ಕಷ್ಟ ಪರಿಹಾರಕ್ಕೆ ಕೈಗೊಂಡ ಕ್ರಮಗಳೇನು: ‘ಸುಪ್ರೀಂ’ ಪ್ರಶ್ನೆ

7

ಕಷ್ಟ ಪರಿಹಾರಕ್ಕೆ ಕೈಗೊಂಡ ಕ್ರಮಗಳೇನು: ‘ಸುಪ್ರೀಂ’ ಪ್ರಶ್ನೆ

Published:
Updated:

ನವದೆಹಲಿ: ನೋಟು ರದ್ದತಿಯಿಂದಾಗಿ ಸಹಕಾರ ಬ್ಯಾಂಕ್‌ಗಳ ಮೇಲೆಯೇ ಅವಲಂಬಿತರಾಗಿರುವ ಗ್ರಾಮೀಣ ಪ್ರದೇಶದ ಜನರ ಕಷ್ಟ ಮತ್ತು ಅನನುಕೂಲಗಳನ್ನು ಕಡಿಮೆ ಮಾಡಲು ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ನೋಟು ರದ್ದತಿಗೆ ಸಂಬಂಧಿಸಿ ಸಲ್ಲಿಸಲಾಗಿರುವ ವಿವಿಧ ದೂರುಗಳನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಪೀಠ ವಿಚಾರಣೆ ನಡೆಸಿತು. ಎಲ್ಲ ದೂರುದಾರರು ಜತೆ ಕುಳಿತು ಯಾವ ದೂರನ್ನು ಹೈಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು ಮತ್ತು ಯಾವುದನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಬೇಕು ಎಂದು ವರ್ಗೀಕರಿಸುವಂತೆ ಪೀಠ ಸೂಚಿಸಿತು.

‘ಕೇಂದ್ರ ಸರ್ಕಾರ ಸಲ್ಲಿಸಿರುವ ಹೆಚ್ಚುವರಿ ಪ್ರಮಾಣಪತ್ರದಲ್ಲಿ ಇಡೀ ಒಂದು ಅಧ್ಯಾಯ ಸಹಕಾರ ಬ್ಯಾಂಕುಗಳ ಬಗ್ಗೆಯೇ ಇದೆ. ಸಹಕಾರ ಬ್ಯಾಂಕುಗಳ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿಲ್ಲ ಎಂದಲ್ಲ. ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಬ್ಯಾಂಕುಗಳಲ್ಲಿ ಅಗತ್ಯ ಸೌಲಭ್ಯಗಳು, ವ್ಯವಸ್ಥೆ ಮತ್ತು ಮೂಲಸೌಕರ್ಯದ ಕೊರತೆ ಇದೆ’ ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಹೇಳಿದರು.

ಸಹಕಾರ ಬ್ಯಾಂಕುಗಳಲ್ಲಿ ನಕಲಿ ನೋಟು ಪತ್ತೆ ಮಾಡುವ ಪರಿಣತಿ ಇಲ್ಲದೇ ಇರುವುದರಿಂದ ಅವುಗಳನ್ನು ನೋಟು ರದ್ದತಿ ಅಭಿಯಾನದಿಂದ ಉದ್ದೇಶಪೂರ್ವಕವಾಗಿ ಹೊರಗೆ ಇರಿಸಲಾಗಿದೆ ಎಂದರು. ಗ್ರಾಮೀಣ ಅರ್ಥ ವ್ಯವಸ್ಥೆ ಬಹುತೇಕ ಸಹಕಾರ ಬ್ಯಾಂಕುಗಳ ಮೇಲೆಯೇ ಅವಲಂಬಿತವಾಗಿದೆ. ನೋಟು ರದ್ದತಿ ಪ್ರಕ್ರಿಯೆಯಿಂದ ಸಹಕಾರ ಬ್ಯಾಂಕುಗಳನ್ನು ಹೊರಗಿರಿಸಿದ್ದರಿಂದಾಗಿ ಗ್ರಾಮೀಣ ಜೀವನಕ್ಕೆ ಲಕ್ವ ಹೊಡೆದಂತಾಗಿದೆ ಎಂದು ಸಹಕಾರ ಬ್ಯಾಂಕುಗಳ ಪರ ಹಿರಿಯ ವಕೀಲ ಪಿ. ಚಿದಂಬರಂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry