ನಗದುರಹಿತ ವಹಿವಾಟು ಜಾರಿಗೆ ದೇಶದ ಮುಂದೆ 5 ಸವಾಲು

7

ನಗದುರಹಿತ ವಹಿವಾಟು ಜಾರಿಗೆ ದೇಶದ ಮುಂದೆ 5 ಸವಾಲು

Published:
Updated:
ನಗದುರಹಿತ ವಹಿವಾಟು ಜಾರಿಗೆ ದೇಶದ ಮುಂದೆ 5 ಸವಾಲು

ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭಾರತ ಸಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆ. ಇತ್ತೀಚಿನ ‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಅವರು ಅದನ್ನೇ ಪ್ರತಿಪಾದಿಸಿದ್ದಾರೆ.‘ಡಿಜಿಟಲ್‌ ಅರ್ಥ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಲಿತುಕೊಳ್ಳಿ. ಬ್ಯಾಂಕ್‌ ಖಾತೆ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎಂಬುದನ್ನು ಅರಿತುಕೊಳ್ಳಿ. ವಿವಿಧ ಬ್ಯಾಂಕ್‌ಗಳ ಆ್ಯಪ್‌ಗಳನ್ನು ಬಳಸುವುದನ್ನು ಕಲಿಯಿರಿ. ನಗದು ಇಲ್ಲದೆಯೇ ವ್ಯಾಪಾರ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ’ ಎಂದು ಪ್ರಧಾನಿ ಹೇಳಿದ್ದಾರೆ.ನಗದುರಹಿತ ವಹಿವಾಟು ವ್ಯವಸ್ಥೆ ಜಾರಿಗೆ ತರುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆ ಪ್ರಮಾಣದಲ್ಲಿ ಇತ್ತೀಚೆಗೆ ಅಮೆರಿಕವನ್ನು ಹಿಂದಿಕ್ಕಿ ಭಾರತ ಎರಡನೇ ಸ್ಥಾನಕ್ಕೆ ಏರಿದೆ. ಹಾಗಿದ್ದರೂ ‘ಬ್ಯುಸಿನೆಸ್‌ ಸ್ಟಾಂಡರ್ಡ್‌’  ಸಮೀಕ್ಷೆ ಪ್ರಕಾರ ದೇಶದ ಶೇ 68ರಷ್ಟು ವಹಿವಾಟು ನಗದು ಮೂಲಕವೇ ನಡೆಯುತ್ತಿದೆ. ಬೇರೆ ಕೆಲವು ಸಮೀಕ್ಷೆಗಳು ಶೇ 90ರಷ್ಟು ವ್ಯಾಪಾರ ನಗದಿನಲ್ಲಿಯೇ ನಡೆಯುತ್ತದೆ ಎನ್ನುತ್ತಿವೆ.ಪ್ರಧಾನಿಯ ಮಹತ್ವಾಕಾಂಕ್ಷೆಗೆ ಅಡ್ಡಿಗಳೇನು

ಕಾಲು ಭಾಗ ಜನರಿಗಷ್ಟೇ ಅಂತರ್ಜಾಲ: 
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ 34 ಕೋಟಿ ಜನರು ಇಂಟರ್ನೆಟ್‌ ಬಳಕೆದಾರರು. ಇದು ಒಟ್ಟು ಜನಸಂಖ್ಯೆಯ ಶೇ 27ರಷ್ಟಾಗುತ್ತದೆ.ಇಂಡಿಯಾ ಸ್ಪೆಂಡ್‌ ಸಂಸ್ಥೆಯ ಸಮೀಕ್ಷೆ ಪ್ರಕಾರ ಇಂಟರ್ನೆಟ್‌ ಬಳಕೆಯ ಜಾಗತಿಕ ಸರಾಸರಿ ಶೇ 67. ನೈಜೀರಿಯಾ, ಕೀನ್ಯಾ, ಘಾನಾ, ಇಂಡೋನೇಷ್ಯಾಗಳಿಗಿಂತಲೂ ಭಾರತ ಬಹಳ ಕೆಳಗಿದೆ. ಅಂದರೆ ಭಾರತದ ಶೇ 73ರಷ್ಟು ಜನರು ಅಥವಾ 91 ಕೋಟಿ ಜನರಿಗೆ ಅಂತರ್ಜಾಲ ಸೌಲಭ್ಯ ಲಭ್ಯ ಇಲ್ಲ.ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲ ಸೌಲಭ್ಯ ಹೊಂದಿರುವವರ ಪ್ರಮಾಣ ಶೇ 13ಕ್ಕೂ ಕಡಿಮೆ. ನಗರ ಪ್ರದೇಶದಲ್ಲಿ ಶೇ 58ರಷ್ಟು ಜನರಿಗೆ ಅಂತರ್ಜಾಲ ಸೌಲಭ್ಯ ಲಭ್ಯ ಇದೆ.ಸ್ಮಾರ್ಟ್‌ ಫೋನ್‌ ಇರುವವರು ಶೇ 17ರಷ್ಟು ಜನರು ಮಾತ್ರ

ಬ್ಯಾಂಕಿಂಗ್‌ ಆ್ಯಪ್‌ಗಳನ್ನು ಬಳಸಲು ಸ್ಮಾರ್ಟ್‌ಫೋನ್‌ ಅತ್ಯಗತ್ಯ. ಭಾರತದಲ್ಲಿ ಸ್ಮಾರ್ಟ್‌ ಫೋನ್‌ ಹೊಂದಿರುವ ವಯಸ್ಕರ ಪ್ರಮಾಣ ಶೇ 17 ಮಾತ್ರ. ಪ್ಯೂ ಸಮೀಕ್ಷೆ ಪ್ರಕಾರ, ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಸ್ಮಾರ್ಟ್‌ ಫೋನ್‌ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ದೇಶ ಭಾರತ.

ಹಾಗಿದ್ದರೂ ಕಡಿಮೆ ಆದಾಯ ವರ್ಗದ ಶೇ 7ರಷ್ಟು ಜನರಲ್ಲಿ ಮಾತ್ರ ಸ್ಮಾರ್ಟ್‌ ಫೋನ್‌ ಇದೆ. ಶ್ರೀಮಂತ ವರ್ಗದಲ್ಲಿ ಕೂಡ ಸ್ಮಾರ್ಟ್‌ ಫೋನ್‌ ಬಳಕೆ ಪ್ರಮಾಣ ಶೇ 22 ಮಾತ್ರ.ಮೊಬೈಲ್ ಇದೆ, ನೆಟ್‌ ಇಲ್ಲ

ಭಾರತದಲ್ಲಿರುವ ಮೊಬೈಲ್‌ ಸಂಪರ್ಕಗಳ ಸಂಖ್ಯೆ ನೂರು ಕೋಟಿಗೂ ಹೆಚ್ಚು. ಆದರೆ ಇದರಲ್ಲಿ ಬ್ರಾಡ್‌ಬ್ಯಾಂಡ್‌ ಅಂತರ್ಜಾಲ ಸಂಪರ್ಕ ಹೊಂದಿರುವವರು ಶೇ 15 ಮಾತ್ರ (3ಜಿ ಮತ್ತು 4ಜಿ)ಇಂಟರ್‌ನೆಟ್‌ಗೆ ಆಮೆ ವೇಗ

ಮೊಬೈಲ್‌ ಇಂಟರ್ನೆಟ್‌ನ ವೇಗವೂ ಜನರು ಬ್ಯಾಂಕಿಂಗ್‌ ವ್ಯವಹಾರಕ್ಕೆ ಫೋನ್‌ ಬಳಸುವ ಪ್ರಮಾಣವನ್ನು ನಿರ್ಧರಿಸುತ್ತದೆ ಎಂದು ಅಮೆರಿಕದ ಒರಾಕಲ್‌ ಮ್ಯಾಕ್ಸಿಮೈಸರ್ ಸಂಸ್ಥೆ ಹೇಳಿದೆ. ಸಂಸ್ಥೆಯ ಸಮೀಕ್ಷೆ ಪ್ರಕಾರ ಎರಡು ಸೆಕೆಂಡ್‌ಗಳಲ್ಲಿ ಅಂತರ್ಜಾಲ ಪುಟ ತೆರೆದುಕೊಳ್ಳದಿದ್ದರೆ ಜನರು ಅದನ್ನು ಕೈಬಿಡುತ್ತಾರೆ. ಇನ್ನೊಂದು ಸಮೀಕ್ಷೆ ಪ್ರಕಾರ, ಶೇ 68ರಷ್ಟು ಜನರು ಆರು ಸೆಕೆಂಡ್‌ ಕಾಯುತ್ತಾರೆ.ಭಾರತದಲ್ಲಿ ಮೊಬೈಲ್‌ನಲ್ಲಿ ಒಂದು ಪುಟ ತೆರೆದುಕೊಳ್ಳಲು ಬೇಕಾದ ಸರಾಸರಿ ಅವಧಿ 5.5 ಸೆಕೆಂಡ್‌. ಚೀನಾದಲ್ಲಿ ಇದು 2.2 ಸೆಕೆಂಡ್‌, ಶ್ರೀಲಂಕಾದಲ್ಲಿ 4.5 ಸೆಕೆಂಡ್‌, ಬಾಂಗ್ಲಾದೇಶದಲ್ಲಿ 4.9 ಸೆಕೆಂಡ್‌. ಇಸ್ರೇಲ್‌ ಅತ್ಯಂತ ವೇಗದ ಅಂತರ್ಜಾಲ ವ್ಯವಸ್ಥೆ ಹೊಂದಿದೆ. ಇಲ್ಲಿ ಪುಟ ತೆರೆದುಕೊಳ್ಳಲು ಬೇಕಿರುವುದು 1.3 ಸೆಕೆಂಡ್‌ ಮಾತ್ರ.ಪಿಒಎಸ್‌ ಯಂತ್ರಗಳ ಕೊರತೆ

ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಇರುವುದು 858 ಪಿಒಎಸ್‌ ಯಂತ್ರಗಳು (ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿ ವ್ಯವಸ್ಥೆ). ದೇಶದಲ್ಲಿ ಇರುವ ಒಟ್ಟು ಯಂತ್ರಗಳ ಸಂಖ್ಯೆ 14.6 ಲಕ್ಷ. ಬ್ರೆಜಿಲ್‌ನಲ್ಲಿ ಪ್ರತಿ 10 ಲಕ್ಷ ಜನರಿಗೆ 32,995 ಯಂತ್ರಗಳಿವೆ. ಚೀನಾ ಮತ್ತು ರಷ್ಯಾದಲ್ಲಿನ ಪ್ರಮಾಣ 4,000.ಶೇ 70ಕ್ಕಿಂತ ಹೆಚ್ಚು ಪಿಒಎಸ್‌ ಯಂತ್ರಗಳು ಭಾರತದ 15 ದೊಡ್ಡ ನಗರಗಳಲ್ಲಿವೆ. ನೋಟು ರದ್ದತಿ ನಂತರವೂ ಈ ಪರಿಸ್ಥಿತಿ ಬದಲಾಗಿಲ್ಲ. ಅಷ್ಟೇ ಅಲ್ಲ, ಹೊಸದಾಗಿ ಪಿಒಎಸ್‌ ಯಂತ್ರಗಳಿಗೆ ಬಂದಿರುವ ಬೇಡಿಕೆ ಕೂಡ ಮೊದಲ ಸ್ತರದ ನಗರಗಳಿಂದ. ಎರಡನೇ ಸ್ತರದ ನಗರಗಳಲ್ಲಿ ನಗದು ಪಡೆಯಲು ಪಿಒಎಸ್‌ ಯಂತ್ರಗಳು ಬಳಕೆಯಾಗುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry