ಭಾನುವಾರ, ಡಿಸೆಂಬರ್ 6, 2020
22 °C

82ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

82ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ರಾಯಚೂರು: ಆರು ದಶಕಗಳ ನಂತರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವು ಶನಿವಾರ ನಗರದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು. ಬೆಳಿಗ್ಗೆ 8ಗಂಟೆಗೆ ಕೃಷಿ ವಿಶ್ವವಿದ್ಯಾಲಯದ ಆವರಣದ ಪಂಡಿತ ಸಿದ್ಧರಾಮ ಜಂಬಲ ದಿನ್ನಿ ಮಹಾ­ದ್ವಾರದ ಬಳಿ ರಾಷ್ಟ್ರಧ್ವಜ, ಕನ್ನಡ ಸಾಹಿತ್ಯ ಪರಿಷತ್‌ ಧ್ವಜ ಮತ್ತು ನಾಡ ಧ್ವಜಾರೋಹಣದ ಮೂಲಕ ಸಮ್ಮೇ­ಳನಕ್ಕೆ ಶುಭಾರಂಭ ನೀಡಲಾಯಿತು.ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ್‌, ‘ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಕೈಗೊಳ್ಳಲಾಗುವ ಮಹತ್ವದ ನಿರ್ಣಯಗಳನ್ನು ಅನುಷ್ಠಾನ­ಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.‘82ನೇ ಸಾಹಿತ್ಯ ಸಮ್ಮೇಳನವು ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ, ಬರಗಾಲದ ಕಾರಣ ಮುಂದೂಡಲಾಯಿತು. ಈ ವರ್ಷವೂ ಬರ ಇದ್ದರೂ ಕನ್ನಡ ನುಡಿ ಜಾತ್ರೆಯನ್ನು ಮತ್ತೆ ಮುಂದೂಡುವುದು ತರವಲ್ಲ ಎಂಬ ಕಾರಣದಿಂದ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಸಮ್ಮೇಳ­ನದ ಸಿದ್ಧತೆಗಳು ಅಚ್ಚುಕಟ್ಟಾಗಿ ಆಗಿದೆ’ ಎಂದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರು ಪರಿಷತ್ನ ಧ್ವಜವನ್ನೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ನಾಡ ಧ್ವಜಾರೋಹಣವನ್ನು ಮಾಡಿದರು.ನಾಡ ಗೀತೆ ಸಮೂಹ ಗಾಯನ: ಶಾಂತರಸರ ಪ್ರಧಾನ ವೇದಿಕೆಯಲ್ಲಿ 58 ಮಹಿಳೆಯರು ಮತ್ತು 24 ಪುರುಷರು ಸೇರಿದಂತೆ ಒಟ್ಟು 82 ಜನರು ಸಾಮೂಹಿಕವಾಗಿ ನಾಡ ಗೀತೆಯನ್ನು ಹಾಡುವುದರ ಮೂಲಕ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭ ನಾಂದಿ ಹಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.ಸ್ಮರಣ ಸಂಚಿಕೆ ಬಿಡುಗಡೆ: 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಅಮರೇಶ ನುಗಡೋಣಿ ಅವರ ಸಂಪಾದಕತ್ವದಲ್ಲಿ ಹೊರ ತಂದಿರುವ ‘ಕಲ್ಯಾಣ ಕರ್ನಾಟಕ’, ರಾಯಚೂರು ಜಿಲ್ಲೆಯ ಪ್ರಾತಿನಿಧಿಕ ಕಾವ್ಯಗಳನ್ನು ಒಳಗೊಂಡ ‘ಬಿಸಿಲು ಚೆಲ್ಲಿದ ನೆರಳು’ ಜಿಲ್ಲೆಯ ಸಮಗ್ರ ಪರಿಚಯವನ್ನು ಒಳಗೊಂಡ ‘ಎಡೆದೊರೆ ರಾಯಚೂರು ಜಿಲ್ಲಾ ದರ್ಶನ’, ಕನ್ನಡ ಸಾಹಿತ್ಯ ಪರಿಷತ್‌ ಮರುಮುದ್ರಣ ಮಾಡಿರುವ 12 ಪುಸ್ತಕಗಳನ್ನು ಸಂಸದ ಬಿ.ವಿ.ನಾಯಕ ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ಲೋಕಾರ್ಪಣೆ ಮಾಡಿದರು.ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಮರು ವಿನ್ಯಾಸಗೊಂಡ ವೆಬ್‌ಸೈಟ್‌ಗೆ ಸಮಾರಂಭದಲ್ಲಿ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಚಾಲನೆ ನೀಡಿದರೆ, ವಾಣಿಜ್ಯ ಮಳಿಗೆಯನ್ನು ಶಾಸಕ ಡಾ.ಎಸ್‌.­ಶಿವರಾಜ ಪಾಟೀಲ ಉದ್ಘಾಟಿಸಿದರು. ಪುಸ್ತಕ ಮಳಿಗೆಯನ್ನು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಉದ್ಘಾಟಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ತಿಪ್ಪರಾಜು ಹವಾಲ್ದಾರ, ಬಸವರಾಜ ಪಾಟೀಲ ಇಟಗಿ, ಮಾನಪ್ಪ ವಜ್ಜಲ್‌, ಕೆ.ಶಿವನಗೌಡ ನಾಯಕ, ಶರಣಪ್ಪ ಮಟ್ಟೂರು, ಕೆ.ಎನ್.ರಾಜಣ್ಣ, ಜಿಲ್ಲಾ  ಪಂಚಾ­ಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ನಗರಸಭೆ ಅಧ್ಯಕ್ಷರಾದ ಹೇಮಲತಾ, ಜಿಲ್ಲಾ ಕನ್ನಡ

ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಮತ್ತು ಪದಾಧಿಕಾರಿಗಳು ಇದ್ದರು.ಕಾನೂನು ಪುಸ್ತಕ: ಶೀಘ್ರ ಡಿಜಿಟಲ್ ಲೈಬ್ರರಿ–ಉಮಾಶ್ರೀ

ರಾಯಚೂರು: ‘ಕನ್ನಡ ಸಾಹಿತ್ಯವು ಇಡೀ ಪ್ರಪಂಚದಾದ್ಯಂತ ಪಸರಿಸಬೇಕು ಎಂಬ ಉದ್ದೇಶ­ದೊಂದಿಗೆ ನವೆಂಬರ್ ತಿಂಗಳಲ್ಲೇ 300 ಕೃತಿಗಳನ್ನು ಡಿಜಿಟಲ್ ಲೈಬ್ರರಿಯಲ್ಲಿ ಅಳವಡಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶೀಘ್ರ ಸಂಸದೀಯ ಮತ್ತು ಕಾನೂನು ಸಂಬಂಧಿತ ಪುಸ್ತಕ­ಗಳನ್ನು ಡಿಜಿಟಲ್ ಲೈಬ್ರರಿ­ಯಲ್ಲಿ ಅಳವಡಿಸಲಾಗುವುದು’ ಎಂದರು.‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅತಿ ಹೆಚ್ಚು ಕೆಲಸಗಳನ್ನು ಮಾಡಲು ಸಾಂಸ್ಕೃತಿಕ ನೀತಿ ತುಂಬಾ ಸಹಕಾರಿಯಾಗಿದೆ’ ಎಂದ ಅವರು, ‘ರಂಗ ಮಂದಿರಗಳ ಬಾಡಿಗೆ ದರವನ್ನು ಕಡಿಮೆಗೊಳಿ­ಸಲಾ­ಗಿದ್ದು, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯಲು ಪ್ರೋತ್ಸಾಹ ನೀಡಲಾಗಿದೆ’ ಎಂದು ಅವರು ಹೇಳಿದರು.ಕರ್ನಾಟಕ ಸಂಘದಿಂದ ಮೆರವಣಿಗೆ

ಕೃಷಿ ವಿ.ವಿ.ಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಕರ್ನಾಟಕ ಸಂಘದಿಂದ ಸಮ್ಮೇಳನಾಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೆರವಣಿಗೆ ಬೆಳಿಗ್ಗೆ 8.30ಕ್ಕೆ ಆರಂಭಗೊಂಡಿತು.

ಭುವನೇಶ್ವರಿ ದೇವಿಗೆ ಪುಷ್ಷನಮನ ಸಲ್ಲಿಸಿದ ಬರಗೂರು ಅವರು, ನಗಾರಿ ಬಾರಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾಮೇಳಗಳಿಗೆ ಚಾಲನೆ ನೀಡಿದರು. ಈ ಮೆರವಣಿಗೆಯು ಮಧ್ಯಾಹ್ನ 12.30ರ ಹೊತ್ತಿಗೆ ಕೃಷಿ ವಿ.ವಿ. ಆವರಣ ತಲುಪಿತು. ಅಷ್ಟುಹೊತ್ತಿಗೆ ಬೆಳಗಾವಿಯಿಂದ ಹೆಲಿಕಾಪ್ಟರ್‌ನಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಿತರ ಗಣ್ಯರೊಡನೆ ವೇದಿಕೆಗೆ ಬಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.