ಮಿತ ಚಿನ್ನ ತೆರಿಗೆ ಮುಕ್ತ

7
ಆದಾಯ ತೆರಿಗೆ ದಾಳಿ ವೇಳೆ ನಿಗದಿತ ಪ್ರಮಾಣದ ಆಭರಣ ಜಪ್ತಿಗೆ ಅವಕಾಶವಿಲ್ಲ

ಮಿತ ಚಿನ್ನ ತೆರಿಗೆ ಮುಕ್ತ

Published:
Updated:
ಮಿತ ಚಿನ್ನ ತೆರಿಗೆ ಮುಕ್ತ

ನವದೆಹಲಿ: ಕಪ್ಪುಹಣ ನಿಯಂತ್ರಣಕ್ಕಾಗಿ ನೋಟು ರದ್ದತಿ ಮಾಡಿರುವ ಕೇಂದ್ರ ಸರ್ಕಾರ, ಚಿನ್ನಾಭರಣಗಳ ಮೇಲೆಯೂ ತೆರಿಗೆ ವಿಧಿಸಲಿದೆ ಎಂಬ ಜನರ ಆತಂಕಕ್ಕೆ ಸ್ಪಷ್ಟನೆ ನೀಡಿದೆ. ನಿಗದಿತ ಮಿತಿಯೊಳಗಿನ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹೇಳಿದೆ.

ಆದಾಯ ತೆರಿಗೆ ಕಾನೂನಿನ ತಿದ್ದುಪಡಿ ಮಸೂದೆ ಪ್ರಕಾರ, ಘೋಷಿತ ಅಥವಾ ಕೃಷಿ ಆದಾಯದಲ್ಲಿ ಖರೀದಿಸಿದ ಚಿನ್ನಾಭರಣಗಳ ಮೇಲೆ ತೆರಿಗೆ ವಿಧಿಸುವುದಿಲ್ಲ. ವಂಶ ಪಾರಂಪರ್ಯವಾಗಿ ಬಂದ  ಚಿನ್ನಾಭರಣಗಳಿಗೂ ಇದು ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ತಿದ್ದುಪಡಿ ಮಸೂದೆಯಲ್ಲಿ ಚಿನ್ನಾಭರಣಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ವದಂತಿಯನ್ನು ಈ ಮೂಲಕ ಕೇಂದ್ರ ಅಲ್ಲಗೆಳೆದಿದೆ.

ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಪತ್ತೆಯಾದ ಚಿನ್ನಾಭರಣ ನಿಗದಿತ ಮಿತಿಯೊಳಗೆ ಇದ್ದರೆ, ಅದನ್ನು ಜಪ್ತಿ ಮಾಡುವುದಿಲ್ಲ. ಆದರೆ ವಿವಾಹಿತ ಮಹಿಳೆಯೊಬ್ಬರು ಗರಿಷ್ಠ 500 ಗ್ರಾಂ, ಅವಿವಾಹಿತ ಮಹಿಳೆ ಗರಿಷ್ಠ 250 ಗ್ರಾಂ ಮತ್ತು ಪುರುಷ ಗರಿಷ್ಠ 100 ಗ್ರಾಂ ಚಿನ್ನ ಹೊಂದಿರಬಹುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ. ತಿದ್ದುಪಡಿ ಮಾಡಲಾದ ಕಾಯ್ದೆಯ 115ಬಿಬಿಇ ಸೆಕ್ಷನ್ ಪ್ರಕಾರ ಕಪ್ಪುಹಣದ ಮೇಲೆ ಶೇ 50ರಷ್ಟು ತೆರಿಗೆ ಮತ್ತು ಶೇ 25ರಷ್ಟು ದಂಡ ವಿಧಿಸಬಹುದು. ಆದರೆ ಅಘೋಷಿತ ಆಸ್ತಿ ಅಥವಾ ಸಂಪತ್ತು ಕಪ್ಪುಹಣವೆಂದು ಸಾಬೀತಾದರೆ ಅದರ ಮೇಲೆ ಶೇ 10ರಷ್ಟು ಹೆಚ್ಚುವರಿ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸಲುವಾಗಿ  ಮತ್ತೊಂದು ಸೆಕ್ಷನ್ ಸೇರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಆದಾಯ ತೆರಿಗೆ ಕಾನೂನು ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ರಾಜ್ಯಸಭೆಯ ಪರಿಶೀಲನೆ ನಂತರ ಅದಕ್ಕೆ ರಾಷ್ಟ್ರಪತಿ ಅಂಕಿತ ದೊರೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry