7

ತನ್ನದೇ ಮಣ್ಣಿನ ಮೂರ್ತಿಯಿಂದ ತಾನೇ ಸೋತ – ಗುರು

ಲಕ್ಷ್ಮೀಶ ತೋಳ್ಪಾಡಿ
Published:
Updated:
ತನ್ನದೇ ಮಣ್ಣಿನ ಮೂರ್ತಿಯಿಂದ ತಾನೇ ಸೋತ – ಗುರು

ಇತಿಹಾಸ ಮತ್ತು ಆಧ್ಯಾತ್ಮಿಕತೆ, ಮಹಾಭಾರತದಲ್ಲಿ ಒಂದರೊಳಗೊಂದು ತಳಕು ಹಾಕಿಕೊಂಡಿವೆ. ಅಧ್ಯಾತ್ಮವೆಂದರೆ ಒಳಗಿನ ಕಾರಣ. ಪ್ರಾಯಃ ಮೂಲಕಾರಣ. ಇತಿಹಾಸವೆಂದರೆ ಹೊರಗೆ ಕಾಣಿಸುವ ಕಾರ್ಯ. ಒಂದು ಕಾಯಕದಿಂದ ಇನ್ನನೇಕ ಘಟನಾವಳಿಗಳು – ಕಾರ್ಯ ಪರಂಪರೆ – ರೂಪುಗೊಳ್ಳುವುದೂ ನಿಜ. ಅಂದರೆ ಕಾಯಕವೇ ಕಾರಣವಾಗಿಯೂ ಇದೆ ಎಂದಂತೆ. ಈ ಕಾರ್ಯಪರಂಪರೆಯುದ್ದಕ್ಕೂ ಮೂಲಕಾರಣವೊಂದು ಗುಪ್ತಗಾಮಿನಿಯಂತೆ ಹರಿಯುತ್ತಲೇ ಇದೆ ಎನ್ನುವುದೂ ನಿಜವೇ.ಹೀಗೆಯೇ ಇತಿಹಾಸ ಮತ್ತು ಅಧ್ಯಾತ್ಮಗಳ ಕಾರ್ಯ–ಕಾರಣ ಸಂಬಂಧವನ್ನು ಹೊಳೆಯಿಸುವುದು ಮಹಾಭಾರತಕ್ಕೆ ಇಷ್ಟವಾದುದು. ಇಷ್ಟವಾದರೂ ಕಾರ್ಯಪ್ರಪಂಚವನ್ನು ಚಿತ್ರಿಸುವಲ್ಲಿ ವ್ಯಾಸರು ದೊಡ್ಡ ಕವಿಗಳಿಗೆ ಸಹಜವಾದ ರೀತಿಯಲ್ಲಿ ಸಂಕೀರ್ಣ ಜಾಲವೊಂದನ್ನು ತೋರಿಸುತ್ತಾರೆ. ಕಾರ್ಯ–ಕಾರಣ ಸಂಬಂಧದ ಮೂಲಕ ಸರಳಗೊಂಡ ಚಿತ್ರಗಳಷ್ಟನ್ನೇ ಕಾಣಿಸಿ ತೃಪ್ತರಾಗುವುದಿಲ್ಲ. ‘ಇತಿಹಾಸವು’ ಬೆಳೆಯುತ್ತಿರುವ ಪರಿಯನ್ನು ‘ಅಧ್ಯಾತ್ಮ’ವು ಬೆರಗಾಗಿ ನೋಡುತ್ತಿದೆ ಎನ್ನುವಂತೆ ಚಿತ್ರಿಸುತ್ತಾರೆ!ಭೀಷ್ಮನ ಬಾಳನ್ನು ನೋಡಬಹುದು. ಮೇಲ್ಲೋಕದ ಅಷ್ಟವಸುದೇವತೆಗಳಲ್ಲಿ ಓರ್ವನಂತೆ ಭೀಷ್ಮ. ಮರ್ತ್ಯಲೋಕದ ಬಾಳು ದೇವತೆಗಳಿಗೆ ಇಷ್ಟವಿಲ್ಲ. ಆದರೂ ಮಾಡಿದ ಒಂದು ತಪ್ಪಿನ ಕಾರಣದಿಂದ ಇಲ್ಲಿ ಬಾಳಬೇಕಾಗಿ ಬಂದಿದೆ. ಅದೂ ದೀರ್ಘ ಜೀವನ. ಎಂಟು ಬಾಳನ್ನು ಬಾಳಿದಷ್ಟು ದೀರ್ಘ! ಅಲ್ಲದೆ ಭೀಷ್ಮನ ಸಂತತಿ ಮುಂದುವರಿಯಬಾರದು.ಅಂದರೆ ಇಲ್ಲಿ ಹೇಗೆ ಬಾಳಬೇಕೆಂದರೆ, ತಾನು ಈ ಲೋಕದಿಂದ ನಿರ್ಗಮಿಸುವಾಗಲೂ, ತನ್ನ ಸಂತತಿ ಇದ್ದರೆ – ಅವರ ಮೂಲಕ ತಾನೇ ಇರುವಂತೆ ಆಗುವುದರಿಂದ – ಅದು ನಿಜವಾದ ನಿರ್ಗಮನವಾಗಲಾರದು. ಬದುಕಿನ ಮುಗಿತಾಯವೆಂದರೆ ‘ಮೋಕ್ಷ’ ಎನ್ನುವ ಮೌಲ್ಯವನ್ನು ಒಪ್ಪಿದವರು – ಇನ್ನು ಮುಂದೆ ಇಲ್ಲಿ ಹುಟ್ಟಬಾರದು ಎಂದು ಬದುಕುವಂತೆ. ‘ಅಂಥದೊಂದು ಆಧ್ಯಾತ್ಮಿಕ ಮೌಲ್ಯದ ಲೌಕಿಕ ರೂಪವೆನ್ನುವಂತೆ – ಭೀಷ್ಮನ ಬಾಳು.ವಿಚಿತ್ರವೆಂದರೆ ಭೀಷ್ಮನದು ಶಾಪಗ್ರಸ್ತ ಸ್ಥಿತಿ! ಅವನು ತನ್ನದೆನ್ನುವುದನ್ನು ಯಾವುದನ್ನೂ ಇಲ್ಲಿ ಇಟ್ಟು–ಬಿಟ್ಟು ಹೋಗಬಾರದು; ದೇಹವೊಂದನ್ನಲ್ಲದೆ. ಪ್ರಾಯಃ ಈ ದೇಹವೂ ಕೂಡ ಪ್ರಕೃತಿಯೊಂದಿಗೆ ನಿಧಾನವಾಗಿ ಬೆರೆಯುತ್ತ ಹೋಗುವುದನ್ನು ಕೊನೆಯ ಕ್ಷಣದ ತನಕವೂ ಪ್ರಜ್ಞಾಪೂರ್ವಕವಾಗಿ ಅನುಭವಿಸಲೆಂಬಂತೆ – ಭೀಷ್ಮ ‘ಶರಶಯ್ಯೆ’ಯನ್ನು ಆಯ್ಕೆ ಮಾಡಿರಬೇಕು! ‘ಶರ–ಶಯ್ಯೆ’ ಪ್ರಾಯಃ ಮಹಾಭಾರತಕ್ಕೆ ಮಾತ್ರ ಹೊಳೆಯಬಲ್ಲ ಒಂದು ರುದ್ರರೂಪಕ.ತಂದೆ ಶಂತನು ಭೀಷ್ಮನ ಅನುಪಮವಾದ ತ್ಯಾಗಕ್ಕೆ ಮನಮೆಚ್ಚಿ –  ‘ಇಚ್ಛಾಮರಣ’ದ ವರವನ್ನು ಈ ಗಾಂಗೇಯನಿಗೆ ಇತ್ತಿದ್ದ. ‘ಇಚ್ಛಾಮರಣ’ವೆಂದರೆ ತಾನು ಇಚ್ಛಿಸದೆ ಸಾವು ತನ್ನ ಬಳಿ ಸುಳಿಯದು ಎಂಬ ಸಾವಿನ ಕುರಿತಾದ ಸಹಜ ಅಜ್ಞಾತಭೀತಿಯನ್ನು ಕಳೆಯುವ ವರ. ಸಾವು ತನ್ನ ಅಧೀನ ಎಂಬಂತೆ. ಆದರೆ ಭೀಷ್ಮ ಈ ವರವನ್ನು ಬಳಸಿದ್ದು ಮಾತ್ರ ರಕ್ತ–ಸಿಕ್ತ ಶರಶಯ್ಯೆಯ ಮೇಲೆ ಒರಗಿ! ಉತ್ತರಾಯಣದ ಒಂದು ಗಳಿಗೆಯನ್ನು – ಕೊನೆಯ ಗಳಿಗೆಯನ್ನು ಯಾತನೆಯ ನಡುವೆ ನಿರೀಕ್ಷಿಸುತ್ತ!ವರವನ್ನು ಕೂಡ ಅದನ್ನು ಇತರರಿಗೆ ಅನುಕರಣೀಯ ಎನ್ನುವ ರೀತಿಯಲ್ಲಿ ಅಲ್ಲ – ತನಗೆ ಮಾತ್ರ ವಿಶಿಷ್ಟ ಎನ್ನುವ ರೀತಿಯಲ್ಲಿ ಅನುಭವಿಸಿದ ಮಹಾನುಭಾವ! ಎಲ್ಲವನ್ನೂ ಅನುಕರಿಸುವ ಈ ಲೋಕದಲ್ಲಿ ಯಾರೂ ಅನುಕರಿಸಲೂ ಆಗದಂತೆ ಬದುಕಿದ. ಅಷ್ಟು ನಿಃಶೇಷ! ಇಷ್ಟೆಲ್ಲದಕ್ಕೆ ಕಾರಣವಾದದ್ದು – ದಾಶರಾಜನ ಅಂದರೆ ಮತ್ಸ್ಯಗಂಧಿಯ ತಂದೆಯ ಬಯಕೆ.ಅದೀಗ ಇತಿಹಾಸದ ಕಾರ್ಯ ಪ್ರಣಾಲಿ! ದೊರೆ ಶಂತನು, ಮತ್ಸ್ಯಗಂಧಿಯನ್ನು ಬಯಸಿ ಆ ಕುರಿತು ಬೆಸ್ತರ ಪಾಳೆಯದ ಒಡೆಯ ದಾಶನೊಡನೆ ಮಾತು ಕತೆಯಾಡಿದಾಗ – ದಾಶ; ಸಂದೇಹಕ್ಕೆ ಅವಕಾಶವೇ ಇಲ್ಲದಂತೆ ಸ್ಪಷ್ಟವಾಗಿ ನುಡಿದ. ‘ಮತ್ಸ್ಯಗಂಧಿಯ ಮಕ್ಕಳು ಹಸ್ತಿನಾವತಿಯ ದೊರೆಗಳಾಗಬೇಕು. ತನ್ನ ಮಗಳು, ರಾಣಿ ಮಾತ್ರ ಅಲ್ಲ, ರಾಜಮಾತೆಯಾಗಬೇಕು. ಅಂದರೆ ಈ ಮದುವೆಗೆ ಒಪ್ಪುವೆ. ಇಲ್ಲವಾದರೆ ಇಲ್ಲ’.ಶಂತನುವಿಗೆ ಏನೂ ತೋಚದಾಯಿತು. ಆಘ್ರಾಣಿಸಿದ ಯೋಜನಗಂಧವನ್ನು ಅವನ ಉಸಿರು ಮರೆಯದಾಯಿತು. ಆದರೆ ಸಿಂಹಾಸನಕ್ಕೆ ಅಧಿಕಾರಿಯಾಗಿ ಲೋಕವೇ ಹೆಮ್ಮೆಪಡಬಹುದಾದ ವ್ಯಕ್ತಿತ್ತ್ವದ ಮಗ ದೇವವ್ರತನಿದ್ದ. ಗಾಂಗೇಯ – ಗಂಗೆಯಷ್ಟೇ ಶುಭ್ರ. ಶಾಸ್ತ್ರ ತಿಳಿದವನು. ಶೂರ, ಧರ್ಮಜ್ಞ, ಕೃತಜ್ಞ. ಇವನಿಗೆ ಆಳುವ ಅಧಿಕಾರವನ್ನು ಇಲ್ಲಗೈವುದು ಚಂದ್ರವಂಶಕ್ಕೆ ಕಲಂಕ. ಇದನ್ನೆಲ್ಲ ಚಿಂತಿಸುತ್ತ, ನಿಡುಸುಯ್ಯುತ್ತ, ಶಂತನು, ಮೈ–ಮನಗಳ ಆಳವಾದ ತಿಕ್ಕಾಟದಲ್ಲಿ ಸೊರಗುತ್ತಿದ್ದ.ದೇವವ್ರತನಿಗೆ ಇದು ತಿಳಿಯುವುದು ತಡವಾಗಲಿಲ್ಲ. ಆತ ಬೆಸ್ತರ ಪಾಳಯದತ್ತ ನಡೆದ. ಗಂಗೆಯ ಮಗ, ತಂದೆಗಾಗಿ ತಾನು ಸಿಂಹಾಸನವನ್ನು ತೊರೆಯುವುದಾಗಿ ಎಲ್ಲರೂ ಬೆರಗಾಗುವಂತೆ ಘೋಷಿಸಿದ. ಆದರೆ ಬೆಸ್ತರ ನಾಯಕ ಲೋಕ ಬಲ್ಲವನು. ಎಲ್ಲ ಮಡುಗಳ ಆಳ ತಿಳಿದವನು.ಮತ್ಸ್ಯಗಂಧಿಯ ಮಕ್ಕಳೇ ಹಸ್ತಿನೆಯ ಗದ್ದುಗೆಯನ್ನೇರಲಿ, ಅದು ತನಗೆ ಸಮ್ಮತವೆಂದ ದೇವವ್ರತನ ಮಾತನ್ನು ಮೆಚ್ಚಿಕೊಂಡೂ ಇನ್ನೊಂದು ಮಾತು ಹೇಳಿದ – ‘ನಿನ್ನ ಮಾತೇನೋ ಸರಿ. ಆದರೆ ನಾಳೆ ನಿನ್ನ ಮಕ್ಕಳು ಬೆಳೆದು ದೊಡ್ಡವರಾದಾಗ ನಮ್ಮವರನ್ನು ಗದ್ದುಗೆಯಲ್ಲಿರಲು ಬಿಡುವರೆ?’ ಮಾತು ಮಾರ್ಮಿಕವಾಗಿತ್ತು. ದಾಶರಾಜ ತನ್ನೊಳಗೆ ತೀರ್ಮಾನ ಮಾಡಿದ್ದ. ಹಸ್ತಿನೆಯ ಸಿಂಹಾಸನವನ್ನು ಬೆಸ್ತರು ಬೆಳೆಸಿದ ಮಕ್ಕಳು ಏರಬೇಕು. ಮತ್ತೆ ಈ ಪರಂಪರೆ ಮುಂದುವರಿಯಬೇಕು. ಅದಕ್ಕಿರುವ ಎಲ್ಲ ಅಡ್ಡಿಗಳನ್ನೂ ಈಗಲೇ ನಿವಾರಿಸಬೇಕು. ಈಗ – ಇಲ್ಲದಿದ್ದರೆ ಮತ್ತೆಂದೂ ಇಲ್ಲ. ಇದೇ ಮೊದಲ ಮತ್ತು ಕೊನೆಯ ಅವಕಾಶ.ದೇವವ್ರತನ ಮುಂದೆ ಹೊಸ ಲೋಕವೊಂದು ತೆರೆದುಕೊಂಡಿತು. ತಮ್ಮ ಮಕ್ಕಳ ಭವಿಷ್ಯಕ್ಕಾಗಿ ದೂರ–ದೂರ – ಯೋಜನ ದೂರ ಯೋಚಿಸುವ ಜನ! ಯೋಜನ ದೂರ ಹರಡುವ ಗಂಧದಂತೆ! ಇತಿಹಾಸ ಯಾವುದೋ ದೊಡ್ಡದೊಂದು ತಿರುವಿಗೆ ಕಾದುಕೊಂಡಿರುವಂತಿದೆ. ಇದು ಆಯತ ಸಮಯ! ಈಗ ತಾನು ಹಿಮ್ಮೆಟ್ಟಬಾರದು. ಇದು ತನಗೂ ಮೊದಲ ಮತ್ತು ಕೊನೆಯ ಅವಕಾಶ.ಸಂಸ್ಕೃತಿಯ ಇನ್ನೊಂದು ಮುಖವನ್ನು – ಕಾಣದ ಮುಖವನ್ನು – ತಾನು ತೋರಿಸಬೇಕು. ಮಕ್ಕಳ ಬಗ್ಗೆ ಚಿಂತಿಸುವ ತಂದೆ–ತಾಯಂದಿರು ಇರುವಂತೆ ತಂದೆ–ತಾಯಂದಿರ ಬಗ್ಗೆ ಚಿಂತಿಸುವ ಮಕ್ಕಳೂ ಇರುತ್ತಾರೆ! ತಂದೆ ಶಂತನು ಸುಖವಾಗಿರಲಿ. ಇನ್ನೊಮ್ಮೆ ದಾಂಪತ್ಯವನ್ನು ಸವಿಯಲಿ. ಅದಕ್ಕಾಗಿ ತಾನು ಗೃಹಸ್ಥಜೀವನವನ್ನೇ ತ್ಯಾಗಮಾಡಬೇಕು.ಸಿಂಹಾಸನದ ಕಾಮವನ್ನು ಮಾತ್ರವಲ್ಲ – ಕಾಮ ಸಿಂಹಾಸನವನ್ನೇ ಆಸೆಗಳ ಸಾಮ್ರಾಜ್ಯವನ್ನೇ – ಸೋಂಕಬಾರದು. ತನ್ನ ಸಂತತಿಯಲ್ಲ, ತನ್ನ ತಂದೆಯ ಸಂತತಿ ಮುಂದುವರಿಯಲಿ. ಹಾಗೆ, ಲೋಕವೇ ಕೇಳುವಂತೆ, ಆಗಸದಲ್ಲಿರುವ ದೇವತೆಗಳೇ ಕೇಳುವಂತೆ, ದಾಶನ ಬೇಡಿಕೆಗೆ ಅನುಕೂಲವಾದ ಪ್ರತಿಜ್ಞೆಯನ್ನು ಮಾಡಿದನಂತೆ. ‘ಈ ವಧುಗಾದ ಪುತ್ರರೊಳ್ ಕೂಡುಗೆ ರಾಜ್ಯಲಕ್ಷ್ಮಿ; ಇಂದು ಮೊದಲಾಗಿರೆ ಪೆಂಡಿರೆಂಬರೊಳ್‌ ಕೂಡುವನಲ್ಲ ನಿಕ್ಕುವ ಮೆಂದು’(ಪಂಪ), ‘ಆದರಿಲ್ಲಿಂ ಮೇಲೆ ನಾರಿಯರಾದವರು ಭಾಗೀರಥಿಗೆ ಸರಿ, ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ’ (ಕುಮಾರವ್ಯಾಸ) – ಎಂದು ದೇವವ್ರತ ಮೊಳಗಿದ. ಈ ಮಾತಿಗೆ, ಭೂಮ್ಯಾಕಾಶಗಳು ಒಂದಾದಂತೆ ಹೂಮಳೆ ಸುರಿಯಿತಂತೆ.ಈ ಪ್ರತಿಜ್ಞೆಯೊಂದು ಅದ್ಭುತ. ಇಂದಿನಿಂದ ಇವನು ಭೀಷ್ಮನೇ ಎಂದು ಉಸುರಿದರಂತೆ ದೇವತೆಗಳು! ‘ಅಭ್ಯವರ್ಷಂಕ ಕುಸುಮೈಃ ಭೀಷ್ಮೋsಯ ಮಿತಿ ಚಾಬ್ರುವನ್‌’. ಆ ಹೂಮಳೆ ಶಂತನು–ಸತ್ಯವತಿ(ಮತ್ಸ್ಯಗಂಧಿ)ಯರ ಮೇಲೂ ಚೆಲ್ಲಿರಬೇಕು! ಶಂತನು ಯಾರನ್ನು ಕೈ ಸೋಕುತ್ತಾನೋ ಅವರಲ್ಲಿ ಯೌವನ ಮರುಕಳಿಸುತ್ತಿತ್ತಂತೆ. ಇಂಥ ಕೈಯಲ್ಲಿ ಅವನು ಮೊದಲು ಸತ್ಯವತಿಯನ್ನು ಯಮುನೆಯ ತೀರದಲ್ಲಿ ಮುಟ್ಟಿದಾಗ – ‘ದಿಬ್ಯಂ ಪಿಡಿವಂತೆ’– ಅತಿಮಾನುಷವಾದ ಪ್ರಮಾಣವೊಂದನ್ನು ಮುಟ್ಟುವಂತೆ – ಎಂದು ಪಂಪ ಬಣ್ಣಿಸಿದ್ದು, ಆ ಮೇಲೆ ನಡೆದುದೆಲ್ಲವನ್ನೂ ಗಮನಿಸುವಾಗ ಎಂಥ ಸಾರ್ಥಕವಾದ ಪ್ರಯೋಗ ಎಂದು ಅರಿವಿಗೆ ಬರುತ್ತದೆ.ಶಂತನುವಿನ ಕೈಗಳಲ್ಲಿ ಚಿರಯೌವನದ ಸ್ಪರ್ಶವಿತ್ತು. ಆ ಕೈಗಳಲ್ಲಿ ದೋಣಿಯ ಹುಟ್ಟುಹಾಕಿ ಒರಟಾಗಿದ್ದ ಸತ್ಯವತಿಯ ಕೈಗಳನ್ನಿಟ್ಟು ಭೀಷ್ಮ, ಪಾಣಿಗ್ರಹಣವನ್ನು ನೆರವೇರಿಸಿದ.ಹಸ್ತಿನಾವತಿಯ ಅರಮನೆಗೆ ಪರಾಶರಪರಂಪರೆಯ ಅನುಗ್ರಹ ಹೀಗೆ ಯೋಜನಗಂಧಿಯ ಗಂಧದ ಮೂಲಕ ಹರಿದುಬಂತು! ಹಸ್ತಿನಾವತಿಯ ಅರಮನೆಯ ಒಳಗಿನ ಗಂಧವೇ ಬದಲಾಗಿಹೋಯಿತು! ಸ್ತ್ರೀಗೆ ಎಂಥ ಗೌರವ! ಶಂತನುವಿಗೆ ಮೋಹವೇ ಇರಬಹುದು. ಆದರೆ ಆ ಮೋಹವನ್ನು ಸಹಜವೆಂದೊಪ್ಪಿ, ಸತ್ಯವತಿಯನ್ನು ಬರಮಾಡಿಕೊಂಡು, ವಂಶದ ದಿಕ್ಕನ್ನು ಬದಲಾಯಿಸಿದ ಶಾಶ್ವತಕೀರ್ತಿ ಭೀಷ್ಮನ ಪಾಲಿನದಾಯಿತು.ಹಿಂದೊಮ್ಮೆ, ತಂದೆ ಯಯಾತಿಗಾಗಿ ತನ್ನ ಯೌವನವನ್ನರ್ಪಿಸಿ, ಮಗ – ‘ಪೂರು’ ಸಿಂಹಾಸನವೇರಿದಾಗ ವಂಶದ ದಿಕ್ಕು ಬದಲಾಗಿತ್ತು. ಏಕೆಂದರೆ, ಪೂರು, ರಾಕ್ಷಸರಾಜನ ಮಗಳು ಶರ್ಮಿಷ್ಠೆಯ ಮಗನಾಗಿದ್ದ. ಈಗ ಇನ್ನೊಮ್ಮೆ ದಿಕ್ಕು ಬದಲಾಯಿತು. ಶಂತನುವಿನ ಬಾಳಿನಲ್ಲಿ ಯಯಾತಿಯ ಅನುಭವ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡಿತು.ಈಗ ತನ್ನ ಯೌವನವನ್ನು ಈ ಅರ್ಥದಲ್ಲಿ ತ್ಯಾಗ ಮಾಡುವ ಯೋಗ ಗಾಂಗೇಯನದಾಯಿತು. ‘ಭೀಷ್ಮ’ ಸಿಂಹಾಸನಾದ ರಕ್ಷಕನಾಗಿ ನಿಲ್ಲಬೇಕಾದ ಸ್ಥಿತಿ ಬಂತು. ಏಕೆಂದರೆ ಉಳಿದ ಕ್ಷತ್ರಿಯರು ಈ ಪರಂಪರೆಯನ್ನೊಪ್ಪಿಕೊಳ್ಳಬೇಕಲ್ಲ! ಕಾಶಿರಾಜನಂಥ ಮಡಿವಂತರು ತಮ್ಮಲ್ಲಿ ನಡೆವ ಸ್ವಯಂವರಕ್ಕೆ ಹಸ್ತಿನಾವತಿಗೆ ಆಮಂತ್ರಣ ಕೊಡುತ್ತಿರಲಿಲ್ಲ.ಒಂದು ಕಡೆಯಿಂದ ಭೀಷ್ಮ; ಇನ್ನೊಂದೆಡೆಯಿಂದ ವ್ಯಾಸರು ಈ ಪರಂಪರೆಯ ರಕ್ಷಕರಾದರು. ಶಂತನುವಿಗೆ ವಿಸ್ಮಯ–ಸಂತೋಷ ಎರಡೂ ಆದವು. ಗಾಂಗೇಯ – ಅವನಿಗೆ ಇಂಥ ತ್ಯಾಗದ ಸಾಮರ್ಥ್ಯ ಸಹಜವೇ. ಗಂಗೆ – ಉಳಿದ ಮಕ್ಕಳನ್ನು ಸೆಳೆದೊಯ್ದಾಗ ಈ ಎಂಟನೆಯ ಮಗುವನ್ನು, ಅವಳನ್ನು ವಿರೋಧಿಸಿ, ತಾನು ಉಳಿಸಿಕೊಂಡಿದ್ದ.ಈಗ ಏನಾಯಿತು! ತಾನು ಉಳಿಸಿದ ಮಗು ಹೀಗೆ ತನಗೆ ಮುಡಿಪಾಗಬಹುದೆಂದು ಶಂತನು ಊಹಿಸಿರಲಾರ! ತಾನು ಉಳಿಸಿಕೊಂಡದ್ದು ಇದಕ್ಕೇ ಏನು? ಗಂಗೆ ತನ್ನಲ್ಲೇ ಈಗ ನಗುತ್ತಿರಬಹುದೆ? ಶಂತನು, ತನ್ನೆದೆಯ ಪ್ರೀತಿಯೆನ್ನೆಲ್ಲ ಸುರಿಯುವಂತೆ – ಭೀಷ್ಮನಿಗೆ ‘ಇಚ್ಛಾಮರಣ’ದ ವರವನ್ನು ನೀಡಿದ.ನೀನು ಬಯಸದೆ ನಿನ್ನನ್ನು ಸಾವು ಸೆಳೆದೊಯ್ಯಲಾರದು. ತ್ಯಾಗದಿಂದ; ಬ್ರಹ್ಮಚರ್ಯಪಾಲನೆಯಿಂದ, ಸೃಷ್ಟಿಯ ಮಹಾನ್‌ ಸೆಳೆತವನ್ನು ಗೆದ್ದುಬಿಟ್ಟಿದ್ದೀಯೆ. ಸಾವು ನಿನ್ನ ಅಪ್ಪಣೆ ಪಡೆದು ಒಳಬರಬೇಕಾಗುತ್ತದೆ – ಎಂದ. ಯೌವನವನ್ನು ಮರುಕಳಿಸುವ ಶಕ್ತಿ, ಇಚ್ಛಾಮರಣದ ವರಪ್ರಧಾನವಾಗಿ ಫಲಿಸಿತೆನ್ನಬೇಕು! ಮೊದಲ ಬಾರಿಗೆ, ಸಂಸಾರಿಯೂ ಆಗದೆ; ಸನ್ಯಾಸಿಯೂ ಆಗದೆ, ತ್ಯಾಗದ ವ್ರತವನ್ನು ಕೈಗೊಂಡು, ಯಾವಜ್ಜೀವ ಸಿಂಹಾಸನದ ರಕ್ಷಕನಾಗಿ ದುಡಿದ ಔನ್ನತ್ಯ – ಭೀಷ್ಮನದು.ಶಂತನು–ಸತ್ಯವತಿಯರಿಗೆ ಇಬ್ಬರು ಗಂಡುಮಕ್ಕಳಾದರು. ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಹುಡುಗರು ಬೆಳೆಯುತ್ತಿದ್ದಂತೆ ಶಂತನು ಮೃತ್ಯುವಶನಾದ. ಭೀಷ್ಮ, ಚಿತ್ರಾಂಗದನನ್ನು ಹಸ್ತಿನೆಯ ಸಿಂಹಾಸನವನ್ನೇರಿಸಿದ. ದಾಶರಾಜನ ಆಸೆ ಈಗ ಈಡೇರಿದಂತಾಯಿತು. ಬೆಸ್ತರಿಗೆ ಈಗ ಸಂಭ್ರಮ. ಹುಟ್ಟುಹಾಕುವ ದೋಣಿಕಾರ್ತಿಯರಿಗೆ ನಗು, ಸ್ವಲ್ಪ ಧಿಮಾಕು. ಹಿಂದಿನ ಕಾಲ ಹೇಗೆ ಇತ್ತೆಂದು ಅವರು ಬಲ್ಲರು.ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿ ಬೆಸ್ತನ ಪಾತ್ರವೊಂದಿದೆ. ರಾಜಭಟರು ಇವನನ್ನು ಹಿಡಿದೆಳೆದಾಗ, ಮೀನು ಮಾರಿ ಏನೋ ಹೊಟ್ಟೆಪಾಡು ನಮ್ಮದು ಎನ್ನುತ್ತಾನೆ ಬೆಸ್ತ. ರಾಜಭಟರು – ಆಹಾ ಎಂಥ ಒಳ್ಳೆಯ ಬಾಳು ಬಾಳುತ್ತಿದ್ದೀಯ ಎಂದು ಲೇವಡಿ ಮಾಡುತ್ತಾರೆ! ಅಂಥ ಲೇವಡಿಯ ಕಾಲ ಕಳೆದುಹೋಯಿತು ಈಗ; ಚಿತ್ರಾಂಗದ ದೊರೆಯಾದಾಗ! ಬೆಸ್ತರು ತಮ್ಮನ್ನು ಗಂಗೆಯ ಮಕ್ಕಳು ಎಂದು ಕರೆದುಕೊಳ್ಳುವರು. ಈ ಅರ್ಥದಲ್ಲಿ ಗಾಂಗೇಯರೇ. ಗಾಂಗೇಯ ಭೀಷ್ಮನಿಗೆ ಸತ್ಯವತಿಯ ಮಕ್ಕಳಲ್ಲಿ ಸೋದರವಾತ್ಸಲ್ಯವೇ ಇತ್ತು! ಸತ್ಯವತಿಯ ಮನಸ್ಸಿಗೆ ನೋವಾಗದಂತೆ ರಾಜ್ಯವನ್ನು ಮುನ್ನಡೆಸುವ ಭೀಷ್ಮನ ವ್ಯಕ್ತಿತ್ತ್ವದ ಪ್ರತಿಮೆ ಭಂಗವಾಗಲಿಲ್ಲ – ಎಲ್ಲೂ.ಆದರೆ ಭೀಷ್ಮನ ಭಾಗ್ಯ, ಪ್ರತಿಮೆ ಭಂಗಗೊಳ್ಳದಂತೆ ಬಾಳುವ ಭಾಗ್ಯ, ಮಹಾಭಾರತದಲ್ಲಿ ‘ಗುರು’ ಎನಿಸಿದ ದ್ರೋಣನಿಗಿರಲಿಲ್ಲ. ಕಥೆ ಸ್ವಲ್ಪ ಮುಂದುವರಿದಂತೆ ಏಕಲವ್ಯನ ಕಥನ ನಮಗೆ ಎರಾಗುತ್ತದೆ.ಏಕಲವ್ಯ, ಬೇಡರ ಹುಡುಗ. ಬೇಡರ ನಾಯಕ ಹಿರಣ್ಯಧನುಷನ ಮಗ. ಹುಡುಗ ಗುರು ದ್ರೋಣನ ಖ್ಯಾತಿಯನ್ನು ಕೇಳಿದ್ದ. ಬೇಡರ ಹುಡುಗನಿಗೆ ಧನುರ್ವಿದ್ಯೆಯ ಸೆಳೆತ. ಆದರೆ, ದ್ರೋಣ – ಕ್ಷತ್ರಿಯೋಪಜೀವಿ. ದ್ರುಪದನ ಮೇಲೆ ಹಗೆ ಹೊತ್ತು ಹಸ್ತಿನಾವತಿಯ ಆಶ್ರಯಕ್ಕೆ ಬಂದವ. ಆತ, ಕ್ಷತ್ರಿಯರಿಗೆ ಮಾತ್ರ ನಿಯತವಾಗಿದ್ದ ಧನುರ್ವಿದ್ಯೆಯನ್ನು ಏಕಲವ್ಯನಿಗೆ ಕಲಿಸಲಾರೆನೆಂದು ನಿರಾಕರಿಸಿದ. ಹುಡುಗ ತನ್ನ ಕಾಡಿಗೆ ತಾನು ಹಿಂದಿರುಗಬೇಕಾಯಿತು.ಮನದಲ್ಲಿ ದ್ರೋಣರೂಪವನ್ನು ತುಂಬಿಕೊಂಡಿದ್ದ ಏಕಲವ್ಯ, ತನ್ನ ಕಾಡಿನಲ್ಲಿ, ದ್ರೋಣನ ಮಣ್ಣಿನ ಮೂರ್ತಿಯನ್ನು ಮಾಡಿ, ಅದರ ಸಮ್ಮುಖದಲ್ಲಿ ತನಗೇ ತಾನೇ ಬಿಲ್ವಿದ್ಯೆಯ ಅಭ್ಯಾಸಕ್ಕೆ ತೊಡಗಿದ. ಗುರಿ ಹಿಡಿದ ಅದ್ಭುತವಾದ ಏಕಾಗ್ರತೆ ಸಂಭವಿಸಿಬಿಟ್ಟಿತು!ಇತ್ತ ದ್ರೋಣ; ಕೌರವ–ಪಾಂಡವ ಹುಡುಗರಿಗೆ ಬಿಲ್ಗಾರಿಕೆಯನ್ನು ಕಲಿಸುತ್ತಿದ್ದವನಿಗೆ, ಅರ್ಜುನನ ಮೇಲೆ ವಿಶೇಷವಾದ ಪ್ರೀತಿ ಇತ್ತು. ದ್ರುಪದನನ್ನು ಸೋಲಿಸಬಲ್ಲ ಬಿಲ್ಗಾರನನ್ನು ಅರ್ಜುನನಲ್ಲಿ ಅವನು ಕಂಡಿದ್ದ. ‘ನಿನ್ನನ್ನು ಮೀರಿಸುವ ಬಿಲ್ಗಾರನಿಲ್ಲದಂತೆ ನಿನ್ನನ್ನು ಅದ್ವಿತೀಯನಾಗಿ ರೂಪಿಸುವೆ’ನೆಂದು ಅರ್ಜುನನಲ್ಲಿ ದ್ರೋಣ ಹೇಳಿದ್ದ.ಅದಾವ ಗಳಿಗೆಯಲ್ಲಿ ದ್ರೋಣ ಈ ಮಾತು ಹೇಳಿದನೋ – ನಿನ್ನನ್ನು ಮೀರಿಸುವ ಇನ್ನೊಬ್ಬನಿಲ್ಲದಂತೆ – ಎಂದು. ಆ ಇನ್ನೊಬ್ಬನನ್ನು – ಅರ್ಜುನನನ್ನು ಮೀರಿಸುವ ಇನ್ನೊಬ್ಬನನ್ನು ಪ್ರಕೃತಿಯೇ ನಿರ್ಧರಿಸಿತ್ತು. ಅದು ಏಕಲವ್ಯನ ರೂಪದಲ್ಲಿ. ಯಾರೋ ಇನ್ನೊಬ್ಬ ಕ್ಷತ್ರಿಯನ ರೂಪದಲ್ಲಿ ಅಲ್ಲ; ಬೇಡಹುಡುಗನ ರೂಪದಲ್ಲಿ. ದ್ರೋಣನ ನಿರಾಕರಣೆಯನ್ನು ನಿಸರ್ಗವೇ ನಿರಾಕರಿಸಿತ್ತು! ಒಮ್ಮೆ ಈ ಕ್ಷತ್ರಿಯ ಹುಡುಗರೆಲ್ಲ ಕಾಡಿಗೆ ಬೇಟೆಗೆಂದು ಬಂದಿದ್ದರು.ಜೊತೆಗೆ ಬೇಟೆಯ ನಾಯಿ ಇತ್ತು. ಅಲ್ಲೊಂದು ವಿಸ್ಮಯ ನಡೆಯಿತು. ಎಲ್ಲೋ ನೋಡಿ ಬೊಗಳುತ್ತಿದ್ದ ನಾಯಿ, ಇದ್ದಕ್ಕಿದ್ದಂತೆ, ಬಾಯ್ತುಂಬ ಬಾಣಗಳನ್ನು ಹೊತ್ತು, ಆದರೆ ಯಾವುದೇ ಗಾಯಗಳಾಗದೆ, ತನ್ನ ಸದ್ದಡಗಿಸಿಕೊಂಡು ಹಿಂದಿರುಗಿತು! ಇದು ಶಬ್ದವೇಧಿ ಎಂಬ ವಿದ್ಯೆ! ಅಸಾಧಾರಣವಾದ ಕೌಶಲ. ಕುತೂಹಲಗೊಂಡ ಹುಡುಗರು ಹೋಗಿ ನೋಡಿದರೆ ಅಲ್ಲಿದ್ದವನು ಏಕಲವ್ಯ! ಅವನ ಮುಂದೆ ಒಂದು ಮಣ್ಣಿನ ಮೂರ್ತಿ!ಹುಡುಗರಿಗೆ ಎಲ್ಲವೂ ತಿಳಿದುಹೋಯಿತು. ಈಗ, ಗುರುವಿನ ಆಗಮನವಾಯಿತು. ತನ್ನ ಬಳಿಗೇ ಬಂದ ಗುರುವನ್ನು ಕಂಡು ಏಕಲವ್ಯ ಸಂಭ್ರಮಿಸಿದ. ಮೈಮರೆತ. ಇದು ಯಾರ ಮೂರ್ತಿ ಎಂದು ಕೇಳಿದ ದ್ರೋಣ. ನಿಮ್ಮದಲ್ಲದೆ ಇನ್ನಾರದಾಗಿರುವುದು ಸಾಧ್ಯ? ನೀವು ನನ್ನ ಕೈ ಬಿಡಲಿಲ್ಲ. ಅದಕ್ಕೆ ನನ್ನ ವಿದ್ಯೆಯೇ ಸಾಕ್ಷಿ – ನಾನು ನಿಮ್ಮ ಶಿಷ್ಯ ಎಂದ ಬೇಡರ ಹುಡುಗ.ಕಥೆ ಎಲ್ಲರಿಗೆ ತಿಳಿದಿರುವಂಥದೇ. ಕಥೆಯನ್ನು ವಿಸ್ತರಿಸಬೇಕಿಲ್ಲ. ಶಿಷ್ಯನಿಂದ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿ ಪಡೆದ ಮೊದಲ ಗುರು – ದ್ರೋಣ. ತನ್ನ ಬಲಗೈಯ ಹೆಬ್ಬೆರಳನ್ನು ತಾನೇ ಕತ್ತರಿಸಿಕೊಟ್ಟು, ಒಳಗೆ ಕಿಂಚಿತ್ತೂ ಊನಗೊಳ್ಳದೆ, ಪೂರ್ಣಾಂಗನಾಗಿ ಬೆಳಗುತ್ತಿರುವ ಶಿಷ್ಯ – ಏಕಲವ್ಯ. ಈ ಕಥೆಯು ಎತ್ತುವ ಸಾಮಾಜಿಕ ಪ್ರಶ್ನೆಗಳು ಕೂಡ, ಈಗಲೂ ಕಾಡುತ್ತಿರುವಂಥವೇ. ಇವೆಲ್ಲದರ ಜೊತೆಗೆ ಇನ್ನೂ ಕೆಲವು ಸಮಸ್ಯೆಗಳನ್ನು ಏಕಲವ್ಯನ ಕಥೆ ಎತ್ತುತ್ತದೆ.ಇವುಗಳಲ್ಲಿ ಮೊದಲನೆಯದೆಂದರೆ – ಯಾವುದೇ ವಿದ್ಯೆಯನ್ನು ತನ್ನ ಮನೋಬಲದಿಂದ, ಏಕಾಗ್ರತೆಯಿಂದ, ಅನನ್ಯ ಪರಿಶ್ರಮದಿಂದ ಮತ್ತು ಈ ಎಲ್ಲ ಗುಣಗಳನ್ನು ಅವುಗಳ ಶಿಖರಸ್ತರದಲ್ಲಿ ಉದ್ಭುದ್ಧಗೊಳಿಸುವುದಕ್ಕೆ ಶಕ್ತವಾದ ಆಳವಾದ ಮುಗ್ಧತೆಯಿಂದ ಮನುಷ್ಯಜೀವ ಒಲಿಸಿಕೊಳ್ಳಬಲ್ಲುದು, ತನ್ನದಾಗಿಸಿಕೊಳ್ಳಬಲ್ಲುದು. ತನ್ನ ವ್ಯಕ್ತಿತ್ತ್ವದ ಅವಿನಾಭಾಗವಾಗಿಸಿಕೊಳ್ಳಬಲ್ಲುದು.ಇದೊಂದು ರೀತಿಯಲ್ಲಿ ಸ್ವಯಮಾಚಾರ್ಯ ಪುರುಷತ್ತ್ವ! ಕ್ಷತ್ರಿಯರ ಬಿಲ್ವಿದ್ಯೆಯನ್ನು ಬೇಡರ ಹುಡುಗನಿಗೆ ಕಲಿಸಲಾಗುವುದಿಲ್ಲ ಎಂದು ದ್ರೋಣ ನಿರಾಕರಿಸಿದ ಮೇಲೆ, ತನ್ನ ಕಾಡಿನ ಏಕಾಂತದಲ್ಲಿ, ನಿಸರ್ಗದ ನಡುವೆ ನಿಸರ್ಗವೇ ಆಗಿ ಏಕಲವ್ಯ ಕಲಿತುದೆಲ್ಲವೂ ಸ್ವಾರ್ಜಿತವಾದುದು. ಅದು ಯಾರ ಕೊಡುಗೆಯೂ ಅಲ್ಲ. ಕೊಡುಗೆ ಎನ್ನಬೇಕಾದರೆ ನಿಸರ್ಗದ ಕೊಡುಗೆ ಎನ್ನಬೇಕು. ಅಂದರೆ ಇಂಥದೊಂದು ವಿದ್ಯಮಾನ ಯಾರ ಬಾಳಿನಲ್ಲಾದರೂ ನಡೆಯಬಹುದು. ನಡೆಯದಂತೆ ಯಾರೂ ತಡೆಯಲಾರರು.ಮೂಲ ಪ್ರವೃತ್ತಿಗಳ ಮಟ್ಟದಲ್ಲಿ (instincts) ನಡೆದ ಅಸಾಧಾರಣವಾದ ಕಲಿಕೆ ಇದು. ಕಲಿಕೆ ಎಂದೇ ತಿಳಿಯದ ಕಲಿಕೆ ಎಂದು ಕೂಡ ಹೇಳಬಹುದು. ಆದುದರಿಂದಲೇ ಇಂಥ ಕಲಿಕೆಗಳನ್ನು ‘ವ್ಯವಸ್ಥಿತ’ ಮಾಡಲಾಗುವುದಿಲ್ಲ ಎನ್ನುವುದೆಷ್ಟು ನಿಜವೋ ಕಲಿಕೆಯ ಎಲ್ಲ ವ್ಯವಸ್ಥೆಗಳೂ ಎಲ್ಲ ಶಾಸ್ತ್ರಗಳೂ ಇಂಥ ಅನುಭವದಿಂದಲೇ ಹುಟ್ಟಿಕೊಂಡವು ಎನ್ನುವುದೂ ಅಷ್ಟೇ ನಿಜ. ಎಲ್ಲ ಕಲಿಕೆಗಳ ಗುರಿ ಕೂಡ ಮತ್ತೆ ಇಂಥ ಅನುಭವಗಳತ್ತ ಮುಖ ಮಾಡುವುದೇ ಆಗಿದೆ – ಇಂಥದ್ದು ಸಂಭವಿಸುವಂತೆ ಮಾಡುವುದು ನಮ್ಮ ಕೈಯಲ್ಲಿರದಿದ್ದರೂ. ಏಕೆಂದರೆ ಎಲ್ಲ ಶಾಸ್ತ್ರಗಳೂ ವ್ಯವಸ್ಥೆಗಳೂ ಕ್ರಮೇಣ ಜಡಗೊಳ್ಳುವವು. ಆಗ – ಎಂದೂ ಜಡಗೊಳ್ಳದ ಈ ಮೂಲ ಗುಣವೇ ಮತ್ತೆ ಚೇತೋಹಾರಿಯಾದ ಒಂದ ಜೀವಂತಿಕೆಯನ್ನು ಊಡುವುದು.ಈ ಅರ್ಥದಲ್ಲಿ, ತನಗೆ ತಾನೇ ಕಲಿತವನಾಗಿ, ನಿಜವಾದ ಸ್ವಾಧ್ಯಾಯವನ್ನು ನಡೆಯಿಸಿದವನಾಗಿ, ಏಕಲವ್ಯನನ್ನು ‘ಋಷಿ’ ಎನ್ನಬೇಕು. ನೋಡಿದ ಯಾರೇ ಆದರೂ ಚಕಿತಗೊಳ್ಳುವ ಸಂದರ್ಭವಿದು. ಆದರ ಹಾಗಾಗಲಿಲ್ಲ. ಕಥೆ ಇನ್ನೊಂದು ತಿರುವನ್ನು ಪಡೆಯುತ್ತದೆ ಎನ್ನುತ್ತದೆ ಮಹಾಭಾರತ. ಏಕಲವ್ಯನ ಕಲಿಕೆಯಲ್ಲಿ ತನ್ನ ಪಾತ್ರವಿದೆ ಎಂದು ಹುಡುಗನ ಮುಖದಿಂದಲೇ ದ್ರೋಣ ಕೇಳಿದ್ದಾನೆ. ಹೌದು; ಅಲ್ಲೊಂದು ಮಣ್ಣಿನ ಮೂರ್ತಿ ಇದೆ. ಏಕಲವ್ಯನ ಕೈಗಳಿಂದಲೇ, ಹೆಬ್ಬೆರಳಿನಿಂದಲೇ ರೂಪುಗೊಂಡ ಮೂರ್ತಿ ಅದು; ದ್ರೋಣನ ಮೂರ್ತಿ. ತನಗೆ ವಿದ್ಯೆಯನ್ನು ನಿರಾಕರಿಸಿದವನ ಮೂರ್ತಿ.ದ್ರೋಣನ ಮೂರ್ತಿಯನ್ನು ತನ್ನ ಆಳವಾದ ಭಾವದಲ್ಲಿ ಇನ್ನೊಂದು ರೀತಿಯಲ್ಲಿ ಎರಕಹೊಯ್ದು ತನ್ನೊಳಗಿನ ಬಿಲ್ವಿದ್ಯೆಯ ಅರಿವು ಪ್ರಕಟಗೊಳ್ಳುವುದಕ್ಕೆ ಅದನ್ನು ಪ್ರತೀಕವಾಗಿಸಿ, ಮಣ್ಣಿನ ಮೂರ್ತಿಯನ್ನು ಏಕಲವ್ಯನು ಹೀಗೆ ಜೀವಂತವಾಗಿಸಿದ! ಜೀವಂತವಾದುದು ದ್ರೋಹ ಮಾಡುವುದಿಲ್ಲ; ಜೀವಂತವಾದುದು ಸ್ಪಂದಿಸುತ್ತದೆ ಎಂದು ತೋರಿಸಿಕೊಟ್ಟ. ಅವನು ಪಡೆದ ವಿದ್ಯೆಯೇ ಈ ಸ್ಪಂದನಕ್ಕೆ ಸಾಕ್ಷಿ!ನಿಜಕ್ಕಾದರೆ ಆ ಮೂರ್ತಿ ಯಾರದು? ಮುಖವೇನೋ ದ್ರೋಣನದು. ಆದರೆ ಆ ಮುಖವನ್ನು ಕಡೆದವನು ಏಕಲವ್ಯನಲ್ಲವೆ? ಆ ಮುಖವನ್ನು ನಂಬಿದವನು ಏಕಲವ್ಯನಲ್ಲವೆ? ಮೂರ್ತಿ ದೇವರದೇ ಆದರೂ ಅದು ದೇವರದಲ್ಲ; ಅದನ್ನು ನಂಬಿದ ಭಕ್ತನದು. ‘ನಂಬಿದವರಿಗೆ ತನ್ನ ತೆತ್ತಿಹೆ’ ಎನ್ನುವುದು ದೇವರ ಬಿರುದು, ದೇವರ ನಿಲುವು. ಯಾರು ಹೇಗೆ ನನ್ನ ಪೂಜಿಸಿದರೆ ಹಾಗೆ ಅವರಿಗೆ ನಾನು ಒಲಿಯುವೆನು; ಅವರು ನಡೆದು ಬರುತ್ತಿರುವ ದಾರಿಯಲ್ಲೇ ಅವರನ್ನು ಎದುರುಗೊಳ್ಳುವೆನು ಎಂದು ಗೀತೆಯಲ್ಲಿ ಕೃಷ್ಣ ಹೇಳಿದ ಮಾತು ಗಹನವಾದದ್ದು. ಆದರೆ ದ್ರೋಣನಲ್ಲಿ ಈ ಭಾವದ ವಿಪರ್ಯಾಸವನ್ನು ಕಾಣುತ್ತೇವೆ.ದುರ್ಬಳಕೆಯನ್ನು ಕಾಣುತ್ತೇವೆ. ಏಕಲವ್ಯನ ವಿದ್ಯೆಯನ್ನು ಕಂಡು ಅಚ್ಚರಿಗೊಳ್ಳಲಾಗದ ಸಂವೇದನಾಶೂನ್ಯತೆಯನ್ನು ಕಾಣುತ್ತೇವೆ. ದ್ರೋಣನು ನಿಜವಾಗಿ ಅಚ್ಚರಿಗೊಳ್ಳುತ್ತಿದ್ದರೆ. ತಮ್ಮ ಶಾಸ್ತ್ರಗಳು ಜಡವಾಗುತ್ತಿವೆ, ಹುಸಿಯಾಗುತ್ತಿವೆ ಎಂದು ಮನಗಾಣಬಹುದಿತ್ತು, ತಿದ್ದಿಕೊಳ್ಳಬಹುದಾಗಿತ್ತು. ಆದರೆ ಅವನು ಕುರುಡಾಗಿದ್ದ. ಗುರುದಕ್ಷಿಣೆಯಾಗಿ ಏಕಲವ್ಯನ ಹೆಬ್ಬೆರಳನ್ನು ಪಡೆದ. ನರಮನುಷ್ಯರು ದೇವರಾಗಬಾರದು.ಇಲ್ಲಿ ಇನ್ನೊಂದು ಯಾತನಾಮಯವಾದ ಸತ್ಯವಿದೆ. ಏಕಲವ್ಯನ ವಿದ್ಯೆಯು ಸ್ವಾರ್ಜಿತ; ನಿಸರ್ಗದತ್ತ ಎನ್ನುವುದು ನಮ್ಮ ಮಾತು. ಅಂದರೆ ಹೊರಗಿನವರ ಮಾತು. ಅದು ಏಕಲವ್ಯನ ಮಾತಾಗಲಾರದು. ಅವನಿಗಾದರೋ ಈ ವಿದ್ಯೆಯೆಲ್ಲ ಅವನ ಗುರುಭಕ್ತಿಯ ಫಲ. ಗುರುಕರುಣೆ ಎಂಬ ಭಾವ. ಗುರುವಿನ ಮೂರ್ತಿ ಬೇರೆಯಲ್ಲ – ಗುರು ಬೇರೆಯಲ್ಲ ಎಂಬ ಭಾವ. ತನ್ನ ಸಾಧನೆ ಎಲ್ಲ ಗುರುವಿನ ಒಲವಿನ ಗಳಿಕೆಗಾಗಿ ಎಂಬ ಭಾವ.ತನ್ನ ಮೈ ತನ್ನ ಮನ – ಗುರುವಿಗೆ ಮೀಸಲು ಎಂಬ ಭಾವ. ಏಕಲವ್ಯನಿಗೊಲಿದ ವಿದ್ಯೆಯ ಹಿನ್ನೆಲೆಯಲ್ಲಿ ಈ ಗುರುಭಕ್ತಿಯ ಅಂಶ ಬೇರ್ಪಡಿಸಲಾಗದಂತೆ ಸೇರಿಹೋಗಿದೆ.ಇದನ್ನು ಬೇರ್ಪಡಿಸಿ ನೋಡಬೇಕೆ? ಬೇರ್ಪಡಿಸುವುದು ಸಾಧ್ಯವೆ? ಬೇರ್ಪಡಿಸಲಾಗದಿದ್ದರೆ ಅದು ಮೌಢ್ಯವೆ? ಹೀಗೆ ಬೇರ್ಪಡಿಸಿ ನೋಡುವುದು ಏಕಲವ್ಯನನ್ನು ಇನ್ನೊಂದು ರೀತಿಯಲ್ಲಿ ಭಂಗಗೊಳಿಸಿದಂತೆ – ಊನಗೊಳಿಸಿದಂತೆ ಆಗದೆ?ಈಗ ಹೆಬ್ಬೆರಳನ್ನು ತೆತ್ತು ಕೂಡ ಏಕಲವ್ಯನು ಆಭಂಗನಾಗಿಯೇ ಉಳಿಯಲಿಲ್ಲವೆ? ಇದು ಬದುಕಿನ ನಿಜವಾದ ಗೆಲವಲ್ಲವೆ? ದ್ರೋಣಾರ್ಜುನರ ಮೇಲೆ ಏಕಲವ್ಯನು ನೈತಿಕವಾಗಿ ಗೆದ್ದಂತಲ್ಲವೇ? ಲೋಕವೆಲ್ಲ – ತನ್ನ ಕಂಬನಿಯ ನಡುವೆಯೇ – ಮೂಕವಿಸ್ಮಿತವಾಗಿ, ಆಂತರಿಕವಾಗಿ ಹೊಸ ಎಚ್ಚರವೊಂದನ್ನು, ಈ ಉದಾತ್ತ ಘಟನೆಯಿಂದ ಪಡೆಯಲಿಲ್ಲವೆ? ಹೊರಗಿನ ಚರಿತ್ರೆಯಂತೆಯೇ ಒಳಗಿನ ಚರಿತ್ರೆಯೂ ಮುಖ್ಯವಲ್ಲವೆ? ಒಳ–ಹೊರಗುಗಳನ್ನು ನಮ್ಮೆಣಿಕೆಗಳಂತೆ ಬೇರ್ಪಡಿಸಲಾಗುತ್ತದೆಯೇ? ಏನಿದು ಸಂಕಟ? ಏನಿದು ಸೋಜಿಗ?ತಾನು ಜೀವಂತನಂತೆ ನಡೆದಾಡುತ್ತಿದ್ದ ದ್ರೋಣ, ತನ್ನ ಮಣ್ಣಿನ ಮೂರ್ತಿಯಿಂದ ತಾನೇ ಸೋತ ಕಥೆ ಇದು. ಈ ಮೂಲಕ, ಜಡ–ಜೀವಂತಗಳನ್ನು ಕುರಿತ ಕಾಣ್ಕೆಗಳನ್ನೇ ಬದಲಿಸಿದ ಕಥೆ ಇದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry