎಲ್‌.ಎಸ್‌.ಶೇಷಗಿರಿರಾವ್ ಅವರು ಬರೆದಿರುವ ಪತ್ರ  (ವಾ.ವಾ., ನ.29) ಪೂರ್ವಗ್ರಹಪೀಡಿತವಾದುದು.ಇಂದಿರಾ ಗಾಂಧಿ ಅವರನ್ನು ‘ಇಸ್ರೇಲ್‌ನ ಗೋಲ್ಡಾ ಮೈರ್ ನಂತರದ ವಿಶ್ವದ ಎರಡನೇ ಉಕ್ಕಿನ ಮಹಿಳೆ’ ಎಂದು ಇಡೀ ವಿಶ್ವ ಹಾಡಿ ಹೊಗಳಿರುವಾಗ, ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರನ್ನು ಖಳನಾಯಕಿಯಂತೆ ವರ್ಣಿಸುವುದು ಒಂದು ವ್ಯವಸ್ಥಿತ ಪಿತೂರಿ.ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದು ನಿಜ. ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ವಿರೋಧ ಪಕ್ಷಗಳು, ತಮ್ಮ  ಜವಾಬ್ದಾರಿಯನ್ನು ಬದಿಗಿಟ್ಟು ದೇಶದ ವಿರುದ್ಧ ದಂಗೆ ಏಳುವಂತೆ ಪೊಲೀಸರು ಮತ್ತು ಸೈನಿಕರಿಗೆ ಕರೆ ಕೊಟ್ಟಿದ್ದುದು ಇದಕ್ಕೆ ಕಾರಣ. ನಂತರ ನಡೆದ ಚುನಾವಣೆಯಲ್ಲಿ, ತುರ್ತುಪರಿಸ್ಥಿತಿ ಹೇರಿಕೆಗಾಗಿ ಜನ ತಮ್ಮನ್ನು ಸೋಲಿಸಿದಾಗ ಇಂದಿರಾ ಅವರಿಗೆ ಪ್ರಾಯಶ್ಚಿತ್ತವಾಗಿತ್ತು. ಒಂದು ತಪ್ಪಿಗೆ ಒಂದೇ ಸಲ ಶಿಕ್ಷೆ ಎಂದು ಕಾನೂನು ಹೇಳುತ್ತದೆ. ಆದಕಾರಣ ಅವರನ್ನು ಪದೇಪದೇ ಶಿಕ್ಷಿಸುವುದು ಮಹಾ ಅಪರಾಧ. ಸೋಲಿನ ನಂತರ  ನಡೆದ ಚುನಾವಣೆಯಲ್ಲಿ ಭಾರತದ ಮತದಾರರು ಇಂದಿರಾ ಅವರು ಮತ್ತೆ ಆಡಳಿತ ನಡೆಸಲು ಅವಕಾಶ ನೀಡಿದ್ದು ಪ್ರಜಾಪ್ರಭುತ್ವದ ಒಂದು ಅಪೂರ್ವ ವಿಜಯ.ದೇಶದ ಒಗ್ಗಟ್ಟು ಕಾಪಾಡುವಲ್ಲಿ, ಕಾಶ್ಮೀರ, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್‌ನಲ್ಲಿ  ಶಾಂತಿ ಕಾಪಾಡುವಲ್ಲಿ, ಸಿಕ್ಕಿಂ ಪ್ರದೇಶವನ್ನು ಭಾರತಕ್ಕೆ ಸೇರಿಸಿಕೊಳ್ಳುವಲ್ಲಿ ಇಂದಿರಾ ಅವರ ಆಡಳಿತ ಶಿಖರ ಪ್ರಾಯದಂತೆ ಕೆಲಸ ಮಾಡಿತ್ತು. ಇಂತಹ ಶ್ರೇಷ್ಠ ಮಹಿಳೆಯ ಕೊಡುಗೆಗಳನ್ನು ಗುರುತಿಸುವ ಬದಲಾಗಿ ಅವರನ್ನು ಹೀಗಳೆಯುವುದು ಸರಿಯಲ್ಲ.

-ಕೆ.ಎನ್‌.ಭಗವಾನ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry