ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಇಂತು ಕುಂತಿ ಮಕ್ಕಳಿಗೆ ಸುಖವಿಲ್ಲ!

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನಾನು ಹಲವಾರು ವರ್ಷಗಳ ಹಿಂದೆ ಬೀಜಿಂಗ್‌ಗೆ ಹೋಗಿದ್ದಾಗ ಅಲ್ಲಿ ಸರಿ–ಬೆಸ ಸಂಖ್ಯೆಯ ವಾಹನಗಳ ಪದ್ಧತಿ ಇತ್ತು. ಅಂದರೆ ಒಂದು ದಿನ ಸರಿ ಸಂಖ್ಯೆಯ ವಾಹನಗಳು ಮಾತ್ರ ರಸ್ತೆಗೆ ಇಳಿಯಬೇಕು. ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನಗಳು ಮಾತ್ರ ರಸ್ತೆಗೆ ಇಳಿಯಬೇಕು ಎಂಬ ನಿಯಮ. ನಾನು ಈ ಬಗ್ಗೆ ಪತ್ರಿಕೆಯಲ್ಲಿ ಬರೆದೆ.

ಆಗ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ‘ಇಂತಹ ಪದ್ಧತಿ ಭಾರತದಲ್ಲಿ ಜಾರಿಗೆ ಬಂದರೆ ಏನಾಗುತ್ತದೆ?’ ಎಂದು ಪ್ರಶ್ನಿಸಿದರು. ‘ಇಲ್ಲಿಯ ವಾಹನದಟ್ಟಣೆ ನೋಡಿದರೆ ಇಲ್ಲಿಯೂ ಇದು ಜಾರಿಗೆ ಬರುವುದು ಒಳ್ಳೆಯದು ಎನಿಸುತ್ತದೆ’ ಎಂದೆ. ಅದಕ್ಕೆ ಅವರು ‘ಹಾಗಾದರೆ ಏನಾದರೂ ವ್ಯತ್ಯಾಸವಾಗುತ್ತಾ’ ಎಂದು ಕೇಳಿದರು. ‘ಆಗಬಹುದು’ ಎಂದೆ. ಅದಕ್ಕೆ ಅವರು ‘ಏನೂ ಆಗಲ್ಲ. ಭಾರತೀಯರು ಎಷ್ಟು ಬುದ್ಧಿವಂತರು ಎಂದರೆ, ಸಾಧ್ಯ ಇದ್ದವರು ಎರಡು ಕಾರು ಇಟ್ಟುಕೊಳ್ಳುತ್ತಾರೆ. ಉಳಿದವರು ಎರಡು ನೇಮ್ ಪ್ಲೇಟ್ ಇಟ್ಟುಕೊಳ್ಳುತ್ತಾರೆ’ ಎಂದು ಉತ್ತರಿಸಿದರು.

ಹೌದು, ನಮ್ಮ ಜನ ಕಾನೂನುಬದ್ಧವಾಗಿ ಕಾನೂನು ಉಲ್ಲಂಘಿಸುವುದು ಹೇಗೆ ಎನ್ನುವುದನ್ನು ಬಹುಬೇಗ ಕಲಿಯುತ್ತಾರೆ. ಈಗಲೂ ಹಾಗೆಯೇ ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್‌ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಾಗಿ ಪ್ರಕಟಿಸಿದರು. ಇದನ್ನು ಬದಲಾಯಿಸಿಕೊಳ್ಳಲು 50 ದಿನ ಸಮಯ ನೀಡುವುದಾಗಿ ಪ್ರಕಟಿಸಿದರು. ಇದರಿಂದ ಇಡೀ ದೇಶದಲ್ಲಿ ಸಂಚಲನ ಉಂಟಾಯಿತು. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಪರ ಮತ್ತು ವಿರೋಧದ ಬಗ್ಗೆ ಚರ್ಚೆಗಳೂ ಆರಂಭವಾದವು. ಕಪ್ಪುಹಣದ ವಿರುದ್ಧ ಇದು ‘ನಿರ್ದಿಷ್ಟ ದಾಳಿ’ ಎಂದು ಕೆಲವರು ಬಣ್ಣಿಸಿದರು. ಆದರೆ ಕಪ್ಪುಹಣ ಇಟ್ಟುಕೊಂಡವರು ಮಾತ್ರ ಇದ್ಯಾವುದರ ಬಗ್ಗೆಯೂ ಚಿಂತೆ ಇಲ್ಲದೆ ತಮ್ಮ ಹಣವನ್ನು ಉಳಿಸಿಕೊಳ್ಳುವುದಕ್ಕೆ ಯಾವ ಮಾರ್ಗ ಇದೆ ಎಂದು ಪತ್ತೆ ಮಾಡಿಕೊಂಡು ಹಣವನ್ನು ಭದ್ರ ಮಾಡಿಕೊಂಡರು.

ನವೆಂಬರ್‌ 9ರಿಂದ ಇಡೀ ದೇಶದಲ್ಲಿ ಜನಸಾಮಾನ್ಯರು ತಮ್ಮದೇ ಹಣ ಪಡೆಯುವುದಕ್ಕೆ ಬ್ಯಾಂಕ್‌ಗಳ ಮುಂದೆ ಅಥವಾ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರಿಗೆ ಬೇಕಾದಷ್ಟು ಹಣ ಸಿಗುತ್ತಿಲ್ಲ. ಬ್ಯಾಂಕ್‌ನವರು ಕೊಡುವ ಪುಡಿಗಾಸಿಗೆ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತವರು ಅಸಹನೆ ವ್ಯಕ್ತಪಡಿಸಿದರೆ,  ದೇಶಸೇವೆಗಾಗಿ ಇಷ್ಟೂ ಮಾಡಲು ಆಗದೆ ಎನ್ನುವ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದಾರೆ. ಆದರೆ ಧನಿಕರು ಮಾತ್ರ ಜನಸಾಮಾನ್ಯರ ಸಂಕಷ್ಟವನ್ನು ಕಂಡು ಮುಸಿಮುಸಿ ನಗುತ್ತಿದ್ದಾರೆ.

ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದಾಗ ₹ 4.7 ಕೋಟಿಯಷ್ಟು ಹೊಸ ನೋಟುಗಳು ಸಿಕ್ಕವು. ಸಾಮಾನ್ಯ ಜನರಿಗೆ ₹ 2000 ಮುಖಬೆಲೆಯ ಒಂದೆರಡು ನೋಟುಗಳೂ ಸಿಗುವುದು ದುರ್ಲಭವಾಗಿರುವ ಈ ದಿನಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬನಿಗೆ ಇಷ್ಟೊಂದು ಭಾರೀ ಪ್ರಮಾಣದ ಹೊಸ ನೋಟುಗಳು ಸಿಕ್ಕ ಬಗೆ ಹೇಗೆ?

ಇಡೀ ದೇಶ ನೋಟುಗಳ ಕೊರತೆ ಎದುರಿಸುತ್ತಿರುವ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ರಜೆಯನ್ನೂ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ. ಅವರ ಶ್ರಮಕ್ಕೆ ಎಲ್ಲರೂ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಆದರೆ ಸರ್ಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಶ್ರೀಮಂತರಿಗೆ ಇಷ್ಟೊಂದು ಪ್ರಮಾಣದ ಹೊಸ ನೋಟುಗಳು ಸಿಗಲು ಬ್ಯಾಂಕ್ ಅಧಿಕಾರಿಗಳ ಸಹಕಾರ ಇಲ್ಲದೆ ಸಾಧ್ಯವೇ ಇಲ್ಲ. ಅಂದರೆ ನೋಟುಗಳನ್ನು ರದ್ದು ಮಾಡುವ ನಿರ್ಧಾರವನ್ನು ಪ್ರಕಟ ಮಾಡುತ್ತಿದ್ದಂತೆಯೇ ಕೆಲವು ಮನಸ್ಸುಗಳು ಕಳ್ಳ ದಾರಿಯನ್ನು ಹುಡುಕಲು ಆರಂಭಿಸಿದವು. ಕಾನೂನುಬದ್ಧವಾಗಿ ಕಾನೂನು ಮುರಿಯುವುದು ಹೇಗೆ ಎನ್ನುವುದನ್ನು ಲೆಕ್ಕ ಹಾಕಿದವು. ಕಪ್ಪು ಬಿಳಿಯಾಯ್ತಾ? ಇಲ್ಲ, ಕಪ್ಪು ಗುಲಾಬಿ ಬಣ್ಣಕ್ಕೆ ತಿರುಗಿತು ಅಷ್ಟೆ.

ನವೆಂಬರ್‌ 8ರಂದು ದೇಶದಲ್ಲಿ ₹ 500 ಮುಖಬೆಲೆಯ 1,716 ಕೋಟಿ ನೋಟುಗಳು ಹಾಗೂ ₹ 1000 ಮುಖಬೆಲೆಯ 685 ಕೋಟಿ ನೋಟುಗಳು ಇದ್ದವು. ಅಂದರೆ ₹ 15.44 ಲಕ್ಷ ಕೋಟಿ ಚಲಾವಣೆಯಲ್ಲಿ ಇತ್ತು. ಕಳೆದ 20 ದಿನಗಳಲ್ಲಿ ₹ 8.45 ಲಕ್ಷ ಕೋಟಿ ಬ್ಯಾಂಕುಗಳಿಗೆ ಜಮೆ ಆಗಿದೆ. ಜನರು ಜಮೆ ಮಾಡಿದ ಹಣ, ಆರ್‌ಬಿಐನಲ್ಲಿರುವ ನಗದು ಮೀಸಲು ರೂಪದಲ್ಲಿ ಇಟ್ಟ ಠೇವಣಿ ಹಣ ಹಾಗೂ ಬ್ಯಾಂಕುಗಳು ದೈನಂದಿನ ವಹಿವಾಟಿಗಾಗಿ ಇಟ್ಟುಕೊಂಡ ಹಣ ಸೇರಿದರೆ ₹ 13 ಲಕ್ಷ ಕೋಟಿಯಾಗುತ್ತದೆ. ಡಿಸೆಂಬರ್‌ 30ರವರೆಗೆ ಬ್ಯಾಂಕ್‌ಗಳಿಗೆ ಹಣ ಜಮೆ ಮಾಡಲು ಅವಕಾಶ ಇರುವುದರಿಂದ ಇನ್ನೂ ₹ 2 ಲಕ್ಷ ಕೋಟಿ ಜಮೆ ಆಗಬಹುದು ಎಂಬ ಅಂದಾಜಿದೆ. ಅಂದರೆ ಗರಿಷ್ಠ ಮುಖಬೆಲೆಯ ಎಲ್ಲಾ ನೋಟುಗಳು ಮುಖ್ಯವಾಹಿನಿಗೆ ಬಂದವು ಎಂದೇ ಅರ್ಥ. ಇದನ್ನು ಗುಡ್ಡ ಅಗೆದು ಇಲಿ ಹಿಡಿದ ಕತೆಗೆ ಹೋಲಿಸಿದರೆ ತಪ್ಪಾಗುವುದಿಲ್ಲ.

ಇದೆಲ್ಲದರ ಅರ್ಥ ಇಷ್ಟೆ. ನಮ್ಮ ದೇಶದಲ್ಲಿ ಯಾವುದೇ ಕಠಿಣ ಕಾನೂನನ್ನು ಜಾರಿಗೆ ತಂದರೂ ರಂಗೋಲಿ ಕೆಳಗೆ, ಚಾಪೆ ಕೆಳಗೆ ನುಸುಳುವವರು ಇದ್ದೇ ಇರುತ್ತಾರೆ. ಇದರಿಂದಾಗಿ ದೊಡ್ಡಕುಳಗಳು ಬದುಕುತ್ತವೆ. ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಲೇ ಇರುತ್ತಾರೆ. ಹಾಗಂತ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ನಿಲ್ಲಿಸಲು ಬರುವುದಿಲ್ಲ.

ನೋಟು ರದ್ದು ನಿರ್ಧಾರ ಪ್ರಕಟವಾಗುತ್ತಿದ್ದಂತೆ ಕಪ್ಪುಹಣವನ್ನು ಬಿಳಿ ಮಾಡುವ ಏಜೆಂಟ್‌ಗಳೂ ಹುಟ್ಟಿಕೊಂಡರು. ಶೇ 20ರಷ್ಟು ಕಮಿಷನ್ ಆಧಾರದಲ್ಲಿ ಬಿಳಿ ಮಾಡಿಕೊಡುವುದಾಗಿ ಹೇಳತೊಡಗಿದರು. ನಮ್ಮ ಬಹುತೇಕ ರಾಜಕಾರಣಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಉದ್ದಿಮೆದಾರರಿಗೆ, ಇತರ ಶ್ರೀಮಂತರಿಗೆ ಇಂತಹ ಏಜೆಂಟರು ಗಾಳ ಹಾಕಿದರು. ಒಬ್ಬ ಸರ್ಕಾರಿ ಅಧಿಕಾರಿಯ ಮನೆಯಲ್ಲಿ ₹ 4.7 ಕೋಟಿಯಷ್ಟು ಹೊಸ ನೋಟುಗಳು ಸಿಕ್ಕಿವೆ ಎಂದರೆ ಇನ್ನಷ್ಟು ಅಧಿಕಾರಿಗಳ ಮನೆಯಲ್ಲಿ ಇಂತಹ ನೋಟುಗಳು ಇಲ್ಲ ಎನ್ನಲು ಯಾವುದೇ ಕಾರಣಗಳಿಲ್ಲ. ಬಿಲ ಬಿಲವನ್ನೂ ಶೋಧಿಸುತ್ತಾ ಹೋದರೆ ಇನ್ನಷ್ಟು ಹೆಗ್ಗಣಗಳು ಸಿಕ್ಕುತ್ತವೆ.

ಯಾಕೆ ಹೀಗಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸುಲಭ. ಹಸಿವು ಮತ್ತು ಬಡತನ ಇರುವ ದೇಶದಲ್ಲಿ ಮಾತ್ರ ಹೀಗಾಗುತ್ತದೆ. ಹಣದ ಹಸಿವು ಅಷ್ಟು ಬೇಗ ತಣಿಯುವುದಿಲ್ಲ. ಹಣದ ಹಸಿವಿನ ಹಾಹಾಕಾರ ನಿರಂತರವಾಗಿರುತ್ತದೆ.

ಈಗ ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂದರೆ ನಮ್ಮ ದೇಶದಲ್ಲಿ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರಂಥ ನಾಯಕರು ಇದ್ದರು. ಹಣ ಇಲ್ಲದೆಯೂ ಜನರ ಹೃದಯದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು ಎನ್ನುವುದನ್ನು ನಂಬದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಮಕ್ಕಳಿಗೆ ಗಾಂಧೀಜಿ ಮತ್ತು ಅವರಂತಹ ರಾಷ್ಟ್ರ ನಾಯಕರ ಬಗ್ಗೆ ಹೇಳಿದರೆ ಅದು ಪೌರಾಣಿಕ ಕತೆಗಳಂತೆ ಕಾಣಿಸುತ್ತಿದೆ.

ದುಡಿಯದೇ, ಶ್ರಮ ಪಡದೇ ಹಣ ಗಳಿಸುವುದು ಒಂದು ಪ್ರತಿಷ್ಠೆಯಾಗಿದೆ. ಅದಕ್ಕೆ ಸುಲಭವಾದ ಮಾರ್ಗ ಯಾವುದು ಎಂದು ನಮ್ಮ ಮನಸ್ಸು ಹುಡುಕುತ್ತಿರುತ್ತದೆ. ರಾಜ್ಯದಲ್ಲಿ 5–6 ವರ್ಷಗಳ ಹಿಂದೆ ಒಬ್ಬರನ್ನು ಕರ್ನಾಟಕ ಗೃಹ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರು ಅಧಿಕಾರ ವಹಿಸಿಕೊಂಡ ದಿನವೇ ₹ 18.50 ಕೋಟಿ ಹಣ ಮಾಡಿಕೊಂಡರು. ಹೀಗೆ ಹಣ ಮಾಡಿಕೊಂಡ ಕತೆ ಚೆನ್ನಾಗಿದೆ.

ಒಬ್ಬ ವ್ಯಕ್ತಿ ತಮ್ಮ ಬಳಿಯಿದ್ದ 185 ಎಕರೆ ಭೂಮಿಯನ್ನು ಗೃಹ ಮಂಡಳಿಗೆ ಕೊಡಲು ಮುಂದಾಗಿದ್ದರು. ಈ ಪುಣ್ಯಾತ್ಮ ಅಧ್ಯಕ್ಷನಾಗಿ ಬರುವುದಕ್ಕೆ ಮೊದಲೇ ಆ ಭೂಮಿಯನ್ನು ತೆಗೆದುಕೊಳ್ಳಲು ಗೃಹ ಮಂಡಳಿ ನಿರ್ಧರಿಸಿತ್ತು. ಇವರು ಅಧ್ಯಕ್ಷರಾಗಿ ಬಂದ ತಕ್ಷಣ ಯಾವ ಯಾವುದೋ ಕಾರಣಗಳನ್ನು ನೀಡಿ ಒಂದು ಎಕರೆಗೆ ₹ 10 ಲಕ್ಷ ಹೆಚ್ಚಿಗೆ ನೀಡಲು ಒಪ್ಪಿಗೆ ಕೊಟ್ಟರು. ಅಂದರೆ 185 ಎಕರೆಗೆ ₹18.50 ಕೋಟಿ ಹೆಚ್ಚುವರಿ ಹೊರೆ ಗೃಹ ಮಂಡಳಿಗೆ ಬಿತ್ತು. ಅದು ಹೊರೆಯಾಗುವುದಿಲ್ಲ ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನೂ ಕೊಟ್ಟರು. ಒಂದೇ ದಿನದಲ್ಲಿ ಗಳಿಸಿದ ₹ 18.50 ಕೋಟಿ ಹಣವನ್ನು ಅಧ್ಯಕ್ಷರು, ಭೂಮಿ ಮಾರಿದವ ಮತ್ತು ಇತರರು ಹಂಚಿಕೊಂಡರು. ಇದು ಜನಸಾಮಾನ್ಯರಿಗೂ ಗೊತ್ತಾಯಿತು. ಆದರೆ ಯಾರೂ ಏನು ಮಾಡಲೂ ಸಾಧ್ಯವಿರಲಿಲ್ಲ. ಬಡವನ ಸಿಟ್ಟು ದವಡೆಗೆ ಮೂಲ ಎಂದು ಜನರು ಸುಮ್ಮನಾದರು.

ಆದರೆ ಈ ಸಿಟ್ಟು ಇನ್ನೂ ಜನರ ಆಂತರ್ಯದಲ್ಲಿ ಇದ್ದೇ ಇತ್ತು. ಬಡ ರಾಷ್ಟ್ರದಲ್ಲಿ ಶ್ರೀಮಂತಿಕೆ ಯಾವಾಗಲೂ ಮೆರೆಯುತ್ತದೆ. ಹೀಗೆ ಮೆರೆಯುವ ಹಣವನ್ನು ಕಂಡು ಜನರು ಸುಮ್ಮನಿರುತ್ತಾರೆ. ಆದರೆ ಯಾರಾದರೂ ಇದನ್ನು ತಡೆಯಲು ಯತ್ನಿಸುತ್ತಾರೆ ಎಂದರೆ ಅವರಿಗೆ ಬೆಂಬಲವನ್ನೂ ನೀಡುತ್ತಾರೆ. ಈಗ ಭಾರತದಲ್ಲಿ ಆಗುತ್ತಿರುವುದೂ ಅದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಕಪ್ಪುಹಣದ ವಿರುದ್ಧ ಸಮರ ಸಾರುವುದಕ್ಕಾಗಿ ಗರಿಷ್ಠ ಬೆಲೆಯ ನೋಟುಗಳನ್ನು ರದ್ದು ಮಾಡುತ್ತಿದ್ದೇನೆ.

ದೇಶದ ಹಿತಕ್ಕಾಗಿ ಎಲ್ಲ ಜನರೂ ಸಹಕರಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದರಿಂದ ನಮ್ಮ ಜನರೂ ತಮಗೆ ಆಗುವ ಎಲ್ಲ ಕಷ್ಟಗಳನ್ನೂ ಮರೆತು ಮೋದಿಯವರ ಬೆನ್ನಿಗೆ ನಿಂತಿದ್ದಾರೆ. ‘ನಮ್ಮ ಹಣವನ್ನು ಬ್ಯಾಂಕಿಗೆ ಹಾಕಬಹುದು. ಆದರೆ ನಮಗೆ ಬೇಕಾದಷ್ಟು ಹಣವನ್ನು ತೆಗೆಯಲು ಸಾಧ್ಯ ಇಲ್ಲ ಎನ್ನುವುದು ಇಡೀ ಪ್ರಪಂಚದಲ್ಲಿಯೇ ಎಲ್ಲಿಯೂ ಇರದ ಆರ್ಥಿಕ ನೀತಿ.

ಇಂತಹ ಮಿತಿಯನ್ನು ಯಾವ ದೊರೆಯೂ ಹಾಕಿರಲಿಲ್ಲ’ ಎಂದು ಹಿಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಜನರು ಇಲ್ಲ. ‘ನೋಟುಗಳ ರದ್ದು ಎನ್ನುವುದು ಕಾನೂನುಬದ್ಧ ಲೂಟಿ. ಸಂಘಟಿತ ದರೋಡೆ. ಇದರಿಂದ ರಾಷ್ಟ್ರೀಯ ಆದಾಯ ಶೇ 2ರಷ್ಟು ಕುಸಿಯುತ್ತದೆ. ದೇಶದಲ್ಲಿರುವ ಶೇ 55ರಷ್ಟು ಕೃಷಿಕರು ತೊಂದರೆಗೆ ಸಿಲುಕುತ್ತಾರೆ’ ಎಂದೂ ಅವರು ಎಚ್ಚರಿಸಿದರು. ಆದರೂ ಜನ ಇದಕ್ಕೆ ಬೆಲೆ ನೀಡಲಿಲ್ಲ.
ಅರುಣ್ ಶೌರಿ ಅವರು ‘ಶೇ 2ರಷ್ಟು ಮಂದಿ ಕಪ್ಪುಹಣ ಹೊಂದಿದ್ದಾರೆ. ಅವರಿಗಾಗಿ ಶೇ 98ರಷ್ಟು ಜನರಿಗೆ ತೊಂದರೆ ಕೊಡುವುದು ಸರಿಯಲ್ಲ’ ಎಂದರು.

ಆದರೆ ಜನರು ಈ ಶೇ 2ರಷ್ಟು ಜನರ ದೌಲತ್ ನೋಡಿ ಬೇಸರಗೊಂಡಿದ್ದರು. ಸಿಟ್ಟಾಗಿದ್ದರು. ಅದಕ್ಕಾಗಿ ಶೇ 98ರಷ್ಟು ಇರುವ ನಮಗೆ ತೊಂದರೆಯಾದರೂ ಪರವಾಗಿಲ್ಲ, ಶೇ 2ರಷ್ಟಿರುವ ಜನರಿಗೆ ತಕ್ಕಶಾಸ್ತಿ ಆಗಬೇಕು ಎಂದು ಬಯಸಿ ಸುಮ್ಮನಿದ್ದಾರೆ. ಯಾಕೆಂದರೆ ಅವರಿಗೆ ಗೊತ್ತು, ಭಾರತದ ಶೇ 53ರಷ್ಟು ಸಂಪತ್ತು ಕೇವಲ ಶೇ1ರಷ್ಟು ಜನರಲ್ಲಿಯೇ ಸಂಗ್ರಹವಾಗಿದೆ ಎಂದು.

ನೋಟು ರದ್ದಾಗಿ 20 ದಿನ ಕಳೆದಿದೆ. ಶ್ರೀಮಂತರ ಮೇಲಿನ ಸಿಟ್ಟಿಗಾಗಿ ಎಲ್ಲ ತೊಂದರೆಗಳನ್ನು ಸಹಿಸಿಕೊಂಡಿದ್ದ ಜನರ ಸಂಯಮ ಕೂಡ ಕರಗುತ್ತಿದೆ. ಇನ್ನೂ ಬ್ಯಾಂಕ್‌ಗಳ ಮುಂದೆ, ಎಟಿಎಂ ಮುಂದೆ ಜನರ ಸಾಲುಗಳು ಕರಗಿಲ್ಲ. ಈಗ ಚಿನ್ನದ ಮೇಲೆಯೂ ಸರ್ಕಾರ ಕಣ್ಣು ಹಾಕಿದೆ. ಸಹಕಾರ ಸಂಘಗಳಲ್ಲಿ ಹಣ ಸಿಗದೇ ಇರುವುದರಿಂದ ಗ್ರಾಮೀಣ ಭಾಗದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಎತ್ತಿಗೆ ಜ್ವರ ಎಂದು ಎಮ್ಮೆಗೆ ಬರೆ ಎಳೆಯಲು ಮೋದಿ ಹೊರಟಿದ್ದಾರೇನೋ ಎಂಬ ಗುಮಾನಿ ನಿಧಾನಕ್ಕೆ ಜನರ ತಲೆಯಲ್ಲಿ ಬರತೊಡಗಿದೆ.

ಇದು ಬೆಳೆದು ಹೆಮ್ಮರವಾಗುವುದಕ್ಕೆ ಮೊದಲೇ ಜನಸಾಮಾನ್ಯರಿಗೆ ಅವರ ಹಣ ಅವರು ಬಯಸಿದಷ್ಟು ಸುಲಭವಾಗಿ ಸಿಗುವಂತಹ ವ್ಯವಸ್ಥೆ ಮಾಡದಿದ್ದರೆ ಈಗ ಹೀರೊ ಆದವರನ್ನು ಜನ ನಾಳೆ ಜೀರೊ ಮಾಡಿಬಿಡುತ್ತಾರೆ. ದೇಶಪ್ರೇಮ, ಕಪ್ಪುಹಣದ ವಿರುದ್ಧ ಸಮರ ಎಂಬ ಅಫೀಮು ಬಹಳ ದಿನ ಅಮಲನ್ನು ಉಳಿಸಿಕೊಂಡಿರಲಾರದು. ಇಲ್ಲಿ ದಿನಕರ ದೇಸಾಯಿ ಅವರ ಚುಟುಕವೊಂದನ್ನು ಉದಾಹರಿಸಬೇಕು.

‘ಯಾರಪ್ಪ ಬಂದರೂ ನನಗೇನು ಬಂತು? ಉಪವಾಸ ಸಾಯುತ್ತಿದೆ ಈ ಜೀವ ಜಂತು, ಯಾರಜ್ಜ ಬಂದರೂ ಈ ಪ್ರಜಾರಾಜ್ಯ, ನಿಲ್ಲಿಸಲಾರದು ಅಂದೆ ಹೊಟ್ಟೆಗಳ ವ್ಯಾಜ್ಯ’. ಇಂತಹ ನಿರಾಶಾವಾದ ಬರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಧಿಕಾರಸ್ಥರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT