7

ಮೋದಿ ವಿರೋಧಿ ಅಲೆಯ ಬೆನ್ನೇರಿ...

ಶೇಖರ್‌ ಗುಪ್ತ
Published:
Updated:

ನಮ್ಮೆಲ್ಲ ರಾಷ್ಟ್ರೀಯ ಪ್ರತಿಪಕ್ಷ ಮುಖಂಡರ ಇತ್ತೀಚಿನ ನಡವಳಿಕೆಗಳು ಮೇಲ್ನೋಟಕ್ಕೆ ಕಂಡುಬರುವುದಕ್ಕಿಂತ ಹೆಚ್ಚಿನದನ್ನೇನೋ ಹೇಳುತ್ತಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೇನೆಯನ್ನೂ ವಿವಾದಕ್ಕೆ ಎಳೆದುತರುವ ಮೂಲಕ ಕೇಂದ್ರದ ವಿರುದ್ಧ ಸಮರ ಸಾರಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ತಮ್ಮ ಹೋರಾಟವನ್ನು ಹಠಾತ್ತಾಗಿ ಪಂಜಾಬ್‌ನಿಂದ ದೆಹಲಿಗೆ ವರ್ಗಾಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ನರೇಂದ್ರ ಮೋದಿ ಅವರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೂ ರಾಜ್ಯಸಭೆಯಲ್ಲಿ ನಿಷ್ಕರುಣೆಯಿಂದ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ದೆಹಲಿಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವುದರ ಜತೆಗೆ ಸಾಕಷ್ಟು ಸದ್ದೂ ಮಾಡುತ್ತಿದ್ದಾರೆ.ಪ್ರತಿಪಕ್ಷ ಮುಖಂಡರು ನಿರ್ದಿಷ್ಟ ಉದ್ದೇಶ ಮತ್ತು ಚಿಂತನೆ ಇಲ್ಲದೆ ಇಂತಹ ನಿರ್ಧಾರಕ್ಕೆ ಬಂದಿರಲಾರರು. ಆದರೆ, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ನೋಟು ರದ್ದತಿ ನಿರ್ಧಾರ ಬೆಂಬಲಿಸಿ, ಬಿಹಾರದಲ್ಲಿನ ತಮ್ಮ ಮಿತ್ರಪಕ್ಷಗಳೂ ಸೇರಿದಂತೆ ಪ್ರತಿಪಕ್ಷಗಳ ಇತರ ಮುಖಂಡರಿಂದ ದೂರ ಸರಿದಿರುವುದು ಅಚ್ಚರಿದಾಯಕ ಬೆಳವಣಿಗೆಯಾಗಿದೆ.ಇವೆಲ್ಲವೂ, ಮುಂಬರುವ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ನಮ್ಮೆದುರು  ಪೂರ್ಣ ಪ್ರಮಾಣದಲ್ಲಿ ಗರಿಗೆದರಲಿರುವ ಸ್ಪಷ್ಟ ಸೂಚನೆಗಳಾಗಿವೆ.

ಪ್ರಧಾನಿ ಹುದ್ದೆಯಲ್ಲಿ ಇದ್ದವರು ತಮ್ಮ ಅಧಿಕಾರದ ಮೊದಲ ಅವಧಿಯಲ್ಲಿ ಭಾರಿ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೊಸ ಪ್ರವೃತ್ತಿಯಾಗಿ ಬೆಳೆದು ಬರುತ್ತಿದೆ. ಅದರಲ್ಲೂ ವಿಶೇಷವಾಗಿ, ಮೊದಲಾರ್ಧ ಪೂರೈಸಿದ ಸಂದರ್ಭದಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ನಿರ್ಧಾರಗಳು ತಮ್ಮ ಮೂಲ ಉದ್ದೇಶ ಸಾಧಿಸುತ್ತವೆಯೋ ಇಲ್ಲವೋ ಬೇರೆ ಮಾತು. ಆದರೆ ನಂತರದ ವರ್ಷಗಳಲ್ಲಿನ ರಾಜಕೀಯದ ಮೇಲೆ ಗಮನಾರ್ಹ ಪ್ರಭಾವವನ್ನಂತೂ ಬೀರುತ್ತವೆ.ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ಅಲ್ಪಾವಧಿಯಲ್ಲಿಯೇ ನಡೆಸಿದ ಅಣ್ವಸ್ತ್ರ ಪರೀಕ್ಷೆ (ಪೋಖ್ರಾನ್–2) , ಮನಮೋಹನ್‌ ಸಿಂಗ್‌ ಅವರು ತಮ್ಮ ಅಧಿಕಾರಾವಧಿಯ 5ನೇ ವರ್ಷದಲ್ಲಿ ಅಮೆರಿಕದ ಜತೆ ಪರಮಾಣು ಒಪ್ಪಂದ ಮಾಡಿಕೊಂಡಿದ್ದು ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಇಂತಹ ನಿರ್ಧಾರಗಳಿಂದಾಗಿ ಇಬ್ಬರೂ ಸಾಕಷ್ಟು ರಾಜಕೀಯ ಪ್ರಯೋಜನ ಪಡೆದುಕೊಂಡಿದ್ದರು.ರಾಜೀವ್‌ ಗಾಂಧಿ ಅವರ ವಿಷಯದಲ್ಲಿ ಮಾತ್ರ ಇಂತಹ ನಿರ್ಧಾರಗಳಲ್ಲಿ ವೈಫಲ್ಯ ಕಂಡು ಬಂದಿತ್ತು. ಮುಸ್ಲಿಂ ಸಂಪ್ರದಾಯವಾದಿಗಳನ್ನು ಮೆಚ್ಚಿಸಲು ಶಾಬಾನೊ ಪ್ರಕರಣದಲ್ಲಿ ಕೈಗೊಂಡ ನಿರ್ಧಾರ ಮತ್ತು ಶ್ರೀಲಂಕಾದಲ್ಲಿನ ದುಸ್ಸಾಹಸಗಳು ರಾಜೀವ್‌ ಅವರಿಗೆ ಮುಳುವಾದವು. ಈ ಮೇಲಿನ ಯಶಸ್ಸು ಮತ್ತು ಸೋಲುಗಳು ವಿ.ಪಿ.ಸಿಂಗ್‌ ಅವರ ಅಲ್ಪಾಯುಷ್ಯದ ಸರ್ಕಾರಕ್ಕೆ ಅನ್ವಯಿಸಲಾರವು. ಮಂಡಲ್‌ ವರದಿ ಜಾರಿಗೊಳಿಸಿದ ಸಿಂಗ್‌ ಅವರ ಐತಿಹಾಸಿಕ ನಿರ್ಧಾರವು ಅವರ ರಾಜಕೀಯ ಬದುಕಿಗೆ ಕೊಳ್ಳಿ ಇಟ್ಟರೂ, ದೇಶಿ ರಾಜಕಾರಣವನ್ನು ಶಾಶ್ವತವಾಗಿ ಮರು ವ್ಯಾಖ್ಯಾನಿಸಿತು.ಭಾರಿ ಪ್ರಮಾಣದ ರಾಜಕೀಯ ಲಾಭ ಪಡೆಯಲು ಕೈಗೊಂಡ ಪ್ರಜ್ಞಾಪೂರ್ವಕ, ಎಂಟೆದೆಯ ರಾಜಕೀಯ ನಿರ್ಧಾರಗಳನ್ನಷ್ಟೇ ನಾನು ಇಲ್ಲಿ ಪರಿಗಣಿಸಿದ್ದೇನೆಯೇ ಹೊರತು, ಪಿ.ವಿ.ನರಸಿಂಹರಾವ್‌ ಅವರು ಅಯೋಧ್ಯೆ ವಿಷಯದಲ್ಲಿ ಮತ್ತು ರಾಜೀವ್‌ ಗಾಂಧಿ ಅವರು ಬೊಫೋರ್ಸ್‌ ವಿಷಯದಲ್ಲಿ ಕೈಗೊಂಡ ಅಸಮರ್ಥ ಅಥವಾ ತಪ್ಪು ನಿರ್ಧಾರಗಳನ್ನಲ್ಲ.ನರೇಂದ್ರ ಮೋದಿ ಅವರು ಈಗ ಕೈಗೊಂಡಿರುವ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ನಿರ್ಧಾರವು ಯಶಸ್ಸು ಅಥವಾ ಸೋಲಿನ ರಾಜಕೀಯ ವ್ಯಾಖ್ಯಾನದ ಪೂರ್ಣ ಪ್ರಮಾಣದ ಪರೀಕ್ಷೆಯಲ್ಲಿ ಇನ್ನೂ ಉತ್ತೀರ್ಣಗೊಂಡಿಲ್ಲ. ಅದರ ಪರಿಣಾಮಗಳು ಬರೀ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರುವಷ್ಟಕ್ಕೂ ಸೀಮಿತವಾಗಿಲ್ಲ. 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಮೇಲೂ ಅದರ ಪರಿಣಾಮಗಳು ಕಂಡು ಬರಲಿವೆ. ಚುನಾವಣೆ ನಂತರವೂ ಅದರ ಪ್ರಭಾವ ವ್ಯಾಪಿಸಬಹುದು.ಈ ನಿರ್ಧಾರವು ಯಶಸ್ಸು ಅಥವಾ ಸೋಲು ಕಾಣುವುದೇ ಎನ್ನುವುದರ ಬಗ್ಗೆ ಸದ್ಯಕ್ಕೆ  ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇಲ್ಲಿ ಒಂದು ಮಾತಂತೂ ನಿಜ. 2014ರ ನಂತರದ ದೇಶಿ ರಾಜಕಾರಣವನ್ನು ನೋಟು ರದ್ದತಿ ನಿರ್ಧಾರದ ‘ಮುಂಚಿನ’ ಮತ್ತು ‘ನಂತರದ’ ಎಂದು ಪ್ರತ್ಯೇಕವಾಗಿ ವ್ಯಾಖ್ಯಾನಿಸಬಹುದಾಗಿದೆ ಎನ್ನುವುದು ಮಾತ್ರ ಈಗ ಸ್ಪಷ್ಟಗೊಳ್ಳುತ್ತದೆ.ನೋಟು ರದ್ದತಿಯ ಆರಂಭಿಕ ತಲ್ಲಣದ ಕಂಪನಗಳು ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ರಾಷ್ಟ್ರೀಯ ರಾಜಕಾರಣ ಮತ್ತೆ ಸಕ್ರಿಯಗೊಳ್ಳಲಿದೆ. ಕಪ್ಪುಹಣ, ಭ್ರಷ್ಟಾಚಾರ ವಿರುದ್ಧದ ಜಂಟಿ ಹೋರಾಟವನ್ನು ನಾವು ‘ಆರ್ಥಿಕ ರಾಷ್ಟ್ರೀಯತೆ’ ಎಂದು ಕರೆಯಬಹುದಾಗಿದ್ದು, ಇದು 2019ರವರೆಗೆ ಮೋದಿ ಅವರ ರಾಜಕೀಯ ಅಸ್ತ್ರವಾಗಿ ಬಳಕೆಯಾಗಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ವಿಷಯ ಆಧರಿಸಿ ರಾಜಕೀಯ ಹೋರಾಟ ತೀವ್ರಗೊಳ್ಳಲಿದೆ.

ಸದ್ಯಕ್ಕಂತೂ ಮೋದಿ ನಡೆಯನ್ನು ಕೇಜ್ರಿವಾಲ್‌ ಅವರು ₹ 8 ಲಕ್ಷ ಕೋಟಿಗಳ ಹಗರಣ ಎಂದೂ, ಕಾಂಗ್ರೆಸ್‌ – ಇದೊಂದು ಮೋದಿ ಅವರ ಬರೀ ತೋರಿಕೆಯ ನಡೆಯಾಗಿದ್ದು, ಪೇಟಿಎಂ ರೀತಿಯಲ್ಲಿ ‘ಪೇ ಟು ಮೋದಿ’ ಎನ್ನುವ ತಮಾಷೆಯಾಗಿದೆ ಎಂದೂ ಲೇವಡಿ ಮಾಡಿದೆ. ದೀದಿಯಂತೂ ಈ ನಿರ್ಧಾರವನ್ನೇ ವಾಪಸ್‌ ತೆಗೆದುಕೊಳ್ಳಲು ಒತ್ತಾಯಿಸುವುದರ ಜತೆಗೆ, ತಮ್ಮನ್ನು ಅಧಿಕಾರದಿಂದ ಕಿತ್ತೊಗೆಯಲು ಕೇಂದ್ರ ಸರ್ಕಾರವು ಸೇನೆಯ ನೆರವು ಪಡೆಯಲು ಮುಂದಾಗಿದೆ ಎಂದೂ ಆರೋಪಿಸಿದ್ದಾರೆ.ಉಳಿದ ಪ್ರತಿಪಕ್ಷ ಮುಖಂಡರಂತೆ ಮೋದಿ ಅವರ ನಿರ್ಧಾರವನ್ನು ಟೀಕಿಸುವ ಗೋಜಿಗೆ ಹೋಗದೆ ಸಹನೆಯಿಂದ ಇರುವ ನಿತೀಶ್‌ ಕುಮಾರ್‌, ನೋಟು ರದ್ದತಿ ನಿರ್ಧಾರವು ಕಪ್ಪುಹಣ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟವಾಗಿದ್ದರೆ (ರೆ...) ಅದನ್ನು ಬೆಂಬಲಿಸುವುದಾಗಿ ಹೇಳಿ ಚಾಣಕ್ಯನ ಕೌಟಿಲ್ಯ ಜಾಣ್ಮೆ ಮೆರೆದಿದ್ದಾರೆ. ‘ರೆ...’ ಎನ್ನುವ ಅವರ ಮಾತನ್ನು ಇಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.ಇಲ್ಲಿ ಕೌಟಿಲ್ಯನ ಹೆಸರನ್ನು ಪ್ರಸ್ತಾಪಿಸಿರುವುದು ಏಕೆಂದರೆ, ಶತ್ರುಗಳು ಪಾಟಲೀಪುತ್ರದ  (ಸದ್ಯದ ಪಟ್ನಾ) ಸಿಂಹಾಸನ ನೀಡಲು ನಿರಾಕರಿಸಿದಾಗ ಚಂದ್ರಗುಪ್ತನು, ಬಡ ಬ್ರಾಹ್ಮಣ ಚಾಣಕ್ಯನ ಸಂಪರ್ಕಕ್ಕೆ ಬರುತ್ತಾನೆ. ಒಂದು ಬಾರಿ ಹರಿದ ಪಂಚೆಯಲ್ಲಿದ್ದ ಚಾಣಕ್ಯನು, ಸಿಟ್ಟಿನಲ್ಲಿ ಮುಳ್ಳಿನ ಕಳ್ಳಿಗಿಡದ ಬೇರುಗಳಿಗೆ ಹಾಲು ಎರೆಯುತ್ತಿರುವುದನ್ನು ಕಂಡು, ‘ಇದೇನು, ಹೀಗೇಕೆ ಮಾಡುತ್ತಿರುವಿರಿ’ ಎಂದು ಪ್ರಶ್ನಿಸುತ್ತಾನೆ. ‘ಕಳ್ಳಿಗಿಡಕ್ಕೆ ನನ್ನ ಪಂಚೆ ತಗುಲಿ ಹರಿದು ಹೋಯಿತು. ಅದಕ್ಕೆ ಕಳ್ಳಿಗಿಡದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವೆ’ ಎಂದು ಚಾಣಕ್ಯ ಆಕ್ರೋಶದಿಂದ ನುಡಿಯುತ್ತಾನೆ.

‘ಗಿಡವನ್ನು  ಕತ್ತರಿಸುವ ಬದಲಿಗೆ ಬೇರುಗಳಿಗೆ ಹಾಲನ್ನೇಕೆ ಎರೆಯುತ್ತಿರುವಿರಿ ಆಚಾರ್ಯರೇ’ ಎಂದು ಪ್ರಶ್ನಿಸುತ್ತಲೆ ಚಂದ್ರಗುಪ್ತ ಅವನಿಗೆ ತನ್ನ ಬಳಿ ಇದ್ದ ಖಡ್ಗ ನೀಡಲು ಮುಂದಾಗುತ್ತಾನೆ. ಖಡ್ಗವನ್ನು ನಯವಾಗಿ ತಿರಸ್ಕರಿಸುವ ಚಾಣಕ್ಯ, ‘ಒಂದು ವೇಳೆ ಗಿಡವನ್ನು ಕತ್ತರಿಸಿದರೆ ಅದು ಮತ್ತೆ ಚಿಗುರುತ್ತದೆ. ಸಿಹಿ ಹಾಲಿನಿಂದಾಗಿ ಇರುವೆ ಮತ್ತು ಗೆದ್ದಲುಗಳು ಗಿಡದ ಬೇರುಗಳವರೆಗೆ ಹೋಗಿ ಅದನ್ನೆಲ್ಲ ತಿಂದು ಹಾಕುವುದರಿಂದ ಗಿಡ ಮತ್ತೆ ಚಿಗುರುವ ಸಾಧ್ಯತೆಯೇ ಇರಲಾರದು’ ಎಂದು ಕೌಟಿಲ್ಯ ತಣ್ಣಗೆ ಹೇಳುತ್ತಾನೆ.

ದೇಶಾಂತರದಲ್ಲಿದ್ದ ರಾಜಕುಮಾರ ಚಂದ್ರಗುಪ್ತ, ಸಿಂಹಾಸನ ಮರಳಿ ಪಡೆಯಲು ನೆರವಾಗುವ ವ್ಯಕ್ತಿಯ ಹುಡುಕಾಟ ಇಲ್ಲಿಗೆ ಕೊನೆಗೊಂಡಿತು ಎಂದು ನಿರ್ಣಯಿಸಿ ಚಾಣಕ್ಯನನ್ನು ತನ್ನ ಗುರುವಾಗಿ ಸ್ವೀಕರಿಸುತ್ತಾನೆ. ಅಲ್ಲಿಂದಾಚೆಗೆ ಭಾರತದ ಇತಿಹಾಸದಲ್ಲಿ ಚಾಣಕ್ಯ ಅಥವಾ ಕೌಟಿಲ್ಯ ದಂತಕಥೆಯಾಗಿ ಹೋಗುತ್ತಾನೆ.ಮೋದಿ ಅವರು ಈಗ ಬಡವರನ್ನು ಓಲೈಸುವ ಅತ್ಯಂತ ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆ ನಿರ್ಧಾರವನ್ನು ಸದ್ಯಕ್ಕೆ ವಿರೋಧಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ನಿತೀಶ್‌ ಕುಮಾರ್‌ ಬಂದಂತೆ ಕಾಣುತ್ತದೆ. ಒಂದು ವೇಳೆ ಮೋದಿ ತಮ್ಮ ಉದ್ದೇಶದಲ್ಲಿ ವಿಫಲವಾದರೆ ಜನರು ತಿರುಗಿ ಬೀಳುತ್ತಾರೆ. ಸದ್ಯಕ್ಕೆ ಪ್ರತಿಪಕ್ಷ ಮುಖಂಡರು ಮೋದಿ ಅವರ ವಿರುದ್ಧ ಮಾಡುತ್ತಿರುವ ಅಸಮರ್ಥ, ದುರಾಚಾರದ ಆರೋಪಗಳನ್ನು ಮಾಡಲು ಆಗ ತಮಗೆ ಅನುಕೂಲವಾಗಲಿದೆ ಎನ್ನುವುದು ನಿತೀಶ್‌ ಆಲೋಚನೆ ಆಗಿರುವಂತಿದೆ.ಸದ್ಯಕ್ಕಂತೂ ಮೋದಿ ಅವರ ವಿರುದ್ಧ ಟೀಕಾಪ್ರಹಾರ ನಡೆಸಲು ವಿರೋಧಿ ಮುಖಂಡರ ಮಧ್ಯೆಯೇ ತೀವ್ರ ಪೈಪೋಟಿ ಆರಂಭಗೊಂಡಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಮೊದಲ ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಂತೆ ಈ ಪೈಪೋಟಿ ಕಂಡುಬರುತ್ತಿದೆ.ಎರಡು ಪಕ್ಷಗಳ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ ಇಲ್ಲ.  ಆಡಳಿತಾರೂಢ ಪ್ರಮುಖ ಪಕ್ಷದ ಪರ ಇರುವ ಅಥವಾ ವಿರೋಧಿಸುವ ಪಕ್ಷಗಳು ಎಂದೇ ರಾಜಕೀಯ ಪಕ್ಷಗಳನ್ನು ವಿಂಗಡಿಸಬಹುದಾಗಿದೆ. ಈ ಹಿಂದೆ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬ ಪ್ರಭಾವಶಾಲಿಯಾಗಿದ್ದರೆ ಈಗ ಬಿಜೆಪಿ ಹಾಗೂ ನರೇಂದ್ರ ಮೋದಿ ಆ ಪ್ರಭಾವಿ ಸ್ಥಾನದಲ್ಲಿ ಇದ್ದಾರೆ.2019ರಲ್ಲಿ ಮೋದಿ ಅವರಿಗೆ ಸವಾಲೊಡ್ಡುವ ಗುಂಪಿನ ನಾಯಕತ್ವ ವಹಿಸಿಕೊಂಡು ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡುವ ಮತ್ತು ಮೋದಿ ವಿರೋಧಿ ಅಲೆಯ ಬೆನ್ನೇರಿ ವಿರೋಧಿಗಳನ್ನು ದಡ ಮುಟ್ಟಿಸುವ ಸಮರ್ಥ ನಾಯಕನ ಪಟ್ಟಕ್ಕೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.ಅತಿದೊಡ್ಡ ಬಣವಾಗಿ ಹೊರಹೊಮ್ಮುವ ಪಕ್ಷದ ಮುಖಂಡ ಈಗ ಅಧಿಕಾರ ಪಡೆಯುವುದು ತನ್ನ ಹಕ್ಕು ಎಂದು ಈ ಹಿಂದಿನಂತೆ ಪ್ರತಿಪಾದಿಸುವಂತಿಲ್ಲ. ಅತಿ ದೊಡ್ಡ ಪಕ್ಷ ಎನ್ನುವುದು ಈಗ ನಿಜವಾದ ಅರ್ಥದಲ್ಲಿ ಅತಿ ದೊಡ್ಡದಾಗಿರುವುದಿಲ್ಲ.  ಪಕ್ಷವನ್ನು ಮುನ್ನಡೆಸುವವರ ಬಗ್ಗೆಯೇ ರಾಜಕೀಯ ಪಕ್ಷಗಳಲ್ಲಿ ಈಗ ಅಧೈರ್ಯ ಮನೆ ಮಾಡಿದೆ. ಇಲ್ಲಿ ಕಾಂಗ್ರೆಸ್‌ನ ನಿದರ್ಶನವನ್ನೇ ನೀಡುವುದಾದರೆ, ರಾಹುಲ್‌ ಗಾಂಧಿ ಅವರಿಗೆ ಯಾವಾಗ ಅಧ್ಯಕ್ಷ ಹುದ್ದೆಗೆ ಬಡ್ತಿ ನೀಡಬೇಕು ಮತ್ತು ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ಅವರನ್ನು ಯಾವತ್ತು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಬಗ್ಗೆಯೇ ಪಕ್ಷದಲ್ಲಿ ಸ್ಪಷ್ಟತೆ ಇಲ್ಲ. ಚುನಾವಣೆಗಳನ್ನು ನಿರ್ವಹಿಸುವ ಹೊಣೆ ಒಪ್ಪಿಸಿರುವ ಪ್ರಶಾಂತ್‌ ಕಿಶೋರ್‌ ಅವರು ಪಕ್ಷದ ನಂಬಿಕಸ್ಥ ಹೌದೋ ಅಲ್ಲವೋ ಎನ್ನುವುದೂ ಸ್ಪಷ್ಟಗೊಂಡಿಲ್ಲ.ಲೋಕಸಭೆಯಲ್ಲಿ ಕೇವಲ 45 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್‌ ಅಧಿಕಾರದಲ್ಲಿ ಇರುವ ರಾಜ್ಯಗಳ ಪೈಕಿ ಕರ್ನಾಟಕ ಮಾತ್ರ ಪ್ರಮುಖ ರಾಜ್ಯವಾಗಿದೆ. ಹೀಗಾಗಿ ಮೋದಿ ವಿರೋಧಿ ಚಳವಳಿಯ ನಾಯಕತ್ವ ವಹಿಸಿಕೊಳ್ಳಲು ತಮಗೇ ಹೆಚ್ಚು ಅವಕಾಶ ಇದೆ ಎಂಬ ಭಾವನೆ ಇತರ ಪಕ್ಷಗಳ ನಾಯಕರಲ್ಲಿ ಮೂಡಿದೆ.ಇದೇ ಕಾರಣಕ್ಕೆ ಅರವಿಂದ ಕೇಜ್ರಿವಾಲ್‌ ಅವರು ಮೋದಿ ಅವರನ್ನು ನೇರವಾಗಿ ಟೀಕಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ‘ಎಎಪಿ’ ಅಧಿಕಾರಕ್ಕೆ ಬರಲು ಹೆಚ್ಚು ಒತ್ತು ನೀಡಿದ್ದರೂ, ಗುಜರಾತ್‌ನಲ್ಲಿಯೂ ಸಾಕಷ್ಟು ಸಮಯ ಕಳೆಯುವುದರ ಜತೆಗೆ ತಮ್ಮೆಲ್ಲ ಶಕ್ತಿಯನ್ನೂ ಪಣಕ್ಕೊಡ್ಡಿದ್ದಾರೆ.ಇನ್ನೊಂದೆಡೆ ಮಮತಾ ಬ್ಯಾನರ್ಜಿ ಅವರೂ ಮೋದಿ ವಿರುದ್ಧ ಗುಟುರು ಹಾಕುವಲ್ಲಿ ತಾವೇನೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಲು ಹೊರಟಿದ್ದಾರೆ. ಮೋದಿ ಅವರನ್ನು ಅಧಿಕಾರದಿಂದಷ್ಟೇ ಅಲ್ಲ, ರಾಜಕೀಯದಿಂದಲೂ ಉಚ್ಚಾಟನೆ ಮಾಡುವವರೆಗೆ ವಿರಮಿಸುವುದಿಲ್ಲ ಎಂದೂ ಅವರು ಪಣತೊಟ್ಟಿದ್ದಾರೆ.ಮೋದಿ ರಾಜಕೀಯದಿಂದ ತಾವೇ ಹೆಚ್ಚು ಸಂಕಷ್ಟಕ್ಕೆ ಗುರಿಯಾಗಿರುವುದಾಗಿ ಮಮತಾ ಹೇಳಿಕೊಂಡಿದ್ದಾರೆ. ಹಿಂದಿಯನ್ನು ತ್ವರಿತವಾಗಿ ಕಲಿಯುತ್ತಿರುವುದಾಗಿಯೂ ಹೇಳಿಕೊಂಡಿರುವುದು ಅವರ ಮುಂದಿನ ಆಲೋಚನೆ ಏನು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.ನರೇಂದ್ರ ಮೋದಿ ಅವರು ಭಾರಿ ಜನಪ್ರಿಯತೆ ಹೊಂದಿರುವುದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಮುಖ್ಯವಾಗಿ ಜನರನ್ನು ಒಂದುಗೂಡಿಸುವ ಅಥವಾ ಬೇರ್ಪಡಿಸುವ ‘ಧ್ರುವೀಕರಣ ವ್ಯಕ್ತಿತ್ವ’ವೂ ಅವರಲ್ಲಿದೆ. ದೇಶದಲ್ಲಿ ಮೋದಿ ಅವರನ್ನು ವಿರೋಧಿಸುವ ಸಾಕಷ್ಟು ಸಂಖ್ಯೆಯ ಮತದಾರರೂ ಇದ್ದಾರೆ. ಆದರೆ, ಈ ಹಿಂದಿನಂತೆ ಪ್ರತಿಪಕ್ಷಗಳ ಮಧ್ಯೆ ಒಗ್ಗಟ್ಟು ಮಾತ್ರ ಕಂಡುಬರುತ್ತಿಲ್ಲ. ಪ್ರತಿಪಕ್ಷಗಳ ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ಸಮರ್ಥ ನಾಯಕ ಯಾರು ಎನ್ನುವುದೂ ಖಚಿತವಾಗಿಲ್ಲ.1989ರಲ್ಲಿ ವಿ.ಪಿ.ಸಿಂಗ್‌ ಅವರು ಅಂತಹ ಸಮರ್ಥ ನಾಯಕರಾಗಿ ಹೊರ ಹೊಮ್ಮಿದ್ದರು. ಅವರಿಗೆ ಅವರದ್ದೇ ಆದ ಪಕ್ಷದ ಬೆಂಬಲವಾಗಲಿ, ವೋಟ್‌ ಬ್ಯಾಂಕ್‌ ಆಗಲಿ ಇದ್ದಿರಲಿಲ್ಲ. ಬೊಫೋರ್ಸ್ ಹಗರಣ ಬಹಿರಂಗಪಡಿಸಿದ ತಮ್ಮ ನೈತಿಕತೆ ಮತ್ತು ಶುದ್ಧ ಚಾರಿತ್ರ್ಯದಿಂದಲೇ ಅವರು ಪ್ರತಿಪಕ್ಷ ಮುಖಂಡರ ಮನ ಗೆದ್ದಿದ್ದರು. ವಾಜಪೇಯಿ ಅವರ ಪ್ರಶ್ನಾತೀತ ನಾಯಕತ್ವದಡಿ ಎಲ್‌.ಕೆ.ಅಡ್ವಾಣಿ ಅವರು ಎನ್‌ಡಿಎ ಮೈತ್ರಿಕೂಟದ ಪಕ್ಷಗಳನ್ನೆಲ್ಲ ಒಟ್ಟುಗೂಡಿಸಿದ್ದರು. ಸೋನಿಯಾ ಗಾಂಧಿ ಅವರೂ ಯುಪಿಎದ ಪ್ರಶ್ನಾತೀತ ನಾಯಕಿಯಾಗಿದ್ದರು.ಅಂತಹ ನಾಯಕತ್ವದ ಹುದ್ದೆಯನ್ನು ತಾವು ಸಮರ್ಥವಾಗಿ ನಿಭಾಯಿಸುವ ಬಗ್ಗೆ ನಿತೀಶ್‌, ಕೇಜ್ರಿವಾಲ್‌ ಮತ್ತು ಮಮತಾ ಅವರು ಈಗ ತಮ್ಮಷ್ಟಕ್ಕೆ ತಾವೇ ಕನಸು ಕಾಣುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರೆಲ್ಲ ನೀಡುತ್ತಿರುವ ಹೇಳಿಕೆಗಳು ಮತ್ತು ತಳೆದಿರುವ ನಿಲುವುಗಳು ಮೇಲಿನ ಮಾತನ್ನು ಪುಷ್ಟೀಕರಿಸುತ್ತವೆ. ಕಾಂಗ್ರೆಸ್‌ನ ರಾಜಕೀಯ ಬ್ರ್ಯಾಂಡ್‌ ಜನಪ್ರಿಯತೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ, 2014ರ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿದ್ದರೂ ಅದರ ನಿಷ್ಠಾವಂತ 11.5 ಕೋಟಿಗಳಷ್ಟು ಮತದಾರರು ಅದರ ಬೆನ್ನಿಗೆ ಅಖಂಡವಾಗಿ ನಿಂತಿದ್ದಾರೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry