ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ರಾಜ್‌ಕುಮಾರ್‌ ಸಮಾಜದ ಶಿಕ್ಷಕ

ಡಾ.ರಾಜ್ ಕುಮಾರ್‌ ಸಮಗ್ರ ಚರಿತ್ರೆ ಮಹಾಯಾನ ಸಮಾರೋಪದಲ್ಲಿ ಷ.ಶೆಟ್ಟರ್‌ ಅಭಿಪ್ರಾಯ
Last Updated 24 ಏಪ್ರಿಲ್ 2019, 5:08 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್‌ಕುಮಾರ್‌ ಸಿನಿಮಾ ಸಂಭಾಷಣೆ ಮೂಲಕ ಜನರಿಗೆ ಶುದ್ದ ಕನ್ನಡ ಕಲಿಸಿದರು. ಆದ್ದರಿಂದ ಅವರನ್ನು ಸಮಾಜದ ಶಿಕ್ಷಕ ಎಂದು ಕರೆಯಬಹುದು’ ಎಂದು ಇತಿಹಾಸಕಾರ ಪ್ರೊ. ಷ. ಶೆಟ್ಟರ್‌ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಡಾ. ರಾಜ್‌ಕುಮಾರ್ ಸಮಗ್ರ ಚರಿತ್ರೆ ಮಹಾಯಾನ’ದ ಸಮಾರೋಪ ಸಮಾರಂಭದಲ್ಲಿ ‘ಕನ್ನಡ ನಾಡು ನುಡಿಯ ಅಸ್ಮಿತೆ: ಡಾ. ರಾಜ್‌ಕುಮಾರ್’ ಕುರಿತು ಅವರು ಮಾತನಾಡಿದರು.

‘ರಾಜ್‌ ಅವರ ಚಲನಚಿತ್ರಗಳ ಸಂಭಾಷಣೆ ಕೇಳಿ ಇಂದು ವಿಶ್ವವಿದ್ಯಾಲಯಗಳ ಕನ್ನಡ ಪ್ರಾಧ್ಯಾಪಕರು ಭಾಷೆಯ ಉಚ್ಛಾರ ಹಾಗೂ ವ್ಯಾಕರಣ ತಿದ್ದಿಕೊಳ್ಳುತ್ತಿದ್ದಾರೆ. ಅವರು ಸಂಭಾಷಣೆ ಯನ್ನು ಕೇವಲ ಕಂಠಪಾಠ ಮಾಡಿ ಒಪ್ಪಿಸಲಿಲ್ಲ. ಬದಲಿಗೆ ಭಾಷೆ ಕರಗತ ಮಾಡಿಕೊಂಡು ಸಿನಿಮಾದ ಭಾಷಾ ಶೈಲಿಯನ್ನೂ ತಿದ್ದಿದರು’ ಎಂದು ಹೇಳಿದರು.

‘ಜೀವನದಲ್ಲಿ ಜಯ ದೊರೆತಾಗ ಹಣ, ಕೀರ್ತಿ ಹಾಗೂ ಸ್ಥಾನದ ಹಂಬಲ ಹೆಚ್ಚಾಗುತ್ತದೆ. ಆದರೆ ಇವುಗಳಿಂದ ರಾಜ್‌ ಅವರು ಮುಕ್ತರಾಗಿದ್ದರು. ಅವರು ರಾಜಕೀಯ ರಂಗಕ್ಕೆ ಬಂದಿದ್ದರೆ, ಅವರ ಮುಂದಿನ ಪೀಳಿಗೆಯ ಬಹುತೇಕ ಕಲಾವಿದರು ರಾಜಕೀಯ ರಂಗ ಪ್ರವೇಶ ಮಾಡುವ ಸಾಧ್ಯತೆ ಇತ್ತು’ ಎಂದು ಹೇಳಿದರು.

‘ವ್ಯಕ್ತಿಗಳು ಮನುಷ್ಯರಾಗುವುದೇ ಹೆಚ್ಚು, ಅಂಥದರಲ್ಲಿ ರಾಜ್‌ ನಡೆ–ನುಡಿಯಿಂದ ಬಂಗಾರದ ಮನುಷ್ಯರಾಗಿ ಬಾಳಿದರು’ ಎಂದು ಅವರು ಹೇಳಿದರು. ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್‌ ಮಾತನಾಡಿ, ‘ರಾಜ್‌ಕುಮಾರ್‌ ಅವರ ಚಿತ್ರಗಳ ಸಂಭಾಷಣಾ ಭಾಷೆಯನ್ನು ರಾಜ್ಯದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲಾಗದು. ಅವರ ಸರಳವಾದ ಭಾಷಾ ಶೈಲಿ, ಮಾತನ್ನು ಸಂಗೀತವಾಗಿ ಮಾರ್ಪಡಿಸಿತು’ ಎಂದು ಹೇಳಿದರು.

‘20ನೇ ಶತಮಾನದ ಕನ್ನಡದ ನಾಯಕರಲ್ಲಿ ಕುವೆಂಪು ಮತ್ತು ರಾಜ್‌ಕುಮಾರ್‌ ಅಗ್ರಗಣ್ಯರು. ಕುವೆಂಪು ಕನ್ನಡ ದೇಗುಲದ ಗರ್ಭಗುಡಿಯ ಮೂರ್ತಿಯಾದರೆ, ರಾಜ್‌ ಅವರು ಉತ್ಸವ ಮೂರ್ತಿಯಾಗಿದ್ದಾರೆ. ಸಮಾಜ ಬದಲಾವಣೆಯ ಕನಸನ್ನು ಕಂಡ ಅವರು, ಭಾಷಣದ ಬದಲು, ಕಲೆಯಿಂದ ನಾಡನ್ನು ಕಟ್ಟಿದರು’ ಎಂದು ತಿಳಿಸಿದರು.

‘ಕನ್ನಡ ಸಮುದಾಯ ಹೀಗಿರಬೇಕು ಎಂದು ರಾಜ್‌ ಬಯಸಿದರೆ, ರಾಜ್‌ ಹೀಗಿರಬೇಕು ಎಂದು ಅಭಿಮಾನಿಗಳು ಅಪೇಕ್ಷೆ ಪಟ್ಟರು. ಅವರು ಮನರಂಜನೆ ಜೊತೆಗೆ ಜನರಲ್ಲಿ ತಿಳಿವಳಿಕೆ ಮೂಡಿಸಿದರು’ ಎಂದು ಅವರು ಹೇಳಿದರು.

ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಮಾತನಾಡಿ, ‘ಬದುಕಿನಲ್ಲಿ ಅಳವಡಿಸಿಕೊಳ್ಳಲು ಬಯಸುವ ಮೌಲ್ಯಗಳ ಸಂಗ್ರಹವೇ ಅಸ್ಮಿತೆ ಆಗಿದೆ. ರಾಜ್‌ಕುಮಾರ್‌ ಅವರ ಬದುಕು, ನಟನೆ ಹಾಗೂ ಗಾಯನದಲ್ಲಿ ಅದು ವ್ಯಕ್ತವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT