6
ನಳಪಾಕ

ಪಡ್ಡು: ಅದೆಷ್ಟು ವಿಧಗಳು...

Published:
Updated:
ಪಡ್ಡು: ಅದೆಷ್ಟು ವಿಧಗಳು...

ತರಕಾರಿ ಪಡ್ಡು

ಬೇಕಾಗುವ ಸಾಮಗ್ರಿಗಳು: ಪಡ್ಡಿನ ಹಿಟ್ಟು, ತರಕಾರಿ (ಆಲೂಗಡ್ಡೆ, ಕ್ಯಾರೆಟ್‌, ಬೀನ್ಸ್‌, ಸೌತೆಕಾಯಿ, ನಿಮಗೆ ಯಾವುದು ಬೇಕೊ ಅದು ಅಥವಾ ಎಲ್ಲ ಮಿಕ್ಸ್‌ ಮಾಡಿ), ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ, ಉಪ್ಪು, ಎಣ್ಣೆ.ಮಾಡುವ ವಿಧಾನ: ಆಲೂಗೆಡ್ಡೆ ಬೇಕಾದರೆ ಅದನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಬೇಕು. ಕ್ಯಾರೆಟ್‌ ಅಥವಾ ಸೌತೆಕಾಯಿ ಆದರೆ ಬೇಯಿಸಿ ನಂತರ ಮಿಕ್ಸಿಯಲ್ಲಿ ಪೇಸ್ಟ್‌ ಮಾಡಿಟ್ಟುಕೊಳ್ಳಬೇಕು ಅಥವಾ ಇದನ್ನು ತುರಿದು ಬೇಯಿಸಿ ಕೂಡ ಇಟ್ಟುಕೊಳ್ಳಬಹುದು. ಬೀನ್ಸ್‌ ಮಾತ್ರ ಬೇಯಿಸಿ ಪೇಸ್ಟ್‌ ಮಾಡಬೇಕು.ನಂತರ ಕಾದ ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ ಪೇಸ್ಟ್‌, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ನಂತರ ನೀವು ತಯಾರಿಸಿ ಇಟ್ಟುಕೊಂಡ ತರಕಾರಿ ಸೇರಿಸಿ, ಉಪ್ಪು ಹಾಕಿ. ಸ್ವಲ್ಪ ನಿಂಬೆರಸ, ಕೊತ್ತುಂಬರಿ ಸೊಪ್ಪಿನೊಂದಿಗೆ ಬೆರೆಸಿ. ಇದನ್ನು ಪಡ್ಡಿನ ಹಿಟ್ಟಿಗೆ ಬೆರಸಿ ಕಾದ ಪಡ್ಡಿನ ಹೆಂಚಿನ ಮೇಲೆ ಹಾಕಿ, ಎರಡೂ ಕಡೆ ಬೇಯಿಸಿ.ಮಿಶ್ರ ಬೇಳೆಗಳ ಪಡ್ಡು 

ಬೇಕಾಗುವ ಸಾಮಗ್ರಿಗಳು: ಎರಡು ಬಟ್ಟಲು ಅಕ್ಕಿ, ಒಂದು ಬಟ್ಟಲು ತೆಂಗಿನ ತುರಿ, ಅರ್ಧ ಬಟ್ಟಲು ಉದ್ದಿನಬೇಳೆ, ಅರ್ಧ ಬಟ್ಟಲು ಕಡಲೆ ಬೇಳೆ, ಅರ್ಧ ಬಟ್ಟಲು ಬಟ್ಟಲು ತೊಗರಿ ಬೇಳೆ. ಅರ್ಧ ಬಟ್ಟಲು ಬಟ್ಟಲು ಹೆಸರುಬೇಳೆ, ಸ್ವಲ್ಪ ಅವಲಕ್ಕಿ, ನಾಲ್ಕಾರು ಒಣಮೆಣಸಿನಕಾಯಿ, ಚಮಚ ಧನಿಯಪುಡಿ, ಉಪ್ಪು, ಎಣ್ಣೆ.ಮಾಡುವ ವಿಧಾನ:ಅಕ್ಕಿ ಮತ್ತು ಎಲ್ಲ ಬೇಳೆಗಳನ್ನು 3-4 ಗಂಟೆ ನೆನೆಸಿಡಿ. ನಂತರ ತೆಂಗಿನ ತುರಿ, ನೆನೆಸಿದ ಅವಲಕ್ಕಿ, ಒಣಮೆಣಸಿನಕಾಯಿ ಮತ್ತು ಉಪ್ಪನ್ನು ಸೇರಿಸಿ ರುಬ್ಬಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ, ಈರುಳ್ಳಿ ಹೆಚ್ಚಿಕೊಂಡು ಅದಕ್ಕೆ ಸೇರಿಸಿ. ಇದೆಲ್ಲವನ್ನು ಪಡ್ಡಿನ ಹಿಟ್ಟಿಗೆ ಸೇರಿಸಿ ಪಡ್ಡು ಹಾಕಿ.ಕುಂಬಳಕಾಯಿ ಪಡ್ಡು

ಬೇಕಾಗುವ ಸಾಮಗ್ರಿಗಳು: ಚೆನ್ನಾಗಿ ಕಳಿತ ಅರ್ಧ ಕುಂಬಳಕಾಯಿ, ಅಕ್ಕಿ, ಉಪ್ಪು.

ಮಾಡುವ ವಿಧಾನ: ಕುಂಬಳಕಾಯಿ ಹಣ್ಣನ್ನು ಬೀಜ ತೆಗೆದು ಕತ್ತರಿಸಿ ಬೇಯಿಸಿಕೊಳ್ಳಿ. ಬೇಯಿಸಿರುವ ಕುಂಬಳಕಾಯಿ ಹಣ್ಣನ್ನು ಸಿಪ್ಪೆ ತೆಗೆದು ರುಬ್ಬಿಕೊಂಡು ತಯಾರಿಸಿದ ಅಕ್ಕಿಹಿಟ್ಟಿಗೆ ಸೇರಿಸಿ ಮತ್ತು ಸ್ವಲ್ಪ ಉಪ್ಪು ಹಾಕಿದರೆ ಸಾಕು.ಸಿಹಿ ಪಡ್ಡು

ಸಿಹಿ ಇಷ್ಟಪಡುವವರಿಗೆ ತಯಾರಿಸಲಾದ ಪಡ್ಡಿನ ಹಿಟ್ಟಿಗೆ ಹಸಿ ಮೆಣಸಿನಕಾಯಿ ಬದಲು ಸ್ವಲ್ಪ ತುರಿದ ತೆಂಗಿನ ಕಾಯಿ ಮತ್ತು ಸ್ವಲ್ಪ ಸಕ್ಕರೆ ಹಾಕಿದರೆ ಸಿಹಿ ಪಡ್ಡು ರೆಡಿ. ಇದನ್ನು ರವೆ ಪಡ್ಡು, ಅಕ್ಕಿ ಪಡ್ಡು ಎರಡರ ಜೊತೆಗೂ ಪ್ರಯತ್ನಿಸಬಹುದು.ಇನ್ನೊಂದು ವಿಧ: ಸಿಹಿ ಪಡ್ಡು ಕೇಳುವವರಿಗಾಗಿ ಇನ್ನೊಂದು ವಿಧದ ಸಿಹಿ ಪಡ್ಡನ್ನೂ ಮಾಡಬಹುದು. ಅದೆಂದರೆ ತಯಾರಿಸಿದ ಅಕ್ಕಿಹಿಟ್ಟಿಗೆ ಕಾಯಿತುರಿ, ಬಾಳೆಹಣ್ಣು, ಏಲಕ್ಕಿಪುಡಿ ಸೇರಿಸಿ ರುಬ್ಬಿ ಬೆರೆಸಿದರೆ ಆಯಿತು. ಬೇಕಾದಲ್ಲಿ ಸ್ವಲ್ಪ ಬೆಲ್ಲವನ್ನೂ ಸೇರಿಸಿ ರುಬ್ಬಿಟ್ಟುಕೊಳ್ಳಬಹುದು.ಕಾಯಿಚಟ್ನಿಯೊಂದಿಗೆ ತಿನ್ನುವುದು ಎಲ್ಲರಿಗೂ ಗೊತ್ತೇ ಇದೆ. ಬೇರೆ ರುಚಿ ಬೇಕು ಎಂದರೆ ಟೊಮೆಟೊ ಗೊಜ್ಜು ಅಥವಾ ಪುದಿನಾ ಚಟ್ನಿಯನ್ನೂ ಪ್ರಯತ್ನಿಸಬಹುದು.ಅಕ್ಕಿ ಪಡ್ಡು

ಬೇಕಾಗುವ ಸಾಮಗ್ರಿಗಳು: ಮೂರು ಲೋಟ ಅಕ್ಕಿ, ಒಂದು ಲೋಟ ಉದ್ದಿನ ಬೇಳೆ, ಒಂದಷ್ಟು ಮೆಂತ್ಯ ಮತ್ತು ಅವಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು,

ಮಾಡುವ ವಿಧಾನ: ಅಕ್ಕಿ, ಉದ್ದಿನ ಬೇಳೆ, ಮೆಂತ್ಯ – ಎಲ್ಲವನ್ನೂ ಚೆನ್ನಾಗಿ ತೊಳೆದು ಒಟ್ಟಿಗೆ ನೆನೆಸಬೇಕು. ನೆನೆದ ನಂತರ ನುಣ್ಣಗೆ ರುಬ್ಬಿ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ರಾತ್ರಿಯಿಡಿ ಇಡಬೇಕು. ಬೆಳಿಗ್ಗೆ ಪಡ್ಡಿನ ಪಾತ್ರೆಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸವರಿ ಪಡ್ಡು ಹಾಕಬೇಕು.ಇದು ಎಲ್ಲರಿಗೂ ಗೊತ್ತಿರುವ ವಿಧಾನವಾಯಿತು. ಇದಕ್ಕೇ ಇನ್ನೊಂದಿಷ್ಟು ಪದಾರ್ಥ ಸೇರಿಸಿ ಮಸಾಲೆ ಪಡ್ಡು ಮಾಡಬಹುದು.ಮಸಾಲೆ ಪಡ್ಡು

ಮೇಲೆ ಹೇಳಿದಂತೆ ತಯಾರಿಸಿದ ಪಡ್ಡಿನ ಹಿಟ್ಟಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸು ಹಾಗೂ ಟೊಮೆಟೊಗಳನ್ನು ಸಣ್ಣದಾಗಿ ಹೆಚ್ಚಿ ಒಗ್ಗರಣೆ ಕೊಟ್ಟು ಸೇರಿಸಿಕೊಂಡರೆ ಮಸಾಲೆ ಪಡ್ಡು ಸಿದ್ಧ. ಇದರ ಜೊತೆಗೆ ಕಾಯಿಚಟ್ನಿಯೂ ಬೇಕಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry