₹2 ಲಕ್ಷ ಕೋಟಿ ಸಂಪತ್ತು ಘೋಷಣೆ ತಿರಸ್ಕರಿಸಿದ ಐ.ಟಿ

7
ಅಕ್ರಮ ಆಸ್ತಿ ಪ್ರಕಟಿಸಿದವರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಅನುಮಾನ

₹2 ಲಕ್ಷ ಕೋಟಿ ಸಂಪತ್ತು ಘೋಷಣೆ ತಿರಸ್ಕರಿಸಿದ ಐ.ಟಿ

Published:
Updated:
₹2 ಲಕ್ಷ ಕೋಟಿ ಸಂಪತ್ತು ಘೋಷಣೆ ತಿರಸ್ಕರಿಸಿದ ಐ.ಟಿ

ನವದೆಹಲಿ : ಆದಾಯ ಘೋಷಣೆ ಯೋಜನೆ (ಐಡಿಎಸ್‌) ಅಡಿ ಮುಂಬೈ ಕುಟುಂಬವೊಂದು ₹ 2 ಲಕ್ಷ ಕೋಟಿ ಅಕ್ರಮ ಸಂಪತ್ತು ಘೋಷಣೆಮಾಡಿದೆ. ಆದಾಯ ತೆರಿಗೆ (ಐ.ಟಿ) ಇಲಾಖೆ ಅದನ್ನು ತಿರಸ್ಕರಿಸಿದ್ದು, ಕುಟುಂಬದ ವಿರುದ್ಧ ತನಿಖೆ ಆರಂಭಿಸಿದೆ.

ಮುಂಬೈನ ಬಾಂದ್ರಾದ ಅಬ್ದುಲ್ ರಜಾಕ್‌ ಮೊಹಮ್ಮದ್ ಸಯೀದ್ ಅವರು, ತಮ್ಮ ಮತ್ತು ತಮ್ಮ ಕುಟುಂಬದ ಇತರ ಮೂವರು ಸದಸ್ಯರ ಬಳಿ ಒಟ್ಟು ₹ 2 ಲಕ್ಷ ಕೋಟಿ ಮೌಲ್ಯದ ಅಕ್ರಮ ಸಂಪತ್ತು ಇದೆ ಎಂದು ಘೋಷಿಸಿದ್ದಾರೆ.

ಐಡಿಎಸ್‌ ಯೋಜನೆ ಅಡಿ ಘೋಷಣೆಯಾಗಿರುವ ಅಕ್ರಮ ಸಂಪತ್ತಿನ ಒಟ್ಟು ಮೌಲ್ಯ ₹67,382 ಕೋಟಿ. ಇದಕ್ಕಿಂತ ಈ ಕುಟುಂಬ ಘೋಷಿಸಿರುವ ಸಂಪತ್ತಿನ ಮೌಲ್ಯ ಮೂರುಪಟ್ಟು ಹೆಚ್ಚು. 

ಈ ಪ್ರಮಾಣದ ಸಂಪತ್ತು ಘೋಷಿಸಿಕೊಂಡಿರುವ ಕುಟುಂಬ ಸಣ್ಣ ಉದ್ಯಮವೊಂದನ್ನು ನಡೆಸುತ್ತಿದೆ. ಅವರ ಬಳಿ ಅಷ್ಟು ಸಂಪತ್ತು ಇರುವ ಬಗ್ಗೆ ಅನುಮಾನಗಳು ಇವೆ. ಹೀಗಾಗಿ ಅವರ ಘೋಷಣೆಯನ್ನು ತಿರಸ್ಕರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಅಬ್ದುಲ್ ರಜಾಕ್‌ ಮೂಲತಃ ಅಜ್ಮೀರ್‌ನವರು. ಅವರ ಕುಟುಂಬದಲ್ಲಿ ಮೂವರ ಪಾನ್‌ ಕಾರ್ಡ್‌ಗಳು ಅಜ್ಮೀರ್‌ವಿಳಾಸದಲ್ಲಿವೆ. ಐಡಿಎಸ್‌ ಘೋಷಣೆಗೂ ಸ್ವಲ್ಪ ದಿನ ಮೊದಲಷ್ಟೇ ಕುಟುಂಬ ಮುಂಬೈಗೆ ಬಂದಿದೆ. ಈ ಕುಟುಂಬ ಬೇರೆಯವರ ಹಣವನ್ನು ತಮ್ಮದೆಂದು ಘೋಷಿಸಿಕೊಂಡಿರಬಹುದು ಎಂದು ಸಚಿವಾಲಯ ಶಂಕಿಸಿದೆ.

ಗುಜರಾತ್‌ ಮೂಲದ ಉದ್ಯಮಿ ಮಹೇಶ್ ಷಾ ಸಹ ತಮ್ಮ ಬಳಿ ₹13,860 ಕೋಟಿ ಅಕ್ರಮ ಸಂಪತ್ತು ಇರುವುದಾಗಿ ಘೋಷಿಸಿಕೊಂಡಿದ್ದರು. ಘೋಷಿತ ಸಂಪತ್ತಿಗೆ ತೆರಿಗೆ ಪಾವತಿಸದ ಕಾರಣ ಅವರ ಘೋಷಣೆಯನ್ನು ಐ.ಟಿ ಅಧಿಕಾರಿಗಳು ತಿರಸ್ಕರಿಸಿದ್ದರು. ‘ಕಮಿಷನ್ ಆಸೆಗಾಗಿ ಇತರರ ಹಣ ನನ್ನದೆಂದು ಘೋಷಿಸಿಕೊಂಡಿದ್ದೆ’ ಎಂದು ಷಾ ಶನಿವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎರಡೂ ಪ್ರಕರಣಗಳಲ್ಲಿ ಇತರರು ಇವರನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಅಲ್ಲದೆ ಇಬ್ಬರೂ ಸುಳ್ಳು ಘೋಷಣೆ ಮಾಡಿಕೊಂಡಿದ್ದು ಏಕೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಐಡಿಎಸ್‌ ಅಡಿ ಘೋಷಣೆಯಾದ ಅಕ್ರಮ ಸಂಪತ್ತಿನಲ್ಲಿ ಈ ಇಬ್ಬರ ಸಂಪತ್ತನ್ನು ಪರಿಗಣಿಸಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.  ಅಕ್ಟೋಬರ್‌ 1ರಂದು ನೀಡಿದ್ದ ಮಾಹಿತಿಯಲ್ಲಿ ₹65,250 ಕೋಟಿ ಅಕ್ರಮ ಸಂಪತ್ತು ಘೋಷಣೆಯಾಗಿದೆ ಎಂದು ಸಚಿವಾಲಯ ತಿಳಿಸಿತ್ತು. ಈಗ ಪರಿಷ್ಕೃತ ಮಾಹಿತಿಯಲ್ಲಿ ಈ ಮೊತ್ತ ಹೆಚ್ಚಾಗಿದೆ.

₹ 20,₹ 50ರ ಹೊಸ ನೋಟು

ಬೆಂಗಳೂರು: ಹೊಸ ವಿನ್ಯಾಸದ ₹20,₹ 50 ಮುಖಬೆಲೆಯ ನೂತನ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ ತಿಳಿಸಿದೆ. ಹೊಸ ನೋಟುಗಳು ಯಾವಾಗ ಬಿಡುಗಡೆ ಆಗುತ್ತದೆ ಎಂದು ಆರ್‌ಬಿಐ ತಿಳಿಸಿಲ್ಲ. ಆದರೆ, ಹೊಸ ನೋಟುಗಳು ಬಿಡುಗಡೆಯಾದ ನಂತರವೂ ಹಳೆಯ ನೋಟುಗಳು ಚಲಾವಣೆಯಲ್ಲಿ ಇರಲಿವೆ ಎಂದು ಸ್ಪಷ್ಟಪಡಿಸಿದೆ. 

ಹಳೆಯ ನೋಟುಗಳಿಗೆ ಹೋಲಿಸಿದರೆ ಹೊಸ ನೋಟುಗಳ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ನೋಟಿನಲ್ಲಿ ಮುದ್ರಣ ವರ್ಷ ‘2016’ ಎಂದಿರುತ್ತದೆ. ಜತೆಗೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರ ಸಹಿ ಇರುತ್ತದೆ. ಕ್ರಮ ಸಂಖ್ಯೆಯನ್ನು ಹೊಸ ₹2,000 ಮುಖಬೆಲೆಯಲ್ಲಿರುವ ರೀತಿಯಲ್ಲಿ ಮುದ್ರಿಸಲಾಗುತ್ತದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry