ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಗ್ರಾಮ; ಮಹಿಳೆಯರ ಪಾತ್ರ ಹಿರಿದು

ಕೊಪ್ಪಳ ಜಿಲ್ಲೆ: ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕೋತ್ಸವ
Last Updated 7 ಡಿಸೆಂಬರ್ 2016, 8:50 IST
ಅಕ್ಷರ ಗಾತ್ರ

ಕೊಪ್ಪಳ:  ಸ್ವಚ್ಛ ಗ್ರಾಮಗಳ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ ಪಾತ್ರ ಹಿರಿದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ರಾಮಚಂದ್ರನ್‌ ಹೇಳಿದರು.

ಯಲಬುರ್ಗಾ ತಾಲ್ಲೂಕು ಮಂಡಲಗೇರಿ ಗ್ರಾಮದಲ್ಲಿ ಜ್ಞಾನಶ್ರೀ ಸಂಜೀವಿನಿ ಗ್ರಾಮ ಪಂಚಾಯಿತಿಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕೋತ್ಸವ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಸಂಜೀವಿನಿ ಯೋಜನೆ ಅಡಿ ಸ್ಥಾಪಿತಗೊಂಡ ಮಹಿಳಾ ಸ್ವ ಸಹಾಯ ಗುಂಪುಗಳು ಮತ್ತು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿರುವುದು ತುಂಬಾ ಶ್ಲಾಘನೀಯ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯಲ್ಲಿ 20 ಲಕ್ಷಕ್ಕಿಂತ ಹೆಚ್ಚು ಹಣವನ್ನು ಶೌಚಾಲಯ ನಿರ್ಮಾಣಕ್ಕಾಗಿಯೇ ಸಾಲದ ರೂಪದಲ್ಲಿ ಸಮುದಾಯ ಬಂಡವಾಳ ನಿಧಿಯನ್ನು ಗುಂಪಿನ ಮಹಿಳೆಯರಿಗೆ ನೀಡುವ ಮೂಲಕ ಒಕ್ಕೂಟಗಳು ಸಹಕಾರ ನೀಡುತ್ತಿವೆ. ಸ್ವಚ್ಛ ಮತ್ತು ಸ್ವಸ್ಥ ಗ್ರಾಮದ ನಿರ್ಮಾಣಕ್ಕೆ ಕೈಜೋಡಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100 ಸಾಧನೆ ಮಾಡಿದ ಮಂಡಲಗೇರಿ ಸರ್ಕಾರಿ ಪ್ರೌಢಶಾಲೆಯ ಸಾಧನೆ ಪ್ರಶಂಸನೀಯ.
ಈ ಗ್ರಾಮದ ಶಿಕ್ಷಕರು ತುಂಬಾ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳು ಇವರಿಗೆ ಗೌರವ ಹಾಗೂ ಸಹಕಾರ ನೀಡಬೇಕು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗ್ರಾಮದ ಕೀರ್ತಿ ಬೆಳಗಬೇಕು ಎಂದು ಅವರು ಹೇಳಿದರು.  

ತಾಲ್ಲೂಕು ಪಂಚಾಯಿತಿ ಸದಸ್ಯೆ ಗೌರಮ್ಮ ನಾಗನೂರು ಮಾತನಾಡಿ, ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವಂತೆ ಹಾಗೂ ಅವರು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಲ್ಲಿ ಕೋರಿದರು.

ಬಿಜೆಪಿ ಮುಖಂಡ ನವೀನ್ ಗುಳಗಣ್ಣನವರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ನಗದುರಹಿತ ಹಣಕಾಸು ವ್ಯವಹಾರ ಕಾರ್ಯರೂಪಕ್ಕೆ ಬರುವಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳು ಹಾಗೂ ಒಕ್ಕೂಟಗಳು ಗುರುತರವಾದ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಸ್ವ ಸಹಾಯ ಗುಂಪಿನ ಸದಸ್ಯ ಮಹಿಳೆಯರ ಉತ್ಪಾದನೆಗಳನ್ನು ಮಾರಾಟ ಮಾಡಲು ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಬೇಕು’ ಎಂದು ಸಲಹೆ ಮಾಡಿದರು.

ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಮಾತನಾಡಿ, ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆ ಪ್ರಾಯೋಗಿಕವಾಗಿ ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಸ್ಥಳೀಯ ಪಂಚಾಯಿತಿ ಹಾಗೂ ಇತರ ಇಲಾಖೆಗಳೊಂದಿಗೆ ಒಕ್ಕೂಟಗಳು ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಸಂಜೀವಿನಿ ಯೋಜನೆ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಜಿ ಮೂಲಿಮನಿಯವರು ಸಂಜೀನಿ-ಎನ್.ಆರ್.ಎಲ್.ಎಂ ಯೋಜನೆಯ ಕಾರ್ಯಕ್ರಮಗಳ ಪ್ರಗತಿಯ ವಿವರಣೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಿತ್ತಲಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವಪ್ಪ ದೊಡ್ಡಮನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಣ್ಣ, ಸಹಾಯಕ ನಿರ್ದೇಶಕ ಸತೀಶ, ಜ್ಞಾನಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪದ್ಮಾ ಹಿರೇಮಠ, ಶರಣಪ್ಪಗೌಡ ಹೊರಪೇಟೆ ಇದ್ದರು.    

ಸಂಜೀವಿನಿ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಎನ್.ಕೆ. ಉದಯಕುಮಾರ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಭೀಮಾನಂದ ಶೆಟ್ಟರ ನಿರೂಪಿಸಿದರು.

*
ಸಾಮಾಜಿಕ ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವಾಗ ಮಹಿಳೆಯರಿಗೆ ಹಲವಾರು ಅಡೆತಡೆಗಳು ಬರುವುದು ಸಹಜ. ಅವುಗಳನ್ನು ಮೆಟ್ಟಿನಿಂತು ಶ್ರಮಿಸಬೇಕು.
-ಆರ್.ರಾಮಚಂದ್ರನ್,
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT